ಬೆಲೆಯಿಲ್ಲದ ಬದುಕು
ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯನ್ನೂ ಕಸಿದು ಕೊಳ್ಳುವಷ್ಟು ಕ್ರೂರಿ. ನಿರಾತಂಕವಾದ ಬದುಕು ಕಾಣುವ ಹಂಬಲ ಕೊನೆ ಗಾಲದಲ್ಲಿ ಅದೆಷ್ಟು ಮನೆ ಮಾಡಿತ್ತೊ ಹರೆಯದಲ್ಲಿ ; ಅದೆ ರೀತಿ ಹಿಂದೆ ತಿರುಗಿ ನೋಡಿದಾಗ ಹರೆಯದ ಕನಸೂ ಅಂದುಕೊಂಡಂತೆ ಸಾಕಾರವಾಗದ ನೆನಪು ಬಿಚ್ಚಿಕೊಳ್ಳುವುದು ಇಳಿ ವಯಸ್ಸಿನಲ್ಲಿ.. ಆದರೂ ಬದುಕಿನೊಂದಿಗಿನ ಪ್ರೀತಿ ಸಾಯೋದೆ ಇಲ್ಲ. ಮತ್ತೆ ವಯಸ್ಸಿಗೆ ತಕ್ಕಂತೆ ಅಥವಾ ಕಾಲಕ್ಕೆ ತಕ್ಕಂತೆ ಮನಸ್ಸು ಬದಲಾಯಿಸಿಕೊಳ್ಳುತ್ತ ತೃಪ್ತಿ ಕಾಣಲು ಹವಣಿಸುತ್ತದೆ ಮನ. ಗಾದೆ ಇದೆಯಲ್ಲ "ಬಿದ್ದರೂ ಮೂಗು ಮೇಲೆ" ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮ ಈ ಮನಸ್ಸು. ಆದರೆ ಜೀವನ ಯಾವಾಗ, ಹೇಗೆ, ಯಾವ ರೀತಿ ತಿರುವು ಪಡೆಯುತ್ತದೆ ಅನ್ನುವುದು ಯಾರಿಗೂ ಗೊತ್ತಾಗುವುದೆ ಇಲ್ಲ. ನಾವಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ. ನಮ್ಮೆದುರಿಗೆ ಕಾಣುವುದೆಲ್ಲ ಸತ್ಯ ಅಂತ ನಾವಂದುಕೊಳ್ಳುತ್ತೇವೆ. ಆದರೆ ಅಲ್ಲಿ ಹಾಗಿರೋದೆ ಇಲ್ಲ. ಆ ನಿಯಾಮಕ ಇನ್ನೇನೊ ಬರೆದಿರುತ್ತಾನೆ. ಅದು ಗೊತ್ತಾಗುವುದು ಕಾಲ ಸರಿದಂತೆ ಅದರ ಪ್ರಭಾವ ಅರಿವಾಗುತ್ತ ನಡೆಯುತ್ತದೆ. ಅದಕ್ಕೆ ಮನುಷ್ಯನಿಗೆ. ಜೀವನದ ಅರಿವಾಗುತ್ತ ನಡೆಯುವುದು ವಯಸ್ಸಾದಂತೆ. ಹರೆಯದಲ್ಲಿ ಅದೆಷ್ಟು ಬಿಸಿ ರಕ್ತದ ಉಮೇದಿಯಲ್ಲಿ ಉರಿದಿರುತ್ತಾನೊ ವಯಸ್ಸಾದಂತೆ ಅಷ್ಟೆ ಪಾತಾಳದತ್ತ ಅವನ ಮನಸ್ಸು. ಆಗ ಅವನ ಬಾಯಲ್ಲಿ ವೇದಾಂತ, ಸತ್ಸಂಗ, ಆಶ್ರಮ ಕಾಣುವುದು. ಮಾತು, ನಡೆ, ನುಡಿ ಎಲ್ಲ ಬದಲಾಗುವುದು.
ಎಷ್ಟು ವಿಚಿತ್ರ ಅಲ್ಲವೆ ಈ ಬದುಕು!. ಬರಿ ಕನಸು ಕಾಣುತ್ತಲೆ ಕಳೆಯುವ ಕಾಲ ದಿನ ಹೋದಂತೆ ಬದುಕಿನ ಪಯಣ ಒಂದು ರೀತಿ ಕಗ್ಗಂಟಾದಾಗ ಹೇಗೆ ಬಿಡಿಸಿಕೊಳ್ಳಲಿ? ದಾರಿ ಎಲ್ಲಿ? ಹೇಗೆ? ನೂರಾರು ಪ್ರಶ್ನೆಗಳು ಕಿತ್ತು ತಿನ್ನುತ್ತಿರುತ್ತವೆ. ದಾರಿಯ ಮುಂದೆ ಅಡ್ಡ ಗೋಡೆಯಂತೆ ನಿಲ್ಲುವ ಸಮಸ್ಯೆಗಳು ಕಪ್ಪು ಭೂತದಂತೆ ರಾಚಿ ಎದೆ ತಿವಿಯುತ್ತವೆ. ಮನಸ್ಸನ್ನು ಪದೇ ಪದೆ ಘಾಸಿಗೊಳಿಸಿ ಹಿಂಸಿಸುವ ಯಮನ ಉರುಳು. ಗಂಟಲುಬ್ಬಿ ಬಂದಾಗ ಸಂತೈಸಬಹುದೆ ಯಮಧೂತ. ಇಲ್ಲ, ಖಂಡಿತಾ ಇಲ್ಲ. ಅವನಿಗೆ ತನ್ನ ಕಾರ್ಯ ಮಾಡುವುದಷ್ಟೆ ಗೊತ್ತು.. ಬದುಕು ಅಂದರೆ ಏನು ಎಂದು ಕಲಿಸುವ ಪಾಠ ಶಾಲೆ ಚಿಂತೆಯೆಂಬ ಅಗ್ನಿ ಕುಂಡ. ಪ್ರತಿಯೊಂದು ಸಂದರ್ಭ, ಘಟನೆ ಮನುಷ್ಯನಿಗೆ ಒಂದೊಂದು ವಿಷಯ ಗಣಿತದಂತೆ ಕಬ್ಬಿಣದ ಕಡಲೆ, ಅರಿವಾದಾಗ ಸಿಹಿ ಬೆಲ್ಲ. ಎರಡೂ ಬದುಕನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಅದರ ಮೇಲೆ ನಿಂತಿದೆ ಅಂತ್ಯದ ಜೀವನ. ಬರುವುದೆಲ್ಲ ಹೇಗೆ ಎದುರಿಸಿ ಮುನ್ನಡೆಯಬೇಕೆನ್ನುವ ಎಚ್ಚರಿಕೆ ಮನುಷ್ಯನಿಗೆ ಇರಬೇಕು. ಬೆಳೆಸಿಕೊಳ್ಳಬೇಕು.
ಅದಕ್ಕೆ ಕವಿ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳಲು ತಾನೂ ಹಲವಾರು ಕವಿತೆಗಳನ್ನು ಬರೆದ ಅಜರಾಮರವಾಗಿ ಇರಲೆಂದು. ಈ ಸಾಲುಗಳು ಮನಃಪಟಲಕ್ಕೆ ಆಗಾಗ ಬಂದಪ್ಪಳಿಸುವದು. ಜೋರಾಗಿ ಮನೆಯೆಲ್ಲ ಮೊಳಗುವಂತೆ ಅದೆಷ್ಟು ಸಾರಿ ಹೇಳಿಕೊಂಡೆನೊ ಗೊತ್ತಿಲ್ಲ. " ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ." " ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ" " ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬದುಕು" ಹೀಗೆ ಹಲವಾರು ಹಾಡುಗಳನ್ನು ಹೇಳಿ ನೊಂದ ಮನದ ನೋವ ಶಮನಗೊಳಿಸಿಕೊಳ್ಳಲು ನೆರವಾದ ಕವಿವರ್ಯರೆಲ್ಲರಿಗೂ ಸದಾ ನಾಭಿಯಿಂದ ಹೊರಡುವುದು ಕೃತಜ್ಞತೆಯ ಭಾವ. ಮನಸ್ಸು ಭಾವೋದ್ವೇಗದ ಉತ್ತುಂಗದ ಶಿಖರ ಏರಿದಾಗಲೆಲ್ಲ ಅಲೆ ಅಲೆಯಾಗಿ ಹರಿದು ಬರುವುದು ನನ್ನೊಳಗಿನ ಕಕ್ಕುಲತೆಯ ಇನ್ನಿಲ್ಲದ ಅನಿಸಿಕೆಗಳು. ಇಂತಹ ಸ್ಥಿತಿಯಲ್ಲಿ ನುಗ್ಗಿ ಬರುವ ಶಬ್ದಗಳು ಅನೇಕ ಬರಹ ಬರೆಸಿವೆ. ಆದರೆ ನನಗ್ಯಾವತ್ತೂ ನನ್ನ ಬರಹದ ಕುರಿತು ಸಮಾಧಾನ, ಸಾಕು , ಎಂತಹ ಬರಹ ಬರೆದೆ ಅನ್ನುವ ತೃಪ್ತಿ ಇದುವರೆಗೂ ಸಿಗಲೇ ಇಲ್ಲ. ಮೇರು ಕವಿಯ ಕಿವಿ ಮಾತುಗಳು ನನ್ನ ಸುತ್ತಲೂ ಗಿರಕಿ ಹೊಡೆಯುತ್ತಲೆ ಇರುತ್ತವೆ. ಎಂತಹ ಅದ್ಭುತ ಪಾಂಡಿತ್ಯ, ಅದೆಷ್ಟೋ ಜನರ ಮನ ಸೂರೆಗೊಂಡ ಬರಹಗಳು. ಸಂತೈಸಿ ತಾಯಂತೆ ಜೋಗುಳ ಹಾಡುವ ಲಾಲಿ ಹಾಡುಗಳು. ನಿಜಕ್ಕೂ ಮನ ಮೂಕವಾಗುತ್ತದೆ ಪ್ರತಿ ಬಾರಿ ಓದಿದಾಗ, ಗುಣಗುಣಿಸಿದಾಗ. ಬಿದ್ದು ಹೋಗುವ ಜೀವಗಳಿಗೆ ಅಮೃತ ಸಂಜೀವಿನಿ. ಅರ್ಥ ಮಾಡಿಕೊಂಡಷ್ಟೂ ಮುಗಿಯದ ಖನಿ ಅವರೆಲ್ಲ ಬರೆದಿಟ್ಟ ಸಾಲುಗಳು.
ಬದುಕನ್ನು ನಾವೆಷ್ಟು ಪ್ರೀತಿಸುತ್ತೇವೊ ಅಷ್ಟೆ ಪ್ರೀತಿ ಈ ಬದುಕು ನಮ್ಮನ್ನು ಪ್ರೀತಿಸೋದೆ ಇಲ್ಲ ಯಾಕೆ? ಪ್ರತೀ ಹೆಜ್ಜೆಗೂ ಏನಾದರೊಂದು ತೊಡಕು. ಶಾಂತವಾಗಿ ಕುಳಿತು ಸದಾ ಒಂದಲ್ಲಾ ಒಂದು ವಿಷಯದತ್ತ ಅವಲೋಕಿಸುತ್ತಲೆ ಇದ್ದರೂ ಎಲ್ಲೊ ಏನೊ ತಪ್ಪಾಗಿದೆಯೇನೊ ಅನಿಸುತ್ತದೆ ಒಮ್ಮೊಮ್ಮೆ.. ಆದರೆ ಎಲ್ಲಿ ಅಂತ ಗೊತ್ತಾಗೋದು ತುಂಬಾ ತಡವಾದಾಗ ಹಪಹಪಿಸುತ್ತದೆ ಮನಸ್ಸು. ಎಲ್ಲರಲ್ಲೂ ಇದೆ ಗೊಂದಲವಾ? ಅಥವಾ ನಾನೊಬ್ಬನೆ ಹೀಗಾ? ಇರಲಿಕ್ಕಿಲ್ಲ. ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಇದ್ದಿದ್ದೆ. ನಾನ್ಯಾಕೆ ಒಬ್ಬಳೆ ತಲೆ ಕೆಡಿಸಿಕೊಳ್ಳಲಿ? ಹತ್ತರಲ್ಲಿ ಹನ್ನೊಂದು ಅಂತ ಎಷ್ಟೋ ಸಾರಿ ಸಮಾಧಾನ ಪಟ್ಟಕೊಂಡಿದ್ದಿದೆ. ಆದರೆ ಆ ಹತ್ತರಲ್ಲಿ ಹನ್ನೊಂದು ನಾನ್ಯಾಕೆ ಅದೆ? ಆಗಬೇಕು.? ಹೀಗಂದುಕೊಂಡಾಗ ಮತ್ತೆ ಅದೇ ವ್ಯಥೆ. ಛೆ! ಈ ಜೀವನವೆ ಇಷ್ಟು. ನೊಂದ ಮನಕೆ ನೋವು ಮತ್ತೆ ಮತ್ತೆ. ತೀರಕ್ಕೆ ಬಡಿಯುವ ಅಲೆಗಳಂತೆ.
ಹಾಗಾದರೆ ಬದುಕಿಗೆ ಸೈರಣೆಯೆ ಮುಖ್ಯ ಅಂದಾಂಗಾಯಿತು. ಕಾರಣ ಬಂದಿದ್ದೆಲ್ಲ ಸಹಿಸಿಕೊಂಡು ಬದುಕುವುದಿದೆಯಲ್ಲ ಅದು ಕಷ್ಟ. ಆದರೂ ಸಾಯಲಾಗದೆ, ಅಥವಾ ಕಾಲನ ಕರೆ ಬರುವವರೆಗೂ ಕಾಯ ಬೇಕೆಂಬ ನಿಯಮ ಮೀರಲಾಗದೆ ಅಥವಾ ಇನ್ನಾವ ಕಾರಣಕ್ಕೊ ಬದುಕಿರುತ್ತೇವಲ್ಲ ; ಒಳಗೊಳಗೆ ಎದುರಿಸುತ್ತ ಚಿಂತೆಗಳ ಎದುರಿಗೆ ಮುಖವಾಡ ಹೊತ್ತ ನಗೆ ಗಾಯಕ್ಕೆ ಮುಲಾಮು ಹಚ್ಚಿ ಮರ್ಯಾದೆ ಕೊಟ್ಟಂತೆ.
ನಿಜ ಯಾರನ್ನೂ ಬಿಡದೀ ಮಾಯೆ. ಎಲ್ಲಿಯವರೆಗೆ ಬುಡದಿಂದ ಬೆಳೆಸಿಕೊಂಡು ಬಂದ ಆಸೆ, ಆಕಾಂಕ್ಷೆಗಳು ಕೈಗೂಡುವುದಿಲ್ಲವೊ ಅಲ್ಲಿಯವರೆಗೂ ಮನುಷ್ಯನಿಗೆ ಚಿಂತೆ ತಪ್ಪಿದ್ದಲ್ಲ. ಅದರಲ್ಲೂ ನಿರ್ವಹಿಸಬೇಕಾದ ಕರ್ತವ್ಯ ನಮ್ಮಿಂದ ಈಡೇರಿಸಲು ಸಾಧ್ಯವಾಗದಿರುವಾಗ ಆಗುವ ಹಿಂಸೆ, ನೋವು, ಸಂಕಟ ಸಹಿಸಲಸಾಧ್ಯ. ಅನುಭವ ಜೀವನದಲ್ಲಿ ಪಾಠ ಕಲಿಸಿದರೆ ಅಸಹಾಯಕತೆ ಜೀವವನ್ನೆ ಹಿಂಡುತ್ತದೆ. ಇರಲಾಗದ ಬದುಕಿಗೆ ಬೆನ್ನು ತಿರುಗಿಸಿ ಮಲಗಿ ಬಿಡುವಷ್ಟು ಹತಾಷೆ.
ಇಂಥಾ ಪರಿಸ್ಥಿತಿಯಲ್ಲೆ ಮನುಷ್ಯನ ಮನದಲ್ಲಿ ಮೂಡುವ ಪ್ರಶ್ನೆ "ದೇವರಿದ್ದಾನಾ? ಇದ್ದರೆ ಅವನಿಗ್ಯಾಕೆ ಅರ್ಥ ಆಗುತ್ತಿಲ್ಲ ನನ್ನ ಸಮಸ್ಯೆ? " ಕೊನೆಯಲ್ಲಿ ಬರುವ ನಿಟ್ಟುಸಿರಿನ ಕಣ್ಣೀರು ಮನಸ್ಸಿಗೆ ಕೊಡುವ ಸಮಾಧಾನವಷ್ಟೆ. ಆದರೆ ಸಮಸ್ಯೆ ಯಾವತ್ತೂ ಸಮಸ್ಯೆ ಆಗಿಯೆ ಉಳಿದಾಗ ಅನಿಸುವುದು ಮನಕೆ ಬದುಕೆಂದರೆ ಇದೇನಾ? ಇಷ್ಟೇನಾ?
2-2-2017. 5.52pm