ಮೊಗೆದಷ್ಟೂ ನೆನಪುಗಳು

ಮೊಗೆದಷ್ಟೂ ನೆನಪುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ನಿರಂಜನ ವಾನಳ್ಳಿ
ಪ್ರಕಾಶಕರು
ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು
ಪುಸ್ತಕದ ಬೆಲೆ
ರೂ.೪೫

ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ, ಪತ್ರಿಕೋದ್ಯಮದ ಪಾಠ ಮಾಡುತ್ತಿದ್ದರೂ ವರುಷಕ್ಕೊಂದು ಬರಹವನ್ನೂ ಬರೆಯದಿರುವ ಪತ್ರಿಕೋದ್ಯಮದ ಹಲವಾರು ಪ್ರಾಧ್ಯಾಪಕರಿಗಿಂತ ಇವರು ಭಿನ್ನ.

ತಮ್ಮ ಎಂ.ಎ. ಶಿಕ್ಷಣ ಮುಗಿಸಿದೊಡನೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಪ್ರಾಧ್ಯಾಪಕರಾಗಿ ಸೇರಿಕೊಂಡರು ನಿರಂಜನ ವಾನಳ್ಳಿ. ಅನಂತರ, ಆರು ವರುಷ ಅಲ್ಲಿ ವೃತ್ತಿಯಲ್ಲಿ ಇದ್ದುಕೊಂಡೇ ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಯ ಹಳ್ಳಿಗಳಿಗೂ ಹೋಗಿ ಬಂದು, ತಮ್ಮ ಅನುಭವಗಳನ್ನು ಬರಹಕ್ಕಿಳಿಸಿದರು. ಆ ಬರಹಗಳಲ್ಲಿ ಆಯ್ದ ೩೨ ನುಡಿಚಿತ್ರಗಳ ಸಂಕಲನ "ಮೊಗೆದಷ್ಟೂ ನೆನಪುಗಳು.” ಇದು ಪ್ರಕಟವಾದದ್ದು ಇಪ್ಪತ್ತು ವರುಷಗಳ ಮುಂಚೆ, ೧೯೯೭ರಲ್ಲಿ.

ಇದರಲ್ಲಿನ ನುಡಿಚಿತ್ರಗಳು ದಕ್ಷಿಣಕನ್ನಡದ ಬೆಳ್ತಂಗಡಿ ತಾಲೂಕಿನ ಆಗಿನ ಬದುಕನ್ನು ಕಟ್ಟಿಕೊಡುವ ಪರಿ ಆಪ್ತವೆನಿಸುತ್ತದೆ. ಇವು ಆ ಕಾಲಘಟ್ಟದ ಬೆಳ್ತಂಗಡಿ ತಾಲೂಕಿನ ಕೆಲವು ವಿದ್ಯಮಾನಗಳ ಮತ್ತು ಸಂಗತಿಗಳ ಚಳಕು ನೋಟ ನೀಡುವ ಬರಹಗಳು. ಕೆಲವು ಬರಹಗಳನ್ನು ಓದಿದಾಗ, "ನಾವು ಗಮನಿಸದಿರುವ ಇಂಥ ವಿಷಯಗಳ ಬಗ್ಗೆ ನುಡಿಚಿತ್ರವನ್ನೇ ಬರೆದಿದ್ದಾರಲ್ಲಾ” ಎಂದು ಅನಿಸುತ್ತದೆ. ಉದಾಹರಣೆಗೆ, “ಅಪರೂಪದ ತಾಳೆಮರ ಪಣೋಲಿ", ಪೊಲೀಸರಿಂದ ಶೋಷಣೆಗೆ ಒಳಗಾಗುವ ಕಳ್ಳನೊಬ್ಬನ ಬಗ್ಗೆ “ಪೊಲೀಸರ ಬಲಿಗೆ ಸಿಕ್ಕಿರುವ ಕುರಿ!”, ಕಾಡಿನೊಳಗಿನ ಶಾಲೆಯ “ಶಿಕ್ಷಕರೊಬ್ಬರ ಕೊರಗು", ಬಸ್ಸು ನಿಲ್ದಾಣದಲ್ಲಿ ಬಸ್ಸುಗಳು ಹೋಗುವ ಊರುಗಳ ಬಗ್ಗೆ ಕೂಗಿ ಹೇಳುತ್ತಾ ಬದುಕು ಸಾಗಿಸುವ ವ್ಯಕ್ತಿಯೊಬ್ಬನ ಬಗ್ಗೆ “ಹೋರಾಟದ ಬದುಕು”, "ಕಾಡಿ ಹೋದ ಕಾಡುಪಾಪ”, ಮನೆಯೊಳಗಿನ "ನೆಲ ಮಾಡುವ ಕಲೆ", “ಸ್ನಾನಘಟ್ಟದ ಜೀವನಯೋಗ”.

ಈ ಪುಸ್ತಕದ ಕೊನೆಯಲ್ಲಿ "ಮೊಗೆದಷ್ಟೂ ನೆನಪುಗಳು” ಎಂಬುದಾಗಿ ನಿರಂಜನ ವಾನಳ್ಳಿಯವರು ಉಜಿರೆಯ ತಮ್ಮ ಬದುಕು ಹಾಗೂ ಬರಹದ ಬಗ್ಗೆ ಆರು ಪುಟಗಳಷ್ಟು ಬರೆದುಕೊಂಡಿದ್ದಾರೆ. ದಕ್ಷಿಣಕನ್ನಡದಲ್ಲಿ ತನಗೆ ಬರವಣಿಗೆಗೆ ದೊರಕಿದ ಪ್ರೇರಣೆಯ ಬಗ್ಗೆ ಹೀಗೆನ್ನುತ್ತಾರೆ ನಿರಂಜನ: “ಇಡೀ ದಕ್ಷಿಣಕನ್ನಡಕ್ಕೆ ಒಪ್ಪುವ ಮಾತು - ಅದು ನುಡಿಚಿತ್ರಗಳ ಆಗರ. ಇಲ್ಲಿ ನೀವು ನುಡಿಚಿತ್ರದ ವಿಷಯಗಳನ್ನು ಹುಡುಕಲು ಕಷ್ಟ ಪಡಬೇಕಿಲ್ಲ. ಅವೇ ಕಾಲಿಗೆ ತಡಕುತ್ತವೆ. ಹುಡುಕದಿದ್ದರೂ ಬಳ್ಳಿ ನಿಮ್ಮನ್ನು ಸೆರೆ ಹಿಡಿಯುತ್ತದೆ. ಭೂತಕೋಲ, ಕೋಳಿ ಅಂಕ, ಕಂಬಳಗಳೆಲ್ಲ ಎದ್ದು ಕಾಣುವ ದಕ್ಷಿಣಕನ್ನಡದ ವಿಶೇಷಗಳು. ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿಯ ಮರಮರಕ್ಕೂ ಒಂದು ಕತೆಯಿದೆ. ಸ್ಥಳಗಳಿಗೆಲ್ಲ ಸಾಂಸ್ಕೃತಿಕ ಮಹತ್ವಗಳಿವೆ. ನೀವು ಏನೂ ಕಷ್ಟ ಪಡದೇ ಏನು ನೋಡಿದರೂ ನುಡಿಚಿತ್ರದ ವಸ್ತು ಸಿಕ್ಕಿರುತ್ತದೆ. ಇದು ಕಾರಣ, ಉಜಿರೆಯಲ್ಲಿರುವಾಗ ನಾನು ಅತಿ ಹೆಚ್ಚು ನುಡಿಚಿತ್ರಗಳನ್ನು ಬರೆಯಲು ಸಾಧ್ಯವಾಯ್ತು. ಹವ್ಯಾಸಿ ಪತ್ರಕರ್ತನಾಗಿ ತೊಡಗಿಸಿಕೊಳ್ಳಲು ಕಾರಣವಾಯ್ತು. ಆ ಮಣ್ಣಿನ ಗುಣವೇ ಅಂಥದ್ದು.”  

ಸಣ್ಣಪುಟ್ಟ ವಿವರಗಳನ್ನೂ ನಿರಂಜನ ವಾನಳ್ಳಿಯವರು ಗಮನಿಸಿ ದಾಖಲಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಉದಾಹರಣೆಗೆ “ಸ್ನಾನಘಟ್ಟದ ಜೀವನಯೋಗ”ದ ಈ ಪಾರಾ ಓದಿಕೊಳ್ಳಿ: "ದಿನಾ ಕಡಿಮೆಯೆಂದರೂ ಸಾವಿರ ಜನ ಸ್ನಾನ ಮಾಡುವ ಇಲ್ಲಿ - ಸ್ನಾನಕ್ಕೆ ಬಂದವರಿಗೆ ಪಾನೀಯಗಳು ಬೇಡವೇ? ಅದಕ್ಕಾಗಿಯೇ ಇಲ್ಲುಂಟು ಮೂರು ಹೊಟೇಲು. ಎಳನೀರು, ತಂಪುಪಾನೀಯಗಳ ಅಂಗಡಿ. ಅದು ಬಿಟ್ಟರೆ ಸ್ನಾನಕ್ಕಾಗಿ ಬರುವ ಜನಗಳಿಗೆ ಸ್ಪೆಷಲ್ಲಾಗಿ ಬೇಕಾಗುವುದು - ಮುಖ್ಯವಾಗಿ ಸಾಬೂನು, ಚಡ್ಡಿಗಳಿಂದ ಹಿಡಿದು ಸುಗಂಧಕಡ್ಡಿಗಳ ವರೆಗೆ ಸಾಮಾನುಗಳು. ಸ್ನಾನಕ್ಕೆ ಚೆಂಬು, ನಂತರದ ಚಂದಕ್ಕೆ ಶೃಂಗಾರ ಸಾಮಗ್ರಿ ಎಲ್ಲವೂ ಸ್ನಾನಘಟ್ಟದಲ್ಲಿ ಸಿಕ್ಕುವದುಂಟು. ಒಂದಂತೂ ಬರೇ ಸಾಬೂನಿನ ಅಂಗಡಿ. ಹಮಾಮು, ಲಿರಿಲ್ಲು, ಲಕ್ಸು-ಗಿಕ್ಸುಗಳಂತ ಭಾರತದಲ್ಲಿ ತಯಾರಾಗುವ ಸಾಬೂನುಗಳೆಲ್ಲವೂ ಇಲ್ಲಿರಬೇಕು. ಬರೇ ಸಾಬೂನು ಮಾರಿ ಬದುಕುವುದು ಕಷ್ಟವಲ್ಲವೇ ಎಂದು ಅಂಗಡಿಯ ಯಜಮಾನ್ತಿಯನ್ನು ಕೇಳಿದೆ. ನಮಗೇನೂ ಈ ವರೆಗೂ ಹಾಗೆ ಅನಿಸಲಿಲ್ಲವಪ್ಪ ಎಂದು ಸಾಬೂನಿನ ನೊರೆಯ ಹಾಗೇ ನಕ್ಕು ಬಿಟ್ಟಳು!"

ನಿರಂಜನ ವಾನಳ್ಳಿಯವರ ನುಡಿಚಿತ್ರಗಳು ವಿಷಯದ ಚಿತ್ರಣ ನೀಡುತ್ತಲೇ, ಒಳನೋಟಗಳನ್ನೂ ಒದಗಿಸುತ್ತವೆ. “ಅಕ್ಷರ ವ್ಯಭಿಚಾರ: ಹೀಗೊಂದು ವಿಚಾರ”ದಲ್ಲಿ ನಮ್ಮ ಶಿಕ್ಷಣವ್ಯವಸ್ಥೆ ಎಲ್ಲಿ ಸೋತಿದೆ ಎಂಬುದನ್ನು ಅವರು ಅಂದು ಸಾದರಪಡಿಸಿದ್ದು ಇಂದಿಗೂ ಪ್ರಸ್ತುತ: “ ವಿದ್ಯೆ ನಾಗರಿಕರನ್ನು ಸೃಷ್ಟಿ ಮಾಡಬೇಕು. ಆದರೆ ನಮ್ಮಲ್ಲಿ ವಿದ್ಯಾವಂತರೇ ಹೆಚ್ಚಾಗಿ ಅನಾಗರಿಕರಂತೆ ವರ್ತಿಸುತ್ತಾರೆ. ಶಿಕ್ಷಣ  ನಮ್ಮ ವಿದ್ಯಾರ್ಥಿಗಳಲ್ಲಿ ಹಕ್ಕುಗಳಿಗಾಗಿ ಹೋರಾಡುವ ಪ್ರಜ್ನೆಯನ್ನು ಬೆಳೆಸುತ್ತದೆ. ಆದರೆ, ಕರ್ತವ್ಯ ಹಾಗೂ ಜವಾಬ್ದಾರಿಗಳತ್ತ ಗೌರವವನ್ನು ಬೆಳೆಸುತ್ತಿಲ್ಲ. ಇದು ಕಾರಣ - ನೀರಿಗಾಗಿ ಹೋರಾಡುವವರು ಬಸ್ಸುಗಳನ್ನು ಸುಡುತ್ತಾರೆ. ಯಾರದೋ ಮೇಲಿನ ಸಿಟ್ಟನ್ನು ಸಮುದಾಯದ ಮೇಲೆ ತೀರಿಸಿಕೊಳ್ಳುತ್ತಾರೆ. ವಿದ್ಯಾವಂತರ ವಿವೇಕಹೀನ ವರ್ತನೆಗಳಿಂದ ಸಮಾಜ ಬಳಲುವಾಗ ಅಕ್ಷರ ಕಲಿಕೆಯ ಸಾಫಲ್ಯದ ಬಗೆಗೆ ಸಂಶಯ ಉಂಟಾಗುತ್ತದೆ."