ನೆನಪಿನ ಪಯಣ - ಭಾಗ 6
ನೆನಪಿನ ಪಯಣ - ಭಾಗ 6
ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ
ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ
ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ.
ಎಲ್ಲ ಚೆನ್ನಾಗಿದ್ದಾರೆ ಎಂದು ತಿಳಿಸಿ ಅವನ ಮಾತುಗಳನ್ನು ಕತ್ತರಿಸುತ್ತಾ ಹೇಳಿದೆ, ಅಚ್ಯುತ ನಾನೀಗ ಒಂದು ತೊಂದರೆಯಲ್ಲಿದ್ದೇನೆ ಅಂತ ತಿಳಿಸಿ. ನಡೆದ ಘಟನೆಯನ್ನೆಲ್ಲ ವಿವರಿಸಿದೆ.
ನನಗೆ ನಾಚಿಕೆ ಅನ್ನಿಸಿತು. ಆದರೂ ನಾವು ಮಾಡಿರುವ ಕೆಲಸ ಆದರೂ ಹೇಳಲೇ ಬೇಕಿತ್ತು. ಅವನು ನನ್ನ ಮಾತುಗಳನ್ನೆಲ್ಲ ಕೆಲಕಾಲ ಕೇಳಿಕೊಂಡ, ನಂತರ ಕ್ಷಣದ ಮೌನ
ದೊಡ್ಡಪ್ಪ , ನೀವು ಹೇಳುವದನ್ನು ಕೇಳುವಾಗ ಸ್ವಲ್ಪ ಸಮಸ್ಯೆಯಲ್ಲಿ ಇದ್ದೀರೆಂದು ಅನ್ನಿಸುತ್ತಿದೆ. ಚಿಂತೆ ಮಾಡಬೇಡಿ. ನಿಮ್ಮ ಬೆಂಗಳೂರಿನಲ್ಲಿಯೆ ನನ್ನ ಸ್ನೇಹಿತ ಒಬ್ಬನಿದ್ದಾನೆ , ಶ್ರೀದರ್ ಎಂದು ಅವನು ಅಲ್ಲಿಯೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಅವನ ನಂಬರ್ ಕೊಡುತ್ತೇನೆ ಬರೆದುಕೊಳ್ಳಿ. ನಾನು ಸಹ ಅವನಿಗೆ ಪೋನ್ ಮಾಡುತ್ತೇನೆ. ಎಂದು ಅವನ ಸ್ನೇಹಿತನ ನಂಬರ್ ಹೇಳಿದ . ಬರೆದುಕೊಂಡು, ಮೊದಲು ಅಚ್ಚುತ ಅವನಿಗೆ ಪೋನ್ ಮಾಡಲಿ ಎಂದುಕೊಂಡೆ. ಅಷ್ಟರಲ್ಲಿ ರೂಮಿನಿಂದ ಹೊರಬಂದ ಸಂದ್ಯಾ, ನನ್ನನ್ನು ಒಳಬನ್ನಿ ಅನ್ನುವಂತೆ ಸನ್ನೆಮಾಡಿದರು
ಒಳಹೋದರೆ, ಜ್ಯೋತಿ ಮತ್ತೆ ಮಾತನಾಡುತ್ತಿದ್ದರು,
ಆದರೆ ಬಹಳ ನಿಧಾನ , ಒಂದು ಪದಕ್ಕು ಮತ್ತೊಂದು ಪದಕ್ಕೂ ಸಾಕಷ್ಟು ಅಂತರವಿಟ್ಟು ಮಾತನಾಡುವಾಗ, ಅವರು ಎಲ್ಲಿಂದಲೋ ಮಾತನಾಡುತ್ತಿರುವಂತೆ ಕೇಳಿಸುತ್ತಿತ್ತು
ಹೌದು ...... ನೀರು.... ಎಲ್ಲಡೆಯೂ ನೀರು... ಭೂಮಿಯ ಮೇಲೆ ನೀರಿನ ಹೊರತಾಗಿ ಏನು ಇಲ್ಲವೆ ?
ಅಂದರೆ ಜ್ಯೋತಿ ನೀವೀಗ ಮತ್ತೆ ಹಿಂದೆ ಹೋಗಿದ್ದೀರಾ ನೆನಪಿನಲ್ಲಿ
ಹಿಂದೆ ಹೌದು ಹಿಂದೆ ಆಂದರೆ ಹಿಂದೆ ಮೊದಲಿಗೆ.... ಅಲ್ಲಿ ನಾನು ನೀನು ಯಾರು ಇಲ್ಲ. ಪ್ರಾಣಿ ಜನ ಏನು ಇಲ್ಲ . ಮನೆ ಮರ ಏನು ಇಲ್ಲ.... ನೀರು ಹೊರತು ಏನು ಇಲ್ಲ. ಆಕಾಶವು ನೀರಿನಿಂದ ತುಂಬಿದೆಯೋನೊ......
ಸೃಷ್ಟಿಯ ಮೊದಲ ದಿನಗಳ ಬಗ್ಗೆ ಹೇಳುತ್ತಿದ್ದೀರಾ ? ಎಂದೆ
ಇಲ್ಲ, ನೀರು ಬಿಟ್ಟು ಏನು ಇಲ್ಲ. ನೀರಿನ ಹೊರತಾಗಿ ಏನು ಇಲ್ಲ. ಭೂಮಿಯಲ್ಲಿ ನೀರಿನ ಹೊರತು ಮತ್ತೇನುಇಲ್ಲ ಅನ್ನಿಸುತ್ತಿದೆ. ಆಕಾಶವು ಮೋಡದಿಂದ ಮುಚ್ಚಿ ಎಷ್ಟೋ ಸಾವಿರ ವರ್ಷ ಲಕ್ಷ ವರ್ಷಗಳಾಯಿತೇನೊ ಮತ್ತೂ ಹಿಂದೆ ಹೋಗಬೇಕೇನೋ ... ಇನ್ನೂ ಹಿಂದೆ
ನನಗೆ ಗಾಭರಿ ಆಯಿತು. ಬೇಡ ಜ್ಯೋತಿ ಸಾಕು ಬಿಡಿ ಎಷ್ಟು ಹಿಂದೆ ಹೋಗುವಿರಿ, ಸಾಕು ಬಿಡಿ. ಎಚ್ಚರಗೊಳ್ಳಿ
ಇಲ್ಲ ಹೋಗಬೇಕು. ಹಿಂದೆ ಹೋಗಬೇಕು. ಜ್ಯೋತಿ........ ಜ್ಯೋತಿ ವರ್ಷ..... ಎಂದೆಲ್ಲ ಆಕೆ ಆನ್ನುತ್ತಿದ್ದಳು
ಇವರು ಏನು ಹೇಳುತ್ತಿದ್ದಾರೆ. ಈಗ ನಾನು ದೇವರನ್ನು ನೆನೆಯುವಂತಾಯಿತು. ದೇವರೆ ಇದೆಂತಹ ಸಂದರ್ಭ ತಂದಿಟ್ಟೆ. ಏನೋ ಸಾಮಾನ್ಯ ಚರ್ಚೆಯಿಂದ ಪ್ರಾರಂಭವಾದ , ಈ ಘಟನೆ , ನನ್ನನ್ನು ಹೀಗೆ ಸಿಲುಕಿಸಿದೆಯಲ್ಲ . ಕಾಲವನ್ನು ಹೆಬ್ಬಾವಿಗೆ ಹೋಲಿಸುವರು. ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ ಅನ್ನುವರು. ಅಂತಹ ಕಾಲದ ರಹಸ್ಯಕ್ಕೆ ನಾವು ಕೈ ಹಾಕಲು ಹೋಗಿ ಏನಾದರು ಪ್ರಮಾದವಾಗಿದೆಯ. ಕಾಲವೆಂಬ ಹೆಬ್ಬಾವಿನ ಬಾಯಿಗೆ ನಾವೆಲ್ಲ ಸಿಲುಕಿದ್ದೆವು. ಹೊರಬರುವ ದಾರಿ ತಿಳಿಯುತ್ತಿಲ್ಲ . ಬಲವಂತವಾಗಿ ಜ್ಯೋತಿಯನ್ನು ಎಬ್ಬಿಸಹೋಗಿ ಏನಾದರು ಅನಾಹುತವಾದರೆ ಎನ್ನುವ ಭಯ ನಮ್ಮನ್ನು ಕಾಡುತ್ತಿತ್ತು.
ಆದರೆ ಜ್ಯೋತಿ ನನ್ನ ಯಾವ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆ ತನ್ನ ತನ್ನ ಪಾಡಿಗೆ ತಾನು ಕಾಲದಲ್ಲಿ ಹಿಂದಕ್ಕೆ ಸರಿಯುತ್ತಿದ್ದಳು. ನನಗೆ ಎರಡು ರೀತಿಯ ಯೋಚನೆಗಳು ಈಗ ಕಾಡುತ್ತಿದ್ದವು. ಮೊದಲೆಯದಾಗಿ, ಈಕೆ ಹೇಳುತ್ತಿರುವ ಘಟನೆ ಹಾಗು ನೆನಪುಗಳೆಲ್ಲ ನಿಜವಾ ಒಂದು ವೇಳೆ ನಿಜವಾದಲ್ಲಿ, ತನ್ನ ಹುಟ್ಟಿನಿಂದಲೂ ಹಿಂದಕ್ಕೆ ಆಕೆಗೆ ನೆನಪುಗಳಿರುವುದು ಹೇಗೆ ಸಾದ್ಯ, ಎರಡನೆಯದು ಈಕೆಯನ್ನು ಎಬ್ಬಿಸುವುದು ಹೇಗೆ, ಒಂದು ವೇಳೆ ಏನಾದರು ಸಮಸ್ಯೆಯಾದಲ್ಲಿ ಆನಂದ ನನ್ನಬಗ್ಗೆ ಏನು ಭಾವಿಸುವದಿಲ್ಲ ? ಎನ್ನುವ ಸಂಕಟ.
ಅಂತಹ ಚಿಂತೆಯಲ್ಲಿರಬೇಕಾದರೆ , ಮತ್ತೆ ಜ್ಯೋತಿಯ ಮುಖಭಾವದಲ್ಲಿ ವ್ಯತ್ಯಾಸವಾಯಿತು. ಆಕೆ ನುಡಿಯುತ್ತಿದಳು.
ಅಪೂರ್ವ ದೃಷ್ಯ, ನೀರಿಗಿಂತ ಹಿಂದೆ ಹೋದರೆ, ಭೂಮಿ ಕೇವಲ ಉರಿಯುವ ಗೋಲ. ದೂರದ ಅಗಸದಲ್ಲಿ ಸೂರ್ಯನ ಬೆಳಕಿನ ವಿನಃ ಯಾವುದೇ ಜೀವವಿಲ್ಲ. ಇನ್ನೂ ನೀರು ಸಹ ರೂಪಗೊಂಡಿಲ್ಲ. ಆಗೊಮ್ಮೆ ಈಗೊಮ್ಮೆ ಆಗಸದಿಂದ, ಉಲ್ಕಾಪಾತವಾದಂತೆ ದೊಡ್ಡ ದೊಡ್ದ ಉಲ್ಕೆಗಳು ಭೂಮಿಗೆ ಬಂದು ಅಪ್ಪಳಿಸುತ್ತಿವೆ. ಅದು ಅಪ್ಪಳಿಸುವ ರಬಸಕ್ಕೆ ಉರಿಯುತ್ತಿರುವ ಭೂಮಿಯ ಮದ್ಯೆ, ನೀರಿನಲ್ಲಿ ಕಲ್ಲು ಹಾಕಿದಾಗ ಏಳುವ ಅಲೆಗಳಂತೆ ಬೆಂಕಿಯಲ್ಲಿ ಅಲೆಗಳು ಏಳುತ್ತಿವೆ. ಅಂತಹ ದಗದಗಿಸುವ ಉರಿಯಿಂದ ಭೂಮಿಯ ಮೇಲೆ ನೂರಾರು ಕಿ.ಮಿ ವರೆಗೂ ಮೋಡಗಳು ದಟೈಸುತ್ತಿವೆ. ಉರಿಯುತ್ತಿವ ಬೆಂಕಿಗೆ ಅದೇನು ಅಹಾರವೊ ತಿಳಿಯದು, ಬೆಂಕಿ ಮಾತ್ರ ಸಪ್ತ ವರ್ಣಗಳಲ್ಲು ನಾಲಿಗೆ ಚಾಚುತ್ತಿದೆ. ಇದೊಂದು ಅಸದೃಷ್ಯ ದೃಷ್ಯ. ವಿವರಣೆಗೆ ನಿಲುಕದು. ಅಂತಹ ಬೆಂಕಿಯ ಒತ್ತಡಕ್ಕೊ, ಭೂಮಿಯ ಒಳಗಿನಿಂದ ಹೊರಗೆ ಚುಮ್ಮುತ್ತಿರುವ ಲಾವ ಚುಲುಮೆಗಳಿಂದಲೋ , ಅವುಗಳ ಒತ್ತಡಕ್ಕೊ ಭೂಮಿ ತನ್ನ ಸುತ್ತ ತಾನೆ ತಿರುವುವ ಅಪೂರ್ವ ನೋಟ ಮನಸೂರೆಗೊಳ್ಳುತ್ತಿದೆ.
ಜ್ಯೋತಿ ಒಂದು ಕ್ಷಣ ನಿಲ್ಲಿಸಿದಳು, ನಾನು ಕೇಳಿದೆ
ಅಂದರೆ ನೀವೀಗ ಭೂಮಿಯ ರೂಪಗೊಳ್ಳುತ್ತಿರುವ ದಿನಗಳನ್ನು ನೋಡುತ್ತಿರುವಿರ.
ಆಕೆಯ ದ್ವನಿ ಬದಲಾಯಿತು
ನಡುವೆ ಮಾತನಾಡಬೇಡ. ಸುಮ್ಮನೆ ಕೇಳು ಎಂದಳು.
ಪ್ರಥಮ ಬಾರಿ ಆಕೆ ನನ್ನಬಗ್ಗೆ ಏಕವಚನ ಪ್ರಯೋಗ ನಡೇಸಿದ್ದಳು. ನಾನು ಆನಂದ, ಸಂದ್ಯಾರ ಮುಖ ನೋಡಿದೆ. ಅವರಿಬ್ಬರು ನಿರ್ಲಿಪ್ತರಾಗಿದ್ದರು. ಬಹುಶಃ ಎಲ್ಲಕ್ಕೂ , ಎಲ್ಲ ಆಶ್ಚರ್ಯಗಳಿಗೂ ಸಿದ್ದರಾದಂತೆ ಇದ್ದರು. ನಾನು ಮೌನವಾಗಿದ್ದೆ. ಜ್ಯೋತಿ ಮುಂದುವರೆಸಿದಳು
ಆಕೆಯ ಮಾತುಗಳು ಮಾತ್ರ ಸರಾಗವಾಗಿ ಬರುತ್ತಿರಲಿಲ್ಲ , ಪ್ರತಿಪದಕ್ಕು ಪದಕು ಸಾಕಷ್ಟು ಅಂತರವಿತ್ತು ಆಕೆಯ ಮಾತಿನಲ್ಲಿ.
ಇಂತಹ ದೃಷ್ಯ ನೋಡಲು ಸಿಗುವುದೇ ಒಂದು ಪುಣ್ಯ. ಭೂಮಿ ಈಗ ರೂಪಗೊಳ್ಳುತಿರುವ ದಿನಗಳು ಇವು. ನೋಡಿದರೆ, ಭೂಮಿ ಸೂರ್ಯ ಚಂದ್ರ ಎಲ್ಲಕ್ಕೂ ಒಂದೆ ಅಹಾರ ದೊರೆತಂತೆ ಕಾಣಿಸುತ್ತೆ. ಈಗ ಪ್ರಾಣಿಗಳು ಉಸಿರಾಡಲು ಬೇಕಾದ ಜೀವವಾಯುವೆ ಇಲ್ಲದ ದಿನ. ಆದರೆ ಯಾವ ಚಿಂತೆಯೂ ಇಲ್ಲ ಏಕೆಂದರೆ ಯಾವುದೇ ಜೀವಿಯು ಭೂಮಿಯ ಮೇಲಿಲ್ಲ. ಜೀವಿ ಅಂದರೆ ಹಸಿರು ಸಹ ಇಲ್ಲ. ಈ ರುದ್ರ ರಮಣೀಯ ಸೃಷ್ಟಿ ನರ್ತನದಲ್ಲಿ ಯಾವ ಜೀವಿಯು ಇರಲು ಸಾದ್ಯವೂ ಇಲ್ಲ. ನಭದಿಂದ ಬಂದು ಯಾವುದಾವುದೋ ಸಣ್ಣ ಗ್ರಹಗಳು ಅಪ್ಪಳಿಸಿದರೆ ಆಗೆಲ್ಲ ಉಂಟಾಗುತ್ತಿರುವ ಪರಿಣಾಮಗಳನ್ನು ನಿನಗೆ ಹೇಗೆ ವರ್ಣಿಸಿ ಹೇಳಲಿ? . ಇಂತಹ ಅಸದೃಷ್ಯ ಪರಿಸರದಲ್ಲಿ, ನೀರು ರೂಪಗೊಂಡಿತು ಎನ್ನುವುದೇ ಆಶ್ಚರ್ಯವಾಗಿ ತೋರುತ್ತಿದೆ .
ನೀರು ರೂಪಗೊಳ್ಳುತ್ತಲೆ, ಅದು ತನಗೆ ತಾನೆ ಹೆಚ್ಚಾಗುತ್ತ, ಭೂಮಿಯ ಮೇಲೆ ಆಕಾಶದಲ್ಲಿ ಆವರಿಸುತ್ತ ಹೋಯಿತು. ನೀರಿನ ಪ್ರಭಾವ ಹೆಚ್ಚಾಗುತ್ತಲೆ. ಉರಿಯುವ ಗೋಳ ತನಗೆ ತಾನೆ ತಣಿಯುತ್ತ ಹೋಯಿತು. ಜೀವರಾಶಿಯ ಹುಟ್ಟುವಿಕೆಗೆ ಕಾರಣವಾಯಿತು.
ಜ್ಯೋತಿ ತನ್ನ ಮಾತು ನಿಲ್ಲಿಸಿದಳು. ಆಕೆಯ ಮನಸಿನಲ್ಲಿ ಮತ್ತೆ ಏನು ನಡೆಯುತ್ತಿದೆಯೋ ಅಂದುಕೊಂಡೆ
ಬಹುಶಃ ಭೂಮಿಯ ಹುಟ್ಟಿಗೆ ಮೊದಲು ಸೂರ್ಯನ ಹುಟ್ಟು ಆಯಿತೇನೊಎಂದಳು.
ಅಲ್ಲಿಗೆ ಆಕೆ ಸೂರ್ಯನ ಹುಟ್ಟಿಗೆ ಹೋಗುತ್ತಿದ್ದಾಳ? ದೇವರೆ ನಿಜಕ್ಕೂ ಏನಾಗುತ್ತಿದೆ, ಈಕೆಯನ್ನು ಎಬ್ಬಿಸುವ ಪರಿಯೆಂತು.
ನಾನು ಮೊಬೈಲ್ ಹಿಡಿದು , ಹೊರನಡೆದೆ. ಅಚ್ಚುತ ಹೇಳಿದ್ದ ಡಾಕ್ಟರಿಗೆ ಪೋನ್ ಮಾಡಬೇಕಿತ್ತು.
ಮೊದಲ ಪ್ರಯತ್ನದಲ್ಲಿಯೆ ಡಾಕ್ಟರ್ ಸಿಕ್ಕಿಬಿಟ್ಟರು ಅಚ್ಚುತನ ಸ್ನೇಹಿತ ಶ್ರೀದರ್.
ನನ್ನ ಪರಿಚಯ ಮಾಡಿಕೊಂಡೆ, ಅವರು ಹೇಳಿ ಸರ್ ನಾನೇನು ಸಹಾಯಮಾಡಬಹುದು, ಅಚ್ಚುತ ಏನೊ ಹೇಳಿದ್ದ, ನೀವು ವಿವರಿಸಿದರೆ ನಾನು ಯೋಚಿಸಬಹುದು ಎಂದರು.
ನಾನು ನಡೆದ ಘಟನೆಗಳನ್ನು ಮೊದಲಿನಿಂದ ವಿವರಿಸಿದೆ. ನಂತರ ಸದ್ಯದ ಪರಿಸ್ಥಿತಿ ಹೇಳುತ್ತ್, ಸಮಸ್ಯೆ ತಿಳಿಸಿದೆ. ಆಕೆಗೆ ಏನು ಸಮಸ್ಯೆ ಅಥವ ತೊಂದರೆಗಳಾದರೆ ಹೇಗೆ ಎನ್ನುವ ನನ್ನ ಆತಂಕವನ್ನು ತಿಳಿಸಿದೆ. ಆತ ಎಲ್ಲವನ್ನು ಕೇಳಿಕೊಂಡರು. ಜ್ಯೋತಿಯ ದೈಹಿಕ ಸ್ಥಿತಿಯ ಬಗ್ಗೆ ಕೇಳಿದರು, ನಾನು ಆಕೆ ದೈಹಿಕವಾಗಿ ಸಹಜವಾಗಿ ಇರುವಳೆಂದು, ನಿದ್ದೆಯಲ್ಲಿ ಮಾತನಾಡುತ್ತಿರುವ ರೀತಿ, ಅತ್ಯಂತ ನಿಧಾನಕ್ಕೆ ಮಾತನಾಡುತ್ತಿರುವಳೆಂದು ತಿಳಿಸಿದೆ. ಒಂದು ನಿಮಿಶ ಯೋಚಿಸುತ್ತಿದ್ದ ಡಾಕ್ಟರ್ , ನಿಮ್ಮ ಮನೆ ಎಲ್ಲಿ ಬರುವದೆಂದು ಕೇಳಿದರು. ನಾನು ವಿಳಾಸ ತಿಳಿಸಿದೆ. ಅದಕ್ಕವರು, ನಾನೀಗ ನನ್ನ ನರ್ಸಿಂಗ್ ಹೋಮ್ ನಲ್ಲಿದ್ದೇನೆ. ಇಲ್ಲಿ ಇನ್ನು ಅರ್ಧ ಅಥವ ಒಂದು ಗಂಟೆಯ ಕೆಲಸವಿದೆ. ಇಲ್ಲಿ ಮುಗಿಸಿ ಹೊರಡುತ್ತೇನೆ. ನಿಮ್ಮ ಮನೆಗೆ ಒಮ್ಮೆ ಬರುತ್ತೇನೆ. ನಂತರ ನಿರ್ದಾರ ಮಾಡಬಹುದು. ಎಂದರು. ಅಲ್ಲದೆ ಅವರು ತಾವು ಬರುವ ತನಕ ಜ್ಯೋತಿಯನ್ನು ಬಲವಂತವಾಗಿ ಎಬ್ಬಿಸುವ ಪ್ರಯತ್ನ ಮಾಡಬೇಡಿ ಎನ್ನುವ ಎಚ್ಚರಿಕೆಯನ್ನು ಕೊಟ್ಟರು.ಅವರು ಬರುವುದು ಕನಿಷ್ಠ ಎರಡು ಗಂಟೇಗಳಾಬಹುದು ಎನ್ನಿಸಿತು.
ಅವರಿಗೆ ವಂದನೆ ತಿಳಿಸಿ, ಕಾಲ್ ಕಟ್ ಮಾಡಿದೆ. ನಂತರ ನಮ್ಮ ಮನೆಗೆ ಕಾಲ್ ಮಾಡಿ, ನಾನು ಬರುವುದು ತುಂಬಾನೆ ತಡ ಆಗಬಹುದು., ಅಥವ ರಾತ್ರಿಬರದೆ ಬೆಳಗ್ಗೆ ಬರಬಹುದು, ಎಂದು ತಿಳಿಸಿದೆ. ಮನೆಯವರು, ಗಾಭರಿಯಿಂದ, ಏನು ಎತ್ತ ಎಂದೆಲ್ಲ ಕೇಳಿದಾಗ, ಮನೆಗೆ ಬಂದ ನಂತರ ವಿವರ ತಿಳಿಸುವೆ ಎಂದು ಕಾಲ್ ಕಟ್ ಮಾಡಿದೆ.
ಮುಂದುವರೆಯುವುದು ...