ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ

ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ

ಅದೊಂದು ಸಂಜೆ.   ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು ಅಸ್ತಂಗತನಾಗುವ ಸಮಯ.  ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ ಬಡಿಯುತ್ತಿತ್ತು.  ಬೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು ಕೆಂಪಿನುಂಡೆಯ ಚೆಂಡಾದ ರವಿ.  
 
ಕವಿಗೆ ಇನ್ನೇನು ಬೇಕು.  ಅರೆರೆ! ಭಾವವುಕ್ಕಿದ ಗಡಿಬಿಡಿಯಲ್ಲಿ ಅವನಿಗರಿವಿಲ್ಲದೆ ಜೋತು ಬಿದ್ದ ಜೋಳಿಗೆಗೆ ಕೈ ಹಾಕಿ ತಡಕಾಡಿದ.    ರವಿಯ ಪಯಣದ ಹಾಡು ಬರೆಯುವ ಉತ್ಸಾಹ, ಉದ್ವೇಗ ಅವನ ಹೃದಯ ಬಡಿತ ಅವನಿಗೇ ಕೇಳುವಷ್ಟು ಜೋರಾಗಿತ್ತು.  
 
ಆರು ಚೆಲ್ಲಿದರು ನಿನ್ನ ಹಾದಿಗೆ ಇಷ್ಟೊಂದು ರಂಗು
ಆ ಬಾನು ಬಿಳಿ ಮೋಡ ನಾಚಿ ನವಿರಾಗಿದೆ ನೋಡು
ಎತ್ತೆತ್ತ ನೋಡಿದರಾಕಾಶ ಕೆಂಪಡರಿದೆ ಸೌಂದರ್ಯದಲಿ ಮಿಂದು
ಮಿನುಗುವ ತಾರೆಗಳು ಒಂದೊಂದೆ ಮೆಲ್ಲನೆ ಹಣುಕುತಿವೆ ನೋಡು.
 
ಹೇಳಿ ಕೇಳಿ ಮಲ್ಪೆಯ ಆ ತೀರದ ಕಡಲು ದೃಷ್ಟಿ ಹಾಯಿಸಿದಷ್ಟೂ ದೂರ ಕಾಣುವ ಮರಳ ರಾಶಿ.  ನಿರ್ಮಲವಾದ ಆ ಮರಳ ರಾಶಿಯೇ ತನ್ನ ಹಾಸಿಗೆ .  ತಿಂದುಂಡು ಹೊರಳಾಡಿ ಸುಃಖಿಸಿ ಗೊರಕೆ ಹೊಡೆದು ಮೈಮುರಿದು ಹೊರಟನೆ ಆ ರವಿ!   ಅಜ್ಜಿ ತಾ ಕಡೆದ ಬೆಣ್ಣೆಯನ್ನು ಎತ್ತರಿಸಿ ಎತ್ತರಿಸಿ ತನ್ನ ಕೈಗಳಲಿ ಉಂಡೆ ಮಾಡಿ ತಿಳಿ ನೀರಲಿ ತೊಳೆದು ಅಗಲ ಪಾತ್ರೆಯಲಿರಿಸಿ ಉರಿ ಹಚ್ಚಿದಾಗ ನಿಧಾನವಾಗಿ ಕರಗುವ ರೀತಿ ಶರಧಿಯ ಒಡಲಲ್ಲಿ ನಿನ್ನ ಬಿಂಬ ನೋಡ ನೋಡುತ್ತಿದ್ದಂತೆ ಕರಗುವ ಪರಿ ಅವರ್ಣನೀಯ ಅನುಭವ ಪ್ರತೀ ದಿನ ನೋಡಿದರೂ!
 
ರಾತ್ರಿ ರಾಣಿಯರಂತೆ ದೂರದಲ್ಲಿ ಮಿನುಗುವ ದೀಪ ಅಸ್ತಂಗತನಾಗುವ ರವಿಗೆ ಇಂದು ಹೋಗಿ ನಾಳೆ ಮತ್ತೆ ಬಾ ಎಂದು ಹೇಳಿ ಹೋಗುವ ದಾರಿಗುಂಟ ದೀಪದಾರತಿ ಬೆಳಗುತಿರಬಹುದೆ?   ಹೆತ್ತವರು ತವರ ಕುಡಿಯ ಗಂಡನ ಮನೆಗೆ ಕಳಿಸುವಂತೆ ಕೆಲವೊಂದು ದೀಪ  ಹೊತ್ತಿಕೊಳ್ಳದೆ ದುಃಖದಲ್ಲಿ ಕಣ್ಣೀರಿಡುತ್ತ ರವಿಯ ಬಳುಗಳಿಸುತ್ತಿರಬಹುದೆ?  
 
ಕತ್ತಲಾವರಿಸುತ್ತಿದ್ದಂತೆ ಗಡಿಬಿಡಿಯಿಂದ ಮೈ ಕೊಡವಿ ಎದ್ದೇಳುವ ಜನ ಅಷ್ಟೊತ್ತೂ ತಮ್ಮಿರುವ ಮರೆಯುವಂತೆ ಎಲ್ಲರ ಮನಸ್ಸು ಕಟ್ಟಿ ಹಾಕಿದ್ದ ರವಿ.  ನಿಧಾನವಾಗಿ ಪೂರ್ತಿ ಕಳೆದೇ ಹೋಗುತ್ತಿದ್ದ ಅವನಾಟ ಕಂಡು ಪೆನ್ನು ಹಿಡಿದ ಕೈ ಬಿಳಿ ಹಾಳೆಯ ತೊಗಲಲ್ಲಿ ತನ್ನ ಕಪ್ಪು ಬಣ್ಣ ಬಿಡುತ್ತಾ ಸಾಗಿತ್ತು ಶಬ್ದದೋಕುಳಿಯಲ್ಲಿ.  ಪದ ಪುಂಜಗಳ ನಡುವೆ ಅವನಂದದ ಸೊಬಗ ಹಿಡಿದಿಡುತ್ತಿರುವ ಕವಿ ಸುತ್ತಲ ಪರಿವಿಲ್ಲದೆ ಆ ಮರಳ ಮಮಕಾರದ ಮದ್ಯ ಕುಳಿತು ಗೀಚುತ್ತಲೆ ಇದ್ದ.  ಹೌದು ಎಷ್ಟು ಬರೆದರೂ ಸಾಲದು.  ಬರೆದಷ್ಟೂ ಮುಗಿಯದ ಸೊಬಗು ಆ ಮನೋಹರ ದೃಶ್ಯ.  ಕಣ್ಣು ಮನ ತಂಪಾಗಿಸಿ ಹಗಲಿನ ಪ್ರಖರತೆ ಮರೆಸಲೆಂದೆ ಹೀಗೆ ಮೈ ತಾಳಬಹುದೆ ಹೊರಡುವ ಗಳಿಗೆಯಲ್ಲಿ! 
 
ಮೌನದ ಖಣಿವೆಯಲ್ಲಿ ಮಾತಿನ ಮಂಟಪ ಕವಿ ಮನದ ತುಂಬಾ.   ಭಾಸ್ಕರನೊಂದಿಗೆ ಸಂಭಾಷಣೆ ಇಂದೇಕೊ ಅತಿಯಾದ ಭಾವೋದ್ವೇಗದಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತ ಏನೇನೊ ಕೇಳುತ್ತ ಹೃದಯ ಕವಾಟ ತೆರೆದಿಟ್ಟು ಮನಸ್ಸು ಹಗುರ ಮಾಡಿಕೊಳ್ಳುತ್ತ ಸಾಗುತ್ತಲೇ ಇತ್ತು.  
 
"ಏಯ್! ಹೇಳು ಸೂರ್ಯಾ ನೀನೇಕೆ ಹೀಗೆ?  ಜನರ ಜೀವನಕ್ಕೆ ಹತ್ತಿರವಾಗಿ ನೀನಿಲ್ಲದೆ ಇರಲು ಸಾಧ್ಯವೇ ಇಲ್ಲ ಎಂಬುದನ್ನು ಅರಿವಾಗಿಸಲು ದಿನ ನಿತ್ಯ ತಪ್ಪದೇ ಬರುವೆಯಾ?  ಹಾಗಾದರೆ ಮುಸ್ಸಂಜೆಯಲಿ ನೀನೆಲ್ಲಿ ಹೋಗುವೆ?  ನಖಶಿಕಾಂತ ನಿನ್ನ ಕಾವು ಹಗಲ ಬೆಳಕಲ್ಲಿ.  ಸಂಜೆ ಅದು ಹೇಗೆ ತಂಪಾಗುವೆ?  ನಾನು ನಿನ್ನ ಒಮ್ಮೆ ಹತ್ತಿರದಿಂದ ನೋಡಬೇಕಲ್ಲಾ.  ಸಾಧ್ಯ ಮಾಡು ಒಮ್ಮೆ.  ನಿನ್ನಲ್ಲಿ ಇರುವ ಆ ಶಕ್ತಿ ಎಂತದು ಮಾರಾಯಾ?  ಶ್ರೀ ಕೃಷ್ಣ ಪರಮಾತ್ಮನ ದಶಾವತಾರವೆ ನೀನಿರಬಹುದೆ?  ಉದಯದ ಕಿರಣ ಸುತ್ತೆಲ್ಲ ಗಿಡ ಮರ ಕಟ್ಟಡಗಳ ಸೀಳಿ ಹೊರ ಬರುವಾಗ ಆ ಪ್ರಭಾವಳಿಯ ಕಂಡಾಗಲೆಲ್ಲ ನನ್ನ ಮನಸ್ಸು ಹೀಗೆ ನನ್ನ ಕೇಳುವುದು.  ಇದು ನಿಜವಾ?  ಆಗೆಲ್ಲ ನಾ ಮಂತ್ರಮುಗ್ದನಾಗಿ ನೋಡುತ್ತಲೇ ಇರುತ್ತೇನೆ.  ಎಷ್ಟು ನೋಡಿದರೂ ನನಗೆ ತೃಪ್ತಿಯಾಗದು.  ಎಷ್ಟು ಬರೆದರೂ ನಾ ಬಳಸಿದ ಪದಗಳು ನಿನ್ನ ಅಂದಕೆ ಕಳಪೆಯಾಗಿಯೇ ಕಾಣುವುದು.  ಇನ್ನಷ್ಟು ಮತ್ತಷ್ಟು ಹುಡುಕಾಟ ನಿನ್ನ ವರ್ಣಿಸಲು.  ಆದರೆ ನಾ ಎಲ್ಲಿಂದ ಬಗೆದು ತರಲಿ ಹೇಳು?  ಪ್ರತಿ ಬಾರಿ ಬರೆಯುವಾಗ ನಾ ಸೋತು ಹೋಗುತ್ತಿರುವೆ.  ನಿನ್ನಲ್ಲಿರುವ ಶಕ್ತಿಯ ಒಂದು ಅಣುವಿನಷ್ಟಾದರೂ ಶಕ್ತಿ ನನಗೆ ದೊರಕಿದ್ದರೆ ಉಸಿರಿಡಿದು ಬದುಕಿನುದ್ದಕ್ಕೂ ಸದಾ ನಿನ್ನ ಕಾವ್ಯ ಬರೆಯುತ್ತಿದ್ದೆ.  ಯಾಕೆ ನಗು ಬಂತಾ ಸೂರ್ಯಾ?  
 
ನನಗೆ ನಿನ್ನ ಕಂಡರೆ ತುಂಬಾ ತುಂಬಾ ಅಕ್ಕರೆ ಕಣೊ.  ಅದಕ್ಕೆ ಮನಸ್ಸಿನ ಅನಿಸಿಕೆಗಳನ್ನು ನಿನ್ನ ಹತ್ತಿರ ಯಾವ ಮುಚ್ಚು ಮರೆಯಿಲ್ಲದೆ ಹೇಳಿಬಿಡುತ್ತೇನೆ.  ಆಗ ಒಂಚೂರು ಸಮಾಧಾನವೂ ಸಿಗುತ್ತದೆ.  ನೀನುದಯಿಸುವ ಬೆಳಗು ಹಾಗೆ ಈ ಕಡಲ ಕಿನಾರೆಯಲ್ಲಿ ಅಡಗಿಕೊಳ್ಳುವ ಪರಿ ಪ್ರತಿನಿತ್ಯ ನಾ ತಪ್ಪದೆ ನೋಡಲು ಬರುವೆ.  ಹೀಗೆ ನಿತ್ಯವೂ ನೋಡಿ ನೋಡಿ ನನಗೆ ನೀನು ತುಂಬಾ ತುಂಬಾ ಹತ್ತಿರವಾಗಿದ್ದೀಯಾ.  ಮೌನವಾಗಿದ್ದ ನನ್ನೊಡಲ ದುಃಖ ಇಂದು ಕಟ್ಟೆಯೊಡೆದು ಬರುತ್ತಿದೆ ಗೆಳೆಯಾ!  ನೋಡು ನಿನ್ನ ಅನುಮತಿಯಿಲ್ಲದೆ ನಾನು ನಿನ್ನ ಗೆಳೆಯಾ ಎಂದು ಕರೆದೆ.  ಕೋಪವೆ ಹೇಳು.  ಆದರೆ ನೀನು ಬಂದು ಹೇಳುವುದು ನಾಳೆಯೆ ಅಲ್ಲವೆ?  ಇರಲಿ.  ಆದರೆ ಆ ನಾಳೆ ನನ್ನ ಪಾಲಿಗೆ ಇರುವುದೇ ಇಲ್ಲ.  ಅದಕ್ಕೆ ಇಂದು ಮನಃಸ್ಪೂರ್ತಿ ನನ್ನ ಭಾವೋದ್ವೇಗದ ಕ್ಷಣಗಳನ್ನೆಲ್ಲ ಹಿಡಿದಿಟ್ಟು ಪುಟ ಪುಟಗಳಲ್ಲಿ ದಾಖಲಿಸಿ ಇಲ್ಲೆ ಇಲ್ಲೆ ನೀನುದಯಿಸುವ ಗಳಿಗೆಯಲ್ಲಿ ನಾನಿಲ್ಲವಾಗುವೆ.  ಸಹಿಸಲಾಗದ ನೋವು ಕಣೋ.  ಸಹನೆ ಮೀರಿ ನನ್ನ ತಿಂದಾಕುತಿದೆ.  ಆದರೆ ಅದಾವ ರೀತಿಯ ನೋವು?  ನಿನಗಾವ ರೋಗ ಬಂದು ತಟ್ಟಿದೆ ಹೇಳು ಕೇಳುವೆಯಾದರೆ ನಾನೇನು ಹೇಳಲಿ ಗೆಳೆಯಾ?  ಎಷ್ಟು ನೋವುಗಳು ಬಾಳ ಬಂಡಿಯ ತುಂಬಾ.  ಯಾವುದು ಮೊದಲು ಹೇಳಲಿ?  ಎಲ್ಲಿಂದ ಶುರು ಮಾಡಲಿ?  ನನ್ನ ಜಂಜಾಟದ ಬದುಕಿನ ಒಂದೊಂದು ನೋವ ಕಥೆ ಕೇಳುವಷ್ಟು ತಾಳ್ಮೆ, ಪುರುಸೊತ್ತು ಇದೆಯಾ ನಿನಗೆ ಹೇಳು?  ಇಲ್ಲ ತಾನೆ?  ಮತ್ಯಾಕೆ ನನಗೀ ಪ್ರಶ್ನೆ?  ಸಾಕು ಮಾಡು.  ಅಷ್ಟಕ್ಕೂ ಹೇಳಿದರೆ ನನ್ನ ನೋವು ಕಡಿಮೆ ಆಗಬಹುದೆಂಬ ನಂಬಿಕೆ ನನಗಿಲ್ಲ.  ಕೇಳಿ ನೀನೇನಾದರೂ ಸಲಹೆ ಸೂಚನೆ ಕೊಡಬಲ್ಲೆ ಅಷ್ಟೆ.  ಅದು ಆಗಲೇ ಹಲವರು ಹೇಳಿಯಾಗಿದೆಯಲ್ಲ.  ಏನಿದ್ದರೂ ಯಾರಿರಲಿ ಇಲ್ಲದಿರಲಿ ನನ್ನ ನೋವು ನನಗೆ.  ಹತಾಷೆಯ ಕುಡಿ ಬೇಡ ಬೇಡವೆಂದರೂ ಮೊಳಕೆಯೊಡೆದು ಚಿಗುರುತ್ತಲೇ ಇರುತ್ತದೆ.  ಚಿವುಟಿ ಚಿವುಟಿ ನೋಡು ನನ್ನ ಬೆರಳುಗಳು ಹೇಗೆ ಜಡ್ಡುಗಟ್ಟಿವೆ.  ಇದೇ ತಾನೆ ಇನ್ನು ಮುಂದೂ.  ನೆನಪುಗಳ ಮರೆಯಲೂ ಆಗದು ಹತ್ತಿಕ್ಕಲೂ ಆಗದು.  ಆಗಾಗ ಚುಚ್ಚಿಕೊಳ್ಳುವ ಇನ್ಸುಲಿನ್ ಇಂಜಕ್ಷಿನಿನಂತೆ ನನ್ನ ಮೆದುಳನ್ನೇ ಚುಚ್ಚುತ್ತಿವೆ ಕಣೊ.  ಅದಕ್ಕೆ ಸಹಿಸಿ ಸಹಿಸಿ ಸಾಕಾಗಿದೆಯಂತೆ.  ಇದರಿಂದ ಬಿಡುಗಡೆ ಪಡೆಯಲು ಇಂದು ಈ ನಿರ್ಧಾರಕ್ಕೆ ಬಂದೆ.  ಸಾಕು ನನಗೀ ಜನ್ಮ ಎಂದೆನಿಸಿಬಿಟ್ಟಿದೆ ಕಣೊ.  ಬೇರೆ ದಾರಿಯಿಲ್ಲದೆ ನನ್ನೇ ನಾ ಕೊಂದುಕೊಳ್ಳುತ್ತಿರುವೆ.  ಕ್ಷಮಿಸು.  ಏನೇನೊ ಬಡಬಡಿಸುತ್ತಿಲ್ಲ.  ಇದು ದಿಟವಾದ ಮಾತು.  ಸತ್ಯಕ್ಕೆ ಹತ್ತಿರವಾದ ಮಾತು ........."
 
ಬರೆಯುತ್ತ ಬರೆಯುತ್ತ ಕವಿ ಬಿಚ್ಚಿಟ್ಟ ಮರಳ ಹಾಸಿಗೆಯಲ್ಲಿ ಅಂಗಾತ ಮಲಗಿದ.  ಆಕಾಶದ ಹೊದಿಕೆಯ ತುಂಬ ಮಿನುಗುವ ನಕ್ಷತ್ರ ಗಳ ನೋಡು ನೋಡುತ್ತಿದ್ದಂತೆ ಆಗವನಿಗನಿಸಿತು ; ನನ್ನ ಗೆಳೆಯ ಸೂರ್ಯನಿಗೆ ಇವರಾರೂ ಸಾಠಿಯಲ್ಲ.  ಸೂರ್ಯ ಸೂರ್ಯನೆ.  ಓಹ್! ಸೂರ್ಯಾ ನೀನದೆಷ್ಟು ಚಂದ.  ಜಗತ್ತಿಗೇ ಬೆಳಕಾಗಿ ಪ್ರತಿ ದಿನ ಪ್ರತಿ ಕ್ಷಣ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ ನೀನು ನಿನ್ನೊಂದಿಗೆ ನಾನಿರಲು  ಆಗುತ್ತಿಲ್ಲವಲ್ಲಾ.  ಅನವರತ ನನಗೆ ನೀನು ಬೇಕು, ನಿನ್ನಂದವ ಇನ್ನಷ್ಟು ಕಣ್ಣು ಮನ  ತುಂಬಿಕೊಳ್ಳಬೇಕು.  ಆದರೆ ಅದಾಗದ ಮಾತು.  
 
ಕವಿಯ ಕಣ್ಣಾಲಿಗಳು ತುಂಬಿ ಬಂದ ನೀರು ಕಪೋಲದ ಗುಂಟ ಸಾಗಿ ಮರಳಲ್ಲಿ ಉಡುಗಿ ಹೋಯಿತು.  ನಿತ್ಯದಂತೆ ರವಿಯ ಕಿರಣ ಅವನ ದೇಹ ಸೋಕಲು ಅವ ನೋಡಲೇ ಇಲ್ಲ.  ಸುತ್ತ ನೆರೆದಿದ್ದ ಜನ "ಪಾಪ! ಯಾರೊ ಆಗಂತುಕ ಇಲ್ಲಿ ಹೆಣವಾಗಿದ್ದಾನೆ" ಎಂದು ಮಾತಾಡಿಕೊಳ್ಳುತ್ತಿದ್ದರು.  ಬರೆದ ಹಾಳೆಗಳು ಗಾಳಿಗೆ ತೂರಿ ಕಡಲೊಡಲಲ್ಲಿ ತೇಲಿ ತೇಲಿ ಇನ್ನಿಲ್ಲವಾದವು!!
 
16-11-2017. 7.54pm