ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡಬ್ಬ (ದೀಪಾವಳಿ)ದ ಆಚರಣೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡಬ್ಬ (ದೀಪಾವಳಿ)ದ ಆಚರಣೆ

ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೂ ಈ ಹಬ್ಬಗಳನ್ನು ಆಚರಿಸುವ ರೀತಿ ಕೂಡಾ ವಿಭಿನ್ನವಾಗಿದೆ. ಯಾವುದೇ ಹವ್ಯಕರ ಮನೆಗೆ ತೆರಳಿದರೂ ಹಬ್ಬ ಆಚರಿಸುವ ರೀತಿ, ಅಡುಗೆ ಮಾಡುವ ರೀತಿ, ಹವ್ಯಕ ಭಾಷೆ, ನಡೆ, ನುಡಿ, ಆದರಾಥಿತ್ಯ ಎಲ್ಲವೂ ಒಂದೇ ರೀತಿ ಇರುತ್ತದೆ. ಇದು ಉತ್ತರ ಕನ್ನಡದ ಹವ್ಯಕರ ನಡೆಯಾದರೆ ದಕ್ಷಿಣ ಕನ್ನಡದ ಕಡೆ ಹವ್ಯಕ ಭಾಷೆ ಹಬ್ಬ ಆಚರಣೆ ವಿಭಿನ್ನವಾಗಿ ಇರುತ್ತದೆ. ಅಡುಗೆ ಊಟ ಉಪಚಾರ ಪೂಜೆ, ಶಾಸ್ತ್ರ ಎಲ್ಲವೂ ವಿಭಿನ್ನವಾಗಿದೆ. ಎಲ್ಲರೂ ಹವ್ಯಕ ಬ್ರಾಹ್ಮಣರೇ ಆದರೂ ಸ್ವಲ್ಪ ವ್ಯತ್ಯಾಸ.
 
ಉತ್ತರ ಕನ್ನಡದ ಹವ್ಯಕರಿಗೆ ದೀಪಾವಳಿ ಬಹು ದೊಡ್ಡ ಹಬ್ಬ. ಈ ಹಬ್ಬ ವಿಶೇಷವಾಗಿ ಹಸುಗಳ ಹಬ್ಬ ಅಂದರೂ ತಪ್ಪಾಗಲಾರದು. ಅಮಾವಾಸ್ಯೆ ಎರಡು ದಿನ ಇರುವಾಗಲೆ ಹಬ್ಬ ಶುರುವಾಗುತ್ತದೆ. ಈ ಹಬ್ಬಕ್ಕೆ ಒಂದು ವಾರದಿಂದಲೆ ತಯಾರಿ ಶುರುವಾಗುತ್ತದೆ. ಮನೆಯೆಲ್ಲ ಶುಚಿಗೊಳಿಸಿ, ಅಂಗಳ ಮುಂಗಟ್ಟು ಒಪ್ಪ ಓರಣ ಮಾಡಿ ಬಣ್ಣ ಬಳಿದು ಅಂದಗೊಳಿಸುವ ಸಂಭ್ರಮ ಒಂದೆಡೆಯಾದರೆ ಹಸುಗಳನ್ನು ಕಟ್ಟುವ ಕೊಟ್ಟಿಗೆ ಕೂಡಾ ಶೃಂಗಾರಗೊಳ್ಳುತ್ತದೆ. ಈ ಹಬ್ಬಕ್ಕೆ ಶೇಡಿ ಮತ್ತು ಕೆಮ್ಮಣ್ಣು (ಇವೆರಡೂ ಮಣ್ಣು. ಅಲ್ಲಿಯ ಕೆಲವು ಪ್ರದೇಶಗಳಲ್ಲಿ ಸಿಗುತ್ತದೆ) ವಿಶೇಷ. ಇದನ್ನು ನೀರಿನಲ್ಲಿ ನೆನೆಸಿ ಬಟ್ಟೆಯ ಜುಂಜಿನಲ್ಲಿ ಅದ್ದಿಕೊಂಡು ಕೊಟ್ಟೆಗೆಯಲ್ಲಿ ಹಸು ಕಟ್ಟುವ ಗೂಟ, ಕೊಟ್ಟಿಗೆಯ ಕಂಬ, ಹೊಸಿಲಿಗೆ ಕೆಮ್ಮಣ್ಣು ಬಳಿದು ಶೇಡಿಯಿಂದ ಚಿತ್ತಾರ ಬಿಡಿಸಿ ಶೃಂಗರಿಸಿ ಬಾವಿ ಕಟ್ಟೆ, ತುಳಸಿ ಕಟ್ಟೆ ಶುಚಿಗೊಳಿಸಿ ಇದೇ ರೀತಿ ಕೆಮ್ಮಣ್ಣು ಬಳಿದು ಶೇಡಿಯಿಂದ ಚಿತ್ತಾರ ಬಿಡಿಸುವ ಪದ್ಧತಿ ಇದೆ. ಅಂತೂ ಎಲ್ಲಿ ನೋಡಿದರಲ್ಲಿ ಕೆಂಪು ಬಿಳಿ ಶೇಡಿ ಕೆಮ್ಮಣ್ಣಿನ ಅವತಾರವೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಮನೆ, ಕೊಟ್ಟಿಗೆ, ಬಾವಿ ಕಟ್ಟೆ, ತುಳಸಿ ಕಟ್ಟೆ, ಬಚ್ಚಲು ಮನೆ,ಊರಿನ ಭೂತಪ್ಪನ ಕಟ್ಟೆ, ಗ್ರಾಮದ ಭೂತಪ್ಪನ ಕಟ್ಟೆ ಎಲ್ಲಾ ಕಡೆ ಪೂಜೆಯ ಶಾಸ್ತ್ರ ನಡೆಯುವುದರಿಂದ ಶುಚಿಗೊಳಿಸಿ ಒಪ್ಪ ಓರಣ ಮಾಡುವುದು ಹಬ್ಬದ ಪೂವ೯ ತಯಾರಿ.
 
 ಇನ್ನೊಂದು ವಿಶೇಷ ಈ ಹಬ್ಬಕ್ಕೆ ಗೊಂಡೆ ಹೂವು (ಚೆಂಡು ಹೂವು) ಅಡಿಕೆ ಶಿಂಗಾರ ಇರಲೇ ಬೇಕು. ಬಾಗಿಲು ಕೊಟ್ಟಿಗೆಗೆಲ್ಲ ಮಾವಿನ ಎಲೆ ತೋರಣ ಈ ಹೂವಿನ ಮಾಲೆ. ಪ್ರತೀ ದಿನ ಹಬ್ಬದ ದಿನಕ್ಕೆ ತಕ್ಕಂತೆ ಹೆಂಗಳೆಯರು ಹಾಡು ಹೇಳುವುದು ಆಯಾ ದಿನಗಳ ಪೂಜೆಯ ಕಥೆಗಳನ್ನು ಒಳಗೊಂಡಿರುತ್ತದೆ.
 
ಮೊದಲು ಗಂಗೆ ತುಂಬುವ ಹಬ್ಬ ; ಅಷ್ಟಮಿ ದಿನ ಗಂಗಾಷ್ಟಮಿ. 
 
ನಂತರ ಬರುವ ತೃಯೋದಷಿ ದಿನ. ರಾತ್ರಿ ಶಿವನು ಗಂಗೆಯನ್ನು ವರಿಸಿ ಪಾವ೯ತಿಗೆ ಗೊತ್ತಾಗದಂತೆ ತನ್ನ ಶಿರದಲ್ಲಿ ಅಡಗಿಸಿಕೊಂಡ ಕಥೆಗೆ ಅನುಗುಣವಾಗಿ ಗಂಗೆಯನ್ನು ಆಹ್ವಾನಿಸುವ ಕ್ರಮ ಇದು.
 
ಈ ದಿನ ಅಡಿಗೆ ಮನೆ ಮತ್ತು ಬಚ್ಚಲು ಮನೆಯಲ್ಲಿ ಇರುವ ಹಂಡೆ ಇನ್ನಿತರ ನೀರು ತುಂಬುವ ಪರಿಕರಗಳನ್ನೆಲ್ಲ ತೊಳೆದು ಹೊಸದಾಗಿ ನೀರು ತುಂಬುತ್ತಾರೆ. ಹಂಡೆಗೆ ಶೇಡಿ ಕೆಮ್ಮಣ್ಣು ಚಿತ್ತಾರ ಬರೆದು ಶಿಂಡಲೆ ಕಾಯಿ ಬಳ್ಳಿ ( ಇದು ಅತ್ಯಂತ ಕಹಿ ಇರುವ ಸೌತೆ ಕಾಯಿ ಹೋಲುವ ಕಾಯಿ ಇರುವ ಬಳ್ಳಿ) ಸುತ್ತ ಕಟ್ಟುತ್ತಾರೆ. ದೇವರ ಮುಂದೆ ಒಂದು ಮಣೆಗೆ ಕೆಮ್ಮಣ್ಣು ಹಚ್ಚಿ. ಶೇಡಿಯಿಂದ ಚಿತ್ತಾರ ಬರೆದು ಒಂದು ಹಿತ್ತಾಳೆ ತಂಬಿಗೆಗೆ ಚಂಡು ಹೂವಿನ ದಂಡೆ ಕಟ್ಟಿ ಅದರ ಕೊರಳಿಗೆ ಸುತ್ತಿ ಒಂದು ಸೌತೆ ಕಾಯಿ ಹಾಗೂ ಮೊಗೇ ಕಾಯಿ(ಮಂಗಳೂರು ಸೌತೇಕಾಯಿ)ಗೆ. ಶೇಡಿಯಿಂದ ಬಲಿವೇಂದ್ರನ ಮುಖ ಹೋಲುವಂತೆ ಬರೆದು ಕಣ್ಣಿಗೆ ಹಣತೆಯ ದೀಪದಿಂದ ಮಾಡಿದ ಕಪ್ಪು ಚುಕ್ಕಿ ಇಟ್ಟು ಹೊಸ ಹಸು ಕಟ್ಟುವ ಡಾಬು ಅಡಿಕೆ ಶೃಂಗಾರ ಎಲ್ಲ ಜೋಡಿಸಿ ಮಾರನೇ ದಿನದ ಬಲಿವೇಂದ್ರನ ಆಹ್ವಾನಕ್ಕೆ ಅಣಿಗೊಳಿಸಲಾಗುತ್ತದೆ. ಮನೆಯಲ್ಲಿರುವ ಹಿತ್ತಾಳೆ ಬೆಳ್ಳಿ ದೀಪಗಳು ಶುಚಿಗೊಂಡು ಅಲ್ಲಿ ಕುಳಿತಿರುತ್ತವೆ. ಈ ಹಬ್ಬಕ್ಕೆ ವಿಳ್ಯೆದೆಲೆ ಮೇಲೆ ಗೋಟು(ಹಣ್ಣಾದ ಅಡಿಕೆ) ಅಡಿಕೆನೇ ಇಡಬೇಕು ಪೂಜೆಗೆ.
 
ಎರಡನೆ ದಿನ ನರಕ ಚತುಧ೯ಶಿ ಬಲಿವೇಂದ್ರನ ಪೂಜೆ ದಿನ. ನರಕಾಸುರನ ವಧೆಯಾದ ದಿನ.
 
ಈ ದಿನ ಮನೆಯ ಹೆಂಗಸರು ಸೂಯ೯ ಉದಯಕ್ಕೆ ಒಂದು ಗಂಟೆ ಮೊದಲೆ ಎದ್ದು ಎಣ್ಣೆ ಹಾಕಿಕೊಂಡು ಸ್ನಾನ ಮಾಡಿ ಮನೆಯೆಲ್ಲ ದೀಪ ಹಚ್ಚಿ ಮೊದಲು ಬಾವಿ ಕಟ್ಟೆಗೆ ಅರಿಶಿನ ಕುಂಕುಮ ಹೂ ಇಟ್ಟು ಎಣ್ಣೆ ಹಾಕಿ ಗಂಗೆ ಪೂಜೆ ಮಾಡಿ ನೀರು ಸೇದಿ ದೇವರ ಮನೆಗೆ ತರುತ್ತಾರೆ. ಅಲ್ಲಿ ಮೊದಲೆ ಅಣಿಗೊಳಿಸಿದ ತಂಬಿಗೆ ತುಂಬಾ ಅಕ್ಕಿ ಹಾಕಿ ಅದರ ಮೇಲೆ ತೆಂಗಿನ ಕಾಯಿ ದುಡ್ಡು ಅಡಿಕೆ ಶಿಂಗಾರ(ಅಡಿಕೆ ಹೂವು)ದಿಂದ ಅಲಂಕರಿಸಿ ಗಂಗೆ ತುಂಬಿದ ಇನ್ನೊಂದು ತಂಬಿಗೆಗೆ ಹೂ ಇಟ್ಟು ಚಿತ್ತಾರ ಬಿಡಿಸಿದ ಮಣೆಯ ಮೇಲೆ ವೀಳ್ಯೆದೆಲೆ ಗೋಟಡಿಕೆ ಎಲ್ಲವನ್ನೂ ಜೋಡಿಸಿಟ್ಟು ಎಣ್ಣೆ ಅರಿಶಿನ ಕುಂಕುಮ ದೇವರಿಗೂ ಅಪಿ೯ಸಿ ದೀಪ ಬೆಳಗುತ್ತಾರೆ. ತರಕಾರಿಯಲ್ಲಿ ಅರಳಿದ ಕಲ್ಪನೆಯ ಬಲಿವೇಂದ್ರ, ಬಣ್ಣ ಬಣ್ಣದ ಚೆಂಡು ಹೂವಿನಿಂದ ಅಲಂಕೃತಗೊಂಡ ಗಂಗೆ ನೋಡಲು ಚಂದ. ನಂತರದ ಸರದಿ ಮನೆಯ ಹೊಸಿಲು, ತುಳಸಿಕಟ್ಟೆ, ಕೊಟ್ಟಿಗೆಯ ಹಸುಗಳಿಗೆಲ್ಲ ಎಣ್ಣೆ ಅರಿಶನ ಕುಂಕುಮ ಹಚ್ಚುವ ಶಾಸ್ತ್ರ.
 
ಮದುವೆಯಾದ ಮೊದಲನೆ ವಷ೯ ಮಾವನ ಮನೆಗೆ ಅಳಿಯ ಬರಲೇ ಬೇಕು. ಬಂದ ಅಳಿಯ ಮಗಳು ಮನೆ ಮಂದಿಯೆಲ್ಲರನ್ನೂ ದೇವರ ಮುಂದೆ ಕಂಬಳಿ ಹಾಸಿ ಕೂಡಿಸಿ ಎಣ್ಣೆ ಹಚ್ಚುವ ಶಾಸ್ತ್ರ, ಆರತಿ ಬೆಳಗಿ ಎಲ್ಲರಿಗೂ ತಂದ ಹೊಸ ಬಟ್ಟೆ ಕೊಟ್ಟು ಹಿರಿಯರಿಗೆ ನಮಸ್ಕಾರ ಮಾಡಿ ಒಬ್ಬರಿಗೊಬ್ಬರು ಶುಭಾಶಯ ಹೇಳುವ ಪದ್ಧತಿ ಇದೆ. ಹಳೆಯ ಹಾಡುಗಳು ಹೆಂಗಸರ ಬಾಯಲ್ಲಿ ಆದರೆ ಆರತಿ ತಟ್ಟೆಗೆ ಎಷ್ಟು ದುಡ್ಡು ಬಿತ್ತು ಅಂತ ಹೆಣ್ಣು ಮಕ್ಕಳ ಲೆಕ್ಕಾಚಾರ. ಬಲು ತಮಾಷೆ ಆ ಕ್ಷಣ. ನಂತರ ವಿಧ ವಿಧ ತಿಂಡಿಗಳ ನತ೯ನ ಬೆಳಗಿನ ಉಪಹಾರದಲ್ಲಿ. ಕೆಲವು ಹಳ್ಳಿಗಳಲ್ಲಿ, ಎಲ್ಲರೂ ಸೇರಿ ಅವರವರ ಮನೆ ತಿಂಡಿಗಳನ್ನು ಹಂಚಿ ತಿನ್ನುವ ಪದ್ಧತಿ ಕೂಡಾ ಇದೆ. ಈ ದಿನ ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ತಪ್ಪದೇ ಮಾಡಲೇ ಬೇಕು. ಕೊಬ್ಬರಿ ಎಣ್ಣೆ ಚಮ೯ದ ರೋಗ ನಿವಾರಿಸುತ್ತದೆ ಅನ್ನುವ ನಂಬಿಕೆ.
 
ಇನ್ನು ಮಧ್ಯಾಹ್ನದ ಊಟಕ್ಕೆ ಕೆಂಪು ಕುಂಬಳಕಾಯಿ ಕಡುಬು. ರುಬ್ಬಿದ ಅಕ್ಕಿ ಹಿಟ್ಟು, ಕತ್ತರಿಸಿದ ಕುಂಬಳಕಾಯಿ ಹೋಳುಗಳು, ಬೆಲ್ಲ,,ಏಲಕ್ಕಿ ಎಲ್ಲವನ್ನೂ ಹದವಾಗಿ ಕಾಯಿಸಿ ಬಾಳೆ ಎಲೆ ಮೇಲೆ ಹಚ್ಚಿ ಮೇಲೆ ಹಸಿ ತೆಂಗಿನ ತುರಿ ಹರಡಿ ಮಡಚಿ ಹಬೆಯಲ್ಲಿ ಬೇಯಿಸುವ ಸ್ವಾಧಿಷ್ಟವಾದ ಸಿಹಿ ಖ್ಯಾಧ್ಯ. ಮನೆಯ ಯಜಮಾನ ಬಲಿವೇಂದ್ರನ ಆಹ್ವಾನ ಮಾಡಿ ದೇವರಿಗೆ ಪೂಜೆ, ನೈವೇದ್ಯ, ಜಾಗಟೆಯ ನಾದದಲ್ಲಿ ಮಂಗಳಾರತಿ ಬೆಳಗಿ ಎಲ್ಲರೂ ಒಂದೆಡೆ ಕುಳಿತು ಊಟ ಮಾಡುವ ನೋಟ ಅತೀ ಸುಂದರ. 
 
ಮೇಯಲು ಹೋದ ಹಸುಗಳು ಸಾಯಂಕಾಲ ವಾಪಸ್ಸು ಬರುವ ಹೊತ್ತಿಗೆ ಕೊಟ್ಟಿಗೆ ಬಾಗಿಲಲ್ಲಿ ವನಕೆ (ಅಕ್ಕಿ ಕುಟ್ಟುವ ಸಲಕರಣೆ) ಇಡುತ್ತಾರೆ. ಅದನ್ನು ದಾಟಿ ಬಂದ ಹಸುಗಳಿಗೆ ಹಾನ ಸುಳಿದು (ದೃಷ್ಟಿ ತೆಗೆದು) ಆರತಿ ಮಾಡಿ, ಮಾಡಿದ ಕಡುಬು ಪ್ರತೀ ಹಸುವಿನ ಬಾಯಿಗೆ ಇಟ್ಟಾಗ ಚಪ್ಪರಿಸಿಕೊಂಡು ತಿನ್ನುವುದು ಕಣ್ಣಾರೆ ನೋಡಬೇಕು. ಅಂಬಾ ಎಂದು ಇನ್ನೂ ಬೇಕೆನ್ನುವ ಸೌಂಜ್ನೆ ಹಸುಗಳ ಬಾಯಲ್ಲಿ. ಈ ಕಡುಬು ತಿನ್ನುವ ಉದ್ದೇಶ ದೇಹದ ನಂಜು ಹೊರಗೆ ಹೋಗಬೇಕೆನ್ನುವುದು.
 
ಮೂರನೇ ದಿನ ಅಮಾವಾಸ್ಯೆ ಹಬ್ಬ. ಲಕ್ಷೀ ಪೂಜೆ. ಆಯುಧ ಪೂಜೆ ಮಾಡುವ ದಿನ.
 
ದೇವರ ಪೂಜೆಯೊಂದಿಗೆ ನಗ ನಾಣ್ಯ ಇಡುವ ಬೀರು, ಉಪಯೋಗಿಸುವ ಆಯುಧ,ವ್ಯವಸಾಯದ ಸಲಕರಣೆ ಇತ್ಯಾದಿಗಳಿಗೆಲ್ಲ ಮಂತ್ರೋಪಚಾರಗಳಿಂದ ನೈವೇದ್ಯ ಆರತಿಯೊಂದಿಗೆ ಪೂಜೆ ಮಾಡುತ್ತಾರೆ.
 
ಊಟವಾದ ಮೇಲೆ ಊರಿನ ಹಿರಿಯರು ಕಿರಿಯರು ಎಲ್ಲ ಸೇರಿ ಅಂಗಳದಲ್ಲಿ ಸೂಳಗಾಯಿ ಆಟ ಶುರುವಾಗುತ್ತದೆ. ಮದ್ಯ ಇಟ್ಟಿರುವ ತೆಂಗಿನ ಕಾಯಿಗೆ ದೂರದಲ್ಲಿ ನಿಂತು ತೆಂಗಿನಕಾಯಿಯಿಂದಲೆ ಹೊಡೆಯ ಬೇಕು. ಗುರಿ ಇಟ್ಟವ ಗೆದ್ದ. ಇಲ್ಲೂ ಜಿದ್ದಿಗೆ ಜಿದ್ದು ಶುರುವಾಗಿ ಆಟದ ರಂಗೇರುತ್ತದೆ. ಗೌಜು ಗದ್ದಲ ನಗು ಕೆ ಕೆ. ನೋಡಲು ಚಂದ.
 
ಸಾಯಂಕಾಲ ಗೋಧೂಳಿ ಮಹೂತ೯ದಲ್ಲಿ ಲಕ್ಷೀ ಪೂಜೆ ಮಾಡುತ್ತಾರೆ. ಈ ದಿನ ಹಸುಗಳನ್ನು ಮೇಯಲು ಬಿಡುವುದಿಲ್ಲ.. ಹಗಲೆಲ್ಲ ಕೊಟ್ಟಿಗೆಯಲ್ಲಿ ಇರುವ ಹಸುಗಳಿಗೆ ಮೊದಲೆ ಸಂಗ್ರಹಿಸಿಟ್ಟುಕೊಂಡ ಹಸಿ ಹುಲ್ಲು ಇವುಗಳಿಗೆ ಆಹಾರ. ಕಾರಣ ಈ ಅಮಾವಾಸ್ಯೆ ದಿನ ಭೂತಗಳು ಹಸುವನ್ನು ಅಡಗಿಸುತ್ತವೆ ಅನ್ನುವ ಅನಾದಿಕಾಲದ ನಂಬಿಕೆ. ಈ ದಿನ ರಾತ್ರಿ ಮನೆ ಮಂದಿಯೆಲ್ಲ ಕೂತು ಬೆಟ್ಟದಲ್ಲಿ ಸಿಗುವ ಒಂದು ವಿಶಿಷ್ಟವಾದ ಬಳ್ಳಿಯನ್ನೆ ದಾರವಾಗಿ ಸೊಸೆದು ಅಡಿಕೆ,ಶಿಂಗಾರ, ಚೆಂಡು ಹೂವು, ಪಚ್ಚೆತೆನೆ(ಇದು ಪತ್ರೆ) ಯನ್ನು ವೀಳ್ಯೆದೆಲೆಯಲ್ಲಿ ಸುತ್ತಿ ಎಲ್ಲವನ್ನೂ ದಬ್ಬಣದ(ದೊಡ್ಡ ಸೂಜಿ) ಸಹಾಯದಿಂದ ಕೊಟ್ಟಿಗೆಯಲ್ಲಿರುವ ಎಲ್ಲ ಹಸುಗಳಿಗೂ ಕೊಟ್ಟಿಗೆ ಹಾಗೂ ಮನೆ ಪ್ರದಾನ ಬಾಗಿಲುಗಳಿಗೆ ಪೂಜೆ ನಡೆಯುವ ಕಡೆಯಲ್ಲೆಲ್ಲ ಸಾಕಾಗುವಷ್ಟು ಮಾಲೆಯನ್ನು ಕಟ್ಟುವ ಕೆಲಸ. ಪ್ರತೀ ಮನೆಯಲ್ಲಿ ಸೂಮಾರು ನೂರು ತೆಂಗಿನ ಕಾಯಿ ಪೂಜೆಗೆ ಅಣಿಗೊಳಿಸಿಕೊಂಡಿರುತ್ತಾರೆ.
 
ಇನ್ನೊಂದು ವಿಶೇಷ ಅಂದರೆ ಈ ಅಮಾವಾಸ್ಯೆ ಹಬ್ಬ ಬೂರ್ಗೋಳು ಹಬ್ಬ. ಕದಿಯುವ ಹಬ್ಬ. ಈ ಅಮಾವಾಸ್ಯೆಯ ರಾತ್ರಿ ಯಾರು ಯಾರ ಮನೆ ಹಿತ್ತಲ ತರಕಾರಿ ಕಾಯಿ ಇತ್ಯಾದಿ ಏನೇ ಕದ್ದರೂ ವಿರೋಧ ವ್ಯಕ್ತಪಡಿಸುವಂತಿಲ್ಲ. ಅದಕ್ಕಾಗಿ ಪ್ರತಿಯೊಂದು ಮನೆಯವರು ಮೊದಲೆ ಎಲ್ಲವನ್ನೂ ಕೊಯ್ದು ಜೋಪಾನ ಮಾಡಿಕೊಳ್ಳುತ್ತಾರೆ. ಆಮೇಲೆ ಅಮಾವಾಸ್ಯೆ ದಿನ ಬೂರ್ಗೋಳು ಆದರೆ ಅಂತ. ಕೆಲವರು ಈ ರಾತ್ರಿ ಬಹಳ ತಮಾಷೆ ಕಳ್ಳತನ ಮಾಡಿರುತ್ತಾರೆ. ಕರುವನ್ನು ಬಿಟ್ಟು ಹಾಲು ಕುಡಿಸೋದು, ಯಳ್ನೀರು ಕುಡಿದು ಸಾಲಾಗಿ ಊರ ರಸ್ತೆಯಲ್ಲಿ ಜೋಡಿಸಿಡೋದು, ಒಬ್ಬರ ಮನೆ ಒರಳಿನ ಗುಂಡು ಇನ್ನೊಬ್ಬರ ಮನೆಯಲ್ಲಿ ತಂದಿಡೋದು ಒಂದಾ ಎರಡಾ. ಮಾರನೇ ದಿನ ಬೆಳಿಗ್ಗೆ ಎಲ್ಲರ ಬಾಯಲ್ಲಿ ಗುಲ್ಲೋ ಗುಲ್ಲು. "ಯಮ್ಮನೆಲ್ಲಿ ಕರ ಬಿಟ್ಟಿಗೀದ್ವೆ. ಎಮ್ಮೆ ಹಾಲೇ ಕೊಟ್ಟಿದ್ದಿಲ್ಯೆ. ಯಮ್ಮಲ್ಲಿ ಒಳ್ಳು ಗುಂಡೇ ಇಲ್ಲೆ ಬೀಸನ ಅಂದ್ರೆ" ಅಂತೂ ಇದು ತಮಾಷೆಗಾಗಿ ಮಾಡೊ ಕುಚೇಷ್ಟೆ☺
 
ನಾಲ್ಕನೆಯ ದಿನ ಪಾಡ್ಯ, ಗೋ ಪೂಜೆ ಹಬ್ಬ.
 
ಈ ದಿನ ಹೊತ್ತಿಗೆ ಮುಂಚೆ ಎದ್ದು ಹೆಂಗಸರು ಸ್ನಾನ ಮಾಡಿ ಮಡಿಯುಟ್ಟು ಅಡಿಗೆ ಕೆಲಸದಲ್ಲಿ ತೊಡಗಿದರೆ ಗಂಡಸರು ಮಕ್ಕಳು ಹಸುಗಳಿಗೆ ಬಿಸಿ ನೀರಿನ ಸ್ನಾನ ಮಾಡಿಸುವ ಸಂಭ್ರಮದಲ್ಲಿ ತೊಡಗುತ್ತಾರೆ. ಅಂದು ಗೋ ಪೂಜೆ ಇಂತಿಷ್ಟೇ ಗಂಟೆಯೊಳಗೆ ಆಗಬೇಕು ಅಂತ ಪಂಚಾಂಗದಲ್ಲಿ ಉಲ್ಲೇಖಿಸಿರುತ್ತಾರೆ. ಆ ಪ್ರಕಾರವೇ ಪೂಜೆ ನೆರವೇರುತ್ತದೆ. ಸ್ನಾನ ಮಾಡಿದ ಗೋಗಳಿಗೆ ಶೇಡಿ ಕೆಮ್ಮಣ್ಣು ರಾಡಿಯಲ್ಲಿ ಸಿದ್ದೆ (ಅಕ್ಕಿ ಅಳೆಯುವ ಸಾಮಗ್ರಿ, ಅದು ಬೊಂಬಿನಿಂದ ಮಾಡಿರುತ್ತಾರೆ ಹಳೆಯ ಕಾಲದಲ್ಲಿ)ಯನ್ನು ಅದ್ದಿ ಎಲ್ಲ ಹಸುಗಳ ಮೈ ಮೇಲೆ ಇಟ್ಟಾಗ ರೌಂಡ ರೌಂಡ ಚಿತ್ತಾರಗಳಾಗಿ ಕಾಣುತ್ತವೆ. ಅವುಗಳನ್ನೆಲ್ಲ ಕೊಟ್ಟಿಗೆಯಲ್ಲಿ ಕಟ್ಟಿ ಹಸಿ ಹುಲ್ಲು ತಿನ್ನಲು ಹಾಕುತ್ತಾರೆ.
 
ಮನೆಯ ಉಳಿದ ಮಂದಿಯೆಲ್ಲ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟರೆ ಮನೆಯ ಎಜಮಾನ ಮಡಿ ಉಟ್ಟು ದೇವರ ಪೂಜೆ ಮಾಡಿ ಗೋ ಪೂಜೆ ಮಾಡಲು ಅಣಿಯಾಗುತ್ತಾರೆ. ಎಲ್ಲ ಹಸುಗಳ ಪಾದಕ್ಕೆ ನೀರು ಹಾಕಿ ಅರಿಶಿನ ಕುಂಕುಮ ಹಣೆಗೆ ಹಚ್ಚಿ ಮಾಲೆ ಹಾಕಿ ಕೊರಳಿಗೆ ಗಂಟೆ ಕಟ್ಟಿ ಪೂಜೆ ಮಾಡಿ ಪ್ರತೀ ಹಸುವಿಗೂ ಒಂದರಂತೆ ತೆಂಗಿನ ಕಾಯಿ ಒಡೆದು ಮಂಗಳಾರತಿ ಬೆಳಗಿದ ಮೇಲೆ ಎಲ್ಲರೂ ನಮಸ್ಕರಿಸುತ್ತಾರೆ. ಹೋಳಿಗೆ (ಒಬ್ಬಟ್ಟು) ಪಾಯಸ, ಬಾಳೆ ಹಣ್ಣು ,ಅಕ್ಕಿಯಿಂದ ಮಾಡಿದ ಅರಿಶಿನ ಹಾಕಿದ ತೆಳ್ಳೇವು(ನೀರ್ ದೋಸೆ ಅರಿಶಿನ ರೋಗ ನಿವಾರಕ ಎಂಟಿಬಯಾಟಿಕ್) ಚಿತ್ರಾನ್ನ ಪ್ರತಿಯೊಂದು ಹಸುವಿಗೂ ಬೇರೆ ಬೇರೆ ಪಾತ್ರೆಯಲ್ಲಿ ಹಾಕಿ ತಿನ್ನಲು ಕೊಡುತ್ತಾರೆ. ಇದಕ್ಕೆ ಗೋಗ್ರಾಸ ಎಂದು ಹೇಳುತ್ತಾರೆ. ಹಳೆಯ ಹಾಡುಗಳು ಹೆಂಗಳೆಯರ ಬಾಯಲ್ಲಿ.ಸುಶ್ರಾವ್ಯವಾಗಿ ಹರಿದಾಡುತ್ತದೆ. ನಂತರ ಅವುಗಳನ್ನು ಮೇಯಲು ಬಿಡುತ್ತಾರೆ. ಜಾಗಟೆಯ ಶಬ್ಬಕ್ಕೆ ಅತ್ತಿಂದಿತ್ತ ಇತ್ತಿಂದತ್ತ ಜಿಗಿದಾಡುವ ಕರುಗಳು ಜಿಂಕೆ ಮರಿಯಂತೆ ಕಾಣುತ್ತವೆ.
 
ಇತ್ತ ದೇವರಿಗೆ ಮಂಗಳಾರತಿ ಮಾಡಿದ ಯಜಮಾನನೊಂದಿಗೆ ಒಬ್ಬರು ಇರಲೇ ಬೇಕು. ಕುಲ ದೇವರ ಹೆಸರಲ್ಲಿ ಮನೆಯ ದೇವರಿಗೆ ಐದು ತೆಂಗಿನ ಕಾಯಿ, ಹೊಸಲಿಗೆ, ತುಳಸಿಗೆ, ಊರ ಭೂತದ ಕಟ್ಟೆಗೆ, ಹುಲದೇವರಿಗೆ(ಅಡಿಕೆ ತೋಟಕ್ಕೆ) ನಾಗದೇವರಿಗೆ, ಕೊಟ್ಟಿಗೆಗೆ ಇತ್ಯಾದಿ ಎಲ್ಲಾ ಕಡೆ ತೆಂಗಿನಕಾಯಿ ಒಡೆದು ಪೂಜೆ ಅಗಲೇ ಬೇಕು. 
 
ನಂತರ ಗ್ರಾಮದ ಭೂತಪ್ಪನ ಕಟ್ಟೆಗೆ ಎಲ್ಲರ ಪಯಣ. ಹೊಸ ಬಟ್ಟೆ, ಮನೆಯಲ್ಲಿಯ ಚಿನ್ನಾಭರಣ ಹೆಂಗಸರ ದೇಹವನ್ನು ಅಲಂಕರಿಸಿದರೆ ದೊಡ್ಡ ದೊಡ್ಡ ಎತ್ತುಗಳಿಗೆ ಕಿರೀಟದ ಶೃಂಗಾರ. ಸುತ್ತ ಹಳ್ಳಿಗಳ ಜನರು ಶೃಂಗಾರ ಗೊಂಡ ಎತ್ತುಗಳು ಭೂತಪ್ಪನ ಕಟ್ಟೆಗೆ ಬಂದು ಸೇರುತ್ತವೆ. ಜನ ದನ ,ಹೋ ಹೋ ಕೆ ಕೆ ನಗು, ಒಬ್ಬರಿಗೊಬ್ಬರಲ್ಲಿ ಮಾತಿನ ಅಬ್ಬರ ಹೊಸ ಮದು ಮಕ್ಕಳ ನೋಡುವ ಕಾತುರ, ಎತ್ತುಗಳನ್ನು ಇಷ್ಟಪಟ್ಟವರು ಓಡಿಸುವ ಸಂಭ್ರಮ ಎರಡು ಕಣ್ಣು ಸಾಲದು.
 
ಹಬ್ಬ ಜೋರಾಗಿ ಕಳೆ ಕಟ್ಟುತ್ತದೆ. ಭೂತಪ್ಪನ ಕಟ್ಟೆಗೆ ಪೂಜೆ ಯಾದ ನಂತರ ಪ್ರಸಾದ ಸ್ವೀಕರಿಸಿ ಅವರವರ ಮನೆಗೆ ತೆರಳುತ್ತಾರೆ. ಮನೆಗೊಬ್ಬರಂತೆ ಗ್ರಾಮದ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ನೈವೇದ್ಯ ಮಾಡಿಸಿಕೊಂಡು ಬರುತ್ತಾರೆ. ಮಾಡಿದ ಅಡಿಗೆಯ ಭೋಜನ ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಸ್ವೀಕರಿಸುತ್ತಾರೆ.
 
ಸಾಯಂಕಾಲ ಗೋವುಗಳು ಬರುವ ಹೊತ್ತಿಗೆ ಸರಿಯಾಗಿ ದೃಷ್ಟಿ ನಿವಾಳಿಸಲು ಬಟ್ಟಲು ರೆಡಿಯಾದರೆ ಶಿಂಡಲೆ ಕಾಯಿ ಆರತಿಯೂ ರೆಡಿಯಾಗ ಬೇಕು. ಕಡ್ಡಿಯ ತುದಿಯಲ್ಲಿ ತೆಳು ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಅದ್ದಿ ಕಡ್ಡಿಗಳನ್ನು ಶಿಂಡಲೆಕಾಯಿ ಲಿಂಬೆ ಹಣ್ಣು ಕತ್ತರಿಸಿದಂತೆ ಕತ್ತರಿಸಿ ಅದಕ್ಕೆ ಚುಚ್ಚಿ ತಟ್ಟೆಯಲ್ಲಿ ಜೋಡಿಸಿಡುತ್ತಾರೆ. ಬಂದ ಗೋವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ದೃಷ್ಟಿ ಬಳಿದು ಎಲ್ಲ ಗೋವುಗಳಿಗೂ ಆರತಿ ಬೆಳಗಿ ಶುಭ ಹಾರೈಸುವ ಪದ್ಧತಿ ಇದೆ. ಆರತಿ ಮಾಡಿದ ದೀಪಗಳನ್ನು ಹೊಸಿಲು, ಕೊಟ್ಟಿಗೆಯ ಬಾಗಿಲಿಗೆ, ತುಳಸಿ ಮುಂದೆ ಇಡುತ್ತಾರೆ. ದೊಡ್ಡ ಕಡ್ಡಿಯಿಂದ ಮಾಡಿದ ಜೊಂಜಿಗೆ ದೀಪ ಹಚ್ಚಿ ಗೊಬ್ಬರದ ಗುಂಡಿ, ಊರ ಭೂತಪ್ಪನ ಕಟ್ಟೆಗೆ ಇಡಲು ತೆರಳುವಾಗ ಮಕ್ಕಳ ಬಾಯಲ್ಲಿ ಜೈಕಾರ.
 
ಹಾಗೆ ಬಲಿವೇಂದ್ರನನ್ನು ಕಳಿಸುವ ಪದ್ಧತಿ ಇದೆ. ದೇವರ ಮುಂದೆ ಇಟ್ಟ ನೀರು ತುಂಬಿದ ತಂಬಿಗೆ ಶಿಂಗಾರದ ಸಮೇತ ಮನೆಯ ಮುಂದೆ ತಂದು "ದಿಪ್ಪಡ್ದ ದಿಪ್ಪಡ್ದ ದಿವೋಳ್ಗೊ ಹಬ್ಬಕ್ಕೊಂದು ಹೋಳಿಗ್ಯೊ ಬಲೀಂದ್ರ ಇವತ್ತೋಗಿ ಮುಂದಿನ ವಷ೯ ಮತ್ತೆ ಬಾ" ಎಂದು ಹೇಳುತ್ತ ಮನೆಯ ಮಾಡಿನ ಮೇಲೆ ಶಿಂಗಾರವನ್ನು ಒಗೆಯುತ್ತಾರೆ. ತಂಬಿಗೆಯ ನೀರಿನ ಪ್ರೋಕ್ಷಣೆ ಎಲ್ಲರಿಗೂ ಹಾಕಿ ಉಳಿದ ನೀರು ತೆಂಗಿನ ಮರದ ಬುಡಕ್ಕೆ ಹಾಕುತ್ತಾರೆ. ಕಲಶದ ಮೇಲಿನ ತೆಂಗಿನಕಾಯಿ ನೆಲದ ಮೇಲೆ ಇಡುವಂತಿಲ್ಲ. ಮೇಲೆ ಎತ್ತಿಡುತ್ತಾರೆ.
 
 
ಇಲ್ಲಿಂದ ಕಾತೀ೯ಕ ಮಾಸ ಶುರು. ಈ ಮಾಸದ ಉತ್ತಾನ ದ್ವಾದಶಿ ದಿನ ತುಳಸಿ ಮದುವೆ(ತುಳಸಿ ಕಾತೀ೯ಕ). ಈ ದಿನ ತುಳಸಿ ಮದುವೆ ಸಾಯಂಕಾಲ ಶಾಸ್ತ್ರೋಕ್ತವಾಗಿ ಮುಗಿದ ನಂತರ ಈ ಕಾಯಿಯನ್ನು ತುಳಸಿ ಕಟ್ಟೆಯ ಸುತ್ತ ಹೊರಳಾಡಿಸಿ ಒಡೆಯುತ್ತಾರೆ. ನಂತರ ಕಾಯಿ ತುರಿದು ಬೆಲ್ಲ ಸೇರಿಸಿ ಪ್ರಸಾದದ ರೂಪದಲ್ಲಿ ಎಲ್ಲರೂ ಸೇವಿಸುತ್ತಾರೆ.
 
ಹಬ್ಬದ ಕೊನೆಯ ದಿನ ಅಂದರೆ ನಾಲ್ಕನೆಯ ದಿನ ರಾತ್ರಿ ಬಿಂಗಿ ಕುಣಿಯುವವರು ಬರುವ ಪದ್ಧತಿ ಇದೆ. ಹಳ್ಳಿ ಅಂದ ಮೇಲೆ ಅಲ್ಲೊಂದು ಒಕ್ಕಲಿಗರ ಕೇರಿ ಹತ್ತಿರದಲ್ಲಿ ಇರುತ್ತದೆ.  ಸಾಮಾನ್ಯವಾಗಿ. ಅವರು ಈ ಹಬ್ಬಕ್ಕೆ ಪ್ರತಿಯೊಂದು ಹವ್ಯಕ ಮನೆಗೆ ಬೇಟಿ ಕೊಡುವ ಪದ್ದತಿ. ರಾತ್ರಿ ಊಟ ಮುಗಿಸಿ ಕೈಯಲ್ಲಿ ದೀಪದ ಜೊಂಜು(ಕೋಲಿಗೆ ದಪ್ಪವಾಗಿ ಬಟ್ಟೆ ಸುತ್ತಿ ಎಣ್ಣೆಯಲ್ಲಿ ಅದ್ದಿ ಬೆಂಕಿ ಹಚ್ಚಿರುತ್ತಾರೆ) ಹಿಡಿದು ಅವರಲ್ಲಿ ಒಬ್ಬರು ತಂಬಿಗೆಯಲ್ಲಿ ಎಣ್ಣೆ ಹಾಕಿ ವಿಶಿಷ್ಟವಾಗಿ ತಯಾರಿಸಿದ ದೀಪ ಹಿಡಿದು ಬರುತ್ತಾರೆ. ಬರುವಾಗ ಜೋರಾಗಿ ಜೈಕಾರ ಹಾಕುತ್ತ ಬರುವ ಸೂಚನೆ ಮಲಗಿದವರಿಗೆ. ಎದ್ದು ಅವರನ್ನು ಆದರಿಸಿ ಅವರು ಹಾಡು ಹೇಳುತ್ತ ಹೆಜ್ಜೆ ಹಾಕುವುದು ಮುಗಿದ ಮೇಲೆ ದೀಪಕ್ಕೆ ಎಣ್ಣೆ ಹೊಸ ಬಟ್ಟೆ, ಅಡಿಕೆ, ಹೋಳಿಗೆ, ದುಡ್ಡು ಎಲ್ಲ ಮೊರದಲ್ಲಿ ಜೋಡಿಸಿ ಮಯಾ೯ದೆ ಕೊಡಬೇಕು. ಯಾರ ಮನೆಯಲ್ಲಿ ಹೊಸ ಮದುಮಕ್ಕಳು ಇದ್ದಾರೊ ಅವರು ಹೆಚ್ಚಿನ ದಕ್ಷಣೆ ಕೊಡಬೇಕಾಗುತ್ತದೆ. ಹೋಗುವಾಗ ಖುಷಿಯಿಂದ ಹರಸಿ ಹೋಗುತ್ತಾರೆ.
 
ಇಲ್ಲಿಗೆ ದೊಡ್ಡ ಹಬ್ಬದ ಸಂಭ್ರಮ ಮುಗಿದರೂ ಹೆಂಗಸರಿಗೆ ಕೆಲಸ ಮಾತ್ರ ತಪ್ಪಿದ್ದಲ್ಲ. ಸುಮಾರು ಎಪ್ಪತ್ತರಿಂದ ನೂರು ಕಾಯಿ ಒಡೆದಿದ್ದನ್ನು ಒಣಗಿಸೋದು ದೊಡ್ಡ ಕೆಲಸ. ಮಳೆ ರಾಯನ ಆಗಮನ ಆಗಾಗ. ಹಂಡೆ ಒಲೆ ಒಳಗೆ ಬಿಸಿ ಭೂದಿಯಲ್ಲಿ ಒಣಗಿಸುವ ಶ್ರಮ. ಹಬ್ಬದ ಮಾರನೆ ದಿನ ಯಾರ ಮನೆಗೆ ಹೋದರು "ಕಾಯಿ ಹೋಳಿಗೆ ತಿಂತ್ಯನೆ, ಕೊಡ್ಲ^^^" ನಿನಾದ. ಅಂತೂ ಈ ಹಬ್ಬ ಮನೆ ಮಂದಿಗೆಲ್ಲ ಮೈ ತುಂಬಾ ಕೆಲಸ, ಗೋವುಗಳಿಗೆ ಸಂಭ್ರಮವೊ ಸಂಭ್ರಮ. ಮಕ್ಕಳಿಗೆ ಕುಣಿದು ಕುಪ್ಪಳಿಸುವ ಹಬ್ಬ
 
ಹಳ್ಳಿಗಳಲ್ಲಿ ಈ ಹಬ್ಬದ ಶಾಸ್ತ್ರೋಕ್ತ ಆಚರಣೆ ಈಗಲೂ ರೂಢಿಯಲ್ಲಿ ಇದೆ. ಆದರೆ ಮೊದಲಿನ ಶೃಂಗಾರ ಆಡಂಬರ ಕಡಿಮೆ ಆಗಿದೆ. ಮನೆ ಮುಂದಿಯೆಲ್ಲ ಯಾವುದೆ ಊರಿನಲ್ಲಿ ಇದ್ದರೂ ಈ ಹಬ್ಬಕ್ಕೆ ಬಂದು ಒಟ್ಟಾಗಿ ಆಚರಿಸುತ್ತಾರೆ. ಹಬ್ಬ ಕಳೆ ಕಟ್ಟಲು ಇನ್ನೇನು ಬೇಕು. ಹಬ್ಬ ಅಂದರೆ ಎಲ್ಲರೂ ಸೇರಿದರೆನೇ ಚೆಂದ ಅಲ್ಲವೆ?