ಕಗ್ಗ ದರ್ಶನ – 12 (2)
ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು
ಬಿಡುಗೊಳದ ಮನುಜ ಮಾನಸರಾಶಿಯೊಂದು
ಅಡಿಗಡುಗಳುಂಟು ನೀರ್ಗದನಳೆವ ಭಟರುಂಟು
ತಡೆಯುಂಟೆ ನರಮನಕೆ – ಮರುಳ ಮುನಿಯ
ಸೃಷ್ಟಿಯಲ್ಲಿರುವ ಸಾಗರಗಳು ಎರಡು: ಅಗಾಧವಾದ ನೀರಿನ ರಾಶಿ ಒಂದಾದರೆ, ವಿಸ್ತಾರವಾದ ಮನುಷ್ಯನ ಮನಸ್ಸಿನ ನಿರಂತರ ಯೋಚನಾಧಾರೆ ಇನ್ನೊಂದು ಎನ್ನುತ್ತಾರೆ ಮಾನ್ಯ ಡಿ.ವಿ.ಜಿ.ಯವರು. ಆ ಮೂಲಕ ಮನುಷ್ಯನ ಮನಸ್ಸಿನ ಚಿತ್ರಣಕ್ಕೆ ಹೊಸ ಆಯಾಮ ನೀಡುತ್ತಾರೆ.
ನೀರಿನ ರಾಶಿಗೆ ತಳವಿದೆ, ಗಡಿಗಳೂ ಇವೆ. ಶಾಂತಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ –ಇವೆಲ್ಲ ಕೆಲವೆಡೆ ಹಿಮಾಲಯ ಪರ್ವತದ ಎತ್ತರಕ್ಕಿಂತಲೂ ಆಳವಾಗಿವೆ. ಈ ಸಾಗರದ ಗಡಿಗಳ ವ್ಯಾಪ್ತಿ ನಮ್ಮ ಕಲ್ಪನೆಗೊಂದು ಸವಾಲು. ಈ ಮಹಾನ್ ಜಲರಾಶಿಯನ್ನು ಅಳೆಯಬಲ್ಲವರೂ ಇದ್ದಾರೆ.
ಆದರೆ, ಮನುಷ್ಯನ ಮನಸ್ಸಿನ ಸಾಧ್ಯತೆಗಳು, ಸಾಧನೆಗಳು ಅಪಾರ. ಸಾವಿರಾರು ಪುಟಗಳ ಸಾಹಿತ್ಯವನ್ನು ಅದು ಸೃಷ್ಟಿಸಬಲ್ಲದು – ಮಹಾ ಕಾದಂಬರಿಗಳು, ಮಹಾಕಾವ್ಯಗಳು. ಈ ಮನಸ್ಸಿನಿಂದ ಹರಿದು ಬರುವ ಸಂಗೀತಕ್ಕೆ ಅಂತ್ಯವೇ ಇಲ್ಲ. ಆಕಾಶದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲ್ಪಿಸಿ, ಅದನ್ನು ಸಾಕಾರವಾಗಿಸಿದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿ ಮೀರಿ ಸಾಗುವುದನ್ನು ಯೋಜಿಸಿ, ಮಂಗಳ ಗ್ರಹಕ್ಕೆ ಲಗ್ಗೆಯಿಟ್ಟಿದೆ. ಅನಂತವಾದ ವಿಶ್ವವನ್ನು ಅಂದಾಜು ಮಾಡಿದೆ. ಹೊಸಹೊಸ ತಂತ್ರಜ್ನಾನ ರೂಪಿಸುತ್ತಾ, ಸಾಧನಗಳನ್ನು ರಚಿಸುತ್ತಾ ಇಡೀ ಭೂಲೋಕವನ್ನೇ ಪುಟ್ಟ ಗ್ರಾಮವಾಗಿಸಿದೆ. ಅಂಗೈಯಗಲದ ಮೊಬೈಲ್ ಫೋನಿನ ಮೂಲಕ ಸಾವಿರಾರು ಕಿಲೋಮೀಟರ್ ದೂರದಲ್ಲಿ ಇರುವವರನ್ನೂ ಹತ್ತಿರ ತಂದಿದೆ. ಒಂದು ಚದರಡಿಯ ಪುಟ್ಟ ಕಂಪ್ಯೂಟರಿನಲ್ಲಿ ಕೋಟಿಗಟ್ಟಲೆ ಪುಟಗಳ ಮಾಹಿತಿ ತುಂಬಿದೆ. ಬಾಹ್ಯಾಕಾಶದಲ್ಲಿರುವ ಕೃತಕ ಉಪಗ್ರಹಗಳ ಮೂಲಕ ಈ ಬೃಹತ್ ಭೂಮಿಯ ಇಂಚಿಂಚು ಜಾಗದ ವೀಕ್ಷಣೆ ಸಾಧ್ಯವಾಗಿಸಿದೆ. ಯಾವುದೇ ಅಡೆತಡೆಗಳಿಲ್ಲದ ನಮ್ಮ ಮನಸ್ಸೊಂದು ವಿಸ್ಮಯ.