ಕಗ್ಗ ದರ್ಶನ – 3 (2)

ಕಗ್ಗ ದರ್ಶನ – 3 (2)

ಕರಿಮೋಡ ಬಿಳಿಮೋಡ ಸರಿಪಣಿಯವೊಲು ಪರಿಯೆ
ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ
ಕರುಮ ಮೇಘದಿನಂತು ಮಬ್ಬೊಮ್ಮೆ ತೆರೆಪೊಮ್ಮೆ
ಬರುತಿಹುದು ಬಾಳಿನಲಿ – ಮರುಳಮುನಿಯ

ಆಕಾಶದಲ್ಲಿ ಕರಿಮೋಡದ ನಂತರ ಬಿಳಿಮೋಡ, ಇದನ್ನು ಹಿಂಬಾಲಿಸಿ ಇನ್ನೊಂದು ಕರಿಮೋಡ ಚಲಿಸುತ್ತಿರುತ್ತವೆ –ಸರಪಣಿಯ ರೀತಿಯಲ್ಲಿ. ಈ ಉಪಮೆಯನ್ನು ಎತ್ತಿಕೊಂಡು, ಜೀವನದ ದೊಡ್ಡ ಸತ್ಯವೊಂದನ್ನು ನಮ್ಮ ಎದುರಿಗಿಡುತ್ತಾರೆ ಮಾನ್ಯ ಡಿ.ವಿ.ಜಿ.ಯವರು.

ಆಕಾಶದಲ್ಲಿ ಮೋಡಗಳು ಹಾಗೆ ಪ್ರವಹಿಸುತ್ತವೆ; ಅದರಿಂದಾಗಿ ಭೂಮಿಯಲ್ಲಿ ನೆರಳು – ಬೆಳಕಿನ ಆಟ. ಕರಿಮೋಡ ಹಾಯ್ದಾಗ ಧರೆಯಲ್ಲಿ ನೆರಳು, ಬಿಳಿಮೋಡ ಹಾಯ್ದಾಗ ಬೆಳಕು. ನೆರಳೂ ಶಾಶ್ವತವಲ್ಲ, ಬೆಳಕೂ ಶಾಶ್ವತವಲ್ಲ; ನೆರಳಿನ ನಂತರ ಬೆಳಕು, ಹಾಗೆಯೇ ಬೆಳಕಿನ ನಂತರ ನೆರಳು – ಇದುವೇ ಬದುಕಿನ ದೊಡ್ಡ ಸತ್ಯ.

ನಮ್ಮ “ಕರ್ಮ” ಎಂಬುದು ಆಕಾಶದ ಮೋಡವಿದ್ದಂತೆ. ಕರ್ಮಫಲ ಕೆಟ್ಟದಾಗಿದ್ದಾಗ, ಕರಿಮೋಡದಿಂದಾಗಿ ಭೂಮಿಯಲ್ಲಿ ನೆರಳು ಕವಿಯುವಂತೆ, ನಮ್ಮ ಬದುಕಿನಲ್ಲಿಯೂ ಮಬ್ಬು. ಯಾರನ್ನೋ ಅಥವಾ ಯಾವುದನ್ನೋ ಕಳೆದುಕೊಂಡ ನೋವಿನಿಂದಾಗಿ ಮಂಕಾಗುತ್ತೇವೆ. ಅಪವಾದ ಅಥವಾ ತೆಗಳಿಕೆಯ ಬಿರುಸಿಗೆ ಮಸಕಾಗುತ್ತೇವೆ. ಆದರೆ ಇದು ಶಾಶ್ವತವಲ್ಲ. ಕರ್ಮಫಲ ಒಳ್ಳೆಯದಾಗಿದ್ದಾಗ, ಬಿಳಿಮೋಡದಿಂದಾಗಿ ಭೂಮಿಯಲ್ಲಿ ಬೆಳಕು ಹಾಯುವಂತೆ, ನಮ್ಮ ದುಃಖವೆಲ್ಲ ಕರಗಿ ಹೋಗುತ್ತದೆ. ಆರೋಪ ಹಾಗೂ ನಿಂದನೆಗಳೂ ಕರಗಿ ಹೋಗುತ್ತವೆ.

ನೆನಪಿರಲಿ, ಇದೂ ಶಾಶ್ವತವಲ್ಲ. ಯಾಕೆಂದರೆ, ಇವೆಲ್ಲ ನಮ್ಮ ಬದುಕಿನ ಸರಪಳಿಯಲ್ಲಿ ಕೊಂಡಿಗಳಿದ್ದಂತೆ – ಒಂದಾದ ಮೇಲೊಂದು ಮುಂದುವರಿಯುವುದು ಸಹಜ. ಇದಕ್ಕೆಲ್ಲ ಕಾರಣ ನಮ್ಮ ಕರ್ಮ ಎಂಬುದನ್ನು ಈ ಮುಕ್ತಕ ಬೊಟ್ಟು ಮಾಡಿ ತೋರಿಸುತ್ತದೆ.

ಆದ್ದರಿಂದ, ಬದುಕಿನಲ್ಲಿ ಬಂದದ್ದನ್ನೆಲ್ಲ ಬಂದಂತೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವತ್ತೋ ಯಾರಿಗೋ ಕೊಟ್ಟದ್ದು ನಮಗೆ ವಾಪಾಸು ಬಂದೇ ಬರುತ್ತದೆ – ಇದು ನಿಸರ್ಗ ನಿಯಮ. ಒಳಿತನ್ನು ಕೊಟ್ಟರೆ ಒಳಿತು, ಕೆಡುಕನ್ನು ಕೊಟ್ಟರೆ ಕೆಡುಕು – ನಮ್ಮನ್ನು ಬೆನ್ನಟ್ಟಿ ಬರುತ್ತವೆ. ಇನ್ನಾದರೂ ಒಳಿತನ್ನೇ ಮಾಡೋಣ, ಅದರಿಂದಾಗಿ ಕೆಡುಕಿನ ಕರ್ಮಫಲ ಕಡಿಮೆಯಾಗಲಿ.