ಮರುಕಥನ-ವ್ಯಾಸ ಗದ್ದುಗೆಯ ಮೇಲೆ ಕುಳಿತ ದಲಿತ

ಮರುಕಥನ-ವ್ಯಾಸ ಗದ್ದುಗೆಯ ಮೇಲೆ ಕುಳಿತ ದಲಿತ

(ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿರುವ ಕಥಾಸಂಸ್ಕೃತಿ ಎಂಬ ಪುಸ್ತಕದಲ್ಲಿರುವ ಒಂದು ಕಥೆಯ ಸಂಗ್ರಹ)
ಅವನ ಹೆಸರು ರೋಮಹರ್ಷಣ, ಸೂತಜಾತಿಯವನು. ಸಾರಥಿಯ ಕೆಲಸ, ಕುದುರೆಗಳನ್ನು ನೋಡಿಕೊಳ್ಳುವುದು, ಹೊಗಳು ಭಟರ ಕೆಲಸ ಸಾಮಾನ್ಯವಾಗಿ ಇವರವು. ವೇದ ವಿದ್ಯೆಯ ಅಧಿಕಾರ ಇವರಿಗಿರಲಿಲ್ಲ.
ವ್ಯಾಸ ಮಹರ್ಷಿಗಳು ಉದಾರ ವಿಚಾರ ಉಳ್ಳವರು. ಈತನ ಆಸಕ್ತಿಯನ್ನು , ಯೋಗ್ಯತೆಯನ್ನು ಗಮನಿಸಿ ಶಿಷ್ಯನಾಗಿ ಸ್ವೀಕರಿಸಿದರು. ರೋಮಹರ್ಷಣರು ವ್ಯಾಸರ ಕೃಪೆಯಿಂದ ಪುರಾಣಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿ ಅನೇಕ ಗ್ರಂಥ ರಚಿಸಿದರು.
ಒಂದು ಸಾರಿ ನೈಮಿಷಾರಣ್ಯದಲ್ಲಿ ಒಂದು ಯಜ್ಞ ಏರ್ಪಾಡಾಗಿತ್ತು, ಋಷಿಗಳು ಖಾಲಿ ಸಮಯ ಕಳೆಯಲು ಪುರಾಣ ಪುಣ್ಯಕತೆಗಳನ್ನು ಕೇಳಲು ವೇದವ್ಯಾಸರನ್ನು ಕರೆದರು. ಅವರು ರೋಮಹರ್ಷಣರಿಂದ ಅವನ್ನು ಕೇಳಿ ತಿಳಿವಳಿಕೆ ಪಡೆಯಲು ಹೇಳಿದರು. ಕೆಲವು ಋಷಿಗಳು ' ಅವರು ಸೂತ ಜಾತಿಯವರಲ್ಲವೇ? ಅವರಿಗೆ ಉನ್ನತ ಸ್ಥಾನವನ್ನು ಕೊಡುವುದು ಹೇಗೆ?' ಎಂದರು.
ವ್ಯಾಸರು ಹೇಳಿದರು - "ಋಷಿಗಳೇ. ವಿದ್ಯೆಗೆ ಜಾತಿ , ಧರ್ಮ ಇಲ್ಲ, ರೋಮಹರ್ಷಣರ ವಿದ್ಯೆಯು ಜಾತಿ-ಧರ್ಮವನ್ನು ಮೀರಿದ್ದು , ನೀವು ಗುಣಗ್ರಾಹಿಯಾಗಿರಿ, ಜಾತಿಯನ್ನು ನೋಡಬೇಡಿ " ಎಂದು ಅವರನ್ನು ಒಪ್ಪಿಸಿದರು.
ಆ ಪ್ರಕಾರ ಋಷಿಗಳು ರೋಮಹರ್ಷಣರನ್ನು ಕರೆದು ಅವರಿಗೆ ಉನ್ನತವಾದ ವ್ಯಾಸಪೀಠದ ಮೇಲೆ ಕೂರಿಸಿ ಗೌರವಿಸಿ ಅವರಿಂದ ತಿಳಿವಳಿಕೆಯನ್ನು ಪಡೆಯತೊಡಗಿದರು.
ಅತ್ತ ಅದೇ ಸಮಯಕ್ಕೆ ಮಹಾಭಾರತ ಯುದ್ಧವು ನಡೆಯುತ್ತಿತ್ತು , ಕೃಷ್ಣ ಬಲರಾಮರು ಯಾವದೇ ಪಕ್ಷವನ್ನು ವಹಿಸದಿರಲು ನಿರ್ಧರಿಸಿದರು, ಕೃಷ್ಣನು ಕೇವಲ ಸಾರಥಿ ಮತ್ತು ಸಲಹೆಯನ್ನು ಪಾಂಡವರಿಗೆ ಕೊಡುವವನಾದನು. ಬಲರಾಮನು ತೀರ್ಥಯಾತ್ರೆಗೆ ಹೊರಟನು.
ಆ ಬಲರಾಮನು ಇಲ್ಲಿಗೆ ಬಂದನು! ಕೆಳ ಜಾತಿಯವನು ವ್ಯಾಸ ಗದ್ದುಗೆಯ ಮೇಲೆ ಕೂತು ಪುರಾಣ ಕತೆ ಹೇಳುತ್ತಿರುವುದನ್ನು , ಋಷಿಗಳು ಕೆಳಗೆ ಕೂತಿರುವುದನ್ನು ನೋಡಿದನು. ಬಲರಾಮನನ್ನು ನೋಡಿ ಎಲ್ಲ ಋಷಿಗಳು ಎದ್ದು ನಿಂತು ಗೌರವ ಸೂಚಿಸಿ ಸ್ವಾಗತಿಸಿದರು.
ರೋಮಹರ್ಷಣರು ವ್ಯಾಸ ಗದ್ದುಗೆಯ ಮೇಲೆ ಕುಳಿತೇ ಇದ್ದರು. ಕೆಲ ಹೊತ್ತು ತಮ್ಮ ಪ್ರವಚನವನ್ನು ನಿಲ್ಲಿಸಿದರು ಅಷ್ಟೇ. ಅವರ ಈ ವತ೯ನೆಯು ಬಲರಾಮನಿಗೆ ಅವಿಧೇಯತೆಯದು, ಅಹಂಕಾರದ್ದು ಅನಿಸಿತು. ಅವನನ್ನು ಶಿಕ್ಷಿಸಬೇಕೆಂದು ನಿರ್ಧರಿಸಿ ವ್ಯಾಸ ಗದ್ದುಗೆಯ ಮೇಲೆ ಕುಳಿತಿದ್ದಂತೆಯೇ ರೋಮಹರ್ಷಣರನ್ನು ಕೊಂದುಬಿಟ್ಟನು! ಆಗ ಅಲ್ಲಿ ಹಾಹಾಕಾರ ಉಂಟಾಯಿತು. ಎಲ್ಲ ಋಷಿಗಳು ಕುಪಿತರೂ ದುಃಖಿತರೂ ಆದರು. ಅವರು ಬಲರಾಮನ ದುಡುಕಿಗೆ ಆಕ್ಷೇಪಿಸಿದರು. " ರೋಮಹರ್ಷಣರು ವೇದ ವ್ಯಾಸರ ಪುರಾಣಶಾಸ್ತ್ರ ಪಾರಂಗತ ವಿದ್ವಾಂಸ ಶಿಷ್ಯರು . ಅವರು ಬ್ರಾಹ್ಮಣ ಜಾತಿಯವರಲ್ಲದಿದ್ದರೂ ವ್ಯಾಸ ಆಸನದಲ್ಲಿ ಕುಳಿತವರಿಗೆ ವ್ಯಾಸ ಪದವಿ ಪ್ರಾಪ್ತವಾಗಿರುತ್ತದೆ , ಅವರು ಅಲ್ಲಿಂದ ಎದ್ದಿದ್ದರೆ ವ್ಯಾಸ ಆಸನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಆ ಆಸನದ ಮರ್ಯಾದ ಹಾಗೂ ಗೌರವಕ್ಕಾಗಿ ನೀವು ಬಂದಾಗ ಅವರು ಎದ್ದು ನಿಲ್ಲಲಿಲ್ಲ. ವ್ಯಾಸ ಗದ್ದುಗೆಯ ಮೇಲೆ ಕೂತವನು ಬ್ರಾಹ್ಮಣನೇ ಆಗುತ್ತಾನೆ. ಅವರನ್ನು ಕೊಂದ ಕಾರಣ ನಿಮಗೆ ಬ್ರಹ್ಮಹತ್ಯೆಯ ದೋಷ ಬಂದಿತು, ಅಷ್ಟೇ ಅಲ್ಲ , ಅವರ ತಿಳುವಳಿಕೆ ನಮಗೆ ದೊರಕದೆ ಅವರ ವಿದ್ಯೆ ಲೋಪವಾಗುವ ಹಾಗೆ ಮಾಡಿದಿರಿ " ಎಂದರು.
ನಂತರ ರೋಮಹರ್ಷಣರ ಮಗನನ್ನು ಕರೆಸಿ ವ್ಯಾಸ ಗದ್ದುಗೆಯ ಮೇಲೆ ಕೊಡಿಸಿದರು. ಆತನಿಂದ ಪುರಾಣ ಪ್ರವಚನ ಮುಂದುವರೆಯಿತು. ಅವನಲ್ಲಿ ಬಲರಾಮನು ಕ್ಷಮೆ ಕೇಳಿದನು. ನಂತರ ಬ್ರಹ್ಮಹತ್ಯೆಯ ದೋಷ ನಿವಾರಣೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೊರಟು ಹೋದನು.
(ಈ ಕತೆ ಪದ್ಮ ಪುರಾಣದಲ್ಲಿದೆಯಂತೆ)

Rating
No votes yet