ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು

ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು

ಕೃಷಿರಂಗದ ಬಗ್ಗೆ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರೀ ಒಲವು ತೋರಿಸುತ್ತಿವೆ. ಇದಕ್ಕೆ ಕೆಲವು ಪ್ರಧಾನ ಕಾರಣಗಳಿವೆ.
ಮೊದಲನೆಯದಾಗಿ, ಇಂದಿಗೂ ಶೇಕಡಾ ೫೦ ಜನರ ವಾಸ ಹಳ್ಳಿಗಳಲ್ಲೇ. ಕೃಷಿರಂಗ ಅಭಿವೃದ್ಧಿ ಹೊಂದಿದರೆ ಅದರಿಂದ ನೇರವಾಗಿ ಲಾಭವಾಗುವುದು ಹಳ್ಳಿಗರಿಗೆ.

ಎರಡನೆಯದಾಗಿ, ಬೆಂಬಿಡದ ಬರಗಾಲದಿಂದಾಗಿ ಗ್ರಾಮೀಣ ಜನರು ಕಂಗೆಟ್ಟು ಹೋಗಿದ್ದಾರೆ (ಭಾರೀ ಶ್ರೀಮಂತರಾದ ಕೃಷಿಕರನ್ನು ಹೊರತು ಪಡಿಸಿ). ಈ ಪರಿಸ್ಥಿತಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಯಿಂದ ಅಲ್ಲಿನವರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಮೂರನೆಯದಾಗಿ, ಕೃಷಿರಂಗ ಹಾಗೂ ಗ್ರಾಮೀಣ ಪ್ರದೇಶಗಳು ಸಮೃದ್ಧವಾದರೆ, ಅದರಿಂದಾಗಿ ನಗರಗಳಿಗೆ ವಲಸೆಯ ಒತ್ತಡ ಕಡಿಮೆಯಾಗುತ್ತದೆ. ಗ್ರಾಮಗಳೇ ಸಣ್ಣಪಟ್ಟಣಗಳಾಗಿ ಬೆಳೆದರೆ, ಗ್ರಾಮವಾಸಿಗಳು ನಗರಗಳಿಗೆ ವಲಸೆ ಹೋಗುವುದು ಕಡಿಮೆಯಾಗಲಿದೆ.

ಆದ್ದರಿಂದಲೇ, ಕೇಂದ್ರ ಸರಕಾರವು ೨೦೨೨ರ ಹೊತ್ತಿಗೆ ಗ್ರಾಮೀಣ ಜನರ ಆದಾಯವನ್ನು ಇಮ್ಮಡಿಗೊಳಿಸುವ ಮಂತ್ರ ಪಠಿಸುತ್ತಿದೆ. ಅದಕ್ಕಾಗಿ, ಕೃಷಿ ಉತ್ಪನ್ನಗಳ ಖರೀದಿ ಮತ್ತು ವಿತರಣೆಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವತ್ತ ಹೆಜ್ಜೆಯಿಟ್ಟಿದೆ.

೧೪ ಮಾರ್ಚ್ ೨೦೧೭ರಂದು, ಆರ್.ಸಿ. ಚೌಧರಿ, ಉಪಸಚಿವರು, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಇದನ್ನು ಖಚಿತ ಪಡಿಸಿದೆ. ದೇಶದ ಉಗ್ರಾಣಗಳಲ್ಲಿ ತುಂಬಿರುವ ಸುರಕ್ಷಾ ಆಹಾರ ಧಾನ್ಯ ಸಂಗ್ರಹದ (ಬಫರ್ ಸ್ಟಾಕ್) ದಕ್ಷ ನಿರ್ವಹಣೆಗಾಗಿ ಖಾಸಗಿ ಏಜೆನ್ಸಿಯೊಂದನ್ನು ನೇಮಿಸಲಾಗುವುದು ಎಂದು ಅವರು ತಿಳಿಸಿದರು. ಆಹಾರಧಾನ್ಯಗಳ ಖರೀದಿ, ಸಂಗ್ರಹ, ಮೇಲುಸ್ತುವಾರಿ ಮತ್ತು ವಿಲೇವಾರಿ ಕೂಡ ಅದೇ ಏಜೆನ್ಸಿಯ ಜವಾಬ್ದಾರಿ ಆಗಿರುತ್ತದೆ ಎಂಬುದು ಅವರು ನೀಡಿದ ಮಾಹಿತಿ. ಖರೀದಿಯ ಏಲಂ ಪ್ರಕ್ರಿಯೆಯ ನಿರ್ವಹಣೆಗಾಗಿಯೂ ಏಜೆನ್ಸಿಯನ್ನು  ಆಯ್ಕೆ ಮಾಡಲಾಗಿದೆಯೆಂದು ಹೇಳಿದರು.

ಭಾರತದ ಆಹಾರ ನಿಗಮದ ಉಗ್ರಾಣಗಳ ಶೇಖರಣಾ ಸಾಮರ್ಥ್ಯ ಸಾಕಷ್ಟಿಲ್ಲ. ಹಾಗಾಗಿ, ಕೇಂದ್ರ ಸರಕಾರದ ೩೦,೦೦೦ ದಶಲಕ್ಷ ಟನ್ ಆಹಾರ ಸಂಗ್ರಹದ ಶೇಕಡಾ ೩೦ರಷ್ಟು ಹಾಳಾಗಿ ಹೋಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಬೇಜವಾಬ್ದಾರಿಯಿಂದಾಗಿ ಆಕ್ರೋಶಗೊಂಡ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರಕ್ಕೆ ಖಡಕ್ ಆದೇಶ ನೀಡಿತು. ಇದರ ಪರಿಣಾಮವಾಗಿ, ೨೦೦೭ರ ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆಯನ್ನು ೨೫ ಅಕ್ಟೋಬರ್ ೨೦೧೦ರಂದು ಕೇಂದ್ರ ಸರಕಾರ ಜ್ಯಾರಿ ಮಾಡಿತು.   

ಇದರಿಂದಾಗಿ ರೈತರಿಗೆ ಹಲವು ಅನುಕೂಲಗಳಿವೆ. ರೈತರು ತಮ್ಮ ಫಸಲನ್ನು ಹತ್ತಿರದ ಅಧಿಕೃತ ಉಗ್ರಾಣಕ್ಕೆ ಒಯ್ಯಬೇಕು. ಆ ಉಗ್ರಾಣದ ಅಧಿಕಾರಿಗಳು ರೈತರು ತಂದ ಧಾನ್ಯವನ್ನು (ಗೋಧಿ, ಭತ್ತ, ಉದ್ದು, ಹೆಸರು ಇತ್ಯಾದಿ) ಗ್ರೇಡಿಂಗ್ ಮಾಡುತ್ತಾರೆ. ಆ ಧಾನ್ಯದ ಹೆಸರು, ತೂಕ ಮತ್ತು ಗ್ರೇಡ್ ನಮೂದಿಸಿ ಒಂದು ರಶೀದಿ ಕೊಡುತ್ತಾರೆ. ಈ ರಶೀದಿಯು ಒಂದು ಚೆಕ್ ಇದ್ದಂತೆ. ರೈತರು ಇದನ್ನು ಬ್ಯಾಂಕಿಗೆ ಅಥವಾ ಧಾನ್ಯ ವ್ಯಾಪಾರಿಗೆ ಕೊಟ್ಟು, ಅದರ ಬದಲಾಗಿ ಹಣ ಪಡೆಯಬಹುದು. ಈ ರಶೀದಿ “ಖರೀದಿಸಿದ" ಧಾನ್ಯ ವ್ಯಾಪಾರಿ, ಹತ್ತಿರದ ಉಗ್ರಾಣಕ್ಕೆ ಅದನ್ನು ಸಲ್ಲಿಸಿ, ಅದರಲ್ಲಿ ನಮೂದಿಸಿದ ತೂಕ ಮತ್ತು ಗ್ರೇಡಿನ ಧಾನ್ಯ ಪಡೆಯಬಹುದು.  

ಅದೇನಿದ್ದರೂ, ಈ ವ್ಯವಸ್ಥೆಯಲ್ಲಿ ಲೋಪದೋಷಗಳಿವೆ. ಉಗ್ರಾಣಗಳನ್ನು ಯಾರು (ರಾಜ್ಯ ಸರಕಾರ ಅಥವಾ ಏಜೆನ್ಸಿ) ಸರ್ಟಿಫೈ ಮಾಡಬೇಕೆಂದು ನಿಯಮಗಳಲ್ಲಿ ತಿಳಿಸಿಲ್ಲ. ಸಾಕಷ್ಟು ಉಗ್ರಾಣಗಳೇ ಇಲ್ಲ; ಅಂದಮೇಲೆ, ಎಲ್ಲ ರೈತರೂ ತಮ್ಮ ಫಸಲನ್ನು ಅಧಿಕೃತ ಉಗ್ರಾಣಗಳಲ್ಲಿ ಶೇಖರಣೆ ಮಾಡುವಂತಿಲ್ಲ. ಅದಲ್ಲದೆ, ಈ ರಶೀದಿಗಳ ಡಿಜಿಟಲೀಕರಣ ಆಗಿಲ್ಲ. ಹಾಗಾಗಿ, ನಕಲಿ ರಶೀದಿಗಳಿಂದ ಮೋಸವಾಗುವ ಸಾಧ್ಯತೆಗಳಿವೆ. ಹಾಗೂ, ಉಗ್ರಾಣಗಳಲ್ಲಿ ಧಾನ್ಯ ಶೇಖರಣೆ, ಗುಣಮಟ್ಟ ರಕ್ಷಣೆ ಮತ್ತು ಧಾನ್ಯ ವಿಲೇವಾರಿಯಲ್ಲಿ ಬಹಳಷ್ಟು ಸುಧಾರಣೆಗಳು ಆಗಬೇಕಾಗಿವೆ.
ಕೆಲವು ಆಶಾದಾಯಕ ಬೆಳವಣಿಗೆಗಳೂ ಆಗಿವೆ. ಅಧಿಕೃತ ಏಜೆನ್ಸಿಯು ೧,೩೦೦ ಉಗ್ರಾಣಗಳನ್ನು ನೋಂದಾಯಿಸಿದೆ. ಇವುಗಳ ಒಟ್ಟು ಶೇಖರಣಾ ಸಾಮರ್ಥ್ಯ ೫೭.೮೦ ಲಕ್ಷ ಟನ್. ದ್ವಿದಳ ಧಾನ್ಯಗಳ ಸಂಶೋಧನೆಯಲ್ಲಿ ಭಾಬಾ ಅಣುವಿಜ್ನಾನ ಸಂಶೋಧನಾ  ಕೇಂದ್ರ (ಬಿ ಎ ಆರ್ ಸಿ )ದ ವಿಜ್ನಾನಿಗಳೂ ಭಾಗವಹಿಸುತ್ತಿದ್ದಾರೆ. ಈ ವರೆಗೆ ೧೯ ಅಧಿಕ-ಇಳುವರಿ ನೀಡುವ ದ್ವಿದಳ ಧಾನ್ಯಗಳ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಜನವರಿ ೨೦೧೬ರಲ್ಲಿ ಜ್ಯಾರಿಯಾದ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯಿಂದಾಗಿ ಲಕ್ಷಗಟ್ಟಲೆ ರೈತರ ಫಸಲು ವಿಮಾ ರಕ್ಷಣೆಗೆ ಒಳಪಟ್ಟಿದೆ.

ಈ ಬೆಳವಣಿಗೆಗಳ ಬಗ್ಗೆ ಹಿರಿಯ ವಿಜ್ನಾನಿ ಅಶೋಕ್ ಗುಲಾಟಿ ಹೀಗೆನ್ನುತ್ತಾರೆ, “೨೦೧೬ರಿಂದೀಚೆಗೆ ಬೆಳೆ ವಿಮೆಯ ಕಂತು ಮುಂಗಾರು ಬೆಳೆಗೆ ಶೇಕಡಾ ಎರಡು ಮತ್ತು ಹಿಂಗಾರು ಬೆಳೆಗೆ ಶೇಕಡಾ ೧.೫ ಎಂದು ನಿಗದಿ ಪಡಿಸಲಾಗಿದೆ. ಇದರಿಂದಾಗಿ, ಮುಂಗಾರಿನಲ್ಲಿ ಬೆಳೆವಿಮೆಗೆ ಒಳಪಟ್ಟ ಪ್ರದೇಶದಲ್ಲಿ ಭಾರೀ ಹೆಚ್ಚಳವಾಗಿದೆ. ೨೦೧೫ರಲ್ಲಿ ೨೭.೫ ದಶಲಕ್ಷ ಹೆಕ್ಟೇರ್ ಇದ್ದದ್ದು ೨೦೧೬ರಲ್ಲಿ ೩೭.೫ ದಶಲಕ್ಷ ಹೆಕ್ಟೇರಿಗೆ ವಿಸ್ತರಿಸಿದೆ. ಈ ಅವಧಿಯಲ್ಲಿ, ಬೆಳೆ ವಿಮೆಯ ಮೊತ್ತವೂ ೬೦,೭೭೩ ಕೋಟಿ ರೂಪಾಯಿಗಳಿಂದ ೧,೦೮,೦೫೫ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ, ಬೆಳೆ ನಷ್ಟ ಅಂದಾಜಿಸುವ ವಿಧಾನದಲ್ಲಿ ಬದಲಾವಣೆ ಆಗಿಲ್ಲ; ಇದಕ್ಕೆ ಅಗತ್ಯವಾಗಿದ್ದ ಸ್ಮಾರ್ಟ್ ಫೋನುಗಳನ್ನು ಹಲವು ರಾಜ್ಯ ಸರಕಾರಗಳು ಖರೀದಿಸಿಯೇ ಇಲ್ಲ.”

ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರ ಬವಣೆ ಹೆಚ್ಚಾಗಲು ಇವೆಲ್ಲ ಯೋಜನೆಗಳ ಲೋಪದೋಷಗಳೇ ಕಾರಣ. ನಮ್ಮ ದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚುತ್ತಿದ್ದರೂ ಕಳೆದ ಎರಡು ವರುಷಗಳಲ್ಲಿ ಕೇಂದ್ರ ಸರಕಾರ ಲಕ್ಷಗಟ್ಟಲೆ ಟನ್ ದ್ವಿದಳ ಧಾನ್ಯ ಆಮದು ಮಾಡಿಕೊಂಡದ್ದು ಎಲ್ಲದಕ್ಕಿಂತ ಮುಖ್ಯ ಕಾರಣ. ಇನ್ನಾದರೂ ಸರಕಾರ ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿ, ದ್ವಿದಳ ಧಾನ್ಯ ಬೆಳೆಗಾರರ ಹಿತ ಕಾಯುತ್ತದೆಂದು ಆಶಿಸೋಣ.