ಕೋಲಾರ: ನೀರಿಗಾಗಿ ಹಾಹಾಕಾರ
ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದರು.
ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ ೧೬ ಜೂನ್ ೨೦೧೬ರಿಂದ ನಾಗರಿಕರ ನಿರಂತರ ಧರಣಿ ಆರಂಭ - ಕೋಲಾರ ನಗರದ ಕಾಲೇಜ್ ವೃತ್ತದಲ್ಲಿ - ತಮ್ಮ ಜಿಲ್ಲೆಯ ನೀರಿನ ಕೊರತೆಗೆ ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬೇಡಿಕೆ. ಯಾಕೆಂದರೆ, ೨೦೧೬ರಲ್ಲಿಯೂ ಕೋಲಾರದಲ್ಲಿ ಅತ್ಯಲ್ಪ ಮಳೆ. ಶೇಕಡಾ ೫೦ರಷ್ಟು ಬೆಳೆ ನಷ್ಟವಾಗಿ ರೈತರು ಕಂಗಾಲು.
ಇದು ಕಳೆದ ಹತ್ತು ವರುಷಗಳಿಂದ ಕೋಲಾರದ ಜನರ ನೀರ ಪಾಡು. ನೀರಿಗಾಗಿ ಅಲ್ಲಿನ ಜನರು ಅಂತರ್ಜಲವನ್ನು ಮಿತಿಮೀರಿ ಸೆಳೆಯುವಂತಾಗಿದೆ. ಇದರಿಂದಾಗಿ, ಅಲ್ಲಿ ಅಂತರ್ಜಲದ ಮಟ್ಟ ವಿಪರೀತ ಕುಸಿದಿದೆ. ೨೦೦೬ರಲ್ಲಿ ೪೯ ಅಡಿ ಆಳಕ್ಕಿದ್ದ ಅಂತರ್ಜಲದ ಮಟ್ಟ, ೨೦೧೭ರಲ್ಲಿ ೨೦೨ ಅಡಿಗಳಿಗೆ ಕುಸಿದಿದೆ. ಇದು ಇಡೀ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಕೆಳಮಟ್ಟ. ಕೋಲಾರ ಜಿಲ್ಲೆಯ ಎಲ್ಲ ಐದು ತಾಲೂಕುಗಳಲ್ಲಿ ಅಂತರ್ಜಲದ ಬಳಕೆ ಮಿತಿಮೀರಿದೆ. ಮನೆಬಳಕೆಗಾಗಿ ಮತ್ತು ಕೃಷಿಗಾಗಿ ಮೇಲಕ್ಕೆ ಸೆಳೆಯಲು ಇನ್ನು ಅಂತರ್ಜಲವೇ ಇಲ್ಲ ಎಂಬಂತಾಗಿದೆ.
ಕರ್ನಾಟಕದ ಪೂರ್ವ ಗಡಿ ಜಿಲ್ಲೆ ಕೋಲಾರದಲ್ಲಿ ನಿರಂತರ ನೀರಿನಾಸರೆಯಿಲ್ಲ. ಪಾಲಾರ್, ಪೊನ್ನೈಯಾರ್ ಮತ್ತು ಪೆನ್ನಾರ್ - ಈ ಮೂರು ನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ - ಆದರೆ ಮಳೆಗಾಲದ ಕೆಲವೇ ತಿಂಗಳುಗಳಲ್ಲಿ. ಕೋಲಾರ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಮಳೆ ೭೪೮ ಮಿಮೀ (ಗಮನಿಸಿ: ಕರ್ನಾಟಕದ ಕರಾವಳಿಯಲ್ಲಿ ಇದು ೩,೭೯೭ ಮಿಮೀ.) ಆದರೆ ಮಳೆ ಎಂಬುದು ಕೋಲಾರದಲ್ಲಿ ತೀರಾ ಅನಿಶ್ಚಿತ. ಅಲ್ಲಿ ೨೦೦೫ರಲ್ಲಿ, ೧,೧೯೫ ಮಿಮೀ ಮಳೆ ಆಗಿದ್ದರೆ, ೨೦೧೬ರಲ್ಲಿ ಕೇವಲ ೫೨೧ ಮಿಮೀ ಮಳೆಯಾಗಿದೆ. ಮಳೆಯೂ ಕಡಿಮೆ, ಜಲಮರುಪೂರಣದ ವ್ಯವಸ್ಥೆಗಳೂ ಕಡಿಮೆ ಎಂಬ ಪರಿಸ್ಥಿತಿಯಲ್ಲಿ ೨,೦೦೦ದಿಂದೀಚೆಗೆ ರೈತರು ಕೊಳವೆಬಾವಿಗಳನ್ನು ಕೊರೆಯ ತೊಡಗಿದರು.
ಇದು ಯಾವ ಹಂತಕ್ಕೆ ತಲಪಿದೆಯೆಂದರೆ, ೨೦೧೧ರಿಂದ ೨೦೧೫ರ ವರೆಗಿನ ಕೇವಲ ನಾಲ್ಕು ವರುಷಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಕೊಳವೆಬಾವಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಶೇಕಡಾ ೬೪. ಕೇಂದ್ರ ಅಂತರ್ಜಲ ಮಂಡಲಿಯ ಅಂಕೆಸಂಖ್ಯೆಗಳ ಪ್ರಕಾರ ಕೋಲಾರದ ಕೊಳವೆಬಾವಿಗಳ ಸಂಖ್ಯೆ ೮೪,೨೮೭. ಇದು ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಧಿಕ. ಆದರೆ, “ನೀರಿಗಾಗಿ ಪ್ರತಿಭಟನೆ”ಯ ಮುಂದಾಳುಗಳಲ್ಲಿ ಒಬ್ಬರಾದ ಹೊಳಲಿ ಪ್ರಕಾಶ ಹೇಳುವಂತೆ, ಈ ಮಾಹಿತಿ ಸರಿಯಲ್ಲ. ಕೋಲಾರದಲ್ಲಿ ೧,೨೫,೦೦೦ ಕೊಳವೆಬಾವಿಗಳಿವೆ ಎಂಬುದು ಅವರ ಅಂದಾಜು. ನೀರಿನ ಕೊರತೆಯಿಂದಾಗಿ, ಪ್ರಕಾಶ್ ಸಹಿತ ಹಲವು ರೈತರು ಹೆಚ್ಚು ನೀರು ಬೇಕಾಗುವ ಭತ್ತ ಮತ್ತು ಕಬ್ಬು ಬೆಳೆಸುವುದನ್ನು ತೊರೆದು, ಕಡಿಮೆ ನೀರು ಸಾಕಾಗುವ ಹಿಪ್ಪುನೇರಳೆ, ಸಿರಿಧಾನ್ಯಗಳು ಹಾಗೂ ತರಕಾರಿಗಳನ್ನು ಬೆಳೆಯತೊಡಗಿದ್ದಾರೆ.
ಕೋಲಾರ ಜಿಲ್ಲೆಯ ಬಹುಪಾಲು ಜನರದು ಕೃಷಿ ಅವಲಂಬಿಸಿದ ಬದುಕು. ಅವರ ಸಂಕಟಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಅಂತರ್ಜಲದ ಮಟ್ಟ ವರುಷದಿಂದ ವರುಷಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಕೊಳವೆಬಾವಿಗಳೂ ಬತ್ತಿ ಹೋಗುತ್ತಿವೆ. ಜಿಲ್ಲಾಡಳಿತ ೨೦೧೭ರಲ್ಲಿ ಕೊರೆಸಿದ ೧,೭೦೦ ಕೊಳವೆಬಾವಿಗಳಲ್ಲಿ ಸುಮಾರು ೫೦೦ರಲ್ಲಿ ನೀರೇ ಸಿಗಲಿಲ್ಲ ಎನ್ನುತ್ತಾರೆ ಐಬಿಎಂ ಉದ್ಯೋಗಿ ಜಲಕಂಠ. ಕೋಲಾರದ ಹಿರಿಯ ಭೂವಿಜ್ನಾನಿ ಎಂ. ತಿಪ್ಪೇಸ್ವಾಮಿ ನೀಡುವ ಮಾಹಿತಿ ಹೀಗಿದೆ: ಜಿಲ್ಲೆಯ ಶೇಕಡಾ ೪೦ರಷ್ಟು (ಅಂದರೆ ೮೪,೨೮೭ರಲ್ಲಿ ೩೩,೭೧೫) ಕೊಳವೆಬಾವಿಗಳು ಬರಿದಾಗಿವೆ. ಇದರಿಂದಾಗಿ ಜನರು ಇನ್ನಷ್ಟು ಆಳಕ್ಕೆ ಕೊಳವೆಬಾವಿ ಕೊರೆಸತೊಡಗಿದರು. ಇಸವಿ ೨೦೦೦ದಿಂದ ೨೦೦೨ರ ವರೆಗೆ ೩೦೦ ಅಡಿ ಆಳಕ್ಕೆ ಕೊರೆಸುತ್ತಿದ್ದರೆ, ಈಗ ೨೦೧೭ರಲ್ಲಿ ೧,೮೦೦ ಅಡಿ ಆಳಕ್ಕೆ ಲಗ್ಗೆಯಿಡುತ್ತಿದ್ದಾರೆ! ಕೋಲಾರದ ಕೊಳವೆಬಾವಿಗಳ ಸರಾಸರಿ ಆಳ ೧,೨೯೦ ಅಡಿ. ಈ ಆಳಕ್ಕೆ ಒಂದು ಕೊಳವೆಬಾವಿ ಕೊರೆಸುವ ವೆಚ್ಚ ರೂ.೬,೮೮,೦೦೦. ಈ ಲೆಕ್ಕಾಚಾರದಂತೆ ಬತ್ತಿಹೋಗಿರುವ ೩೩,೭೧೫ ಕೊಳವೆಬಾವಿಗಳಿಂದಾಗಿ ರೂ. ೨,೩೧೯ ಕೋಟಿ ಮಣ್ಣು ಪಾಲಾಗಿದೆ!
ಕೋಲಾರ ಜಿಲ್ಲೆಯ ನೀರಿನ ಸಂಕಟಕ್ಕೆ ಕೊಳ್ಳಿಯಿಟ್ಟದ್ದು ನೀಲಗಿರಿ ತೋಟಗಳು. ಪ್ರತಿಯೊಂದು ನೀಲಗಿರಿ ಮರ ದಿನಕ್ಕೆ ೧೫ - ೨೦ ಲೀಟರ್ ನೀರನ್ನು ನೆಲದಾಳದಿಂದ ಹೀರಿ ಎಲೆಗಳ ಮೂಲಕ ಆವಿಯಾಗಿಸುತ್ತದೆ. ೧೯೬೦ರ ದಶಕದಲ್ಲಿ ಅರಣ್ಯೀಕರಣದ ಹೆಸರಿನಲ್ಲಿ ಆಸ್ಟ್ರೇಲಿಯಾದ ಈ ಮರವನ್ನು ಕೋಲಾರಕ್ಕೆ ಪರಿಚಯಿಸಿದ್ದು ಅರಣ್ಯ ಇಲಾಖೆ. ಯಾವುದೇ ಪೋಷಣೆ ಅಗತ್ಯವಿಲ್ಲದ ನೀಲಗಿರಿ ಗಿಡಗಳು ಬೆಳೆದು ಏಳು ವರುಷಗಳಲ್ಲಿ ಕಟಾವಿಗೆ ತಯಾರು. ಇದನ್ನು ಬೆಳೆಸುವ ವೆಚ್ಚ ಹೆಕ್ಟೇರಿಗೆ ರೂ.೮,೮೦೦. ಇದರಿಂದ ಆದಾಯ ರೂ.೪೦,೦೦೦. ನೀಲಗಿರಿ ತೋಟಗಳು ಅಂತರ್ಜಲ ಕುಸಿತಕ್ಕೆ ಕಾರಣ ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಅನಂತರ ಎಚ್ಚೆತ್ತುಕೊಂಡ ರಾಜ್ಯ ಸರಕಾರ, ಅರಣ್ಯ ಇಲಾಖೆಗೆ ಹೀಗೆಂದು ಆದೇಶ ನೀಡಿದೆ: ಬರಡು ಜಮೀನಿನಲ್ಲಿ ಮಾತ್ರ ನೀಲಗಿರಿ ಬೆಳೆಸಬೇಕು. ಆದರೆ, ಖಾಸಗಿ ಜಮೀನಿನಲ್ಲಿ ನೀಲಗಿರಿ ಬೆಳೆಸುವುದನ್ನು ನಿಷೇಧಿಸಲಾಗಿಲ್ಲ!
ಜಿಲ್ಲಾಡಳಿತ ಏನು ಮಾಡುತ್ತಿದೆ? ೨೦೧೦ರಿಂದ ೨೦೧೬ರ ಅವಧಿಯಲ್ಲಿ ತೋಟಗಾರಿಕೆ ಇಲಾಖೆ ೨೦೦ ರೈತರು ಕೃಷಿ ಹೊಂಡ ನಿರ್ಮಿಸಲು ನೆರವು ನೀಡಿದೆ; ೨೦ ಸಮುದಾಯ ಕೃಷಿ ಹೊಂಡಗಳ ನಿರ್ಮಾಣಕ್ಕೂ ಸಹಾಯ ಮಾಡಿದೆ (ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅನುಸಾರ). ಮೇವಿಲ್ಲದೆ ಸೊರಗಿರುವ ಸಾವಿರಾರು ಜಾನುವಾರುಗಳಿಗೆ ಈ ಬೇಸಗೆಯಲ್ಲಿ ವಾರಕ್ಕೆ ಎರಡು ಸಲ ಮೇವು ಒದಗಿಸಲು ಪಶುಸಂಗೋಪನಾ ಇಲಾಖೆ ಮಾಡಿರುವ ವ್ಯವಸ್ಥೆ ಏನೇನೂ ಸಾಲದಾಗಿದೆ. “ಎತ್ತಿನ ಹೊಳೆ ಯೋಜನೆ" ಮೂಲಕ ಪಶ್ಚಿಮ ಘಟ್ಟದಿಂದ ಕೋಲಾರಕ್ಕೆ ನೀರು ತರುವ ಪ್ರಯತ್ನ ನೆನೆಗುದಿಗೆ ಬಿದ್ದಿದೆ.
ಕೋಲಾರ ಜಿಲ್ಲೆಯಲ್ಲಿ ಶತಮಾನಗಳಿಂದ ಜನರು ಬದುಕು ಸಾಗಿಸುತ್ತಿದ್ದಾರೆ. ಅಲ್ಲಿ ಪೂರ್ವಿಕರು ಮಳೆನೀರನ್ನು ಸರಣಿ-ಕೆರೆಗಳಲ್ಲಿ ಹಿಡಿದಿಟ್ಟು ನೀರಿನ ಬವಣೆಯಿಂದ ಪಾರಾಗುತ್ತಿದ್ದರು. ನಾವು ಇಂದು ಅಲ್ಲಿನ ಚರಿತ್ರೆಯಿಂದ ಪಾಠ ಕಲಿಯಬೇಕಾಗಿದೆ. ಅಲ್ಲಿನ ಜಮೀನಿಗೆ ಬೀಳುವ ಮಳೆಯನ್ನೆಲ್ಲ ಇಂಗಿಸಬೇಕಾಗಿದೆ. ಇದು, ಈ ವರುಷ ಉತ್ತಮ ಮಳೆಯಾಗುವ ಮುನ್ಸೂಚನೆಗಳ ಹಿನ್ನೆಲೆಯಲ್ಲಿ ತುರ್ತಾಗಿ ಆಗಬೇಕಾದ ಕೆಲಸ. ಜೊತೆಗೆ, ಹೆಚ್ಚು ನೀರು ಬೇಕಾಗುವ ಬೆಳೆಗಳ ಬದಲಾಗಿ ಕಡಿಮೆ ನೀರು ಸಾಕಾಗುವ ಬೆಳೆಗಳನ್ನು ಬೆಳೆಸಬೇಕಾಗಿದೆ. ಸಿರಿಧಾನ್ಯಗಳು ಕಿಲೋಕ್ಕೆ ರೂ.೮೦ರಿಂದ ರೂ.೧೨೦ ದರದಲ್ಲಿ ನಗರಗಳಲ್ಲಿ ಈಗ ಮಾರಾಟ ಆಗುತ್ತಿರುವ ಕಾರಣ, ಅವುಗಳ ಬೇಸಾಯ ಸೂಕ್ತ ಆಯ್ಕೆ. ಹಾಗೂ, ನೀರು ನುಂಗುವ ನೀಲಗಿರಿಯಂತಹ ಮರ ಬೆಳೆಸುವುದನ್ನು ತಾವಾಗಿಯೇ ತೊರೆಯಬೇಕಾಗಿದೆ. ಈ ಕ್ರಮಗಳನ್ನು ಅಳವಡಿಸಿದರೆ, ಮುಂದಿನ ಬೇಸಗೆಯಲ್ಲಿ ಕೋಲಾರದಲ್ಲಿ ನೀರಿಗಾಗಿ ಹಾಹಾಕಾರ ಇಲ್ಲವಾದೀತು, ಅಲ್ಲವೇ?
ಫೋಟೋ: ಮಾರುತಿ ಎಚ್. ಕಟ್ಟಿಮನಿ