ಗೌರವದ ಪ್ರಶ್ನೆ
‘ ಏನೂಂದ್ರೆ ನೀವೆಷ್ಟು ಇನ್ ಕಮ್ ಟ್ಯಾಕ್ಸ್ ಕಟ್ತೀರ?’ ಎಂದು ಹೆಂಡತಿ ಕೇಳಿದಳು ಅಂದು.
‘ ಒಂದು ಪೈಸೇನೂ ಇಲ್ಲ' ಎಂದೆ ಹೆಮ್ಮೆಯಿಂದ. ಅಥವಾ ನೆಮ್ಮದಿಯಿಂದ. ಯಾರಿಗೆ ತಾನೆ ಟ್ಯಾಕ್ಸ್ ಕಟ್ಟಲು ಇಷ್ಟ ಇರುತ್ತೆ? ಅವರೇನೋ 'ಪೆ ಟ್ಯಾಕ್ಸ್ ವಿತ್ ಸ್ಮೈಲ್ ' ಎಂದು ಕರೆ ನೀಡಿದ್ದಾರೆ.
‘ಹಾಗಾದರೆ ಮಂಜುಳಾನ ಗಂಡನಿಗೆ ನಿಮಗಿಂತ ಹೆಚ್ಚು ಸಂಬಳ ಬರುತ್ತೆ' ಎಂದು ನಿರಾಶೆಯಿಂದ ಹೇಳಿದಳು.
ನನಗೆ ಅರ್ಥವಾಗಲಿಲ್ಲ.
‘ಹಾಗೆಂದರೆ ಏನೇ. ನಾನು ತೆರಿಗೆ ಕಟ್ಟದೇ ಇರೋದಿಕ್ಕೂ ಮಂಜುಳಾನ ಗಂಡನಿಗೆ ನನಗಿಂತ ಹೆಚ್ಚು ಸಂಬಳ ಬರೋದಿಕ್ಕೂ ಏನೇ ಸಂಬಂಧ?’ ಎಂದೆ ಏರಿರಬಹುದಾದ ಧ್ವನಿಯಲ್ಲಿ.
‘ಅಲ್ಲಾಂದ್ರೆ ಮೊನ್ನೆ ಮಹಿಳಾ ಸಮಾಜದ ಮೀಟಿಂಗ್ ಮಧ್ಯೆ ನಾವು ಮಾತನಾಡಕೋತಿದ್ದಾಗ ಮಂಜುಳಾ ಹೇಳಿದಳು. ಅವಳ ಗಂಡ ಇನ್ನೂ ಟ್ಯಾಕ್ಸ್ ಕಟ್ಟಬೇಕಂತೆ. ಅನೇಕ ಜನ ಟ್ಯಾಕ್ಸ್ ಕಟ್ಟದೆ ತಪ್ಪಿಸಿಕೋತಿದಾರೆ ಆದರೆ ನನ್ನ ಗಂಡ ಇನ್ನೂ ಕಟ್ಟಲೇಬೇಕು ಎಂದಳು ಜಂಬದಿಂದ.’
‘ಕಟ್ಟಲಿ ಬಿಡು ಅವರಿಗೇ ನಷ್ಟ' ಎಂದೆ ನಾನು ಯಾವಾಗಲೂ ತುಂಬಾ ಪ್ರಾಕ್ಟಿಕಲ್. ಈಗ ನೋಡು ಆ ಟ್ಯಾಕ್ಸ್ ಹಣದಲ್ಲಿ ನಾವೇ ಏನಾದರೂ ಮಾಡಬಹುದು' ಎಂದೆ.
‘ಆದರೂ...’ ಎಂದು ರಾಗ ಎಳೆದಳು.
‘ಆದರೆ ರಾಗ ಏಕೆ?’
‘ಅಲ್ಲರೀ ನೀವು ತೆರಿಗೆ ಕಟ್ತಾ ಇಲ್ಲಾ ಎಂದು ಅವಳಿಗೆ ಗೊತ್ತಾದರೆ ಅವಳ ಗಂಡನಿಗಿಂತ ನಿಮಗೆ ಕಡಿಮೆ ಆದಾಯ ಇದೆ ಎಂದು ಅವಳು ತಿಳ್ಕೊತಾಳೆ' ಎಂದು ಅನುಮಾನಿಸಿದಳು.
'ಅದಕ್ಕೇನು ಮಾಡೋಣ ಈಗ?’
‘ ನಿಮಗೇನೂ ಅನ್ನಿಸೊಲ್ಲ. ನೀವು ಗಂಡಸರು. ಆದರೆ ನಾವು ಒಂದೇ ಮಹಿಳಾ ಸಮಾಜದಲ್ಲಿ ಇರೋರು ನಮಗೆ ಹೇಗಾಗಬೆಕು?’
‘ಹೇಗಾಗುತ್ತೆ?’
‘ಅಲ್ಲಾಂದ್ರೆ ಮಂಜುಳಾ ಎಲ್ಲರಿಗೂ ಹೇಳ್ತಾಳೆ. ನೀವು ಟ್ಯಾಕ್ಸ್ ಕಟ್ತಿಲ್ಲ ಆದರೆ ನನ್ನ ಗಂಡ ಕಟ್ತಾನೆ'
‘ಅನೇಕ ಪರಿಹಾರಗಳಿವೆ ಇದಕ್ಕೆ' ಎಂದೆ.
‘ಹೌದೆ! ಹೇಳೀಂದ್ರೆ ಬೇಗ' ಎಂದಳು ಸಡಗರದಿಂದ.
‘ ಒಂದು ಸಮಾಜ ಬಿಡುವುದು. ಇದರಿಂದ ನನಗೂ ಲಾಭ'
‘ಕಡಿಮೆ ಸಂಬಳ ಬರುತ್ತೆ ಅಂದರೆ ಸಮಾಜ ಬಿಡು ಅಂತಿದೀರಲ್ಲ' ಎಂದು ಆಕ್ಷೇಪಿಸಿದಳು.
‘ ಎರಡು, ನಮ್ಮ ಬಾಸ್ ನ ಕೇಳಿಕೋ ನಾನೂ ತೆರಿಗೆ ಕಟ್ಟುವಂತೆ ಮಾಡು ಎಂದು'.
‘ ಉಪಯೋಗವಿದೆಯೆ?’ ಎಂದು ಅನುಮಾನದಿಂದ ಕೇಳಿದಳು.
‘ಸಮಾಜ ಬಿಡಬಾರದು ಎಂದರೆ ಮಾಲೇಬೇಕು ' ಎಂದೆ.
‘ ಎರಡೇ ಉಪಾಯಗಳೇ ?’ ನಿರಾಶೆಯಿಂದ ಕೇಳಿದಳು.
‘ಮೂರನೆಯದೂ ಇದೆ?’
‘ಹೌದೆ? ಹೇಳಿ ಹೇಳಿ...’ ಎಂದಳು ಆತುರದ ಧ್ವನಿಯಲ್ಲಿ.
‘ನಾವು ಟ್ಯಾಕ್ಸ್ ಕಟ್ಟದಿದ್ದರೆ ಏನಂತೆ. ನಮ್ಮಲ್ಲಿ ಬೇಕಾದಷ್ಟು ಬ್ಲಾಕ್ ಮನಿ ಇದೆ ಎಂದು ಜಂಭ ಕೊಚ್ಚಿಕೊ'
‘ಸಿಕ್ಕೊಂಡರೆ?’
‘ ಏನಿದೆ ಸಿಕ್ಕಿಕ್ಕೊಳ್ಳೋಕೆ? ಆದರೆ ಬ್ಲಾಕ್ ಮನಿ ಅಂದ್ರೆ ನಿನಗೆ ಗೌರವ ಕೊಡಬಹುದು' ಎಂದು ಮಾತು ಮುಗಿಸಿದೆ.
ಈಗವಳು ಏನು ಮಾಡುತ್ತಾಳೊ ನೋಡಬೇಕು.
(ಚಿತ್ರ ಕೃಪೆ : ಗೂಗಲ್)