ಕಗ್ಗ ದರ್ಶನ – 6 (1)
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ
ತಿನ್ನುವುದಾತ್ಮವನೆ - ಮಂಕುತಿಮ್ಮ
ಹಸಿವು ಎಂಬುದು ಬೆಂಕಿ, ಅಲ್ಲವೇ? ಅದಕ್ಕಿಂತಲೂ ದಗದಗಿಸುವ ಬೆಂಕಿ ಯಾವುದೆಲ್ಲ ಎನ್ನುವುದನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ ಸಾದರ ಪಡಿಸಿದ್ದಾರೆ. ಹೊಟ್ಟೆಯೊಳಗೆ ಹಸಿವು ಕುದಿಯುತ್ತಿರುವಾಗ ಏನನ್ನಾದರೂ ತಿನ್ನಲೇ ಬೇಕು. ಅದುವೇ ಅನ್ನದಾತುರ. ಕೆಲವರಿಗಂತೂ ತಿಂದಷ್ಟೂ ಹಿಂಗದ ಹಸಿವು.
ಇದಕ್ಕಿಂತ ತೀಕ್ಷ್ಣವಾದದ್ದು ಚಿನ್ನದಾತುರ. ಬಂಗಾರ ಇತ್ಯಾದಿ ಸಂಪತ್ತು ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂಬ ದುರಾಸೆ. ಕಂಡಿದ್ದೀರಾ ಚಿನ್ನದಂಗಡಿಗಳಲ್ಲಿ – ಮೈಯೆಲ್ಲ ಚಿನ್ನದೊಡವೆ ಹೇರಿಕೊಂಡವರು ಮತ್ತೆಮತ್ತೆ ಚಿನ್ನ ಖರೀದಿಸುವುದನ್ನು? ಎರಡೂ ಕೈಗಳಲ್ಲಿ ತಲಾ ಹತ್ತು ಚಿನ್ನದ ಬಳೆ ಹಾಕಿಕೊಂಡವರು, “ನನ್ನ ಕೈಗಳು ಬೋಳುಬೋಳಾಗಿ ಕಾಣಿಸುತ್ತಿವೆ” ಎಂದು ಕೊರಗುವುದನ್ನು?
ಇದಕ್ಕಿಂತಲೂ ತೀವ್ರವಾದ ಆತುರ ಮತ್ತೊಂದಿದೆ – ಅದುವೇ ಹೆಣ್ಣುಗಂಡೊಲವು. ಆಹಾ, ಏನು ಸೆಳೆತ ಹೆಣ್ಣು-ಗಂಡಿನ ನಡುವೆ! ಗಂಟೆಗಟ್ಟಲೆ ಜೊತೆಗೆ ಕೂತಿದ್ದರೂ ಅವರಿಗೆ ಎದ್ದೇಳಲು ಮನಸ್ಸು ಬಾರದು. ಸಾವಿರಾರು ಮೈಲುಗಳ ದೂರದಲ್ಲಿದ್ದರೂ, ಕ್ಷಣಕ್ಷಣವೂ ಪರಸ್ಪರರ ನೆನಕೆ. ಇದರ ಬಗ್ಗೆ ಬರೆಯಲಾಗಿರುವ ಸಾಹಿತ್ಯವಂತೂ ಸಾವಿರಾರು ಪುಟಗಳು: ಮಹಾಭಾರತದ ಕತೆಗಳು, ರಾಜರಾಣಿಯರ ಕತೆಗಳು, ಜಾನಪದ ಕತೆಗಳು, ರೋಮಿಯೊ – ಜೂಲಿಯೆಟ್ನಂತಹ ನಾಟಕಗಳು, ಕಾದಂಬರಿಗಳು, ಕವನಗಳು.
ಆದರೆ ಇವೆಲ್ಲವನ್ನೂ ಮೀರಿಸುವ ದಾಹವೊಂದಿದೆ – ಅದುವೇ ಕೆಂಪುಕೆಂಪು ಜ್ವಾಲೆ ಎಬ್ಬಿಸುವ ಅಗ್ನಿಕುಂಡದಂತಹ ಮನ್ನಣೆಯ ದಾಹ. ಪ್ರತಿಯೊಬ್ಬರೂ ತನಗೆ ಮಣೆ ಹಾಕಬೇಕೆಂಬ ತಣಿಯದ ದಾಹ. ಮದುವೆಮುಂಜಿಯಂತಹ ಸಮಾರಂಭಗಳಲ್ಲಿ ಏನಾಗುತ್ತದೆ ಎಂಬುದನ್ನು ಗಮನಿಸಿದ್ದೀರಾ? ಮುಗುಳುನಗೆಯೊಂದಿಗೆ ಒಳ ಬರುವ ಕೆಲವರ ಮುಖದ ನಗು ಮಾಯವಾಗಿ, ಮುಖ ಬಿರುಸಾಗುತ್ತದೆ. ಯಾಕೆ? ದ್ವಾರದಲ್ಲಿ ಅವರನ್ನು ಯಾರೂ ಸ್ವಾಗತಿಸಲಿಲ್ಲ; ಒಳ ಬಂದಾಗ ಮಾತಾಡಿಸಲಿಲ್ಲ ಎಂಬ ಸಣ್ಣ ಕಾರಣ. ಈ ದಾಹದಿಂದಾಗಿ ಸಂಸ್ಥೆಗಳು ಸತ್ತಿವೆ; ಕುಟುಂಬಗಳು ಒಡೆದಿವೆ; ಕ್ರೀಡಾತಂಡಗಳು ಸೋತಿವೆ; ಸರಕಾರಗಳು ಉರುಳಿವೆ. ಈ ಮನ್ನಣೆಯ ದಾಹ ನಮ್ಮ ಆತ್ಮವನ್ನೇ ನಾಶ ಮಾಡುತ್ತದೆ.