ಕುಗ್ರಾಮ ವಾಸಿಯ ನಗರ ವಾಸ್ತವ್ಯ

ಕುಗ್ರಾಮ ವಾಸಿಯ ನಗರ ವಾಸ್ತವ್ಯ

ಆಗ ಕುಮಾರಸ್ವಾಮಿ . ನಂತರ ಯಡ್ಯೂರಪ್ಪ. ಮೊನ್ನೆ ಮೊನ್ನೆ ರಾಹುಲ್ ಬಾಬ. ಎಲ್ಲರೂ ಗ್ರಾಮ ವಾಸ್ತವ್ಯ ಮಾಡಿದವರು. ಬೇರು ಮಟ್ಟದಲ್ಲಿರುವ ಶ್ರೀಮಾನ್ಯನ ಸ್ಥಿತಿಗತಿ ಅರಿಯಲು ಅವನ ಹಟ್ಟಿಗೇ ಹೋಗಿ, ಅವನೊಡನೆ ಮಾತುಕತೆ ನಡೆಸಿ, ಉಂಡು ತಿಂದು ಮಲಗಿ ಬಂದಿದ್ದು ಸುದ್ದಿ ಮಾಡಿತು. ಅವನ ಸ್ಥಿತಿಗತಿ ಇವರಿಗೆ ಎಷ್ಟು ತಿಳಿಯಿತೋ ಗೊತ್ತಿಲ್ಲ. ಆದರೆ ಇವರನ್ನು ಉಪಚರಿಸಿದವರ ಸ್ಥಿತಿಗತಿ ಮಾತ್ರ ಸುಧಾರಿಸಿಲ್ಲ ಎಂಬುದು ಮಾತ್ರ ನಿರ್ವಿವಾದ.
ಅದಿರಲಿ . ದೊಡ್ಡವರ ಗೊಡವೆ ಬೇಡ. ಅವರು ಮಡಗಿದಂತಿರಲಿ.
ಇದರ ಉಲ್ಟಾ ಸಿನಾರಿಯೊ ಕಲ್ಪಿಸಿಕೊಂಡರೆ ಹೇಗಿರುತ್ತದೆ?
ಅಂದರೆ ವಿವಿಏಪಿಗಳ ಸ್ಥಿತಿಗತಿ ಅರಿಯಲು ಶ್ರೀ ಸಾಮಾನ್ಯನೊಬ್ಬ ನಗರಕ್ಕೆ ಬಂದು, ಅವರು ಮಾಡಿದಂತೆ ಮಾತುಕತೆ ನಡೆಸಿ , ಉಂಡು , ತಿಂದು , ಮಲಗಿ ಹೋದರೆ, ಹೇಗಿರಬಹುದು?
ಅದರಂತೆ ಗುದ್ಲೆಪ್ಪ ಶಿಗಪ್ಪ ಚಗಟೇರಿ ಮೊನ್ನೆ ದೂರದ ಬೀದರ್ ನಿಂದ ಕೇವಲ 150 ಕಿ.ಮೀ ಆಚೆ ಇರುವ ಕಲ್ಲಹಟ್ಟಿ ಎಂಬ ಕುಗ್ರಾಮದಿಂದ ಬೆಂಗಳೂರಿಗೆ ಬಂದು ಶ್ರೀಮಾನ್ಯರ ಸೇವೆಯಲ್ಲಿ ನಿರತರಾಗಿರುವ ಶ್ರೀಮಂತ ನಾಯಕರೇ ತುಂಬಿರುವ ಜಯಮಹಲ್, ಸದಾಶಿವನಗರ, ಕುಮಾರಕೃಪ ಮುಂತಾದ ಬಡಾವಣೆಗಳಲ್ಲಿ ಅಡ್ಡಾಡಿದ.
ಈ ನಮ್ಮ ನಾಯಕರ ಸಮಸ್ಯೆಗಳೇನು? ಅವರು ಹೇಗೆ ಒದ್ದಾಡುತ್ತಿದ್ದಾರೆ ? ಅವುಗಳ ನಿವಾರಣೆಗೆ ಸರ್ಕಾರ ಹೇಗೆ ಕಾರ್ಯಾಚರಣೆಯಲ್ಲಿ ತೊಡಗಬೇಕು? ಸರ್ಕಾರದ ಮೇಲೆ ತಾನು ಹೇಗೆ ಒತ್ತಡ ತರಬಹುದು ಎಂಬುದನ್ನು ತಿಳಿಯುವುದೇ ಅವನ ಉದ್ದೇಶವಾಗಿತ್ತು. “ನಮ್ಮ ಸಮಸ್ಯೆಗಳನ್ನು ಆಲಿಸುವುದೇ ಅವರ ಕೆಲಸವಾಗಿ ಹೋಗಿದೆ. ಅವರ ಸಮಸ್ಯೆಗಳನ್ನು ಆಲಿಸುವವರು ಯಾರು? ಈ ನಿಟ್ಟಿನಲ್ಲಿ ನಾನು ಅಳಿಲು ಸೇವೆ ಸಲ್ಲಿಸಲು ಮುಂದಾಗಿದ್ದೇನೆ " ಎಂದು ಅವರು ಅಪರಂಜಿಗೆ ಮಾತ್ರ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು .
ಎಂ . ಜಿ . ರಸ್ತೆಯಿಂದ ತಮ್ಮ ಕಾಲ್ನಡಿಗೆ ಪ್ರಾರಂಭಿಸಿದ ಗು. ಶಿ . ಚಗಟೇರಿ ಮೊದಲು ಮಾಜಿ ಮುಖ್ಯಮಂತ್ರಿಗಳ ಮನೆಗೆ ಭೇಟಿ ನೀಡಿದರು. ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಾ.ಮು.ಮ. ಅವರಿಗೆ ಫ್ರೆಶ್ ಫ್ರೂಟ್ ಜ್ಯೂಸ್ ನೀಡಿ ಅವರ ಬಾಯಾರಿಕೆಯನ್ನು ತಣಿಸಿದರು. ನಂತರ ಕಿಂಗ್ ಫಿಶರ್ ಚಿಲ್ಲಡ್ ಬಿಯರ್ ನಿಂದ ಸತ್ಕರಿಸಲು ಹೊರಟಾಗ ಚಗಟೇರಿ ಮೊದಲು ಬೇಡವೆಂದರೂ ನಂತರ ಅತಿಥೇಯರು ಮನ ನೊಂದಾರೆಂದು ಅದನ್ನು ಗುಟಕರಿಸುತ್ತಾ ಅವರೊಡನೆ ಅವರ ಕಷ್ಟ ಸುಖ ವಿಚಾರಿಸತೊಡಗಿದರು. ತಾವು ಲಕ್ಷ ಕೋಟಿ ರೂಪಾಯಿ ಬಜೆಟ್ ನಿಂದ ಜನಸೇವೆ ಮಾಡಲು ಹಾತೊರೆಯುತ್ತಿದ್ದರೂ, ಅನೇಕ ಹೋಮ, ಹವನ, ಹಲವಾರು ಸ್ವಾಮೀಜಿಗಳ ಆಶೀರ್ವಾದಗಳಿದ್ದರೂ , ತಮ್ಮ ಈ ಸೇವಾಸದಾನಂದ ನಮಗೆ ಇನ್ನೂ ದೊರೆಯದ ಬಗ್ಗೆ ತಮ್ಮ ಖೇದವನ್ನು ಗು.ಶಿ . ಚಗಟೇರಿಯೊಂದಿಗೆ ಹಂಚಿಕೊಂಡಾಗ ಅವರ ದುಃಖ ಸಹ ಹೆಚ್ಚಾಗಿ ಅದನ್ನು ಮುಳುಗಿಸಲು ಚಗಟೇರಿ ಇತರ ಪೇಯಗಳ ಮೊರೆ ಹೋಗಬೇಕಾಯಿತು.
“ಚಗಟೇರಿ ಅವರು ಬರುವ ವಿಷಯ ನನಗೆ ದಿಢೀರೆಂದು ತಿಳಿಯಿತು. ಆಗ ನನಗೆ ಅಚ್ಚರಿ . ನನ್ನ ಕಷ್ಟ ಸುಖ ಅರಿಯಲು ಶ್ರೀಸಾಮಾನ್ಯ ನನ್ನ ಮನೆ ಬಾಗಿಲಿಗೆ ಬರುವುದು ಸಾಮಾನ್ಯ ಸಂಗತಿ ಅಲ್ಲ. ನಾನು ಪೋಷಿಸಿ, ಬೆಳೆಸಿದ ಅನೇಕ ನಾಯಕರೇ ನನ್ನನ್ನು ಕಡೆಗಣಿಸಿರುವಾಗ ಚಗಟೇರಿಯವರ ಭೇಟಿಯಿಂದ ಶ್ರೀಸಾಾಮಾನ್ಯನಲ್ಲಿ ನನ್ನ ನಂಬಿಕೆ
ಇನ್ನಷ್ಟು ಹೆಚ್ಚಾಗಿದೆ. ಅವರ ಬಗ್ಗೆ ನಾನು ಇನ್ನಷ್ಟು ಕಾಳಜಿ ವಹಿಸಬೇಕಾಗಿದೆ ಎಂಬ ಅರಿವು ನನ್ನಲ್ಲಿ ಮೂಡಿದೆ. ಇದಕ್ಕಾಗಿ ಮು.ಮ ಪದವಿಗಾಗಿ ನಾನು ಇನ್ನಷ್ಟು ತೀವ್ರವಾಗಿ ಹೋರಾಡುವೆ " ಎಂದು ಗದ್ಗದಿತರಾಗಿ ನುಡಿದರು.
ಅಲ್ಲಿಯೇ ಉಳಿದುಕೊಂಡ ಅವರು ಮರುದಿನ ಷವರ್ ಸ್ನಾನ ಮಾಡಿ, ಕಾಂಟಿನೆಂಟಲ್ ಪ್ರೇಕ್ ಫಾಸ್ಟ್ ಜತೆ ಸ್ಪೆಷಲ್ ಡಾರ್ಜಿಲಿಂಗ್ ಚಾ ಕುಡಿದು, ಮಾ.ಮು.ಮ ಅವರಿಂದ ಬೀಳ್ಕೊಂಡು ಇನ್ನೊಬ್ಬ ಮಾಜಿ ಮುಖ್ಯಮಂತ್ರಿಗಳ ಮನೆಗೆ ಹೊರಟಾಗ , ಅವರು ಈಗ ಸದ್ಯಕ್ಕೆ ತಮ್ಮ ಅಧಿಕೃತ ಮನೆಯಲ್ಲಿ ಇಲ್ಲದೆ ಅಧಿಕ ಮನೆಯಲ್ಲಿದ್ದಾರೆಂದೂ,
ಅದು ತೀರಾ ಖಾಸಗಿ ಆಗಿರುವುದರಿಂದ ಯಾರ ಭೇಟಿಗೂ ಅನುಮತಿ ಇಲ್ಲ ಎಂದೂ ತಿಳಿಸಿದಾಗ ಒಂದು ಮನೆಯನ್ನೇ ನಿಭಾಯಿಸುವುದು ಕಷ್ಟವಾಗಿರುವಾಗ ಬೆಂಗಳೂರಿನಂತಹ ದುಬಾರಿ ಷಹರಿನಲ್ಲಿ ಎರೆಡೆರಡು ಮನೆ ನಡೆಸುವ ಸಮಸ್ಯೆಯ ಅರಿವು ಚಿಗಟೇರಿ ಅವರಿಗೆ ಅರಿವಾಗಿ , ಅವರ ಇಂತಹ ಸ್ಥಿತಿ ಎಲ್ಲರಿಗೂ ಬಾರದಿರಲಿ ಎಂದು ಪ್ರಾರ್ಥಿಸಿದರು - ಮನದಲ್ಲೇ.
ಜಯಮಹಲ್ , ಸದಾಶಿವನಗರ , ಕುಮಾರಕೃಪ, ಆರ್.ಟಿ. ನಗರ ಮುಂತಾದ ವಿವಿಐಪಿ ಬಡಾವಣೆಗಳಲ್ಲಿ ಅಡ್ಡಾಡಿ, ಅನೇಕ ಬಂಗಲೆಗಳಲ್ಲಿ ವಾಸಿಸುತ್ತಿರುವವರ ಬವಣೆಗಳನ್ನು ಖುದ್ದು ನೋಡಿ, ಆಲಿಸಿದ ನಂತರ ಅಪರಂಜಿಯೊಂದಿಗೆ ಮಾತನಾಡಿದ ಚಗಟೇರಿ " ಈ ಭೇಟಿ ನನ್ನ ಕಣ್ಣು ತೆರೆಸಿದೆ. ನಾನು ನೋಡಿದ್ದು, ಕೇಳಿದ್ದು ನನ್ನ ಭ್ರಮೆಯನ್ನು ಹೋಗಲಾಡಿಸಿವೆ. ಕೇವಲ ನನ್ನಂತಹವರಿಗೆ ಮಾತ್ರ ಸಮಸ್ಯೆ ಗಳು ಇವೆ ಎಂದು ಭಾವಿಸಿದ್ದೆ . ಇಲ್ಲ, ಶ್ರೀಮಂತರಿಗೂ ಸಮಸ್ಯೆಗಳಿವೆ. ದೀನ ದಲಿತರ ಸೇವೆಗೆಂದು ಶೇಖರಿಸಿರುವ ಹಣದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು ಹಾಕಿರುವುದು, ಸಮಾಜಸೇವೆಗಾಗಿ ಊರೂರು ತಿರುಗುತ್ತಿದ್ದರೆ ಇಲ್ಲಿ ಹೆಂಡತಿ ಇನ್ನೊಬ್ಬನೊಡನೆ ಸ್ವಚ್ಛಂದವಾಗಿ ವಿಹರಿಸುತ್ತಿರುವುದು, ಯಾವ ಬಿಪಿ ಮಾತ್ರೆಯಿಂದಲೂ ಗುಣವಾಗದ ರಕ್ತದ ಒತ್ತಡ, ಅನುಯಾಯಿಗಳ ಆಸೆಬುರುಕತನ , ಬೇನಾಮಿ ಆಸ್ತಿ ಕೈ ಬಿಟ್ಟುಹೋಗುತ್ತಿರುವುದರಿಂದ ಆಗುತ್ತಿರುವ ಕಳವಳ, ಟೀವಿ ಮಂದಿಯ ಸ್ಟಿಂಗ್ ಆಪರೇಷನ್ .... ಹೀಗೆ ಪಾಪ ಒಂದೇ ಎರಡೇ ಅವರ ಸಮಸ್ಯೆಗಳು. ಇದೆಲ್ಲಾ ಖುದ್ದಾಗಿ ನೋಡಿದ ಮೇಲೆ ನಾನೊಬ್ಬ ಭಾರತೀಯನೆಂದು ಹೇಳಿಕೊಳ್ಳಲು ನನಗೆ ನಾಚಿಕೆ ಆಗುತ್ತಿದೆ " ಎಂದು ಆವೇಶಭರಿತರಾಗಿ ನುಡಿದರು.
ಮುಂದೇನು ಎಂದು ಚಿಗಟೇರಿ ಅವರನ್ನು ಕೇಳಿದಾಗ ಅವರು "ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಿ ಅವರಿಗೆ ನಾನು ಕಂಡಿದ್ದನ್ನು ವಿವವರಿಸಿ ಇವರ ಬವಣೆಯನ್ನು ನಿಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಲಿ ಎಂದು ವಿವರಿಸುತ್ತೇನೆ" ಎಂದರು.
ಈ ವಿಷಯಗಳ ಬಗ್ಗೆ ವಿವಿಐಪಿಗಳನ್ನು ವಿಚಾರಿಸಿದಾಗ ಅವರ ನಗರವಾಸ್ತವ್ಯದಿಂದ ಏನೂ ಪ್ರಯೋಜನವಾಗುವುದಿಲ್ಲ. ನಮ್ಮ ಪರಿಸ್ಥಿತಿ ಹೀಗೇ ಇರುತ್ತದೆ" ಎಂದು ಹತಾಶರಾಗಿ ನುಡಿದರು.
ಇದರಿಂದ ವಿಚಲಿತಗೊಳ್ಳದ ಚಗಟೇರಿ "ರಾಹುಲ್, ಯಡಿಯೂರಪ್ಪ, ಕುಮಾರಸ್ವಾಮಿ ಮುಂತಾದವರು ಗ್ರಾಮ ವಾಸ್ತವ್ಯ ಮಾಡಿದಾಗಲೂ ಇಂತಹ ಸಿನಿಕ ಪ್ರತಿಕ್ರಿಯೆ ಬಂದಿತ್ತು . ನನಗೇನೂ ಬೇಸರವಿಲ್ಲ. ನಾನು ನನ್ನ ನಗರವಾಸ್ತವ್ಯ ಮುಂದುವರೆಸಿ ವಿವಿಐಪಿಗಳ ಆತಿಥ್ಯ ಸ್ವೀಕರಿಸುವೆ" ಎಂದರು.
 
ಆಧಾರ : ದಿ ಅನ್ ರಿಯಲ್ ಟೈಂಸ್ ನ ಒಂದು ಬರಹ.