ಪ್ರೇಮ ಪತ್ರ (ಕಥೆ)
ಓ ಪ್ರಿಯಾ,
ಹೇಗಿದ್ದೀಯಾ? ಅದೆಷ್ಟು ವರ್ಷ ಆಗೋಯ್ತೊ ನಿನ್ನ ನೋಡದೆ! ಯಾಕೊ ನಿನ್ನ ಮುನಿಸಿನ್ನೂ ಹೋಗಿಲ್ವೇನೊ? ಅಲ್ಲ ಅಲ್ಲ ಅದು ಮುನಿಸಲ್ಲ. ಮತ್ತೆ ನಾನೆ ನಿನ್ನ ಮಾತಾಡಿಸಬೇಕು ಅಂತ ಇಷ್ಟು ವರ್ಷ ಕಾದೆಯೇನೊ? ಕೊಬ್ಬು ಕಣೊ ನಿನಗೆ.
ಅಲ್ಲಾ ಆ ದಿನ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಅಕಸ್ಮಾತ್ ನೀ ಸಿಕ್ಕಾಗ ಆದ ಸಂತೋಷದಲ್ಲಿ ಮಾತೆ ಹೊರಡಲಿಲ್ಲ. ನೀನೂ ಅವಸರದಲ್ಲಿ ಅಡ್ರೆಸ್ ಕೊಟ್ಟು ಹೊರಟೋದೆ. ಬಾ ಅಂತನೂ ಹೇಳಿಲ್ಲ. ಈಗಲೂ ನಿನ್ನ ಗಿಮಿಕ್ ಬುದ್ಧಿ ಬಿಟ್ಟಿಲ್ಲಾ ಅನ್ನು. ಇರಲಿ ಪರವಾಗಿಲ್ಲ. ಸದ್ಯ ನನ್ನ ಗುರುತಿಸಿ ಮಾತಾಡಿದ್ಯಲ್ಲ; ಅಷ್ಟೆ ಸಾಕು ಕಣೊ.
ನೋಡು ನನಗೆ ಸುತ್ತಿ ಬಳಸಿ ಮಾತಾಡೋದು ಗೊತ್ತಿಲ್ಲ. ಅದು ನಿನಗೂ ಗೊತ್ತು. ಅದಕೆ ನೋಡು ಹಳೆ ಸಲುಗೆಯಿಂದ ಅದೇ ನೆನಪಲ್ಲಿ ಡೈರೆಕ್ಟಾಗಿ ಪತ್ರ ಬರಿತಾ ಇದ್ದೀನಿ.
ಹೌದು, ಕೆಲಸಕ್ಕೆ ವಿದಾಯ ಹೇಳಿ ಹತ್ತು ವರ್ಷ ಆಯಿತು, ಈಗ ಇಲ್ಲೆ ಬಂದು ಸೆಟ್ಲ ಆಗಿದೀನಿ ಅಂದ್ಯಲ್ಲ, ಏನೊ ಕಾರಣ ಹೇಗಿದೆ ಜೀವನ ಹೆಂಡತಿ ಮಕ್ಕಳು, ಮನೆ, ಸಂಸಾರ?
ಎಲ್ಲ ತಿಳ್ಕೊಳೊ ಆಸೆ ಹುಚ್ಚ್ ಮುಂಡೆ ಮನಸಿಗೆ! ಆ ಮೊದಲಿನ ಸಲಿಗೆಯ ಮಾತುಗಳು ಬಹುಶಃ ನಾ ಸಾಯೊತನಕ ನನ್ನ ಜೊತೆ ಅಂಟಿಕೊಂಡೇ ಇರುತ್ತೇನೊ ಅನಿಸುತ್ತೆ ಕಣೊ ನಿನ್ನ ನೆನಪಾದಾಗೆಲ್ಲ . ಈಗ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ ಸಿಕ್ಕಿದ್ದೀಯಾ. ಹಂಗಂಗೆ ನಿನ್ನ ಗೋಳು ಹೊಯ್ಕೋಳೊ ಬುದ್ದಿ ಇನ್ನೂ ಕಡಿಮೆ ಆಗಲಿಲ್ಲ ಕಣೊ. ದೇಹಕ್ಕೆ ಎಷ್ಟು ವರ್ಷ ಆದರೇನು; ಮನಸ್ಸು ಇನ್ನೂ ಸಣ್ಣ ಬುದ್ದಿ ಬಿಟ್ಟಿಲ್ಲ. ಅದೂ ನಿನ್ನ ವಿಷಯದಲ್ಲಿ ನಾನು ಹಾಗೇ ಇದ್ದೀನಿ. ಆದರೆ ಇದು ಯಾಕೆ ಹೀಗೆ? ಇದುವರೆಗೂ ಅರ್ಥ ಆಗದ ಪ್ರಶ್ನೆ. ಒಮ್ಮೊಮ್ಮೆ ಅನಿಸುತ್ತದೆ ; ನಿನಗೆ ನನ್ನ ಒಳ ಮನಸ್ಸು ತುಂಬಾ ತುಂಬಾ ಅರ್ಪಿಸಿಕೊಂಡಿದೆಯಾ ಅನ್ನುವ ಸಂಶಯ. ಇದರ ಬಗ್ಗೆ ಅಷ್ಟೊಂದು ಲಕ್ಷ ಇರಲಿಲ್ಲ. ಆದರೆ ಈಗ ನೀನು ಸಿಕ್ಕ ಮೇಲೆ ಒಳಗಿನ ಭಾವನೆಗಳೆಲ್ಲ ಮಳೆಗಾಲದಲ್ಲಿ ದೀಪದ ಹುಳುಗಳು ರೆಕ್ಕೆ ಬಡಿದು ಮನೆಯಲ್ಲಿ ಪ್ರವೇಶ ಮಾಡಿದಂತೆ ಸಂದಿ ಗೊಂದಿಗಳಿಂದ ಜೀವ ತಳೆದು ಹಾರಾಡುತ್ತಿವೆ. ಅದೆಷ್ಟು ಸಂತೋಷನೊ ನನ್ನ ಮನಸ್ಸಿಗೆ ನಿನ್ನ ಕಂಡರೆ. ಹಂಗೆ ಗಾಳಿಯಲ್ಲಿ ತೇಲಾಡುತ್ತೆ ಮನಸ್ಸು ಹೃದಯ. ಅಚ್ಚುಕಟ್ಟಾಗಿ ಊಟ ಬಡಿಸಿ ಸಾಂತ್ವನ ಹೇಳಿ ಲಾಲಿ ಹಾಡಿ ಮಲಗಿಸಿದ ಅನುಭವ ನೀ ಸಿಕ್ಕಿರೋದು.
ಅದಕೆ ಹೇಳೋದು ಹಿರಿಯರು “ಭೂಮಿ ರೌಂಡಾಗಿದೆ. ಈ ಕೊನೆ ಇದ್ದವನು ಆ ಕೊನೆಯಿಂದ ತಿರುಗಿ ಮೂಲ ಸ್ಥಾನಕ್ಕೆ ಬಂದೇ ಬರ್ತಾನೆ ಹಣೆಯಲ್ಲಿ ಬರೆದಿದ್ದರೆ” ನಿಜ ಆಗೋಯ್ತು ಕಣೊ. I am soooo happy!
ಅದು ಹೇಂಗೊ ಹೇಳಲಿ ಇಷ್ಟು ವರ್ಷ ತಡೆದಿಟ್ಟ ನೂರು ಮಾತುಗಳ ಸರಪಳಿ ಗಂಟಿಲ್ಲದಂತೆ ಒಂದೊಂದು ಊದಿಬಿಡುವ ಆತುರ ಕಣೊ. ಅಲ್ಲಿ ನಾನಿಲ್ಲ, ಬರೀ ನೀನೆ ಎಲ್ಲ. ಸಾಕು ಕಣೊ ಜನ್ಮಕ್ಕೆ ಇಷ್ಟು. ಒಂದು ರೀತಿ ತೃಪ್ತಿಯ ಭಾವ. ಇರುವಷ್ಟು ಕಾಲ ನೆನಪಿಸಿಕೊಂಡಷ್ಟೂ ಮುಗಿಯದ ನೆನಪುಗಳು ಇಂದು ಅತ್ಯಂತ ಮುದ ಕೊಡುತ್ತಿವೆ. ಎಷ್ಟು ಬರೆದರೂ ಮುಗಿಯದು ಅಕ್ಷರಗಳ ಸಾಲು. ಬಹುಶಃ ನೀನು ನನ್ನ ಮುಂದೆ ನಿಂತಿದ್ದರೆ ಇಷ್ಟು ಬಿಚ್ಚು ಮನಸಿನಿಂದ ಮನದ ಮಾತು ಹೇಳಲು ಸಾಧ್ಯ ಆಗುತ್ತಿರಲಿಲ್ಲವೇನೊ. ಏಕೆಂದರೆ ಇತ್ತೀಚೆಗೆ ಬರವಣಿಗೆಯಲ್ಲಿ ಸಂಪೂರ್ಣ ಮುಳುಗೋಗಿದೀನಿ. ಬಾಯಲ್ಲಿ ಆಡಲಾಗದ ಮಾತು ಮನಸು ಸ್ಪಷ್ಟವಾಗಿ ಮುಂದಿಡುತ್ತಿದೆ ಕಪ್ಪು ಅಕ್ಷರದಲ್ಲಿ ಕೆತ್ತಿ.
ದೂರದ ಆಗಸದಲ್ಲಿ ಸೂರ್ಯ ತನ್ನ ಕಾರ್ಯ ಮುಗಿಸಿ ಇಳೆಗೆ ಕಣ್ಣೊಡೆದು ಹೊರಟಂತೆ ಅಂದು ನೀನು ನನಗೆ ವಿದಾಯ ಹೇಳಿ ಆಗಸದ ತೇರನೇರಿ ವಿದೇಶದತ್ತ ಹೊರಟಾಗ ಪಟ್ಟ ಸಂಕಟ ಇನ್ನೂ ಮರೆತಿಲ್ಲ ಕಣೊ! ಅದೆಷ್ಟು ದಿನ, ತಿಂಗಳು,ವರ್ಷ ದಿಂಬಿಗೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಮೂಖವಾಗಿ ಅತ್ತಿಲ್ಲ. ಆದರೆ ಹೋಗುವುದು ಅನಿವಾರ್ಯವಾಗಿತ್ತು ನಿನಗೆ. ಎಲ್ಲಾ ಗೊತ್ತಿರುವ ಮನಸು ಅಳುವುದನ್ನು ಮಾತ್ರ ನಿಲ್ಲಿಸಲೆ ಇಲ್ಲ. ನಿನ್ನ ನೆನಪಾದಾಗಲೆಲ್ಲ ಕಣ್ಣು ಮಂಜಾಗುವುದು ಇನ್ನೂ ನಿಂತಿಲ್ಲ. ಎಲ್ಲವನ್ನು ನಿನ್ನಲ್ಲಿ ಊದಿಬಿಡುವ ಮನಸ್ಸು ಆಗಾಗ ನನ್ನ ಚಿತ್ತ ಕೆದಕುತ್ತಿದೆ. ಆದರೂ ನಾನು ಹೇಳುವುದಿಲ್ಲ. ಯಾಕೆ ಗೊತ್ತಾ ನಿನ್ನ ಮೇಲಿನ ಪ್ರೀತಿ ಹಾಗೆ ಮಾಡಿಸುತ್ತಿದೆ. ನನ್ನ ನೋವಿನ ಒಂದು ತೊಟ್ಟು ಹನಿ ಕೂಡಾ ನಿನ್ನ ತಾಕದಿರಲಿ.
ಜೀವನದ ಭೇಟಿ ಆಕಸ್ಮಿಕ. ಅಲ್ಲಿ ನನ್ನ ನಿನ್ನ ಪ್ರೀತಿ ಅನಿರೀಕ್ಷಿತ. ಅಘಾದತೆಯ ಕಡಲ ಕೊರೆತದಂತೆ ಪ್ರೀತಿ ಹುಚ್ಚು ಅಮಲೇರಿರುವ ಆ ಘಳಿಗೆ ಮರೆಯಾಗದ ನೆನಪು. ಜುಳು ಜುಳು ಹರಿಯುವ ನದಿಯ ಮೂಲ ಪಾತ್ರ ನೀನು. ಇಳೆ ಅಪ್ಪುವ ಕೊನೆಯ ಝರಿ ನಾನು. ಅಲ್ಲಿ ಬೆಳಗಿನ ಕಿರಣಗಳ ಲಾಸ್ಯ ಝರಿಯನಪ್ಪಿದಂತೆ ಹೊಳೆಯುವ ನಕ್ಷತ್ರ ನಿನ್ನ ಮುಖಾರವಿಂದ.
ಈ ಕಲ್ಪನೆಯಲ್ಲಿ ಗದ್ದಕ್ಕೆ ಕೈ ಇಟ್ಟು ಆಕಾಶದತ್ತ ಮುಖ ಮಾಡಿ ಕುಳಿತು ಅದೆಷ್ಟು ಸಮಯ ಕಳೆದಿದ್ದೇನೊ ಗೊತ್ತಿಲ್ಲ. ಖುಷಿಯ ಕ್ಷಣ ನನ್ನೊತ್ತಿಗೆಯ ಬಿಂದು. ಹಣೆಗೆ ತಿಲಕವಿಟ್ಟಂತೆ ನನ್ನ ಬಾಳಲ್ಲಿ ನೆನಪಾಗಿ ನಿಂತ ನೀ ಸಿಕ್ಕಿರುವುದೊಂದು ಕನಸೊ ನನಸೊ ಅನ್ನುವಂತಿದೆ.
ಇರಲಿ ಈ ಒಕ್ಕಣೆಯ ಬರಹ ನನ್ನೊಂದಿಗೆ. ನಿನಗೆ ಕಳಿಸುವುದಿಲ್ಲ. ಹೀಗೆ ಮನಸು ಬಂದಾಗಲೆಲ್ಲ, ಭಾವ ಉಕ್ಕಿದಾಗಲೆಲ್ಲ ಆಗಾಗ ಉದುರಿಸಿ ಬಿಡಿಸುವೆ ಕಪ್ಪು ಮೊಗವ ಬಿಳಿ ಹಾಳೆಯ ಮಡಿಲಲ್ಲಿ ಡೈರಿಯಂತೆ.
ಗೆಳೆಯಾ ನಾ ಹೋಗಿ ಬರಲೆ? ಎಲ್ಲಿಗೆ ಎಂದು ಕೇಳುವೆಯಾ? ನಿನಗೇಳದ ಸತ್ಯ ಇಲ್ಲಿ ಬರೆದು ಬಿಡುವೆ ಇಂದು. ಅದೂ ಕೂಡ ನಿನ್ನ ನೆನಪ ಹಂಚಿಕೊಳ್ಳಲಿ ಅಲ್ವಾ? ಅದೆ, ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮ ದಲ್ಲಿ ಸೇರಿ ಶಿಲುಬೆಯ ಆಶ್ರಯ ಪಡೆದ ದೇಗುಲಕೆ ಹೊರಡುವ ಹೊತ್ತಾಯಿತಲ್ಲ. ಪಾದ್ರಿಗಳ ಸಮ್ಮುಖದಲ್ಲಿ ಪ್ರಾರ್ಥನೆ ತಪ್ಪದೆ ಸಲ್ಲಿಸಬೇಕಲ್ಲ. ಇದು ನೀನಿತ್ತ ನೆಮ್ಮದಿಯ ಕಾಣಿಕೆ. ಅನೇಕ ವರ್ಷಗಳಿಂದ ಅಪ್ಪಿಕೊಂಡಿರುವೆ ನಿನ್ನ ಸುಂದರ ನೆನಪಲ್ಲಿ!!
ಪತ್ರದ ಮೇಲೆ ಮತ್ತೊಮ್ಮೆ ಕಣ್ಣಾಡಿಸಿ ತನ್ನ ಬರಹಕ್ಕೆ ತಾನೆ ಬೆನ್ನು ತಟ್ಟಿಕೊಂಡು ಪತ್ರಿಕೆಯವರು ಆಹ್ವಾನವಿತ್ತ ಪ್ರೇಮಿಗಳ ದಿನಕ್ಕಾಗಿ ” ಪ್ರೇಮ ಪತ್ರ ” ವನ್ನು ಬರೆದು ಮುಗಿಸಿದ ಆಶಾ ಪೋಸ್ಟ್ ಮಾಡಿ ರಾತ್ರಿ ರವಿಗೆ ತನ್ನ ಬರಹ ತೋರಿಸಬೇಕು, ಅವನ ಪ್ರತಿಕ್ರಿಯೆ ಅರಿಯಬೇಕೆನ್ನುವ ಯೋಚನೆ ಮನದೊಳಗೆಲ್ಲ. ಅಲ್ಲಿ ಒಂದು ತೃಪ್ತಿಯ ನಗೆ ಮಿಂಚಿ ಮಾಯವಾಗುತ್ತದೆ ಮುಖ ಊರಗಲವಾಗಿ.
ಆಕಾಶವೆ ಬೀಳಲಿ ಮೇಲೆ
ನಾನೆಂದು ನಿನ್ನವನು .….
ಗುಣಗುಣಿಸುವ ಗಾನ ಅವಳಿಗರಿವಿಲ್ಲದಂತೆ ಹಾಡಿದಾಗ ಅಯ್ಯೋ ಮನಸೆ ನಾನು ಬರೆದಿದ್ದು ಪ್ರೇಮ ಪತ್ರ ಕಣೆ. ನಿಜವಾಗಿಯೂ ಅಂದುಕೊಂಡೆಯಾ, ತತ್ತರಿಕೆ!
ತಲೆಗೊಂದು ಏಟು ಬಿಗಿದು ಅಡಿಗೆಯಲ್ಲಿ ಮಗ್ನಳಾಗುತ್ತಾಳೆ.
22-2-2017. 6.15pm