ದೇವರ ಬೇಜವಾಬ್ದಾರಿ
ನಮ್ಮ ಉಜಿರೆಯ ಹಾದಿಯಲ್ಲಿ ಎಂತೆಂಥ ಜನ ಸಿಗುತ್ತಾರೆ ಗೊತ್ತೆ? ಎಲ್ಲಾ ಧರ್ಮಸಥಳಕ್ಕೆ ಹೊರಟವರು. ಭಕ್ತಿಯ ಭಾವದಲ್ಲಿ ಒದ್ದೆಯಾದವರು. ಸಾಮಾನ್ಯ ಬಯಲು ಸೀಮೆಯಿಂದ ಬರುವ ಈ ಜನಗಳೇ ವಿಚಿತ್ರ. ಅವರ ಹರಕೆಗಳೂ ವಿಚಿತ್ರ. ಕೆಲವು ಉದಾಹರಣೆ ನೋಡಿ.
ಗುಡದಯ್ಯ ವೀರಪ್ಪಾ ಹೊನ್ನತಿ ಸವಣೂರ ತಾಲೂಕಾ ಸಾಕಿನ ಶಿರಬಡಿಗೆ ಊರಿನವರು. ಒಂದಡಿ ಉದ್ದದ ಮರದ ಕಾಲುಗಳನ್ನು ಸಿಕ್ಕಿಸಿಕೊಂಡು ಊರಿಂದ ನಡೆದು ಬಂದಿದ್ದಾನೆ. ಧರ್ಮಸ್ಥಳ ಮುಟ್ಟಲು ಎಂಟು ದಿನ ಬೇಕು. ಹೀಗೆ ಆರುವರ್ಷಗಳಿಂದ ಪ್ರತಿ ವರ್ಷವೂ ಬರುತ್ತಿದ್ದಾನೆ. ಜೀವ ಇರುವವರೆಗೂ ಹೀಗೆ ಬರುವುದಾಗಿ ಅವನು ಮಂಜುನಾಥನಿಗೆ ಹರಕೆ ಹೊತ್ತಿದ್ದಾನೆ!
ಗದಗ ಬಳಿಯ ಹಳ್ಳಿಯೊಂದರ ಭಜನಾ ಮಂಡಳಿ ಪಿಯಾನು, ತಬಲಾ, ತಾಳ ಹಿಡಿದುಕೊಂಡೇ ನಡೆದುಕೊಂಡು ಬಂದಿದೆ. ದಾರಿಯುದ್ದಕ್ಕೂ ಭಜನೆ- ಊರೂರ ಸೆಳೆಯುತ್ತದೆ. ಅದರಲ್ಲಿ ಹಾಡುತ್ತಿರುವ ವ್ಯಕ್ತಿಯಂತೂ ಮೈಯಲ್ಲ ತೊನ್ನಾಗಿ ವಿಕಾರ ಗೊಂಡವನು. ಉರಿಬಿಸಿಲಲ್ಲಿ ಹಾಡುತ್ತ ಬಂದ ಅವನ ನಿಯತ್ತೆ ನಮ್ಮನ್ನು ಕೆಣಕುವಂಥಾದ್ದು.
ಇನ್ನೊಬ್ಬ ಹಳೆ ಮುದುಕ. ಕೈಯಲ್ಲಿ ತಾಳ, ಬೆನ್ನಿಗೊಂದು ಬೋರ್ಡು. ಧರ್ಮಸ್ಥಳಕ್ಕೆ ಓಟ ಅವನ ಸೇವೆ. ಇನ್ನು ದಿನಾ ಸೈಕಲ್ ಮೇಲೆ ಬರುವವರಂತೂ ನೂರಾರು ಜನ. ಇವರೆಲ್ಲ ಬಡವರು. ಪೈಸೆ ಪೈಸೆ ಕೂಡಿ ಯಾತ್ರೆ ಹೊರಡುವವರು. ಜೀವನ ಪರ್ಯಂತ ಒಂದು ಒಳ್ಳೇ ಅಂಗಿ ಹೊಲಿಸಲು ಆಗದಿದ್ದರೆ ಅಷ್ಟೇ ಹೋಯ್ತು. ಆದರೆ ತಾವು ನಂಬಿದ ದೇವರಿಗೆ ಮಾತ್ರ ಅಪಚಾರವಾಗಬಾರದು . ಪ್ರತಿವರ್ಷ ಕಾಣಿಕೆ- ಸೇವೆ ಆಗಲೇಬೇಕು. ಎಂಥಾ ಭಕ್ತಿ ಇವರದು!
“ ಇದು ಮೌಢ್ಯದ ಪರಮಾವಧಿ" , ಎಂದು ನಮ್ಮಂಥವರು ತಳ್ಳಿಬಿಡಬಹುದಾದ ಇದೇ ಜನ ನಮಗಿಂತ ಒಳ್ಳೆಯವರು. ಯಾಕೆಂದರೆ ಬದುಕಿನಲ್ಲಿ ಕಷ್ಟ ಬರಲಿ, ಸುಖ ಬರಲಿ ಶಿವನನ್ನೇ ನಂಬಿದವರು. ನಂಬಿದಂತೇ ಬದುಕಿದವರು. ನಮ್ಮದು ಮಾತ್ರ ಹಾಗಲ್ಲ. ನಂಬಿಕೆ ಬೇರೆ, ಬದುಕು ಬೇರೆ. ಏನೆಂದುಕೊಳ್ಳವರೋ ಎಂದು ಸ್ವಾಮಿಗಳಿಗೆ ಅಡ್ಡ ಬೀಳುವ ನಮಗೆ ಜಾತಿಯಲ್ಲಿ ನಂಬಿಕೆಯಿಲ್ಲ ಎನ್ನುತ್ತಲೇ ಜಾತಿಯ ಹೆಣ್ಣು ಹುಡುಕುವ ಎಡಬಿಡಂಗಿಗಳು ನಾವು.
ಅದೇನೇ ಇದ್ದರೂ, ತನ್ನನ್ನು ನಂಬಿದವರನ್ನೂ ಆ ದೇವರು ಕಾಪಾಡುವುದಿಲ್ಲ ಎಂಬುದು ಬಹಳ ದುಃಖದ ಸಂಗತಿ. ನನಗೆ ನೆನಪಿದೆ. ಈ ವರ್ಷ ಧರ್ಮಸ್ಥಳ ದೀಪೋತ್ಸವ ಮುಗಿಸಿ ಹೊರಟ ಹುಬ್ಬಳ್ಳಿಯ ಒಂದು ಟೆಂಪೋದ ಜನ ಮರಳಿ ಊರು ತಲುಪಲೇ ಇಲ್ಲ. ಉಡುಪಿ ಬಳಿ ಘಟಿಸಿದ ಅಪಘಾತದಲ್ಲಿ ಜಜ್ಜಿಹೋದರು.
ಅವರೆಲ್ಲ ಹುಬ್ಬಳ್ಳಿಯ ಕೂಲಿಗಳಾಗಿದ್ದರು. ಅವರ ಶವಗಳು ಗುರುತಿಸುವಂತಿರಲಿಲ್ಲ. ಹುಬ್ಬಳ್ಳಿಯಿಂದ ಹೌಹಾರಿಬಂದ ಇವರ ಸಂಬಂಧಿಕರಿಗೆ ಹೆಣ ಒಯ್ಯಲು ದುಡ್ಡಿರಲಿಲ್ಲ. ವಿಮಾನ ಅಪಘಾತದಲ್ಲಿ ಸಾಯುವ ಶ್ರೀಮಂತರಿಗೆ ಲಕ್ಷಗಟ್ಟಲೆ ಪರಿಹಾರ ನೀಡುವ ಸರ್ಕಾರ ಈ ಹೆಣಗಳನ್ನು ಊರಿಗೆ ಸಾಗಿಸಲೂ ಸಹಾಯ ಮಾಡದ್ದರಿಂದ ಅವರನ್ನೆಲ್ಲ ಅಲ್ಲೇ ಅನಾಥವಾಗಿ ಸುಡಲಾಯಿತು. ತನ್ನ ದರ್ಶನಕ್ಕಾಗಿ ನೂರಾರು ಮೈಲಿ ದೂರ ಕರೆಸಿಕೊಂಡ ದೇವರು ಅವರನ್ನು ಜೀವಂತ ಮರಳಿಸುವ ಹೊಣೆಗಾರಿಕೆಯನ್ನೂ ಹೊರಲಿಲ್ಲ. ಆ ದೇವರು ಎಷ್ಟೊಂದು ಬೇಜವಾಬ್ದಾರಿ!
ಕೊನೆಗೆ ಒಂದು ಮಾತು. ನಮ್ಮ ಜನರಿಗೆ ಆ ಭಗವಂತನಲ್ಲಿ ಇರುವ ನಂಬಿಕೆಯೇ ಸ್ವಸಾಮರ್ಥ್ಯ ದಲ್ಲಿ ನಂಬಿಕೆಯಾಗಿದ್ದರೆ, ಅವನಲ್ಲಿರುವ ಭಕ್ತಿ- ಶ್ರದ್ಧೆಯೇ ಅವರ ಜೀವನ ಶ್ರದ್ಧೆಯಾಗಿದ್ದರೆ, ಭಾರತ ಆಗಾಧವಾದ್ದನ್ನು ಸಾಧಿಸಬಹುದು. ಆ ದೇವರು ಇದ್ದರೆ ನಮ್ಮವರಲ್ಲಿ ಸೋಲದ ಛಲವನ್ನಾದರೂ ತುಂಬಲಿ.