ಬರನಿರೋಧ ಸಿರಿಧಾನ್ಯಗಳ “ಸಿರಿತನ”

ಬರನಿರೋಧ ಸಿರಿಧಾನ್ಯಗಳ “ಸಿರಿತನ”

ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು.
ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ. ಈಜಿಪ್ಟಿನ ಪಿರಮಿಡ್ಡುಗಳೊಳಗೆ, ಮಮ್ಮಿಗಳ ಹತ್ತಿರ ಹಾಗೂ ಹರಪ್ಪ ಮತ್ತು ಮೆಹೆಂಜೊದಾರೋಗಳಲ್ಲಿ ಪ್ರಾಚೀನ ಅವಶೇಷಗಳ ಜೊತೆಗೆ ಸಿರಿಧಾನ್ಯಗಳು ಪತ್ತೆಯಾಗಿವೆ. ಅಂದರೆ ಇವುಗಳಿಗೆ ೧೦,೦೦೦ ವರುಷಗಳ ಇತಿಹಾಸವಿದೆ. ಪೂರ್ವ ಏಷ್ಯಾದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಇವುಗಳ ಬೇಸಾಯ ಮಾಡಲಾಗುತ್ತಿತ್ತು.
ಕಡಿಮೆ ಮಳೆಯ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ ಸಿರಿಧಾನ್ಯಗಳು ನಮ್ಮ ಪೂರ್ವಿಕರ ಆಹಾರವಾಗಿದ್ದವು. ಇವುಗಳ ಸೇವನೆಯಿಂದ ಅವರು ಆರೋಗ್ಯವಂತರಾಗಿ ಬಾಳಿದರು. ಕ್ರಮೇಣ ನಾಗರಿಕತೆ ಹರಡಿದಂತೆ ಸಿರಿಧಾನ್ಯಗಳ ಬಳಕೆ ಕಡಿಮೆಯಾಯಿತು. ಹೊಸ ಜೀವನಶೈಲಿಗೆ ಮಾರುಹೋದ ಜನರು ಅವು ಬಡವರ ಆಹಾರವೆಂದು ಪರಿಗಣಿಸಿದರು; ಅವನ್ನು “ತೃಣಧಾನ್ಯಗಳು" ಎಂದು ಹೆಸರಿಸಿ ಮೂಲೆಗುಂಪಾಗಿಸಿದರು.
ಈಗ ನಾಗರಿಕತೆಯ ನಾಗಾಲೋಟದಲ್ಲಿ ಸಿಲುಕಿದ ಜನರಿಗೆ ಪ್ಯಾಕೆಟ್ ಆಹಾರ, ಪಿಜ್ಜಾ, ಬರ್ಗರ್ ಇವನ್ನೆಲ್ಲ ತಿನ್ನುವುದು ಅಭ್ಯಾಸವಾಗಿದೆ. ಅವಸರದಲ್ಲಿ ಒಂದಷ್ಟು ತಿಂದು, ಕೆಲಸಕಾರ್ಯಗಳಿಗೆ ಧಾವಿಸಬೇಕಾದ ಧಾವಂತದಲ್ಲಿರುವ ನಗರವಾಸಿಗಳಿಗೆ ಇವೆಲ್ಲ “ತುರ್ತಿನ ಆಹಾರ”ವಾಗಿದೆ. ಆದರೆ ಇದರಿಂದಾಗಿಯೇ ಅವರ ಆರೋಗ್ಯ ಹದಗೆಡುತ್ತಿದೆ.
ಸಕ್ಕರೆಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು, ನರದೌರ್ಬಲ್ಯ, ರಕ್ತಹೀನತೆ, ಕ್ಯಾನ್ಸರ್ ಇಂತಹ ರೋಗಗಳಿಂದ ಪೀಡಿತರಾಗಿರುವ ಜನರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ. ನಾವು ಸೇವಿಸುವ ಆಹಾರದಲ್ಲಿ ನಾರಿನಂಶ ಕಡಿಮೆಯಾಗಿರುವುದು ಇದಕ್ಕೆ ಮುಖ್ಯ ಕಾರಣ. ಉದಾಹರಣೆಗೆ, ಪ್ರಧಾನ ಆಹಾರಧಾನ್ಯಗಳಾದ ಅಕ್ಕಿಯಲ್ಲಿ ನಾರಿನಂಶ ಕೇವಲ ಶೇಕಡಾ ೦.೨ ಹಾಗೂ ಗೋಧಿಯಲ್ಲಿ ಶೇ.೧.೨. ಇದಕ್ಕೆ ಹೋಲಿಸಿದಾಗ ಸಿರಿಧಾನ್ಯಗಳಲ್ಲಿ ನಾರಿನಂಶ ಹಲವು ಪಟ್ಟು ಅಧಿಕ. ನವಣೆಯಲ್ಲಿ ಶೇ.೮, ಅರ್ಕದಲ್ಲಿ ಶೇ.೯, ಊದಲು ಮತ್ತು ಸಾಮೆಯಲ್ಲಿ ಶೇ.೯.೮ ಹಾಗೂ ಕೊರಲೆಯಲ್ಲಿ ಶೇ.೧೨.೫. ಹಾಗಾಗಿ, ಆಹಾರ ಸೇವಿಸಿದ ನಂತರ ಗೋಧಿ ಮತ್ತು ಬಿಳಿ ಅಕ್ಕಿ ಸುಮಾರು ೪೫ ನಿಮಿಷಗಳಲ್ಲಿ, ರಾಗಿ ೧ರಿಂದ ೨ ಗಂಟೆಯಲ್ಲಿ ಗ್ಲುಕೋಸ್ ಆಗಿ ಪರಿವರ್ತನೆಯಾಗಿ ರಕ್ತವನ್ನು ಸೇರುತ್ತದೆ. ಆದರೆ, ಸಿರಿಧಾನ್ಯಗಳನ್ನು ಸೇವಿಸಿದ ೪ - ೫ ಗಂಟೆಗಳ ನಂತರ ಗ್ಲುಕೋಸ್ ರೂಪದಲ್ಲಿ ಹಂತಹಂತವಾಗಿ ರಕ್ತವನ್ನು ಸೇರುತ್ತದೆ. ಆದ್ದರಿಂದ ಇವು ಆರೋಗ್ಯವರ್ಧಕ. ಅದಲ್ಲದೆ, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚು ಪ್ರೊಟೀನ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಿರಿಧಾನ್ಯಗಳು ನಮ್ಮ ಪೌಷ್ಟಿಕಾಂಶಗಳ ಕೊರತೆ ಪರಿಹರಿಸಬಲ್ಲವು.
ವಾಣಿಜ್ಯ ಬೆಳೆಗಳನ್ನು ಬೆಳೆದು ದುಡ್ಡು ಮಾಡುವ ಸ್ಪರ್ಧೆಗೆ ಬಿದ್ದಿರುವ ರೈತರೂ ಸಿರಿಧಾನ್ಯಗಳ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ. ನೀರಿನ ಕೊರತೆಯಿಂದ ಬೇಸಾಯವನ್ನೇ ತೊರೆಯುತ್ತಿರುವ ಕೃಷಿಕರಂತೂ ಸಿರಿಧಾನ್ಯಗಳು “ಬರನಿರೋಧ" ಬೆಳೆಗಳು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಯಾಕೆಂದರೆ ಒಂದು ಕಿಲೋ ರಾಗಿ ಬೆಳೆಯಲು ೮೦೦ ಲೀಟರ್ ನೀರು ಬೇಕಾಗಿದ್ದರೆ ಒಂದು ಕಿಲೋ ಅಕ್ಕಿ ಅಥವಾ ಗೋಧಿ ಬೆಳೆಯಲು ೮,೦೦೦ ಲೀಟರ್ ನೀರು ಅಗತ್ಯ. ಆದರೆ ಒಂದು ಕಿಲೋ ಸಿರಿಧಾನ್ಯ ಕೃಷಿಗೆ ಕೇವಲ ೩೦೦ ಲೀಟರ್ ನೀರು ಸಾಕು.
ಸಿರಿಧಾನ್ಯಗಳಿಗೆ ಬರನಿರೋಧ ಬೆಳೆಗಳೆಂಬ ಹೆಸರು ಬರಲು ಇತರ ಹಲವು ಕಾರಣಗಳಿವೆ. ಅತ್ಯಂತ ಕಡಿಮೆ ಮಳೆಬೀಳುವ ಮತ್ತು ಸಾರವಿಲ್ಲದ ಜಮೀನಿನಲ್ಲಿಯೂ ಇವನ್ನು ಬೆಳೆಯಬಹುದು. ಹೊಲದಲ್ಲಿ ಒಂದೇ ಉಳುಮೆ ಮಾಡಿ ಇವುಗಳ ಬೀಜ ಬಿತ್ತಿದರೆ ಸಾಕು. ಅನಂತರ ಅಂತರಬೇಸಾಯ ಮಾಡಬೇಕಾಗಿಲ್ಲ; ಮೇಲುಗೊಬ್ಬರ ಹಾಕಬೇಕಾಗಿಲ್ಲ. ಬಿತ್ತಿದ ನಂತರ ಒಂದೆರಡು ಮಳೆ ಬಂದರೂ ಫಸಲು ಗ್ಯಾರಂಟಿ. ಕೇವಲ ೯೦ರಿಂದ ೧೦೫ ದಿನಗಳಲ್ಲಿ ಸಿರಿಧಾನ್ಯಗಳ ಬೆಳೆ ಕೊಯ್ಲಿಗೆ ಬರುತ್ತದೆ. ಆದರೆ ಸಿರಿಧಾನ್ಯಗಳ ಹೊಲಕ್ಕೆ ಹಿಂಡುಹಿಂಡು ಹಕ್ಕಿಗಳ ಧಾಳಿ ತಡೆಯಲು ರೈತರು ಮುಂಜಾಗರೂಕತಾ ಕ್ರಮ ಕೈಗೊಳ್ಳವುದು ಅಗತ್ಯ. ಇಲ್ಲವಾದರೆ ಅರ್ಧಕ್ಕರ್ಧ ಫಸಲು ಹಕ್ಕಿಗಳಿಗೆ ಆಹಾರವಾದೀತು. ಯಾಕೆಂದರೆ ಹಕ್ಕಿಗಳಿಗೆ ಸಿರಿಧಾನ್ಯಗಳೆಂದರೆ ಅಚ್ಚುಮೆಚ್ಚು. ಅದೇನಿದ್ದರೂ ಇವನ್ನು ಹುಲ್ಲಿನಿಂದ ಬೇರ್ಪಡಿಸಿ ಶುಚಿ ಮಾಡುವುದು ಸುಲಭದ ಕೆಲಸವಲ್ಲ. ರೈತರು ಇದಕ್ಕೂ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು.
ಯಾವ ಆಹಾರಧಾನ್ಯ ತಿನ್ನುವುದು? ಯಾವ ಆಹಾರಧಾನ್ಯ ಬೆಳೆಯುವುದು? ಎಂಬ ಗೊಂದಲದಲ್ಲಿರುವ ಜನಸಾಮಾನ್ಯರಿಗೂ ರೈತರಿಗೂ ಉತ್ತರವೆಂಬಂತಿವೆ ಸಿರಿಧಾನ್ಯಗಳು.
ನಮ್ಮ ಹಲವು ಅನಾರೊಗ್ಯದ ಸಮಸ್ಯೆಗಳಿಗೆ ಏನು ಪರಿಹಾರ? ಹೆಚ್ಚುಚ್ಚು ವೈದ್ಯರ ಭೇಟಿ, ಹೆಚ್ಚೆಚ್ಚು ಆಸ್ಪತ್ರೆಗಳ ಸ್ಥಾಪನೆ, ಹೆಚ್ಚುಚ್ಚು ಕ್ಯಾನ್ಸರ್ ವಾರ್ಡುಗಳ ನಿರ್ಮಾಣ - ಇವು ಪರಿಹಾರಗಳಲ್ಲ. ಹಾಗೆಯೇ ಕೃಷಿರಂಗದ ಹಲವು ಸಮಸ್ಯೆಗಳಿಗೆ ರೊಕ್ಕದ ಬೆಳೆಗಳ ಕೃಷಿ, ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ ಸುರಿಯುವುದು, ಹೆಚ್ಚೆಚ್ಚು ವಿಷಭರಿತ ಪೀಡೆನಾಶಕಗಳನ್ನು ಎರಚುವುದು/ ಸಿಂಪಡಿಸುವುದು, ಇನ್ನಷ್ಟು ಕೊಳವೆಬಾವಿ ಕೊರೆಯುವುದು, ಮತ್ತಷ್ಟು ಕೃಷಿಸಾಲ ಮಾಡುವುದು, ಹೆಚ್ಚೆಚ್ಚು ಸಬ್ಸಿಡಿಗಾಗಿ ಸರಕಾರವನ್ನು ಆಗ್ರಹಿಸುವುದು - ಇದು ಯಾವುದೂ ಪರಿಹಾರವಲ್ಲ. ಇವೆಲ್ಲ ಸಮಸ್ಯೆಗಳಿಗೆ ಸಿರಿಧಾನ್ಯಗಳ ಸೇವನೆ ಮತ್ತು ಸಿರಿಧಾನ್ಯಗಳ ಬೇಸಾಯ ಪರಿಣಾಮಕಾರಿ ಪರಿಹಾರ.