ಎ ಟಿ ಎಂ ಯಂತ್ರಕ್ಕೀಗ ನಲುವತ್ತು ವರ್ಷ(ಇ-ಲೋಕ-29)(2/7/2007)

ಎ ಟಿ ಎಂ ಯಂತ್ರಕ್ಕೀಗ ನಲುವತ್ತು ವರ್ಷ(ಇ-ಲೋಕ-29)(2/7/2007)

ಬರಹ

ATMಜಗತ್ತಿನ ಮೊದಲ ಎ ಟಿ ಎಂ ಯಂತ್ರ ಸ್ಥಾಪನೆಯಾದುದು ಲಂಡನ್ ಸಮೀಪದ ಬ್ಯಾಂಕ್ ಶಾಖೆಯಲ್ಲಿ. ಅದು ನಲುವತ್ತು ವರ್ಷ ಮೊದಲು. ಆಗ ಎ ಟಿ ಎಂ ಕಾರ್ಡುಗಳೆಂಬ ಪ್ಲಾಸ್ಟಿಕ್ ಕಾರ್ಡುಗಳಿರಲಿಲ್ಲ. ವಿಕಿರಣಶಾಲಿ ಇಂಗಾಲದ ರೂಪ ಇಂಗಾಲ-14 ಸವರಿದ ಚೆಕ್ ಹಾಳೆಯನ್ನು ಬಳಸಬೇಕಿತ್ತು.ಪಿನ್ ಸಂಖ್ಯೆಯನ್ನು ತಾಳೆ ಮಾಡಿದ ನಂತರ ಹಣ ಕೊಡುವ ವ್ಯವಸ್ಥೆ ಆಗಲೇ ಜಾರಿಗೆ ಬಂದಿತ್ತು. ಚೆಕ್ ಒಂದಕ್ಕೆ ಹತ್ತು ಪೌಂಡ್ ಯಂತ್ರ ನೀಡುತ್ತಿದ್ದ ಗರಿಷ್ಠ ಹಣವಾಗಿತ್ತು. ಎ ಟಿ ಎಂ ಯಂತ್ರದ ಸಂಶೋಧಕ ಶೆಪರ್ಡ್ ಬ್ಯಾರನ್ ಈಗ ಎಂಭತ್ತೆರಡು ವರ್ಷದ ಅಜ್ಜ.ಆರ್ಕಿಮಿಡೀಸ್ ಸ್ನಾನ ಮಾಡುತ್ತಿದ್ದಾಗ ಆತನ ಸಮಸ್ಯೆಗೆ ಪರಿಹಾರ ಹೊಳೆದು ಯುರೇಕಾ ಎಂದು ಕೂಗುತ್ತಾ ಸ್ನಾನದ ತೊಟ್ಟಿಯಿಂದ ಹೊರ ಬಂದ ಕತೆ ನಿಮಗೆ ಗೊತ್ತಿದೆ. ಶೆಪರ್ಡ್‍ಗೆ ಕೂಡಾ ಎ ಟಿ ಎಂ ಯಂತ್ರದ ಆಲೋಚನೆ ಹೊಳೆದುದು, ಅತನು ಸ್ನಾನ ಮಾಡುತ್ತಿದ್ದಾಗಲೇ!ಆಗ ಅಲ್ಲಲ್ಲಿ ಕೆಲಸ ಮಾದುತ್ತಿದ್ದ ಚಾಕಲೇಟ್ ಮಾರಾಟ ಮಾಡುತ್ತಿದ್ದ ಯಂತ್ರವೇ ಇದಕ್ಕೆ ಸ್ಪೂರ್ತಿ. ವಿಕಿರಣಶೀಲ ಚೆಕ್ ಬಳಕೆ ಎ ಟಿ ಎಂ ಯಂತ್ರದ ಉಪಯೋಗ ಆರೋಗ್ಯಕ್ಕೆ ಒಳಿತಲ್ಲ ಎನ್ನುವ ವದಂತಿಗೆ ಕಾರಣವಾಯಿತು.ಮೊದಲಿನ ಯಂತ್ರವನ್ನು ದರೋಡೆಕೋರರು ಸೂರೆ ಮಾಡಿದರಂತೆ. ಒಂದು ಯಂತ್ರ ತಪ್ಪಾಗಿ ಪ್ರತಿಕ್ರಿಯೆ ನೀಡಿ ತಲೆನೋವು ಉಂಟು ಮಾಡಿತ್ತು. ಪರಿಶೀಲಿಸಿದಾಗ ಆ ಯಂತ್ರ ತಪ್ಪೆಸಗಲು ಅದರ ಪಕ್ಕದಲ್ಲಿ ಸಾಗುತ್ತಿದ್ದ ಟ್ರಾಮ್ ಯಂತ್ರದ ತಂತಿಗಳು ಎನ್ನುವುದು ಗೊತ್ತಾಯಿತು. ಮೊದಲಿಗೆ ಶೆಪರ್ಡ್ ಆರು ಅಂಕಿ ಪಿನ್ ಉಪಯೋಗಿಸುವ ಆಲೋಚನೆಯಲಿದ್ದ. ನಂತರ ಹೆಂಡತಿಯ ಅಭಿಪ್ರಾಯ ಕೇಳಿದಾಗ ನಾಲ್ಕಕ್ಕಿಂತ ಹೆಚ್ಚಿನ ಅಂಕಿಗಳನ್ನು ನೆನಪಿನಲ್ಲಿಡುವುದು ತನ್ನ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವ ಅವಳ ನೇರ ನುಡಿ, ನಾಲ್ಕಂಕಿ ಪಿನ್ ಸಂಖ್ಯೆ ಬಳಸಲು ಕಾರಣವಾಯಿತು.ಆಶ್ಚರ್ಯವೆಂದರೆ ಈಗಲೂ ನಾಲ್ಕಂಕಿ ಪಿನ್ ಸಂಖ್ಯೆಯೇ ಉಳಿದಿದೆ. ಎ ಟಿ ಎಮ್ ಯಂತ್ರದ ಭವಿಷ್ಯದ ಬಗ್ಗೆ ಕೇಳಿದಾಗ ಶೆಪರ್ಡ್ ಅದು ಇನ್ನು ಹೆಚ್ಚು ಕಾಲ ಉಳಿಯುವ ಭರವಸೆ ಇಲ್ಲವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಸೆಲ್ ಪೋನಿನ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈಗ ಲಭ್ಯವಿರುವುದರಿಂದ ಮುಂದಿನ ದಿನಗಳಲ್ಲಿ, ಎಲ್ಲಾ ಹಣಕಾಸಿನ ವ್ಯವಹಾರದ ಪಾವತಿಯೂ ಅದರ ಮೂಲಕವೇ ಆಗಬಹುದು ಎನ್ನುವುದು ಅವರ ಅಭಿಪ್ರಾಯ. ನೋಟನ್ನು ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವುದು ಅಪಾಯಕಾರಿ. ಹೀಗಿರುವಾಗ ಅವನ್ನು ಯಾಕಾಗಿ ಅವಲಂಬಿಸಬೇಕು ಎನ್ನುವುದು ಯೋಚಿಸಬೇಕಾದ ಪ್ರಶ್ನೆಯೇ.

ಸುರಕ್ಷಿತ ವಿಮಾನಯಾನಕ್ಕೆ ಹೊಸ ವ್ಯವಸ್ಥೆ

ವಿಮಾನಯಾನಗಳು ಹೆಚ್ಚಿದಂತೆ,ಸಮಯ ಪರಿಪಾಲನೆ ಕಷ್ಟವಾಗುತ್ತಿದೆ ಎನ್ನುವುದು ಅಮೆರಿಕಾದಂತಹ ಅನುಭವ. ಇದಕ್ಕೆ ಮುಖ್ಯ ಕಾರಣ ವಿಮಾನಗಳ ನಿಯಂತ್ರಣಕ್ಕೆ ರಾಡಾರ್ ಸಾಧನಗಳ ಬಳಕೆ. ವಿಮಾನ ರಾಡಾರ್ ಕೇಂದ್ರದಿಂದ ಸಮೀಪವಿದ್ದರೆ, ವಿಮಾನಗಳ ಸ್ಥಾನದ ಬಗ್ಗೆ ರಾಡಾರ್‌ಗಳು ನಿಖರವಾಗಿ ಮಾಹಿತಿ ನೀಡುತ್ತವೆ. ಆದರೆ ವಿಮಾನಗಳು ರಾಡಾರ್ ಆಂಟೆನಾದಿಂದ ದೂರ ಸರಿದಂತೆ ಅವುಗಳ ಸ್ಥಾನದ ಬಗ್ಗೆ ನಿಯಂತ್ರಣ ಕಕ್ಷೆ ಅಥವಾ ಇತರ ವಿಮಾನಗಳವರಿಗೆ ಸಿಗುವ ಮಾಹಿತಿ ಅಸ್ಪಷ್ಟವಾಗಿರುತ್ತದೆ. ಹಾಗಾಗಿ ಒಂದೇ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನಗಳು ರಾಡಾರ್ ಸಮೀಪ ಇರುವಾಗ ಪರಸ್ಪರ ಐದು ಕಿಲೋಮೀಟರ್ ಅಂತರ ಕಾಯ್ದುಕೊಂಡರೆ, ದೂರದಲ್ಲಿರುವಾಗ ಇಪ್ಪತ್ತು ಕಿಲೋಮೀಟರ್ ಅಂತರ ಹೊಂದಿರಬೇಕು. ವೇಗ ಹೆಚ್ಚಿದಂತೆ ರಾಡಾರ್‌ಗಳು ನೀಡುವ ಮಾಹಿತಿ ನಂಬಲರ್ಹವಲ್ಲ. ಹೀಗಾಗಿ ವಿಮಾನಗಳ ಹಾರಾಟ ನಿಧಾನವಾಗಿ,ಸಮಯ ಪರಿಪಾಲನೆ ಕಷ್ಟವಾಗುತ್ತದೆ. ಹೊಸ ವ್ಯವಸ್ಥೆ ಎಡಿಎಸ್-ಬಿಯಲ್ಲಿ ಕೃತಕ ಉಪಗ್ರಹಗಳನ್ನು ಬಳಸಲಾಗುತ್ತದೆ. ಜಿ ಪಿ ಎಸ್ ಉಪಗ್ರಹ ವ್ಯವಸ್ಥೆ ಬಳಸಿ, ಪ್ರತಿ ವಿಮಾನವೂ ತನ್ನ ಸ್ಥಾನವನ್ನು ಬಹಳ ನಿಖರವಾಗಿ ಲೆಕ್ಕ ಹಾಕಿ, ಅದನ್ನು ಬಳಸಿ,ವಿಮಾನ ಹಾರುತ್ತಿರುವ ವಾಯುಮಂಡಲದ ಚಿತ್ರವನ್ನು ರಚಿಸುತ್ತದೆ.ಇದನ್ನು ದೂರಸಂಪರ್ಕ ಉಪಗ್ರಹದ ಮೂಲಕ ಇತರ ವಿಮನಗಳಿಗೂ ತಲುಪಿಸುತ್ತವೆ. ಹೀಗಾಗಿ ವಿಮಾನಗಳ ಪೈಲಟ್‌ಗಳು ತಮ್ಮ ಅಂತರವನ್ನು ಅಗತ್ಯವಿರುವಷ್ಟೇ ಕಾಯ್ದುಕೊಂಡು,ಹಾರಾಟ ನಡೆಸಲು ಸಾಧ್ಯವಾಗುತ್ತದೆ. ಅಲಾಸ್ಕದಂತಹ ಅಧಿಕ ಅಪಘಾತ ವಲಯದಲ್ಲೂ ಹೊಸ ವ್ಯವಸ್ಥೆ ಉತ್ತಮ ಫಲಿತಾಂಶ ನೀಡಿದೆ.ಸಾಗರದಲ್ಲಿಹಾರಾಡುವ ವಿಮಾನಗಳು ರಾಡಾರ್ ಪಥದಲ್ಲಿ ಬರುವುದಿಲ್ಲವಾದರೂ ,ಎಡಿಎಸ್-ಬಿ ವ್ಯವಸ್ಥೆ ಅಲ್ಲೂ ಲಭ್ಯವಿರುತ್ತದೆ. ಇದರ ಜತೆ ಇನ್‌ಫ್ರಾರೆಡ್ ಚಿತ್ರದ ಮೂಲಕ ರಾತ್ರಿಯ ವೇಳೆ ಮತ್ತು ಮೋಡ ಮುಸುಕಿದ ಆಗಸವಿದ್ದಾಗಲೂ,ರನ್‍ವೇಯ ನೋಟವನ್ನು ಪೈಲಟ್ ಪಡೆಯಲು ಅನುವಾಗಿಸುವ ವ್ಯವಸ್ಥೆಗಳು ಈಗ ಲಭ್ಯ.

ಅಂತರ್ಜಾಲದಲ್ಲಿ ಹೊಸ ನೀತಿ?

ಮೊದಲಿಗೆ ಸೆಲ್ ಫೋನ್ ವ್ಯವಸ್ಥೆಯಲ್ಲಿ ಕರೆ ಮಾಡುವವನೂ, ಕರೆ ಸ್ವೀಕರಿಸಿದವನೂ ಕರೆಗೆ ದರ ಪಾವತಿಸುವ ವ್ಯವಸ್ಥೆ ಇತ್ತು ತಾನೇ? ಇಂತಹದೇ ಮಾದರಿ ಅಂತರ್ಜಾಲದಲ್ಲೂ ಬರಲಿದೆಯೇ? ಸದ್ಯ ಬ್ರಾಡ್‍ಬ್ಯಾಂಡ್ ಸೇವೆಗೆ ಗ್ರಾಹಕ ಮಾತ್ರಾ ಹಣ ಪಾವತಿಸುತ್ತಾನೆ. ಈಗ ಸೇವೆ ಪೂರೈಕೆದಾರರು ಹೊಸ ಪ್ರಸ್ತಾವವನ್ನು ವೆಬ್‍ಸೈಟುಗಳ ಸಂಚಾಲಕರಲ್ಲಿ ಇಡುವ ಯೋಚನೆಯಲ್ಲಿದ್ದಾರೆ.ಅದರ ಪ್ರಕಾರ ವೆಬ್‍ಸೈಟುಗಳು ಗ್ರಾಹಕನ ಕಂಪ್ಯೂಟರಿನಲ್ಲಿ ಬೇಗ ಕಾಣಿಸಿಕೊಳ್ಳ ಬೇಕಿದ್ದರೆ,ಅವೂ ಸೇವಾ ಪೂರೈಕೆದಾರರಿಗೆ ಹಣ ಪಾವತಿಸಬೇಕು.ಹಣ ಪಾವತಿಸದ ವೆಬ್‍ಸೈಟುಗಳು ಕಡಿಮೆ ಬ್ಯಾಂಡ್‍ವಿಡ್ತ್ ಪಡೆಯುವ ಕಾರಣ ಗ್ರಾಹಕನ ಕಂಪ್ಯೂಟರಿನಲ್ಲಿ ಕಾಣಿಸಿಕೊಳ್ಳುವುದು ನಿಧಾನವಾಗುತ್ತದೆ.

ಭೂಕಂಪ ಮುನ್ಸೂಚನೆ ನೀಡುವ ಸಾಧನ

ಜಪಾನ್ ಭೂಕಂಪ ಪೀಡಿತ ದೇಶ. ಜಗತ್ತಿನ ಭೂಕಂಪಗಳ ಪೈಕಿ ಐದನೇ ಒಂದು ಭಾಗ ಭೂಕಂಪಗಳು ಸಂಭವಿಸುವುದು ಇಲ್ಲೇ. ಭೂಕಂಪ ಸಂಭವಿಸುವ ತುಸು ಮುನ್ನ ಅದರ ಬಗ್ಗೆ ಮುನ್ಸೂಚನೆ ಸಿಕ್ಕಿದರೆ, ಜೀವ ಹಾನಿಯನ್ನು ತಡೆಯುವುದು ಸಾಧ್ಯ. ಈಗ ಜಪಾನಿನ ಹವಾಮಾನ ಇಲಾಖೆ ಭೂಕಂಪ ಮುನ್ಸೂಚನೆಯನ್ನು ಕೆಲವು ಸೆಕೆಂಡು ಮುನ್ನವೇ ನೀಡುವ ತಂತ್ರಜ್ಞಾನ ಹೊಂದಿದೆ. ಇದನ್ನು ಟಿವಿ,ಸೆಲ್‍ಫೋನ್ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ಇದೆ. ಅದರೆ ಆ ಸಮಯದಲ್ಲಿ ಟಿವಿಯನ್ನು ನೋಡದವರಿಗೆ ಎಚ್ಚರಿಕೆ ತಲುಪುವುದಿಲ್ಲ.ಈಗ ಬಂದಿರುವ ಸಾಧನ ಕಾದಂಬರಿ ಪುಸ್ತಕದ ಗಾತ್ರದ್ದು. ಇದು ಹವಾಮಾನ ಇಲಾಖೆಯ ಜಾಲಕ್ಕೆ ಸಂಪರ್ಕ ಹೊಂದಿದ್ದು, ಭೂಕಂಪ ಮುನ್ಸೂಚನೆಯನ್ನು ಪಡೆದು ಅಲಾರ್ಮ್ ನೀಡುತ್ತದೆ.ಅಲಾರ್ಮ್ ಮೊಳಗಿದ ಕೂಡಲೇ ಜನರು ವಿದ್ಯುತ್ ಸಂಪರ್ಕ ನಿಲ್ಲಿಸಲು, ಗ್ಯಾಸ್ ಬಂದ್ ಮಾಡಲು ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ತೊಡಗಬೇಕು. *ಅಶೋಕ್ ಕುಮಾರ್ ಎ