ಹೀಗೊಂದು 'ಮಣ್ಣಿನ ಹರಕೆ'


ನಿಡ್ಲೆಯ ನೋಣಯ್ಯ ಕೃಷಿಕರು. ಮನೆಯಲ್ಲಿ ಕೋಳಿಗಳನ್ನೂ ಸಾಕುತ್ತಾರೆ. ಅದರಲ್ಲಿ ದಷ್ಟಪುಷ್ಟವಾದ ಕೋಳಿಯೊಂದಕ್ಕೆ ಏನೋ ರೋಗ ಬಂತು. ಕೋಳಿ ಸತ್ತೇಹೋಗುತ್ತೇನೋ ಎನಿಸುತ್ತಿತ್ತು. ನೋಣಯ್ಯನಿಗೆ ಸುರಿಯಾ ದೇವರ ನೆನಪಾಯ್ತು. ಮಣ್ಣಿನ ಹರಕೆ ಹೇಳಿಕೊಂಡರು.
ಹೇಗೋ ಕೋಳಿ ಬದುಕಿಕೊಂಡಿತು. ನೋಣಯ್ಯನಿಗೆ ಸುರಿಯಾ ದೇವರಲ್ಲಿ ಅಖಂಡ ವಿಶ್ವಾಸ . ಹರಕೆ ಹೇಳಿಕೊಂಡದ್ದರಿಂದಲೇ ಕೋಳಿ ಬದುಕಿತೆಂಬ ನಂಬಿಕೆ. ಮುಂದಿನ ಹೆಜ್ಜೆಯಾಗಿ ಉಜಿರೆಯ ಪುಟ್ಟಣ್ಣ ಕುಂಬಾರನ ಬಳಿ ಮಣ್ಣಿನ ಕೋಳಿಗೆ ಬೇಡಿಕೆ ಸಲ್ಲಿಸಿ ಬಂದರು.
ಆ ಸೋಮವಾರ ಒಂದು ಸೇರು ಅಕ್ಕಿ, ತೆಂಗಿನಕಾಯಿ ಹಾಗೂ ಪುಟ್ಟಣ್ಣ ಮಾಡಿಕೊಟ್ಟ ಮಣ್ಣಿನ ಕೋಳಿಯನ್ನು ನೋಣಯ್ಯ ಸುರಿಯಾ ದೇವಸ್ಥಾನಕ್ಕೆ ತಂದರು. ಭಟ್ಟರು ಕೋಳಿಯನ್ನು ಪರೀಕ್ಷಿಸಿದರು. ಎಲ್ಲಿಯೂ ಊನವಿಲ್ಲವೆಂಬುದನ್ನು ನಿಕ್ಕೆ ಮಾಡಿಕೊಂಡು ಹರಕೆಯನ್ನು ದೇವರ ಪರವಾಗಿ ಅರ್ಪಿಸಿಕೊಂಡರು. ನೋಣಯ್ಯನವರಿಗೆ ಪ್ರಸಾದ ಕೊಟ್ಟು ಕಳಿಸಿದ ಮೇಲೆ ಮಣ್ಣಿನ ಕೋಳಿಯನ್ನು ದೇವರ ಬನಕ್ಕೆ ಒಯ್ದು ಇರಿಸಿದರು.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಸುರಿಯಾ ಸದಾಶಿವೇಶ್ವರ ದೇವಸ್ಥಾನದಲ್ಲಿ ಇದು ಸಾಮಾನ್ಯ ಘಟನೆ. ಜನ ನಂಬುವಂತೆ ಕಳೆದ 700 ವರ್ಷಗಳಿಂದಲೂ ಇಲ್ಲಿಗೆ ಮಣ್ಣಿನ ಹರಕೆ ಸಂದಾಯವಾಗುತ್ತಿದೆ. ಬ್ಯಾರಿಯೊಬ್ಬ ಲಾರಿ ಕೊಂಡರೂ, ಕ್ರಿಶ್ಚಿಯನ್ನರ ಮನೆಯಲ್ಲಿ ಹುಷಾರಿಲ್ಲದಿದ್ದರೂ ಇಲ್ಲಿಗೆ ಹರಕೆ ಹೇಳಿಕೊಳ್ಳುವುದಿದೆ. ದಿನಕ್ಕೆ ಸರಾಸರಿ ಎರಡರ ಹಾಗೆ ಇಲ್ಲಿ ಮಣ್ಣಿನ ಹರಕೆಗಳು ಶೇಖರವಾಗುತ್ತವೆ.
ಈ ಬನದಲ್ಲಿ ರಾಶಿ ಬಿದ್ದ ಮಣ್ಣ ಹರಕೆಗಳನ್ನು ನೋಡುತ್ತಿದ್ದರೆ ದಂಗಾಗಿ ನಿಲ್ಲುತ್ತೇವೆ. ಇಲ್ಲಿ ಇಲ್ಲದ ವಸ್ತುವೇ ಇಲ್ಲ.... ಮಗು, ತೊಟ್ಟಿಲು , ಮುರಿದ ಕಾಲು, ಕೈ ಲಾರಿ, ರಿಕ್ಷಾ, ಬಸ್ಸು, ಮನೆ ತೆಂಗಿನಮರ, ಅಡಿಕೆ ಗೊನೆ, ಗೇರುಹಣ್ಣು , ಎಮ್ಮೆ , ಕರು, ದನ – ಕರು , ಜೋಡೆತ್ತು - ಗಾಡಿ, ಬಾವಿ, ಪಂಪುಸೆಟ್ಟು, ಬೀಡಿಕಟ್ಟು, ಆಮೆ, ಕೋಳಿ, ಹೊಲಿಗೆಯಂತ್ರ, ಕಣ್ಣು, ಕಿವಿ, ಮೊಲೆ, ಹಂದಿ, ನಾಯಿ, ಬೆಕ್ಕು, ಬಿಡಿ ಬಿಡಿ ಬೀಡಿ, ಬಾಳೆಗೊನೆ, ಹುಡುಗಿ, ಮುದುಕ, ಹಾವು, ಏಡಿ, ಮನೆ, ಬೈಕು, ಕಾರು... ಮನುಷ್ಯ ಕಟ್ಟುವ ಹರಕೆಗಳಿಗೆ ಕೊನೆಯೇ ಇಲ್ಲ.
ಇವೆಲ್ಲ ಮಣ್ಣಿನಾಕೃತಿಗಳಾಗಿದ್ದರಿಂದ ಹೊಸ ಹೊಸ ಹರಕೆಗಳ ರಾಶಿ ಬಿದ್ದಂತೆ ಹಳತು ಮಣ್ಣಾಗುತ್ತವೆ. ನಾವು ಬಹಳ ಕಷ್ಟಪಟ್ಟು ಕಟ್ಟುವ ಮನೆ, ಕೊಳ್ಳುವ ಕಾರು, ಜೀವನದಲ್ಲಿ ಮಾಡಿದ್ದು, ಗಳಿಸಿದ್ದು ಎಲ್ಲವೂ ಒಂದು ದಿನ ಮಣ್ಣು, ಪ್ರಕೃತಿಯಲ್ಲಿ ಎಲ್ಲವೂ ನಶ್ವರ ಎಂಬ ನೀತಿಯನ್ನು ಈ ಮಣ್ಣ ಹರಕೆಗಳು ಸುಂದರವಾಗಿ ಬಿಂಬಿಸುತ್ತವೆ.
ಈ ಹರಕೆಗಳ ಮೂಲಕ ವ್ಯಕ್ತವಾಗುವ ಈ ಜಿಲ್ಲೆಯ ಜನಜೀವನವನ್ನು ಗಮನಿಸಿ. ಉದಾಹರಣೆಗೆ ಬೀಡಿಕಟ್ಟು, ಬೀಡಿಗೂ , ದಕ್ಷಿಣ ಕನ್ನಡಕ್ಕೂ ನಿಕಟ ಸಂಬಂಧ. ಹೆಂಗಸರು , ಮಕ್ಕಳು, ಮುದುಕರೂ ಬೀಡಿಕಟ್ಟುತ್ತಾರೆ. ಗಂಡಸರು ಹೊರಗಡೆ ದುಡಿಯುವುದಕ್ಕಿಂತ ಹೆಚ್ಚು ಹೆಂಗಸರು ಬೀಡಿಕಟ್ಟಟಿ ಗಳಿಸುತ್ತಾರೆ. ಅದಕ್ಕೇ ಬೀಡಿ ಕಟ್ಟುಗಳೂ ಮಣ್ಣಿನ ಹರಕೆಯಾಗಿ ಇಲ್ಲಿಗೆ ಬಂದಿವೆ. ಅಡಿಕೆಗೊನೆ, ತೆಂಗಿನಮರ, ಗೇರುಗಿಡ, ಮೀನು, ಏಡಿ ಇವೆಲ್ಲ ಜನಜೀವನದ ಪ್ರತಿರೂಪಗಳು.
ಮತ್ತೆ ನೋಡಿ : ಮನುಷ್ಯನಿಗೆ ಧೈರ್ಯಕ್ಕೊಂದು ಶಕ್ತಿಯ ಅವಲಂಬನೆ ಎಷ್ಟೆಂದರೆ - ಜನ ಬಾವಿ ತೋಡಿಸುವಾಗ ಒಳ್ಳೇ ನೀರು ಬರಲೆಂದು ಬಾವಿ ಹರಕೆ ಹೇಳಿಕೊಳ್ಳುವು ದಿರಲಿ, ಕೋಳಿ ಅಂಕಕ್ಕೆ ಹೊರಟ ಮಂಕನೂ ತನ್ನ ಕೋಳಿ ಗೆಲ್ಲಲಿ ಎಂದು ಕೋಳಿಯ ಹರಕೆ ಹೇಳಿಕೊಳ್ಳುತ್ತಾನೆ. ನಮ್ಮ ರಾಜಕಾರಣಿಗಳಿಗೆ ಈ ಹರಕೆಯಲ್ಲಿ ಕತೆ ಗೊತ್ತಿಲ್ಲವಾಗಿ ಕುರ್ಚಿಯ ಹರಕೆ ಮಾತ್ರ ಅಲ್ಲಿ ಕಾಣಲಿಲ್ಲ .
ಈ ಹರಕೆ ಗುಡ್ಡದಲ್ಲಿ ಎದ್ದುಕಾಣುವ ಅಂಶ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಬಂದು ಬಿದ್ದಿರುವುದು ತೊಟ್ಟಿಲು ಹಾಗೂ ಮಗು. ಮಣ್ಣಿನಲ್ಲೇ ಎಷ್ಟು ಮುದ್ದಾದ ಹಸುಳೆಗಳ ಆಕೃತಿಗಳಿವೆಯೆಂದರೆ ಮುತ್ತಿಡುವ ಮನಸ್ಸಾಗುತ್ತಿದೆ. ಸಂತಾನದ ಬಯಕೆ, ಬಸುರಿಯ ಭಯಗಳೆಲ್ಲ ಹರಿಕೆಯ ವ್ಯಕ್ತ. ಹಾಗೆ ಬಂದ ಹರಕೆಗಳಲ್ಲಿ ಹೆಚ್ಚಿನವು ಗಂಡು ಮಗುವಿನದು ಎಂದು ಸತ್ಯ ಸಮಾಜದಲ್ಲಿ ಹೆಣ್ಣು ಶಿಶುವಿನ ಸ್ಥಾನ – ಮಾನದ ಪ್ರತೀಕ – ವಿಷಾದನೀಯ ವಿಷಯ.
ಹರಕೆಯ ಈ ವಿಚಿತ್ರ ಲೋಕ ಪ್ರತಿನಿಧಿಸುವ ಮೌಲ್ಯಗಳು ಜನಾಂಗೀಯ ಅಧ್ಯಯನಕ್ಕೆ ಒಳ್ಳೆ ಆಕರಗಳಾಗಬಹುದು ಎನಿಸುತ್ತದೆ.
( ಚಿತ್ರಕೃಪೆ : ಗೂಗಲ್)