ಮಾನಿನಿಯ ಮಹದಾಸೆ!
ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!!
ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ...
'10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ ಸಾರ್ಥಕ್ಯ ತಾಯ್ತನದಲ್ಲಿ ಎಂದು ಎಲ್ಲರಿಗೂ ಅನ್ನಿಸುವುದು ಅದೆಷ್ಟು ಸತ್ಯ ಎಂದು ಈಗ ತಿಳಿಯುತ್ತಿದೆ. ಎಂದು ಅಮ್ಮಾ ಎನ್ನುವಳೋ, ಅದೆಂದು ತನ್ನ ಪುಟ್ಟ ಪಾದಗಳ ಬಳಸಿ ನನ್ನ ಬಳಿ ಸಾರುವಳೋ ಎಂಬ ತವಕ ದಿನೇ ದಿನೇ ಕೆಚ್ಚುತ್ತಿದೆ.
ತಂದೆ ಬಂದೊಡನೆ, ಮಗಳು ಪಡುವ ಆನಂದ, ಆಹಾ! ಅದೇನೋ ಹೇಳಲು ಪ್ರಯತ್ನ ಮಾಡುವಳು, ಮುಗುಳು ನಗೆ ಬೀರಿ, ಸಂತೋಷ ಹಂಚುವಳು. ಮಗಳನ್ನು ಪಡೆದ ಧನ್ಯತೆ, ದಾಂಪತ್ಯದ ಪೂರ್ಣತೆ ಒಟ್ಟಿಗೆ ಆಗುವ ಅನುಭವವಿದು, ಹೇಳಿ ತೀರಲರಿಯದು. ಇವಳಿಗಾಗಿ ಹುಡುಕದ, ಕಲಿಯದ ವಿಷಯವಿಲ್ಲ, ಪೇರೆಂಟಲ್ ಕೇರ್, ಚೈಲ್ಡ್ ಕೇರ್ ಬಗ್ಗೆ ಬಹುಶಃ ಡಾಕ್ಟ್ರೇಟ್ ಪಡೆಯಬಹುದು. ಆದರೆ, ಮಗಳು ಜೀವನದದ್ಭುತ, ನನ್ನ ಪುಟ್ಟ ಪ್ರಪಂಚದ ದೊಡ್ಡ ಭಾಗ ಅವಳೇ....'
ನರ್ಸ್ ಬಂದು ಕರೆದಳು, ಎಚ್ಚರಾಗಿಹೋಯಿತು!! ಕಾಯುತ್ತಾ ಕಾಯುತ್ತಾ ಹಾಗೆ ಕಣ್ಣು ಮುಚ್ಚಿಹೋಗಿತ್ತು.
ಛೇ, ಇವೆಲ್ಲ ಕನಸಾಗಿತ್ತು. ಕನಸಿನ ಸಮಯ ಮುಗಿದಿತ್ತು. ಮತ್ತದೇ ವಾಸ್ತವಕ್ಕೆ ಕಾಲಿಟ್ಟಿದ್ದೆ. ಪೂರ್ಣತೆಯ ಕನಸಿನಿಂದ, ಅಪೂರ್ಣ ವಾಸ್ತವಕ್ಕೆ ಜಾಗೃತಳಾದೆ.
ಮದುವೆಯಾಗಿ ವರ್ಷಗಳು ಕಳೆದು, ನೆಮ್ಮದಿ-ಸಂತೋಷಗಳು ನಮ್ಮಲ್ಲಿ ಮನೆ ಮಾಡಿದ್ದು ಹೌದು, ಆದರೆ ಕೊರತೆಯೊಂದೇ.. ಸಂತತಿ ಪ್ರಾಪ್ತಿಯಾಗಿಲ್ಲ. ಆದ್ರೆ ಸ್ವಲ್ಪ ದಿನದಿಂದ ನನ್ನಲ್ಲಾಗುತ್ತಿರುವ ಬದಲಾವಣೆ ಅದೇನೋ ಹೊಸ ಅನುಭವ. ಹಿಂದೆ ಹೀಗಾಗಿದ್ದಿಲ್ಲ. ಪುಟ್ಟ ಕಂದನ ಪುಟ್ಟ ಪಾದಗಳನ್ನು ಕೈಯಲ್ಲಿ ಹಿಡಿದು, ಕಣ್ಣಲ್ಲಿ ಪ್ರೀತಿ ವಾತ್ಸಯವ ಚೆಲ್ಲಿ, ನನ್ನ ಬೆರಳಿನಷ್ಟೇ ಉದ್ದದ ಆ ಮುದ್ದು ಪಾದಗಳಿಗೆ ಮುತ್ತಿಡುವ ಕಾಲ ಬರುತ್ತಿದೆಯೇನೋ ಎಂದನಿಸುತ್ತಿದೆ.
ವರ್ಷಗಳ ನಂತರ ಇದೀಗ ಆಶಾಭಾವದ ವಾತಾವರಣ ಸಂದುಬಂದಿದೆ. ಬಹುಶಃ ನನ್ನೊಳಗಿನ ಶಕ್ತಿ, ವ್ಯಕ್ತಿಯಾಗುವ ಕಾಲ ಬಂದಹಾಗಿದೆ. ನನ್ನ ಮಹದಾಸೆಗೆ ದಾರಿ ಕಾಣಬಹುದು. ಮೊನ್ನೆ ಡಾಕ್ಟರ್ ಬಳಿ ಬಂದಿದ್ದೆ, ಟೆಸ್ಟ್ ಮಾಡಿಸಿಯಾಗಿದೆ. ಇಂದೀಗ ಅದರ ಉತ್ತರ ದೊರಕಲಿದೆ, ಎದೆ ಬಡಿತ ಎಷ್ಟಿದೆಯೆಂದರೆ, ಸುಮ್ಮನೆ ನಿಂತರೂ ಅದು ನನಗೆ ಫೀಲ್ ಆಗುತ್ತಿದೆ.
10 ನಿಮಿಷದಿಂದ ಕೂತಿದ್ದ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿತ್ತು. ಕಾಯುವಿಕೆ ಕಷ್ಟವಪ್ಪ!! ಡಾಕ್ಟರ್ ಅಂತೂ ಕರೆದರು...
Image : Google