ಬೆಳಕೆಂದರೆ...
ಚಿತ್ರ

ಪುಟ್ಟ ಮಗು ತೊಟ್ಟಿಲಲ್ಲಿ
ಬೊಚ್ಚು ಬಾಯಿ ಬಿಚ್ಚಿ
ಮೊಳೆವ ಕೈಯ ತಟ್ಟಿ ನಕ್ಕಿತು
ಬೆಳಕು ಬೆಳೆದು ಹರಡಿತು
ಚಿಕ್ಕ ಇರುವೆ ಸಾಲಿನಲ್ಲಿ
ಸಣ್ಣ ಸಿಹಿಯ ಅಚ್ಚು ಕಚ್ಚಿ
ಗೂಡಿನೆಡೆಗೆ ಸಾಗಿತು
ಬೆಳಕು ಶಿಸ್ತು ಎನಿಸಿತು
ಕಾಗೆ ಮರದ ಅಂಚಿನಿಂದ
ಕಾಳ ಕಂಡು ಕರೆಯಿತು
ಬಳಗ ಸೇರೆ ಹಂಚಿತು
ಬೆಳಕು ಒಲವು ಆಯಿತು
ಗೋವು ತನ್ನ ಮಂದೆಯಲಿ
ಕರುಳ ಬಳ್ಳಿಗೆಳಸಿ ಸಾಗಿ
ಹಾಲನೂಡಿ ತಣಿಯಿತು
ಬೆಳಕು ಹಸಿವ ನುಂಗಿತು
ಬೆವರಾಗಿ ರೈತ ದುಡಿದು
ಹಸಿರ ಹಾಸಿನಲ್ಲಿ ದಣಿದು
ಮುಗುಳಾಗಿ ಮಲಗಿದಲ್ಲಿ
ಬೆಳಕು ನೆರಳು ಕಲೆಯಿತು
ಕಲಿವ ನಲಿವ ಕಿರಿಯರು
ಕವಿತೆಯ ಗಮ್ಯತೆಯ ಭವಿಸಿ
ಕೊರಳ ಇಂಪ ಸ್ಪುರಿಸಿ ಹಾಡೆ
ಬೆಳಕು ರಾಗ ಕೂಡಿತು
- ಅನಂತ ರಮೇಶ್
(ಚಿತ್ರ ಅಂತರ್ಜಾಲದಿಂದ)
Rating