ಎಲ್ಲರ ಟೆರಿಫೈಯಿಂಗ್ ಸ್ಟೋರಿ

ಎಲ್ಲರ ಟೆರಿಫೈಯಿಂಗ್ ಸ್ಟೋರಿ

                                         

                                                        

 

                   ನಮ್ಮ  ಕಂಪನಿಯಲ್ಲಿ ಒಂದು ತರಬೇತಿಯನ್ನು ಏರ್ಪಡಿಸಿದ್ದರು. ತರಬೇತಿಯ ಹೆಸರು ' ವೈಫಲ್ಯ ಕ್ರಮ  ಆಧಾರಿತ ವಿನ್ಯಾಸ ವಿಮರ್ಶೆ'. ನಮ್ಮದು ತಾಂತ್ರಿಕ ತಂಡವಾಗಿದ್ದರಿಂದ ನಮಗೆ ಈ ತರಬೇತಿ ಅವಶ್ಯಕವೆಂದು ನಮ್ಮ ತಂಡದಿಂದ ನನ್ನನ್ನು ಮತ್ತು ನನ್ನ ಸಹುದ್ಯೋಗಿಯಾದ ನೀರಜ್ ರವರನ್ನು ನೇಮಿಸಿದ್ದರು. ತಾಂತ್ರಿಕ ಕೆಲಸದಲ್ಲಿ ನೀರಜ್ ನನಗಿಂತ ತುಂಬಾ ಅನುಭವಸ್ತರಾಗಿದ್ದರು ಹಾಗು ಬುದ್ಧಿವಂತರೂ ಕೂಡ. ಅವರು ಎಷ್ಟು ಬುದ್ದಿವಂತರೆಂದು ನಿಮಗೆ ಮುಂದೆ ಗೊತ್ತಾಗುತ್ತದೆ.

                ತರಬೇತಿಯ ಹಿಂದಿನ  ದಿನದಂದು ನಾವು ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ತರಬೇತಿಗೆ ಹೋದೆವು. ತರಬೇತುದಾರರು ತುಂಬಾ ತಿಳಿದುಕೊಂಡವರಾಗಿದ್ದರು ವಿಷಯದ ಆಳವೂ ಹಾಗೂ  ಉದ್ದಗಲವೂ ಅವರಿಗೆ ತಿಳಿದಿತ್ತು.ತರಬೇತಿಯನ್ನು ಕೂಡ ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಯಾವುದಾದರು ಹೊಸ ವಿನ್ಯಾಸ ಅಥವಾ ಇರುವುದರಲ್ಲಿ ಬದಲಾವಣೆ ಮಾಡಬೇಕಾದರೆ ಅದು ಯಾವುದೇ ತರಹದ  ಅಪಾಯಕ್ಕೆ ಎಡೆ ಮಾಡಿಕೊಡದಂತೆ ಹೇಗೆ ಒಂದು ವಿನ್ಯಾಸವನ್ನು ತಯಾರಿಸಬೇಕೆಂದು ಅದ್ಭುತವಾಗಿ ವಿವರಿಸುತ್ತಿದ್ದರು.

                ನಾನು  ತುಂಬಾ ಉತ್ಸಾಹದಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿದ್ದೆನು. ತರಬೇತುದಾರರ ಪ್ರಕಾರ ವಿನ್ಯಾಸದಲ್ಲಿ  ಒಂದು ಹೊಸ ಅಥವಾ ಬದಲಾವಣೆ ಮಾಡಬಯಸಿದರೆ ಅದಕ್ಕೆ ತಕ್ಕಂತೆ ಮೂರು  ಹಂತದಲ್ಲಿ ನಾವು ಯೋಚಿಸಬೇಕಾಗುತ್ತದೆ. ಮೊದಲನೆಯದು ವಿನ್ಯಾಸದ ಅಥವಾ ಬದಲಾವಣೆಯಿಂದ ಒದಗುವ  ಪ್ರಭಾವದ  ವಿಶ್ಲೇಷಣೆ ಎರಡನೆಯದು ಪ್ರಭಾವಕ್ಕನುಗುಣವಾಗಿ ಅಪಾಯದ ಶೋಧನೆ. ಅದರಿಂದ ನಂತರ ಮೂರನೆಯದು ಅಪಾಯವನ್ನು ಪರಿಹರಿಸುವ ಬಗೆ. ಈ ಮೂರನ್ನು ನಮಗೆ ವಿವರಿಸುತ್ತಿದ್ದರು.

                ಇವಾಗ ಕಥೆಗೆ ಬರುತ್ತೇನೆ ನಿಮಗೆ ಹೇಳಿದ ಹಾಗೆ ನಾನು ಮತ್ತು ನೀರಜ್ ಇದರಲ್ಲಿ ಪಾಲ್ಗೊಂಡಿದ್ದೆವು. ನಾನು ತರಬೇತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ನೀರಜ್ ರವರು ಅಂತ ಉತ್ಸಾಹದಲ್ಲಿದ್ದಂತೆ ಕಾಣಿಸುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಅವರ ಒಂದು ಕೆಲಸಕ್ಕೆ ಇದು ಅತ್ಯಾವಶ್ಯಕವಾಗಿತ್ತು ಆದರೂ ಅವರು ಇದರಲ್ಲಿ ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ. ನಾನು  ಅವರನ್ನು  ಆಗ್ಗಾಗೆ ಗಮನಿಸಿ  ಕಡೆಗೆ ಕೇಳಿಯೇ ಬಿಟ್ಟೆ " ಯಾಕೆ ನೀರಜ್ ಬೇಸರದಲ್ಲಿರುವಂತೆ ತೋರುತ್ತದೆ ? ಏನಾದರು ತೊಂದರೆ ?ತರಬೇತಿ ಚೆನ್ನಾಗಿ  ನಡೆಯುತ್ತಿದೆಯಲ್ಲ ? ನಮಗೆ ಸಾಕಷ್ಟು ಮಾಹಿತಿ ನೀಡುತ್ತಿದ್ದಾರೆ . ಯಾಕೆ ಹೀಗೆ  ಸಪ್ಪಗೆ ಕೂತಿದ್ದೀರಾ ಏನಾಯಿತು ? " ಎಂದು ತರಬೇತಿಯ ಮಧ್ಯದಲ್ಲಿ ಕೇಳಿದಾಗ  ಅವರು ನಂತರ ವಿವರಿಸುತ್ತೇನೆ ಎಂದು ಹೇಳಿದರು. ನಾನು   ಕೂಡ ಅನಾವಶ್ಯಕವಾಗಿ ಕೆದಕುವುದು ಸರಿಯಲ್ಲ ಎಂದು ನನ್ನ ಪಾಡಿಗೆ ನಾನು ತರಬೇತಿಯಲ್ಲಿ ಮುಳುಗಿದ್ದೆ.

               ಮಧ್ಯದಲ್ಲಿ ಚಹ ಹಾಗು ಊಟಕ್ಕೆ ಬಿಟ್ಟಾಗ ನೀರಜ್ ಅಗೋಚರವಾಗುತ್ತಿದ್ದರು. ಅವರ ಈ ವರ್ತನೆಯಿಂದ ನಾನೂ  ಸ್ವಲ್ಪ ಕಳವಳಗೊಂಡಿದ್ದೆ. ತರಬೇತುದಾರರು ಅವರ ಬಗ್ಗೆ ನನ್ನನ್ನು ಕೇಳಿದಾಗ ಅವರಿಗೆ ಕೆಲಸದ ಒತ್ತಡ ಜಾಸ್ತಿ ಜೊತೆಗೆ ಮೊದಲಿಂದಲೂ ಅವರು ಹಾಗೇ  ಎಂದು ಮಾತು ಮರೆಸಿದೆ. ಆದರೆ ನನಗೆ ಮಾತ್ರ ಅವರ ಈ ನಡವಳಿಕೆ ಸರಿ ಅನಿಸಿರಲಿಲ್ಲ . ಅವರಿಗೆ  ತರಬೇತಿಯಲ್ಲಿನ  ಆಸಕ್ತಿ ನಿಧಾನವಾಗಿ ಕ್ಣಿಣಿಸುತ್ತಿದ್ದುದ್ದನ್ನು  ಗಮನಿಸಿದ್ದೆ.  

             ಕಡೆಯದಾಗಿ ಅವತ್ತು ತರಬೇತಿ ಮುಗಿಯುವಷ್ಟರಲ್ಲಿ  ಸಂಜೆ ಆರು ಘಂಟೆಯಾಗಿತ್ತು. ನಂತರ ಅವತ್ತಿನ ಚಿಕ್ಕ  ಕೆಲಸವೇನಾದರೂ ಮುಗಿಯುವ ಹಂತದಲ್ಲಿತೆಂದರೆ ಅದರ ಬಗ್ಗೆ ಗಮನ ಕೊಡೋಣವೆಂದು ನಮ್ಮ ನಮ್ಮ 

ಜಾಗಕ್ಕೆ ನಿರ್ಗಮಿಸಿದೆವು.  ಆರುಘಂಟೆಗೆ ನಮ್ಮ ಕಚೇರಿಯಲ್ಲಿನ ಬಹುತೇಕ ಜನ ಮನೆಗೆ  ನಿರ್ಗಮಿಸುತ್ತಾರೆ.ಒಟ್ಟಾರೆ ತರಬೇತಿಯು ಅದ್ಭುತವಾಗಿತ್ತು ಹಾಗು ಬಹಳ ಮಾಹಿತಿ ತಿಳಿದುಕೊಂಡಿದ್ದ  ಸಂತಸ ನನಗೆ ಇತ್ತು. ಹಾಗು ಅದರ ಬಗ್ಗೆ ಚರ್ಚಿಸಲು ನೀರಜ್  ಬಳಿಗೆ ಹೋದೆ.

             " ನೀರಜ್ ಈಗ ಹೇಗೆ ಇದ್ದೀರಾ ? ಏನಾಗಿತ್ತು . ನಂತರ ಹೇಳುತ್ತೇನೆ ಎಂದು ಕೈಎತ್ತಿಬಿಟ್ಟಿರಲ್ಲ . ಏನ್ ವಿಷಯ? " ಎಂದು ಕೇಳಿದೆ. ತುಂಬಾ ಸಮಾಧಾನವಾಗಿ ನೀರಜ್ ರವರು" ಬನ್ನಿ ಭರತ್. ಕುಳಿತುಕುಳಿತುಕೊಳ್ಳಿ. ಹೌದು ನೀವು ಹೇಳಿದ ಹಾಗೆ ನಾನು ಬೆಳಗ್ಗೆ ತರಬೇತಿಯಲ್ಲಿ ಸ್ವಲ್ಪ ಅಸಮಾಧಾನದಿಂದಿದ್ದೆ " ಎಂದುತ್ತರಿಸಿದರು. ಮತ್ತೆ ಅವರೇ " ಮೊನ್ನೆ ನಮಗೆಲ್ಲರಿಗೂ ವೇತನದ ಬಡ್ತಿ  ಪತ್ರ ಬಂದಿತಲ್ಲ ನೋಡಿದ್ದೀರಾ? " ಎಂದು ಕೇಳಿದಾಗ ಮುಖವನ್ನು ಸಪ್ಪಗೆ ಮಾಡಿಕೊಂಡು ಹೌದ್ದೆಂದು ತಲೆ ಅಲ್ಲಾಡಿಸಿದೆ. " ನಿಮಗೆ ಗೊತ್ತಿಲ್ಲ ಭರತ್, ನನಗಂತೂ ಈ ಬಾರಿ ನಿರೀಕ್ಷೆಗಿಂತ ಬಹಳ ಕಮ್ಮಿ ಕೊಟ್ಟಿದ್ದಾರೆ ಅದರ ಬಗ್ಗೆ ನನಗೆ ತುಂಬಾ ಬೇಸರವಾಗಿದೆ " ಎಂದು ತಮ್ಮ ಅಸಮಾಧಾನವನ್ನು ತೋರ್ಪಡಿಸಿದರು.

              ಓಹೋ ಅದರ ಬಗ್ಗೆ ತಲೆ ಕೆಡಸಿಕೊಂಡಿದ್ದಾರೇನೋ ಅದಕ್ಕೆ ಅವರು ತರಬೇತಿಯ ವಿಷಯದ ಬಗ್ಗೆ ಗಮನ ಕೊಟ್ಟಿಲ್ಲ ಅಂತ ಕಾಣಿಸುತ್ತದೆ. ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಅರ್ಥವಾಗಿರಲಿಲ್ಲ ವಿವರಿಸಲು ಕೇಳಿದೆ ಅದಕ್ಕವರು " ತರಬೇತಿಯ ವಿಷಯದಲ್ಲಿನ ಮೂರು  ತಂತ್ರಗಳನ್ನು ನಮ್ಮ ಸಂಬಳದ ಮೇಲೂ ಪ್ರಯೋಗಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.

ಮೊದಲನೆಯದಾಗಿ ಬಡ್ತಿ ಕಡಿಮೆ ಕೊಟ್ಟ ಪ್ರಭಾವದ ವಿಶ್ಲೇಷಣೆ,ಅದರಿಂದಾಗುವ ಅಪಾಯದ ಶೋಧನೆ ಅದಕ್ಕೆ ಪರಿಹಾರವಾಗಿ ಎಷ್ಟು ಬೇಕೋ ಅಷ್ಟು ಕೊಟ್ಟು ಅಪಾಯ ನಿರ್ಮೂಲನೆ ಮಾಡಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಎಲ್ಲರಿಗೂ ನೆಮ್ಮದಿ ಇರುತ್ತಿತ್ತು. ಬರಿ ನಮಗೆ ಮಾತ್ರ ಈ ತರಬೇತಿ ಅವಶ್ಯಕವಲ್ಲ ಅವರಿಗೂ ಕೂಡ.." ಎಂದು ಅವರ ಅತ್ಯದ್ಭುತ ಉಪದೇಶವನ್ನು ಹೇಳಿ ಕಳಿಸಿದರು.

                ಅಲ್ಲಿಯವರೆಗೂ ಚೆನ್ನಾಗಿದ್ದ ನಾನು ಅದನ್ನು ಕೇಳಿ ನೆಮ್ಮದಿ ಕಳೆದುಕೊಂಡು ಕೆಲಸಮಾಡಬೇಕೆಂದು ಅಂದು ಕೊಂಡ ಯೋಜನೆಯನ್ನು ಕೈಬಿಟ್ಟು ಎಲ್ಲವನ್ನು ಮುಚ್ಚಿ ಮನೆಗೆ ಹೋದೆ. ಅವರೂ  ತಲೆ ಕೆಡಿಸಿಕೊಂಡು ನನ್ನ ತಲೆಯೂ ಕೆಡಿಸಿದ್ದರಿಂದ ಹಾಳಾದ್ದು ರಾತ್ರಿ ಇಡೀ  ನಿದ್ದೆ ಬರಲಿಲ್ಲ.

 

 ಮಾರನೆಯ ದಿನ ಎಂದಿನಂತೆ ಎಲ್ಲವನ್ನು ಮರೆತು ಕೆಲಸಕ್ಕೆ ಹೋದೆ. 
 
 
                                                                                                                                                  - ಭರತ್