ನಾನು ನೋಡಿದ ಚಿತ್ರ- ಸ್ಪಿರಿಟೆಡ್ ಅವೇ (ಸೆನ್ ಟೊ ಚಿಹಿರೊ ನೊ ಕಾಮಿಕಾಕುಶಿ)
IMDb: http://www.imdb.com/title/tt0245429/?ref_=nv_sr_1
ಜಾಪನೀಸ್ ಮಾಂಗ(Manga) ಚಿತ್ರಗಳು ಕಾಮಿಕ್ಸ್ ಓದುವವರಿಗೆ ಪರಿಚಿತ. ಕಾಮಿಕ್ಸ್ ಗಳ ಪ್ರಪಂಚದಲ್ಲಿ ಮಾಂಗ(Manga) ಗಳದ್ದೇ ಒಂದು ದೊಡ್ಡ ಸ್ಥಾನವಿದೆ. ಅದರಲ್ಲೂ ಜಪಾನಿ ಸಂಸ್ಕೃತಿಯನ್ನು ಬಿಂಬಿಸುವ ಕಾಮಿಕ್ಸ್ ಗಳು ಬಹಳ ಚಿತ್ತಾಕರ್ಷಕವಾಗಿರುತ್ತವೆ. ಆ ಬಣ್ಣಗಳು, ಪಾತ್ರಗಳ ಕಣ್ಣುಗಳು, ಕಣ್ಣುಗಳಲ್ಲೇ ಭಾವನೆಗಳನ್ನು ಹೆಚ್ಚಾಗಿ ತೋರ್ಪಡಿಸುವ ಕಲೆ ಈ ಕಾಮಿಕ್ಸ್ ವಿಧಕ್ಕೆ ಇಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ. ಇದರ ಮುಂದುವರಿದ ಭಾಗವಾಗಿ ರೂಪುಗೊಂಡವೇ ಆನೀಮೆ ಚಿತ್ರಗಳು. ಆನೀಮೆ ಚಿತ್ರಗಳ ತಯಾರಿಕೆಯಲ್ಲಿ ಅತ್ಯಂತ ಪಳಗಿದ ಮತ್ತು ಆನೀಮೆ ಚಿತ್ರಗಳಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ನಿರ್ದೇಶಕ ಹಯಾಒ ಮಿಯಜಾಕಿ. ಈತನ ಚಿತ್ರಗಳ ಪ್ರತಿಯೊಂದು ಫ್ರೇಮ್ ಗಳು ಕೈಯಿಂದ ಚಿತ್ರಿತವಾದವು. ಚಿತ್ರ ನಿರ್ಮಾಣ ಮಾಡಲು ಕಂಪ್ಯೂಟರ್ ಬಳಕೆ ಮಾಡಿದರೂ ಅದು ಕೇವಲ ಚಿತ್ರ ಸಜ್ಜಿಕೆಯ ಕೊನೆಯ ಭಾಗದಲ್ಲಿ ಮಾತ್ರ. ಆತ ಚಿತ್ರ ನಿರ್ಮಾಣಕ್ಕೆ ಕೂತು ಚಿತ್ರ ಬಿಡಿಸುವ ಬಗೆಯ ಬಗ್ಗೆಯೇ ಹಲವಾರು ಡಾಕ್ಯುಮೆಂಟರಿಗಳು ಯುಟ್ಯೂಬ್ ನಲ್ಲಿ ಸಿಗುತ್ತವೆ. ನಿಮಗೆ ಸಮಯವಾದಾಗ ಖಂಡಿತ ಅವನ್ನು ನೋಡಲೇಬೇಕು. ಇಂತಹ ಚಿತ್ರಗಳ ಹಿಂದೆ ಇರುವ ಅಪಾರ ಶ್ರಮ ಇವು ಹಾಲಿವುಡ್ ಆನಿಮೇಶನ್ ಚಿತ್ರಗಳಿಗಿಂತ ಎಷ್ಟು ಭಿನ್ನ ಎಂದು ತೋರಿಸಿಕೊಡುತ್ತವೆ. ಮಿಯಜಾಕಿ ಚಿತ್ರಗಳಲ್ಲಿ ಪಾತ್ರಗಳು ಮಾನವ ಸಹಜ ಸಂಕೀರ್ಣ ಭಾವನೆಗಳನ್ನು ಅಷ್ಟೇ ನಾಜೂಕಾಗಿ ತೋರಿಸುವುದರಿಂದ ಆತನ ಚಿತ್ರಗಳು ಮಕ್ಕಳ ಚಿತ್ರವಾಗಿ ಕಂಡರೂ ಅದಕ್ಕೂ ಮೀರಿ ನಿಲ್ಲುತ್ತದೆ. ಹಾಲಿವುಡ್ ನಲ್ಲಿ ಡಿಸ್ನಿ ಚಿತ್ರ ಸಂಸ್ಥೆ ಹೇಗೆ ಆನಿಮೇಶನ್ ಚಿತ್ರಗಳಿಗೆ ಖ್ಯಾತಿಯನ್ನು ಪಡೆದಿದೆಯೋ ಹಾಗೆಯೇ ‘ಸ್ಟುಡಿಯೋ ಘಿಬ್ಲಿ’(Studio Ghibli) ಕೂಡ. ಇಂದು ನಾನು ಅಂತಹ ಅದ್ಭುತ ಆನೀಮೆ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಚಿತ್ರ ‘ಸ್ಪಿರಿಟೆಡ್ ಅವೇ’ ಬಗ್ಗೆ ಬರೆಯುತ್ತಿದ್ದೇನೆ.
ಚಿಹಿರೊ ಎಂಬ ಹುಡುಗಿಗೆ ತನ್ನ ತಂದೆಗೆ ತಾವಿದ್ದ ಊರಿಂದ ಬೇರೆಡೆಗೆ ವರ್ಗವಾದಾಗ ತನ್ನ ಸ್ನೇಹಿತರನ್ನೆಲ್ಲಾ ಬಿಟ್ಟು ಹೋಗಬೇಕಲ್ಲ ಎಂದು ತುಂಬಾ ಬೇಸರ. ಆದರೆ ಆಕೆಯ ತಂದೆ ತಾಯಿ ಹೊಸ ಊರಿನಲ್ಲಿ ಹೊಸ ಗೆಳೆಯರನ್ನು ಮಾಡಿಕೊಳ್ಳಬಹುದು ಎಂದು ಸಮಾಧಾನಪಡಿಸುತ್ತ ವರ್ಗಾವಣೆಯಾದ ಊರಿನಲ್ಲಿ ತಮ್ಮ ಕಾರಿನಲ್ಲಿ ಹೊಸ ಮನೆಯನ್ನು ಹುಡುಕುತ್ತ ಹೋಗುತ್ತಿರುತ್ತಾರೆ. ಆದರೆ ದಾರಿ ತಪ್ಪಿ ಒಂದು ಹಳೆಯ ಮುಚ್ಚಿರುವ ಥೀಮ್ ಪಾರ್ಕ್ ಗೆ ಬರುತ್ತಾರೆ. ಕುತೂಹಲದಿಂದ ಚಿಹಿರೊಳ ತಂದೆತಾಯಿ ಇಬ್ಬರೂ ಒಳಗೆ ಹೋಗುತ್ತಾರೆ. ತನಗೆ ಒಳಗೆ ಹೋಗಲು ಇಷ್ಟವಿಲ್ಲದಿದ್ದರೂ ಒಬ್ಬಳೇ ಹಿಂದೆ ಉಳಿಯಲು ಭಯವಾಗಿ ಚಿಹಿರೊ ಅವರೊಡನೆ ಹೋಗುತ್ತಾಳೆ. ಪಾರ್ಕ್ ಮುಚ್ಚಿದೆ ಎಂದು ಭಾವಿಸಿ ಸುತ್ತಾಡುವ ಆಕೆಯ ತಂದೆತಾಯಿ ಕೊಂಚ ದೂರ ನಡೆದಾಗ ರುಚಿಯಾದ ಅಡಿಗೆ ವಾಸನೆ ಬರುತ್ತಿರುವುದನ್ನು ಗಮನಿಸಿ ಅದರ ಜಾಡು ಹಿಡಿದು ಅಡಿಗೆ ಇದ್ದ ಅಂಗಡಿಗೆ ಹೋಗುತ್ತಾರೆ. ಹೋಗಿ ನೋಡಿದಾಗ ಆಗಷ್ಟೇ ಮಾಡಿಟ್ಟ ವಿಧವಿಧವಾದ ಅಡಿಗೆಗಳು. ಆದರೆ ಅದನ್ನು ಗಮನಿಸಿಕೊಳ್ಳಲು ಯಾರೂ ಇಲ್ಲ. ಚಿಹಿರೊಗೆ ಅಲ್ಲಿ ಏನೋ ಸರಿ ಇಲ್ಲ ಅನ್ನಿಸಿ ವಾಪಸ್ ಹೋಗೋಣ ಎಂದು ಆಕೆಯ ತಂದೆತಾಯಿಯನ್ನು ಕರೆದಾಗ, ಆಕೆಯನ್ನು ಸಮಾಧಾನ ಪಡಿಸಿ, ಅಂಗಡಿಯವರು ಇಲ್ಲೇ ಎಲ್ಲೋ ಹೋಗಿರಬೇಕು, ಮೊದಲು ತಿನ್ನೋಣ ಆಮೇಲೆ ಅವರು ಬಂದ ಮೇಲೆ ದುಡ್ಡು ಕೊಡೋಣ ಎಂದು ಹೇಳಿ ಅಲ್ಲಿದ್ದ ಅಡಿಗೆಗಳಿಗೆ ಕೈ ಹಾಕಿ ತಿನ್ನಲು ತೊಡಗುತ್ತಾರೆ. ತನ್ನ ಕರೆಗೆ ಓಗೊಡದಿದ್ದಾಗ ಚಿಹಿರೊ ಅವರನ್ನು ಅಲ್ಲಿಯೇ ಬಿಟ್ಟು ಸುತ್ತಾಡಲು ಹೋಗುತ್ತಾಳೆ. ಹಾಗೆಯೇ ಸುತ್ತಾಡುತ್ತ ಒಂದು ಸ್ನಾನಗೃಹದ ಬಳಿಗೆ ಬರುತ್ತಾಳೆ. ಅದು ಇನ್ನೂ ಕೆಲಸ ಮಾಡುತ್ತಿರುವುದನ್ನು ನೋಡಿ ಅಚ್ಚರಿಗೊಳ್ಳುತ್ತಾಳೆ. ಆಕೆ ಇದನ್ನೆಲ್ಲಾ ನೋಡುತ್ತಾ ನಿಂತಿರುವಾಗ ಒಮ್ಮೆಲೇ ಒಂದು ಹುಡುಗ(ಹಾಕು) ಬಂದು ಆಕೆ ಅಲ್ಲಿ ಇರುವುದು ಸುರಕ್ಷಿತವಲ್ಲ ಮತ್ತು ಅಲ್ಲಿಂದ ಕತ್ತಲಾಗುವುದರೊಳಗೆ ನದಿ ದಾಟಿ ಹೊರಡುವಂತೆ ಹೇಳುತ್ತಾನೆ. ಹಾಗೆ ಹೇಳುತ್ತಿದ್ದ ಹಾಗೆ ನಿಧಾನವಾಗಿ ಸಂಜೆಯಾಗಿ ಸುತ್ತ ಮುತ್ತಲಿನ ಅಂಗಡಿಗಳ ದೀಪ ಹತ್ತಿಕೊಳ್ಳುತ್ತವೆ ಮತ್ತು ಭೂತದಂತ ಆಕೃತಿಗಳು ಓಡಾಡಲು ಪ್ರಾರಂಭಿಸುತ್ತವೆ. ಗಾಬರಿಗೊಂಡ ಚಿಹಿರೊ ತನ್ನ ತಂದೆತಾಯಿ ಹುಡುಕಿ ಅವರು ಕುಳಿತಿದ್ದ ಅಂಗಡಿಗೆ ಬರುತ್ತಾಳೆ. ಆದರೆ ಅವರಿದ್ದ ಜಾಗದಲ್ಲಿ ಎರಡು ದೊಡ್ಡ ಹಂದಿಗಳು ಕೂತಿದ್ದು ನೋಡಿ ಇನ್ನಷ್ಟು ಗಾಬರಿಗೊಂಡು ತನ್ನ ತಂದೆತಾಯಿಯನ್ನು ಕೂಗುತ್ತ ನದಿಯತ್ತ ಓಡುತ್ತಾಳೆ. ತಾವು ಒಳಬರುವಾಗ ಬತ್ತಿ ಬರಡಾಗಿದ್ದ ನದಿ ಈಗ ತುಂಬಿ ಹರಿಯುತ್ತಿದ್ದನ್ನು ನೋಡಿ ಆಕೆಗೆ ನದಿಯನ್ನು ದಾಟಲಾಗದೆ ಏನು ಮಾಡಬೇಕು ಎಂದು ತಿಳಿಯದೆ ಅಲ್ಲೇ ಅಳುತ್ತಾ ನಿಲ್ಲುತ್ತಾಳೆ. ಮತ್ತೆ ಆಕೆಯನ್ನು ಹುಡುಕಿ ಬರುವ ಹುಡುಗ ಆಕೆಗೆ ಸಮಾಧಾನ ಪಡಿಸಿ, ಆಕೆಯ ತಂದೆತಾಯಿ ಹಂದಿಯಾಗಿ ಮಾರ್ಪಾಡಾಗಿದ್ದು, ಆಕೆ ಸಿಕ್ಕಿಬಿದ್ದರೆ ಆಕೆಗೂ ಇದೆ ಗತಿಯಾಗುವುದು ಎಂದು ಹೇಳುತ್ತಾನೆ. ಇದನ್ನು ತಪ್ಪಿಸಿಕೊಂಡು ಆಕೆಯ ತಂದೆತಾಯಿ ಹುಡುಕಿ ಅಲ್ಲಿಂದ ಓಡಿಹೋಗಲು ಸಹಾಯ ಮಾಡುವುದಾಗಿಯೂ ಅಲ್ಲಿಯ ತನಕ ತಾನು ಹೇಳಿದಂತೆ ಕೇಳಲು ಹೇಳುತ್ತಾನೆ. ಚಿಹಿರೊ ಕೂಡ ಅವನು ಹೇಳಿದಂತೆ ಕೇಳುತ್ತಾಳೆ.
ತನ್ನ ತಂದೆ ತಾಯಿಯನ್ನು ಕರೆದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಹೋಗುವವರೆಗೂ ಆ ಹುಡುಗ ಚಿಹಿರೊಗೆ ಸ್ನಾನಗೃಹದ ಬಾಯ್ಲರ್ ನೋಡಿಕೊಳ್ಳುವ ಕಮಾಜಿ ಬಳಿ ಕೆಲಸ ಮಾಡಿಕೊಂಡು ಇರಲು ಹೇಳುತ್ತಾನೆ. ಹಾಗೆ ಮಾಡದೆ ಸ್ನಾನಗೃಹದ ಒಡತಿ ಯುಬಾಬಾ ಕೈಯಲ್ಲಿ ಸಿಕ್ಕಿಬಿದ್ದರೆ, ಯುಬಾಬಾ ಆಕೆಯನ್ನು ಪ್ರಾಣಿಯನ್ನಾಗಿ ಮಾಡಿಬಿಡುತ್ತಾಳೆ ಎಂದು ಎಚ್ಚರಿಸುತ್ತಾನೆ. ಆತ ಹೇಳಿದಂತೆ ಕಮಾಜಿ ಹುಡುಕಿಕೊಂಡು ಹೋದಾಗ ಆತ ಆಕೆಗೆ ಕೊಡಲು ತನ್ನ ಬಳಿ ಏನೂ ಕೆಲಸವಿಲ್ಲ ಎಂದೂ, ಒಂದು ಕೆಲಸದ ಹುಡುಗಿಯ(ರಿನ್) ಜೊತೆ ಮಾಡಿ ಯುಬಾಬಾ ಬಳಿ ಕೆಲಸ ಕೇಳಿಕೊಳ್ಳಲು ಕಳಹುತ್ತಾನೆ. ಹೆದರಿಕೊಂಡೇ ಯುಬಾಬಾ ಕೋಣೆ ತಲುಪುವ ಚಿಹಿರೊ ಯುಬಾಬಾ ಬಳಿ ಕೆಲಸ ಕೇಳುತ್ತಾಳೆ. ಮೊದಲಿಗೆ ಇವಳನ್ನು ನೋಡಿ ಕೆಲಸ ಕೊಡಲಾಗದು ಎಂದು ನಿರಾಕರಿಸಿದರೂ ಚಿಹಿರೊಳ ಹಠ ನೋಡಿ ಮತ್ತು ಯುಬಾಬಾ ಕೆಲಸ ಕೇಳಿ ಬಂದವರಿಗೆ ತಾನು ಕೆಲಸ ಕೊಡುವುದಾಗಿ ತೆಗೆದುಕೊಂಡ ಪ್ರಮಾಣದ ಕಾರಣದಿಂದ ಕೆಲಸ ಕೊಡುತ್ತಾಳೆ. ಆದರೆ ಕೆಲಸದಲ್ಲಿ ಚಿಹಿರೊ ಮೇಲೆ ಯಾವುದೇ ದೂರು ಕೇಳಿಬಂದರೂ ಅವಳನ್ನು ಅವಳ ತಂದೆತಾಯಿಯಂತೆ ಹಂದಿಯಾಗಿ ಮಾಡುವುದಾಗಿ ಯುಬಾಬಾ ಕರಾರು ಮಾಡಿ ಅದಕ್ಕೆ ಚಿಹಿರೊಳಿಂದ ಸಹಿ ಪಡೆಯುತ್ತಾಳೆ. ಸಹಿಯಲ್ಲಿನ ಅಕ್ಷರಗಳನ್ನು ತನ್ನ ಮಂತ್ರಶಕ್ತಿಯಿಂದ ಬಂಧಿಸಿ ಚಿಹಿರೊಗೆ ಸೆನ್ ಎಂಬ ಹೊಸ ಹೆಸರು ಕೊಡುತ್ತಾಳೆ. ಯುಬಾಬಾ ಈಕೆಯ ಜವಾಬ್ದಾರಿಯನ್ನು ಚಿಹಿರೊಳನ್ನು ರಕ್ಷಿಸಿದ ಹುಡುಗ (ಹಾಕು) ನಿಗೆ ವಹಿಸುತ್ತಾಳೆ. ಚಿಹಿರೊಗೆ ಆಶ್ಚರ್ಯವಾದರೂ ಏನು ಹೇಳುವುದೋ ತಿಳಿಯದೆ ಸುಮ್ಮನೆ ಅವನ ಹಿಂಬಾಲಿಸುತ್ತಾಳೆ. ಹಾಕು ಚಿಹಿರೊಳನ್ನು ರಿನ್ ಜೊತೆ ಕೆಲಸಕ್ಕೆ ಕಳಹುತ್ತಾನೆ. ರಿನ್ ಚಿಹಿರೊಗೆ ಎಲ್ಲ ಕೆಲಸವನ್ನು ಪರಿಚಯ ಮಾಡಿಸಿ ಉಡಲು ಬಟ್ಟೆ ಕೊಟ್ಟು ಮಲಗುವ ಜಾಗ ತೋರಿಸುತ್ತಾಳೆ. ಇದೆಲ್ಲ ಆದ ನಂತರ ಚಿಹಿರೊ ತನ್ನ ತಂದೆತಾಯಿ ನೆನೆದು ಕಣ್ಣೀರಿಡುತ್ತ ಮಲಗುತ್ತಾಳೆ. ಸ್ನಾನಗೃಹದ ಮತ್ತೊಂದು ಭಾಗದಲ್ಲಿ ಯುಬಾಬಾ ಒಂದು ದೊಡ್ಡ ಹಕ್ಕಿಯಾಗಿ ಮಾರ್ಪಾಡುಗೊಂಡು ಎಲ್ಲಿಗೋ ಬೆಳಗ್ಗೆಯೇ ಹಾರಿ ಹೋಗಿ ಕತ್ತಲಾದ ಮೇಲೆ ಮರಳುತ್ತಾಳೆ. ಈ ನಡುವೆ ಹಾಕು ಚಿಹಿರೊಳನ್ನು ಗುಟ್ಟಾಗಿ ಆಕೆಯ ತಂದೆತಾಯಿಯನ್ನು ಇಟ್ಟಿದ್ದ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಚಿಹಿರೊ ಎಷ್ಟು ಕೂಗಿಕರೆದರೂ ಅಲ್ಲಿದ್ದ ಹಂದಿಗಳಲ್ಲಿ ಆಕೆಯ ತಂದೆತಾಯಿ ಆಕೆಯ ಕೂಗಿಗೆ ಸ್ಪಂದಿಸುವುದಿಲ್ಲ. ಇದರಿಂದ ಬೇಸರಗೊಳ್ಳುವ ಚಿಹಿರೊ ಅಳುತ್ತ ಕೂರುತ್ತಾಳೆ. ಆಕೆಯನ್ನು ಸಮಾಧಾನಪಡಿಸುವ ಹಾಕು, ಆಕೆ ಅಲ್ಲಿಗೆ ಬಂದಾಗಿನ ಬಟ್ಟೆಗಳನ್ನು ಕೊಟ್ಟು ಅವನ್ನು ಗುಟ್ಟಾಗಿಡಲು ಹೇಳುತ್ತಾನೆ. ಆಗ ಅದರಲ್ಲಿನ ಒಂದು ಪತ್ರವನ್ನು ನೋಡಿ ಚಿಹಿರೊ ತನ್ನ ಹೆಸರು ಸೆನ್ ಅಲ್ಲ ಚಿಹಿರೊ ಎಂದು ಜ್ಞಾಪಿಸಿಕೊಳ್ಳುತ್ತಾಳೆ. ಅದಕ್ಕೆ ಹಾಕು, ಯುಬಾಬಾ ಮಂತ್ರ ಕೆಲಸ ಮಾಡುವುದೇ ಆಕೆಗೆ ಸೆರೆಸಿಕ್ಕವರ ಹೆಸರನ್ನು ಬಂಧಿಸಿ ಅವರು ಅಲ್ಲಿಗೆ ಹೇಗೆ ಬಂದರು ಎಂಬುದನ್ನೇ ಮರೆಸಿಬಿಡುವುದು. ತಾನೂ ಅಲ್ಲಿಗೆ ಹೇಗೆ ಬಂದೆ ಎಂಬುದನ್ನೇ ಮರೆತಿದ್ದು ತನ್ನ ಹೆಸರು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬಾರದು ಎಂದು ಬೇಸರಪಟ್ಟುಕೊಳ್ಳುತ್ತಾನೆ. ನಂತರ ಆಕೆಯನ್ನು ಆಕೆಯ ಕೋಣೆಗೆ ಮರಳಲು ಹೇಳಿ ತಾನು ಒಂದು ಡ್ರ್ಯಾಗನ್ ಆಗಿ ಪರಿವರ್ತನೆಗೊಂಡು ಹೊರಟುಹೋಗುತ್ತಾನೆ.
ರಾತ್ರಿಯ ಹೊತ್ತಿಗೆ ಮರಳುವ ಯುಬಾಬಾ ಸ್ನಾನಗೃಹದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ರಿನ್ ಮತ್ತು ಚಿಹಿರೊ ಇಬ್ಬರಿಗೂ ಅಂದು ದೊಡ್ಡ ಸ್ನಾನದ ಕೋಣೆಯನ್ನು ಸ್ವಚ್ಛಗೊಳಿಸುವ ಕೆಲಸ ಕೊಡಲಾಗುತ್ತದೆ. ಈ ಮಧ್ಯೆ ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯಬೇಡ ಎಂದು ಹೊರಗೆ ನಿಂತಿದ್ದ ಒಂದು ಭೂತಕ್ಕೆ ಚಿಹಿರೊ ಹೇಳಿ ಆ ಭೂತ ಒಳ ಬರಲು ಬಾಗಿಲನ್ನು ತೆರೆದಿತ್ತು ಹೋಗುತ್ತಾಳೆ. ಅಂದೇ ಒಂದು ಭೂತ ಬಹಳ ಕೆಟ್ಟ ವಾಸನೆ ಬೀರುತ್ತ ಸ್ನಾನದಕೋಣೆಗೆ ಬರುತ್ತದೆ. ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಇವರಿಬ್ಬರಿಗೆ ವಹಿಸುತ್ತಾರೆ. ಸ್ನಾನಕ್ಕೆ ಬೇಕಾಗುವ ಟೋಕನ್ ತರಲು ರಿನ್ ಚಿಹಿರೊಗೆ ಕಳಹುತ್ತಾಳೆ. ಆದರೆ ಚಿಹಿರೊಳ ಆನನುಭವ ನೋಡಿ ಅಲ್ಲಿನ ಮುಖ್ಯಸ್ಥ ಆಕೆಗೆ ಟೋಕನ್ ಕೊಡಲು ನಿರಾಕರಿಸುತ್ತಾನೆ. ಆದರೆ ಅಲ್ಲೇ ನಿಂತಿದ್ದ ಮಳೆಯಲ್ಲಿ ನೆನೆದಿದ್ದ ಭೂತ ಚಿಹಿರೊಗೆ ಸಹಾಯ ಮಾಡಿ ಆಕೆಗೆ ಟೋಕನ್ ಒಂದನ್ನು ಕೊಡುತ್ತದೆ. ಮತ್ತೆ ಆಕೆಯನ್ನು ಹಿಂಬಾಲಿಸುತ್ತಾ ಇನ್ನಷ್ಟು ಟೋಕನ್ ತಂದುಕೊಡುತ್ತದೆ. ತನಗೆ ಒಂದು ಟೋಕನ್ ಸಾಕು ಎಂದು ಚಿಹಿರೊ ಹೇಳಿದ ನಂತರ ಆ ಭೂತ ಮರೆಯಾಗುತ್ತದೆ. ಇಷ್ಟರಲ್ಲಿ ಚಿಹಿರೊ ಇದ್ದ ಕೋಣೆ ತಲಪುವ ಆ ಕೆಟ್ಟ ವಾಸನೆಯ ಭೂತ ಸ್ನಾನಕ್ಕೆ ಕೂರುತ್ತದೆ. ಅದನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಚಿಹಿರೋಗೆ ಆ ಭೂತದ ಮೈಯಲ್ಲಿ ಏನೋ ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆಗೆಯಲು ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಇದಕ್ಕೆ ಸ್ಪಂದಿಸುವ ಅಲ್ಲೇ ಇದ್ದ ಯುಬಾಬಾ ಸ್ನಾನದ ಮನೆಯ ಎಲ್ಲರಿಗೂ ಚಿಹಿರೊಗೆ ಸಹಾಯ ಮಾಡಲು ಆಜ್ಞೆ ನೀಡುತ್ತಾಳೆ. ಇದರಿಂದ ಆ ಭೂತ ಈ ಮುಂಚೆ ನುಂಗಿದ ಎಷ್ಟೋ ಕಸವನ್ನು ಚಿಹಿರೊ ಎಲ್ಲರ ಸಹಾಯದೊಂದಿಗೆ ಹೊರಗೆಳೆಯುತ್ತಾಳೆ. ಕೊನೆಗೆ ಯಶಸ್ವಿಯಾಗಿ ಆ ಭೂತವನ್ನು ಸ್ವಚ್ಛಗೊಳಿಸುವ ಚಿಹಿರೊಗೆ ಆ ಭೂತ ಒಂದು ಔಷಧಿಯ ಉಂಡೆಯನ್ನು ಉಡುಗೊರೆಯಾಗಿ ಕೊಟ್ಟು ಸ್ನಾನದ ಮನೆಯ ಸೇವೆಗೆ ಅಲ್ಲಿ ಕೊಂಚ ಬಂಗಾರವನ್ನು ಬಿಟ್ಟು ಒಂದು ಡ್ರ್ಯಾಗನ್ ಆಗಿ ಮಾರ್ಪಾಡಾಗಿ ಅಲ್ಲಿಂದ ಹೊರಟು ಹೋಗುತ್ತದೆ. ಚಿಹಿರೊ ಕೆಲಸವನ್ನು ಯುಬಾಬಾ ತುಂಬಾ ಮೆಚ್ಚಿ ಆಕೆಯನ್ನು ಕೊಂಡಾಡುತ್ತಾಳೆ.
ಇನ್ನೊಂದು ದಿನ ಬೆಳಗ್ಗೆ ಚಿಹಿರೊಗೆ ಟೋಕನ್ ಕೊಟ್ಟು ಸಹಾಯ ಮಾಡಿದ ಭೂತ ತುಂಬಾ ಶ್ರೀಮಂತ ಭೂತವೆಂಬಂತೆ ಸ್ನಾನದ ಮನೆಗೆ ಬಂದು ತನಗೆ ತಿನ್ನಲು ಕೊಡುವ ಎಲ್ಲರಿಗೂ ಬಂಗಾರ ಕೊಡುವುದಾಗಿ ಹೇಳಿ ಎಲ್ಲರನ್ನೂ ಎಬ್ಬಿಸುತ್ತದೆ. ಎಲ್ಲರೂ ಬಂಗಾರ ಕೊಡುವ ಭೂತ ಬಂದಿದೆ ಎಂದು ಎದ್ದು ತಮಗೆ ಸಿಕ್ಕಿದ ತಿಂಡಿಯನ್ನೆಲ್ಲ ತಂದು ಆ ಭೂತಕ್ಕೆ ಕೊಟ್ಟು ಸ್ನಾನದ ಕೋಣೆಗೆ ಕರೆದೊಯ್ಯುತ್ತಾರೆ. ಈ ನಡುವೆ ಚಿಹಿರೊ ಈ ಭೂತದ ಗದ್ದಲದಲ್ಲಿ ಎಲ್ಲರಂತೆ ತೊಡಗದೆ ತನ್ನ ಕೋಣೆಯಲ್ಲಿ ಕಾಲ ಕಳೆಯುತ್ತಾ ಇದ್ದಾಗ, ಹಾಕು ಡ್ರ್ಯಾಗನ್ ಆಗಿ ಮೈಯೆಲ್ಲಾ ಗಾಯಮಾಡಿಕೊಂಡು ಆಕಾಶದಲ್ಲಿ ಹಾರಾಡುತಿದ್ದನ್ನು ಚಿಹಿರೊ ನೋಡುತ್ತಾಳೆ. ಅವನ ಹಿಂದೆ ಕೆಲವು ಪಕ್ಷಿಯಂತವು ಹಿಂಬಾಲಿಸುತ್ತಾ ಇರುತ್ತವೆ. ಹಾಕುನನ್ನು ಕೂಗಿ ತನ್ನ ಕೋಣೆಗೆ ಕರೆಯುತ್ತಾಳೆ. ಅವನು ಒಳ ಬರುತ್ತಿದ್ದಂತೆ ಬಾಗಿಲು ಮುಚ್ಚಿ ಆ ಪಕ್ಷಿಗಳನ್ನು ಹೊರಕ್ಕೆ ಉಳಿಯುವಂತೆ ಮಾಡುತ್ತಾಳೆ. ಆದರೆ ಹಾಗೂ ಒಳನುಗ್ಗುವ ಪಕ್ಷಿಗಳನ್ನು ನೋಡಿದಾಗ ಅವು ಕಾಗದದ ಪಕ್ಷಿಗಳು. ಇವು ಹೇಗೆ ಹಾಕುವಿಗೆ ಗಾಯ ಮಾಡಿದವು ಎಂದು ಯೋಚಿಸುತ್ತಿದ್ದಂತೆಯೇ, ಹಾಕು ಮತ್ತೆ ಹೊರಹೋಗಿ ಯುಬಾಬಾಳ ಕೋಣೆ ಸೇರುತ್ತಾನೆ. ಅದನ್ನು ಗಮನಿಸಿದ ಚಿಹಿರೊ ತಾನೂ ಗುಟ್ಟಾಗಿ ಯುಬಾಬಾ ಕೋಣೆಗೆ ಹೋಗುತ್ತಾಳೆ. ಹಾಗೆ ಹೋಗುವಾಗ, ಬಂಗಾರದ ಭೂತ ಸಿಕ್ಕಿ ಚಿಹಿರೊಗೆ ಬಂಗಾರದ ಆಸೆ ತೋರಿಸುತ್ತದೆ. ಆದರೆ ಚಿಹಿರೊ ಅದಕ್ಕೆ ಮಣಿಯದೆ ಯುಬಾಬಾ ಕೋಣೆಯ ಕಡೆ ಧಾವಿಸುತ್ತಾಳೆ. ಈ ನಡುವೆ ಕಾಗದದ ಪಕ್ಷಿಯೊಂದು ಆಕೆಗೆ ಗೊತ್ತಾಗದಂತೆ ಆಕೆಯ ಬೆನ್ನ ಮೇಲೆ ಕೂರುತ್ತದೆ. ಚಿಹಿರೊ ಅತ್ತ ಹೋಗುತ್ತಿದ್ದಂತೆ, ಆ ಭೂತ ಎಲ್ಲರನ್ನೂ ತಿನ್ನಲು ತೊಡಗುತ್ತದೆ.
ಚಿಹಿರೊ ಯುಬಾಬಾಳಿಗೆ ಕಾಣದಂತೆ ಅಡಗಲು ಆಕೆಯ ಮಗನ ಕೋಣೆಗೆ ನುಗ್ಗಿ ಅಡಗಿಕೊಳ್ಳುತ್ತಾಳೆ. ಯುಬಾಬಾ ಗಾಯಗೊಂಡು ಬಂದ ಹಾಕುನನ್ನು ರಕ್ಷಿಸಲು ಇಷ್ಟಪಡದೆ ಆತನನ್ನು ಸಾಯಲು ಬಿಟ್ಟು ಹೋಗುತ್ತಾಳೆ. ಆಕೆ ಹೋದನಂತರ ಚಿಹಿರೊ ಕೋಣೆಯಿಂದ ಹೊರಬರಲು ಪ್ರಯತ್ನಿಸಿದಾಗ, ಯುಬಾಬಾಳ ಮಗ ಆಕೆಯನ್ನು ತನ್ನೊಡನೆ ಆಡಿಕೊಂಡಿರಲು ಹೇಳುತ್ತಾನೆ. ಯಾಕೆ ಆತ ಹೊರಗೆ ಹೋಗಿ ಆಡಬಾರದು ಎಂದು ಚಿಹಿರೊ ಕೇಳಿದಾಗ, ಹೊರಗೆ ಹೋದರೆ ಮೈ ಕೊಳಕಾಗಿ ಕ್ರಿಮಿಗಳಿಂದ ರೋಗ ಬರುತ್ತದೆ, ಹಾಗಾಗಿ ಕೋಣೆಯಲ್ಲೇ ಆಡುತ್ತೇನೆ ಎಂದು ಆತ ಹೇಳುತ್ತಾನೆ ಮತ್ತು ಅವನ ಮಾತಿಗೆ ಒಪ್ಪದಿದ್ದರೆ ಯುಬಾಬಾಳನ್ನು ಕೂಗಿ ಕರೆಯುವುದಾಗಿಯೂ, ಚಿಹಿರೊಳನ್ನು ಅಲ್ಲಿ ಕಂಡರೆ ಯುಬಾಬಾ ಆಕೆಯನ್ನು ಖಂಡಿತ ಕೊಲ್ಲುವುದಾಗಿಯೂ ಹೆದರಿಸುತ್ತಾನೆ. ಚಿಹಿರೊ ಕಡೆಗೆ ಏನೂ ದಾರಿ ಕಾಣದೆ, ತನ್ನ ಕೊಳಕಾದ ಕೈ ತೋರಿಸಿ ಆತನನ್ನು ಹೆದರಿಸಿ ಅಲ್ಲಿಂದ ಹೊರ ಬರುತ್ತಾಳೆ. ಹಾಕುನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ವೇಳೆ, ಯುಬಾಬಾಳ ಮಗ ಹೊರಬಂದು ಅಳಲು ಶುರುಮಾಡುತ್ತಾನೆ. ಇದನ್ನು ಕೇಳಲಾಗದೆ, ಕಾಗದದ ಪಕ್ಷಿ ಯುಬಾಬಾಳ ರೂಪ ಪಡೆಯುತ್ತದೆ. ಅದನ್ನು ನೋಡಿ ಆಶ್ಚರ್ಯಗೊಳ್ಳುವ ಚಿಹಿರೊಗೆ ತಾನು ಯುಬಾಬಾ ಅಲ್ಲ ಆಕೆಯ ಅವಳಿ ಸಹೋದರಿ ಜೆನಿಬಾ ಎಂದು ಪರಿಚಯ ಮಾಡಿಕೊಳ್ಳುತ್ತಾಳೆ. ಯುಬಾಬಾ ಹಾಕು ಬಳಸಿ ತನ್ನ ಬಳಿ ಇದ್ದ ಚಿನ್ನದ ಮಾಂತ್ರಿಕ ಮುದ್ರೆಯನ್ನು ಕದ್ದಿದ್ದಾಳೆ, ಅದನ್ನು ಹಿಂಪಡೆಯಲು ತಾನು ಬಂದಿರುವುದಾಗಿ ಹೇಳುತ್ತಾಳೆ. ಅಳುತ್ತ ನಿಂತ ಯುಬಾಬಾಳ ಮಗನನ್ನು ಜೆನಿಬಾ ಇಲಿಯಾಗಿ ಪರಿವರ್ತಿಸಿ, ಅಲ್ಲಿದ್ದ ಯುಬಾಬಾಳ ಕಾಗೆಯನ್ನು ಚಿಕ್ಕ ಪಕ್ಷಿಯನ್ನಾಗಿ ಪರಿವರ್ತಿಸಿ, ಯುಬಾಬಾಳ ಮೂರೂ ತಲೆಗಳ ಗೊಂಬೆಗಳನ್ನು ಕೂಡಿಸಿ ಯುಬಾಬಾ ಮಗನನ್ನಾಗಿ ಮಾಡುತ್ತಾಳೆ. ಇದನ್ನು ಯಾರಿಗೂ ತಿಳಿಸದಂತೆ ಚಿಹಿರೊಗೆ ಎಚ್ಚರಿಸುತ್ತಾಳೆ. ಹಾಕುನನ್ನು ಕೊಂದು ತನ್ನ ಮುದ್ರೆ ಪಡೆಯಲು ಮುಂದಾಗುವ ಜೆನಿಬಾಳನ್ನು ತಡೆಯುವ ಚಿಹಿರೊ ಹಾಕು ಒಳ್ಳೆಯ ಹುಡುಗನಾಗಿದ್ದು ಆತನನ್ನು ಬಿಟ್ಟುಬಿಡುವಂತೆ ಕೋರಿಕೊಳ್ಳುತ್ತಾಳೆ. ಅದಕ್ಕೆ ಜೆನಿಬಾ ಒಪ್ಪದಿದ್ದಾಗ, ಹಾಕು ಜೊತೆಗೆ ಚಿಹಿರೊ ತಪ್ಪಿಸಿಕೊಂಡು ಕಮಾಜಿ ಇದ್ದ ಕೋಣೆಗೆ ಬಂದು ಬೀಳುತ್ತಾರೆ. ಅಲ್ಲಿ ಹಾಕುವಿಗೆ ಹಿಂದೆ ಭೂತ ಕೊಟ್ಟಿದ್ದ ಔಷಧಿಯನ್ನು ತಿನ್ನಿಸಿ ಅವನನ್ನು ಬದುಕಿಸಿಕೊಳ್ಳುತ್ತಾಳೆ. ಔಷಧಿ ತಿಂದ ಬಳಿಕ ತಾನು ಕದ್ದು ತಂದಿದ್ದ ಚಿನ್ನದ ಮುದ್ರೆ ಉಗುಳುವ ಹಾಕು ಡ್ರ್ಯಾಗನ್ ರೂಪದಿಂದ ಮನುಷ್ಯ ರೂಪಕ್ಕೆ ಮರಳಿ ಅಲ್ಲೇ ಸುಸ್ತಾಗಿ ನಿದ್ರಿಸುತ್ತಾನೆ. ಕಮಾಜಿಯೊಡನೆ ಮಾತನಾಡಿ ಇದನ್ನು ಸರಿಪಡಿಸಲು ಆ ಮುದ್ರೆಯನ್ನು ಜೆನಿಬಾಳಿಗೆ ಮರಳಿಸುವುದೇ ದಾರಿ ಎಂದು ಆತನ ಬಳಿ ಆಕೆಯ ಮನೆ ತಲುಪಲು ದಾರಿ ಕೇಳಿ ಅಲ್ಲಿಗೆ ಹೋಗುವ ರೈಲಿಗೆ ಟಿಕೆಟ್ ಪಡೆದು ಹೊರಡಲು ಸಿದ್ಧವಾಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸುವ ರಿನ್, ಬಂಗಾರ ಕೊಡುವ ಭೂತ ಎಲ್ಲರನ್ನೂ ತಿನ್ನಲು ತೊಡಗಿದ್ದು, ಅದು ಚಿಹಿರೊಳನ್ನು ಕೇಳುತ್ತಿದೆ ಮತ್ತು ಯುಬಾಬಾ ಅದರಿಂದ ಬಹಳ ಸಿಟ್ಟಾಗಿದ್ದಾಳೆ ಎಂದು ಹೇಳುತ್ತಾಳೆ. ಅದಕ್ಕೆ ಚಿಹಿರೊ ತಾನೇ ಆ ಭೂತವನ್ನು ಎದುರಿಸಿ ಅದನ್ನು ಸ್ನಾನಗೃಹದಿಂದ ಹೊರಗೆ ಕಳಿಸುವೆ ಎಂದು ಹೋಗುತ್ತಾಳೆ. ಆ ಭೂತವಿದ್ದ ಜಾಗಕ್ಕೆ ಹೋಗಿ ನೋಡಿದಾಗ, ಅದು ಸೆನ್(ಚಿಹಿರೊ) ಬೇಕು ಎಂದು ಹಠ ಹಿಡಿದು ಕೂತಿರುತ್ತದೆ. ಆ ಭೂತ ಚಿಹಿರೊಗೆ ಬಂಗಾರದ ಆಸೆಯೂ ತೋರಿಸುತ್ತದೆ. ಆದರೆ ಇದಕ್ಕೆ ಮಣಿಯದ ಚಿಹಿರೊ ಉಪಾಯದಿಂದ ತನ್ನ ಬಳಿ ಉಳಿದಿದ್ದ ಔಷಧಿಯನ್ನು ಅದರ ಬಾಯಿಗೆ ತುರುಕುತ್ತಾಳೆ. ಔಷಧಿಯ ಪ್ರಭಾವದಿಂದ ಆ ಭೂತ ಒದ್ದಾಡಿ, ಅಲ್ಲಿಯ ತನಕ ತಿಂದದ್ದನ್ನೆಲ್ಲ ಕಕ್ಕುತ್ತ, ಸಿಟ್ಟಿಗೆದ್ದು ಚಿಹಿರೊಳನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ಭೂತವನ್ನು ಹಾಗೆಯೇ ಸ್ನಾನಗೃಹದಿಂದ ಹೊರಕ್ಕೆ ಕರೆತರುವ ಚಿಹಿರೊ ಬೇಗನೆ ಓಡಿ ಹೋಗಿ ತನಗಾಗಿ ನದಿಯ ಬಳಿ ದೋಣಿಯೊಂದಿಗೆ ಕಾಯುತ್ತಿದ್ದ ರಿನ್ ಸೇರುತ್ತಾಳೆ. ಆ ಭೂತವೂ ಮತ್ತೆ ಆಕೆಯನ್ನು ಹಿಂಬಾಲಿಸುತ್ತಾ ನಿಧಾನವಾಗಿ ಬರುತ್ತದೆ. ರಿನ್ ಆ ಭೂತಕ್ಕೆ, ಚಿಹಿರೊಗೆ ಏನಾದರೂ ಅಪಾಯ ಮಾಡಿದರೆ ಅದರ ಗ್ರಹಾಚಾರ ನೆಟ್ಟಗಿರುವುದಿಲ್ಲ ಎಂದು ಕೂಗಿ ಎಚ್ಚರಿಸಿ ಚಿಹಿರೊಳನ್ನು ರೈಲು ನಿಲ್ದಾಣಕ್ಕೆ ತಂದು ನಿಲ್ಲಿಸುತ್ತಾಳೆ. ಒಂಟಿತನದಿಂದ ಬೇಸತ್ತಿದ್ದ ಆ ಭೂತ ರೈಲು ಬಂದೊಡನೆ ಚಿಹಿರೊ ಜೊತೆ ಬರುವುದಾಗಿ ಹೇಳಿ ಆಕೆಯೊಡನೆ ರೈಲು ಹತ್ತುತ್ತದೆ.
ಇತ್ತ ಸ್ನಾನದಗೃಹದಲ್ಲಿ ಯುಬಾಬಾ ಆ ಭೂತದಿಂದ ಆದ ನಷ್ಟ ಮತ್ತು ಅದು ಕೊಟ್ಟ ಬಂಗಾರ ಎಲ್ಲ ತಾಳೆ ಹಾಕಿ, ಲಾಭ ನಷ್ಟ ಲೆಕ್ಕ ಹಾಕುತ್ತ ಕೂತಿರುತ್ತಾಳೆ. ಕಮಾಜಿಯಿಂದ ಚಿಹಿರೊ ತನ್ನನ್ನು ಉಳಿಸಿದ ಬಗೆ ಮತ್ತು ತನಗಾಗಿ ಮಾಡಲು ಹೋಗಿರುವ ಕೆಲಸದ ಬಗ್ಗೆ ತಿಳಿದು ಹಾಕು ಯುಬಾಬಾ ಬಳಿ ಹೋಗಿ ತಾನು ಆಕೆಯ ಮಗನನ್ನು ಜೆನಿಬಾ ಬಳಿ ಬಿಟ್ಟಿರುವುದಾಗಿಯೂ, ಆತ ಮರಳಿ ಬೇಕಾದಲ್ಲಿ ಚಿಹಿರೊ ಮತ್ತು ಆಕೆಯ ತಂದೆತಾಯಿಯನ್ನು ಬಿಟ್ಟು ಕಳಿಸಲು ಒಪ್ಪುವಂತೆ ಷರತ್ತು ಹಾಕುತ್ತಾನೆ. ಅದಕ್ಕೆ ಒಪ್ಪುವ ಯುಬಾಬಾ, ಚಿಹಿರೊಗೆ ಒಂದು ಕೊನೆಯ ಪರೀಕ್ಷೆ ನಡೆಸುವುದಾಗಿಯೂ, ಅದರಲ್ಲಿ ಆಕೆ ಗೆದ್ದರೆ ಮಾತ್ರ, ಆಕೆ ತನ್ನ ತಂದೆತಾಯಿಯೊಡನೆ ಮನುಷ್ಯ ಲೋಕಕ್ಕೆ ಮರಳಬಹುದು ಎಂದು ಹೇಳುತ್ತಾಳೆ.
ಪ್ರಯಾಸದಿಂದ ಜೆನಿಬಾ ಮನೆ ತಲುಪುವ ಚಿಹಿರೊ, ಜೆನಿಬಾಳಿಗೆ ಆಕೆಯ ಚಿನ್ನದ ಮುದ್ರೆ ಹಿಂದಿರುಗಿಸಿ ಹಾಕುನಿಗೆ ಅಪಾಯ ಮಾಡದಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪುವ ಜೆನಿಬಾ, ಚಿಹಿರೊ ಮತ್ತು ಆಕೆಯ ಗೆಳೆಯರಿಗೆ ತಿನ್ನಲು ತಿಂಡಿ ಕೊಟ್ಟು ಉಪಚರಿಸುತ್ತಾಳೆ. ಹೇಗೆ ಯುಬಾಬಾ ಮತ್ತು ತಾನು ಅವಳಿ ಸಹೋದರಿಯರಾಗಿದ್ದರೂ ಸ್ವಭಾವದಲ್ಲಿ ಭಿನ್ನ ಎಂದು ಜೆನಿಬಾ ಚಿಹಿರೊಳಿಗೆ ಹೇಳುತ್ತಾಳೆ. ಯುಬಾಬಾಳಿಂದ ತಪ್ಪಿಸಿಕೊಳ್ಳಲು ಏನಾದರೂ ಮಾರ್ಗವಿದೆಯೇ ಎಂದು ಚಿಹಿರೊ ಕೇಳಿದಾಗ, ಆ ವಿಷಯದಲ್ಲಿ ತಾನು ಏನೂ ಸಹಾಯ ಮಾಡಲಾಗದು ಎಂದು ಜೆನಿಬಾ ಹೇಳುತ್ತಾಳೆ. ಆದರೆ ಅಷ್ಟರಲ್ಲಿ ಚಿಹಿರೊ ಜೊತೆ ಬಂದಿದ್ದ ಭೂತ, ಇಲಿ ಮತ್ತು ಚಿಕ್ಕ ಪಕ್ಷಿ ಆಕೆಗೆಂದು ಮಾಡಿದ ಕೂದಲು ಕಟ್ಟುವ ದಾರವನ್ನು ಕೊಟ್ಟು ಅದು ಆಕೆಯನ್ನು ಕಾಪಾಡುತ್ತದೆ ಎಂದು ಜೆನಿಬಾ ಹೇಳುತ್ತಾಳೆ. ಹಾಕು ಸ್ಥಿತಿ ಏನಾಗಿರಬಹುದೋ ಎಂದು ಚಿಂತಿಸುತ್ತಾ ಚಿಹಿರೊ ಸಂಕಟ ಪಡುತ್ತಿರಬೇಕಾದರೆ, ಹಾಕು ಡ್ರ್ಯಾಗನ್ ರೂಪದಲ್ಲಿ ಜೆನಿಬಾ ಮನೆ ಬಾಗಿಲಿಗೇ ಬರುತ್ತಾನೆ. ಜೆನಿಬಾ ಹಾಕುವನ್ನು ಕ್ಷಮಿಸಿರುವುದಾಗಿ ಹೇಳಿದ ನಂತರ ಚಿಹಿರೊ ಮತ್ತು ಆಕೆಯ ಗೆಳೆಯರನ್ನು ಹಾಕು ಅಲ್ಲಿಂದ ಕರೆದೊಯ್ಯುತ್ತಾನೆ. ಜೆನಿಬಾ ಭೂತವನ್ನು ತನ್ನೊಡನೆ ಇರಲು ಹೇಳಿ ಅದನ್ನು ಅಲ್ಲಿಯೇ ಉಳಿಸಿಕೊಳ್ಳುತ್ತಾಳೆ. ಆಕಾಶದಲ್ಲಿ ಹಾರಾಡುತ್ತಾ ಹೋಗುತ್ತಿರಬೇಕಾದರೆ, ಚಿಹಿರೊ ತಾನು ಚಿಕ್ಕವಳಿದ್ದಾಗ ಒಮ್ಮೆ ನದಿಯಲ್ಲಿ ಬಿದ್ದಿದ್ದಾಗಿಯೂ, ಇನ್ನು ತಾನು ಮುಳುಗಿದೆ ಎಂದುಕೊಂಡ ವೇಳೆ ನದಿ ಆಕೆಯನ್ನು ದಡ ಸೇರಿಸಿತು ಎಂದು ಹೇಳುತ್ತಾಳೆ. ತನ್ನನ್ನು ಕಾಪಾಡಿದ ನದಿಯನ್ನು ಕೊಹಾಕು ನದಿಯೆಂದು ಕರೆಯುತ್ತಿದ್ದರೆಂದು ಮತ್ತು ಹಾಕುವಿನ ಮೂಲ ಹೆಸರು ಕೊಹಾಕು ಎಂದೇ ಆಗಿರಬೇಕೆಂದು ಹಾಕುವಿಗೆ ಹೇಳುತ್ತಾಳೆ. ಅದಕ್ಕಾಗಿಯೇ ಆತನಿಗೆ ತನ್ನ ಹೆಸರು ಸದಾ ನೆನಪಿದ್ದದ್ದು ಎಂದು ಹೇಳಿದೊಡನೆ, ಹಾಕು ಡ್ರ್ಯಾಗನ್ ರೂಪ ಕಳಚಿ ಮನುಷ್ಯ ರೂಪ ತಾಳಿ ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ತನ್ನ ಹೆಸರು ಕೊಹಾಕು ಎಂದೂ ತಾನು ನದಿಯ ಭೂತ(spirit) ಎಂದು ಹೇಳುತ್ತಾನೆ ಮತ್ತು ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದ ಹೇಳಿ ಯುಬಾಬಾ ಬಳಿ ಕರೆದೊಯ್ಯುತ್ತಾನೆ. ಯುಬಾಬಾ ಆಕೆಗೆ ಕರಾರಿನಂತೆ ಒಂದು ಕೊನೆಯ ಪರೀಕ್ಷೆ ಇಡುತ್ತಾಳೆ. ಅಲ್ಲಿ ನಿಂತ ಅನೇಕ ಹಂದಿಗಳಲ್ಲಿ ತನ್ನ ತಂದೆತಾಯಿಯನ್ನು ಗುರುತಿಸುವಂತೆ ಚಿಹಿರೊಗೆ ಸವಾಲು ಹಾಕುತ್ತಾಳೆ. ಅದರಲ್ಲಿ ಯಾವುದೂ ತನ್ನ ತಂದೆತಾಯಿಯಲ್ಲ ಎಂದು ಹೇಳಿದೊಡನೆ ಆ ಹಂದಿಗಳೆಲ್ಲ ಯುಬಾಬಾ ಸೇವಕರಾಗಿ ಪುನರ್ ರೂಪ ತಾಳಿ ಚಿಹಿರೊ ಗೆದ್ದದ್ದಕ್ಕೆ ಶುಭ ಹಾರೈಸುತ್ತಾರೆ. ಯುಬಾಬಾ ಒಲ್ಲದ ಮನಸ್ಸಿನಿಂದ ಚಿಹಿರೊಳನ್ನು ಕಳುಹಿಸಿ ಕೊಡುತ್ತಾಳೆ. ಹಾಕು ಆಕೆಯನ್ನು ಕರೆದುಕೊಂಡು ನದಿ ದಾಟಿಸಿ ಬರಲು ಹೋಗುತ್ತಾನೆ. ತನ್ನ ತಂದೆ ತಾಯಿ ಎಲ್ಲಿ ಎಂದು ಚಿಹಿರೊ ಕೇಳಿದಾಗ, ಚಿಹಿರೊ ಯುಬಾಬಾಳ ಪರೀಕ್ಷೆ ಗೆದ್ದ ತಕ್ಷಣ ಅವರಿಬ್ಬರೂ ನದಿಯ ಇನ್ನೊಂದು ಬದಿಯಲ್ಲಿ ಎಚ್ಚರಗೊಂಡಿರುತ್ತಾರೆ ಎಂದು ಕರೆದೊಯ್ಯುತ್ತಾನೆ. ಮತ್ತೆ ಸಿಗುವುದಾಗಿ ವಿದಾಯ ಹೇಳಿ ಹಾಕು ಚಿಹಿರೊಳನ್ನು ಕಳುಹಿಸಿ ಕೊಡುತ್ತಾನೆ. ಆದರೆ ಪೂರ್ತಿ ಸುರಂಗ ದಾಟುವವರೆಗೂ ಹಿಂತಿರುಗಿ ನೋಡದಂತೆ ಎಚ್ಚರಿಸುತ್ತಾನೆ. ಚಿಹಿರೊ ಅದರಂತೆಯೇ ಓಡಿ ಹೋಗಿ ತನ್ನ ತಂದೆತಾಯಿಯನ್ನು ಸೇರುತ್ತಾಳೆ. ಅವರು ಏನೂ ನಡೆದೇ ಇಲ್ಲದಂತೆ ಚಿಹಿರೊಳಿಗೆ ಹಾಗೆ ಎಲ್ಲೆಂದರಲ್ಲಿ ಸುತ್ತಾಡಲು ಹೋಗದಂತೆ ಹೇಳಿ ಅಲ್ಲಿಂದ ಹೊರಡುತ್ತಾರೆ. ಕೊನೆಯ ಬಾರಿ ಒಮ್ಮೆ ಹಿಂತಿರುಗಿ ನೋಡಿಬಿಡಲೆ ಎಂದು ಚಿಹಿರೊ ಕತ್ತು ತಿರುಗಿಸುವಷ್ಟರಲ್ಲಿ ಹಾಕು ಹೇಳಿದ್ದು ನೆನಪಿಸಿಕೊಂಡು ಸುಮ್ಮನೆ ಹೊರಹೋಗುತ್ತಾಳೆ.
ಈ ಚಿತ್ರದಲ್ಲಿ ಕೆಲವೆಡೆ ದೃಶ್ಯಗಳ ನಡುವೆ ಒಮ್ಮೊಮ್ಮೆ ಸಂಬಂಧ ಅಸ್ಪಷ್ಟ ಎನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಹಯಾಒ ಮಿಯಜಾಕಿ ತನ್ನ ಚಿತ್ರ ನಿರ್ಮಾಣ ಪ್ರಾರಂಭಿಸಿದಾಗ, ಪೂರ್ತಿ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವುದಿಲ್ಲ. ಬದಲಿಗೆ, ಸ್ಥೂಲವಾಗಿ ಚಿತ್ರದ ಪಾತ್ರಗಳನ್ನು ಮೊದಲು ಸೃಷ್ಟಿಸಿ ಆನಂತರ ಅವುಗಳನ್ನು ಹೊಸೆದು ಕಥೆ ಹೆಣೆಯುತ್ತ, ಒಮ್ಮೆ ತಿದ್ದುತ್ತ ಅಥವಾ ಅಗತ್ಯ ಬಿದ್ದಲ್ಲಿ ಕಥೆಯನ್ನು ಮತ್ತೆ ಮತ್ತೆ ಬದಲಿಸುತ್ತ ತನಗೆ ಪೂರ್ತಿ ಸಮಾಧಾನವಾಗುವವರೆಗೂ ಕಥೆಯನ್ನು ಮುಗಿಸುವುದಿಲ್ಲ. ಆದರೆ ಇವೆಲ್ಲ ನ್ಯೂನತೆಗಳನ್ನು ಮೀರುವಂಥ ಕಲೆ ಆತನ ಚಿತ್ರದಲ್ಲಿ ಕಂಡುಬರುತ್ತದೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಒಂದೊಂದು ಕಲಾಕೃತಿಯಂತೆ ಕಾಣಿಸುತ್ತದೆ.
ಮಕ್ಕಳಿಗಾಗಿ ಈ ಚಿತ್ರ ಮಾಡಲಾಗಿದೆ ಎನ್ನಿಸಿದರೂ ದೊಡ್ಡವರೂ ಈ ಚಿತ್ರವನ್ನು ನೋಡತಕ್ಕದ್ದು. ನಮ್ಮ ಜೀವನದಲ್ಲಿನ ಬರುವ ಹಲವಾರು ಬದಲಾವಣೆಗಳನ್ನು ನೋಡಿ ನಾವು ಚಿಹಿರೊನ ರೀತಿ ಬೇಸರ ಪಟ್ಟುಕೊಳ್ಳುತ್ತೇವೆ. ಹೊಸ ಬದಲಾವಣೆಗಳಿಗೆ ಮನಸ್ಸು ಒಪ್ಪುವುದಿಲ್ಲ ಮತ್ತು ಹಳೆಯದೇ ಚೆನ್ನಾಗಿತ್ತು ಎಂದು ಮರುಗುತ್ತೇವೆ. ಆದರೆ ಒಮ್ಮೆ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಚಿಹಿರೊ ಎದುರಿಸಿದ ರೀತಿ ಎದುರಿಸಿದಾಗಲೇ ನಮಗೆ ಅದರಾಚೆಗಿನ ಜಗತ್ತು ಮತ್ತು ಜೀವನ ದರ್ಶನವಾಗುವುದು. ಇಲ್ಲಿ ನಾವು ಜೀವನದಲ್ಲಿ ಹಳೆಯದನ್ನು ಮರೆಯದೆ ಹೊಸತನ್ನು ಅಪ್ಪಿಕೊಳ್ಳುತ್ತ ತನ್ಮೂಲಕ ನಾವೂ ಬದಲಾಗುತ್ತ ಬೆಳೆಯುತ್ತ ಹೋಗುವುದನ್ನು ಮಾರ್ಮಿಕವಾಗಿ ಹೇಳಲಾಗಿದೆ.