ನಾನು ನೋಡಿದ ಚಿತ್ರ - ವ್ಯಾಗ್ ದಿ ಡಾಗ್

ನಾನು ನೋಡಿದ ಚಿತ್ರ - ವ್ಯಾಗ್ ದಿ ಡಾಗ್

IMDb: http://www.imdb.com/title/tt0120885/

 

  “ನಾಯಿ ತನ್ನ ಬಾಲವನ್ನು ಏಕೆ ಆಡಿಸುತ್ತದೆ? ಏಕೆಂದರೆ ನಾಯಿ ತನ್ನ ಬಾಲಕ್ಕಿಂತ ಚುರುಕಾಗಿದೆ.”

“ಬಾಲ ನಾಯಿಗಿಂತ ಚುರುಕಾಗಿದ್ದಿದ್ದರೆ, ಬಾಲವೇ ನಾಯಿಯನ್ನು ಆಡಿಸುತ್ತಿತ್ತು.”

 

  90ರ ದಶಕದಲ್ಲಿ ಬಿಲ್ ಕ್ಲಿಂಟನ್ ಮಾಡಿಕೊಂಡ ಲೆವಿನ್ಸ್ಕಿ ಹಗರಣ ಜ್ಞಾಪಿಸಿಕೊಳ್ಳಿ. ಅದೊಂದು ಹಗರಣದಿಂದ ಕ್ಲಿಂಟನ್ ನ ಘನತೆಗೆ ಅಪಾರ ಧಕ್ಕೆಯಾಯಿತು. ತನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ಕಳಂಕ ಅಂಟಿಸಿಕೊಂಡು ಆತ ಸೇವೆಯಿಂದ ನಿವೃತ್ತಿಯಾದ. ಇಂತಹ ಒಂದು ಸನ್ನಿವೇಶದ ಬಗ್ಗೆಯೇ ಈ ಚಿತ್ರ.


 
 

 

 ಈ ಕಾಲ್ಪನಿಕ ಕಥೆಯಲ್ಲಿ ಬರುವ ಅಮೇರಿಕ ಅಧ್ಯಕ್ಷ ಕೂಡ ತನ್ನ ವೈಟ್ ಹೌಸ್ ಗೆ ಆಗಮಿಸಿದ ಗರ್ಲ್ ಸ್ಕೌಟ್ ಗಳ ಪೈಕಿ ಓರ್ವ ಹುಡುಗಿಯ ಜೊತೆ ಅಸಭ್ಯವಾಗಿ ನಡೆದುಕೊಂಡ ಎನ್ನುವ ಸುದ್ದಿ ಎಲ್ಲೆಡೆ ಹಬ್ಬುವುದರಲ್ಲಿರುತ್ತದೆ. ಇದೂ ಚುನಾವಣೆಗೆ ಕೇವಲ ಸುಮಾರು 10-11 ದಿನಗಳಿರುವಾಗ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷರ ಶಿಫಾರಸಿನ ಮೇರೆಗೆ ಇದನ್ನು ಸಂಭಾಳಿಸಲು ‘ಮಿ. ಫಿಕ್ಸ್ ಇಟ್’ ಕಾನ್ರಾಡ್ ಬ್ರೀಯನ್(ರಾಬರ್ಟ್ ಡಿ ನಿರೋ) ನನ್ನು ಕರೆಸಲಾಗುತ್ತದೆ. ಬಂದು ವಿಷಯ ಪೂರ್ತಿ ತಿಳಿದ ನಂತರ ಅವನು ನಿರ್ಧಾರ ಮಾಡುವುದಿಷ್ಟೇ- ರಾಜಕೀಯ ಸ್ಫೋಟಕ್ಕೆ ಕಾರಣವಾಗಬಲ್ಲಂತಹ ಇಂತಹ ವಿಷಯವನ್ನು ಮುಚ್ಚಿಹಾಕಬೇಕಾದರೆ, ಇದಕ್ಕಿಂತ ಸ್ಫೋಟಕ ವಿಷಯವೊಂದು ಉದ್ಭವಿಸಬೇಕು. ಹಾಗಾಗದಿದ್ದರೆ, ಉದ್ಭವಿಸುವ ಹಾಗೆ ಮಾಡಿ ಜನರ ಗಮನ ಅದರೆಡೆಗೆ ಸೆಳೆಯಬೇಕು.

 ಅಂತಹ ಬಲವಾದ ವಿಷಯ ಏನಿದೆ? ಎಲ್ಲಿಂದ ಸೃಷ್ಟಿಸುವುದು? ಹೀಗೆ ಮಾತನಾಡುತ್ತಲೇ ಬ್ರೀಯನ್, ಚೀನಾ ದೇಶ ಪ್ರವಾಸದಲ್ಲಿ ಇರುವ ಅಧ್ಯಕ್ಷ ಆರೋಗ್ಯದ ನೆಪ ಹೇಳಿ ಒಂದೆರೆಡು ದಿನ ಅಲ್ಲಿಯೇ ಇರುವಂತೆ ಏರ್ಪಾಡು ಮಾಡಲು ಸೂಚಿಸುತ್ತಾನೆ. ಪತ್ರಿಕೆಗಳಿಗೆ ಸುದ್ದಿ ಸೋರಿಕೆಯಾಗುವ ಅನಧಿಕೃತ ಮೂಲಗಳಿಂದ “ಅಧ್ಯಕ್ಷ B-3 ಬಾಂಬರ್ ಬಗ್ಗೆ ಮಾತಾಡಲು ಚೀನಾಗೆ ಹೋಗಿಲ್ಲ” ಎಂದು ಬೇಕೆಂದೇ ಸುದ್ದಿ ಸೋರಿಕೆ ಮಾಡುವುದು. ಯಾರಾದರು ಕೇಳಿದರೆ “B-3 ಬಾಂಬರ್ ಬಗ್ಗೆ ತಮಗೆ ಗೊತ್ತಿಲ್ಲ” ಎಂದು ಈ ವಿಷಯದ ಸುತ್ತ ಇಲ್ಲದ ನಿಗೂಢತೆ ಸೃಷ್ಟಿಸುವುದು. ಇದಕ್ಕೆ ಪುಷ್ಟಿ ಕೊಡಲು ಮಿಲಿಟರಿ ಜನರಲ್ ಗಳನ್ನು ಬೋಯಿಂಗ್ ಕಂಪನಿಗೆ ಸುಮ್ಮನೆ ಕಳಿಸುವುದು. ಇದನ್ನು ಖಂಡಿತ ಗಮನಿಸುವ ಪತ್ರಕರ್ತರು ಏನಾದರು ಪ್ರಶ್ನೆ ಮಾಡಿದರೆ ಅದನ್ನು ಅಲ್ಲಗಳೆದು ಹಿನ್ನಲೆಯಲ್ಲಿ ಏನೋ ನಡೆಯುತ್ತಿದೆ ಎಂದು ಪತ್ರಕರ್ತರ ಗಮನವನ್ನ ಒಂದೆರಡು ದಿನಗಳ ಮಟ್ಟಿಗೆ ಹಗರಣದಿಂದ ಬೇರೆಡೆಗೆ ಸೆಳೆಯುವುದು ಆತನ ಉಪಾಯ.

 ಇದು ಕೇವಲ ಒಂದೆರಡು ದಿನಗಳ ಮಟ್ಟಿಗೆ ಸಮಯ ಕೊಟ್ಟರೂ ಇದರ ಮುಂದುವರಿದ ಭಾಗವಾಗಿ ಒಂದು ಯುದ್ಧ ಸೃಷ್ಟಿಸಬೇಕು. ಅಮೇರಿಕ ಯಾವುದಾದರೂ ದೇಶದ ಜೊತೆ ಯುದ್ಧಕ್ಕೆ ಹೋಗುವುದರ ಅಥವಾ ಸಿದ್ಧವಾಗುತ್ತಿರುವುದರ ಬಗ್ಗೆ ಕಥೆಯನ್ನು ಬೆಳೆಸಬೇಕು. ಮತ್ತು ಆ ದೇಶ ಅಷ್ಟು ಪರಿಚಿತವಲ್ಲದ ದೇಶವಾಗಿರಬೇಕು. ಆ ದೇಶದ ಇರುವಿಕೆಯ ಬಗ್ಗೆಯೇ ಜನರಿಗೆ ಅಷ್ಟು ಗೊತ್ತಿಲ್ಲದಿದ್ದರೆ, ಆ ದೇಶದ ಬಗ್ಗೆ ಏನು ಸುದ್ದಿ ಹರಡಿದರೂ ಅದರ ನಿಜ ಹೊರಬರಲು ಒಂದು 15-20 ದಿನಗಳಾದರೂ ಬೇಕು. ಇಷ್ಟು ದಿನ ಚುನಾವಣೆಯವರೆಗು ಅಧ್ಯಕ್ಷನನ್ನು ಹಗರಣದ ಅಪಪ್ರಚಾರವಿಲ್ಲದೆ ಕರೆದುಕೊಂದು ಹೋಗುವಲ್ಲಿ ಸಾಕು. ಆದರೆ ಯಾವ ದೇಶದ ಮೇಲೆ ಈ ತೋರಿಕೆಯ ಯುದ್ಧಕ್ಕೆ ತೆರಳುವುದು? ಅಲ್ಬೇನಿಯಾದ ಮೇಲೆ ಯುದ್ಧಕ್ಕೆ ಹೋದರೆ ಹೇಗೆ ಎಂದು ಬ್ರೀಯನ್ ಯೋಚಿಸುತ್ತಾನೆ. ಏಕೆಂದು ಪ್ರಶ್ನಿಸಿದ ಸಹಾಯಕಿ ಏಮಿಸ್ ಗೆ ಆ ದೇಶದ ಬಗ್ಗೆ ಜನಕ್ಕೆ ಗೊತ್ತಿಲ್ಲ ಮತ್ತು ಆ ದೇಶ ನಮ್ಮ ಮೇಲೆ ಯುದ್ಧಕ್ಕೆ ಸಿದ್ಧವಾಗಿದ್ದಕ್ಕೆ ನಾವು ಅದರ ಮೇಲೆ ಯುದ್ಧಕ್ಕೆ ಹೋಗುತ್ತಿದ್ದೇವೆ ಎಂದು ವಿವರಿಸುತ್ತಾನೆ. ಹಾಗೆ ಸಿ.ಐ.ಎ ಮತ್ತು ಇತರ ಏಜೆನ್ಸಿಗಳ ಅಲ್ಬೇನಿಯಾ ಪರಿಣತರನ್ನು ಕೂಡಲೇ ಈ ಬಗ್ಗೆ ಸುದ್ದಿ ಕೊಟ್ಟು ಅವರನ್ನು ಜಾಗೃತಗೊಳಿಸುವಂತೆ ಹೇಳುತ್ತಾನೆ. ಆದರೆ ಪತ್ರಿಕೆಯ ಮುಂದೆ ಮಾತ್ರ ಇವೆಲ್ಲಾ ನಡೆಯುತ್ತಿಲ್ಲ ಎಂದೇ ಹೇಳಬೇಕು.

 ಇದೆ ಹಾದಿಯಲ್ಲಿ ಯೋಚಿಸುತ್ತ ಬ್ರೀಯನ್ ಒಬ್ಬ ಹಾಲಿವುಡ್ ನಿರ್ಮಾಪಕನನ್ನು ಭೇಟಿಯಾಗಿ ಅವನಿಂದ ಇದರ ಬಗ್ಗೆ ಸಹಾಯ ಪಡೆಯಲು ಯೋಚಿಸಿ ಲಾಸ್ ಏಂಜಲಿಸ್ ಗೆ ಹೊರಡುತ್ತಾನೆ. ಅಲ್ಲಿ ನಿರ್ಮಾಪಕ ಮೊಟ್ಸ್(ಡಸ್ಟಿನ್ ಹಾಫ್ಮನ್) ನನ್ನು ಭೇಟಿಯಾಗಿ ಆಗಿರುವ ಸಮಸ್ಯೆಯನ್ನೆಲ್ಲ ವಿವರಿಸಿ ಅಲ್ಬೇನಿಯದಲ್ಲಿ ಭಯೋತ್ಪಾದಕ ದಾಳಿ ಶುರುವಾಗಿದ್ದು ಅದರಿಂದ ತಪ್ಪಿಸಿಕೊಂಡು ಹೊರಬರುತ್ತಿರುವ ಹುಡುಗಿಯ ವಿಡಿಯೋ ಚಿತ್ರಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇವರ ವಿವರವನ್ನೆಲ್ಲಾ ಕೇಳಿ ವಿಷಯದ ಗಾಂಭೀರ್ಯ ಅರಿತ ಮೊಟ್ಸ್, ಅದಕ್ಕೆ ಬೇಕಾದ ಕಲಾವಿದರನ್ನು ಕರೆಸಿ ವಿಡಿಯೋ ನಿರ್ಮಿಸಿ ಕೊಡುತ್ತಾನೆ. ಈ ವಿಡಿಯೋ ಚಿತ್ರೀಕರಣ ಪ್ರಹಸನ ಮುಗಿದ ನಂತರ ಬ್ರೀಯನ್ ಮುಂದಿನ ಹಂತದ ಕಥೆ ಸೃಷ್ಟಿಸಲು ಬೇರೆಯ ಊರಿಗೆ ಹೋಗುವ ಸಂದರ್ಭದಲ್ಲಿ ಸಿ.ಐ.ಎ ಬ್ರೀಯನ್ ಮತ್ತು ಏಮಿಸ್ ರನ್ನು ವಿಚಾರಣೆಗೆಂದು ಕರೆದೊಯ್ಯುತ್ತಾರೆ. ಸಿ.ಐ.ಎ ಅಧಿಕಾರಿ ತಮಗೆ ಬಂದ ಎಲ್ಲ ಮಾಹಿತಿಗಳ ಪ್ರಕಾರ ಯಾವ ಯುದ್ಧದ ಪರಿಸ್ಥಿತಿ ಇಲ್ಲದಿದ್ದರೂ ಏಕೆ ಈ ಇಬ್ಬರು ಹೀಗೆ ಸುಳ್ಳು ಸುದ್ದಿ ಪ್ರಸಾರವಾಗುವಂತೆ ಮಾಡುತ್ತಿದ್ದಾರೆ ಎಂದು ವಿಚಾರಿಸುತ್ತಾನೆ. ಈ ವಿಚಾರಣೆಯಿಂದ ಏಮಿಸ್ ಹೆದರಿದರೂ, ಬ್ರೀಯನ್ ಮಾತ್ರ ಮಾತನ್ನು ಹೇಗೆ ತಿರುಗಿಸುತ್ತಾನೆ ಎಂದರೆ ಸಿ.ಐ.ಎ ಅಧಿಕಾರಿ ಇವರನ್ನು ವಿಚಾರಣೆಗೆ ಒಳಪಡಿಸಿ ತಪ್ಪು ಮಾಡಿದ್ದೀನೇನೋ ಎಂದುಕೊಳ್ಳುವಂತೆ ಮಾಡುತ್ತಾನೆ. ಕಡೆಗೆ ಸಿ.ಐ.ಎ ಅಧಿಕಾರಿಗಳೇ ಇವರಿಗೆ ಹೋಗಲು ಅನುವು ಮಾಡಿಕೊಡುತ್ತಾರೆ.

 

 ಇದಾದ ನಂತರ ಮುಂದಿನ ಹಂತಕ್ಕೆ ಬ್ರೀಯನ್, ಏಮಿಸ್ ಮತ್ತು ನಿರ್ಮಾಪಕ ಸಿದ್ಧರಾಗುತ್ತಿದಂತೆ, ಸುದ್ದಿ ವಾಹಿನಿಗಳಲ್ಲಿ ಅಲ್ಬೇನಿಯಾದ ಜೊತೆಗಿನ ಬಿಕ್ಕಟ್ಟು ಪರಿಹಾರಗೊಂಡಿದ್ದು ಪರಿಸ್ಥಿತಿ ಎಲ್ಲ ಶಾಂತವಾಗಿದೆ ಎಂದು ಸಿ.ಐ.ಎ ಹೇಳಿದ್ದಾರೆ ಎಂದು ಸುದ್ದಿ ಪ್ರಕಟವಾಗುತ್ತದೆ. ತಮಗೆ ಸಿಕ್ಕ ಸಿ.ಐ.ಎ ಅಧಿಕಾರಿ ತಮ್ಮ ಮುಂದೆ ಮಾತ್ರ ಭಯ ಪ್ರದರ್ಶಿಸಿದರೂ ಎಲ್ಲೋ ಕೈ ಕೊಟ್ಟಿದ್ದಾನೆ ಮತ್ತು ಈ ಸುದ್ದಿಯನ್ನು ಸೋರಿಕೆ ಮಾಡಿದ್ದಾನೆ ಎಂದೂ, ಮುಂದೇನು ಮಾಡುವುದು ಎಂದು ಬ್ರೀಯನ್, ಏಮಿಸ್ ಮತ್ತು ಮೊಟ್ಸ್ ಯೋಚಿಸುತ್ತಾ ಕೂರುತ್ತಾರೆ. ಆಗ ಹೊಳೆಯುವುದೇ ಹಿಂದೆ ಅಮೇರಿಕಾ ನಡೆಸಿದ ಯಾವುದೋ ಗುಪ್ತ ಸೈನಿಕ ಕಾರ್ಯಾಚರಣೆಯಲ್ಲಿ ಒಬ್ಬ ಸೈನಿಕ ಮರಳಿ ಬಂದಿಲ್ಲವೆಂದೂ, ಆತ ಇನ್ನೂ ಬದುಕಿದ್ದು ಮರಳಿ ಬರಲು ಪ್ರಯತ್ನಿಸುತ್ತಿದ್ದಾನೆ ಎಂದು ಸುದ್ದಿಯಾದರೆ ಜನರ ಗಮನ ಖಂಡಿತ ಸೆಳೆಯಬಹುದು ಎಂದು ಯೋಚಿಸುತ್ತಾರೆ. ಹೀಗೆ ಯೋಚಿಸಿ ಪೆಂಟಗಾನ್ ನಲ್ಲಿ ಯಾರನ್ನೋ ಸಂಪರ್ಕಿಸಿ ವಿಶೇಷ ಕಾರ್ಯಕ್ರಮದ ಅಡಿಯ ಯಾವ ಸಂಬಂಧಿಕರೂ ಇಲ್ಲದ ಯಾವುದಾದರೂ ಸೈನಿಕನ ಹೆಸರನ್ನು ಸೂಚಿಸಲು ಹೇಳಿ ಶೂಮನ್ ಎನ್ನುವನನ್ನು ಆಯ್ಕೆ ಮಾಡಿ ತಮ್ಮ ಸುಪರ್ದಿಗೆ ಒಪ್ಪಿಸಲು ಕೇಳಿಕೊಳ್ಳುತ್ತಾರೆ. ಇವರ ಉಪಾಯ ಆತನನ್ನು ಬೇರೆ ದೇಶದಿಂದ ಬಿಡುಗಡೆ ಮಾಡಿಸಿ ನಮ್ಮ ರಾಷ್ಟ್ರಾಧ್ಯಕ್ಷರು ಕರೆತಂದಿದ್ದಾರೆ ಎಂದು ಬಿಂಬಿಸಿ ಪ್ರಚಾರ ಗಿಟ್ಟಿಸುವುದು.

  ಆದರೆ ಆಗುವುದೇ ಬೇರೆ. ಆತನನ್ನು ಕರೆತರಲು ಹೋದಾಗಲೇ ತಿಳಿಯುವುದು ಆತ ಸೈನ್ಯದಲ್ಲಿ ಮಾನಸಿಕ ಅಸ್ವಸ್ಥರಾದವರನ್ನು ಇಟ್ಟಿದ್ದ ವಿಶೇಷ ಆಸ್ಪತ್ರೆಯಿಂದ ಕರೆತಂದು ಇವರಿಗೆ ಒಪ್ಪಿಸಿದ್ದಾರೆ ಎಂದು. ಆತ ಒಬ್ಬಾಕೆಯ ಮಾನಭಂಗ ಮಾಡಿ ಆಸ್ಪತ್ರೆ ಸೇರಿದ್ದ ಹುಚ್ಚ. ಇವರಿಗೆ ಏನು ಮಾಡುವುದೋ ತಿಳಿಯದೆ ಶೂಮನ್ ನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೊರಡುತ್ತಾರೆ, ಮಾರ್ಗ ಮಧ್ಯೆ ವಿಮಾನದಲ್ಲಿ ಹವಾಮಾನ ವೈಪರಿತ್ಯದ ಕಾರಣದಿಂದ ತಾಂತ್ರಿಕ ತೊಂದರೆಯಾಗಿ ವಿಮಾನ ನೆಲಕ್ಕಪ್ಪಳಿಸುತ್ತದೆ. ಪವಾಡವೆಂಬಂತೆ ಎಲ್ಲರೂ ಬದುಕುಳಿದರೂ ಯಾವುದೊ ದೂರದ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದರಿಂದ ಬ್ರೀಯನ್, ಏಮಿಸ್, ಮೊಟ್ಸ್ ಮತ್ತು ಶೂಮನ್ ಅಲ್ಲೇ ತಮ್ಮ ಇತರೆ ಸಹೋದ್ಯೋಗಿಗಳು ಬಂದು ಕರೆದೊಯ್ಯುವವರೆಗೂ ಕಾಯುತ್ತ ಕೂರುತ್ತಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಅಂಗಡಿಯವನ ಮಗಳನ್ನು ನೋಡಿದ ಶೂಮನ್ ಆಕೆಯ ಹಿಂದೆ ಓಡುತ್ತಾನೆ. ತನ್ನನ್ನು ಹಿಂಬಾಲಿಸಿದ ಈತನನ್ನು ನೋಡಿದ ಆ ಹುಡುಗಿ ಹೆದರಿ ಚೀರಿಕೊಂಡಾಗ ಅಂಗಡಿಯವ ತನ್ನ ಗನ್ ನಿಂದ ಶೂಮನ್ ನನ್ನು ಕೊಲ್ಲುತ್ತಾನೆ. ಕಥೆ ಮುಗಿಯುವ ಹಂತದಲ್ಲಿ ಮತ್ತೆ ಸಮಸ್ಯೆಯಾಗಿದ್ದಕ್ಕೆ ತಲೆಕೆಡಿಸಿಕೊಂಡ ಬ್ರೀಯನ್ ಮತ್ತು ಏಮಿಸ್ ಗೆ ಸಮಾಧಾನ ಹೇಳುತ್ತಾ ಮೊಟ್ಸ್ ವಿಮಾನ ಅಪಘಾತದಲ್ಲಿ ಆತ ಮೃತಪಟ್ಟ ಎಂದು ಹೇಳಿ ವಿಷಯ ಮುಚ್ಚಿಹಾಕುವ ಸಲಹೆ ಕೊಡುತ್ತಾನೆ. ಕೊನೆಗೆ ಎಲ್ಲಾ ಮುಗಿದು ಶೂಮನ್ ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತಾರೆ.

  ಇಷ್ಟು ದೊಡ್ಡ ಜವಾಬ್ದಾರಿಯನ್ನು ಮುಗಿಸಿ ಸಮಧಾನಪಟ್ಟುಕೊಳ್ಳುತ್ತಾ ಒಬ್ಬರಿಗೊಬ್ಬರು ಶುಭಾಶಯ ಹೇಳಿಕೊಳ್ಳುತ್ತಾ ಇರುವಾಗ ಮೊಟ್ಸ್ ತನ್ನ ಈ ಸಾಹಸಕ್ಕೆ ತನಗೆ ದಕ್ಕಬೇಕಾದ್ದ ಕೀರ್ತಿ ಸಿಗದೆ ಹೋಗುತ್ತದಲ್ಲ ಎಂದು ಚಡಪಡಿಸುತ್ತಾ ಟಿವಿ ಕಾರ್ಯಕ್ರಮವೊಂದಕ್ಕೆ ಕರೆ ಮಾಡಿ ಎಲ್ಲ ವಿಷಯ ತಿಳಿಸುವುದಾಗಿ ಬ್ರೀಯನ್ ಗೆ ಹೇಳುತ್ತಾನೆ. ಮೊಟ್ಸ್ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಬ್ರೀಯನ್ ಎಷ್ಟು ಹೇಳಿದರೂ ಮೊಟ್ಸ್ ಕೇಳದೆ ಹೊರನಡೆದಾಗ ಬ್ರೀಯನ್ ಸೀಕ್ರೆಟ್ ಸರ್ವಿಸ್ ನವರಿಗೆ ಏನೋ ಸಂಜ್ಞೆ ಮಾಡುತ್ತಾನೆ. ಇದಾದ ನಂತರ ಸುದ್ದಿವಾಹಿನಿಗಳಲ್ಲಿ ಖ್ಯಾತ ನಿರ್ಮಾಪಕ ಸ್ಟಾನ್ಲಿ ಮೊಟ್ಸ್ ಧಿಡೀರನೆ ಹೃದಯಾಘಾತವಾಗಿ ತಮ್ಮ ಈಜುಕೊಳದ ಬಳಿ ಸತ್ತರು ಎಂದು ಸುದ್ದಿ ಪ್ರಕಟವಾಗುತ್ತದೆ. ಅದೇ ಸುದ್ದಿ ಮುಂದುವರೆದು ಅಲ್ಬೇನಿಯಾದ ಹಳ್ಳಿಯೊಂದರಲ್ಲಿ ನಡೆದ ಬಾಂಬ್ ದಾಳಿಯ ಜವಾಬ್ದಾರಿಯನ್ನು ‘ಅಲ್ಬೇನಿಯಾ ಯುನೈಟ್’ ಎಂಬ ಗುಂಪು ಹೊತ್ತಿದೆ ಎಂದು ಸುದ್ದಿ ಪ್ರಕಟವಾಗುತ್ತದೆ. ಇದಕ್ಕೆ ಪ್ರತಿಯಾಗಿ ಅಮೇರಿಕಾ ತನ್ನ ಸೈನ್ಯವನ್ನು ಶೀಘ್ರದಲ್ಲಿ ಅಲ್ಬೇನಿಯಾ ಬಿಕ್ಕಟ್ಟನ್ನು ಪೂರ್ತಿ ಬಗೆ ಹರಿಸಲು ಕಳಿಸುತ್ತದೆ ಎಂದು ಅಮೇರಿಕಾ ಸೇನೆಯ ಜನರಲ್ ಹೇಳಿಕೆ ಕೊಟ್ಟಿದ್ದಾರೆಂದು ಸುದ್ದಿ ವಾಹಿನಿ ಪ್ರಕಟಿಸುತ್ತದೆ.

 

  ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗುವ ಅದೆಷ್ಟು ಸುದ್ದಿಗಳು ಹೀಗೆ ಇರಬಹುದು ಎಂದು ಯೋಚಿಸಿದರೆ ಯಾರನ್ನು ನಂಬುವುದೋ ಎಂದು ಕಳವಳವಾಗುತ್ತದೆ. ಇದೆ ತರಹದ ಎಷ್ಟೋ ಚಿತ್ರಗಳು ಬಂದಿದ್ದರೂ ಈ ರೀತಿ ಗಂಭೀರ ವಿಷಯವನ್ನು ಹಾಸ್ಯದ ಲೇಪನದೊಂದಿಗೆ ಹೇಳುವಂತಹವು ಕೆಲವೇ ಕೆಲವು. ‘ಯೆಸ್ ಮಿನಿಸ್ಟರ್’ ಮತ್ತು ‘ಯೆಸ್ ಪ್ರೈಮ್ ಮಿನಿಸ್ಟರ್’ ಧಾರಾವಾಹಿಗಳು ಕೂಡ ಇಂತಹದ್ದೇ ರಾಜಕೀಯ ವಿಡಂಬನೆಯದ್ದು. ಈ ಚಿತ್ರವನ್ನು ಇಷ್ಟ ಪಟ್ಟವರು ಖಂಡಿತ ಆ ಧಾರಾವಾಹಿಯನ್ನು ಇಷ್ಟ ಪಡುತ್ತೀರಿ.

-ವಿಶ್ವನಾಥ್

 

 
 

Rating
No votes yet