ನಾನು ನೋಡಿದ ಚಿತ್ರ- ಟೊರ, ಟೊರ, ಟೊರ

ನಾನು ನೋಡಿದ ಚಿತ್ರ- ಟೊರ, ಟೊರ, ಟೊರ

IMDb: http://www.imdb.com/title/tt0079470/
 

 
 ಎರಡನೇ ವಿಶ್ವ ಯುದ್ಧದ ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ- ಹೇಗೆ ಜಪಾನಿಗಳ ಈ ಒಂದು ದಾಳಿಯಿಂದ ಅಮೇರಿಕಾ ವಿಶ್ವ ಯುದ್ಧಕ್ಕೆ ಧುಮುಕಿತು ಮತ್ತು ವಿಶ್ವ ಯುದ್ಧದ ಚಿತ್ರಣವನ್ನು ಮತ್ತು ಭವಿಷ್ಯವನ್ನು ಬದಲಾಯಿಸಿತು. ಈ ಘಟನೆಯನ್ನೊಳಗೊಂಡ ಚಿತ್ರ ‘ಪರ್ಲ್ ಹಾರ್ಬರ್’ ಕೂಡ ಹಾಲಿವುಡ್ ನಲ್ಲಿ ನಿರ್ಮಾಣವಾಗಿತ್ತು. ಆದರೆ ಆ ಚಿತ್ರ ಪರ್ಲ್ ಹಾರ್ಬರ್ ನ ದಾಳಿಯನ್ನು ನೆಪವಾಗಿಟ್ಟುಕೊಂಡು ಆ ಘಟನೆಯಲ್ಲಿ ಭಾಗಿಯಾದ ಜನಗಳ ಕಥೆಯನ್ನಷ್ಟೇ ಹೇಳಿತ್ತು. ‘ಟೊರ, ಟೊರ, ಟೊರ’ ಆಂಗ್ಲೋ-ಜಾಪನೀಸ್ ಚಿತ್ರ. ಈ ಚಿತ್ರ ಪೂರ್ತಿಯಾಗಿ ಪರ್ಲ್ ಹಾರ್ಬರ್ ನಡೆದ ದಿನ ಮತ್ತು ಆ ದಾಳಿಗೆ ಎಡೆಮಾಡಿಕೊಟ್ಟ ಹಲವಾರು ಸಂಗತಿಗಳ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡುತ್ತಾ ಹೋಗುತ್ತದೆ. ಹಾಗಾಗಿಯೇ ಈ ಚಿತ್ರದಲ್ಲಿ ಯಾರೊಬ್ಬರನ್ನೂ ನೀವು ಒಂದು ಸಾಂಪ್ರದಾಯಿಕ ಚಿತ್ರದಂತೆ ಪ್ರೊಟಾಗನಿಸ್ಟ್ ಎಂದು ಗುರುತಿಸಲಾರಿರಿ. ಆ ಎರಡು ದೇಶಗಳ ನಡುವೆ ನಡೆದ ಈ ಒಂದು ಘಟನೆಯ ಹಿನ್ನಲೆಯಲ್ಲಿ ಎರಡೂ ದೇಶಗಳಲ್ಲಿ ಏನೆಲ್ಲಾ ನಡೆದಿತ್ತು ಎಂದು ತಿಳಿಯಲು ಇದೊಂದು ತುಂಬಾ ಒಳ್ಳೆಯ ಐತಿಹಾಸಿಕ ಚಿತ್ರ.

  ಪಶ್ಚಿಮದಲ್ಲಿ ಯುಕೆ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಜರ್ಮನಿಯ ವಿರುದ್ಧ ಹೋರಾಡುತ್ತಿದ್ದ ವೇಳೆಯಲ್ಲೇ, ಇತ್ತ ಪೂರ್ವದಲ್ಲಿ ಜಪಾನ್ ನ ಇಂಪೀರಿಯಲ್ ಆರ್ಮಿ ಚೀನಾದ ಮೇಲೆ ದಾಳಿ ನಡೆಸುತ್ತಿತ್ತು. ಈ ದಾಳಿಯನ್ನು ವಿರೋಧಿಸಿ ಅಮೇರಿಕ ಜಪಾನ್ ಗೆ ತಮ್ಮ ಪರಸ್ಪರ ಸಂಬಂಧವನ್ನು ಉಳಿಸಿಕೊಳ್ಳಲು ಈ ದಾಳಿಯಿಂದ ಜಪಾನ್ ಹಿಂದೆ ಸರಿಯಬೇಕೆಂದು ಕೇಳಿಕೊಳ್ಳುತ್ತದೆ. ತನಗೆ ಬೇಕಿದ್ದ ಅಗತ್ಯ ಕಚ್ಚಾ ವಸ್ತುಗಳ ಆಕರವಾಗಿದ್ದ ಚೀನಾ ಬಿಟ್ಟು ಕೊಡಲು ಜಪಾನ್ ತಯಾರಿರಲಿಲ್ಲ. ಹೀಗೆ ಹಿಂದೆ ಸರಿಯದಿದ್ದರೆ ತನ್ನ ಮೇಲೆ ಅಮೇರಿಕ ದಾಳಿ ಮಾಡಬಹುದು ಎಂದು ಜಪಾನ್ ಯೋಚಿಸಿ, ಹಾಗೇನಾದರೂ ಸಂಬಂಧ ಮುರಿದು ಬಿದ್ದರೆ ಇದನ್ನು ತಪ್ಪಿಸಲು ಒಂದೇ ಉಪಾಯ ಅಮೇರಿಕಾದ ಪೆಸಿಫಿಕ್ ಫ್ಲೀಟ್ ನ ಮೇಲೆ ದಾಳಿ ನಡೆಸಿ ಧ್ವಂಸಮಾಡುವುದು. ಇದೆ ಸಮಯದಲ್ಲಿ ಯುರೋಪಿಯನ್ ಸೇನೆಗಳು ಯುರೋಪಿಯನ್ ಯುದ್ಧಕ್ಕಾಗಿ ತಮ್ಮ ಆಗ್ನೇಯ ಏಶಿಯಾ ಭಾಗದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದರಿಂದ, ಜಪಾನ್ ಗೆ ಅಮೇರಿಕಾ ಮೇಲೆ ದಾಳಿ ಮಾಡಿ ಇಡೀ ಪೆಸಿಫಿಕ್ ಭಾಗವನ್ನು ನಿಯಂತ್ರಿಸುವುದೇ ಒಳ್ಳೆಯದೆನ್ನಿಸಿತು. ಈ ರೀತಿ ಅಮೆರಿಕಾಗೆ ಯುದ್ಧಕ್ಕೆ ಆಹ್ವಾನ ಕೊಡುವಂತ ನಿರ್ಣಯಗಳನ್ನು ಕೈಗೊಳ್ಳಲು ಜಪಾನ್ ಸರ್ಕಾರದಲ್ಲಿದ್ದ ಕೆಲವು ಯುದ್ಧೋನ್ಮಾದದಲ್ಲಿದ್ದ ನಾಯಕರೂ(ವಾರ್ ಮಿನಿಸ್ಟರ್- ಹಿದೇಕಿ ತೊಜೊ) ಕಾರಣ. ಈ ಹಂತದಲ್ಲೇ ಜಪಾನ್, ಜರ್ಮನಿ ಮತ್ತು ಇಟಲಿಯ ಜತೆ ‘ಟ್ರೈ- ಪಾರ್ಟೈಟ್’ ಒಪ್ಪಂದ ಮಾಡಿಕೊಳ್ಳುತ್ತದೆ. ಇತ್ತ ಅಮೆರಿಕಾದಲ್ಲಿ ಸೆಕ್ರೆಟರಿ ಆಫ್ ಸ್ಟೇಟ್- ಕಾರ್ಡೆಲ್ ಹಲ್ ಜಪಾನಿನ ರಾಯಭಾರಿ ನೊಮುರ ಜೊತೆ ಚರ್ಚಿಸಿ ಹೇಗಾದರೂ ಮಾಡಿ ಒಂದು ಒಪ್ಪಂದಕ್ಕೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಜಪಾನಿ ಸರ್ಕಾರ ಯಾವುದೇ ಒಂದು ಒಪ್ಪಂದದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ಕಾಲ ತಳ್ಳುತ್ತಿದ್ದಾರೆ ಎಂದು ಕಾರ್ಡೆಲ್ ಭಾವಿಸುತ್ತಾನೆ.
 
 ಇಷ್ಟೆಲ್ಲಾ ನಡೆಯುತ್ತಿದ್ದರೂ ಅಮೇರಿಕ ಜಪಾನ್ ಮೇಲೆ ನಿಗಾ ಇಡಲು ಜಪಾನ್ ನ ಟೋಕಿಯೋದಿಂದ ಜಪಾನಿನ ಎಲ್ಲ ರಾಯಭಾರಿ ಕಚೇರಿಗಳಿಗೆ ತಲುಪುವ ಸಂದೇಶಗಳನ್ನು ಗುಪ್ತವಾಗಿ ಪಡೆದು ತನ್ನ ಎಲೆಕ್ಟ್ರಿಕಲ್ ಡಿಕೋಡರ್ ಮೂಲಕ ಓದುತ್ತಿರಿತ್ತದೆ. ಈ ವ್ಯವಸ್ಥೆ ಎಷ್ಟು ವೇಗವಾಗಿ ಕೆಲಸಮಾಡುತ್ತಿರುತ್ತದೆ ಎಂದರೆ, ಅಮೇರಿಕಾದ ರಯಾಭಾರಿ ಕಚೇರಿಯಲ್ಲಿ ಟೋಕಿಯೋದಿಂದ ಬಂದ ಗುಪ್ತ ಸಂದೇಶ ಬಿಡಿಸಿ ಓದುವ ಮುಂಚೆಯೇ ಅಮೆರಿಕಾದವರಿಗೆ ಅದರಲ್ಲೇನಿದೆ ಎಂದು ತಿಳಿದಿರುತ್ತಿತ್ತು. ಈ ವ್ಯವಸ್ಥೆಯನ್ನು ನೌಕಾದಳದ ಲೆಫ್ಟಿನಂಟ್ ಕಮಾಂಡರ್ ಆಲ್ವಿನ್ ಕ್ರೆಮರ್ ಮತ್ತು ಆರ್ಮಿಯ ಕರ್ನಲ್ ರೂಫಸ್ ಬ್ರಾಟ್ಟನ್ ನೋಡಿಕೊಳ್ಳುತ್ತಿರುತ್ತಾರೆ. ಇವರ ಬಳಿ ಇಲ್ಲಿ ಪತ್ತೆಯಾದ ಸಂದೇಶಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬ ನಿರ್ದಿಷ್ಟ ಪಟ್ಟಿಯೂ ಇರುತ್ತದೆ. ಆದರೆ ಮೊದಲ ಬಾರಿಗೆ ಈ ಪಟ್ಟಿಯನ್ನು ನೋಡಿದ ಕರ್ನಲ್ ಇದರಲ್ಲಿ ಏರ್ ಫೋರ್ಸ್ ನ ಕಮಾಂಡರ್ ಮತ್ತು ವಿದೇಶಗಳಲ್ಲಿನ ನೌಕಾ ಕಮಾಂಡರ್ ಹೆಸರು ಇಲ್ಲದ್ದನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ.  
 
  ಜಪಾನಿನ ನೌಕಾದಳಕ್ಕೆ ಹೊಸದಾಗಿ ನೇಮಕವಾದ ಅಡ್ಮಿರಲ್ ಯಾಮಮೊಟೊ ತನ್ನ ಹಿಂದಿನ ಅಧಿಕಾರಿ ನೇವಿ ವಾರ್ ಮಿನಿಸ್ಟ್ರಿಗೆ ವರ್ಗಾವಣೆಯಾಗುತ್ತಿದ್ದರಿಂದ ಆತನಿಗೆ ಹೇಗಾದರೂ ಮಾಡಿ ಅಲ್ಲಿ ಆರ್ಮಿಯವರ ಹುಂಬತನ ತಡೆಯುವಂತೆ ಕೇಳಿಕೊಳ್ಳುತ್ತಾನೆ. ಅಮೇರಿಕಾದ ಜೊತೆಗೆ ಯುದ್ಧಕ್ಕೆ ಇಳಿದರೆ ಅದು ತಮ್ಮ ದೇಶಕ್ಕೆ ಬಹಳ ನಷ್ಟ ಉಂಟುಮಾಡಲಿದೆ ಎಂಬ ಸತ್ಯ ಯಾಮಮೊಟೊಗೆ ತಿಳಿದಿತ್ತು. ಹಾಗೆ ಯುದ್ಧ ಒದಗಿಯೇ ಬಂದರೆ ಅಮೆರಿಕಾದ ಪೆಸಿಫಿಕ್ ಫ್ಲೀಟ್ ಮೇಲೆ ದಾಳಿ ಮಾಡಿದರೆ ಜಪಾನಿಗೆ ಯುದ್ಧದಲ್ಲಿ ಗೆಲ್ಲಲು ಒಂದು ಅವಕಾಶವಿದೆ ಎಂದು ತಯಾರಿಯೂ ಮಾಡಲು ತೊಡಗುತ್ತಾನೆ. ತನ್ನ ಟಾರ್ಪೀಡೊ ಬಾಂಬರ್ ಗಳು ಹಡಗುಗಳನ್ನು ಸರಿಯಾಗಿ ಗುರಿಯಿಟ್ಟು ಹೊಡೆಯಲು ಅನೇಕ ಬಾರಿ ಅಭ್ಯಾಸ ಮಾಡಿಸುತ್ತಾನೆ. ಪೆಸಿಫಿಕ್ ಫ್ಲೀಟ್ ಅನ್ನು ಧ್ವಂಸಮಾಡಲು ಪರ್ಲ್ ಹಾರ್ಬರ್ ಸರಿಯಾದ ಜಾಗ ಎಂದೂ ಗುರುತಿಸುತ್ತಾನೆ. ಇದಕ್ಕೆ ವಿಸ್ತೃತ ಯುದ್ಧ ತಂತ್ರ ಹೆಣೆಯಲು ಯಾಮಾಮೊಟೊ ತನ್ನ ಕಿರಿಯ ಅಧಿಕಾರಿ ಕಮ್ಯಾಂಡರ್. ಮಿನೊರು ಗೆಂಡಾಗೆ ವಹಿಸುತ್ತಾನೆ.
 
  ಪರ್ಲ್ ಹಾರ್ಬರ್ ನ ಉಸ್ತುವಾರಿ ನೋಡಿಕೊಳ್ಳಲು ಬರುವ ಹೊಸ ಅಡ್ಮಿರಲ್ ಹಸ್ಬಂಡ್ ಕಿಮ್ಮೆಲ್ ಹಿಂದಿನ ಅಧಿಕಾರಿಯೊಂದಿಗೆ ಪರ್ಲ್ ಹಾರ್ಬರ್ ಅನ್ನು ಇನ್ನಷ್ಟು ಭದ್ರಪಡಿಸಲು ಏನೇನು ಕ್ರಮ ಕೈಗೊಳ್ಳಬಹುದು ಎಂದು ವೈಮಾನಿಕ ಸರ್ವೇಕ್ಷಣೆಯನ್ನು ಮಾಡುತ್ತಾನೆ. ಇದರಲ್ಲಿ ಎದ್ದು ಕಾಣುವ ದೊಡ್ಡ ತೊಂದರೆಯೆಂದರೆ ಪರ್ಲ್ ಹಾರ್ಬರ್ ನ ಬಂದರಿಗೆ ಹಡಗುಗಳು ಹೋಗಿಬರಲು ಒಂದು ಕಂದಕದಂತ ಪ್ರವೇಶ ದಾರಿ ಬಿಟ್ಟರೆ ಬೇರೇನೂ ಇಲ್ಲ. ಇದರಿಂದ ಆ ಸಣ್ಣ ದಾರಿಯಲ್ಲಿ ಒಂದು ದೊಡ್ಡ ಹಡಗು ದಾಳಿಗೆ ಒಳಗಾಗಿ ಅಲ್ಲೇ ದಾರಿಗೆ ಅಡ್ಡವಾಗಿ ನಿಂತುಬಿಟ್ಟರೆ ಬಂದರಿನಲ್ಲಿರುವ ಎಲ್ಲ ಹಡಗುಗಳೂ ಬಂದರಿನಲ್ಲೇ ನಿಲ್ಲಬೇಕಾಗುತ್ತದೆ ಮತ್ತು ಇದರಿಂದ ಹಡಗುಗಳನ್ನು ಬಾಂಬರ್ ವಿಮಾನಗಳು ಹೊಡೆಯುವುದು ಬಹಳ ಸುಲಭವಾಗುತ್ತದೆ. ಈ ಸಂಗತಿ ಗೊತ್ತಿದ್ದರೂ ಟಾರ್ಪೀಡೊಗಳು ನೀರಿಗೆ ಬಿದ್ದ ನಂತರ 75 ಅಡಿಗಳವರೆಗೂ ಮುಳುಗಿ ಆನಂತರ ಸಮವಾಗಿ ಹಡಗಿನತ್ತ ಸಾಗುತ್ತದೆ ಮತ್ತು ಪರ್ಲ್ ಹಾರ್ಬರ್ ನ ಬಳಿಯ ಸಮುದ್ರ ಕೇವಲ 40 ಅಡಿಗಳಷ್ಟೆ ಇರುವುದರಿಂದ ದಾಳಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನೊಂದೆಡೆ ಹವಾಯಿ ದ್ವೀಪದ ಆರ್ಮಿ ಕಮ್ಯಾಂಡರ್ ಲೆ.ಜನರಲ್. ವಾಲ್ಟರ್ ಶಾರ್ಟ್ ಯುದ್ಧವಿಮಾನಗಳು ರನ್ವೇ ಸಮೀಪ ಓಡಿಸಲು ತಯಾರಾಗಿ ನಿಂತಿದ್ದನ್ನು ಕಂಡು ಹೀಗೆ ಯಾಕೆ ಈ ವಿಮಾನಗಳು ನಿಂತಿವೆ ಎಂದು ತನ್ನ ಕಿರಿಯ ಅಧಿಕಾರಿಗೆ ಕೇಳಿದಾಗ, ಅವು ದ್ವೀಪದ ಮೇಲೆ ದಾಳಿಯಾದರೆ, ತುರ್ತು ಪ್ರತಿದಾಳಿ ಮಾಡಲು ಸಿದ್ಧವಿರಲು ಎಂದು ಉತ್ತರಿಸುತ್ತಾನೆ. ಇದರಿಂದ ತೃಪ್ತನಾಗದ ಜನರಲ್ ಹವಾಯಿ ದ್ವೀಪದಲ್ಲಿ ಇರುವ ಅನೇಕ ಜಪಾನಿಗಳಲ್ಲಿ ಯಾರಾದರು ಬಂದು ಇವುಗಳನ್ನು ನಾಶಪಡಿಸುವುದು ಸುಲಭವಾಗಿವೆ, ಹಾಗಾಗಿ ಈ ವಿಮಾನಗಳನ್ನೆಲ್ಲ ಒಂದೆಡೆ ಸೇರಿಸಿ ಸದಾ ಕಾವಲು ಇರಿಸುವಂತೆ ಆದೇಶಿಸುತ್ತಾನೆ. ಅಡ್ಮಿರಲ್. ಹಾಲ್ಸೀ, ಅಡ್ಮಿರಲ್ ಕಿಮ್ಮೆಲ್ ಬಳಿ ಬಂದು ತನ್ನ ವಿಮಾನವಾಹಕ ಹಡಗುಗಳನ್ನು ಅಟ್ಲಾಂಟಿಕ್ ಸಾಗರಕ್ಕೆ ಕೊಂಡೊಯ್ಯುವಂತೆ ಆದೇಶಬಂದಿದ್ದರ ಬಗ್ಗೆ ತನ್ನ ಅಸಮಾಧಾನ ತೋಡಿಕೊಳ್ಳಲು ಬರುತ್ತಾನೆ. ಹಾಲ್ಸೀಯ ವಾದವೇನೆಂದರೆ ತನ್ನ ವಿಮಾನವಾಹಕ ಹಡಗುಗಳನ್ನು ಕೊಂಡೊಯ್ದಾಗ, ದ್ವೀಪದ ಮೇಲೆ ದಾಳಿಯಾದರೆ, ಬಂದರಿನಲ್ಲಿದ್ದ ಚಿಕ್ಕ ಹಡಗುಗಳು ಮತ್ತು ಹಳೆಯ ಯುದ್ಧಹಡಗುಗಳು ಸಾಲದಾಗುತ್ತವೆ ಎಂದು. ಇದಕ್ಕೆ ಕಿಮ್ಮೆಲ್, ಇದು ಸಾಲದು ಎಂದು ತನ್ನ ಬಳಿ ಇದ್ದ ಕೆಲವು (ಇಂಧನ ತುಂಬಿಸುವ) ಟ್ಯಾಂಕರ್ ಹಡಗುಗಳನ್ನೂ ಬೇರೆಡೆಗೆ ಕಳಿಸಲು ಆದೇಶ ಬಂದಿದೆ ಎಂದು ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾನೆ. ಆದರೂ ಸಮಯ ಬಂದರೆ ರಾಷ್ಟ್ರಾಧ್ಯಕ್ಷನನ್ನು ಭೇಟಿಯಾದರೂ ಇದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆಯನ್ನು ಕೊಟ್ಟು ಕಳಹುತ್ತಾನೆ. ಇಂತಹ ಹಲವಾರು ಘಟನೆಗಳು, ಹಲವಾರು ವ್ಯಕ್ತಿಗಳ ಅಚಾತುರ್ಯ, ಅಸಹಾಯಕತೆ ಮತ್ತು ಬೇಜವಾಬ್ದಾರಿತನಗಳು ಸೇರಿ ಪರ್ಲ್ ಹಾರ್ಬರ್ ಘಟನೆ ಅಷ್ಟು ದೊಡ್ಡ ದಾಳಿಯಾಗಲು ಕಾರಣವಾಯಿತು. ಇಂತಹ ಅಚಾತುರ್ಯ, ಹುಂಬತನಗಳು ಕೇವಲ ಅಮೆರಿಕನ್ನರ ಕಡೆಗಷ್ಟೇ ಇರಲಿಲ್ಲ, ಜಪಾನಿಗಳ ಕಡೆಯಲ್ಲಿ, ಯಾಮಾಮೋಟೋ ಅನೇಕ ಹಳೆಯ ಕಾಲದ ಯುದ್ಧನೀತಿಯ ಮೇಲೆ ನಂಬಿಕೆಯುಳ್ಳ ಅಧಿಕಾರಿಗಳನ್ನು ಎದುರಿಸಬೇಕಾಯ್ತು. ಇದರಲ್ಲಿ ತಮಾಷೆಯ ಸಂಗತಿಯೆಂದರೆ, ಅಮೆರಿಕನ್ನರು ತಮ್ಮೆಡೆಗೆ ಬರುವ ವಿಮಾನಗಳನ್ನು ಪತ್ತೆಹಚ್ಚಲು ಹೊಸ ರೇಡಾರ್ ಅನ್ನು ಹವಾಯಿ ದ್ವೀಪದ ಬೆಟ್ಟಗಳ ಮೇಲೆ ಸ್ಥಾಪಿಸಲು ನಿರ್ಧರಿಸಿದಾಗ ಅದಕ್ಕೆ ಮಿನಿಸ್ಟ್ರಿ ಆಫ್ ಇಂಟಿರಿಯರ್ ನ ನ್ಯಾಷನಲ್ ಪಾರ್ಕ್ ಸರ್ವಿಸ್ ನವರು ಪರವಾನಗಿ ಕೊಡಲು ಒಪ್ಪದಿರುವುದು. ಯುದ್ಧವನ್ನು ಯಾರುಯಾರು ಹೇಗೆಲ್ಲ ಗಂಭೀರವಾಗಿ ತೆಗೆದುಕೊಂಡಿದ್ದರು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಿದು. ಆನಂತರ ಆರ್ಮಿಯವರು ರೇಡಾರ್ ಅನ್ನು ಸ್ಥಾಪಿಸುತ್ತಾರೆಯಾದರೂ ಅದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.

 
  ಅಮೇರಿಕಾ ತನಗೆ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಜಪಾನ್ ಸೇನೆ ಇಂಡೋ-ಚೀನಾ ಭಾಗವನ್ನು ತೊರೆಯದೆ ತನ್ನ ಆಕ್ರಮಣ ಮುಂದುವರೆಸುತ್ತದೆ. ಇದಕ್ಕೆ ಪ್ರತಿಯಾಗಿ ಅಮೇರಿಕಾ ಜಪಾನಿನೊಂದಿಗೆ ಇದ್ದ ಎಲ್ಲ ವ್ಯವಹಾರಗಳ ಮೇಲೆ ನಿರ್ಬಂಧ ಹೇರುತ್ತದೆ. ಸೈನ್ಯದ ಅತ್ಯಂತ ಹಿರಿಯ ಅಧಿಕಾರಿಗಳ ಕಚೇರಿಯಿಂದ ಎಲ್ಲ ಸಂಬಂಧಿತ ಹಿರಿಯ ಅಧಿಕಾರಿಗಳಿಗೆ ಈ ಹೊಸ ಬೆಳವಣಿಗೆಗಳ ಬಗ್ಗೆ ತಿಳಿಸುತ್ತ, ಜಪಾನಿನಿಂದ ಯಾವುದೇ ದಾಳಿಯನ್ನು ನಿರೀಕ್ಷೆ ಮಾಡುತ್ತಿಲ್ಲವಾದರೂ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂದೇಶ ಬರುತ್ತದೆ. ಈ ಸಂದೇಶವನ್ನು ಹೇಗೆ ಅರ್ಥೈಸಬೇಕೆಂದು ಗೊಂದಲಕ್ಕೀಡಾಗುವ ಅಧಿಕಾರಿಗಳು ಸುಮ್ಮನೆ ಫುಲ್ ಅಲರ್ಟ್ ಘೋಷಣೆ ಮಾಡಿ ಕೂರುತ್ತಾರೆ. ಈ ನಡುವೆ ಅಮೇರಿಕಾ ರಾಯಭಾರಿ ನೊಮುರ ಅಮೇರಿಕ ಜೊತೆಗಿನ ಸಂಬಂಧ ಸುಧಾರಿಸಲು ಎಷ್ಟು ಪ್ರಯತ್ನಿಸುತ್ತಿದ್ದರೂ ಟೊಕಿಯೋದಿಂದ ಎಲ್ಲಾ ಮಾತುಕತೆಯನ್ನು ನವೆಂಬರ್ 29ರ ಒಳಗೆ ಕೊನೆಗೊಳಿಸುವಂತೆ ತಾಕೀತು ಬರುತ್ತದೆ. ಇದನ್ನೇ ಗಮನಿಸುತ್ತಿದ್ದ ಕರ್ನಲ್ ಬ್ರಾಟ್ಟನ್ ಹೀಗೆ ಟೊಕಿಯೋದಿಂದ ಆದೇಶ ಬಂದಿರುವುದು ನೋಡಿದರೆ, ನವೆಂಬರ್ 30 ಭಾನುವಾರದ ದಿನ ಜಪಾನ್ ದಾಳಿ ಮಾಡಬಹುದು ಎಂದು ಅಂದಾಜಿಸುತ್ತಾನೆ. ಇದನ್ನು ಗಮನಿಸಿದ ಸರ್ಕಾರದ ಮಂತ್ರಿಗಳು ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಎಲ್ಲರೂ ಫುಲ್ ಅಲರ್ಟ್ ಗೆ ಹೋಗುವಂತೆ ಆದೇಶ ಹೊರಡಿಸುತ್ತಾರೆ. ಇದೆಲ್ಲದರ ಮಧ್ಯೆ ಯಾಮಾಮೋಟೋ ಎಂಪರರ್ ಹಿರೋಹಿತೋ ಗೆ ಯುದ್ಧದ ವರದಿ ಒಪ್ಪಿಸಲು ಇಂಪೀರಿಯಲ್ ಪ್ಯಾಲೇಸ್ ಗೆ ಹೋಗುತ್ತಾನೆ. ಪ್ಯಾಲೇಸ್ ನ ಉಸ್ತುವಾರಿ ಕೊಇಚಿ ಕಿಡೊ ಈ ಭೇಟಿಯನ್ನು ಅತ್ಯಂತ ದುಃಖದ ಸಂಗತಿ ಎಂದು ಯಾಮಾಮೋಟೋಗೆ ಹೇಳಿಕೊಳ್ಳುತ್ತಾನೆ. ಯುದ್ಧವನ್ನು ಇಷ್ಟಪಡದ ದೊರೆ ಮತ್ತು ಯುದ್ಧವನ್ನು ವಿರೋಧಿಸುತ್ತಿರುವ ಅಧಿಕಾರಿಯ ನಡುವಿನ ಈ ಔಪಚಾರಿಕ ಮಾತುಕತೆಗೆ ತಾನು ಸಾಕ್ಷಿಯಾಗದಿರುವುದು ತನ್ನ ಭಾಗ್ಯವೇ ಎಂದು ಕಿಡೊ ಹೇಳುತ್ತಾನೆ. ಏಕೆಂದರೆ, ಔಪಚಾರಿಕ ಮಾತುಕತೆಗಳಲ್ಲಿ ದೊರೆ ಸಾಂಪ್ರದಾಯಿಕ ಪ್ರಶ್ನೆಗಳನ್ನು ಬಿಟ್ಟು ಬೇರೇನನ್ನೂ ಕೇಳುವಂತಿಲ್ಲ ಮತ್ತು ಉತ್ತರಿಸುವವರು ಕೇಳಿದ ಪ್ರಶ್ನೆಗೆ ಉತ್ತರಿಸುವುದು ಬಿಟ್ಟು ಬೇರೇನೂ ಹೇಳುವಂತಿಲ್ಲ.
 
  ಹೀಗೆ ಬಂದ ಎಚ್ಚರಿಕೆ ಸಂದೇಶಗಳ ಪ್ರತಿಕ್ರಿಯೆಯ ರೂಪದಲ್ಲಿ ಅಡ್ಮಿರಲ್ ಕಿಮ್ಮೆಲ್ ಎಲ್ಲ ವಿಮಾನವಾಹಕ ಹಡಗುಗಳನ್ನು ಗಸ್ತು ತಿರುಗಿ ಬರಲು ಕಳಹುತ್ತಾನೆ. ಯುದ್ಧ ಹಡಗುಗಳು(ಬ್ಯಾಟಲ್ ಶಿಪ್) ತುಂಬಾ ನಿಧಾನವಾಗಿದ್ದರಿಂದ ಮತ್ತು ಯಾವುದೇ ವೈಮಾನಿಕ ಬೆಂಬಲವಿಲ್ಲದೆ ತುಂಬಾ ದಿನ ಹೀಗೆ ಯುದ್ಧ ಹಡಗುಗಳನ್ನು ಬಿಡಲು ಸಾಧ್ಯವಿಲ್ಲದಿರುವುದರಿಂದ, ಅವುಗಳನ್ನು ಜೊತೆಯಲ್ಲಿ ಕರೆದೊಯ್ಯದೆ ಬಂದರಿನಲ್ಲೇ ಬಿಟ್ಟು, ಆದಷ್ಟು ಬೇಗನೆ ವಿಮಾನವಾಹಕ ಹಡಗುಗಳನ್ನು ಗಸ್ತು ಮುಗಿಸಿ ಬರಲು ಆದೇಶಿಸುತ್ತಾನೆ. ಇಲ್ಲಿ ಅಮೆರಿಕಾದ ನೇತೃತ್ವ ವಹಿಸಿದ್ದವರ ಸಂದಿಗ್ಧವೂ ನೋಡಬೇಕು. ಅವರಿಗೆ ಜಪಾನ್ ದಾಳಿಗೂ ತಯಾರಾಗಬೇಕು ಆದರೆ ತಾವೇ ಯುದ್ಧ ಪ್ರಾರಂಭಿಸಿದೆವು ಎನ್ನುವ ಅಪವಾದವೂ ಬೇಡ. ಇಲ್ಲಿ ಹಿರಿಯ ಅಧಿಕಾರಿಗಳು ಸರಿಯಾದ ನಿಲುವು ತಾಳಲಾರದೆ ಹೋಗುವುದರಿಂದ ಕೆಳಮಟ್ಟದ ಅಧಿಕಾರಿಗಳಿಗೆ ತಾವು ಯುದ್ಧಕ್ಕೆ ತಯಾರಾದರೂ ಜಪಾನ್ ಹಡಗುಗಳು ಅಥವಾ ವಿಮಾನಗಳನ್ನು ತಮ್ಮ ಜಾಗದಲ್ಲಿ ಕಂಡರೆ ಅದಕ್ಕೆ ಪ್ರತಿಯಾಗಿ ಅವುಗಳ ಮೇಲೆ ದಾಳಿ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನಿರ್ಮಾಣವಾಗುತ್ತದೆ. ಇಂತದೆ ಒಂದು ಗೊಂದಲದ ಪ್ರಶ್ನೆಯನ್ನು ಕಿಮ್ಮೆಲ್ ಗೆ ಅಡ್ಮಿರಲ್ ಹಾಲ್ಸೀ ಕೇಳಿದಾಗ “ನಿನ್ನ ಸಾಮಾನ್ಯ ಜ್ಞಾನ ಉಪಯೋಗಿಸು” ಎಂದಷ್ಟೇ ಹೇಳುತ್ತಾನೆ. ಹವಾಯಿ ದ್ವೀಪಗಳ ಸನಿಹ ತಲುಪುತ್ತಿದ್ದ ವೇಳೆ ಪರ್ಲ್ ಹಾರ್ಬರ್ ಬಂದರಿನ ಎಲ್ಲ ಚಲನವಲನಗಳ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದ ಜಪಾನ್ ನೌಕಾ ಸೇನೆಯ ಹಿರಿಯ ಅಧಿಕಾರಿಗಳು, ಒಂದು ವಿಮಾನವಾಹಕ ಹಡಗು ಬಿಟ್ಟರೆ ಉಳಿದೆಲ್ಲವೂ ಗಸ್ತು ತಿರುಗಲು ಹೋಗಿವೆ ಎಂಬ ಮಾಹಿತಿ ತಿಳಿದು ಬೇಸರಪಟ್ಟುಕೊಳ್ಳುತ್ತಾರೆ. ಅಮೆರಿಕಾದ ಪೆಸಿಫಿಕ್ ಫ್ಲೀಟ್ ನ ಬೆನ್ನೆಲುಬೇ ಈ ವಿಮಾನವಾಹಕ ಹಡಗುಗಳು. ಡಿಸೆಂಬರ್ 6 ಶನಿವಾರದ ರಾತ್ರಿ ಟೊಕಿಯೋದಿಂದ ತನ್ನ ರಾಯಭಾರಿ ಕಚೇರಿಗಳಿಗೆ ಗುಪ್ತ ಸಂದೇಶ ರವಾನಿಸಲಾಗುತ್ತದೆ. ಈ ಸಂದೇಶ 14 ಭಾಗಗಳಿಂದ ಕೂಡಿದ್ದು 13 ಭಾಗಗಳನ್ನು 6ರ ರಾತ್ರಿಯೇ ಕಳುಹಿಸಿ ಕೊನೆಯ ಭಾಗವನ್ನ ಮರುದಿನ ಬೆಳಗ್ಗೆ ಕಳುಹಿಸುವುದಾಗಿಯೂ ಸಂದೇಶ ಬರುತ್ತದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಲೆ.ಕಮ್ಯಾಂಡರ್. ಕ್ರೆಮರ್ ಈ ಸಂದೇಶಗಳ ಬಗ್ಗೆ ಏನು ಮಾಡುವುದು ಎಂದು ಯೋಚಿಸಿ ಕೊನೆಗೆ ಮೇಲಿನವರಿಗೆ ಎಚ್ಚರಿಕೆ ಕೊಡುವುದೇ ಒಳಿತು ಎಂದು ತಿಳಿದು ಕ್ರೆಮರ್ ನೇರ ವೈಟ್ ಹೌಸ್ ಗೆ ಹೊರಡುತ್ತಾನೆ. ಆದರೆ ಕೊನೆಯ ಭಾಗ ಏನು ಎಂದು ತಿಳಿಯದೆ ಮುಂದಿನ ನಡೆ ನಿರ್ಧರಿಸುವುದು ಬೇಡ ಎಂದು ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಕೊನೆಗೆ ಈ ವಿಷಯ ರಾಷ್ಟ್ರಾಧ್ಯಕ್ಷರನ್ನು ತಲುಪಿದರೂ ಅವರು ಜಪಾನ್ ದೊರೆಗೆ ವೈಯಕ್ತಿಕ ಸಂದೇಶವೊಂದನ್ನಷ್ಟೇ ಕಳಿಸಿ ಪ್ರತಿಕ್ರಿಯೆ ಬರುವ ತನಕ ಕಾಯೋಣ ಎಂದು ನಿರ್ಧರಿಸುತ್ತಾರೆ.
 
  ಡಿಸೆಂಬರ್ 7ರ ಬೆಳಗ್ಗೆ ವಾಷಿಂಗ್ಟನ್ ನಲ್ಲಿ ಬ್ರಾಟ್ಟನ್ ರಾತ್ರಿಯೆಲ್ಲ ಕಾದಿದ್ದು ಕೊನೆಗೆ ಬಂದ ಸಂದೇಶದ 14ನೆ ಭಾಗದ ತಿರುಳು,”ರಾಯಭಾರಿಗಳು ದಯವಿಟ್ಟು ತಮಗೆ ದೊರಕುವ ಟೋಕಿಯೋದ ಪ್ರತ್ಯುತ್ತರದ ಸಂದೇಶವನ್ನು ಡಿಸೆಂಬರ್ 7 ಸರಿಯಾಗಿ 1 ಗಂಟೆಗೆ ಅಮೇರಿಕಾ ಸರ್ಕಾರಕ್ಕೆ ಸಲ್ಲಿಸತಕ್ಕದ್ದು” ಎಂದು ಕ್ರೆಮರ್ ಗೆ ಕರೆಮಾಡಿ ತಿಳಿಸುತ್ತಾನೆ. ಜಪಾನ್ ನಲ್ಲಿ ಅಧ್ಯಕ್ಷ ರೂಸವೆಲ್ಟ್ ಕಳಿಸಿದ ಸಂದೇಶ ಹಿಡಿದು ಜಪಾನ್ ನ ವಿದೇಶ ಮಂತ್ರಿ ಆಗಿನ ಪ್ರಧಾನ ಮಂತ್ರಿ ಹಿದೇಕಿ ತೊಜೊ ಬಳಿ ಅದಕ್ಕೆ ಪ್ರತ್ಯುತ್ತರ ಕೇಳಲು ಬರುತ್ತಾನೆ. ಅದಕ್ಕೆ ತೊಜೊ ಶಾಂತಿ ಮೂಡಲು ಕಾಲ ಮಿಂಚಿಹೋಗಿದೆ, ಯುದ್ಧ ಆಗಿಯೇ ತೀರುವುದು ಎನ್ನುವ ಧಾಟಿಯಲ್ಲಿ ಮಾತನಾಡಿ ಆ ಸಂದೇಶವನ್ನು ದೊರೆಗಳಿಗೆ ತಲುಪಿಸಿ ಸುಮ್ಮನಿರಲು ಹೇಳುತ್ತಾನೆ. ಇತ್ತ ಅಮೆರಿಕಾದಲ್ಲಿ ಟೊಕಿಯೋದಿಂದ ತನ್ನ ರಾಯಭಾರಿ ಕಚೇರಿಗೆ ಸಂದೇಶದ 14ನೆ ಭಾಗ ಪಡೆದ ನಂತರ ಎಲ್ಲ ಕೋಡ್ ಮೆಷಿನ್ ಮತ್ತು ಗುಪ್ತ ಕಡತಗಳನ್ನು ಧ್ವಂಸಮಾಡಲು ಆದೇಶ ಬರುತ್ತದೆ. ಇದನ್ನು ಓದಿದ ಬ್ರಾಟ್ಟನ್ ತಕ್ಷಣವೇ ಅದನ್ನು ಅನುವಾದಿಸಿ ಆರ್ಮಿ ಚೀಫ್ ಆಫ್ ಸ್ಟಾಫ್ ಮಾರ್ಷಲ್ ಗೆ ತಿಳಿಸಲು ಹೊರಡುತ್ತಾನೆ. ಅದರ ಇನ್ನೊಂದು ನಕಲನ್ನು ಕ್ರೆಮರ್ ಬಂದ ನಂತರ ಆತನಿಗೆ ಕೊಡಲು ಸಹಾಯಕನಿಗೆ ಹೇಳಿ ಹೊರಡುತ್ತಾನೆ. ಜಪಾನ್ ನೌಕಾ ಸೇನೆಯ ಪರ್ಲ್ ಹಾರ್ಬರ್ ದಾಳಿಗೆ ನಿಯೋಜನೆಗೊಂಡ ಎಲ್ಲ ಪೈಲೆಟ್ ಗಳು ತಮ್ಮ ಹಡಗುಗಳಲ್ಲಿ ಹೊರಡುವ ಮುನ್ನ ತಮ್ಮೆಲ್ಲ ತಯಾರಿಗಳನ್ನು ಮುಗಿಸಿಕೊಳ್ಳುತ್ತಾರೆ. ಜಪಾನ್ ರಾಯಭಾರಿ ಕಚೇರಿಯಲ್ಲಿ ಇನ್ನೂ 14ನೆ ಭಾಗದ ಸಂದೇಶವನ್ನು ಮಾತ್ರ ಬಿಡಿಸಿ ಓದುತ್ತಲೇ ಇರುತ್ತಾರೆ. ಕ್ರೆಮರ್ ಕಚೇರಿಗೆ ಬಂದ ನಂತರ ಗುಪ್ತ ಸಂದೇಶವನ್ನು ಪಡೆದು ನೇವಲ್ ಆಪರೇಷನ್ಸ್ ನ ಚೀಫ್, ಅಡ್ಮಿರಲ್ ಹಾರಲ್ಡ್ ಸ್ಟಾರ್ಕ್ ಗೆ ಮುಟ್ಟಿಸುತ್ತಾನೆ. ಸ್ಟಾರ್ಕ್ ತಕ್ಷಣವೇ ಈ ಮಾಹಿತಿಯನ್ನು ಹವಾಯಿ ದ್ವೀಪದ ಮುಖ್ಯಸ್ಥ ಅಡ್ಮಿರಲ್ ಕಿಮ್ಮೆಲ್ ಗೆ ತಿಳಿಸದೆ ಅಧ್ಯಕ್ಷ ರೂಸವೆಲ್ಟ್ ಗೆ ತಿಳಿಸಿ ಮುಂದಿನ ನಡೆ ನಡೆಸುವುದಾಗಿ ಕೂರುತ್ತಾನೆ.
 
  ಇಷ್ಟು ಹೊತ್ತಿಗಾಗಲೇ ಪರ್ಲ್ ಹಾರ್ಬರ್ ದಾಳಿ ಆಗಲು ಬೇಕಿರುವ ಎಲ್ಲ ಘಟನೆಗಳೂ ಆಗಿಹೋಗಿರುತ್ತವೆ. ಬ್ರಾಟ್ಟನ್ ಕೊಟ್ಟ ಮಾಹಿತಿ ಆಧರಿಸಿ ಆರ್ಮಿ ಚೀಫ್ ಮಾರ್ಷಲ್ ಒಂದು ತುರ್ತು ಫುಲ್ ಅಲರ್ಟ್ ಸಂದೇಶ ಬರೆದು ಅದನ್ನು ಮಾಹಿತಿ ರವಾನೆ ಕೇಂದ್ರಕ್ಕೆ ಕೊಟ್ಟು ಎಲ್ಲ ಸ್ಟೇಷನ್ ಗಳಿಗೆ ರೇಡಿಯೋ ಮೂಲಕ ತಲುಪಿಸಲು ಹೇಳುವಂತೆ ಬ್ರಾಟ್ಟನ್ ಗೆ ಆದೇಶಿಸುತ್ತಾನೆ. ಇದನ್ನು ಹಿಡಿದು ಬ್ರಾಟ್ಟನ್ ಕಮ್ಯುನಿಕೇಷನ್ಸ್ ಸೆಂಟರ್ ಗೆ ಹೋದಾಗ  ಅದರ ಮುಖ್ಯಸ್ಥ ಆರ್ಮಿ ಚೀಫ್ ರ ಬರವಣಿಗೆ ಅರ್ಥವಾಗುತ್ತಿಲ್ಲ ಹಾಗಾಗಿ ಕಳಿಸಲು ಬರುವುದಿಲ್ಲ ಎಂದಾಗ, ಬ್ರಾಟ್ಟನ್ ಅಲ್ಲಿಯೇ ಕುಳಿತು ಅದರಲ್ಲಿದ್ದನ್ನೆಲ್ಲ ಟೈಪ್ ಮಾಡಿಕೊಟ್ಟು ಹೊರಡುತ್ತಾನೆ. ಈ ಸಂದೇಶವನ್ನು ರೇಡಿಯೋ ಮೂಲಕ ಹವಾಯಿ ದ್ವೀಪಕ್ಕೆ ಕಳಿಸಲು ಹವಾಮಾನ ವೈಪರೀತ್ಯದಿಂದ ಆಗುತ್ತಿಲ್ಲ ಎಂದು ಕಿರಿಯ ಅಧಿಕಾರಿಯೋರ್ವ ಹೇಳಿದಾಗ ಅದನ್ನು ಟೆಲಿಗ್ರಾಂ ಮೂಲಕ ಕಳಿಸುವಂತೆ ಮುಖ್ಯಸ್ಥ ಆದೇಶಿಸುತ್ತಾನೆ. ಆದರೆ ಆ ಟೆಲಿಗ್ರಾಂಅನ್ನು ‘ಅರ್ಜೆಂಟ್’ ಎಂದು ಗುರುತು ಮಾಡದೆ ಕಳುಹಿಸುತ್ತಾನೆ. ಇದರೊಳಗಿನ ಮಹತ್ವ ತಿಳಿಯದ ಉಳಿದ ಕೆಲಸಗಾರರು ಅದನ್ನು ಲಕೋಟೆಯಲ್ಲಿಟ್ಟು ಮುಂದಿನ ಸಂದೇಶ ರವಾನೆಕಾರ ಬಂದಾಗ ಕೊಡಲು ತೆಗೆದಿಡುತ್ತಾರೆ. ಬೆಳಗಿನ ಜಾವ ರೇಡಾರ್ ಅನ್ನು ನೋಡುತ್ತಾ ಕೂತ ಇಬ್ಬರು ಅಧಿಕಾರಿಗಳು ದ್ವೀಪದೆಡೆಗೆ ಬರುತ್ತಿರುವ ಎರಡು ದೊಡ್ಡ ಚಿಕ್ಕೆಗಳನ್ನು(ಜಪಾನ್ ಯುದ್ಧ ವಿಮಾನಗಳ ಎರಡು ದೊಡ್ಡ ಗುಂಪು) ನೋಡಿ ಹೆಡ್ ಕ್ವಾರ್ಟರ್ಸ್ ಗೆ ಮಾಹಿತಿ ತಲುಪಿಸಿದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳದಿರಲು ಅಲ್ಲಿಂದ ಆದೇಶ ಬರುತ್ತದೆ. ಬೆಳಗಾಗುತ್ತಿದ್ದಂತೆ ತನ್ನ ವಿಮಾನದ ರೇಡಿಯೋದಲ್ಲಿ ಹವಾಯಿ ದ್ವೀಪದ ರೇಡಿಯೋ ಸಂಗೀತ ಕೇಳುತ್ತ ದ್ವೀಪಕ್ಕೆ ಸಮೀಪಿಸುವ ಫುಚಿದ ಮತ್ತು ಅವನ ನೇತೃತ್ವದ ಗುಂಪು ತನ್ನ ಕಮ್ಯಾಂಡ್ ಗೆ “ಟೊರ, ಟೊರ, ಟೊರ” ಎನ್ನುವು ಗುಪ್ತ ಸಂದೇಶ ಕಳಿಸುವ ಮೂಲಕ ತಾವು ದಾಳಿ ಪ್ರಾರಂಭಿಸುತ್ತಿದ್ದೇವೆ ಎಂದು ಮಾಹಿತಿ ಕಳಿಸುತ್ತಾರೆ. ಚದುರಿದ ಜೇನುಹುಳುಗಳ ಗುಂಪಂತೆ ಜಪಾನ್ ನ ಯುದ್ಧ ವಿಮಾನಗಳು ದ್ವೀಪದ ಎಲ್ಲರನ್ನೂ ಎಚ್ಚರಿಸುವಂತೆ ಸದ್ದು ಮಾಡುತ್ತಾ ಪರ್ಲ್ ಹಾರ್ಬರ್ ಬಂದರಿನ ಮೇಲೆ ದಾಳಿ ಪ್ರಾರಂಭಿಸುತ್ತವೆ. ದಾಳಿ ಇಂದು ಆಗುವುದೋ ನಾಳೆ ಆಗುವುದೋ ಎಂದು ಎದುರುನೋಡುತ್ತಿದ್ದ ಅಡ್ಮಿರಲ್ ಕಿಮ್ಮೆಲ್ ತನ್ನ ಮನೆಯ ಅಂಗಳದಿಂದ ಪರ್ಲ್ ಹಾರ್ಬರ್ ಮೇಲೆ ನಡೆಯುತ್ತಿರುವ ದಾಳಿ ನೋಡಿ ಅಲ್ಲೇ ಅವಾಕ್ಕಾಗಿ ನಿಲ್ಲುತ್ತಾನೆ. ಗುಪ್ತ ಸಂದೇಶ ಬಿಡಿಸಿ ಸೆಕ್ರೆಟರಿ ಹಲ್ ಗೆ ಎಲ್ಲ ಸಂಬಂಧ ಕಡೆದುಕೊಳ್ಳುತ್ತಿರುವುದರ ಬಗ್ಗೆ ಹೇಳಲು ನೋಮುರ ಎರಡು ಗಂಟೆಗೆ ಬರುತ್ತಾನೆ. ಅಷ್ಟು ಹೊತ್ತಿಗಾಗಲೇ ಪರ್ಲ್ ಹಾರ್ಬರ್ ಮೇಲೆ ದಾಳಿಯಾಗಿರುವ ಬಗ್ಗೆ ಹಲ್ ಗೆ ಮಾಹಿತಿ ಬಂದಿರುತ್ತದೆ. ಔಪಚಾರಿಕವಾಗಿ ನೋಮುರನಿಂದ ಕಡತಗಳನ್ನು ಪಡೆದು ಹೊರಡುವಂತೆ ಹೇಳುತ್ತಾನೆ. ಅಡ್ಮಿರಲ್ ಕಿಮ್ಮೆಲ್ ಕಚೇರಿಗೆ ಮರಳಿ ದಾಳಿಯ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಪ್ರತಿಕ್ರಿಯೆಯನ್ನು ನಿರ್ದೇಶಿಸುತ್ತಾನೆ. ದಾಳಿ ಪ್ರಾರಂಭಿಸಿದ ಮೇಲೆ ಬರುವ ಎಚ್ಚರಿಕೆ ಸಂದೇಶ ನೋಡಿ ತನ್ನ ಕಿರಿಯ ಅಧಿಕಾರಿಗಳಿಗೆ ಅದನ್ನು ಓದಿ ಸುಮ್ಮನಾಗುತ್ತಾನೆ. ಪರ್ಲ್ ಹಾರ್ಬರ್ ನಲ್ಲಿ ವಿಮಾನವಾಹಕ ಹಡಗುಗಳು ಇಲ್ಲದ್ದರಿಂದ ಇನ್ನೂ ದಾಳಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ವೈಸ್ ಅಡ್ಮಿರಲ್ ನಗುಮೊ ನಿರ್ಧರಿಸಿ ಯುದ್ಧ ವಿಮಾನಗಳು ದಾಳಿಯಿಂದ ಮರಳುತ್ತಿದ್ದಂತೆ ಹಡಗುಗಳು ಜಪಾನ್ ಗೆ ಮರಳುವಂತೆ ಆದೇಶಿಸುತ್ತಾನೆ. ತನ್ನ ಕಚೇರಿಯಲ್ಲಿ ಬರುತ್ತಿದ್ದ ಮಾಹಿತಿಯನ್ನೆಲ್ಲ ಆಲಿಸುತ್ತ ಕುಳಿತಿದ್ದ ಯಾಮಾಮೋಟೋ ದಾಳಿ ಯಶಸ್ವಿಯಾಯಿತು ಎಂದು ಎಲ್ಲ ಹರ್ಷ ವ್ಯಕ್ತಪಡಿಸಿದಾಗ, ಜಪಾನ್ ನ ಈ ದಾಳಿ ಅಮೆರಿಕದಂತ ಮಲಗಿದ್ದ ದೈತ್ಯನನ್ನು ಎಬ್ಬಿಸಿ ಅದರಲ್ಲಿ ಹೋರಾಡುವ ಛಲ ತುಂಬಿದೆ ಎಂದು ಹೇಳುತ್ತಾನೆ. ಹೊರಗೆ ಬಂದು ಸಾಗರದ ಅಲೆಗಳನ್ನು ನೋಡುತ್ತಾ ಮುಂದಾಗಲಿರುವ ಕೋಲಾಹಲದ ಭವಿಷ್ಯವನ್ನು ನೋಡುತ್ತಿರುವಂತೆ ಮೂಕನಾಗಿ ನಿಲ್ಲುತ್ತಾನೆ.
 
 ಈ ಚಿತ್ರವನ್ನು ಅತಿಯಾಗಿ ನಾಟಕೀಯಗೊಳಿಸಿಲ್ಲ, ಅಬ್ಬರವಿಲ್ಲ. ಹಾಗಾಗಿ ಸಂಭಾಷಣೆ ಆಧಾರಿತ ಚಿತ್ರಗಳಂತೆ ಇಲ್ಲಿ ಉದ್ದುದ್ದದ ಸಂಭಾಷಣೆಗಳು ಕಾಣಸಿಗುವುದಿಲ್ಲ. ಆದರೆ ಐತಿಹಾಸಿಕವಾಗಿ ದಾಳಿಯ ಪೂರ್ವಾಪರ ನಡೆದ ಎಲ್ಲ ಘಟನೆಗಳನ್ನು ಸೆರೆ ಹಿಡಿಯುವಲ್ಲಿ ಚಿತ್ರ ಯಶಸ್ವಿಯಾಗಿದೆ. 1970 ರ ಚಿತ್ರವಾದ್ದರಿಂದ ಗ್ರಾಫಿಕ್ಸ್ ಬಳಸದೆ ಸ್ಟಂಟ್ ಗಳನ್ನು ಅದೂ ಇಷ್ಟು ದೊಡ್ಡ ಮಟ್ಟದಲ್ಲಿ ಮಾಡಿರುವುದು ಶ್ಲಾಘನೀಯ. ಎಲ್ಲದಕ್ಕಿಂತ ಹೆಚ್ಚಾಗಿ ಐತಿಹಾಸಿಕ ಘಟನೆಗಳನ್ನು ಕಥೆಗೆ ತಕ್ಕಂತೆ ತಿರುಚದೆ, ಕಥೆಯನ್ನು ಐತಿಹಾಸಿಕ ಘಟನೆಗಳಿಗೆ ಬದ್ಧವಾಗಿ ರಚಿಸಿರುವುದು ಉಳಿದ ಚಿತ್ರಗಳಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ. ಯೂಟ್ಯೂಬ್ ನಲ್ಲಿ ‘History Buffs’ ಎಂಬ ಚಾನೆಲ್ ಇದೆ. ಅದರಲ್ಲಿ ಐತಿಹಾಸಿಕ ಚಿತ್ರಗಳನ್ನು ವಿಮರ್ಶೆ ಮಾಡಲಾಗುತ್ತದೆ. ಈ ಚಿತ್ರದಲ್ಲಿನ ಐತಿಹಾಸಿಕ ಸಂಗತಿಗಳ ಬಗ್ಗೆ ಆ ಚಾನೆಲ್ ನಲ್ಲಿ ಇನ್ನೂ ವಿಸ್ತೃತವಾಗಿ ಹೇಳಲಾಗಿದೆ. ಇಷ್ಟಪಟ್ಟವರು ಅದನ್ನೂ ನೋಡಬಹುದು.
https://www.youtube.com/watch?v=9PfdQod8HTw
 
  ಈ ಚಿತ್ರದಲ್ಲಿ ಪರ್ಲ್ ಹಾರ್ಬರ್ ಬಂದರಿನ (40 ಅಡಿಗಳ) ಆಳದ ಬಗ್ಗೆ ಮತ್ತು ಆಗ ಚಾಲ್ತಿಯಲ್ಲಿದ್ದ (75 ಅಡಿಗಳಿಗೂ ಹೆಚ್ಚು ಆಳಕ್ಕೆ ಧುಮುಕುವ) ಟಾರ್ಪಿಡೋಗಳ ಬಗ್ಗೆ ಮಾತನಾಡಿದರೂ, ಜಪಾನಿಗಳು ಹೇಗೆ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರು ಎನ್ನುವುದನ್ನು ತಿಳಿಸುವುದಿಲ್ಲ. ಜಪಾನಿಗಳು ತಾವು ಆಗ ಉಪಯೋಗಿಸುತ್ತಿದ್ದ (ಟೈಪ್ 91 ಥಂಡರ್ ಫಿಶ್) ಏರಯಲ್ ಟಾರ್ಪಿಡೋಗಳ ಬಾಲಕ್ಕೆ ಮರದ ರೆಕ್ಕೆಗಳನ್ನು ಜೋಡಿಸುವುದರ ಮೂಲಕ (ಮಾಡಿಫಿಕೇಶನ್ 2) ಟಾರ್ಪಿಡೋಗಳು ನೀರಿಗೆ ಬಿದ್ದ ನಂತರ ಹೆಚ್ಚು ಆಳಕ್ಕೆ ಇಳಿಯದೆ ಹಡಗುಗಳತ್ತ ಸಾಗುವಂತೆ ಮಾರ್ಪಾಡುಮಾಡಿಕೊಂಡರು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಜಾಲತಾಣ ನೋಡಬಹುದು.
https://www.pacificaviationmuseum.org/pearl-harbor-blog/pearl-harbor-thunderfish-in-the-sky/
 
  ಜಪಾನ್ ಮತ್ತು ಅಮೇರಿಕಾ ನಡುವಿನ ಯುದ್ಧದ ಬಗ್ಗೆ ಇನ್ನೊಂದು ಒಳ್ಳೆಯ ಜೋಡಿ ಚಿತ್ರ, ‘Flags of our fathers’ ಮತ್ತು ‘Letters from Iwo Jima’. ಎರಡೂ ಚಿತ್ರ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶಿಸಿದ್ದು ಇವೋ ಜಿಮ ದ್ವೀಪದ ಮೇಲಿನ ಅಮೇರಿಕ ಸೇನೆಯ ದಾಳಿಯ ಬಗ್ಗೆ ಎರಡೂ ದೇಶಗಳ ದೃಷ್ಟಿಕೋನವನ್ನು ಬಿಂಬಿಸುವಂತೆ ಈ ಎರಡು ಚಿತ್ರಗಳನ್ನು ನಿರ್ಮಿಸಲಾಗಿದೆ. ಜಪಾನ್ ಮೇಲಿನ ಅಮೇರಿಕಾ ದಾಳಿಯ ಬಗ್ಗೆ ನಿರ್ಮಿಸಲಾದ ಮಿನಿ- ಸೀರಿಸ್ ‘The Pacific’ ಕೂಡ ನೋಡಬಹುದು. ಆದರೆ ಈ ಎಲ್ಲ ಚಿತ್ರಗಳು ಮತ್ತೆ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಳ್ಳದೆ ಅದರಲ್ಲಿನ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿತವಾದವು. 

Rating
No votes yet