ಕಗ್ಗ ದರ್ಶನ – 14 (2)

ಕಗ್ಗ ದರ್ಶನ – 14 (2)

ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ
ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು
ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ
ಕ್ಷೀಣವಾಗಲಿ ನಾನು – ಮರುಳ ಮುನಿಯ
ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (ಉರುಬಿ) ನೋಡು ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆಗ ಕೇಳಿಸುತ್ತದೆ, ನಿನ್ನ ಇಬ್ಬದಿಗಳಲ್ಲೂ “ನಾನು ನಾನೆಂಬ” ಮರುಬೊಬ್ಬೆ. ಅಂದರೆ, ಅಕ್ಕಪಕ್ಕದವರೂ ನಾನು ನಾನೆನ್ನುತ್ತ ಕೋಲಾಹಲದಲ್ಲಿ ಮುಳುಗಿದ್ದಾರೆ. ಅದು ಕೇಳಲಿಕ್ಕಾಗದಷ್ಟು ಕರ್ಕಶ. ಹೀಗೆ ನಾನು-ನೀನುಗಳ ಬೊಬ್ಬೆ ಈ ಲೋಕದಲ್ಲಿ ಹಬ್ಬವಾಗಿದೆ. ಆ ಗದ್ದಲದಲ್ಲಿ ನಮ್ಮ ವಿವೇಕವೇ ಇಲ್ಲವಾಗಿದೆ.
ಈ ಜಗತ್ತಿನ ಕಳೆದ ಸುಮಾರು ನೂರು ವರುಷಗಳ ಚರಿತ್ರೆ ಗಮನಿಸಿದರೆ, “ನಾನು ನಾನೆಂಬ” ಅಹಮಿಕೆಯಿಂದಾದ ಅನಾಹುತ ಕಣ್ಣಿಗೆ ಕಟ್ಟುತ್ತದೆ. ಎರಡು ಮಹಾಯುದ್ಧಗಳಿಗೂ “ನಾನೇ ಪರಮ, ನನಗೆ ಎದುರಾರಿಲ್ಲ, ನನಗೆ ಎದುರಾಳಿಗಳೇ ಇರಬಾರದು” ಎಂಬ ಮೂರ್ಖ ಭಾವನೆಯೇ ಕಾರಣ. ಅದರಿಂದಾಗಿ ಲಕ್ಷಗಟ್ಟಲೆ ಜನರ ಸಾವು. ಬೆಲೆಕಟ್ಟಲಾಗದ ಸೊತ್ತಿನ ನಾಶ. ದೇಶದೇಶಗಳ ಜನರ ಬದುಕಿನ ವಿನಾಶ.
ಎರಡನೇ ಜಾಗತಿಕ ಯುದ್ಧ ಮುಗಿದದ್ದು, ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾ ಮೇಲೆ ಅಮೇರಿಕಾ ಅಣುಬಾಂಬುಗಳನ್ನು ಪ್ರಯೋಗಿಸಿದಾಗ – ಅದರಿಂದಾಗಿ ಮಾನವಕುಲ ಕಂಡುಕೇಳರಿಯದ ಧ್ವಂಸಕ್ರಿಯೆ. ಅಲ್ಲಿಗೆ ಮನುಷ್ಯನ ಪ್ರಳಯಾಂತಕ ಬುದ್ಧಿ ಕೊನೆಯಾಯಿತೇ? ಇಲ್ಲ. ಅನಂತರ ಅದೆಷ್ಟು ಯುದ್ಧಗಳು! ವಿಯೆಟ್ನಾಂ, ಅಫಘಾನಿಸ್ಥಾನ, ಪ್ಯಾಲೆಸ್ಥೈನ್, ಗಲ್ಫ್, ಇರಾಕ್, ಚೆಚ್ನಿಯ, ಲಿಬಿಯ, ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ರಿಕಾದ ದೇಶಗಳು – ಇಲ್ಲೆಲ್ಲ ಸಮರಗಳ ಸರಮಾಲೆ. ಪ್ಯಾಲೆಸ್ಥೈನ್, ಇರಾಕ್, ಸಿರಿಯ – ಇಲ್ಲಿ ಈಗಲೂ ದಿನದಿನವೂ ಯುದ್ಧಗಳ ಭೀಕರ ನೆರಳು. ಅಮಾಯಕರ ಕಗ್ಗೊಲೆ.
ಇವೆಲ್ಲ ಹಿಂಸೆಗೆ, ಪ್ರಾಣನಾಶಕ್ಕೆ, ವಿನಾಶಕ್ಕೆ ಕಾರಣ “ನಾನು” ಎಂಬ ತೀವ್ರ ಭಾವ. ದೇಶದ ನಾಯಕನಲ್ಲಿ ನಾನೇ ಸರಿ ಎಂಬ ಭಾವ ಬೆಳೆಯುತ್ತ ಹೋದಂತೆ ಧ್ವಂಸ ಪ್ರಕ್ರಿಯೆ ಹೆಚ್ಚಾಗುತ್ತದೆ. ಇದು ಬದಲಾಗಬೇಕಾದರೆ, “ನಾನು ಕ್ಷೀಣವಾಗಬೇಕು”. ಅಂದರೆ, ನಾನು ಮಾತ್ರ ಸರಿ ಎಂಬ ಭಾವ ಬದಲಾಗಬೇಕು. ನಾನೇ ಅಂತಿಮವಲ್ಲ ಎಂಬ ಅರಿವು ಮೂಡಬೇಕು. ನನಗಿಂತ ಮಿಗಿಲಾದ ಪರಮ ಚೈತನ್ಯವೊಂದಿದೆ; ನಾನು ನಿಮಿತ್ತ ಮಾತ್ರ ಎಂಬ ನಂಬಿಕೆ ಬಲವಾಗಬೇಕು. ಆಗ ಮಾತ್ರ ಬೃಹತ್ ವಿಶ್ವದಲ್ಲೊಂದು ಅಣುವಾಗಿರುವ ಈ ಭೂಮಿಯಲ್ಲಿ ಮಾನವಕುಲ ಉಳಿದೀತು.

Comments

Submitted by Jagadeesha Chandra Fri, 01/26/2018 - 17:10

ಇಂದಿಗೂ ಕೆಲವು ದೊಡ್ಡ‌ ದೇಶಗಳು ನಾನು ನಾನೆಂದು ಬೊಬ್ಬೆ ಇಡುತ್ತಿವೆ. ಕೆಲವು ಧರ್ಮಗಳು ನಾವೇನು ಕಡಿಮೆ ಎಂದು ಕುಣಿದಾಡುತ್ತಿವೆ. ನನಗಿಂತ ಮಿಗಿಲಾದ ಪರಮ ಚೈತನ್ಯವೊಂದಿದೆ; ನಾನು ನಿಮಿತ್ತ ಮಾತ್ರ ಎಂಬ ನಂಬಿಕೆ ಬಲವಾಗಬೇಕು. ಆಗ ಮಾತ್ರ ಬೃಹತ್ ವಿಶ್ವದಲ್ಲೊಂದು ಅಣುವಾಗಿರುವ ಈ ಭೂಮಿಯಲ್ಲಿ ಮಾನವಕುಲ ಉಳಿದೀತು. ಎಂಬ ತಮ್ಮ‌ ಅನಿಸಿಕೆ ನಿಜ‌.