ಕಥೆ: ಆತ್ಮದ ಸ್ವಗತ
ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ ಸುರಿಸುತ್ತಿದ್ದ ಮಳೆಯಿಂದ ಮಾವಿನ ತೋಪಿನ ಕಾಲುವೆಗಳು ತುಂಬಿ ದಾಸನ ಕಟ್ಟೆಯೆತ್ತ ಹರಿಯುತ್ತಿತ್ತು.
ಅವತ್ತಿನ ಮಧ್ಯಾಹ್ನ ಯಮಕರೆದ ಕೂಗಿನಂತಹ ಕೂಗೊಂದು ತಲೆಯೊಳಗೆ ಸಿಡಿದು ಈ ಲೋಕವೇ ಬೇಡವಾಗಿ ಮನೆಯಲ್ಲಿದ್ದ ದನದ ಹಗ್ಗವೊಂದನ್ನು ಹೆಗಲಿಗೆಸೆದುಕೊಂಡು ಮುದ್ರಾಮಕ್ಕರ ಮಾವಿನ ತೋಪಿನತ್ತ ಹೊರಟು ಬರೀ ನೆಲದಲ್ಲೇ ಹರಡಿ ನಿಂತ ಮಾವಿನ ಮರಗಳಿರುವ ಆ ತೋಪಿನಲ್ಲಿ ನನ್ನ ಹೆಣದ ಭಾರ ಹೊರುವಂತಹ ಗಟ್ಟಿ ರೆಂಬೆಯ ಮರವನ್ನು ಹುಡುಕುತ್ತಾ ಅಲೆದು ಅಲೆದು ಕೊನೆಗೂ ಸಿಕ್ಕ ದಷ್ಟ ಪುಷ್ಟ ಮಾವಿನ ಮರದ ದಪ್ಪನೆ ಕೊಂಬೆಯೊಂದಕ್ಕೆ ನೇಣು ಹಾಕಿಕೊಂಡು ವಿಲವಿಲ ಒದ್ದಾಡಿ ಸತ್ತು ಹೋದೆ. ನಾನು ಸತ್ತಿದ್ದು ಸಹಿಸಲಾರದೇನೆ ಏನೋ ಎಂಬಂತೆ ಆಕಾಶ ಕಣ್ಣೀರಿನಂತೆ ಮಳೆ ಸುರಿಸಿದ್ದು. ಮಳೆ ನಿಂತ ಮೇಲೆಯೂ ಕೂಡ ಮರ ನನ್ನ ಸಾವಿಗೆ ಕಣ್ಣೀರು ಸುರಿಸುತ್ತಲೇ ಇತ್ತು ಅದೆಲ್ಲಿಂದಲೋ ಹಾರಿಬಂದ ಕಾಗೆಯೊಂದು ಶವವಾಗಿ ನೇತಾಡುತ್ತಿದ್ದ ನನ್ನ ತಲೆಯ ಮೇಲೆ ಕುಳಿತು ಸ್ಪ್ರಿಂಗಿನಂತಹ ಅದರ ಕೊರಳನ್ನು ಅತ್ತಿತ್ತ ತಿರುಗಿಸಿ ತನ್ನ ಕಪ್ಪು ಕೊಕ್ಕನ್ನು ನನ್ನ ಹಣೆಯ ಮೇಲಿಟ್ಟು ಗಸಗಸನೆ ಕತ್ತಿ ಮನೆಯುವಂತೆ ಆಡಿಸಿತು. ಆಹಾ! ದುರ್ವಿಧಿಯೇ ಬದುಕಿದ್ದಾಗ ಕಾಗೆಯೆಂಬ ಕಾಗೆ ತಲೆಗೆ ಬಡಿದರೆ ಕಷ್ಟಗಳು ಬರುವವಂತೆ ಹಾಗಾದರೆ ಸತ್ತ ನನಗೆ ಇನ್ನೆಷ್ಟು ಕಾಟವೋ ಕಾಣೆನಲ್ಲ.
ಮಳೆ ಸುರಿದ ತಂಪಿಗೇನೋ ಎಂಬಂತೆ ಸಂಜೆ ಸೂರ್ಯ ನಿಂದ ಆಗಸವೆಲ್ಲ ಕೆಮ್ಮುಗಿಲಿನಿಂದ ಕಂಗೊಳಿಸುತ್ತಿತ್ತು ಅಂಥ ದೈವದತ್ತ ಪ್ರಕೃತಿ ಸಹಜ ಕತ್ತಲು ತನ್ನ ಸುತ್ತ ಆವರಿಸುತ್ತಿದ್ದರು ಯಾವ ಬಯವೂ ಇಲ್ಲದೆ ಹೀಗೆ ಜಂಟಿಯಾಗಿ ಮುದ್ರಾಮಕ್ಕನ ಮಾವಿನ ತೋಪಿನಲ್ಲಿ ರಾತ್ರಿಯೆಲ್ಲಾ ಒಬ್ಬನೇ ಕಳೆಯುವ ಅವಕಾಶ ನೆನೆದು ನನ್ನೀ ಸಾಹಸಕ್ಕೆ ನನಗೆ ಬೆರಗಾಯಿತು.
ದನದ ಹಗ್ಗದಿಂದ ಈ ಮಾವಿನ ಮರದ ರೆಂಬೆಗೆ ಸುತ್ತಿ ಕುಣಿಕೆಯ ಕೊರಳಿಗೆ ಸುತ್ತಿಕೊಂಡು ಸುಮ್ಮನೆ ಕೆಳಗೆ ಜಿಗಿದು ಗಂಟಲ ನರಗಳು ಉಬ್ಬಿ ಬಿಗಿಯಾದ ಹಗ್ಗ ಹಿಡಿತದಿಂದ ವಿಲವಿಲ ಒದ್ದಾಡುತ್ತಾ ಪ್ರಾಣ ಬಿಡುವಾಗಲೂ ಕೂಡ ಈ ಭೂಮಿಯ ಯಾವೊಬ್ಬ ನರಪಿಳ್ಳೆಯೂ ನೆನಪಾಗಲಿಲ್ಲವಲ್ಲ ನನಗೆ ಆತ್ಮಹತ್ಯೆಗೆ ನಿರ್ಧರಿಸುವುದು ಒಂದು ಸಾಹಸ.
ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನವಾದರೂ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡುವಷ್ಟು ದಿವ್ಯವಾಗಿ ನೆಮ್ಮದಿಯಿಂದ ಒದ್ದಾಡುತ್ತಾ ಇನ್ನೇನು ನಿಲ್ಲುವ ಉಸಿರಿಗಾಗಿ ಕಾಯುವುದು ಸಮಾಧಿಯ ಪರಮ ಸಾಹಸ. ಅಂತಹ ಸಮಾಧಿಯನ್ನು ಹೊಂದಿದ ನಾನು ಖಂಡಿತ ಯಾವೊಬ್ಬ ಋಷಿ ಮುನಿಗೂ ಕಮ್ಮಿಯಿಲ್ಲವೆಂಬುದು ಮನದಟ್ಟಾಗಿ ನನ್ನ ಬಗ್ಗೆಯೇ ನನಗೆ ಹೆಮ್ಮೆಯೆನಿಸುತ್ತಿತ್ತು.
ಕಗ್ಗತ್ತಲಿನಲ್ಲಿ ಹೀಗೆ ಅನಾಥ ಹೆಣವಾದುದ್ದಕ್ಕೆ ಯಾವ ದುಃಖವೂ ಇಲ್ಲದೆಯೇ ನಿರಾಳವಾಗಿ ಕಾಲ ಕಳೆಯುತ್ತಿದ್ದರೆ ಬೆಳಗಿನ ಜಾವ ಮೂಡಣದಿ ಮೂಡಿದ ಭಾಸ್ಕರ ಇಡೀ ಮಾವಿನ ತೋಪಿಗೆ ನನ್ನ ಹೆಣವನ್ನು ತೋರಿಸಿದ.
ಅಂದು ನಾನು ಸತ್ತ ದಿನದ ಮೊದಲ ಬೆಳಗು ಸತ್ತ ಹಬ್ಬ! ಬದುಕಿದ್ದಾಗ ಎಂದಿಗೂ ಜನರ ಚರ್ಚೆಗೆ ಗ್ರಾಸವಾಗದ ನಾನು ಸತ್ತ ಮೇಲೆ ಈ ಬೆಳಗಿನಲ್ಲಿ ಖಂಡಿತವಾಗಿಯೂ ಊರಿನವರಿಗೆಲ್ಲಾ ಚರ್ಚಾಸ್ಪದ ವಿಷಯವಾಗಲಿದ್ದೇನೆಂಬ ಖುಷಿಯ ತಳಮಳದ ಜೊತೆಗೆ ಯಾರ್ಯಾರು ಏನೇನೆಲ್ಲಾ ಅಂದು ಕೊಳ್ಳ ಬಹುದೆಂದು ಯೋಚಿಸತೊಡಗಿದೆ.
ಬೆಳಗಿನ ಬಹಿರ್ದೆಸೆಗೆಂದು ಅತ್ತ ಬಂದಿದ್ದ ವಡ್ಡರ ಗ್ಯಾಸ್ ದೊಡ್ಡನ ಕಣ್ಣಿಗೆ ನನ್ನ ಶವ ಬಿತ್ತು ವಿಚಿತ್ರವಾಗಿ ಗಾಬರಿಗೊಂಡ ಗ್ಯಾಸ್ ದೊಡ್ಡ ಸ್ವಲ್ಪ ತುಸು ಮುಂದಕ್ಕೆ ಬಾಗಿ ಕ್ಷಣ ನಿಂತು ನನ್ನ ಶವದತ್ತಲೇ ದಿಟ್ಟಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆಗಳನ್ನಿಡುತ್ತಾ ಮೆಲ್ಲನೆ ಸುಮಾರು ಹತ್ತು ಮಾರುಗಳಷ್ಟು ನನ್ನ ಶವದ ಹತ್ತಿರ ಬಂದವನು ತನ್ನ ಮುಖವನ್ನು ಭೀಭತ್ಸ ಭಾವದಲ್ಲಿ ವಿಕೃತಗೊಳಿಸಿಕೊಂಡು ಎದುಸಿರು ಬಿಡುತ್ತಾ ವಾಪಾಸ್ಸು ತಿರುಗಿ ಎದ್ದು-ಬಿದ್ದು ಓಡತೊಡಗಿದ ಅವನ ಈ ದಯನೀಯ ಸ್ಥಿತಿ ನನಗೆ ನಗು ಬರಿಸುತ್ತಿತ್ತು.
ಅವನು ಓಡಿಹೋಗಿ ಊರವರಿಗೆ ನನ್ನ ಸಾವಿನ ಸುದ್ದಿ ಮುಟ್ಟಿಸುತ್ತಿದ್ದಂತೆ ನನ್ನ ಹುಡುಗಿ ಓಡಿ ಬರಬಹುದು ಬಂದು ಗೊಳೋ ಎಂದ ಅಳಬಹುದೇ? ಇಲ್ಲ ದೂರದಲ್ಲಿ ನಿಂತು ನೋಡಿ ಸುಮ್ಮನೆ ಹೊರಟು ಹೋಗಬಹುದಾ? ನಿಜಕ್ಕೂ ನನ್ನ ಸಾವು ಅವಳಿಗೆ ಕಣ್ಣೀರು ತರಿಸಬಹುದೇ? ಮನಸ್ಸು ಒಂದು ಕ್ಷಣ ವಿಚಲಿತಗೊಂಡಿತ್ತು. ಮರುಕ್ಷಣವೇ ಎಲ್ಲಾ ಮನವೆಂಬ ಮರ್ಕಟವೇ ಸತ್ತು ಹೆಣವಾದರೂ ನಿನ್ನೀ ಆಸೆ ಹೋಗಲಿಲ್ಲವಲ್ಲ ಎನಿಸಿತು.
ಅಷ್ಟರಲ್ಲಿ ಊರಿನ ಕಡೆಯಿಂದ ಗುಂಪೊಂದು ಮಾವಿನ ತೋಪಿನತ್ತ ಧಾವಿಸುತ್ತಿತ್ತು ಮೂಡಣದ ಭಾಸ್ಕರನ ಎಳೆಬಿಸಿಲ ಝಳ ನನ್ನ ಶವಕ್ಕೆ ರಾಚುತ್ತಿತ್ತು ಗುಂಪು ಹತ್ತಿರವಾಗುತ್ತಿದ್ದಂತೆಲ್ಲಾ ನನ್ನ ಕಣ್ಣುಗಳು ಮಂಜಾಗುತ್ತಿದ್ದವು. . .
-ಅರೆಯೂರು ಚಿ.ಸುರೇಶ್