ಕಗ್ಗ ದರ್ಶನ – 5 (1)
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ?
ಸಂದರ್ಭ ಬರಲಿ, ಬಂದಾಗಳಾ ಚಿಂತೆ
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು
ಇಂದಿಗಂದಿನ ಬದುಕು - ಮಂಕುತಿಮ್ಮ
“ಮುಂದೆ ಏನಾಗುತ್ತದೋ, ಮತ್ತೆ ಏನಾಗುತ್ತದೋ” ಎಂಬ ಚಿಂತೆಯಲ್ಲಿ ಮುಳುಗಿರುವ ಹಲವರಿದ್ದಾರೆ. ಅಂಥವರನ್ನು ಉದ್ದೇಶಿಸಿ ಮಾನ್ಯ ಡಿ.ವಿ. ಗುಂಡಪ್ಪನವರು ಕೇಳುವ ನೇರ ಪ್ರಶ್ನೆ: “ಇಂದಿಗಾ ಮಾತೇಕೆ?”
ತಾಯಿಯೊಬ್ಬಳಿದ್ದಳು. ಅವಳಿಗೆ ಯಾವಾಗಲೂ ತನ್ನ ಮುದ್ದಿನ ಮಗಳ ಚಿಂತೆ. ಮಗಳಿಗೆ ಒಳ್ಳೆಯ ಗಂಡ ಸಿಗುತ್ತಾನೆಯೇ? ಅವನು ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಯೇ? ಒಂದು ವೇಳೆ ಅವನಿಂದ ಮಗಳಿಗೆ ತೊಂದರೆಯಾಗಿ, ಇವಳು ತವರು ಮನೆಗೆ ವಾಪಾಸು ಬಂದರೆ ….? ಆ ತಾಯಿಗೆ ತನ್ನ ಮಗಳ ಬಗ್ಗೆ, ಅವಳ ಭವಿಷ್ಯದ ಬಗ್ಗೆ ಇಂತಹ ಹತ್ತು ಹಲವು ಚಿಂತೆಗಳು. ಬೇರೆಯವರ ಜೊತೆ ಮಾತಾಡುವಾಗೆಲ್ಲ, ಆ ತಾಯಿ ಮತ್ತೆಮತ್ತೆ ಇವನ್ನೇ ಹೇಳುತ್ತಿದ್ದಳು. ಒಮ್ಮೆ ಇನ್ನೊಬ್ಬಾಕೆ ಆ ತಾಯಿಯ ಬಳಿ ಕೇಳಿದಳು, “ನಿಮ್ಮ ಮಗಳಿಗೆ ಈಗ ವಯಸ್ಸೆಷ್ಟು?” ಆ ತಾಯಿಯ ಉತ್ತರ, “ಅಯ್ಯೋ, ನನ್ನ ಮಗಳಿನ್ನೂ ಸಣ್ಣವಳು. ಐದನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ.”
“ಸಂದರ್ಭ ಬರಲಿ, ಬಂದಾಗಳಾ ಚಿಂತೆ” ಎಂಬ ಮಾತು ಇಂಥವರಿಗೇ ಹೇಳಿದ್ದು. ಯಾಕೆಂದರೆ, ತನ್ನ ಮಗಳು ಮದುವೆಯ ವಯಸ್ಸಿಗೆ ಬಂದಿದ್ದರೆ, ಆ ತಾಯಿ ಮಗಳ ಮದುವೆಯ ಬಗ್ಗೆ ಚಿಂತೆ ಮಾಡಬೇಕಾದ್ದು ಸಹಜ. ಈಗ, ತನ್ನ ಮಗಳ ಕಾಲೇಜಿನ ಓದಿನ ಬಗ್ಗೆ ಆ ತಾಯಿ ಚಿಂತಿಸಬೇಕೇ ವಿನಃ ಮಗಳ ಮದುವೆಯ ಬಗ್ಗೆ ಚಿಂತಿಸಬಾರದು.
ಇಂಥವರು, ತಾವು ಒಂದು ಸಮಸ್ಯೆಯ ಬಗ್ಗೆ ಚಿಂತಿಸಿದರೆ, ಅದು ಪರಿಹಾರವಾಗುತ್ತದೆ ಎಂದು ತಪ್ಪು ತಿಳಿಯುತ್ತಾರೆ. ಆದರೆ, ಅವರು ತಿಳಿಯಬೇಕಾದ ಸತ್ಯ: ಈ ಬದುಕಿನ ಆಗುಹೋಗುಗಳನ್ನು ನಿರ್ಧರಿಸುವವನು ಬೇರೊಬ್ಬನಿದ್ದಾನೆ. ಅವನು ನಮ್ಮ ಆಳಲ್ಲ. ಅಂದರೆ ಅವನು ನಮ್ಮ ನಿಯಂತ್ರಣಕ್ಕೆ ಒಳಪಟ್ಟಿಲ್ಲ.
ನಿಮ್ಮ ಬದುಕಿನ ಈ ವರೆಗಿನ ಘಟನೆಗಳನ್ನು ಪರಿಶೀಲಿಸಿದರೆ ನಿಮಗೆ ಈ ಸತ್ಯ ಮನದಟ್ಟಾಗುತ್ತದೆ. ಆದ್ದರಿಂದ, ಇಂದಿನ ಬದುಕಿನಲ್ಲಿ ಸುಖ ಕಂಡುಕೊಳ್ಳುವುದೇ ಜಾಣತನ.