ಜಾಗತೀಕರಣದ ಕೊಡಲಿ ಏಟು

ಜಾಗತೀಕರಣದ ಕೊಡಲಿ ಏಟು

‘ಹತ್ತು ವರುಷಗಳ ಮುಂಚೆ  ನಮಗೆ ಕೆಲಸ ಸಿಗ್ತಿತ್ತು ಮತ್ತು ಸಾಕಷ್ಟು  ಮಜೂರಿಯೂ ಸಿಗ್ತಿತ್ತು. ಆದರೆ  ಈಗ ಕೆಲಸವೂ ಕಡಿಮೆ ಮತ್ತು ನಮ್ಮ  ಕೆಲಸಕ್ಕೆ  ತಕ್ಕ ಮಜೂರಿಯೂ  ಸಿಗೋದಿಲ್ಲ. ದಿನ ದೂಡುವುದೇ  ಕಷ್ಟವಾಗಿದೆ' ಎಂದರು  ಸುಗತನ್. ‘ಒಂದು  ದಿನದಲ್ಲಿ  ನಮ್ಮ ಕೈಗೆ ಸಿಗೋ  ಮಜೂರಿ  ನಮ್ಮಿಬ್ಬರ   ಒಂದು ಹೊತ್ತಿನ ಊಟಕ್ಕೊ  ಸಾಲದು'   ಎಂದು  ಸಂಕಟದಿಂದ ನುಡಿದರು.  ಸಣ್ಣ  ಘಟಕದ ಮಾಲೀಕನೊಬ್ಬ ಸಾಲದ  ಹೊರೆ  ತಾಳಲಾಗದೆ  ಆತಮಹತ್ಯೆ  ಮಾಡಿಕೊಂಡದ್ದನ್ನು ಜ್ಞಾಪಿಸಿಕೊಳ್ಳುತ್ತಾ  ಸುಗತನ್  ಇನ್ನೊಂದು  ಮಾತನ್ನು  ಹೇಳಿದರು. ‘ ಎರಡು  ಅಥವಾ ಮೂರು  ಮಕ್ಕಳಿರುವ  ಕುಟುಂಬಗಳಿಗಂತೂ  ಬಹಳ ಕಷ್ಟ. ನಮಗೆ ಮಕ್ಕಳಿಲ್ಲ, ಹೇಗೋ ಸಂಬಾಳಿಸುತ್ತಿದ್ದೇವೆ'.

ಕೇರಳದ ಅಲಪುಜ ಜಿಲ್ಲೆಯಲ್ಲಿ  ತಮಗೆ  ಅನ್ನ  ಕೊಡುತ್ತಿರುವ  ತೆಂಗಿನ ನಾರಿನ   ಉದ್ಯಮದ ದುರವಸ್ಥೆಯ ಬಗ್ಗೆ  ಸುಗತನ್ ಮಾತಾಡುತ್ತಿದ್ದರು.  ಜಾಗತೀಕರಣದ  ಬಿರುಸಿಗೆ ಆ  ಉದ್ಯಮವೇ  ತತ್ತರಿಸಿ ಹೋಗಿದೆ. ರಫ್ತು  ಮತ್ತು ಆಮದಿಗೆ  ನಮ್ಮ ದೇಶದ  ಬಾಗಿಲುಗಳು  ಉದಾರೀಕರಣದಿಂದಾಗಿ  ತೆರೆದುಕೊಂಡವು.  ಅದರಿಂದಾಗಿ  ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತೆಂಗಿನ  ನಾರಿನ  ಉತ್ಪನ್ನಗಳ  ಕನಿಷ್ಠ  ದರವನ್ನು  ಸರಕಾರ  ರದ್ದು ಪಡಿಸಿದ್ದರಿಂದಾಗಿ  ಉದ್ಯಮದಲ್ಲಿ  ಉಸಿರುಗಟ್ಟುವಂತಹ  ಸ್ಪರ್ಧೆ   ಏರ್ಪಟ್ಟು ಬೆಲೆಗಳು  ಕುಸಿದವು.  ಕಡಿಮೆ  ಬೆಲೆಯಲ್ಲಿ  ಹೆಚ್ಚು    ಉತ್ಪಾದಿಸುವ  ದಾಂಧಲೆಯಲ್ಲಿ  ಪಾರಂಪರಿಕವಾಗಿ  ಕೆಲಸಗಾರರೇ  ಪ್ರಧಾನವಾಗಿದ್ದ ತೆಂಗಿನ  ನಾರಿನ   ಉದ್ಯಮದಲ್ಲಿ ಯಂತ್ರಗಳು  ನೆಲೆಯೂರಿದವು.  ಇದರಿಂದಾಗಿ ಕೆಲಸ ಕಳೆದುಕೊಂಡ 20, 000 ಕ್ಕಿಂತ  ಅಧಿಕ ಕೆಲಸಗಾರರಲ್ಲಿ  ಸುಗತನ್  ಮತ್ತು ಅವರ  ಹೆಂಡತಿಯೂ ಸೇರಿದ್ದಾರೆ. ಕೇರಳದ ತೆಂಗಿದ  ನಾರಿನ   ಉದ್ಯಮದ  ಸುಮಾರು  ಐದು  ಲಕ್ಷ ಕೆಲಸಗಾರರಲ್ಲಿ  ಶೇಕಡಾ 80 ಮಹಿಳೆಯರೇ ಆಗಿದ್ದಾರೆಂಬುದು  ಈ ಜಾಗತೀಕರಣದ  ಬೀಸಿನ ದಾರುಣತೆಯನ್ನು  ಹೆಚ್ಚಿಸಿದೆ.

ಉತ್ತರ ಪ್ರದೇಶದ  ಆಲಿಘರದ ಶತಮಾನಗಳ ಹಳೆಯ ಬೀಗಗಳ  ಉದ್ಯಮವೂ   ಉದಾರೀಕರಣದಿಂದಾಗಿ  ನಜ್ಜುಗುಜ್ಜಾಗಿ ಹೋಗಿದೆ. ಚೀನಾದಿಂದ 1988-99ರಲ್ಲಿ  ಆಮದಾಗತೊಡಗಿದ   ಅಗ್ಗ  ಬೆಲೆಯ  ಬೀಗಗಳ ದಾಳಿಯಿಂದಾಗಿ    ಈ  ಉದ್ಯಮದ  ಘಟಕಗಳು  ನೆಲಕಚ್ಚಿವೆ. ಸಣ್ಣ  ಘಟಕಗಳು  ನಿರ್ನಾಮವಾಗಿದ್ದರೆ , ದೊಡ್ಡ   ಉತ್ಪಾದಕರು  ತಮ್ಮ ವ್ಯವಹಾರದ  ರೀತಿಯನ್ನೇ  ಬದಲಾಯಿಸಬೇಕಾಗಿದೆ.  ಇದಕ್ಕೆ ಮುಖ್ಯ ಕಾರಣ ಆಮದು ಸುಂಕವನ್ನು ಶೇಕಡಾ 58ಕ್ಕೆ  ಅನಂತರ ಶೇಕಡಾ 51ಕ್ಕೆ   ಇಳಿಸಿದ್ದು.
 

ಇಸವಿ 2000 ತನಕ ವರುಷದಿಂದ ವರುಷಕ್ಕೆ  ತಮ್ಮ ವಹಿವಾಟಿನಲ್ಲಿ  ಗಣನೀಯ  ಹೆಚ್ಚಳ  ಸಾಧಿಸುತ್ತಿದ್ದ  ದೊಡ್ಡ ಘಟಕಗಳ  ಮಾಲೀಕರು, ‘ವಹಿವಾಟು ಹೆಚ್ಚಿಸುವ  ಮಾತು ಹಾಗಿರಲಿ. ನಮಗೀಗ  ಇರುವ  ವಹಿವಾಟನ್ನು   ಉಳಿಸಿಕೊಂಡರೆ  ಸಾಕಾಗಿದೆ. ನಾವು  ಉತ್ಪಾದಿಸಿದ್ದನ್ನು  ಮಾರುವುದೇ  ಕಷ್ಟವಾಗಿದೆ'  ಎಂದು ತಮ್ಮ ಸಂಕಟ ಹೇಳಿಕೊಳ್ಳುತ್ತಾರೆ. ಆಲಿಫರ್  ಬೀಗ   ಉತ್ಪಾದಕರ  ಸಂಘದ ಕಾರ್ಯದರ್ಶಿ ರಮೇಶ್  ಅರೋರಾ  ಉದ್ಯಮಕ್ಕೆ  ಬಿದ್ದ   ಉದಾರೀಕರಣದ  ಹೊಡೆತದ  ಕರಾಳ  ಮುಖವನ್ನು ಒಂದೇ   ಮಾತಿನಲ್ಲಿ  ಹೇಳಿ ಮುಗಿಸುತ್ತಾರೆ. ‘  ಇದರಿಂದಾಗಿ  ಶೇಕಡಾ  15 ಕೆಲಸಗಾರರು ಕೆಲಸ ಕಳೆದುಕೊಂಡರು.’

ಇದೀಗ ಕೃಷಿ  ರಂಗಕ್ಕೆ   ಉದಾರೀಕರಣದ ಪ್ರಬಲ  ಹೊಡೆತ  ಬೀಳತೊಡಗಿದೆ.   ಇದಕ್ಕೆ  ಮೊದಲ ಬಲಿ ನಮ್ಮ ದೇಶದ ಹಣ್ಣು ಬೆಳೆಗಾರರು. ದೇಶದಲ್ಲೆಲ್ಲ ಹಣ್ಣುಗಳ   ಅಂಗಡಿಗಳಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ  ಸ್ಟಿಕ್ಕರ್ ಗಳನ್ನು ತಗಲಿಸಿ  ಒಪ್ಪವಾಗಿ  ಪ್ಯಾಕ್ ಮಾಡಿದ  ವಿದೇಶಿ  ಹಣ್ಣುಗಳನ್ನು  ಜೋಡಿಸಿಟ್ಟಿದ್ದನ್ನು  ನೀವೆಲ್ಲ  ನೋಡಿದ್ದೀರಿ. ಚಿಕ್ಕಮಗಳೂರಿನಂತಹ  ಜಿಲ್ಲಾ  ಕೇಂದ್ರದಲ್ಲಿ  ಮಾತ್ರವಲ್ಲ  ಕೊಟ್ಟಿಗೆಹಾರದಂತಹ  ಪುಟ್ಟ   ಊರಿನಲ್ಲೂ ಆಮದಾದ  ಹಣ್ಣುಗಳದ್ದೇ  ಭರಾಟೆ .

ಭಾರತ ಸರಕಾರ ಪ್ರಕಟಿಸಿದ  ಅಂಕೆ  ಸಂಖ್ಯೆಗಳ ಪ್ರಕಾರ, ನಮ್ಮ ದೇಶಕ್ಕೆ  ಆಮದಾಗುತ್ತಿರುವ ಹಣ್ಣು  ಮತ್ತು  ತರಕಾರಿಗಳ  ಪರಿಮಾಣ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ತಳವೂರುತ್ತಿರುವ  ಸೂಪರ್  ಮಾರ್ಕೆಟ್ ಗಳೇ  ಇದಕ್ಕೆ  ಪ್ರಮುುಖ ಕಾರಣವೆಂದು  ಆರ್ಥಿಕ  ತಜ್ಞರ  ಅಭಿಪ್ರಾಯ.  ಗ್ರಾಹಕರನ್ನು  ಆಕರ್ಷಿಸಲು  ಚಂದವಾಗಿ ಪ್ಯಾಕಾದ  ಹಣ್ಣುಗಳೇ  ಅವರಿಗೆ  ಬೇಕು. ಆದರೆ   ಇದನ್ನೆಲ್ಲ  ತಿಳಿಯದ  ನಮ್ಮ   ಹಣ್ಣು ಬೆಳೆಗಾರರು  ತಾವು  ಬೆಳೆಸಿದ್ದನ್ನು  ಮಾರ್ಕೆಟಿಗೆ   ಒಯ್ದು  ರಾಶಿ  ಹಾಕುತ್ತಾರೆ.  ಇವು  ಸೂಪರ್  ಮಾರ್ಕೆಟಿನಲ್ಲಿ  ಪ್ರವೇಶ  ಪಡೆಯಬೇಕಾದರೆ   ಒಪ್ಪವಾಗಿ  ಪ್ಯಾಕ್ ಮಾಡಬೇಕೆಂದು   ಅವರಿಗೆ  ತಿಳಿಸುವವರೂ   ಇಲ್ಲ. ಅದಕ್ಕೆ  ಸೌಲಭ್ಯ  ಒದಗಿಸುವವರೂ   ಇಲ್ಲ.

ಆಮದಾದ ಸೇಬು, ದ್ರಾಕ್ಷಿ   ಇತ್ಯಾದಿ  ಹಣ್ಣುಗಳು  ನಮ್ಮ  ನೆಲದಲ್ಲಿ  ಬೆಳೆದ  ಅವೇ  ಹಣ್ಣುಗಳ  ಬೇಡಿಕೆಗೆ   ಏಟು  ನೀಡುತ್ತಿವೆ.  ಮಾತ್ರವಲ್ಲ  ಆಮದಾಗುವ  ಹಣ್ಣುಗಳ  ಗುಣಮಟ್ಟ  ಮತ್ತು  ಸುರಕ್ಷತೆಯ  ಪರೀಕ್ಷೆಗೆ  ನಮ್ಮ  ಬಂದರುಗಳಲ್ಲಿ ಸರಿಯಾದ  ವ್ಯವಸ್ಥೆ   ಇಲ್ಲ. ಯಾಕೆಂದರೆ  ಕ್ವಾರಂಟೈನ್  ಕಾನೂನಿನ  ಜ್ಯಾರಿ  ವ್ಯವಸ್ಥೆ ಕಾಲು ಮುರಿದು ಬಿದ್ದಿದೆ.  ರೋಗಪೀಡಿತ  ಹಣ್ಣುಗಳು ಆಮದಾದರೆ ಅವುಗಳ  ಸೋಂಕು  ತಗಲಿ  ಸ್ಥಳೀಯ ಹಣ್ಣುಗಳು  ನಿರ್ನಾಮ ಆಗಬಹುದು.

ಇಷ್ಟೆಲ್ಲ  ಅಪಾಯಗಳು  ಕಾದಿರುವಾಗ, ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನ ರಫ್ತು  ಅಭಿವೃದ್ಧಿ  ಪ್ರಾಧಿಕಾರದ  ಉತ್ಪನ್ನಾಧಿಕಾರಿಯೊಬ್ಬರು  'ಭಾರತಕ್ಕೆ  ಹಣ್ಣುಗಳ ಆಮದು  ನಮ್ಮ ರಫ್ತುದಾರರಿಗೆ  ಒಂದು   ಒಳ್ಳೆಯ  ಅವಕಾಶ   ಒದಗಿಸಿದೆ. ತಾವು ರಫ್ತು  ಮಾಡುವ ಹಣ್ಣುಗಳ  ಪ್ಯಾಕೇಜಿಂಗ್  ಮತ್ತು ಗುಣಮಟ್ಟ  ಬಗ್ಗೆ  ಆಮದಾದ ಹಣ್ಣುಗಳಿಂದ  ಇವರು ಪಾಠ ಕಲಿಯಲು ಸಾಧ್ಯ '  ಎಂದು  ಹೇಳುತ್ತಾ  ಹೆಗಲು  ಕುಣಿಸುತ್ತಾರೆ. ಭಾರತದ  ರಫ್ತುದಾರರು  ಅಂತರಾಷ್ಟ್ರೀಯ  ಮಾರುಕಟ್ಟೆಯಲ್ಲಿ  ಸ್ಪರ್ಧಿಸಬೇಕಾದರೆ  ಹಣ್ಣುಗಳ  ಬಾರ್  ಕೋಡಿಂಗ್  ಮತ್ತು ಲೇಬಲಿಂಗಿಗೆ ಗಮನ ಹರಿಸಬೇಕು  ಎಂಬುದು ಅವರ ಪುಕ್ಕಟೆ ಸಲಹೆ.

ಹಣ್ಣು ತರಕಾರಿಗಳನ್ನು  ಸಮೃದ್ಧವಾಗಿ  ಬೆಳೆಯುತ್ತಿರುವ  ದೇಶ ನಮ್ಮದು.   ಈಗ  ಅವುಗಳ ಆಮದು   ಒಂದೇ  ವರುಷದಲ್ಲಿ   ಇಮ್ಮಡಿ ಆಗಿದ್ದು ಇದರ ಬಿಸಿ ನೇರವಾಗಿ  ತಟ್ಟುವುದು  ನಮ್ಮ ದೇಶದ 500 ದಹಲಕ್ಷ ಕೃಷಿಕರಿಗೆ.  ಉದಾರೀಕರಣದ ಹೆಸರಿನಲ್ಲಿ  ಅವರ  ಹೊಟ್ಟೆಗೆ  ಹೊಡೆಯಲಾಗುತ್ತಿದೆ.

ಆದರೆ ಕೃಷಿಕರು ಹತಾಶರಾಗಬೇಕಿಲ್ಲ.  ಇಂತಹ  ಕೊಡಲಿಯೇಟುಗಳಿಂದ  ಪಾರಾಗುವ  ನೂರಾರು  ದಾರಿಗಳೂ  ಅವರಿಗೆ ಗೊತ್ತು - ಬೀಜ  ಬ್ಯಾಂಕ್ ಗಳಲ್ಲಿ ಸ್ಥಳೀಯ ಬೀಜಗಳ  ಜೋಪಾನ ಹಾಗೂ  ಎತ್ತಿನ  ಗಾಡಿಯ  ಬಳಕೆಯಿಂದ  ತೊಡಗಿ ಶೂನ್ಯ  ಭಂಡವಾಳ ಕೃಷಿಯ  ವರೆಗೆ.