ನೆನಪಿನ ಪಯಣ: ಭಾಗ – 2

ನೆನಪಿನ ಪಯಣ: ಭಾಗ – 2

ನೆನಪಿನ ಪಯಣ: ಬಾಗ – 2

ನೆನಪಿನ ಪಯಣದ ಪ್ರಯೋಗ ಪ್ರಾರಂಭ:
ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ. ಹಾಗಾಗಿ ನಮ್ಮಗಳದೆ ಸಾಮ್ರಾಜ್ಯ.
ಶ್ರೀನಿವಾಸಮೂರ್ತಿಗಳು ಮಾತ್ರ ಈಗಲೂ ಆತಂಕದಲ್ಲಿದ್ದರು
ರೂಮಿನಲ್ಲಿ ಒಂದು ದೀಪ ಬಿಟ್ಟು ಎಲ್ಲ ದೀಪವನ್ನು ಆನಂದ ಆರಿಸಿದ. ಜ್ಯೋತಿ ಮಾತ್ರ ನಗುತ್ತಿದ್ದಳು. ಅವಳಿಗೆ ಎಂತದೊ ಮಕ್ಕಳ ಆಟದಂತೆ ತೋರುತ್ತಿತ್ತು ಅನ್ನಿಸುತ್ತೆ.
ಜ್ಯೋತಿ ಆರಾಮವಾಗಿ ಅನ್ನುವಂತೆ ಮಂಚ ಹತ್ತಿ ಮಲಗಿದ್ದಳು. ನಾನು ಆನಂದ ಜ್ಯೋತಿಯ ಮುಂದೆ ಕುರ್ಚಿಹಾಕಿ ಕುಳಿತೆವು.
ಸಂದ್ಯಾ, ಆರ್ಯ, ಉಷಾ ಹಾಗು ಶ್ರೀನಿವಾಸ ಮೂರ್ತಿಗಳು ಜ್ಯೋತಿಯ ತಲೆಯ ಬಾಗದಲ್ಲಿ ಮಂಚದ ಹಿಂಬಾಗದಲ್ಲಿದ್ದ ಸೋಫದಲ್ಲಿ ಕುಳಿತರು. ಜ್ಯೋತಿಗೆ ನಾನು ಮತ್ತು ಆನಂದ ಮಾತ್ರ ಕಾಣುತ್ತಿದ್ದೆವು.
ಆನಂದ ನುಡಿದ, ನೋಡಪ್ಪ, ನಿನಗೆ ಹೇಗೆ ಬೇಕೊ ಹಾಗೆ ಅವಳಿಗೆ ನೆನಪಿಸಿಕೊಳ್ಳಲು ಹೇಳು, ನಾನು ಪಕ್ಕದಲ್ಲಿರುತ್ತೇನೆ ಬಾಯಿ ಹಾಕುವದಿಲ್ಲ. ನಾವ್ಯಾರು ನಡುವೆ ಮಾತನಾಡುವದಿಲ್ಲ.
<ನಮಗೆ ಅರಿವಿಲ್ಲದೆ, ಪ್ರಕೃತಿಯು ತೋಡಿದ ನೆನಪು ಎನ್ನುವ ಆಳ ಪ್ರಪಾತಕ್ಕೆ ಬೀಳಲು ನಾವು ಸಜ್ಜಾಗುತ್ತಿದ್ದೆವು. ಮೆದುಳಿನ ಶಕ್ತಿಯ ಅರಿವಿಲ್ಲದ ನಮ್ಮಂತ ಸಾಮಾನ್ಯರಿಂದ ಮೆದುಳಿನ ಶಕ್ತಿಯ ಮೇಲಿನ ಪರೀಕ್ಷೆ! >
ನಾನು ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಮಂಚದ ಮೇಲೆ ಮಲಗಿದ್ದ ಜ್ಯೋತಿ ನಗುತ್ತ ನನ್ನ ಕಡೆ ನೋಡುತ್ತಿದ್ದಳು. ನಾನು ನಗುತ್ತ ಅವಳ ಕಡೆ ನೋಡಿ ನುಡಿದೆ.
ಜ್ಯೋತಿ, ನಾವೀಗ ಸುಮ್ಮನೆ ಕುತೂಹಲಕ್ಕೆ ಒಂದು ಪ್ರಯೋಗ ನಡೆಸಿದ್ದೇವೆ. ನೀವು ಆರಾಮವಾಗಿ ಮಲಗಿ. ಆದರೆ ಒಂದು ನೆನಪಿಡಿ ನೀವು ಯಾವಾಗಲು ನಿದ್ದೆ ಮಾಡುವಂತಿಲ್ಲ. ಇನ್ನು ತಂಪಾಗಿದೆ ಎಂದು ನಿದ್ದೆ ಹೊಡೆದುಬಿಟ್ಟೀರಿ ಎಂದೆ
ಅವಳ ನಗು ರೂಮನ್ನೆಲ್ಲ ವ್ಯಾಪಿಸಿತು. ನಂತರ ಆಗಲಿ ಅನ್ನುವಂತೆ ತಲೆ ಆಡಿಸಿದಳು
ಜ್ಯೋತಿ ಮೊದಲು ನಿಮ್ಮ ಮನಸ್ಸಿನಲ್ಲಿ ಯಾವುದಾದರು ಆತಂಕವಿದ್ದರೆ ಅದನ್ನು ತೆಗೆದುಬಿಡಿ. ನಾವೀಗ ನಿಮ್ಮ ಮೇಲೆ ಪ್ರಯೋಗವನ್ನೇನು ನಡೆಸುತ್ತಿಲ್ಲ. ನಾನು ಮಲಗಿ ಬಹಳ ಸಮಯವಾದರು ನಿದ್ರೆ ಬಾರದೇ ಹೋದಾಗ, ನಿದ್ರೆ ಬರಲೆಂದು ಹಿಂದಿನದೆಲ್ಲ ನೆನಪಿಸಿಕೊಳ್ಳುತ್ತ ಹೋಗುತ್ತಿದ್ದೆ. ಸ್ವಲ್ಪ ಕಾಲದಲ್ಲಿಯೆ ನಿದ್ರೆ ಹತ್ತಿಬಿಡುತ್ತಿತ್ತು. ನೀವು ಎಷ್ಟು ಕಾಲದ ಹಿಂದಿನ ಘಟನೆಗಳನ್ನು , ಸಂದರ್ಭಗಳನ್ನು ನೆನೆಪಿಸಿಕೊಳ್ಳುತ್ತ ಹೋಗುತ್ತೀರಿ ಎಂದು ನೋಡುವುದು ಅಷ್ಟೆ ಈಗ ಉದ್ದೇಶ. ನಿಮಗೆ ನಾನು ಯಾವ ಪ್ರಶ್ನೆಗಳನ್ನು ಹಾಕುವದಿಲ್ಲ. ಸುಮ್ಮನೆ ಸಲಹೆ ಕೊಡುತ್ತ ಹೋಗುತ್ತೇನೆ ಆದೀತ?. ನೀವು ಅಷ್ಟೆ ನಿಮ್ಮ ನೆನಪಿನಲ್ಲಿ ಬರುವ ಘಟನೆಗಳನ್ನು ನಮಗೆ ತಿಳಿಸುತ್ತ ಹೋಗಿ, ಆದರೆ ಒಂದು ನೆನಪಿಡಿ ಸಾದ್ಯವಾದ ಮಟ್ಟಿಗು ನಿಮ್ಮ ನೆನಪಿನ ಪಯಣ ಹಿಮ್ಮುಖವಾಗಿ ಸಾಗುತ್ತದೆ. ಒಮ್ಮೆ ಹಿಂದೆ ಮತ್ತೆ ಒಮ್ಮೆ ಮುಂದೆ ಎಂದು ಓಡಾಟ ಬೇಡ ಸಿದ್ದವಾಗಿ ಎಂದೆ
ಆಗಲಿ ನನಗೆ ಯಾವ ಆತಂಕವು ಇಲ್ಲ, ನೀವು ಅಪರಿಚಿತರು ಎಂದು ಸಹ ಅನ್ನಿಸುವದಿಲ್ಲ. I am feeling comfortable , ಮೇಲಾಗಿ ಇದು ನಾನು ದಿನವೂ ಮಲಗುವ ಜಾಗ ಯಾವ ಕಿರಿಕಿರಿಯೂ ಇಲ್ಲ ಎಂದಳು ಜ್ಯೋತಿ
ಸರಿ ಹಾಗಿದ್ದರೆ, ನಿಮ್ಮ ಮನಸನ್ನು ಕೇಂದ್ರಿಕರಿಸಲು ಸಹಾಯವಾಗಲಿ, ಒಂದು ಕ್ಷಣ ಕಣ್ಣು ಮುಚ್ಚಿರಿ ಎಂದೆ.
ಆಕೆ ನಗುತ್ತ ಕಣ್ಣು ಮುಚ್ಚಿ ಮಲಗಿದರು. ಆಕೆಯ ಮುಖ ಗಮನಿಸಿದೆ. ಯಾವುದೇ ಅಳುಕಿಲ್ಲ.
ಪಕ್ಕದಲ್ಲಿ ಆನಂದ ಏನೋ ಮಾಡುತ್ತಿದ್ದ. ಗಮನಿಸಿದರೆ ಅವನು ತನ್ನ ಮೊಬೈಲ್ ತೆಗೆದು ಅದನ್ನು ವಾಯ್ಸ್ ರೆಕಾರ್ಡಿಂಗ್ ಹಾಕಿ ಹಾಸಿಗೆಯ ಮೇಲೆ ಜ್ಯೋತಿ ಮಲಗಿದ್ದ ದಿಂಬಿನ ಪಕ್ಕ ಇಡುತ್ತಿದ್ದ. ನಾನು ಅವನ ಮುಖ ನೋಡಿದರೆ, ಮಾತನಾಡಬೇಡಿ ಎನ್ನುವಂತೆ ತನ್ನ ತೋರು ಬೆರಳನ್ನು ಅವನ ತುಟಿಯ ಮೇಲಿಟ್ಟು ಅಭಿನಯಿಸಿದ. ಇದು ಬಹುಶಃ ಜ್ಯೋತಿಯ ಮಾತನ್ನೆಲ್ಲ ರೆಕಾರ್ಡ್ ಮಾಡಿ ಅವಳು ಮೇಲೆದ್ದ ನಂತರ ಅವಳಿಗೆ ಕೇಳಿಸಿ ಗೋಳಾಡಿಸಲು ಇರಬಹುದು ಎಂದು ಕೊಂಡು, ನನಗೂ ನಗು ಬಂದಿತು
ಜ್ಯೋತಿ , ಈಗ ಸುಮ್ಮನೆ ಈ ದಿನದ ಬೆಳಗಿನಿಂದ ಸಂಜೆಯವರೆಗೂ ನಡೆದ ಘಟನೆಗಳನ್ನು ಸುಮ್ಮನೆ ನೆನಪಿಸಿಕೊಳ್ಳಿ. ……..
ನಾನು ನಿಧಾನವಾದ ದ್ವನಿಯಲ್ಲಿ ಹೇಳಿದೆ,
ಹಾಗೆ ಅದನ್ನು ನಮಗೆ ಹೇಳುತ್ತ ಹೋಗಿ.
ಜ್ಯೋತಿ ನುಡಿದಳು
ಆಗಲಿ ಬಿಡಿ ಅದರಲ್ಲೇನು ವಿಶೇಷವಿಲ್ಲ. ಈದಿನವೂ ಎಂದಿನಂತೆ ಆರುಘಂಟೆಗೆ ಎದ್ದು, ಮುಖತೊಳೆದು, ಹೋಗಿ ಹಾಲು ತಂದೆ. ಈ ಮನುಷ್ಯ , ನನ್ನ ಗಂಡ ಆನಂದ , ಎಮ್ಮೆಯ ತರ ಮಲಗೇ ಇದ್ದರು
(… ಅವಳ ನಗು) .
ನಂತರ ಕಾಫಿ ಮಾಡಿದೆ, ಕಾಫಿಯ ವಾಸನೆ ತಾಗುತ್ತಲೆ ಇವರು ಎದ್ದು ಕುಳಿತರು. ಕಾಫಿಮುಗಿಸಿ, ಬಾಗಿಲ ಕಸ ತೆಗೆದು, ನೀರು ಹಾಕಿ ರಂಗೋಲಿ ಮುಗಿಸುವಾಗ, ಪೇಪರ್ ಬಂದಿತ್ತು. ಪೇಪರ್ ನೋಡುತ್ತ ಕುಳಿತೆ. ಇವರು ಎಂದಿನಂತೆ ಮೊಬೈಲ್ ಹಿಡಿದು ವಾಟ್ಸಪ್ ಪೇಸ್ ಬುಕ್ ಎಂದು ಮುಳುಗಿದ್ದರು. ಈ ದಿನ ಬಾನುವಾರ ಬೇರೆ ಆಪೀಸಿಗೆ ಹೋಗುವ ಆತುರವು ಇಲ್ಲ . ಎಲ್ಲವೂ ನಿಧಾನವಾಗಿತ್ತು. ಅಷ್ಟರಲ್ಲಿ ಶಶಾಂಕನ ಪೋನ್ ಬಂದಿತು, ಅವನು ಊಟಿಯಲ್ಲಿದ್ದಾನಂತೆ ಸ್ನೇಹಿತರ ಜೊತೆ. ಇಂದು ರಾತ್ರಿಯೋ, ನಾಳೆ ಬೆಳಗ್ಗೆಯೋ ಬರಬಹುದು. ಸರಿ ಸ್ನಾನ ತಿಂಡಿ ಊಟ ಅಂತ ಎಲ್ಲ ಮುಗಿಸುವಾಗ ನೀವೆಲ್ಲ ಬಂದಿರಿ ಮಾತನಾಡುತ್ತ ಕುಳಿತೆವು. ಮರೆತೆ ಬೆಳಗ್ಗೆ ಒಂದು ಸಿನಿಮಾ ನೋಡಿದೆ ಅಕಾಶ್ ಎಂದು ಪುನೀತ್ ರಾಜ್ ಕುಮಾರದು, ಇವರು ಶತದಿನೋತ್ಸವ ಎಂದು ರೇಗಿಸುತ್ತಿದ್ದರು ನೂರನೇ ಸಾರಿ ಅದೇ ಸಿನಿಮಾ ನೋಡುತ್ತಿರುವೆ ಎಂದು ….., ಬಹುಶಃ .. ಅಷ್ಟೆ ಅನ್ನಿಸುತ್ತೆ.
ಜ್ಯೋತಿ ಮಾತು ನಿಲ್ಲಿಸಿದಳು.
ಅಲ್ಲೆಲ್ಲ ಒಂದು ಮೌನ. ಎಲ್ಲರ ಮುಖ ನೋಡಿದೆ. ಶ್ರೀನಿವಾಸಮೂರ್ತಿಗಳು, ಆರ್ಯ ಅವನ ಪತ್ನಿ ಉಷಾ , ಸಂದ್ಯಾ ಎಲ್ಲರೂ ಮುಂದೆ ಏನಾಗಬಹುದು ಎನ್ನುವ ಕುತೂಹಲದಲ್ಲಿದ್ದರು. ಆನಂದ ಸುಮ್ಮನೆ ಕುಳಿತಿದ್ದ.
ನಾನು
ಸರಿ ಈಗ ನಿನ್ನೆ ಬೆಳಗ್ಗೆಯಿಂದ ಏನಾಯಿತು ಹೇಳಬಲ್ಲಿರಾ ?
ನಿನ್ನೆ ಶನಿವಾರ, ಇವರು ಸ್ವಲ್ಪ ಬೇಗ ಎದ್ದು ಸ್ನಾನ ಮುಗಿಸಿದ್ದರು, ಶನಿವಾರದ ಪ್ರಯುಕ್ತ ದೇವಾಲಯಕ್ಕೆ ಎಂದು ಹೋಗವರಲ್ಲ. ಮಠಕ್ಕೆ ಹೋಗಿ ಬಂದರು, ಇವರು ಬರುವಾಗ ನಾನು ದೋಸೆ ಮಾಡಿದ್ದೆ. ಅವರು ಈ ದಿನ ತಿಂಡಿಯ ಡಭ್ಭಿ ಬೇಡ ಎಂದರು. ಆಫೀಸಿಗೆ ಹೊರಟರು. ನಾನು ಮಧ್ಯಾಹ್ನವೂ ದೋಸೆಯನ್ನೆ ತಿಂದೆ. ಸ್ವಲ್ಪ ಮಲಗಿದ್ದೆ. ನಂತರ ಸಂಜೆ ರಸ್ತೆಯಲ್ಲಿ ಸ್ನೇಹಿತೆಯರು ಬಂದಿದರು. ವಾಕಿಂಗ್ ಹೋಗಿ ಬಂದೆವು ಪಾರ್ಕ್ ತನಕ. ಅಷ್ಟರಲ್ಲಿ ಗ್ಯಾಸ್ ನವನು ಬಂದು ಹೊರಟು ಹೋಗಿದ್ದ. ಸಂಜೆ ಇವರು ಆಪೀಸಿನಿಂದ ಬಂದರು. ಕಾಫಿ ಮಾಡಿಕೊಟ್ಟೆ. ನಂತರ ಟೀವಿ ನೋಡಿದೆ. ಮಕ್ಕಳ ಕಾರ್ಯಕ್ರಮ ಒಂದುಬರುತ್ತಿದೆಯಲ್ಲ ನಾಟಕದ್ದು ಅದನ್ನು , ರಾತ್ರಿ ಊಟ ಬೇಡ ಎಂದೆ ಚಪಾತಿ ಮಾಡಿದ್ದೆ. ಇವರು ಚಪಾತಿ ನಂತರ ಚೆನ್ನಾಗಿ ಮಾವಿನಹಣ್ಣು ಇಳಿಸಿದರು. ಹತ್ತು ವರೆಗೆ ಮಲಗಿಬಿಟ್ಟೆವು ಅಷ್ಟೆ
ಸರಿ ಈಗ ನೀವು ಮತ್ತು ಹಿಂದೆ ಹೋಗಬಲ್ಲಿರಾ, ನಿಮಗೆ ಯಾವ ದಿನವೋ ಅಲ್ಲಿಗೆ ನಿಮ್ಮ ಮನಸಿಗೆ ಏನು ನೆನಪು ಬರುವುದೋ ಅದು.
ಕ್ಷಣಮೌನ….. ಜ್ಯೋತಿ ಪ್ರಾರಂಭಿಸಿದಳು.
ಕಳೆದ ಬಾನುವಾರ ಮಗ ಶಶಾಂಕ ಇದ್ದಕ್ಕಿದಂತೆ ಬ್ಯಾಗು ಹಿಡಿದು ಹೊರಟುನಿಂತ ( ಅವಳ ದ್ವನಿ ಸ್ವಲ್ಪ ಬದಲಾಗಿತ್ತು ).

ಅವನು ಟೂರ್ ಎಂದು ಹೋಗುವುದು ಸಹ ನಮಗೆ ಮೊದಲೇ ಗೊತ್ತಿರಲಿಲ್ಲ. ಎಲ್ಲವೂ ಏರ್ಪಾಡು ಮಾಡಿಕೊಂಡು ಕಡೆಯ ಗಳಿಗೆಯಲ್ಲಿ ಹೊರಡುವಾಗ ನನಗೆ ತಿಳಿಸಿದ. ನಾನು ಆನಂದ್ ಗೆ ಹೇಳಿದರೆ, ಅವರು ನೀವಿಬ್ಬರು ಮೊದಲೇ ನಿರ್ಧರಮಾಡಿರುತ್ತೀರಿ ನನಗೆ ಏನು ತಿಳಿಸುವದಿಲ್ಲ ಅಂತ ಕೂಗಾಡಿದರು. ಅವರಿಗೆ ಹೇಳಿದರೂ ನಂಬುವದಿಲ್ಲ. ಶಶಾಂಕ ಈ ವಯಸಿನಲ್ಲಿ ಅವನ ವರ್ತನೆ ನೋಡುವಾಗ ಭಯವಾಗುತ್ತೆ. ಅಪ್ಪ ಅಮ್ಮ ಅವನಿಗೆ ಲೆಕ್ಕವೇ ಇಲ್ಲವೇನೊಎನ್ನುವಂತೆ ವರ್ತಿಸುತ್ತಾನೆ.
ನಾನು ಕೇಳಿದರೆ ನನ್ನ ಮೇಲೆ ಕೂಗಾಡಿದ. ಎಲ್ಲ ಮನೆಯಲ್ಲಿ ನೋಡಿ ಬನ್ನಿ ಇಲ್ಲಿ ನನಗೆ ಯಾವ ಸ್ವಾತಂತ್ರ್ಯವೂ ಇಲ್ಲ ಅನ್ನುತ್ತಾನೆ. ಮೊದಲೇ ಹೇಳುವದಲ್ಲವೇನೊ ಅಂದರೆ ಮೊದಲೇ ಹೇಳಿದರೆ ನೀವು ನನಗೆ ಹೋಗಲು ಎಲ್ಲಿ ಬಿಡುತ್ತೀರಿ ಎನ್ನುವ ಉತ್ತರ. ಹಣವನ್ನು ಮನಬಂದಂತೆ ಖರ್ಚುಮಾಡಬೇಡ ಹಿಡಿತವಿರಲಿ ಎಂದು ಇವರೆಂದರೆ ನನ್ನ ಕೈಲಿ ಅನ್ನುತ್ತಾನೆ, ನಾನು ಓದು ಮುಗಿಸಿ ಕೆಲಸಕ್ಕೆ ಅಂತ ಸೇರಲಿ , ನೀವು ಖರ್ಚು ಮಾಡಿರುವ ಹಣವನ್ನೆಲ್ಲ ಲೆಕ್ಕ ಹೇಳಿ, ವಾಪಸ್ಸು ಬಿಸಾಕುತ್ತೇನೆ ಎನ್ನುತ್ತಾನೆ. ಯಾವ ಮಾತನ್ನು ಅರ್ಥ ಮಾಡಿಕೊಳ್ಳುವದಿಲ್ಲ. ಅವನು ಹೊರಡುವಾಗ ಅಂದು ಹೋದ ಮಾತು ನನ್ನನ್ನು ಒಂದು ವಾರವಾದರು ಕೊರೆಯುತ್ತಿದೆ.
'ನಾವು ಹೆತ್ತು ಹೊತ್ತು ಸಾಕುವದಕ್ಕೆ, ನಮ್ಮ ಶ್ರಮಕ್ಕೆ ಯಾವ ಅರ್ಥವೂ ಇಲ್ಲವೇನೊ ' ಅಂದರೆ
'ಅದರಲ್ಲಿ ಏನು ವಿಶೇಷವಿದೆ, ಎಲ್ಲ ಅಪ್ಪ ಅಮ್ಮಂದಿರೂ ಮಕ್ಕಳನ್ನು ಸಾಕುತ್ತಾರೆ ಬೆಳಸುತ್ತಾರೆ, ಬೀದಿಯಲ್ಲಿ ನೋಡಿ ನಾಯಿ ಹಂದಿಗಳು ಸಹ ತಮ್ಮ ಮರಿಯನ್ನು ಬೆಳಸುತ್ತವೆ'ಎಂದ
'ಅಂದರೆ ನಾವು ನಾಯಿ ಹಂದಿಗೆ ಸಮವೇನೊ 'ಎಂದು ಕೇಳಿದರೆ, ಅರ್ಥಮಾಡಿಕೊಳ್ಳುವುದು ಅವರವರಿಗೆ ಬಿಟ್ಟಿದ್ದು, ನನ್ನನ್ನು ಈ ಮನೆಯಲ್ಲಿ ಒಂದು ನಾಯಿಮರಿಯಂತೆ ನೋಡಿಕೊಳ್ಳುವಿರಿ, ಅಷ್ಟೆ ಮುದ್ದಿನಿಂದ, ಅದಕ್ಕೆ ಚೈನ್ ಹಾಕಿ ಕಟ್ಟಿಹಾಕಿರುವಿರಿ, ನನಗೆ ಕಟ್ಟಿ ಹಾಕಿಲ್ಲ ಅಷ್ಟೆ ವ್ಯತ್ಯಾಸ
ಎಂದು ಗಲಾಟೆ ಮಾಡಿ ಹಣ ಪಡೆದು ಹೊರಟುಹೋದ. ಈಗಲೂ ಅವನು ಪೋನ್ ಮಾಡಿದ್ದು, ಅಕೌಂಟಿಗೆ ಹಣ ಹಾಕಿ , ಏಟಿಎಮ್ ಕಾರ್ಡಿನಲ್ಲಿ ಡ್ರಾ ಮಾಡುವೆ ಎಂದು ಹೇಳುವದಕ್ಕೇನೆ'
ನಾನು ಇದನ್ನೆಲ್ಲ ಯಾರ ಬಳಿ ಹೇಳಲಿ, ಇವರು ಕೇಳಿದರೆ ನೊಂದುಕೊಳ್ಳುತ್ತಾರೆ, ಕೂಗಾಡುತ್ತಾರೆ ಸುಮ್ಮನೆ ಮನೆಯಲ್ಲಿ ಜಗಳ .
ಜ್ಯೋತಿ ಮೌನ ತಾಳಿದಳು. ನನಗೆ ಏನು ತೋಚಲಿಲ್ಲ. ಆನಂದನ ಮುಖ ನೋಡಿದೆ. ಅವನ ಮುಖವೂ ಸಪ್ಪೆಯಾಗಿತ್ತು ಏನನ್ನೋ ಯೋಚಿಸುತ್ತಿದ್ದ.
ನಾನೀಗ ಯೋಚಿಸುತ್ತಿದ್ದೆ.
ಜ್ಯೋತಿ , ಕಣ್ಣು ಮುಚ್ಚಿ ಮಲಗಿ ಹೊರಗಿನದನ್ನೆಲ್ಲ ಮರೆತುಬಿಟ್ಟಿದ್ದಾಳೆ. ಯಾವ ಮಾತು ಆಡಬೇಕು ಆಡಬಾರದು ಎಲ್ಲರೂ ಇದ್ದೇವೆ ಅನ್ನುವ ವಿವೇಚನೆ ಸದ್ಯಕ್ಕೆ ಮರೆಯಾಗಿದೆ ಅನ್ನಿಸಿತು. ಸುತ್ತಲೂ ಕುಳಿತ ಎಲ್ಲರ ಮುಖದಲ್ಲಿ ಗೊಂದಲ ಕಾಣುತ್ತಿತ್ತು. ಈ ಕಾರ್ಯಕ್ರಮ ಇಲ್ಲಿಗೆ ನಿಂತರೆ ಸರಿಯೇನೊ. ಎಲ್ಲರ ಎದುರಿಗೆ ನಗುತ್ತ ಇರುವ ಜ್ಯೋತಿ ಮತ್ತು ಆನಂದ ಮನಸ್ಸಿನಲ್ಲಿ ಇಂತಹುದೆಲ್ಲ ದುಃಖ ತುಂಬಿಕೊಂಡಿದ್ದಾರೆ ಎಂದು ತಿಳಿದಿರಿಲಿಲ್ಲ.
'ಜ್ಯೋತಿ ಇದು ಎಲ್ಲರ ಮನೆಯಲ್ಲಿ ಇರುವ ಸಮಸ್ಯೆಗಳೆ ಅಲ್ಲವೇ. ಅಷ್ಟಕ್ಕೂ ಶಶಾಂಕ ಇನ್ನು ಚಿಕ್ಕ ಹುಡುಗ, ಯೋಚಿಸುವ ಶಕ್ತಿ ಇಲ್ಲ. ಸ್ವಲ್ಪ ದೊಡ್ಡವನಾದಂತೆ ಎಲ್ಲ ಅರ್ಥಮಾಡಿಕೊಳ್ಳುತ್ತಾನೆ. ವಯಸ್ಸಿನ ದುಡುಕುತನಕ್ಕೆ ನೀವು ಇಷ್ಟೊಂದು ಕೊರಗುವ ಅವಶ್ಯಕತೆ ಇಲ್ಲ ಅಲ್ಲವೇ ' ಎಂದೆ.
ಆನಂದನ ಮುಖ ನೋಡಿದೆ, ಮುಂದುವರೆಯಲಿ ಅನ್ನುವಂತೆ ಮುಖಭಾವ ಮಾಡಿದ. ನಾನು ಸ್ವಲ್ಪ ಹಿಂಜರಿದಿದ್ದೆ ಅವನೇ ಹಾಗೆ ಹೇಳುವಾಗ ಮುಂದುವರೆಯುವುದು ಸರಿ ಅನ್ನಿಸಿತು. ಸ್ವಲ್ಪ ಯೋಚಿಸಿ ಮತ್ತೆ ನುಡಿದೆ
ಜ್ಯೋತಿ ನಿಮ್ಮ ಮನಸಿಗೆ ಯಾವುದೇ ನೆನಪು ಬರಲಿ , ಚಿಂತೆಯಿಲ್ಲ . ಆದರೆ ಅದು ಒಂದು ಕ್ರಮದಲ್ಲಿಯೆ ಬರಲಿ . ಅಲ್ಲದೇ ನೀವು ನಿಮ್ಮ ಮನಸಿಗೆ ಬರುವ ಎಲ್ಲ ನೆನಪುಗಳನ್ನು ಹೊರಗೆ ಹೇಳುವ ಅಗತ್ಯವಿಲ್ಲ. ನಿಮ್ಮ ನೆನಪೂ ಮತ್ತೂ ಹಿಂದಕ್ಕೆ ಕರೆದೊಯ್ಯಿರಿ. ನೆನಪಿಡಿ ನಾನು ನಿಮ್ಮ ಮೇಲೆ ಯಾವುದೇ ಒತ್ತಡ ಹಾಕುತ್ತಿಲ್ಲ. ಹಿಪ್ನಾಟಾಯಿಸ್ ಮಾಡುತ್ತಿಲ್ಲ. ನೀವು ಚಿಂತಿಸಲು ಸಮರ್ಥರಿದ್ದೀರಿ. ನಿಮ್ಮ ಯೋಚನೆಗೆ ಅನುಗುಣವಾಗಿ ನೆನಪಿಸಿಕೊಳ್ಳಿ, ಈಗ ಮತ್ತೂ ಹಿಂದಿನ ಯಾವುದಾದರು ಸಂದರ್ಭ ನೆನೆಯಿರಿ.
ನಿಮ್ಮಲ್ಲಿ ನೆನೆಪನ್ನು ಹಂಚಿಕೊಳ್ಳುವದರಲ್ಲಿ ನನಗೆ ಯಾವ ಸಂಕೋಚವೂ ಇಲ್ಲ ಅಣ್ಣ ಎಂದಳು ,
ಅವಳು ನನ್ನನ್ನು ಪ್ರಥಮ ಭಾರಿ ಅಣ್ಣ ಎಂದು ಕರೆದಿದ್ದಳು.
ಇಲ್ಲಿಯವರೆಗೂ ನಾನು ಆ ಮನೆಗೆ ಸ್ನೇಹಿತನಂತೆ ಬಂದು ಹೋಗುವದರ ಹೊರತು ಮತ್ಯಾವ ಭಾವಾನರೀತಿಯ ಸಂಬಂಧಗಳು ಇರಲಿಲ್ಲ. ಈಗ ಆಕೆ ಅಣ್ಣ ಅಂದಿದ್ದು, ನನ್ನಲ್ಲಿ ಬೆರಗು ಮೂಡಿಸಿತ್ತು.
ಜ್ಯೋತಿ ತನ್ನ ಮಾತು ಮುಂದುವರೆಸಿದಳು.
ಮಕ್ಕಳು ಬೆಳೆದ ನಂತರ ಎಲ್ಲ ಮರೆತುಹೋಗುತ್ತದೆ. ಅವರಿಗೆ ನಾವು ಖರ್ಚು ಮಾಡಿದ ಹಣಕ್ಕೆ ಯಾವ ಅರ್ಥವೂ ಇಲ್ಲ. ಅವರಿಗೆ ಮಾಡುವ ಸೇವೆಗೂ ಅಷ್ಟೆ ನಮ್ಮಕರ್ತವ್ಯ ವಾಗಿರುತ್ತೆ. ಅವರಿಗೆ ಒದಗಿಸುವ ಸೌಕರ್ಯಗಳು ಸಹ ನಮ್ಮ ಕರ್ತ್ಯವ್ಯದ ಒಂದು ಭಾಗವಾಗಿರುತ್ತೆ, ಅವು ನಮ್ಮ ಸ್ವಂತ ಮಕ್ಕಳಲ್ಲದೆ ಬೇರೆ ಮಕ್ಕಳಿದ್ದರು ಮಾಡಬಹುದು. ಆದರೆ ಸ್ವಂತ ಮಕ್ಕಳನ್ನು ಹೆತ್ತ ಮಕ್ಕಳು ಅನ್ನುವಾಗ ಕಾರಣ ಬೇರೆ ಇರುತ್ತೆ. ಇದು ತಾಯಿಯರಿಗೆ ಮಾತ್ರ ಅರ್ಥವಾಗುವ ಕಾರಣ. ಒಂದು ಮಗುವನ್ನು ಒಂಬತ್ತು ತಿಂಗಳು ನಮ್ಮ ಒಳಗೆ ಹೊತ್ತಿರಲು ಕಡೆಗೆ ಹೆರಿಗೆಯ ದಿನ ಅನುಭವಿಸುವ ಆತಂಕ, ಆ ನೋವು ಬಹುಶಃ ತಾಯಿಯರಿಗೆ ಮಾತ್ರ ಅರ್ಥವಾಗುವ ಭಾವ, ಅದು ಮಕ್ಕಳಿಗಾಗಲಿ, ಅವರ ತಂದೆಗಾಗಲಿ ತಿಳಿಯುವದಿಲ್ಲ.
ಆಕೆಯ ಮಾತು ಕೇಳುತ್ತಿರುವಾಗ ಆನಂದ ನನ್ನನ್ನೆ ನೋಡುತ್ತಿದ್ದ. ಅವನಿಗೂ ಬಹುಶಃ ಇದೆಲ್ಲ ಅನಿರೀಕ್ಷಿತ ಅನ್ನಿಸುತ್ತೆ, ಜ್ಯೋತಿ ಇಷ್ಟು ಭಾವನಾತ್ಮಕವಾಗಿ ಮಾತನಾಡಬಲ್ಲಳು ಎಂಬುದು ಅವನಿಗೂ ತಿಳಿದಿದೆಯೋ ಇಲ್ಲವೋ. ನಾನು ಎದುರಿಗೆ ಕುಳಿತವರ ಮುಖ ನೋಡಿದೆ. ಸಂದ್ಯಾ ಮತ್ತು ಉಷಾ ನನ್ನನ್ನೇ ನೋಡುತ್ತಿದ್ದರು. ಅವರಿಗೆ ನಾನು ಸಂದರ್ಭವನ್ನು ಹೇಗೆ ನಿಭಾಯಿಸುವೆನೊ ಎನ್ನುವ ಆತಂಕವಿದ್ದಂತೆ ಕಂಡಿತು.
ಜ್ಯೋತಿ ಮಾತನಾಡುತ್ತಿದ್ದಳು.
ಶಶಾಂಕ ಹುಟ್ಟಿದ ದಿನ ಅದನ್ನು ನಾನು ಮರೆಯುವ ಘಟನೆಯಲ್ಲ , ಅವನ ಬಸಿರು ಹೊತ್ತಿರುವಾಗಲೆ ಸಾಕಷ್ಟ ಕಷ್ಟ ಶ್ರಮ ಅನುಭವಿಸಿದೆ. ಮೊದಲಿನಿಂದ ನೋಡುತ್ತಿದ್ದ ಡಾಕ್ಟರ್ ಏನೇ ಆದರು ಸೀಸೇರಿಯನ್ ಮಾಡುವದಿಲ್ಲ ಅಂದುಬಿಟ್ಟರು. ಆದರೆ ಹೆರಿಗೆಯಲ್ಲಿ ಸಾಕಷ್ಟುನೋವು ಅನುಭವಿಸಿದೆ. ವಿಜ್ಞಾನಿಗಳು ಶಭ್ಧವನ್ನು ಡಿಸಿಬಲ್ ನಲ್ಲಿ ಅಳೆಯುವಂತೆ ನೋವನ್ನು ಸಹ ಇಂತಹುದೇ ಒಂದು ಮಾಪನದಲ್ಲಿ ಅಳೆಯಬಹುದು ಎನ್ನುತ್ತಾರೆ. ಆದರೆ ಅಂತಹ ವಿಜ್ಞಾನಿಗಳು ಹೆರಿಗೆ ನೋವನ್ನು ಎಂದಿಗೂ ಅನುಭವಿಸಿರುವದಿಲ್ಲ. ಅವರು ನೋವನ್ನು ಮಾಪನದಲ್ಲಿ ಅಳೆಯುವೆ ಎನ್ನುವಾಗ ಹೆಂಗಸರಿಗೆ ನಗು ಬರುತ್ತದೆ. ಹೆಣ್ಣು ಅನುಭವಿಸುವ ಹೆರಿಗೆನೋವಿನ ಅನುಭವ ಅವಳಿಗೆಮಾತ್ರ ವೇಧ್ಯ. ಶಶಾಂಕ ಹುಟ್ಟುವಾಗ ಅದೇನೊ ತೊಂದರೆ ಆಯಿತು, ಕಡೇಯವರೆಗೂ ಸರಿ ಇದೆ ಅನ್ನುತ್ತಿದ್ದ ಡಾಕ್ಟರ್ ಗಳು ಕಡೆ ಗಳಿಗೆಯಲ್ಲಿ ಕಕ್ಕಾವಿಕ್ಕಿಯಾದರು. ನನಗಂತು ಆ ಕ್ಷಣ ನನ್ನ ಜೀವನ ಮುಗಿಯಿತು ಅನ್ನುವ ಭಾವ ತುಂಬಿಹೋಯಿತು. ಸಾವಿಗೆ ಸಿದ್ದಳಾಗಿ ಬಿಟ್ಟೆ. ಅಂತಹ ನೋವಿನಲ್ಲಿ ಕಾಡುತ್ತಿದ್ದ ಆತಂಕವೆಂದರೆ ಒಂದುವೇಳೆ ಹೆರಿಗೆಯಲ್ಲಿ ನಾನು ಸತ್ತು ಮಗು ಉಳಿದುಬಿಟ್ಟರೆ, ಅದನ್ನು ನೋಡಿಕೊಳ್ಳುವವರು ಯಾರು. ಅಲ್ಲದೆ ನನ್ನ ಸಾವಿನ ನಂತರ ಆನಂದ ಏನು ಮಾಡುವನು ಎಂಬುದಾಗಿತ್ತು.
ಜ್ಯೋತಿ ಮೌನವಾದಳು, ಆನಂದ ಎಂತದೋ ಒಂದು ಭಾವದಿಂದ ಬೆರಗಿನಿಂದ ಅವಳ ಮುಖ ನೋಡುತ್ತಿದ್ದ.
ಅಂತಹ ನೋವನ್ನು ಅನುಭವಿಸಿ, ನಾನು ಶಶಾಂಕನನ್ನು ಪಡೆದೆ. ಅವನು ನನ್ನ ದೇಹದ ಒಂದು ಭಾಗ ಅನ್ನುವಂತೆ ಬೆಳೆಸಿದೆ. ಆದರೆ ಈಗ ಅವನು ಸ್ವತಂತ್ರ್ಯ. ನನ್ನ ಅನುಭವ ಅವನಿಗೆ ಅನಗತ್ಯ. ಕಡೆಗೆ ನಾಯಿ ಹಂದಿಗೆ ಸಹ ನಮ್ಮ ಶ್ರಮವನ್ನು ಹೋಲಿಸಿದ.
ಜ್ಯೋತಿ ಸಣ್ಣದಾಗಿ ಅಳುತ್ತಿದ್ದಳು.
ಸಂದ್ಯಾ ಎದ್ದು ಬಂದವಳು, ಪಕ್ಕ ಕುಳಿತು
ಜ್ಯೋತಿ ಏಕೆ ಹೀಗೆ ಅಳುತ್ತಿರುವಿ, ಸಮಾದಾನ ಪಟ್ಟುಕೊ , ಎಲ್ಲವೂ ಸರಿ ಹೋಗುತ್ತದೆ, ಅವನು ಸಣ್ಣ ಹುಡುಗ. ನಿನಗೆ ಈಗ ಶ್ರಮವಾಗಿದೆ ಅನ್ನಿಸುತ್ತೆ. ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡೋಣ, ಎದ್ದೇಳು, ನಾನು ಕಾಫಿ ಮಾಡಿ ತರುವೆ ' ಎಂದಳು
ಆದರೆ ವಿಚಿತ್ರ ಗಮನಿಸಿದೆ, ಜ್ಯೋತಿಗೆ ಸಂದ್ಯಾ ಹೇಳಿದ ಸಮಾದಾನದ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ.
ಮುಂದುವರೆಯುವುದು.