ನಾನು ನೋಡಿದ ಚಿತ್ರ- ಇಂಪ್ರೆಶನೆನ್ ಉಂಟರ್ ವಾಸರ್(ಜರ್ಮನ್)

ನಾನು ನೋಡಿದ ಚಿತ್ರ- ಇಂಪ್ರೆಶನೆನ್ ಉಂಟರ್ ವಾಸರ್(ಜರ್ಮನ್)

ಚಿತ್ರ

IMDb: Impressionen unter Wasser
 
  ನೇರವಾಗಿ ಹೇಳಬೇಕೆಂದರೆ ಇದೊಂದು ಸಮುದ್ರ ಜೀವಿಗಳ ಡಾಕ್ಯುಮೆಂಟರಿ. ಇದನ್ನು ನಿರ್ದೇಶಿಸಿದ್ದು ಲೆನಿ ರಿಫೆಂಷ್ಟಾಲ್. ಹತ್ತರಲ್ಲಿ ಹನ್ನೊಂದಾಗಬಹುದಾಗಿದ್ದ ಈ ಡಾಕ್ಯುಮೆಂಟರಿ ವಿಶೇಷ ಎನಿಸುವುದು, ಇದರ ನಿರ್ದೇಶಕಿಯ ಬಗ್ಗೆ ತಿಳಿದಾಗ ಮಾತ್ರ. ಈ ಚಿತ್ರ ಬಂದದ್ದು 2002ರಲ್ಲಿ ಮತ್ತು ಆಗ ನಿರ್ದೇಶಕಿಯ ವಯಸ್ಸು ‘ಕೇವಲ’ 100 ವರ್ಷ. ತನ್ನ ಕೊನೆಯ ಮೂವತ್ತು ವರ್ಷಗಳ ಕಾಲ ಇಳಿ ವಯಸ್ಸಿನಲ್ಲಿ ತಾನೇ ನೀರಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ನಿರ್ದೇಶಿಸಿ ಸೆರೆ ಹಿಡಿದ ಚಿತ್ರವಿದು. ಇದಷ್ಟೇ ಈಕೆಯ ಪರಿಚಯವಲ್ಲ. ಈಕೆ ನಾಜಿ ಜರ್ಮನಿಯನ್ನು ದ್ವೇಷಿಸಿದವರ ಕೆಂಗಣ್ಣಿಗೆ ಗುರಿಯಾದ ನಿರ್ದೇಶಕಿ. ಏಕೆಂದರೆ, ಈಕೆ ಹಿಟ್ಲರ್ ಗಾಗಿ ಅವನನ್ನು ವಿಜೃಂಭಿಸಿ ‘ಟ್ರಯಂಫ್ ಆಫ್ ದಿ ವಿಲ್’ ಮತ್ತು ಇತರೆ ನಾಜಿ ಜರ್ಮನಿಯ ಪ್ರಚಾರ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದಾಕೆ. ಈ ಕಾರಣಗಳಿಗಾಗಿ ಆಕೆಯನ್ನು ಎರಡನೇ ವಿಶ್ವ ಯುದ್ಧದ ನಂತರ ಹೀಗಳೆದವರು ಬಹಳ. ಆದರೆ ಆಕೆ ಮಾತ್ರ ತನಗೆ ಸಿಕ್ಕ ಅವಕಾಶಗಳನ್ನು ಸಿದ್ಧಾಂತಗಳ ಪರಿವೆಯಿಲ್ಲದೆ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು ಎಂದು ಚಿತ್ರ ನಿರ್ದೇಶಿಸಿದವಳು.

  ಚಿತ್ರದ ಮೊದಲಿಗೆ ಆಕೆ ಜರ್ಮನ್ ಭಾಷೆಯಲ್ಲಿ ಚಿತ್ರ ಯಾವುದೇ ವೈಜ್ಞಾನಿಕ ಡಾಕ್ಯುಮೆಂಟರಿಯಾಗಿರದೆ ಕೇವಲ ಒಂದು ಸಮುದ್ರದಾಳದ ಸುಂದರ ಲೋಕದ ಅನಾವರಣವಷ್ಟೇ ಎಂದು ತಿಳಿಹೇಳುತ್ತ ತಾನು ತೆಗೆದ ಈ ಚಿತ್ರ ಕೋರಲ್ ರೀಫ್ ಗಳು ಇನ್ನೂ ಆರೋಗ್ಯ ಸ್ಥಿತಿಯಲ್ಲಿದ್ದಾಗಲೇ ತೆಗೆದದ್ದು ಎಂದು ಪರೋಕ್ಷವಾಗಿ ಅವುಗಳ ಸಂತತಿ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ತೋರುತ್ತಾಳೆ. ನಿಮಗೆ ಜರ್ಮನ್ ಗೊತ್ತಿಲ್ಲದಿದ್ದರೆ ಈ ಚಿತ್ರದಲ್ಲಿ ನೀವು ಈ ಚಿತ್ರದ ಮೊದಲಿನಲ್ಲಿ ಆಕೆಯ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಶ್ ಸಬ್ ಟೈಟಲ್ ಗಳ ಸಹಾಯ ಪಡೆಯಬೇಕು. ಆದರೂ ನಿರ್ದೇಶಕಿಯ ಚಿತ್ರದ ಮೊದಲಿನ ಪರಿಚಯ ಬಿಟ್ಟರೆ ಉಳಿದ ಚಿತ್ರ ಮೌನ. ಹಿನ್ನಲೆ ಸಂಗೀತದದೊಂದಿಗೆ ಸಮುದ್ರದಾಳದ ವರ್ಣಮಯ ಲೋಕ, ಮೀನುಗಳು, ಹವಳಗಳು ಅವುಗಳ ಮೂಲ ವಾಸಸ್ಥಾನದಲ್ಲಿ ಅದ್ಭುತವಾಗಿ ಸೆರೆಹಿಡಿದಿರುವುದನ್ನು ನೋಡಬಹುದು.

 

ಚಿತ್ರ ವೀಕ್ಷಿಸಲು ಲಿಂಕ್: Impressionen unter Wasser- Youtube link 

Rating
No votes yet