ಕಗ್ಗ ದರ್ಶನ – 14 (1)

ಕಗ್ಗ ದರ್ಶನ – 14 (1)

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು  
ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ
ಮೌನವದು ಮಣ್ಕರಗಿ - ಮಂಕುತಿಮ್ಮ
ಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮೂಲಕ ದೊಡ್ಡ ಸತ್ಯವನ್ನು ತೋರಿಸಿ ಕೊಡುತ್ತಾರೆ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ. ಆ ನೀರು “ನಾನು ನಾನೇ”, ಈ ಲೋಕದಲ್ಲಿ ನನ್ನನ್ನು ಮೀರಿಸಿದ್ದು ಯಾವುದೂ ಇಲ್ಲ ಎಂದು ತನ್ನ ಗುಣಗಾನ ಮಾಡಿಕೊಳ್ಳುತ್ತ ತುಳುಕಾಡುತ್ತಿರುತ್ತದೆ. ಹಾಗೆ ಗರ್ವದಿಂದ ಕುಣಿದಾಡುವಾಗ ಅಪಾರ ಜಲರಾಶಿಯನ್ನು ಹೊಂದಿರುವ ಕಡಲನ್ನು ಅದು ಮರೆತಿರುತ್ತದೆ!
ತತ್ವದ ಅನುಸಾರ (ನೂನದಿಂದ) ಈ ಲೋಕದ ಎಲ್ಲವನ್ನೂ ಸಾಗರದ ಒಳಗಿಟ್ಟರೆ ಏನಾಗುತ್ತದೆ? ಮಣ್ಣಿನ ಕೊಡ ಕರಗಿ, ಅದರಲ್ಲಿರುವ ನೀರು ಸಾಗರದ ನೀರಿನಲ್ಲಿ ಸೇರಿ, ಅದರ ಸದ್ದೆಲ್ಲ ಅಡಗುತ್ತದೆ; ತುಳುಕಾಟವೆಲ್ಲ ನಿಲ್ಲುತ್ತದೆ; ಸೊಕ್ಕು ಇಳಿಯುತ್ತದೆ; ಅದು ಮೌನವಾಗುತ್ತದೆ.
ಕೆಲವರು ಆ ಪುಟ್ಟ ಕೊಡದಲ್ಲಿರುವ ನೀರಿನ ಹಾಗಿರುತ್ತಾರೆ. ಏನೊ ಒಂದಷ್ಟು ತಿಳಿದುಕೊಂಡರೂ, ತಮಗೆಲ್ಲ ಗೊತ್ತಿದೆ ಎಂಬ ಗರ್ವದಿಂದ ಬೀಗುತ್ತಾರೆ. ತಮ್ಮ ಸಣ್ಣಸಣ್ಣ ಗೆಲುವುಗಳನ್ನೇ ದೊಡ್ಡದೊಡ್ಡ ಸಾಧನೆಗಳೆಂಬಂತೆ ಬಿಂಬಿಸುತ್ತಾರೆ. ಅಪ್ರತಿಮ ಜ್ನಾನವಂತರು, ದೊಡ್ಡ ಸಾಧಕರು ಸಾಗರದ ನೀರಿನಂತೆ ಪ್ರಶಾಂತವಾಗಿದ್ದು, ತಮ್ಮ ಅಗಾಧತೆಯನ್ನು ಎಂದಿಗೂ ತೋರಿಸಿಕೊಳ್ಳುವುದಿಲ್ಲ. ಆದರೆ ಈ ಚಿಕ್ಕ ಕೊಡದ ನೀರಿನಂತಿರುವ ವ್ಯಕ್ತಿಗಳು ಅಂತಹ ಮೇರು ವ್ಯಕ್ತಿಗಳೆದುರೇ ಸೊಕ್ಕಿನಿಂದ ತುಳುಕಾಡುತ್ತಾರೆ; ತಮ್ಮ ಸಣ್ಣತನ ಮೆರೆಯುತ್ತಾರೆ.
ಆದರೆ ಸಾಗರ ಸಾಗರವೇ; ಸಣ್ಣ ಕೊಡದ ನೀರು ಗಾತ್ರದಲ್ಲಿ ಸಣ್ಣದೇ ಆಗಿರುತ್ತದೆ. ಇಂತಹ ಸಣ್ಣ ಜನಗಳು ಗರ್ವದಿಂದ ಎಷ್ಟೇ ಬೀಗಿದರೂ ನಿಜವಾಗಿ ದೊಡ್ಡವರಾದವರನ್ನು ಎಂದಿಗೂ ಸರಿಗಟ್ಟಲಾರರು. ದೊಡ್ಡ ವ್ಯಕ್ತಿಗಳ ಅಗಾಧ ವಿದ್ವತ್ತು ಹಾಗೂ ಅಪಾರ ವಿನಯ ತುಂಬಿದ ಮೇರು ವ್ಯಕ್ತಿತ್ವದ ಎದುರು ಈ ಸಣ್ಣ ವ್ಯಕ್ತಿಗಳು ಮಂಕಾಗುತ್ತಾರೆ. ಅದನ್ನು ಸಣ್ಣ ವ್ಯಕ್ತಿಗಳು ಬೇಗನೇ ತಿಳಿದುಕೊಳ್ಳುವುದು ಒಳ್ಳೆಯದು. ಇಲವಾದರೆ, ಈ ಸಣ್ಣಜನಗಳ ಬದುಕಿನಲ್ಲಿ ಒಂದು ಸಂದರ್ಭ ಬಂದೇ ಬರುತ್ತದೆ – ಸಾಗರದ ನೀರಿನಲ್ಲಿ ಮಣ್ಣಿನ ಸಣ್ಣಕೊಡ ಮುಳುಗಿಸಿಟ್ಟಂತೆ, ಇವರ ಸೊಕ್ಕು ಕರಗುತ್ತದೆ.