"ಬಲ" ಎಂಬ ರಸ್ತೆ ಬದಿಯ ಔಷಧಿ ಗಿಡ

"ಬಲ" ಎಂಬ ರಸ್ತೆ ಬದಿಯ ಔಷಧಿ ಗಿಡ

“ಇದೇನ್ ಸಾರ್, ನಮ್ ತೋಟ್ದಾಗ್ ಏಕಾ ಬೆಳೆದಿರ್ತದೆ. ಕಿತ್ತು ಕಿತ್ತು ಬಿಸಾಕೋದೆ.” ಹತ್ತಿರದ ಹಳ್ಳಿಯ ವೆಂಕಟರಾಮಯ್ಯ ಹೇಳಿದರು. 
 
ಆ ದಿನ ಹಾಗೇ ರಸ್ತೆ ಬದಿಯಲ್ಲಿ ಕಂಡ ಗಿಡವೊಂದನ್ನು ವೆಂಕಟರಾಮಯ್ಯನಿಗೆ ತೋರಿಸಿ “ನೋಡಿ, ಇದು ಔಷಧಿ ಗಿಡ. ಇದಕ್ಕೆ ಸಂಸ್ಕೃತದಲ್ಲಿ “ಬಲ” ಎಂದು ಕರೆಯುತ್ತಾರೆ” ಎಂದು ಹೇಳಿದ್ದೆ. 
 
“ನಮ್ ಕಡೀಗ್ ಇದರ ಪೊರಕೆ ಮಾಡ್ತಾರೆ ಸಾರ್. ಕಡ್ಡೀಗಳನ್ನೆಲ್ಲ ಕಿತ್ತು ಪೊರಕೆ ಮಾಡಿದರೆ ದೇವರ ಜಾತ್ರೇಲಿ ದೇವರ ಕಸ ಗುಡಿಸೋಕೆ ಬರುತ್ತೆ” ಎಂದು ವೆಂಕಟರಾಮಯ್ಯ ನನಗೆ ತಿಳಿದಿಲ್ಲದಿದ್ದ ಸಂಗತಿಯೊಂದನ್ನು ಹಂಚಿಕೊಂಡರು. 
 
“ನಿಮ್ಮ ದೊಡ್ಡ ಸಾರ್ ಇದಾರಲ್ಲ, ಅವರು ಭಾನುವಾರ ಮೈಗೆ ಎಣ್ಣೆ ಹಚ್ಚಿಕೊಂಡು ಕೂತಿರುತ್ತಾರಲ್ಲ, ಆ ತೈಲ ಇದರಿಂದಲೇ ಮಾಡೋದು” ಎಂದು ನಾನು ಅವರಿಗೆ ತಿಳಿಸಿದೆ. 
ಅವರು ಬೇಡೆಂದು ಕಿತ್ತು ಬಿಸಾಡುವ ಗಿಡವೊಂದು ಔಷಧದ ಉಪಯೋಗಕ್ಕೆ ಬರುವ ಸಂಗತಿ ತಿಳಿದು ವೆಂಕಟರಾಮಯ್ಯ ಆಶ್ಚರ್ಯದಿಂದ ಬೀಗಿದರು. 
ಆಯುರ್ವೇದದಲ್ಲಿ “ಕ್ಷೀರಬಲ ತೈಲ” ಎಂಬ ಎಣ್ಣೆಯ ಉಲ್ಲೇಖ “ಭಾವಪ್ರಕಾಶಂ” ಎಂಬ ಗ್ರಂಥದಲ್ಲಿದೆಯಂತೆ. ಆ ಎಣ್ಣೆಯನ್ನು ಮೈಗೆಲ್ಲ ಹಚ್ಚಿಕೊಂಡು ನೆನೆದು ಸ್ನಾನ ಮಾಡುವ ಪದ್ಧತಿ ಇದೆ. ಈಗೆಲ್ಲ ಹಲವು ರೆಸಾರ್ಟುಗಳಲ್ಲಿ ಸ್ಪಾಗಳಲ್ಲಿ ಮಸಾಜ್ ಮಾಡಲು ಇದರ ಬಳಕೆಯಾಗುತ್ತದೆ. 
 
“ನಿಮ್ ಊರ್ ಕಡೆ ಇದಕ್ಕೆ ಏನಂತಾರ್ರೀ ವೆಂಕಟರಾಮಯ್ಯ?” ಎಂದು ಕೇಳಿದೆ. 
 
“ನಾವ್ ಭೀಮ್ ಕಡ್ಡಿ ಅಂತೀವಿ ಸಾರ್” ಎಂದರು. 

ಸಂಸ್ಕೃತದಲ್ಲಿ "ಬಲ", ಸೈಂಟಿಫಿಕ್ ನೇಮ್ sida acuta.  

ಒಟ್ಟಿನಲ್ಲಿ ರಸ್ತೆ ಬದಿ ಬೆಳೆಯುವ ಈ ಗಿಡದ ಪರಿಚಯ ಹೆಚ್ಚಿನ ಜನರಿಗೆ ಇರುವುದು ಕಡಿಮೆ. ಇದರಿಂದ ತಯಾರಿಸಿದ ಔಷಧಿ ಅತಿ ಬೇಡಿಕೆಯಲ್ಲಿರುವುದು ಕೂಡ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. 
ಇವತ್ತು ಬೆನ್ನು ನೋವು ಹತ್ತಿ ಮಲಗಿದ್ದಾಗ ಮೇಡಂ “ವ್ಯಾಥೊಲಿನ್” ಎಂಬ ದೇಸಿ ಮುಲಾಮೊಂದನ್ನು ಹಚ್ಚಿದರು. ಅದರ ಪ್ಯಾಕಿನ ಮೇಲೆ ಬರೆದದ್ದನ್ನು ಓದುತ್ತ “ಇದರಲ್ಲೂ ಇರೋದು “ಬಲ”” ಎಂದರು. ಹಾಗೆ ಈ ಗಿಡದ ವಿಷಯ ಮತ್ತೆ ನೆನಪಾಯಿತು.

Comments