ಕಗ್ಗ ದರ್ಶನ – 13 (1)
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ
ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು?
ಒರಟು ಕೆಲಸವೊ ಬದುಕು - ಮಂಕುತಿಮ್ಮ
ಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದರೇನು? ಇದರಿಂದಾಗಿ ನಮ್ಮ ಹಸಿವು ತಣಿಸಲು ತೊಂದರೆ ಇದೆಯೇ? ಹೊಟ್ಟೆ ತುಂಬ ತಿನ್ನಲು ಇದರಿಂದ ಅಡ್ಡಿಯಾಗುತ್ತದೆಯೇ? ಇಲ್ಲ. ಆದರೆ, ಸಾರಿಗೆ ಉಪ್ಪು ಕಡಿಮೆಯಾಯಿತು ಎಂಬ ಕಾರಣಕ್ಕೆ ಹೆಂಡತಿಯ ಮೇಲೆ ರೇಗಾಡುವ ಗಂಡಂದಿರು ಹಲವರು! ಎಂತಹ ವಿಪರೀತ ವರ್ತನೆ ಇದು! ಸಾರಿಗೆ ಉಪ್ಪು ಕಡಿಮೆಯಾದರೆ, ಅನ್ನ-ಸಾರು ಕಲಸುವಾಗ ಸ್ವಲ್ಪ ಉಪ್ಪು ಹಾಕಿಕೊಂಡರಾಯಿತು. ಸಾರಿಗೆ ಉಪ್ಪು ಜಾಸ್ತಿಯಾದರೆ, ಹೆಚ್ಚು ಅನ್ನಕ್ಕೆ ಕಡಿಮೆ ಸಾರು ಕಲಸಿ ಉಂಡರಾಯಿತು.
ಶಾಲಾಕಾಲೇಜುಗಳ ಪರೀಕ್ಷೆಗಳಲ್ಲಿ ಮಾರ್ಕ್ ಕಡಿಮೆ ಸಿಕ್ಕಿದರೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಅಂತಹ ಪರಿಸ್ಥಿತಿಯಲ್ಲಿ ಹತಾಶರಾಗ ಬೇಕಾಗಿಲ್ಲ. ಮುಂದಿನ ಪರೀಕ್ಷೆಯಲ್ಲಿ ಸರಿಯಾಗಿ ಬರೆದು ಹೆಚ್ಚು ಅಂಕ ಗಳಿಸಬೇಕು. ಕೇವಲ ಒಂದು ವಿಷಯದಲ್ಲಿ ಅಥವಾ ಒಂದು ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ ಬಂತೆಂಬ ಕಾರಣಕ್ಕೆ ಕೆಲವು ವಿದ್ಯಾರ್ಥಿಗಳು ಏನೆಲ್ಲ ಅನಾಹುತ ಮಾಡಿಕೊಳ್ತಾರೆ! ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯೋದೊಂದು ಹಿನ್ನಡೆ. ಜೀವನದಲ್ಲಿ ಇಂತಹ ಹತ್ತುಹಲವು ಹಿನ್ನಡೆಗಳು ಸಹಜ. ಅವನ್ನು ಎದುರಿಸಲು ಕಲಿಯುವುದೇ ಮುಖ್ಯ.
ಆದರೆ ಹಲವಾರು ಸಂದರ್ಭಗಳಲ್ಲಿ ನಮ್ಮ ದಿನದಿನದ ಬದುಕನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಅದು ಸರಿಯಾಗಲಿಲ್ಲ, ಇದು ಸರಿಯಾಗಲಿಲ್ಲ ಎಂಬ ಸಂಕಟ ನಮ್ಮದು ಎನ್ನುತ್ತಾರೆ, ಮಾನ್ಯ ಡಿವಿಜಿಯವರು. ಬೆಳಗ್ಗೆ ಎದ್ದೊಡನೆ “ಇವತ್ತು ಜೋರು ಸೆಕೆ” ಅಥವಾ “ಇವತ್ತು ಜೋರು ಚಳಿ” ಎಂಬ ಗೊಣಗಾಟ. “ಕಾಫಿ ಚೆನ್ನಾಗಿಲ್ಲ, ದೋಸೆಯೂ ಚೆನ್ನಾಗಿಲ್ಲ” ಎಂಬ ಅಸಮಾಧಾನ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ಇಂತಹ ಕಾರಣಗಳಿಗೆ ನೆಮ್ಮದಿ ಕೆಡಿಸಿಕೊಳ್ಳುವ ಚಟ ನಮ್ಮದು. ಇದು ನಮ್ಮ ಹಾಸಿಗೆಯಲ್ಲಿ ನಾವೇ ಮುಳ್ಳು ಹರಡಿಕೊಳ್ಳುವ ಕೆಲಸ! ಇಂದು ಹೆಚ್ಚು ಸೆಕೆ ಅಥವಾ ಚಳಿ; ನಾಳೆ ಕಡಿಮೆ ಸೆಕೆ ಅಥವಾ ಚಳಿ. ಇವೆಲ್ಲ ಜೀವನದಲ್ಲಿ ಸಹಜ. ಇವಕ್ಕೆಲ್ಲ ಹೊಂದಿಕೊಂಡು ಬದುಕಲು ಕಲಿಯಬೇಕು; ಯಾಕೆಂದರೆ ಈ ಬದುಕು ಒರಟು ಕೆಲಸ.