ಯಕ್ಷಸಿರಿ - ಮಹಿಳಾ ಯಕ್ಷಗಾನ ತಂಡ

ಯಕ್ಷಸಿರಿ - ಮಹಿಳಾ ಯಕ್ಷಗಾನ ತಂಡ

ತಾಳ ಮದ್ದಳೆಯ ಸಮಾಗಮದಲ್ಲಿ ಸುಶ್ರಾವ್ಯವಾದ ಭಾಗವತರ ಹಾಡು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸಂಭಾಷಣೆ ಹೆಣೆಯುತ್ತ ಮೂರು ತಾಸು ನಡೆಯಬೇಕಾದ ಯಕ್ಷಗಾನ ಕೇವಲ ಒಂದು ಗಂಟೆಯಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ ಯಕ್ಷಗಾನ ವೀಕ್ಷಿಸುವ ಸುಸಂದರ್ಭ ನನಗೆ ಒದಗಿದ್ದು ಇದೇ ಆಗಸ್ಟ ಹದಿನೈದರಂದು ಬೆಂಗಳೂರಿನಲ್ಲಿ.
 
ಮುಖ ಪುಸ್ತಕದಲ್ಲಿ ಪರಿಚಯವಾದ ಗೆಳತಿ ಯಕ್ಷಗಾನ ಪ್ರವೀಣೆ ಮಲೆನಾಡಿನ ಕುವರಿ ಶ್ರೀಮತಿ ನಿರ್ಮಲಾ ಹೆಗಡೆಯವರಿಂದ ಆಹ್ವಾನ.  "ಸ್ವಾತಂತ್ರ್ಯ ದಿನಾಚರಣೆಯಂದು ಮಧ್ಯಾಹ್ನ 4.30pmಗೆ ನಮ್ಮ ಯಕ್ಷಗಾನ ಇದೆ. ಬರ್ತ್ಯನೆ.  Actually ನೀ ಇರೋದು ಎಲ್ಲಿ?"  ಮಾತುಕತೆಯಲ್ಲಿ ಎಲ್ಲ ತೀರ್ಮಾನ ಮಾಡಿದೆ ಈ ಕಾರ್ಯಕ್ರಮಕ್ಕೆ ಹೋಗಲೇ ಬೇಕು,ಅವಳ ಯಕ್ಷಗಾನ ನೋಡಲೇ ಬೇಕು.
ಮಳೆಯಾದರೂ ಸರಿ ಮನೆಬಿಟ್ಟು ಕದಲದ ನನ್ನ ಒಬ್ಬಂಟಿ ಸವಾರಿ ಸರಿಯಾದ ವೇಳೆಗೆ ಆ ಜಾಗ ತಲುಪಿತ್ತು.
 
ಎಲ್ಲಿ ಯಾರೂ ಕಾಣದಾದಾಗ ಹುಡುಕಾಟದಲ್ಲಿ ಮೊದಲ ಬಾರಿ ನನ್ನ ಅವಳ ಭೇಟಿ.  ಖುಷಿಯಲ್ಲಿ ತಿಂಡಿ ತೀರ್ಥ ಮೇಳದವರೆಲ್ಲರ ಪರಿಚಯ ಮಾತು ನಗು ಸಮಯ ಕಳೆದಿದ್ದು ಗೊತ್ತಾಗಲಿಲ್ಲ.  "ಮತ್ತೆ ಯಕ್ಷಗಾನ 7.30pm ಕ್ಕಡಾ." ಅಂದಾಗ ಅಷ್ಟೊತ್ತು ಏನು ಮಾಡುವುದು?  ವಾಪಸ್ ಹಿಂತಿರುಗಲೆ?  ತಾಕಲಾಟದ ಮನಕ್ಕೆ ಯಕ್ಷಗಾನ ನೋಡಲೇಬೇಕೆಂಬ ಮಹದಾಸೆ ಮಳೆ ಸುರಿಯಲು ಶುರುವಾದರೂ ಹಿಂದೇಟು ಹಾಕಲಿಲ್ಲ.  ಆಗಲೇ ಬರೆಯುವ ತುಡಿತ ಶುರುವಾದದ್ದು ಯಕ್ಷಗಾನದ ಬಗ್ಗೆ ಅದರಲ್ಲೂ ಮಹಿಳಾ ಮಣಿಗಳ ಯಕ್ಷಗಾನವಲ್ಲವೆ?  ಸರಿ ಅವಳ ಹಿಂದೆಯೇ ನನ್ನ ಸವಾರಿ ಮೊಬೈಲ್ ಡೈರಿ ಕೈಗೆ ಬಂತು.
 
ಒಟ್ಟೂ ನಾಲ್ಕು ಜನ ಮಹಿಳೆಯರು.  ಶ್ರೀಮತಿ ನಿರ್ಮಲಾ ಹೆಗಡೆ, ಶ್ರೀಮತಿ ಮಧುರಾ ಗಾಂವ್ಕರ್, ಶ್ರೀಮತಿ ವೀಣಾ ಪಿ ಕುಮಾರ್, ಶ್ರೀಮತಿ ಮಯೂರಿ ಉಪಾಧ್ಯಾಯ.  ಎಲ್ಲರೂ ನಮ್ಮ ಮಲೆನಾಡಿನ ಹವ್ಯಕರು.  ಅದರಲ್ಲೂ ಎಲ್ಲರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಮಕ್ಕಳನ್ನು ಹೆತ್ತ ಅಪ್ಪಟ ನಾರೀ ಮಣಿಗಳು.  ಅವರ ಉತ್ಸಾಹ ಅದೆಷ್ಟು ಇತ್ತೆಂದರೆ ಆಗಾಗ ಮಳೆ ಬಂದೂ ಬಿಟ್ಟು  ಆಗುತ್ತಿದ್ದರೂ ನಮ್ಮ ಕಾರ್ಯಕ್ರಮ ನಾವು ಯಶಸ್ವಿಯಾಗಿ ಪೂರೈಸುತ್ತೇವೆ ಅನ್ನುವ ದೃಢ ನಂಬಿಕೆ.  ಆಗಲೆ 5.30pmಗೆ ಗಂಟೆ ಕಾಲಿರಿಸಿತ್ತು.  ಶೃಂಗಾರ ಸಾಧನಗಳನ್ನು ಇರಿಸಿದ್ದ ಅಲ್ಲೇ ಇರುವ ಬಡಾವಣೆಯ ಒಂದು ಮನೆಯತ್ತ ಎಲ್ಲರೂ ತೆರಳಿ ತಮ್ಮದೇ ಮನೆಯೆಂಬುವಂತೆ ಸಿಕ್ಕ ಕೊಠಡಿ ಸೇರಿ ಅಗತ್ಯ ಒಳ ವಸ್ತ್ರಗಳನ್ನು ಚಟಪಟ ಅಂತ ಧರಿಸಿಯೂ ಬಿಟ್ಟರು.  ನಂತರದ ಸರಧಿ ಶೃಂಗಾರ ಸಾಧನವಿರಿಸಿದ ಒಂದು ಸಾಮಾನ್ಯ  ಕೋಣೆಯಲ್ಲಿ .
 
ಹಳೆಯ ವಸ್ತ್ರ ಮೈ ಮೇಲೆ ಹಾಕಿಕೊಂಡು ಚಕ್ಕಾಮಟ್ಟೆ ಹಾಕಿ ಇರುವ ಜಾಗದಲ್ಲೇ ಕುಳಿತರು.  ತಲೆಗೊಂದು ಹರಿದ ಹಳೆ ಬಟ್ಟೆಯ ಪಟ್ಟಿ ಮುಖದ ಮೇಕಪ್ ಮಾಡುವಾಗ ಕೂದಲ ರಕ್ಷಣೆಗಾಗಿ ಹಣೆಯ ಮೇಲ್ಗಡೆ ಕಿವಿಯ ಹಿಂದೆ ಬರುವವರೆಗೂ ಗಟ್ಟಿಯಾಗಿ ಕಟ್ಟಿ ಮೇಕಪ್ ಮಾಡಿಕೊಳ್ಳಲು ಅಣಿಯಾದರು.  ಯಕ್ಷಗಾನದ ಪರಿಕರಗಳೆಲ್ಲ ಬಾಡಿಗೆಯವರಿಂದ ಪಡೆದಿರುತ್ತಾರೆ.
 
ಅಲ್ಲಿಯವರೆಗೂ ತದೇಕ ಚಿತ್ತದಿಂದ ಗಮನಿಸುತ್ತಾ ಇದ್ದ ನನಗೆ " ಯಲಾ ಇವರಾ ಮೇಕಪ್ ಬಾಕ್ಸೇ ಇಲ್ಲ, ಹೇಗೆ ಮೇಕಪ್ ಮಾಡಿಕೊಳ್ಳುತ್ತಾರೆ? " ಅಂತ ಯೋಚಿಸುತ್ತಿದ್ದಂತೆ ಒಂದು ಎರಡು ಮೂರು ಅಂತ ಒಂದೊಂದೇ ಸ್ಟೀಲ್ ಡಬ್ಬಿ ಮುಚ್ಚಳಗಳು ತೆರೆದರು.  ಒಂದು ಬಟ್ಟಲಲ್ಲಿ ಕೊಬ್ಬರಿ ಎಣ್ಣೆ, ಸ್ವಲ್ಪ ನೀರು ಪಕ್ಕದಲ್ಲಿ ಒಂದಷ್ಟು ಬ್ರಷ್ಗಳು. ಬಿಳಿ,ಕೆಂಪು ಮತ್ತು ಹಳದಿ ಬಣ್ಣಗಳು.  ಲಾಲ್, ಸಫೇದಿ, ಹಳದಿ ಎಂದು ಕರೆಯುವ ಈ ಬಣ್ಣಗಳನ್ನು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಅಂಗೈಯ್ಯಲ್ಲಿ ಕೊಬ್ಬರಿ ಎಣ್ಣೆ ಹಾಕಿಕೊಂಡು ತಿಕ್ಕಿ ಕಲೆಸುತ್ತ ಮುಖಕ್ಕೆ ಬೆರಳುಗಳಲ್ಲಿ ಬಳಿಯುತ್ತಾರೆ. ಆಮೇಲೆ ಮೇಕಪ್ ತೆಗೆಯುವುದೂ ಕೂಡಾ ಕೊಬ್ಬರಿ ಎಣ್ಣೆ ಹಚ್ಚಿಯೇ ತೆಗೆಯಬೇಕು.  ಆ ನಂತರ ಫೌಡರ್ ದಪ್ಪವಾಗಿ ಹಚ್ಚಿ ಬ್ರಷ್ನಿಂದ ಮುಖವೆಲ್ಲ ಆಡಿಸುತ್ತಾರೆ.  ಇದಾದ ನಂತರ ಕೆನ್ನೆ ಗಲ್ಲ ಕಣ್ಣು ರೆಪ್ಪೆಗಳಿಗೆ ವೇಶಕ್ಕೆ ತಕ್ಕಂತೆ ಹೊಂಬಣ್ಣದ ರಂಗು ಹಚ್ಚುತ್ತಾರೆ.  ತುಟಿಗೆ ಕೆಂಪು ಲಾಲ್ ಬಣ್ಣ.
 
ಅಲ್ಲೇ ಕುಳಿತಿರುವ ಪಾರ್ವತಿ ವೇಶಧಾರಿ ಗಂಡಸು "ನಾನು ಸಫೇದಿಗೆ ಸ್ವಲ್ಪ ಸಕ್ಕರೆ ನೀರು ಬೆರೆಸ್ತಿ. ಮುಖ ಬೆವರಿದರೂ ಬಣ್ಣ ಇಳಿತಿಲ್ಲೆ. ಒಳ್ಳೆ ಶೈನಿಂಗ್ ಇರ್ತು." "ಹೌದ...?ಇನ್ಮೇಲೆ ಯಂಗವೂ ಹಂಗೆ ಮಾಡಕಾತು ಅಲ್ದನೆ" ಅವರವರಲ್ಲೆ ತೀರ್ಮಾನ ಎಂತಹಾ ಒಗ್ಗಟ್ಟು. 
 
ನಂತರ ಕಣ್ಣು ಹುಬ್ಬು ವೇಶಕ್ಕೆ ತಕ್ಕಂತೆ ಬ್ರಷ್ಗಳಿಂದ ಬರೆಯುವ ಸರದಿ ಗಂಡಸರದು.  ಸಫೇದಿ ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಮೃದು, ಕ್ರೌರ್ಯ ಮತ್ತು ಸೌಮ್ಯ ಭಾವ ಪಾತ್ರಕ್ಕೆ ತಕ್ಕಂತೆ ಹೊಮ್ಮಿಸುವ ಕೈಚಳಕ ನೋಡಿ ಬೆರಗುಗೊಂಡೆ.  ನೋಡನೋಡುತ್ತಿದ್ದಂತೆ ಪಾರ್ವತಿಯ ಅವತಾರ ಧರಿಸಬೇಕಿದ್ದ ಗಂಡಸು ನಿಧಾನವಾಗಿ ಸ್ರ್ತೀ ವೇಶ ತಳೆಯುತ್ತಿದ್ದಂತೆ ಅವರೇ ಮಾಡಿಕೊಂಡ ಮೇಕಪ್ ಅಬ್ಬಾ! ಅನಿಸಿತು.  ಛೆ! ಇವಳ ಕೂದಲು ಸರಿಯಾಗಿಲ್ಲ, ಸ್ವಲ್ಪ ಬಾಚಲೆ ಅನಿಸಿ ತಕ್ಷಣ ಓ..ಇವಳು ಗಂಡಸು ಅಂತ ಜ್ಞಾಪಕವಾಗಿ ಕೈ ಹಿಂದೆ ಸರಿಯಿತು.  ಆಮೇಲೆ ಬೇರೊಬ್ಬ ಮೇಕಪ್ ಮ್ಯಾನ್ ಬಾಚುವುದ ನೋಡಿ ನನ್ನೊಳಗೆ ನಾನು ನಕ್ಕೆ.  ಕಾರಣ ಅಷ್ಟು ಚಂದ ಆ ಗಂಡಸು ಅಡಿಯಿಂದ ಮುಡಿಯವರೆಗೆ ಹೆಣ್ಣಾಗಿದ್ದು.
 
ಇತ್ತ ಮಹಿಳಾ ಮಣಿಗಳು ಧರಿಸಿರುವ ಬಟ್ಟೆಯ ಮೇಲೆ ಪಾತ್ರಕ್ಕೆ ತಕ್ಕಂತೆ ವಸ್ತ್ರಧರಿಸಲು ಅಲ್ಲೆ ಇದ್ದ ಮೇಕಪ್ ಮ್ಯಾನ್ಗಳು ಸಹಾಯ ಮಾಡುತ್ತಿದ್ದರು.  ಉದ್ದಕ್ಕೆ ಹಿಡಿದ ದಾರದ ಮೇಲೆ ಎರಡು ಅಥವಾ ಮೂರು ಸೀರೆಯನ್ನು ನಾಲ್ಕು ಮಡಿಕೆ ಮಡಚಿ ಅಡ್ಡ ಹಾಕಿ ದಾರವನ್ನು ಹಿಂದಿನಿಂದ ಸೊಂಟಕ್ಕೆ ಬಿಗಿಯಾಗಿ ಕಟ್ಟುತ್ತಾರೆ.  ಇದು  ಹಿಂದೆ ಪುಷ್ಟದ ಭಾಗಕ್ಕೆ ಆಕಾರ ಕೊಡುವ ತಂತ್ರ. ( ಹೆಣ್ಣು ವೇಶಕ್ಕೆ ಸೀರೆ ಉಡುವ ಮೊದಲೂ ಕೂಡ ಒಂದು ಸೀರೆ ಹಾಕಿ ಇದೇ ತಂತ್ರ ಉಪಯೋಗಿಸುತ್ತಾರೆ.)  ನಂತರ ಸುಮಾರು ಐದು ಮೀಟರ್ ಬಟ್ಟೆಯಲ್ಲಿ ವಿಶಿಷ್ಟ ರೀತಿಯಲ್ಲಿ ಕಚ್ಚೆ ಹಾಕಿ ಅದರ ಮೇಲೆ ಸುಮಾರು ನಾಲ್ಕು ಮೀಟರ ಬೆಲ್ಟನಿಂದ ಕಾಲ ಸಂಧಿಯನ್ನು ಬಳಸಿ ಸೊಂಟದ ಸುತ್ತ ಗಟ್ಟಿಯಾಗಿ ಸುತ್ತುತ್ತಾರೆ.  ಅದರ ಮೇಲೆ ಸುಮಾರು ಎರಡು ಮೀಟರ ಕಾಟನ್ ಸೀರೆಯ ಪಟ್ಟಿ ಮತ್ತೆ ಸೊಂಟಕ್ಕೆ ಸುತ್ತಿ ಬಿಗಿಯುತ್ತಾರೆ.  ನಂತರ ಮೇಲೊಂದು ತುಂಬು ತೋಳಿನ ಅಂಗಿ ಧರಿಸಿ ಇದರ ಮೇಲೆ ಒಂದು ಸೀರೆಯಷ್ಟು ಬಟ್ಟೆ ಇರುವ ಜರಿಯಂಚಿನ ನಿರಿಗೆ ಮಾಡಿ ಹೊಲಿದಿರುವ ಚಂದದ ಗೆಜ್ಜೆವಸ್ತ್ರ ಸೊಂಟದ ಸುತ್ತ ಕಟ್ಟುತ್ತಾರೆ.   ತೋಳಿಗೆ ತೋಳ ಬಂದಿ, ಸೊಂಟಕ್ಕೆ ಚಂದದ ರಾಗಟೆಯಂತಿರುವ ಸೊಂಟದ ಪಟ್ಟಿಗಳು, ಕೊರಳಿಗೆ ಹಾರಗಳು, ಕಾಲಿಗೆ ಗೆಜ್ಜೆ,ಅದಕ್ಕೊಂದು ಕವಚ ಇತ್ಯಾದಿ ಪರಿಕರಗಳು ಹೊತ್ತ ದೇಹ ತಲೆಯ ಶೃಂಗಾರ ಮುಂದಿನ ಸರಣಿ.  ವಿಷ್ಣುವಿಗೆ ಶಿರಕ್ಕೆ ಕಟ್ಟುವ ಕಿರೀಟ ಪಗಡೆ ಎಂದು ಹೇಳಿದರೆ ಈಶ್ವರನಿಗೆ ಶಿಖೆ(ಜಟೆ)ಕಟ್ಟುವುದೆಂದು ಹೇಳುತ್ತಾರೆ.  ಇನ್ನು ಭಸ್ಮಾಸುರನಿಗೆ ಧೈತ್ಯ ಆಕಾರ ತರಿಸುವಲ್ಲಿ ಮಗ್ನವಾಗಿದ್ದರು ಮತ್ತೊಬ್ಬರು.  
 
ಇತ್ತ ಮೋಹಿನಿ ಪಾತ್ರಧಾರಿ ನನ್ನ ಗೆಳತಿ ರೆಡಿಮೇಡ್ ನಾಟ್ಯ ಸರಸ್ವತಿ ಸೀರೆ ಧರಿಸಿ ಸರ್ವಾಲಂಕಾರ ಭೂಷಿತಳಾಗಿ ನಿಂತಿದ್ದು ಚಂದದ ಮೋಹಿನಿಯಾಗಿ ಕಣ್ಣು ಕುಕ್ಕುವಂತಿದ್ದಳು.  ಇನ್ನು ಯಕ್ಷಗಾನಕ್ಕೆ ವೇಷ ಧರಿಸಲು ಕನಿಷ್ಟ ಎರಡು ಗಂಟೆ ಬೇಕಾಗುತ್ತದೆ ಹಾಗೆ ಎಲ್ಲ ವೇಶ ಕಳಚಲು ಅರ್ಧ ಗಂಟೆ ಬೇಕೆಂಬ ಮಾಹಿತಿ ಅವಳಿಂದ ತಿಳಿದು ಸುಸ್ತಾದೆ.  ಅಬ್ಬಾ! ಇಲ್ಲಿ ತಾಳ್ಮೆಯ ಅಗತ್ಯ ಎಷ್ಟೊಂದು ಇರಬೇಕಲ್ಲವೆ?
 
ಯಕ್ಷಗಾನದಲ್ಲಿ  ಪುರುಷ ವೇಶಧಾರಿಯು ಪೂರ್ತಿ ಶೃಂಗಾರಗೊಂಡಾಗ ಅವನು ಸುಮಾರು ಇಪ್ಪತ್ತು ಕೇಜಿಯಷ್ಟು ಭಾರ ಹೆಚ್ಚಾಗಿರುತ್ತಾನೆ.  ಸ್ತ್ರೀ ವೇಶಧಾರಿ ಸುಮಾರು ಹತ್ತು ಕೇಜಿ ಜಾಸ್ತಿ ಆಗಿರುತ್ತಾಳೆ.  ಇಲ್ಲಿ ಪುರುಷ ಸ್ತ್ರೀ ಆಗಿ, ಸ್ತ್ರೀ ಪುರುಷಳಾಗಿ ವೇಶ ಧರಿಸಿ ಇಷ್ಟೊಂದು ಭಾರ ಹೊತ್ತು ಯಕ್ಷಗಾನ ಕುಣಿಯಬೇಕೆಂದರೆ ಊಹಿಸಿ ಅದೆಷ್ಟು ಶ್ರಮವಹಿಸಿ ನಟಿಸಬೇಕಾಗುತ್ತದೆ!  
 
 ನಾನು ಕೇಳಿದೆ "ಹೇಗೆ ಇಷ್ಟು ಭಾರ ಹೊತ್ತು ನಟಿಸ್ತೀರಾ? ಕಷ್ಟ ಅಗೋದಿಲ್ವಾ?  "ಇಲ್ಲ. ನಮಗೆ ರಂಗಸ್ಥಳ ಪ್ರವೇಶಿಸಿದಂತೆ ಆಯಾ ಪಾತ್ರದಲ್ಲಿ ಮಗ್ನವಾಗಿ ಬಿಡುತ್ತೇವೆ.  ಹಸಿವೆ, ನಿದ್ರೆ, ಆಯಾಸ ಯಾವುದೂ ನಮ್ಮ ಗಮನಕ್ಕೆ ಬರುವುದಿಲ್ಲ.  ಯಾವಾಗ ವೇಶ ಕಳಚುತ್ತೇವೊ ಆಗ ವಾಸ್ತವದತ್ತ ನಮ್ಮ ಗಮನ."  "ಮತ್ತೆ ಮೂರು ತಾಸಿನ ಯಕ್ಷಗಾನ ಕೇವಲ ಒಂದು ಒಂದೂವರೆ ಗಂಟೆಗೆ ಹೇಗೆ ಸೀಮಿತ ಮಾಡುತ್ತೀರಾ?  ಮೊದಲೇ ಡೈಲಾಗ್ ಕಾರ್ಯಕ್ರಮ ನಿರ್ವಹಣಾಧಿಕಾರಿ ಕೊಟ್ಟ ಸಮಯಕ್ಕೆ ತಕ್ಕಂತೆ ಬದಲಾಯಿಸಿ ಉರು ಹಾಕಿರ್ತೀರಾ?"  "ಇಲ್ಲ ಹಾಗೇನಿಲ್ಲ.  ಭಾಗವತರು ಅದೆಲ್ಲ ನೋಡಿಕೊಳ್ಳುತ್ತಾರೆ.  ಅವರು ಹಾಡಿದ್ದು ಅರ್ಥ ಮಾಡಿಕೊಂಡು ಆ ಸಂದರ್ಭದಲ್ಲಿ ಏನು ಮಾತಾಡಬೇಕೆಂಬುದನ್ನು ಅರಿತು ಮಾತಾಡುತ್ತೇವೆ.  ನಮ್ಮ ನಮ್ಮಲ್ಲಿ ಕೆಲವೊಂದು ಸೂಚನೆಗಳಿಂದ ನಿಯಂತ್ರಿಸಿಕೊಳ್ಳುತ್ತೇವೆ.  ಎಲ್ಲೂ ತಪ್ಪೋದಿಲ್ಲ."   ನಿಜಕ್ಕೂ ಆಶ್ಚರ್ಯವಾಯಿತು ಅವರೆಲ್ಲರ ನಿಪುಣತೆ ತಿಳಿದು.  
 
ಇವೆಲ್ಲವುಗಳ ಮದ್ಯೆ ಕಟ್ಟಿರುವ ಸ್ಟೇಜ್ ಕಡೆ ನಡೆದಾಗ ಅಲ್ಲಿ ಬಡಾವಣೆಯ ಚಿಕ್ಕ ಮಕ್ಕಳ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಜಿಟಿ ಜಿಟಿ ಸಣ್ಣ ಹನಿ ಮಳೆ ಸುರಿಯುತ್ತಿತ್ತು.  ಆಗಲೇ ಮುಂದಿನ ಕಾರ್ಯಕ್ರಮ ಮಹಿಳಾ ಯಕ್ಷಗಾನ, ಮಂಗಳೂರು ತಂಡದಿಂದ ಅಂದಾಗ ಕಸಿವಿಸಿಯಾಗಿ ಬಂದು ನನ್ನ ಗೆಳತಿಗೆ ವರದಿ ಮುಟ್ಟಿಸಿದೆ.  "ಗೀತಕ್ಕಾ ಅವರಿಗೆ ಹೇಳು ಮಲೆನಾಡಿನ ಸಿರ್ಸಿಯವರದು ಎಂದು.  ಎಲ್ಲೊ ಕನಫ್ಯೂಸ್ ಆತು ಅವಕೆ."  ನೋಡಿ ಆಗಲೇ ನಮ್ಮವರೆಂಬ ಅಭಿಮಾನ ಹುಟ್ಟು ಹಾಕಿದ್ದರಿಂದ ನನಗೆ ತಡಕೊಳೋಕೆ ಆಗಲಿಲ್ಲ.  ಆಮೇಲೆ ಹೋಗಿ ಹೇಳಿ ಸರಿ ಮಾಡಿಸಿದ್ದೂ ಆಯಿತು.
 
ಹಾಡು ಹೇಳುವ ಭಾಗವತರು ತಾಳ ಮದ್ದಳೆ ಭಾರಿಸುವವರು ಬಿಳಿ ಕುರ್ತಾ ಪಂಚೆ ಕೆಂಪು ಪೇಟಾದಲ್ಲಿ ರೆಡಿಯಾಗಿ  ನಿಂತಿದ್ದರು.  ಮೊದಲೇ ದೀಪ ಹಚ್ಚಿ ಗಣಪತಿಯ ಪಟ ಇಟ್ಟು ಹೂವೇರಿಸಿ ಕೈ ಮುಗಿದು ಶೃಂಗಾರಗೊಳ್ಳಲು ಅಣಿಯಾದವರೆಲ್ಲರೂ ಈಗ ಪೂರ್ಣ ವೇಶ ಧರಿಸಿ ವಿಷ್ನ ನಿವಾರಕ ಗಣಪತಿಗೆ ಮೊದಲ ಪೂಜೆಯ ಭಾಗವತರ ಹಾಡಿನೊಂದಿಗೆ ತಾವೂ ಕೈ ಮುಗಿದು ನಿಂತರು.  ಆರತಿ ಬೆಳಗಿ ಎಲ್ಲರೂ ಆರತಿ ಸ್ವೀಕರಿಸಿ ಆಟಕ್ಕೆ ಅಣಿಯಾದಾಗ 8.00pm ದಾಟಿತ್ತು.  ಹೊರಗೆ ಮಳೆ ಜೋರಾಯಿತು.  ಇರುವ ಖುರ್ಚಿಗಳೆಲ್ಲ ಖಾಲಿ ಖಾಲಿ.  ನಂತರ ಎಲ್ಲರ ಒಮ್ಮತದ ತೀರ್ಮಾನದಂತೆ ಆ ಮನೆಯೊಡತಿಯ ಒಪ್ಪಿಗೆಯ ಮೇರೆಗೆ ಅವರ ಮನೆಯ ದೊಡ್ಡ ಜಗುಲಿಯಲ್ಲೇ ಯಕ್ಷಗಾನ ಮಾಡುವುದೆಂದು ತೀರ್ಮಾನವಾಯಿತು.  ಸುಮಾರು ಐವತ್ತು ಜನ ಕಾತರದಿಂದ ಕಾರ್ಯಕ್ರಮ ವೀಕ್ಷಿಸುತ್ತಿದ್ದರು.
 
ಅಂದಾಃಗೆ ಇದು "ಮೋಹಿನಿ ಭಸ್ಮಾಸುರ " ಯಕ್ಷಗಾನ.  ಆದುದರಿಂದ ಇಲ್ಲಿ ಬರುವ ಪಾತ್ರಗಳು ಈಶ್ವರ, ಪಾರ್ವತಿ,ಭಸ್ಮಾಸುರ ಮೋಹಿನಿ ಮತ್ತು ಶ್ರೀ ಮಹಾವಿಷ್ಣು.  "ಕೈಲಾಸದಲ್ಲಿ ಈಶ್ವರ ಪಾರ್ವತಿಯರ ಸಂಭಾಷಣೆ.  ಈಶ್ವರ ಸತಿಯನ್ನು ತಮ್ಮಿಬ್ಬರ ಸಂಸಾರ ಜೀವನದ ಕುರಿತು ಗುಣಗಾನ ಮಾಡುತ್ತ ಅದಕ್ಕೆ ತಕ್ಕಂತೆ ಪಾರ್ವತಿ ಅವನಲ್ಲಿ ಪ್ರೇಮಾನಂದದಿಂದ ಕಳೆಯುತ್ತಿರಲು ತಟ್ಟನೆ ಈಶ್ವರನಿಗೆ ತನ್ನ ಸಾಯಂಕಾಲದ ಸಂಧ್ಯಾವಂದನೆಯ ನೆನಪಾಗಿ ಪವಿತ್ರವಾದ ವಿಭೂತಿಯನ್ನು ತರಲು ಹೇಳುತ್ತಾನೆ.  ಪಾರ್ವತಿ ಇದೆ ಆನಂದದಲಿ ಮೈ ಮರೆತು ವಿಭೂತಿ ತರುತ್ತಾಳೆ.  ಅದನ್ನು ನೋಡಿದ ಈಶ್ವರ ಛೆ!ಇದು ಅಪವಿತ್ರವಾಗಿದೆ ಎಂದು ಆರ್ಭಟಿಸಿ ನೆಲಕ್ಕೆ ಬಿಸಾಡಲು ಮುಂದಾದಾಗ ಪಾರ್ವತಿ ತಡೆದರೂ ಕೇಳದೆ ಬಿಸಾಡಿದ ಪರಿಣಾಮ ಭೂ ಲೋಕದಲ್ಲಿ ಅನೇಕ ಅನಾಹುತಗಳು ನಡೆದು ತಾಮಸ ಗುಣದ ಧೈತ್ಯ ವ್ಯಕ್ತಿ ಹುಟ್ಟಿ ಇವರ ಮುಂದೆ ಬಂದು ನಿಲ್ಲುತ್ತಾನೆ.  ಅವನಿಗೆ ಮಾತು ಕಲಿಸಿ ಅವನಿಗೆ ಭಸ್ಮಾಸುರನೆಂದು ಹೆಸರಿಡುತ್ತಾರೆ.  ಅವನಿಗೆ ಮೂರೊತ್ತೂ ಶಿವನಿಗೆ ಭಸ್ಮ ತರುವ ಕೆಲಸ ಕೊಟ್ಟಾಗ ಕ್ರಮೇಣ ಕುಪಿತಗೊಂಡು ಶಿವನಲ್ಲಿ ಅಳುವ ನಾಟಕವಾಡಿ ಒಲಿಸಿ ವರವೊಂದ ಬೇಡುತ್ತಾನೆ. ಅದೇ ಉರಿ ಹಸ್ತ ವರ. ಅಂದರೆ ಭಸ್ಮಾಸುರ ಯಾರ ತಲೆಯ ಮೇಲೆ ಕೈ ಇಡುತ್ತಾನೊ ಅವರು ಭಸ್ಮವಾಗಬೇಕು.  ತಥಾಸ್ತು ಅಂದ ಶಿವ.  ಖುಷಿಯ ಅಹಂಕಾರದಲ್ಲಿ ಹದಿನಾಲ್ಕು ಲೋಕ ಸುತ್ತುತ್ತ ಅನಾಚಾರ ಮಾಡುತ್ತಿರುವ ಇವನನ್ನು ವಧಿಸಲು ಶ್ರೀ ಮಹಾವಿಷ್ಣು ಮೋಹಿನಿಯ ವೇಷ ಧರಿಸಿ ಅವನನ್ನು ತನ್ನ ಸೌಂದರ್ಯ ಹಾವ ಭಾವದಲ್ಲಿ  ಮರುಳುಗೊಳಿಸಿ ತನ್ನೊಂದಿಗೆ ಕುಣಿಯುವ ಷರತ್ತು ಒಡ್ಡಿ  ತನ್ನ ತಲೆಯ ಮೇಲೆ ತಾನು ಕೈ ಇಡುವಂತೆ ಮಾಡಿ ಅವನು ಕೊನೆಯುಸಿರೆಳೆಯುವಂತೆ ಮಾಡುತ್ತಾಳೆ.   ಇದು ಕಥೆಯ ಸಾರಾಂಶ.
 
ಹೊರಗೆ ಮಳೆ ತನ್ನ ಪಾಡಿಗೆ ತಾನು ಸುರಿಯುತ್ತಿತ್ತು ಒಳಗೆ ಯಕ್ಷಗಾನ ಯಾವ ಅಡೆ ತಡೆಯಿಲ್ಲದೆ ನಡೆಯುತ್ತಿತ್ತು.  ಕ್ಯಾಮೆರಾ ಮೊಬೈಲುಗಳು ತಮ್ಮ ತಮ್ಮ ಕೆಲಸದಲ್ಲಿ ಮಗ್ನವಾಗಿದ್ದರೆ ಯಕ್ಷಗಾನ ವೀಕ್ಷಿಸುವ ಕಣ್ಣುಗಳು ಮಿಟುಕದೆ ಯಕ್ಷಗಾನ ವೀಕ್ಷಿಸುತ್ತಿದ್ದವು.  ಕುಣಿಯುವ ಹೆಜ್ಜೆಗಳ ಸಪ್ಪಳ ಅತ್ಯಂತ ಹತ್ತಿರದಿಂದ ವೀಕ್ಷಿಸುವ ಸದವಕಾಶ ಇದೊಂದು ಆಕಸ್ಮಿಕ.  ಎಲ್ಲರ ಗಮನ ಅವರ ವೇಶ ಭೂಷಣ ಅವರಾಡುವ ನಗು ತರಿಸುವ ಮಾತುಗಳು ಹಾವ ಭಾವದಲ್ಲಿ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ ಎಂದು ಯಕ್ಷಗಾನ ಮುಗಿದಾಗ ಎಲ್ಲರ ಬಾಯಲ್ಲೂ ಇದೇ ಮಾತು.  
 
ಯಕ್ಷಗಾನ ತುಂಬಾ ಚೆನ್ನಾಗಿ ನಡೆಯಿತು. ಅದರಲ್ಲೂ ನನ್ನ ಗೆಳತಿಯ ಮೋಹಿನಿ ನೃತ್ಯ ಭಸ್ಮಾಸುರನನ್ನು ಮರುಳುಗೊಳಿಸುವ ಹಾವ ಭಾವ ಅವಳ ನೃತ್ಯದ ಶೈಲಿ ಕೇವಲ ವಿಡಿಯೋದಲ್ಲಿ ಕಂಡಿದ್ದೆ.  ಇಲ್ಲಿ ಕಣ್ಣೆದುರಿನಲ್ಲೇ ಕಂಡು ಕಣ್ಮನ ತಣಿಯಿತು.  ಇಷ್ಟು ಹೊತ್ತು ಕಾದಿದ್ದಕ್ಕೂ ಸಾರ್ಥಕ ಭಾವ ನನಗಾಯಿತು.
 
ಕಾರ್ಯಕ್ರಮದ ಕೊನೆಯಲ್ಲಿ ಬಡಾವಣೆಯ ಹಿರಿಯರು ಎಲ್ಲರಿಗೂ ಪುಷ್ಟಗುಶ್ಚ ಕೊಟ್ಟು ಅಭಿನಂದಿಸಿ ಗುಂಪಿನ ಫೋಟೋದೊಂದಿಗೆ ಬೀಟ್ಕೊಟ್ಟಾಗ ಗಂಟೆ 9.30pm ದಾಟಿತ್ತು. ಮಳೆಯೂ ನಿಂತಿತ್ತು.
 
ಇಲ್ಲೊಂದು ಮಾತು ನಾನು ಹೇಳಲೇ ಬೇಕು.  ಹೆಣ್ಣು ತಾನು ಕಲಿತ ವಿದ್ಯೆ ಮದುವೆಯಾದ ನಂತರವೂ ಮುಂದುವರಿಸಿಕೊಂಡು ಹೋಗಲು ಕೈ ಹಿಡಿದವನ ಪ್ರೋತ್ಸಾಹ ಬೇಕೇ ಬೇಕು.  ಹಾಗಿದ್ದರೆ ಮಾತ್ರ ಕಲೆಯನ್ನು ಬೆಳೆಸಲು ಸಾಧ್ಯ.  ಜೀವನವೆಂದರೆ ಮದುವೆ,ಸಂಸಾರ ಮಕ್ಕಳು ಇಷ್ಟೇ ಎಂದು ಭಾವಿಸದೆ ಚಿಕ್ಕಂದಿನಿಂದ ಕಲಿತ ವಿದ್ಯೆಗೆ ಚುತಿ ಬಾರದಂತೆ ಅಂತಹ ಗಂಡನನ್ನೇ ಆರಿಸಿಕೊಂಡು ತಾವಿರುವ ಸ್ಥಳದ ಸುತ್ತ ಮುತ್ತ ಆಹ್ವಾನವಿತ್ತ ಕಾರ್ಯಕ್ರಮಕ್ಕೆ ಊರಿಂದ ಊರಿಗೆ ಹೋಗಿ ಯಕ್ಷಗಾನ ನಡೆಸಿಕೊಡುವ ಇವರನ್ನು ಎಷ್ಟು ಹೊಗಳಿದರೂ ಸಾಲದು.  ಇವರಲ್ಲಿ ಒಂದಿಬ್ಬರು ಮದುವೆಯಾಗಿ ಮಕ್ಕಳಾದ ಮೇಲೆ ಗಂಡನ ಅನುಮತಿಯ ಮೇರೆಗೆ ಈ ಕಲೆಯನ್ನು ಕಲಿತು ಮುಂದುವರೆಸಿಕೊಂಡು ಬಂದವರೂ  ಇದ್ದಾರೆ.  ಸಿರ್ಸಿ, ಯಲ್ಲಾಪುರ, ಸಾಗರ,ಬೆಂಗಳೂರಿನಲ್ಲಿ ಇರುವ ಮಹಿಳೆಯರಿವರು.  ಮೊದಲ ದಿನ ರಾತ್ರಿ ಬಸ್ಸು ಹತ್ತಿ ಬೆಳಗ್ಗೆ ಬೆಂಗಳೂರು ತಲುಪಿ ಸಾಯಂಕಾಲ ಯಕ್ಷಗಾನ ಕುಣಿದು ಮತ್ತೆ ಮಾರನೆ ದಿನ ಊರಿನತ್ತ ಪ್ರಯಾಣ.  ಹೀಗೆ ಹಲವಾರು ಊರುಗಳಲ್ಲಿ ಪ್ರದರ್ಶನ ನೀಡಿದ ಅನುಭವ ಹಂಚಿಕೊಂಡಾಗ ತಿಳಿದು ಖುಷಿ ಆಯಿತು.  
 
ಇದಕ್ಕೇ ಹೇಳೋದು ಛಲಗಾತಿಯರಿವರು.  ನಿಜಕ್ಕೂ ಇವರೆಲ್ಲರ ಬಗ್ಗೆ ಹೆಮ್ಮೆಯಾಗುತ್ತದೆ.  ಇವರನ್ನು ಮದುವೆಯಾಗಿ ಇವರ ಕಲೆಗೆ ಸಹಕಾರ ನೀಡುವ ಗಂಡಂದಿರ ಬಗ್ಗೆ ಗೌರವ ಮೂಡುತ್ತದೆ.   ಇಂತಹ ಕಲಾವಿದರ ಕಲೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ !
 
20-8-2017. 7.15pm