ರುಚಿ ಕಳಕೊಂಡ ಟೊಮೆಟೊ

ರುಚಿ ಕಳಕೊಂಡ ಟೊಮೆಟೊ

ಮುಳ್ಳುಸೌತೆ, ಸಾಂಬಾರು ಸೌತೆ, ಬೆಂಡೆಕಾಯಿ, ತೊಂಡೆಕಾಯಿ, ಚೀನಿಕಾಯಿ, ಕುಂಬಳಕಾಯಿ, ಅಲಸಂಡೆ, ಎಲೆಕೋಸು, ಬೀಟ್-ರೂಟ್, ಕ್ಯಾರೆಟ್ ಇತ್ಯಾದಿ ತರಕಾರಿಗಳ ರುಚಿ ಗಮನಿಸಿದ್ದೀರಾ?

ಪ್ರತಿಯೊಂದು ತರಕಾರಿಗೂ ಅದರದ್ದೇ ರುಚಿಯಿದೆ. ಈ ರುಚಿ ಹೇಗೆ ಬರುತ್ತದೆ? ಅದನ್ನು ಬೆಳೆಸುವ ವಿಧಾನದಿಂದ; ಅದನ್ನು ಬೆಳೆಸುವಾಗ ಪೋಷಕಾಂಶ ಒದಗಿಸಲಿಕ್ಕಾಗಿ ಹಾಕಿದ ಗೊಬ್ಬರಗಳಿಂದ ಎಂಬುದು ಖಂಡಿತ.

ಅದೊಂದು ಕಾಲವಿತ್ತು. ತರಕಾರಿ ತಿನ್ನುವವರಿಗೆ ಅದರ ರುಚಿ ಮುಖ್ಯವಾಗಿತ್ತು. ಈಗೇನಾಗಿದೆ? ತರಕಾರಿಗಳ ಇತರ ಗುಣಲಕ್ಷಣಗಳು ಮುಖ್ಯವಾಗಿವೆ! ಉದಾಹರಣೆಗೆ, ತರಕಾರಿಗಳ ತಾಜಾತನ, ಕಪ್ಪುಕಲೆಗಳಿಲ್ಲದ ಹೊರಮೈ, ತರಕಾರಿಗಳನ್ನು ಸಾಗಿಸುವಾಗ ಹಾನಿಯಾಗದ ಗುಣ.

ಟೊಮೆಟೊ ಹ್ಯಾಗಿದೆ ನೋಡಿ. ದುಂಡಗಿನ ಕೆಂಪುಕೆಂಪಾದ ಟೊಮೆಟೊ ನೋಡುವುದೇ ಖುಷಿ. ಅದಕ್ಕೊಂದು ಘಮವಿದೆ. ಇದಕ್ಕೆ ಕಾರಣ ರಸಭರಿತ ತಿರುಳು. ಪಾಶ್ಚಾತ್ಯ ದೇಶಗಳಲ್ಲಿ ಕಾರ್ಖಾನೆಗಳಲ್ಲಿ ಮೊಳೆ ಅಥವಾ ಡಬ್ಬಗಳನ್ನು ಉತ್ಪಾದಿಸಿದಂತೆ ಈಗ ಟೊಮೆಟೊ ಬೆಳೆಸಲಾಗುತ್ತದೆ. ಉದಾಹರಣೆಗೆ, ಉತ್ತರ ಅಮೇರಿಕಾದ ಯುಎಸ್ಎ ದೇಶದ ಫ್ಲೋರಿಡಾದಲ್ಲಿ, ವಿಸ್ತಾರ ಪ್ರದೇಶದಲ್ಲಿ ಟೊಮೆಟೊ ಬೆಳೆದು ವರುಷವಿಡೀ ರಫ್ತು ಮಾಡಲಾಗುತ್ತದೆ.

ಬ್ಯಾರಿ ಎಸ್ಟಾಬ್ರೂಕ್ ಎಂಬ ಲೇಖಕರು, “ಟೊಮೆಟೊಲ್ಯಾಂಡ್” ಎಂಬ ತಮ್ಮ ಪುಸ್ತಕದಲ್ಲಿ, ಆ ರೀತಿಯಲ್ಲಿ ಬೆಳೆಸಿದ ಟೊಮೆಟೊದ್ದು ಕೇವಲ ಮೇಲ್ನೋಟದ ಚೆಲುವು ಎಂದು ಬರೆದಿದ್ದಾರೆ. ಹ್ಯಾಗಿದ್ದ ಟೊಮೆಟೊ ಹ್ಯಾಗಾಯಿತು ಎಂಬುದನ್ನು ಪರಿಶೀಲಿಸಿದರೆ, ಭವಿಷ್ಯದಲ್ಲಿ ನಮಗೆ ಸಿಗುವ ತರಕಾರಿಗಳ ಅವಸ್ಥೆ ಅರ್ಥವಾದೀತು.

ಸೋಲನೇಸಿಯೇ ಎಂಬ ಸಸ್ಯಕುಟುಂಬಕ್ಕೆ ಸೇರಿದ ತರಕಾರಿ ಟೊಮೆಟೊ. ಇದರ ಮೂಲ ಚೀನಾ, ಭಾರತ, ಮಧ್ಯ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ. ಇದರಲ್ಲಿ ಸುಮಾರು ೩,೦೦೦ ಪ್ರಭೇದಗಳಿವೆ. ಆದರೆ, ವ್ಯಾಪಕವಾಗಿ ಬೆಳೆಸಲಾಗುವ ಟೊಮೆಟೊವನ್ನು ಕೇವಲ ಒಂದು ಪ್ರಭೇದದಿಂದ – ಸ್ಲೈಕೊಪರ್ಸಿಕಮ್ – ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಬೃಹತ್ ಪರಿಮಾಣದ ಉತ್ಪಾದನೆ ಹಾಗೂ ಮಾರಾಟಕ್ಕೆ ಸೂಕ್ತವಾಗುವಂತೆ ವಿಜ್ನಾನಿಗಳು ಮಾರ್ಪಡಿಸಿದ್ದಾರೆ.
ಯಾಕೆಂದರೆ, ಸಮುದಾಯಗಳಿಗೆ ಕಾರ್ಖಾನೆಯಲ್ಲಿ ಅಚ್ಚುಕಟ್ಟಾಗಿ ಉತ್ಪಾದಿಸಿದ ವಸ್ತುಗಳಂತಹ ಟೊಮೆಟೊ ಬೇಕಾಗಿತ್ತು. ಅದಕ್ಕಾಗಿ ವಿಜ್ನಾನಿಗಳು ಬಹಳ ಶ್ರಮಪಟ್ಟು ಸ್ವಪರಾಗಸ್ಪರ್ಶದ ಟೊಮೆಟೊ ರೂಪಿಸಿದರು. ಹಾಗಾಗಿ ಪರಕೀಯ ಪರಾಗಸ್ಪರ್ಶಕ್ಕೆ ಅವಕಾಶವೇ ಇಲ್ಲ. ಪರಕೀಯ ಪರಾಗಸ್ಪರ್ಶವಾದರೆ, ಇತರ ಸಸ್ಯಗಳ ಪರಾಗಕಣಗಳು ಜೊತೆ ಸೇರಿ, ಸಂಪನ್ನ ಬೀಜಗಳು ಉತ್ಪತ್ತಿ ಆಗುತ್ತವೆ; ಇದರಿಂದಾಗಿ ಟೊಮೆಟೊದ ಗುಣಮಟ್ಟ ಬದಲಾಗುತ್ತದೆ.
ಟೊಮೆಟೊದಲ್ಲಿ ವಿಜ್ನಾನಿಗಳು ಏನನ್ನೆಲ್ಲ ಬದಲಾಯಿಸಿದರು ಗೊತ್ತೇ? ಮೊದಲಾಗಿ, ಟೊಮೆಟೊದ ಆಕಾರವನ್ನು ಅಚ್ಚುಕಟ್ಟಾಗಿ ದುಂಡಗೆ ಅಥವಾ ಪಿಯರ್ ಹಣ್ಣಿನ ಆಕಾರಕ್ಕೆ ಮಾರ್ಪಡಿಸಿದರು. ಎರಡನೆಯದಾಗಿ, ಟೊಮೆಟೊದ ಎಕರೆವಾರು ಉತ್ಪಾದನೆ ಹೆಚ್ಚಿಸಲಿಕ್ಕಾಗಿ, ಅದರಲ್ಲಿ ಕೆಲವು ಕೀಟಗಳಿಗೆ ಪ್ರತಿರೋಧ ಗುಣ ಅಭಿವೃದ್ಧಿ ಪಡಿಸಿದರು. ಮೂರನೆಯದಾಗಿ ಅದರ ಬಾಳ್ವಿಕೆ ಹೆಚ್ಚಿಸಿದರು. ಜೊತೆಗೆ, ಸಾಗಾಟ ಮಾಡುವಾಗ ಅದರ ಆಕಾರ ಬದಲಾಗದಂತೆ ಮಾಡಲಿಕ್ಕಾಗಿ, ಅದರ ಚರ್ಮವನ್ನು ದೃಢಗೊಳಿಸಿದರು.

ಇದರಿಂದಾಗಿ ಏನಾಯಿತು? ಟೊಮೆಟೊದ ಚರ್ಮ ಹೆಚ್ಚೆಚ್ಚು ದೃಢವಾದಂತೆ ಅದು ಹೆಚ್ಚೆಚ್ಚು ರುಚಿ ಕಳೆದುಕೊಳ್ಳುತ್ತದೆ ಎಂದು ವಿವರಿಸುತ್ತಾರೆ ಎಸ್ಟಾ ಬ್ರೂಕ್. ಯಾಕೆಂದರೆ, ಟೊಮೆಟೊದ ಒಳಗಿರುವ ರಸಭರಿತ ಭಾಗ (ಲೊಕ್ಯುಲಾರ್ ಜೆಲ್ಲಿ) ಗಟ್ಟಿಯಾಗಿಲ್ಲ. ಇದೇ ಭಾಗ ಟೊಮೆಟೊಕ್ಕೆ ಆಮ್ಲೀಯತೆ (ರುಚಿ) ನೀಡುತ್ತದೆ. ಟೊಮೆಟೊ ಗಟ್ಟಿಯಾಗುವುದು ಅದರ ಚರ್ಮದಿಂದಾಗಿ; ಆದರೆ ಇದು ಸ್ವಲ್ಪ ಸಿಹಿಯಾಗಿದ್ದರೂ ಇದರಲ್ಲಿ ಆಮ್ಲೀಯತೆ ಇಲ್ಲ. ಸಸ್ಯವಿಜ್ನಾನಿಗಳು ಟೊಮೆಟೊದ ಚರ್ಮವನ್ನು ಗಟ್ಟಿ ಮಾಡುತ್ತಾ ಮಾಡುತ್ತಾ ಅದರ ರುಚಿಯನ್ನು ಬಲಿಗೊಟ್ಟರು.

ಈ ಪ್ರಕ್ರಿಯೆಯ ಅಂತಿಮ ಪರಿಣಾಮ ಏನಾಯಿತು? ಯುಎಸ್ಎ ದೇಶದಲ್ಲಿ ನಡೆಸಿದ ಸರ್ವೆಗಳಿಂದ ತಿಳಿದು ಬಂದ ವಿಷಯ: ೧೯೬೦ರ ದಶಕದಲ್ಲಿ ಬೆಳೆಯುತ್ತಿದ್ದ ಟೊಮೆಟೊಗಳಿಗೆ ಹೋಲಿಸಿದಾಗ, ಈಗಿನ ಟೊಮೆಟೊಗಳಲ್ಲಿ ಹಲವು ಪೋಷಕಾಂಶಗಳು ಕಡಿಮೆ: ವಿಟಮಿನ್ ಪ್ರಮಾಣ ಶೇ.೩೦, ಥಯಾಮಿನ್ ಪ್ರಮಾಣವೂ ಶೇ.೩೦, ನಿಯಾಸಿನ್ ಪ್ರಮಾಣ ಶೇ.೧೯ ಮತ್ತು ಕ್ಯಾಲ್ಸಿಯಂ ಪ್ರಮಾಣ ಶೇ.೬೨ ಕಡಿಮೆ.

ಈಗ ಜೈವಿಕ ಸಂಕರವಿಜ್ನಾನ ಮೂಲಕ, ತರಕಾರಿಗಳ ರುಚಿಯನ್ನೂ ಸಸ್ಯವಿಜ್ನಾನಿಗಳು ಬದಲಾಯಿಸುತ್ತಿದ್ದಾರೆ ಎಂಬುದೇ ಆತಂಕದ ವಿಷಯ. ಸಸ್ಯಗಳ ವಿವಿಧ ಪ್ರಭೇದಗಳನ್ನು ಪರಿಶೀಲಿಸಿ, ರುಚಿ ಮತ್ತು ಪೋಷಕಾಂಶಗಳಿಗಾಗಿ ಅತ್ಯುತ್ತಮ ತಳಿಗಳನ್ನು ಬೆಳೆಯುವ ಕಾಲ ಈಗಿನದಲ್ಲ. ಈಗ ಏನಿದ್ದರೂ ಹೆಚ್ಚೆಚ್ಚು ಉತ್ಪಾದಿಸಿ, ಹೆಚ್ಚೆಚ್ಚು ಲಾಭ ಗಳಿಸುವ ಹುನ್ನಾರ.

ನಮ್ಮ ದೇಶದ ಸಸ್ಯ ವೈವಿಧ್ಯ ಅಗಾಧ. ಇಂದಿಗೂ ರುಚಿರುಚಿಯಾದ ಮತ್ತು ಪೋಷಕಾಂಶಭರಿತ ಸಾವಿರಾರು ಸಸ್ಯಗಳೂ ತರಕಾರಿಗಳೂ ನಮ್ಮಲ್ಲಿವೆ. ಕರಾವಳಿ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಜನಜನಿತವಾಗಿರುವ ತಂಬುಳಿಗಳನ್ನು ನೆನಪು ಮಾಡಿಕೊಳ್ಳಿರಿ. ಒಂದೆಲಗ, ಚಕ್ರಮುನಿ, ದೊಡ್ಡಪತ್ರೆ ಇತ್ಯಾದಿ ಸಸ್ಯಗಳ ಎಲೆಗಳಿಂದ ಎಷ್ಟು ಸುಲಭವಾಗಿ ನಮ್ಮ ತಾಯಂದಿರು ರುಚಿ ಹಾಗೂ ಪೋಷಕಾಂಶ ಸಮೃದ್ಧವಾದ ತಂಬುಳಿಗಳನ್ನು ತಯಾರಿಸುತ್ತಾರೆ! ಈ ಸಸ್ಯಗಳನ್ನೆಲ್ಲ ನಾವು ಮನೆಮನೆಗಳಲ್ಲಿ ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ, ಕೃಷಿ ಉತ್ಪಾದನೆಯು ಒಂದು ಬೃಹತ್ “ಕೈಗಾರಿಕೆ”ಯಾಗಿ ಬದಲಾದಂತೆ, ಟೊಮೆಟೊಕ್ಕೆ ಆದ ಗತಿ ಇತರ ಸಸ್ಯಗಳಿಗೂ ಕಾದಿದೆ.
 

Comments