ಕಥೆ: ಸವಿ ಸವಿ ನೆನಪು

ಕಥೆ: ಸವಿ ಸವಿ ನೆನಪು

ಆಫೀಸಿನಲ್ಲಿ ಕುಳಿತು ಸಚಿವ ಟಿ.ಬಿ. ಜಯಚಂದ್ರ ಬಗ್ಗೆ ಸೊಗಡು ಶಿವಣ್ಣ ಮಾಡಿದ ಆರೋಪದ ಬಗ್ಗೆ ವರದಿ ಬರೆಯುತ್ತಿದ್ದೆ ಆಗ ರಿಸಪ್ಷನ್ ಹುಡುಗಿ ಶಾಲಿನಿ ಬಂದು ಸಾರ್ ನಿಮಗೊಂದು ಲೆಟರ್ ಇದೆ ಎಂದು ಹೇಳಿ ಪತ್ರವೊಂದನ್ನು ನನ್ನ ಕೈಗಿತ್ತು ಹೋದಳು. ನನ್ನ ಹೆಸರಿಗೆ ಕಛೇರಿ ವಿಳಾಸಕ್ಕೆ ಕಾಗದ ಬರೆದವರು ಯಾರೆಂದು ಗೊತ್ತಾಗದೆ ಯಾರು ಬರೆದಿರಬಹುದೆಂದು ಕಾಗದ ತಿರುಗಿಸಿ ಅಲ್ಲಿ ಕಂಡ ಹೆಸರು ಕಂಡು ಹಾಗೆ ನೆನಪಿನಾಳಕ್ಕೆ ಜಾರಿದೆ . . .
ನನ್ನೆದೆಗೆ ಮೊದಲ ಮಳೆ ಬಿದ್ದ ಆದಿನ ನನಗಿನ್ನು ನೆನಪಿದೆ. ಅಂದು ಶನಿವಾರ ಮಾರ್ನಿಂಗ್ ಕ್ಲಾಸ್ ! ಬೆಲ್ಲು ಹೊಡೆಯಲು ಹತ್ತು ನಿಮಿಷವಿರುವಾಗಲೆ ಜಡಿ ಮಳೆ ಪ್ರಾರಂಭವಾಗಿತ್ತು ಬೆಲ್ಲು ಹೊಡೆಯುತ್ತಿದ್ದಂತೆ ಎಲ್ಲರೂ ಕ್ಲಾಸ್ ರೂಮಿಂದ ಹೊರಗೆ ಬಂದು ವರಾಂಡದಲ್ಲಿ ಮಳೆ ಹನಿಯೊಂದಿಗೆ ಆಟವಾಡುತ್ತಾ ನಿಂತು ಬಿಟ್ಟೆವು. ನನ್ನ ಪಕ್ಕ ಬಂದು ನಿಂತವಳು ಮಳೆ ಹನಿಗೆ ಕೈಯೊಡ್ಡಿ ಕುಣಿಯುತ್ತಿದ್ದಳು. ಆಗ ನನಗೇಕೆ ಹಾಗೆನ್ನಿಸಿತೋ ಕಾಣೆ. ಸುರಿಯುತ್ತಿದ್ದ ಮಳೆಗೆ ಕೈಯೊಡ್ಡಿ ನೀರನ್ನು ಅವಳ ಮುಖಕ್ಕೆ ರಾಚಿಬಿಟ್ಟೆ. ಅವಳ ಮುಖ ನೀರಲ್ಲಿ ತೊಯ್ದು ಹೋಯ್ತು ನಿಂತಿದ್ದ ಹುಡುಗರೆಲ್ಲ ಗೊಳ್ಳೆಂದು ನಕ್ಕುಬಿಟ್ಟರು. ಅವಳು ಸಿಟ್ಟಿನಿಂದ ನನ್ನ ಬೆನ್ನತ್ತಿದಳು. ನಾನು ಆ ಮಳೆಯಲ್ಲೇ ಗೇಟಿನತ್ತ ಓಟಕಿತ್ತೆ. ಅವಳು ನನ್ನ ಹಿಂದೆಯೇ ಓಡಿದಳು. ಹೈಸ್ಕೂಲ್ ಗೇಟ್ ಸಮೀಪಿಸುವಷ್ಟರಲ್ಲಿ ಅವಳು ಹಿಂದಿನಿಂದ ನನ್ನ ಅಂಗಿ ಹಿಡಿದೆಳೆದಳು. ಅವಳು ಎಳೆದ ರಭಸಕ್ಕೆ ಜಾರಿದ ನಾನು ಹಾಗೆ ಅನಾಮತ್ತು ಅವಳ ಮೇಲೆ ಬಿದ್ದೆ ಅವಳ ಮುಖದಲ್ಲಿ ಆಗ ಸಿಟ್ಟಿನ ಬದಲಾಗಿ ನಸುನಾಚಿಕೆ ಲಾಸ್ಯವಾಡುತ್ತಿತ್ತು.
ಕೆಸರಾಗಿದ್ದ ಒದ್ದೆ ಬಟ್ಟೆಯೊಂದಿಗೆ ಮನೆ ಸೇರಿಕೊಂಡೆವು. ಮತ್ತೆ ಸೋಮವಾರ ಸ್ಕೂಲಿಗೆ ಹೋದಾಗ ನನಗೆ ಭಯ ಎಲ್ಲಿ ಶನಿವಾರ ಅವಳ ಮೇಲೆ ಬಿದ್ದು ಬಟ್ಟೆ ರಾಡಿ ಮಾಡಿದ ವಿಷಯವನ್ನು ಎ.ಎಸ್. ಮೇಸ್ಟ್ರು ಕೈಲಿ ಹೇಳಿ ಹೊಡೆಸುತ್ತಾಳೋ ಎನ್ನುವ ಅಳುಕು ಎ.ಎಸ್. ಎಂದಿಗೂ ಹೆಣ್ಮಕ್ಕಳಿಗೆ ಹೊಡೆದ ಉದಾಹರಣೆ ಇರಲಿಲ್ಲ. ಗಂಡು ಮಕ್ಕಳಿಗೆ ಮತ್ತೊಂದು ಜನ್ಮ ನೆನಪಾಗುವಂತೆ ಹೊಡೆಯುತ್ತಿದ್ದ ರೀತಿ ನೆನಪಾಗಿ ನನಗೆ ಭಯವಾಗುತ್ತಿತ್ತು. ಬೆಲ್ಲಾಗುವ ವೇಳೆಗೆ ಬಂದವಳು ಪ್ರೈಯರ್ ಮುಗಿದೊಡನೆ ಸೀದಾ ಕ್ಲಾಸ್ ರೂಂಗೆ ಹೋದಳು. ಆಗ ನನಗೆ ಸ್ವಲ್ಪ ಧೈರ್ಯ ಬಂದು ಕೊನೆಯವನಾಗಿ ಒಳ ಹೋದೆ ಅವಳು ನನ್ನ ಮುಖ ನೋಡಿದೊಡನೆ ನಾಚಿಕೆಯಿಂದ ಮುದುಡಿ ಹೋದಳು. ಅವಳ ಮುಖದಲ್ಲಿ ಕೋಪದ ಗೆರೆಗಳಿರಲಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಅವಳ ಹಿಂದೆಯೇ ಹೆಜ್ಜೆ ಹಾಕಿದ ನಾನು ಗ್ರಾಮದಮ್ಮನ ಗುಡಿಯ ಮುಂದೆ ಧೈರ್ಯ ಮಾಡಿ ಸಾರಿ ಕೇಳಿದೆ. ಆ ನಂತರದ ದಿನಗಳಲ್ಲಿ ನಾನು ಅವಳಿಗಾಗಿ ಕಾಯುವುದು ಅವಳ ಜೊತೆಯಲ್ಲೇ ಹೋಗುವುದು ಬರುವುದು ಹೆಚ್ಚಾಯ್ತು.
ಎಂದೂ ಆಟೋಟಗಳಲ್ಲಿ ಭಾಗವಹಿಸದ ನಾನು ಅವಳು ಸೇರಿದ್ದನ್ನು ಕಂಡು ಖೋಖೋಗೆ ಸೇರಿದೆ ಗಂಡು ಮಕ್ಕಳು ಹೆಣ್ಣು ಮಕ್ಕಳು ಸೇರಿ ಆಡುತ್ತಿದ್ದೆವು. ಹುಡುಗಿಯರು ಹುಡುಗರನ್ನು ಮುಟ್ಟಿಸುತ್ತಿದ್ದರು. ಒಬ್ಬ ಔಟಾದ ಮೇಲೆ ನಾನು ಚಂಗಿಸುತ್ತಿದೆ. ಕೀ ಪಡೆದ ಹುಡುಗಿ ನನ್ನ ಓಡಿಸಿಕೊಂಡು ಬಂದಳು. ನಾನು ಅವಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನನ್ನ ಹುಡುಗಿಯ ಮೇಲೆ ಬಿದ್ದು ಬಿಟ್ಟೆ. ಅವತ್ತು ಸಾಯಂಕಾಲ ಮನೆಗೆ ಹೋಗುವಾಗ ಅವಳು ನನ್ನ ಚೆನ್ನಾಗಿ ಬೈದಳು. ನೀನು ಬೇಕೆಂದೆ ನನ್ನಮೇಲೆ ಬಿದ್ದೆ ಎಂದಳು. ನಾನಷ್ಟೇ ಸಮಜಾಯಿಸಿಕೊಟ್ಟರು ಒಪ್ಪಲಿಲ್ಲ ನಾಳೆಯಿಂದ ನನ್ನ ಮಾತನಾಡಿಸಬೇಡವೆಂದು ಹೇಳಿ ಹೋದಳು.
ಅದಾಗಿ ಮೂರ್ನಾಲ್ಕು ದಿನ ಅವಳು ನನ್ನ ಮಾತಾಡಿಸಲಿಲ್ಲ ಅವಳು ನನ್ನತ್ತ ತಿರುಗಿ ಕೂಡಾ ನೋಡುತ್ತಿರಲಿಲ್ಲ ನನಗದು ಸಹಿಸಲಸಾಧ್ಯವಾದ ನೋವಾಗುವಂತೆ ಮಾಡಿತ್ತು. ನಾನು ಎಷ್ಟೇ ಪ್ರಯತ್ನ ಪಟ್ಟರು. ಅವಳು ಮಾತಾಡಲೇ ಇಲ್ಲ ಅಂದು ರಾತ್ರಿ ಊಟ ರುಚಿಸಲಿಲ್ಲ. ನಿದ್ದೆ ಹತ್ತಲಿಲ್ಲ, ಬೆಳಗಿನ ಜಾವ ಎದ್ದವನೆ ಭಯಂಕರ ಚಳಿಯನ್ನು ಲೆಕ್ಕಿಸದೆ ಹೋಗಿ ಅವಳ ಮನೆಯ ಮುಂದಿನ ಲೈಟ್ ಕಂಬಕ್ಕೊರಗಿ ಅವಳ ಮನೆಯತ್ತ ದೃಷ್ಟಿ ನೆಟ್ಟು ನಿಂತು ಬಿಟ್ಟೆ.
ನನ್ನ ಎಣಿಕೆ ಸುಳ್ಳಾಗಲಿಲ್ಲ ಆರು ಗಂಟೆಗೆ ಬಾಗಿಲು ತೆರೆದು ಹೊರಬಂದವಳ ದೃಷ್ಟಿಗೆ ನಾನು ಬಿದ್ದಿದ್ದೆ ನನ್ನ ನೋಡುತ್ತಿದ್ದಂತೆ ಆಶ್ಚರ್ಯಗೊಂಡ ಅವಳು ಬಾಗಿಲನ್ನು ಮುಂದಕ್ಕೆಳೆದುಕೊಂಡು ಸೀದಾ ನನ್ನ ಬಳಿ ಬಂದವಳು. ಯಾಕೋ ಇಷ್ಟೊತ್ತಿಗೆ ಈ ಚಳಿಯಲ್ಲಿ ಬಂದಿದ್ದೀ? ಎಂದಳು. ಆಗ ನಾನು ಬೇಕೆಂದು ನಿನ್ನ ಮೇಲೆ ಬೀಳಲಿಲ್ಲ. ಆಕಸ್ಮತ್ತಾಗಿ ಬಿದ್ದಿದು ಅದರಲ್ಲಿ ನನ್ನ ತಪ್ಪಿಲ್ಲ. ನೀನು ನನ್ನ ಮತನಾಡಿಸದೇ ಇದ್ದರೆ ನಾನು ಸತ್ತೇ ಹೋಗುತ್ತೇನೆ ಎಂದೆ ಅದಕ್ಕವಳು ಹುಚ್ಚುಚ್ಚಾಗಿ ಮಾತಾಡಬೇಡ ಯಾರಾದರೂ ಮಾತಾಡಿಸಲಿಲ್ಲ ಅಂತ ಸಾಯ್ತಾರೇನೋ ಹೋಗೋ ಯಾರಾದ್ರು ನೋಡಿದ್ರೆ ತಪ್ಪು ತಿಳ್ಕೋತಾರೆ ಸ್ಕೂಲತ್ರ ಸಿಗ್ತೀನಿ ಅಂತ ಹೇಳಿ ಓಡಿ ಹೋದಳು. ಆಗ ತುಸು ಜೋರಾಗಿ ಮಾತಾಡಿಸ್ತಿ ತಾನೇ ಎಂದೆ ಅವಳು ತಿರುಗಿ ಕಣ್ಣು ಮಿಟುಕಿಸಿ ಬಾಗಿಲು ದೂಡಿ ಒಳ ಹೋದಳು. ನನಗೆ ಆಕಾಶವೇ ಕೈಗೆ ಸಿಕ್ಕ ಸಂತೋಷದಿಂದ ಜಿಗುಯುತ್ತ ಮನೆ ಸೇರಿದೆ.
ಅಂದು ನನ್ನ ಉತ್ಸಾಹಕ್ಕೆ ಕೊನೆಯಿರಲಿಲ್ಲ ಹರಿದ ಅಂಗಿಯನ್ನು ಹೊಲೆದುಕೊಂಡು ಅದಕ್ಕೆ ಇಸ್ತ್ರಿ ಮಾಡಿ ಹರಿದು ಮೂಲೆ ಸೇರಿದ್ದ ಹಳೆಯ ಹವಾಯಿ ಚಪ್ಪಲಿಗಳನ್ನು ರಿಪೇರಿ ಮಾಡಿ ತೊಳೆದು ನಾನೂ ತಣ್ಣೀರಿನಲ್ಲಿ ಸ್ನಾನ ಮಾಡಿ ಬೇಗನೆ ಸ್ಕೂಲಿಗೆ ಹೊರಟೆ.
ನಾನು ಸ್ಕೂಲಿಗೆ ಹೋಗಿ ಎಷ್ಟೊತ್ತಾದರು ನುಣುಪು ಕೆನ್ನೆಗಳ ಹೊಳಪು ಸೂಸುವ ಕಣ್ಣಿನ ನನ್ನ ಹುಡುಕಿ ಬಂದಿರಲಿಲ್ಲ. ಅವಳಿಗಾಗಿ ಗೇಟಿನತ್ತ ನೋಡುತ್ತಲೇ ಚಡಪಡಿಸತೊಡಗಿದೆ.
ಅವಳು ಬಂದೊಡನೆ ಇಷ್ಟೊಂದು ಲೇಟೇಕೆ ಎಂದು ಅವಳೊಡನೆ ಜಗಳಕ್ಕೆ ನಿಂತೆ, ಅವಳು ಈ ವಯಸ್ಸಿಗೆ ಇಷ್ಟೊಂದು ತಲೆ ಕೆಡೆಸಿಕೊಂಡರೆ ಹುಚ್ಚಾಸ್ಪತ್ರೆ ಸೇರ್ತೀಯ ಅಂತ ಹೇಳಿ ಗೆಳತಿಯರ ಗುಂಪಿನತ್ತ ಓಡಿ ಹೋದಳು.
ಕೆರೆಯಂಗಳದಲ್ಲಿ ಬೆಳೆಯುತ್ತಿದ್ದ ಕಮಲದ ಹೂಗಳನ್ನು ಮಲ್ಲಪ್ಪನಹಳ್ಳಿ ಹುಡುಗನೊಬ್ಬ ಕಿತ್ತು ತಂದು ದೇವರ ಪೊಟೊಗೆ ಹಾಕುತಿದ್ದ ಇವಳು ಆಸೆ ಕಂಗಳಿಂದ ಆ ಹೂವನ್ನೆ ನೋಡುತ್ತಿದುದನ್ನು ಗಮನಿಸಿದ ನಾನು ಮಾರನೇ ದಿನ ಬೆಳಗ್ಗೇನೆ ಹೋಗಿ ನೀರಲ್ಲಿ ಮುಳುಗಿ ಐದಾರು ಕಮಲದ ಹೂಕಿತ್ತು ತಂದು ಅವಳ ಕೈಗಿಟ್ಟಿದ್ದೆ. ಅಂದು ಅವಳ ಸಂತೋಷಕ್ಕೆ ಪಾರೇ ಇರಲಿಲ್ಲ ಕುಣಿದು ಕುಪ್ಪಳಿಸಿ ಬಿಟ್ಟಿದ್ದಳು.
ಆದರೂ.... ನನ್ನನ್ನು ಒಬ್ಬನೇ ಕೆರೆಗೋಗಿ ನೀರಿಗಿಳಿದಿದ್ದಕ್ಕಾಗಿ ಬೈದಿದ್ದಳು. ಮತ್ತೆಂದೂ ಇಂತಹ ಸಾಹಸಕ್ಕೆ ಕೈ ಹಾಕಬೇಡವೆಂದು ಆಣೆ ಇಟ್ಟಳು.
ಆಗ ತಿಂಗಳಿಗೊಮ್ಮೆ ಟೆಸ್ಟ್ ಮಾಡುತ್ತಿದ್ದರು ನಾವು ಬರೆದ ಉತ್ತರ ಪತ್ರಿಕೆಗಳನ್ನು ಹುಡುಗ ಹುಡುಗಿಯರಿಗೆ ಅದಲು ಬದಲಾಗಿಸಿ ನಮ್ಮಿಂದಲೇ ಮೌಲ್ಯ ಮಾಪನ ಮಾಡಿಸುತ್ತಿದ್ದರು. ಆಗೊಮ್ಮೆ ನನ್ನ ಉತ್ತರ ಪತ್ರಿಕೆ ಅವಳ ಕೈಗೆ ಸಿಕ್ಕಿ ನನ್ನ ವಿದ್ಯಾಪಾಂಡಿತ್ಯವನ್ನು ಗಮನಿಸಿ ಅಂದು ಮಧ್ಯಾಹ್ನ ನನ್ನಿಂದೆ ತಿರುಗೋದು ಬಿಟ್ಟು ಸರಿಯಾಗಿ ಓದೋಕಾಗಲ್ವ ಅಂತ ಬೈದು. ಸರಿಯಾಗಿ ಓದ್ಕೋ ಅಂತ ಅವಳ ನೋಟ್ಸ್ ನನ್ನ ಕೈಗಿಟ್ಟಿದ್ದಳು. ಮೊದಲೇ ಓದಿಗೂ ನನಗೂ ದೂರ ದೂರ ನಾನು ಶಾಲೆಗೆ ಹೋಗುತ್ತಿದ್ದುದೇ ಇವಳಿಗೋಸ್ಕರ ಇನ್ನು ಓದುವುದೆಲ್ಲಿಂದ? ಅಂದು ರಾತ್ರಿ ಕುಳಿತು ನೀನು ಮರ ನಾನು ಬಳ್ಳಿ ನೀನು ಕಡಲು, ನಾನು ತೀರ ಎಂದೆಲ್ಲ ಬರೆದು ಪುಟತುಂಬಿಸಿ ಒಂದು ಹೃದಯ ಬರೆದು ಅದರೊಳಗೆ ಅವಳೆಸರ ಪಕ್ಕ ನನ್ನೆಸರ ಬರೆದು ಎಸ್ ಲವ್ಸ್ ಎಸ್ ಎಂದು ಬರೆದು ಅವಳ ನೋಟ್ಸ್ಗಿಟ್ಟು ಅವಳ ಕೈಗೆ ಕೊಟ್ಟು ಬಿಟ್ಟೆ. ಅದರೊಳಗೆ ಚೀಟಿ ಇಟ್ಟಿದೇನೆನ್ನುವುದನ್ನು ಹೇಳಲು ಧೈರ್ಯ ಸಾಲದೆ ಸುಮ್ಮನಾಗಿಬಿಟ್ಟೆ. ಮಾರನೇ ದಿನ ಅವಳು ಶಾಲೆಗೆ ಬರಲಿಲ್ಲ, ಬೆಲ್ಲಾಗುವ ಸಮಯಕ್ಕಿಂತ ಸ್ವಲ್ಪ ಮುಂಚೆ ಅವರಪ್ಪ ಬಂದವನೇ ಸೈಕಲ್ ನಿಲ್ಲಿನಿ ಸೀದಾ ಎ.ಎಸ್. ಮೇಸ್ಟ್ರು ಹತ್ತಿರ ಹೋಗಿ ಏನೇನೋ ಹೇಳುತ್ತ ನನ್ನನ್ನ ಬೊಟ್ಟು ಮಾಡಿ ತೋರಿಸುತ್ತಿದ್ದ. ಅಂದು ಎರಡನೇ ಪಿರಿಯಡ್ನಲ್ಲಿ ಬಂದ ಎ.ಎಸ್. ಸುಖಾ ಸುಮ್ಮನೆ ನನ್ನನ್ನು ಎಬ್ಬಿಸಿ ನಿಲ್ಲಿಸಿ ಚೆನ್ನಾಗಿ ಹೊಡೆದಿದ್ದರು. ಯಾರೊಬ್ಬರಿಗೂ ಎ.ಎಸ್. ನನಗೆ ಯಾಕೆ ಹೊಡೆಯುತ್ತಿದ್ದಾರೆಂದು ಅರ್ಥವಾಗಿರಲಿಲ್ಲ. ಎ.ಎಸ್. ಹೊಡೆದ ಏಟಿಗೆ ನನಗೆ ಜ್ವರ ಬಂದು ಮೂರ್ನಾಲ್ಕು ದಿನ ಏಳಲಾಗಲಿಲ್ಲ ವಾರದ ನಂತರ ಶಾಲೆಗೆ ಹೋದವನಿಗೆ...... ಆಘಾತ ಕಾದಿತ್ತು ಅವಳು ನಮ್ಮ ಶಾಲೆಯಿಂದ ಟಿ.ಸಿ. ತೆಗೆದುಕೊಂಡು ಅವಳ ಅಜ್ಜಿತಾತನ ಊರಿಗೆ ಹೋಗಿ ಬಿಟ್ಟಿದ್ದಳು.
ಅವಳು ಹಾಗೆ ಏಕಾ ಏಕೀ ಒಂದು ಮಾತು ಹೇಳದೆ ಹೋದದ್ದಾದರೂ ಏಕೆಂದು ನನಗೆ ಗೊತ್ತಾಗಲೇ ಇಲ್ಲ. ಅವಳ ಮುಖ ನೋಡದೆ ಅವಳ ಧ್ವನಿ ಕೇಳದೆ ನಾನು ಹುಚ್ಚನಾಗಿ ಬಿಟ್ಟೆ. ಅದೇ ಕೊರಗಿನಲ್ಲಿ ಸ್ಕೂಲ್ ಬಿಟ್ಟೆ. ಕೊನೆಗೆ ಜಿ.ಎಲ್. ಮೇಸ್ಟ್ರು ಬಲವಂತದಿಂದ ಎಸ್.ಎಸ್.ಎಲ್.ಸಿ. ಎಕ್ಸಾಮ್ ಬರೆದು ಬಂದೆ.
ಅದೇನು ಪವಾಡವೊ . . ನಾನು ಎಸ್.ಎಸ್.ಎಲ್.ಸಿ. ಪಾಸಾಗಿ ಬಿಟ್ಟಿದ್ದೆ. ಅದಾಗಿ ಹತ್ತು ವರ್ಷಗಳ ನಂತರ . . . .
ನಮ್ಮೂರಿನ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಅವಳು ನನ್ನ ಕಣ್ಣಿಗೆ ಬಿದ್ದಳು. ನನ್ನ ಕಣ್ಣ ನಾನೇ ನಂಬದಾದೆ ಹತ್ತಿರ ಹೋಗಿ ನಾನೇ ಮಾತನಾಡಿಸಿದೆ ನನ್ನ ನೋಡಿ ಅವಳು ಸ್ವಲ್ಪ ಗಲಿಬಿಲಿ ಗೊಂಡಳು. ತಕ್ಷಣ ಚೇತರಿಸಿಕೊಂಡು ತನ್ನಿಬ್ಬರು ಪುಟಾಣಿಗಳನ್ನು ಮತ್ತು ಗಂಡನನ್ನು ಪರಿಚಯಿಸಿದಳು ಮದುವೆಗೆ ಕರೆಯಲಾಗಲಿಲ್ಲ ಕಣೋ . . ಎಂದಳು ಈಗೇನು ಮಾಡುತ್ತಿದ್ದಿ ಎಂದಳು ನಾನು ನನ್ನೆದೆಯ ನೋವನ್ನೆಲ್ಲ ನುಂಗಿಕೊಂಡು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ನನ್ನ ಪತ್ರಿಕೆಯ ಆಫೀಸಿನ ವಿಳಾಸವಿರುವ ವಿಸಿಟಿಂಗ್ ಕಾಡರ್್ ಅವಳ ಕೈಗಿಟ್ಟು ಬಂದಿದ್ದೆ.
ಅದಾಗಿ ಹದಿನೈದು ದಿನಗಳು ಕಳೆದ ಮೇಲೆ ಇಂದು ಕಾಗದ ಬರೆದಿದ್ದಾಳೆ ಏನು ಬರೆದರಬಹುದೆಂದು ಲಕೋಟೆ ಒಡೆದು ಪತ್ರ ತೆರೆದೆ.
ಬಾಲ್ಯದ ಗೆಳೆಯ,
ನಾನು ಮತ್ತೆ ಈ ಜನ್ಮದಲ್ಲಿ ನಿನ್ನ ನೋಡುತ್ತೇನೆ ಅಂದುಕೊಂಡಿರಲಿಲ್ಲ. ಯಾಕ್ಹೀಗೆ ಸೊರ ಗಿದ್ದೀಯ? ಮೂವತ್ತಾದರೂ ಮದುವೆಯಾಗದೆ ಒಂಟಿಯಾಗಿದ್ದೀಯಲ್ಲೋ? ನಿನ್ನ ಚಂದ್ರಮುಖಿ ಬರುವಳೆಂದು ಕಾಯುತ್ತಿರುವೆಯಾ? ನೋಡಿದೆಯಲ್ಲಾ ನಿನ್ನ ಚಂದ್ರಮುಖಿಯನ್ನ ಮದುವೆಯಾಗಿ ಎರಡು ಮಕ್ಕಳ ತಾಯಿ ನೊಂದು ಕೊಳ್ಳಬೇಡ ಕಣೋ ನಾನು ನಿನಗೆ ಮೋಸ ಮಾಡಬೇಕೆಂದಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಮೋಸ ಮಾಡಿದ್ದು ನೀನು. . . ಆಶ್ಚರ್ಯವಾಗುತ್ತಿದೆಯಾ? ಅವತ್ತು ಲೆಟರ್ ಬರೆದು ಸೀದಾ ನನ್ನ ಕೈಗೆ ಕೊಟ್ಟಿದ್ದರೆ ಈಗಾಗುತ್ತಿಲಿಲ್ಲ. ನೀನು ಅದನ್ನು ನನ್ನ ನೋಟ್ಸ್ಗಿಟ್ಟು ಕೊಟ್ಟಿದ್ದೆ ಅದು ನಮ್ಮ ಅಪ್ಪನ ಕೈಗೆ ಸಿಕ್ಕಿ ನಮ್ಮ ಮನೆಯಲ್ಲಿ ದೊಡ್ಡ ಅವಾಂತರವೇ ಆಗಿ ಹೋಗಿತ್ತು ಅಪ್ಪ ಅಮ್ಮ ಇಬ್ಬರು ನನ್ನನ್ನು ಚೆನ್ನಾಗಿ ಹೊಡೆದಿದ್ದರು. ಅತ್ತ ಮಾರನೇ ದಿನ ನನ್ನ ಸ್ಕೂಲಿಗೆ ಕಳಿಸಲಿಲ್ಲ. ಆದರೆ . . . ನನ್ನಪ್ಪ ಸ್ಕೂಲ್ ಹತ್ರ ಹೋಗಿ ಎ.ಎಸ್. ಗೆ ನಿನ್ನ ಮೇಲೆ ಚಾಡಿ ಹೇಳಿ ಬಂದಿದ್ದು ಗೊತ್ತಾಯ್ತು.
ಅವತ್ತು ಎ.ಎಸ್. ನಿನಗೆ ಜಾಸ್ತಿ ಹೊಡೆದಿದ್ದರಾ? ನಾನು ನಿನ್ನ ಪರಿಸ್ಥಿತಿ ನೆನಪಿಸಿಕೊಂಡು ಅತ್ತು ಬಿಟ್ಟಿದ್ದೆ ಕಣೋ ... ನಾನು ನಿನ್ನ ಯಾವಾಗ ನೋಡುತ್ತೇನೋ ಎಂದು ಹಂಬಲಿಸುತ್ತಿದ್ದೆ. ಆದರೆ ನಮ್ಮನೆಯವರಿಗೆ ನನ್ನನ್ನು ಮತ್ತೆ ಅಲ್ಲೇ ಸ್ಕೂಲಿಗೆ ಕಳಿಸಲು ಇಷ್ಟವಿರಲಿಲ್ಲ. ಅದರಿಂದ ನನ್ನ ಅಜ್ಜಿ ತಾತನ ಮನೆಗೆ ಕರೆದುಕೊಂಡು ಬಂದು ಇಲ್ಲೇ ಸ್ಕೂಲಿಗೆ ಸೇರಿಸಿಬಿಟ್ಟರು. ನನಗೆ ಆನಂತರ ನಿನ್ನ ನೆನಪು ಬಿಟ್ಟು ಬಿಡದಂತೆ ಕಾಡಲಾರಂಭಿಸಿತು. ಆದರೆ ನಾನೇನು ಮಾಡುವಂತಿರಲಿಲ್ಲ. ನಾನು ನಿದ್ದೆಯಲ್ಲು ಕೂಡ ನಿನ್ನೆಸರ ಕನವರಿಸಿದ್ದ ಕಂಡ ನನ್ನ ಅಜ್ಜಿ ಮತ್ತೆಂದು ನನ್ನ ಅರೆಯೂರಿನತ್ತ ಮುಖ ಮಾಡದಂತೆ ಮಾಡಿಬಿಟ್ಟಳು. ನಂತರ ನನ್ನನ್ನು ಸೋದರ ಮಾವನಿಗೆ ಮದುವೆ ಮಾಡಿಕೊಟ್ಟರು. ನನು ಮದುವೆಯಾದ ಮೇಲೆ ಎರಡೂರು ಸಾರಿ ಅರೆಯೂರಿಗೆ ಬಂದಿದ್ದೆ ಆದರೆ ನೀನು ಅಷ್ಟೊತ್ತಿಗೆ ಅರೆಯೂರು ಬಿಟ್ಟು ಗೋಮಾಳದಲ್ಲಿ ಇರೋದು ಗೊತ್ತಾಯ್ತು ನಾನು ಗೋಮಾಳಕ್ಕೆ ನಿನ್ನನ್ನು ಹುಡುಕಿ ಬರುವಂತ ಪರಿಸ್ಥಿತಿಯಲ್ಲಿರಲಿಲ್ಲ.
ನೀನು ಮೊನ್ನೆ ದೇವಸ್ಥಾನದಲ್ಲಿ ಸಿಕ್ಕಾಗ ನನಗೆ ಏನು ಮಾತಾಡಬೇಕೆಂದೆ ಗೊತ್ತಾಗಲಿಲ್ಲ ಕಣೋ ಸಾರಿ ಆದಷ್ಟು ಬೇಗ ನನಗಿಂತ ಸುಂದರವಾಗಿರುವ ಚೆಲುವೆಯನ್ನ ಹುಡುಕಿ ತಪ್ಪದೆ ನನ್ನನ್ನು ಮದುವೆಗೆ ಕರೆ ನಿನ್ನ ಮದುವೆಗೆ ಬರುತ್ತೇನೆ ನಿನ್ನ ಲಗ್ನಪತ್ರಿಕೆಯ ನಿರೀಕ್ಷೆಯಲ್ಲಿ...
ನಿನ್ನ ಬಾಲ್ಯದ ಗೆಳತಿ.

ಪತ್ರ ಓದಿ ಮುಗಿಸಿದ ನನ್ನ ಕಣ್ಣಂಚಲ್ಲಿ ನೀರಿತ್ತು...

-ಅರೆಯೂರು ಚಿ.ಸುರೇಶ್

Comments

Submitted by karababu Wed, 11/29/2017 - 12:02

ಶ್ರೀ ಸುರೇಶ್ ಅವರೆ,
ತಮ್ಮ ಅತಿ ಕಹಿ ನೆನಪನ್ನೂ ಸವಿ ಸವಿ ನೆನಪಾಗಿ ನೆನೆದಿರುವ ಬಗೆ ಇಷ್ಟವಾಯಿತು. ಇದೊಂದು ತುಂಬಾ ಸರಳವಾದ ಆದರೆ ಮನಮುಟ್ಟುವ ಪ್ರೇಮಕಥೆಯೆನ್ನಬಹುದು.