ನನ್ನ ಕನಸಿನ ಕರ್ನಾಟಕ
ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ ದುಡಿಯುವುದು. ಸದ್ಯಕ್ಕೆ ನನ್ನ ಕಲ್ಪನೆಯಲ್ಲಿರುವ ಕರ್ನಾಟಕದ ಬಿಂಬವನ್ನು ನಿಮ್ಮ ಮನಗಳಲ್ಲಿ ಪ್ರತಿಬಿಂಬಿಸಲು ಅಣಿಯಾಗಿ ಕುಳಿತಿದ್ದೇನೆ. ಕನ್ನಡ ಎಂಬ ಪದ ಕರ್ನಾಟಕದ ನುಡಿಗೂ ಭೂಪ್ರದೇಶಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಕನ್ನಡ ಭೂಪ್ರದೇಶದಲ್ಲಿ ಕಾಲಾಂತರದಲ್ಲಿ ಹಲವು ನುಡಿಗಳನ್ನಾಡುವರು ಕಲೆತು ಬಾಳುತ್ತಿದ್ದಾರೆ. ಅವರೆಲ್ಲರನ್ನು ಬಂಧಿಸಿರುವುದು ಕನ್ನಡ ನುಡಿ. ಇವರೆಲ್ಲರೂ ಕನ್ನಡಿಗರು. ಕರ್ನಾಟಕ ಮತ್ತು ಗಡಿನಾಡು ಸಮಸ್ಯೆ ಮೊದಲನೆಯದಾಗಿ ಕರ್ನಾಟಕದ ಆಡಳಿತ ಸರಳಗೊಳಿಸಿಕೊಳ್ಳಲು ಈ ನಾಡಿನ ಗಡಿಗಳನ್ನು ಗುರುತಿಸಿಕೊಳ್ಳಬೇಕಿದೆ. ಕವಿರಾಜಮಾರ್ಗದಲ್ಲಿ ಕನ್ನಡ ಪ್ರದೇಶವನ್ನು ಕಾವೇರಿಯಿಂದ ಗೋದಾವರಿ ನದಿಗಳ ನಡುವೆ ಗುರುತಿಸಲಾಗಿದೆ. 1956ರ ರಾಜ್ಯ ಪುನರ್ವಿಂಗಡಣೆ ಅನ್ವಯ ಕರ್ನಾಟಕದ ಇಂದಿನ ಗಡಿಗಳನ್ನು ಗುರುತಿಸಲಾಗಿದೆ. ಆದರೆ ಇದು ಕನ್ನಡಿಗರೆಲ್ಲರಿಗೂ ಸಮ್ಮತಿಪೂರ್ಣವಾದುದಲ್ಲ. ಈಗಲೂ ಕರ್ನಾಟಕದ ಗಡಿಗಳ ಹೊರಗೆ ನೆರೆಯ ರಾಜ್ಯಗಳಲ್ಲಿ ಕನ್ನಡ ಪ್ರದೇಶಗಳು ಸೇರಿ ಹೋಗಿವೆ. ಮುಖ್ಯವಾಗಿ ಅವನ್ನು ಕರ್ನಾಟಕದೊಳಕ್ಕೆ ತರುವ ಕಾರ್ಯವಾಗಬೇಕು. ಕರ್ನಾಟಕ ಸಮಸ್ತ ಕನ್ನಡಿಗರ ನೆಲೆವೀಡಾಗಬೇಕು. ಈಗಿನ ಕರ್ನಾಟಕದಲ್ಲಿರುವ ಕನ್ನಡಿಗರ ಮೇಲೆ ತಮ್ಮ ಹೊರನಾಡ ಸೋದರ ಸೋದರಿಯರನ್ನು ಬರಮಾಡಿಕೊಳ್ಳುವ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ, ಕೇರಳ ರಾಜ್ಯದ ಕಾಸರಗೋಡು, ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟ, ಜತ್ತ, ಗಡಹಿಂಗ್ಲಜ, ಇಚಲಕರಂಜಿ, ಆಂಧ್ರಪ್ರದೇಶದ ಆದವಾನಿ, ಆಲೂರು, ಅನಂತಪುರದ ಕನ್ನಡ ಪ್ರದೇಶಗಳು, ಮಡಕಶಿರಾ, ತಮಿಳುನಾಡಿನ ಹೊಸೂರು, ಡಂಕಣಿಕೋಟ, ನೀಲಗಿರಿ ಭಾಗಗಳನ್ನು ಕನರ್ಾಕದೊಳಗೆ ಸೇರಿಸಿಕೊಳ್ಳಲು ಅಗ್ರಮುಖ ಹೋರಾಟ ಏರ್ಪಡಬೇಕು. ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ ಇತಿಹಾಸದುದ್ದಕ್ಕೂ ಕನ್ನಡ ನುಡಿಯಾಡುಗರ ಪ್ರದೇಶಗಳು ಹಲವು ಆಡಳಿತಗಾರರ ಕೈಯಡಿಯಲ್ಲಿದ್ದವು. ತತ್ಪರಿಣಾಮ ಕರ್ನಾಟಕದ ವಿವಿಧ ಭಾಗಗಳು, ಇಂದು ಅಭಿವೃದ್ಧಿಯ ಮಾಪಕದಲ್ಲಿ ಪ್ರತ್ಯೇಕ ಸ್ಥಾನಗಳಲ್ಲಿವೆ. ಇವುಗಳದರ ನಡುವೆ ಸಮತೋಲನ ಸಾಧಿಸಬೇಕಾದುದು ಸಮೃದ್ಧ ಕರ್ನಾಟಕ ಸಾಕಾರಗೊಳಿಸಲು ಮೊದಲ ಹೆಜ್ಜೆ. ಈ ದಿಸೆಯಲ್ಲಿ ವಿವಿಧ ಭಾಗಗಳ ಸಂಪನ್ಮೂಲಗಳನ್ನು ಗುರುತಿಸಿ ಅವುಗಳನ್ನು ಸೂಕ್ತ ಬಳಕೆಗೆ ಹಚ್ಚಿ, ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕಬೇಕಿದೆ. ಉತ್ತರ ಕರ್ನಾಟಕ ಎಲ್ಲ ವಿಚಾರದಲ್ಲಿ ಕರ್ನಾಟಕದ ದಕ್ಷಿಣ ಭಾಗಕ್ಕಿಂತಲೂ ಹಿಂದುಳಿದಿರುವುದು, ಸರ್ವ ವೇದ್ಯ. ಆ ಕಾರಣ ದಕ್ಷಿಣದ ಕನ್ನಡಿಗರು ತಮ್ಮ ಉತ್ತರದ ಸೋದರರೊಂದಿಗೆ ಉತ್ತಮ ಬಂಧುತ್ವ ಹೊಂದಿ ಆ ಪ್ರದೇಶದ ಏಳ್ಗೆಗೆ ಸಹಕರಿಸಬೇಕು. ಉತ್ತರದ ಭಾಗದಲ್ಲಿ ಕೃಷಿ, ಕೈಗಾರಿಕೆ, ರೈಲು ಅಭಿವೃದ್ಧಿಯಾಗಬೇಕು. ಕರ್ನಾಟಕದ ಉತ್ತರದ ಕರಾವಳಿಯು ಸಾಕಷ್ಟು ಮುಂದುವರಿಯಬೇಕಿದೆ. ಕರ್ನಾಟಕದ ನೀರಾವರಿ ಸಮಸ್ಯೆಗಳು ಕರ್ನಾಟಕದ ಭೂವಲಯ ಸ್ಥಾನದಿಂದಾಗಿ, ತನ್ನ ಸುತ್ತಮುತ್ತಿನ ರಾಜ್ಯಗಳೊಂದಿಗೆ, ನದಿ ನೀರು ಹಂಚಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ. ಇದು ಹಲವು ರೀತಿಯ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯದ ಪ್ರಮುಖ ನದಿಗಳೆಲ್ಲವು ಅಂತರರಾಜ್ಯ ನದಿಗಳು. ಹಾಗಾಗಿ ಅವುಗಳ ನೀರನ್ನು ಬಳಸಿಕೊಳ್ಳಲು ನೆರೆಯ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಹೀಗೆ, ಕೃಷ್ಣೆ, ತುಂಗಭದ್ರೆ, ಕಾವೇರಿ, ಕಳಸಾ - ಬಂಡೂರಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳು, ಬಗೆಹರಿಯದಷ್ಟು ಕ್ಲಿಷ್ಟವಾಗಿವೆ. ಅದರಲ್ಲೂ ಕಾವೇರಿಯ ಸಮಸ್ಯೆ ಪ್ರತಿ ವರ್ಷದ ಸಮಸ್ಯೆಯಾಗಿ ಹೋಗಿದೆ. ಕಳಸಾ-ಬಂಡೂರಿಗೆ ನಡೆಯುತ್ತಿರುವ ಹೋರಾಟ ಅಂತ್ಯ ಕಾಣದಾಗಿದೆ. ಇವುಗಳಿಗೆಲ್ಲ, ಸಮರ್ಪಕ ಶಾಶ್ವತ ಪರಿಹಾರಗಳು ದೊರೆಯಬೇಕು. ಕರ್ನಾಟಕದಲ್ಲಿ ರೈಲು ಅಭಿವೃದ್ಧಿ ಕರ್ನಾಟಕದಲ್ಲಿ ಉತ್ತರ ಭಾರತ ಹಾಗೂ ದಕ್ಷಿಣದ ಇತರ ರಾಜ್ಯಗಳಿಗಿಂತ ಶೇಕಡವಾರು ಕಡಿಮೆ ರೈಲು ಹಳಿಯಿದೆ. ಈಗಿರುವ ಹಳಿಗಳೂ ನೂರು ವರ್ಷಗಳಷ್ಟು ಹಳೆಯವು. ವಿದ್ಯುದ್ಧೀಕರಣವೂ ಆಗಿಲ್ಲ. ಎರಡು ಹಳಿ ಮಾರ್ಗಗಳು ಕಡಿಮೆ. ಅನೇಕ ಪ್ರಮುಖ ನಗರಗಳಿಗೆ ರೈಲು ಸಂಪರ್ಕವಿಲ್ಲ. ಉತ್ತರ ಕರ್ನಾಟಕದಲ್ಲಂತೂ ರೈಲು ಇಲ್ಲವೆಂಬಷ್ಟು ವಿರಳ. ಮುಖ್ಯ ಪಟ್ಟಣಗಳ ನಡುವೆ ಸಂಪರ್ಕ ಸಾಧಿಸಬೇಕು. ಪ್ರಾರಂಭಿಸಲಾಗಿರುವ ಹೊಸ ಮಾರ್ಗಗಳ ಕೆಲಸ ವಿಳಂಬವಾಗದೆ ಶೀಘ್ರವಾಗಿ ಮುಗಿಯಬೇಕು. ಕರ್ನಾಟಕದಲ್ಲಿ ಓಡುವ ರೈಲುಗಳ ಮೇಲೆ ಕನ್ನಡ ಫಲಕವಿರಬೇಕು ಹಾಗೂ ರೈಲು ಚೀಟಿಗಳು ಕನ್ನಡದಲ್ಲಿ ಮುದ್ರಿತವಾಗಬೇಕು. ಪ್ರತಿಯೊಬ್ಬ ಸಿಬ್ಬಂದಿಗೂ ಕನ್ನಡ ಭಾಷೆ ತಿಳಿದಿರಬೇಕು. ಕರ್ನಾಟಕದ ಶಿಕ್ಷಣದಲ್ಲಿ ಕನ್ನಡ ಇದೀಗ ಕರ್ನಾಟಕದಲ್ಲಿ ಅನೇಕ ಶಿಕ್ಷಣ ಮಂಡಳಿ ಹಾಗೂ ಮಾಧ್ಯಮಗಳಿವೆ. ಅವುಗಳನ್ನೆಲ್ಲ ಬದಲಿಸಿ. ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು. ಕನ್ನಡವೇ ಏಕಮಾತ್ರ ಶಿಕ್ಷಣ ಮಾಧ್ಯಮವಾಗಬೇಕು. ಇತರ ಭಾಷೆಯನ್ನಾಡುವವರು ಒಂದು ಹೆಚ್ಚಿನ ಭಾಷೆ(ಮಾತೃಭಾಷೆ)ಯನ್ನು ಕಲಿತರೂ ಕನ್ನಡ ಕಡ್ಡಾಯವಾಗಿರಬೇಕು. ಕನ್ನಡದಲ್ಲಿ ಜ್ಞಾನವರ್ಧನೆ ಕನ್ನಡ ಭಾಷೆಯ ವಿಸ್ತಾರವನ್ನು ಹೆಚ್ಚಿಸಲು ಮಾಹಿತಿ ಆಯೋಗವನ್ನು ರೂಪಿಸಿ, ಜಗತ್ತಿನ ಎಲ್ಲ ಜ್ಞಾನವನ್ನು ಕನ್ನಡಕ್ಕೆ ತಂದು ಕನ್ನಡಕ್ಕೆ ಕಸುವು ತುಂಬುವ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ಕನ್ನಡಿಗರಿಗೆ ಉದ್ಯೋಗ ಕನ್ನಡಿಗರಿಗೆ ಎಲ್ಲ ಪ್ರಾಂತ್ಯಗಳಲ್ಲೂ ಎಲ್ಲ ಕ್ಷೇತ್ರಗಳಲ್ಲೂ ಸುಲಭವಾಗಿ ಉದ್ಯೋಗಗಳು ದೊರೆಯುವಂತೆ ಮಾಡಬೇಕಿದೆ. ಇದಕ್ಕೆ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಪ್ರಾರಂಭಿಸಬೇಕು. ಕನ್ನಡಿಗರೂ ಕನ್ನಡಿಗರಿಗೆ ಸಂದರ್ಶನಗಳಲ್ಲಿ ಆದ್ಯತೆ ನೀಡಬೇಕು. ಸರ್ಕಾರವು ಸರ್ಕಾರಿ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿರಿಸಬೇಕು. ಅನಿಯಮಿತ ವಲಸೆ ನಿಯಂತ್ರಣ ಒಂದು ಅಂದಾಜಿನ ಪ್ರಕಾರ 1991ರಿಂದ ಬೆಂಗಳೂರಿನ ಜನಸಂಖ್ಯೆ ಮೂರುಪಟ್ಟು ಹೆಚ್ಚಾಗಿದೆ. ನಿಸ್ಸಂಶಯವಾಗಿ ಇದು ಅನಿಯಮಿತ ವಲಸೆಯಿಂದಾಗಿದೆ. ಅನಿಯಮಿತ ವಲಸೆಯಿಂದ ಒಂದು ಪ್ರದೇಶದ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತವೆ. ಅವುಗಳಲ್ಲಿ ಪ್ರಮುಖ ಎಂದರೆ, ಭಾಷೆಯ ಮೇಲೆ ಒತ್ತಡ, ಮೂಲ ನಿವಾಸಿಗಳ ಉದ್ಯೋಗಕ್ಕೆ ಖೋತಾ ಇತ್ಯಾದಿ. ಈ ಸಮಸ್ಯೆಗಳನ್ನು ಮನಗಂಡು ಸರ್ಕಾರ ಒಂದು ಮೂಲನಿವಾಸಿ ಕಾನೂನು ಹಾಗೂ ಅನಿಯಂತ್ರಿತ ವಲಸೆ ನಿಯಂತ್ರಣಾ ಕಾನೂನನ್ನು ಜಾರಿಗೊಳಿಸಬೇಕಿದೆ. ಕನ್ನಡ ಗ್ರಾಹಕ ನೀತಿ ಈಗ ಇರುವಂತೆ ಕನ್ನಡಿಗರ ಉಪೇಕ್ಷೆಯಿಂದ ಗ್ರಾಹಕ ವ್ಯವಹಾರದಲ್ಲಿ ಕನ್ನಡದ ಬಳಕೆ ಸೀಮಿತವಾಗಿದೆ. ಇದು ಬದಲಾಗಬೇಕು. ಮಾರುಕಟ್ಟೆ, ಮಾಲ್ಗಳು, ಚಿತ್ರಮಂದಿರಗಳು, ಇಲ್ಲೆಲ್ಲ ಕನ್ನಡ ರಾರಾಜಿಸಬೇಕು. ಇದಕ್ಕೆ ಸೂಕ್ತ ಗ್ರಾಹಕ ನೀತಿಯ ರಚನೆಯಾಗಬೇಕು. ಕರ್ನಾಟಕದ ನುಡಿಗಳ ರಕ್ಷಣೆ ಕರ್ನಾಟಕದ ನುಡಿಯಾದ ಕನ್ನಡದೊಟ್ಟಿಗೆ, ತುಳು, ಕೊಡವ ಹಾಗೂ ಕೊಂಕಣಿಯನ್ನು ಪೋಷಿಸಿ ಸಲಹಬೇಕು. ಅವುಗಳನ್ನು ಶಾಲೆಗಳಲ್ಲಿ ಒಂದು ಭಾಷೆಯಾಗಿ ಕಲಿಸಬೇಕು. ಕನ್ನಡ ಮನರಂಜನಾ ನೀತಿ ಕನ್ನಡಕ್ಕೆ ಪೂರಕವಾದ ಮನರಂಜನಾ ನೀತಿ (ಕನ್ನಡದಲ್ಲಿ ಡಬ್ಬಿಂಗಿಗೆ ಅನುಮತಿ ನಿಡುವಂತಹ) ರಚನೆಯಾಗಬೇಕು. ಕನ್ನಡದ ಮಕ್ಕಳು ವಿಶ್ವವನ್ನು ಕನ್ನಡದ ಕಣ್ಣುಗಳಲ್ಲಿ ನೋಡಿ ಗ್ರಹಿಸುವ ವಿಶಾಲ ಅಡಿಪಾಯ ನಿರ್ಮಾಣವಾಗಬೇಕಿದೆ. ಇಷ್ಟಲ್ಲದೆ ಕನ್ನಡ ನಾಡು ಆಧುನಿಕ ಪ್ರಪಂಚದ ವೈರಿಗಳಾದ ಪರಿಸರ ಮಾಲಿನ್ಯ, ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಹೊತ್ತು ಮೈದಳೆಯಬೇಕಿದೆ. ಇದಿಷ್ಟು ನನ್ನ ಕಲ್ಪನೆಗೆ ಮೂಡಿಬಂದ ವಿಚಾರಗಳು. ಈ ವಿಚಾರಗಳನ್ನು ಸಾಕಾರಗೊಳಿಸುವವರೊಂದಿಗೆ ನಾನು ಹೆಜ್ಜೆಗೆ ಹೆಜ್ಜೆ ಸೇರಿಸಲು ಸದಾ ಸಿದ್ಧ.