ಯುದ್ಧ ಮತ್ತು ಶಾಂತಿಗಳ ನಡುವಿನ ದ್ವಂದ್ವ

ಯುದ್ಧ ಮತ್ತು ಶಾಂತಿಗಳ ನಡುವಿನ ದ್ವಂದ್ವ

2017 ಮಾರ್ಚ್ ತಿಂಗಳಲ್ಲಿ ದೆಹಲಿಯ ಕಾಲೇಜೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗುರ್ಮೇಹರ್ ಕೌರ್ ನೀಡಿದ ಒಂದು ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಜಕೀಯ ಮುಖಂಡರು, ಮಂತ್ರಿಗಳು, ಕ್ರಿಕೆಟ್ ಆಟಗಾರರು, ಟಿವಿ ಚಾನೆಲ್ ಗಳು ಅವಳನ್ನು ಖಂಡಿಸಿದವು. ಸಾಮಾಜಿಕ ಮಾಧ್ಯಮದ ಮೂಲಕ ಅತ್ಯಾಚಾರದ ಬೆದರಿಕೆಯನ್ನೂ ನೀಡಲಾಗಿತ್ತು. ಅಷ್ಟಕ್ಕೂ ಅವಳ ತಪ್ಪೇನು? ಹೋದ ವರ್ಷ (2016ರಲ್ಲಿ) ಕಾಲೇಜಿನಲ್ಲಿ ನಡೆದ ಯುದ್ಧ ಮತ್ತು ಶಾಂತಿಯ ಕುರಿತಾದ ಒಂದು ವಿಚಾರಗೋಷ್ಠಿಯಲ್ಲಿ ಆಕೆ ಒಂದು ಭಿತ್ತಿಪತ್ರವನ್ನು ಹಿಡಿದಿದ್ದಳು; ಅದರ ಒಕ್ಕಣೆ ಹೀಗಿತ್ತು: ‘ನನ್ನ ಅಪ್ಪನನ್ನು ಪಾಕಿಸ್ತಾನ ಕೊಲ್ಲಲಿಲ್ಲ, ಯುದ್ಧ ಕೊಂದಿತು; ಯುದ್ಧ ಯಾವ ದೇಶಕ್ಕೂ ಒಳಿತನ್ನು ಉಂಟು ಮಾಡುವುದಿಲ್ಲ’. 1999ರ ಕಾರ್ಗಿಲ್ ಕದನದಲ್ಲಿ ಅವಳ ತಂದೆ ಮಡಿದಿದ್ದರು, ಅವಳಾಗ ಎರಡು ವರ್ಷದ ಮಗು.

೨೦೧೬ ಅಕ್ಟೋಬರದ ನಡುಮಧ್ಯಾಹ್ನ ಅಮೆರಿಕಾದ ಕ್ಯಾಲಿಫೋರ್ನಿಯದ ಒಂದು ಸಣ್ಣಪಟ್ಟಣದ ವಾಣಿಜ್ಯ ಸಂಕೀರ್ಣದಲ್ಲಿ ನಾನು, ಹೆಂಡತಿ ಸುಮತಿ ಮತ್ತು ತಂಗಿ ಅರುಂಧತಿ ಊಟಕ್ಕೆ ಕೂತಿದ್ದೆವು. ನಮ್ಮ ಹತ್ತಿರದ ಮೇಜಿನಲ್ಲಿ ಆ ದೇಶದ ಮಧ್ಯವಯಸ್ಕ ನಾಗರಿಕರೊಬ್ಬರು ತಮ್ಮ ಊಟದ ಬಟ್ಟಲು ಹಿಡಿದು ಬಂದು ಕುಳಿತರು. ನಮ್ಮನ್ನು ನೋಡಿ ನೀವು ಭಾರತದವರೇ ಎಂದು ಕೇಳುತ್ತಾ ಮಾತಿಗೆ ಆರಂಭಿಸಿದರು. ಅವರು ಅಮೆರಿಕಾದ ಸೇನೆಯಲ್ಲಿ ಟ್ರಕ್ ಚಾಲಕರಾಗಿ ಕುವೈಟ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಯುದ್ಧದ ಬಗ್ಗೆ ಕುತೂಹಲದಿಂದ ಕೇಳಿದೆ. ಅವರ ಈ ಹೇಳಿಕೆ ಚಿಂತನೆಗೆ ಗ್ರಾಸವಾಯಿತು: ‘ಒಬ್ಬ ಸೈನಿಕನ ಜೀವ ಹರಣ ಆದರೆ ೨೦೦ ಮಂದಿ ನಾಗರಿಕರು ಕೊಲ್ಲಲ್ಪಡುತ್ತಾರೆ!’
ಅದರ ಕೆಲವೇ ದಿನ ಮೊದಲು, ವಾಷಿಂಗ್ಟನ್ ನಗರದ ವಿಯೆಟ್ನಾಂ ಸ್ಮಾರಕಕ್ಕೆ ಭೇಟಿ ನೀಡಿದ್ದು ನೆನಪಾಯಿತು. ಅಮೆರಿಕಾ 1950-60ರ ದಶಕಗಳಲ್ಲಿ ವಿಯೆಟ್ನಾಂ ಯುದ್ಧದಲ್ಲಿ ತನ್ನನ್ನು ತೊಡಗಿಸಿಕೊಂಡು  ಸಾವಿರಗಟ್ಟಲೆ ಯುವಕರನ್ನು ಯುದ್ಧಕ್ಕಾಗಿ ಅಲ್ಲಿಗೆ ಕಳುಹಿಸಿತ್ತು. ಯುದ್ಧದಲ್ಲಿ ಸತ್ತುಹೋದವರ ಹೆಸರುಗಳನ್ನು ಆ ಸ್ಮಾರಕದಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಮಡಿದವರ ಆತ್ಮೀಯ ಬಂಧುಗಳು ಅಲ್ಲಿಗೆ ಬಂದು ಹೆಸರಿನ ಮುಂದೆ ಹೂಗುಚ್ಛವನ್ನಿಟ್ಟು ಮೌನವಾಗಿಯೋ ಕಣ್ಣೀರು ಸುರಿಸಿಯೋ ಅವರನ್ನು ನೆನಪಿಸುವ ದೃಶ್ಯ ಹೃದ್ರಾವಕವಾಗಿತ್ತು.
ಯುದ್ಧ ಮತ್ತು ಶಾಂತಿಯ ದ್ವಂದ್ವ !
ಯುದ್ಧ ಮತ್ತು ಶಾಂತಿಯ ಕುರಿತಾದ ಚಿಂತನೆ ಮನುಷ್ಯನಲ್ಲಿ ಅನಾದಿಕಾಲದಿಂದಲೇ ನಡೆದು ಬಂದಿದೆ. ಮನುಷ್ಯನಿಗೆ ತಾನು ಬಲಶಾಲಿಯಾಗಬೇಕು, ಪ್ರಕೃತಿ, ವನ್ಯಜೀವಿಗಳು, ಇತರ ಮನುಷ್ಯರು ತನ್ನ ಅಡಿಯಾಳಾಗಬೇಕೆಂಬ ಗುಣ ಸ್ವಭಾವಜನ್ಯ. ರಾಜನಾದವನು ತನ್ನ ರಾಜ್ಯವನ್ನು ವಿಸ್ತರಿಸಲು, ಧಾರ್ಮಿಕ ಗುರುಗಳು ತಮ್ಮ ಧರ್ಮ ಪ್ರಚಾರಕ್ಕೋಸ್ಕರ, ವ್ಯಾಪಾರಿ ಸಂಸ್ಥೆಗಳು ವ್ಯಾಪಾರದ ಮೂಲಕ ಸಂಪತ್ತು ಕೂಡಿಸಲು, ತಮ್ಮ ಜನಾಂಗ ಇತರೆಲ್ಲ ಜಾತಿಗಿಂತ ಶ್ರೇಷ್ಠವೆಂದು ಬಗೆದು ಅವರನ್ನು ಸದೆಬಡಿಯಲು, ಮತ್ತು ಇತ್ತೀಚೆಗಿನ ದಿನಗಳಲ್ಲಿ ಸಾಮೂಹಿಕ ಹತ್ಯೆಗೆ ದಾರಿಯಾಗಬಲ್ಲ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲು, ಇಲ್ಲವೇ ಆಕ್ರಮಣಶೀಲ ರಾಷ್ಟ್ರೀಯತೆಗೆ ಒಳಗಾಗಿ ದೇಶಗಳು ಪರಸ್ಪರ ಯುದ್ಧ ಮಾಡಿವೆ, ಯುದ್ಧಕ್ಕೆ ಇಳಿದಿವೆ.
ಆಧುನಿಕ ಜಗತ್ತಿನ ಅತಿಮಾರಕ ಶಸ್ತ್ರಾಸ್ತ್ರಗಳ ಆವಿಷ್ಕಾರದ ಮೊದಲು ಯುದ್ಧಗಳಲ್ಲಿ ಜೀವ ಹಾನಿ ಮತ್ತು ಸಂಪತ್ತಿನ ನಾಶ ನೇರವಾಗಿ ಯುದ್ಧ ಭೂಮಿಯಲ್ಲಿ ಹಾಗೂ ಗೆದ್ದ ಸೇನೆ ಸಂಪತ್ತನ್ನು ದೋಚಿಕೊಳ್ಳುವ, ಸೋತ ರಾಜ್ಯದ ನಾಗರಿಕರ ಮೇಲೆ ನಡೆಸುವ ಅತ್ಯಾಚಾರಗಳ ಮೂಲಕವಷ್ಟೇ ಸಂಭವಿಸುತ್ತಿತ್ತು. ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಅಣ್ವಸ್ತ್ರಗಳನ್ನು ಬಳಸಿ ಪ್ರತ್ಯಕ್ಷವಲ್ಲದೆ ಪರೋಕ್ಷವಾಗಿ ಅಪಾರವಾದ ಹಾನಿ ಉಂಟುಮಾಡುವ ಪರಿಪಾಠ ಆರಂಭವಾಯಿತು. ಪರಮಾಣು ಬಾಂಬುಗಳು ನಗರಗಳನ್ನು ಮಾತ್ರವಲ್ಲ ಇನ್ನೂ ಹುಟ್ಟಲಿರುವ ಮಕ್ಕಳನ್ನೂ ಬಲಿತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಬಾಂಬಿನ ಪ್ರಯೋಗದಿಂದಾಗುವ ವಿಕಿರಣದ ಹಾನಿಯನ್ನು ಅನೇಕ ಪೀಳಿಗೆಗಳು ಅನುಭವಿಸಬೇಕಾಗುತ್ತದೆ. 2012ರ ಜೂನ್ ನಲ್ಲಿ ‘ದ ಎಕನಾಮಿಸ್ಟ್’ ಸಾಪ್ತಾಹಿಕದಲ್ಲಿ ಪ್ರಕಟವಾದ ವರದಿಯ ಪ್ರಕಾರ 2ನೇ ಮಹಾಯುದ್ಧದಲ್ಲಿ ಸತ್ತವರ ಸಂಖ್ಯೆ ಸುಮಾರು 7 ಕೋಟಿ; ಅದರಲ್ಲಿ ಮೂರನೇ ಎರಡಂಶ ಯುದ್ಧದಲ್ಲಿ ಭಾಗವಹಿಸಿದವರಾಗಿರಲಿಲ್ಲ.
1950 ಮತ್ತು 1960ರ ದಶಕಗಳಲ್ಲಿ ಅಮೆರಿಕಾವು ವಿಯೆಟ್ನಾಂ ಯುದ್ಧದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಿತ್ತು. ನಾಗರಿಕರ ಆಸ್ತಿಪಾಸ್ತಿ, ಪಶುಸಂಪತ್ತು, ಪ್ರಕೃತಿಯ ನಾಶ ಅವ್ಯಾಹತವಾಗಿತ್ತು. (ಬಾಂಬಿನ ದಾಳಿಗೆ, ಸುಟ್ಟ ಬಟ್ಟೆಗಳನ್ನು ಬಿಚ್ಚಿ ನಗ್ನಳಾಗಿ ಹೆದರಿ ಓಡುತ್ತಿದ್ದ ವಿಯೆಟ್ನಾಮಿನ ಮುಗ್ಧ ಮಗುವೊಬ್ಬಳ ಚಿತ್ರ ಅಮೆರಿಕದ ಬರ್ಬರತೆಗೆ ಚಾರಿತ್ರಿಕ ದಾಖಲೆಯಾಗಿ ಇಂದೂ ಉಳಿದಿದೆ, ಅವಳು ‘ನಪಾಂ’ ಬಾಲಕಿ” ಎಂಬ ಹೆಸರಿನಲ್ಲಿ ಬೆಳಕಿಗೆ ಬಂದಳು).
ಯುದ್ಧದಲ್ಲಿ ಗೆದ್ದವರಿಗೆ ಏನು ಪ್ರಯೋಜನವಾಗುತ್ತದೆ ಎಂಬ ಪ್ರಶ್ನೆಗೆ ಸುಲಭ ಉತ್ತರ ಸಿಗದು. ಗೆದ್ದಾಗ ತಮ್ಮ ಉದ್ದೇಶ ಸಾಧನೆಯಾಯಿತೆಂಬ ಭ್ರಮೆ ಹುಟ್ಟುತ್ತದೆ. ಆದರೆ ದೀರ್ಘಕಾಲದಲ್ಲಿ ಏನು ಪರಿಣಾಮ ಆಗಬಹುದು ಎಂಬುದನ್ನೂ ನಾವು ಅರಿತುಕೊಳ್ಳಬೇಕು. ಯುದ್ಧಾನಂತರ ನಷ್ಟವಾದ ಶಸ್ತ್ರಾಸ್ತ್ರಗಳನ್ನು ಹಿಂದಿನ ಮಟ್ಟಕ್ಕೆ ಶೇಖರಿಸಲು, ಸತ್ತ, ಗಾಯಗೊಂಡ ಸೈನಿಕರ ಜಾಗದಲ್ಲಿ ಮರುನೇಮಕ ಅವರ ತರಬೇತಿ, ವಾಹನಗಳ ಖರೀದಿ, ಸತ್ತ ಸೈನಿಕರ ಕುಟುಂಬಕ್ಕೆ ಪರಿಹಾರ, ಉದ್ಯೋಗ, ಧ್ವಂಸವಾದ ಮನೆಗಳ ನಿರ್ಮಾಣ ಇತ್ಯಾದಿ ಅನೇಕ ರೀತಿಯ ವೆಚ್ಚಗಳಿವೆ. ಈ ವೆಚ್ಚಕ್ಕೆ ಅಗತ್ಯವಾದ ಸಂಪನ್ಮೂಲ ಶೇಖರಿಸಲು ಜನರ ಮೇಲೆ ತೆರಿಗೆ ಹೇರಬೇಕಾಗಿಯೂ ಬರಬಹುದು. ಕೆಲವೊಮ್ಮೆ ಇತರ ಅಗತ್ಯ ಯೋಜನೆಗಳನ್ನು ಮುಂದೂಡಿ ಆ ಹಣವನ್ನು ಸೇನೆಯ ಖರ್ಚಿಗೆ ವಿನಿಯೋಗಿಸುವ ಸಾಧ್ಯತೆಯೂ ಇದೆ.
ಅಮೆರಿಕಾದ ಬ್ರೌನ್ ಯುನಿವರ್ಸಿಟಿಯ ವಾಟ್ಸನ್ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯು 15  ವರ್ಷಗಳ ಅಧ್ಯಯನದ ಬಳಿಕ 2016 ರಲ್ಲಿ ಪ್ರಕಟಿಸಿದ ವರದಿ ಯಾರನ್ನೂ ಬೆಚ್ಚಿಬೀಳಿಸಬಹುದು. ಅದರ ಪ್ರಕಾರ 2001-2016 ರ ಅವಧಿಯಲ್ಲಿ ಇರಾಕ್, ಅಫ್ಘಾನಿಸ್ತಾನ, ಮತ್ತು ಅದಕ್ಕೆ ಸಂಬಂಧಿಸಿ ಸಿರಿಯಾ ಮತ್ತು ಪಾಕಿಸ್ತಾನಗಳಲ್ಲಿ ನಡೆದ ಹಿಂಸೆಯನ್ನೂ ಒಳಗೊಂಡು 6,00,000 ಸೈನಿಕರೂ, ನಾಗರಿಕರೂ ಯುದ್ಧಗಳಲ್ಲಿ ಜೀವ ಕಳಕೊಂಡಿದ್ದಾರೆ; 70,00,000  ಮಂದಿ ನಿರಾಶ್ರಿತರಾಗಿದ್ದಾರೆ ಮತ್ತು 13 ಟ್ರಿಲಿಯ ಡಾಲರು ಹಣ ಖರ್ಚಾಗಿದೆ (1 ಟ್ರಿಲಿಯ ಅಂದರೆ  1 ಲಕ್ಷ ಕೋಟಿ= 10,00,00,00,000. ಒಂದು ಡಾಲರಿನ ಬೆಲೆ 65 ರುಪಾಯಿ ಎಂದು ಲೆಕ್ಕಹಾಕಿದರೆ ಇದು ಸುಮಾರು 845, 00,000 ಕೋಟಿಯಷ್ಟಾಗಬಹುದು; ಭಾರತದ 2016ರ ರಾಷ್ಟ್ರೀಯ ಆದಾಯ 2.264 ಟ್ರಿಲಿಯ ಡಾಲರು ಆಗಿತ್ತು ಎಂಬುದನ್ನು ಗಮನಿಸಿದರೆ ಈ ವೆಚ್ಚದ ಅಗಾಧತೆ ಊಹಿಸಬಹುದು!)
ಯುದ್ಧವಿರೋಧಿ ಚಳವಳಿಗಳು:
ಹೋದ ಎರಡು ಶತಮಾನಗಳಲ್ಲಿ ಅನೇಕ ಚಿಂತಕರು, ಬರಹಗಾರರು, ದಾರ್ಶನಿಕರು, ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಯುದ್ಧಗಳ ವಿರುದ್ಧ ದನಿ ಎಬ್ಬಿಸಿದ್ದಾರೆ. 19 ನೇ ಶತಮಾನದಲ್ಲಿ ಇಮಾನುಯೆಲ್ ಕ್ಯಾಂಟ್, ರಾಲ್ಫ್ ವಾಲ್ಡೋ ಎಮರ್ಸನ್, ಹೆನ್ರಿ ಡೇವಿಡ್ ಥೋರೊ, 20ನೇ ಶತಮಾನದಲ್ಲಿ ಸಿಗ್ಮಂಡ್ ಫ್ರಾಯಡ್, ಆಲ್ಬರ್ಟ್ ಐನ್ ಸ್ಟೈನ್, ಲೀನಸ್ ಪೌಲಿಂಗ್, ಬರ್ಟ್ರಂಡ್ ರಸ್ಸೆಲ್ ಮುಂತಾದವರು ತಮ್ಮ ತಮ್ಮ ದೇಶಗಳಲ್ಲಿ ಶಾಂತಿಗಾಗಿ ಒತ್ತು ನೀಡಿದ್ದರು. ಮೊದಲನೇ ಮಹಾಯುದ್ಧವನ್ನು ವಿರೋಧಿಸಿದ ರಸ್ಸೆಲ್ ರಾಷ್ಟ್ರ ದ್ರೋಹದ ಆಪಾದನೆಯಲ್ಲಿ ಜೈಲಿಗೆ ಹೋಗಬೇಕಾಯಿತು. ಆ ಮೇಲೆಯೂ  ಅವರ ನಿಲುವು ಮುಂದುವರಿಯಿತು ಮಾತ್ರವಲ್ಲ ಅಮೆರಿಕಾದ ವಿಯೆಟ್ನಾಂ ನೀತಿಯನ್ನು ತೀವ್ರವಾಗಿ ಖಂಡಿಸಿದರು. 1960 ರ ದಶಕದಲ್ಲಿ ಅಮೆರಿಕಾದ ನಾಮ್ ಚೋಂಸ್ಕಿ ತನ್ನ ದೇಶವು ದೂರದ ವಿಯೆಟ್ನಾಮಿನ ಯುದ್ಧದಲ್ಲಿ ಭಾಗವಹಿಸುವುದನ್ನು ನಿರ್ಭಿಡೆಯಾಗಿ ಟೀಕಿಸಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.  ಆದರೆ ಮುಂದಿನ ವರ್ಷಗಳಲ್ಲಿ ಯುದ್ಧ ವಿರೋಧಿ ಚಳುವಳಿಯ ಕಾವು ಬಹಳ ತೀವ್ರವಾಗಿ ಕಾಲಕ್ರಮೇಣ ಅಮೆರಿಕಾ ವಿಯೆಟ್ನಾಮಿನಿಂದ ತನ್ನ ಸೇನೆಯನ್ನು ಹಿಂಪಡೆಯಬೇಕಾಯಿತು.
ಈ ಶತಮಾನದ ಆರಂಭದಲ್ಲಿ ಅಮೆರಿಕಾ ಮತ್ತು ಇಂಗ್ಲೆಂಡ್ ದೇಶಗಳು ಇರಾಕಿನ ಮೇಲೆ ಯುದ್ಧ ಸಾರಿದಾಗ ಜಗತ್ತಿನಾದ್ಯಂತ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಗಳಲ್ಲಿ ಗಣ್ಯರಾದ ವಂ. ಜೆಸ್ಸಿ ಜ್ಯಾಕ್ಸನ್, ಚಲಚಿತ್ರರಂಗದ ವನೆಸ್ಸಾ ರೆಡ್ ಗ್ರೇವ್ ಮತ್ತು ಟಿಮ್ ರಾಬಿನ್ಸ್, ಲಂಡನ್ ನ ಮೇಯರ್ ಕೆನ್ ಲಿವಿಂಗ್ಸ್ಟೋನ್, ಮಾಜಿ ಸಂಸದ ಟೋನಿ ಬೆನ್, ನೋಬೆಲ್ ಪ್ರಶಸ್ತಿ ವಿಜೇತ ಹೆರೋಲ್ಡ್ ಪೈಂಟರ್  ಮುಂತಾದವರು ಭಾಗವಹಿಸಿದ್ದಲ್ಲದೆ ಎರಡೂ ದೇಶದ ನಾಯಕರನ್ನು ಖಂಡಿಸಿದರು. (ಪ್ರತಿಭಟಿಸಿದವರನ್ನು ರಾಷ್ಟ್ರದ್ರೋಹಿಗಳೆಂದು ದಮನಿಸಲಿಲ್ಲ ಎಂಬ ವಿಷಯ ಗಮನಾರ್ಹ). ಈ ವಿರೋಧವನ್ನು ಕಡೆಗಣಿಸಿ ಅಮೆರಿಕ-ಬ್ರಿಟನ್ ಗಳು 2003ರಲ್ಲಿ ಆರಂಭಿಸಿದ ಮಧ್ಯಪ್ರಾಚ್ಯದ ಯುದ್ಧ ಕೊನೆಗೊಂಡದ್ದು 2011 ರಲ್ಲಿ. ಅದರಿಂದ ಉಂಟಾದ ಬೇಗೆ ಇನ್ನೂ ತಣಿದಿಲ್ಲ ಎಂಬುದು ಕಟು ವಾಸ್ತವ.
ಭಾರತ ಮತ್ತು ಪಾಕಿಸ್ತಾನ:
ದೇಶವಿಭಜನೆಯಾಗಿ 70  ವರ್ಷಗಳು ಕಳೆದರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ವೈಷಮ್ಯ ಇನ್ನೂ ಅಂತ್ಯವಾಗಿಲ್ಲ. ಈಗಾಗಲೇ ನಾಲ್ಕು ಯುದ್ಧಗಳು (1947, 1965, 1971 ಮತ್ತು 1999ರಲ್ಲಿ) ನಡೆದಿವೆ.  ಒಂದು ವರದಿಯ ಪ್ರಕಾರ ಸುಮಾರು 1,00,000 ಕುಟುಂಬಗಳು ಸಂಕಷ್ಟಕ್ಕೆ ಗುರಿಯಾಗಿವೆ. 1971ರ ಯುದ್ಧದಲ್ಲಿ3843  ಭಾರತೀಯ ಮತ್ತು 8000 ಪಾಕಿಸ್ತಾನಿ ಸೈನಿಕರು ಹತರಾಗಿದ್ದರು.
ಎರಡೂ ದೇಶಗಳು ನಿರಂತರವಾಗಿ ಕೋಟಿಗಟ್ಟಲೆ ಹಣವನ್ನು ಯುದ್ಧದ ತಯಾರಿಗೆ ವ್ಯಯಿಸುತ್ತಿವೆ. 2015 ರಲ್ಲಿ ಭಾರತ ಸುಮಾರು 3.32 ಲಕ್ಷ ಕೋಟಿ ರುಪಾಯಿಗಳನ್ನು (ರಾಷ್ಟ್ರೀಯ ಆದಾಯದ ಶೇ.2.3) ರಕ್ಷಣಾ ವೆಚ್ಚಕ್ಕೆ ವಿನಿಯೋಗಿಸಿತ್ತು. ಪಾಕಿಸ್ತಾನವು ಸುಮಾರು 60,450 ಕೋಟಿ ರುಪಾಯಿಗಳನ್ನು (ರಾಷ್ಟ್ರೀಯ ಆದಾಯದ ಶೇ. 3.4) ವಿನಿಯೋಗಿಸಿತ್ತು.
ಸ್ವತಂತ್ರ ವರದಿಗಳಂತೆ, ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಪರಮಾಣು ಅಸ್ತ್ರಗಳ ಸಂಗ್ರಹವನ್ನು ಹೆಚ್ಚಿಸುತ್ತಾ ಬಂದಿವೆ. ಎರಡೂ ದೇಶಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟನ್ನು ಪ್ರಯೋಗಿಸಿದರೂ  ಒಂದು ವಾರದಲ್ಲಿ 2.1 ಕೋಟಿ ಜನರ ಪ್ರಾಣಕ್ಕೆ ಹಾನಿಯಾಗಬಹುದು; ಜಗತ್ತಿನ ಓಝೋನ್ ಪದರಿನ ಅರ್ಧ ನಾಶವಾಗಿ, ಹವಾಮಾನ ವೈಪರೀತ್ಯವಾಗಿ ಕೃಷಿಗೆ ಸಂಚಕಾರವಾಗಲಿದೆ ಎಂದು ವರದಿಗಳು ಬಂದಿವೆ.
ರಕ್ಷಣಾ ವೆಚ್ಚಕ್ಕೆ ರಾಷ್ಟ್ರೀಯ ಆದಾಯದ 2.3% ವನ್ನು ವಿನಿಯೋಗಿಸುವ ನಮ್ಮ ದೇಶ ಸಾರ್ವಜನಿಕ ಆರೋಗ್ಯಕ್ಕೆ ಕೊಡಮಾಡುವ ಹಣ 1% ದಷ್ಟೂ ಇಲ್ಲ. ಕನಿಷ್ಟ ಸೌಕರ್ಯ ಒದಗಿಸಲು ಒಟ್ಟು ಆದಾಯದ 2% ದಷ್ಟನ್ನಾದರೂ ನೀಡಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಇದೆ. 2015ರ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಕಾರ್ಯಗತ ಗೊಳಿಸಬೇಕಿದ್ದರೆ ಈ ವೆಚ್ಚ 4-5 % ಮಟ್ಟವನ್ನು ತಲಪಬೇಕು.
ಅದೇ ರೀತಿ ಸಾರ್ವಜನಿಕ ಶಿಕ್ಷಣಕ್ಕೋಸ್ಕರ 1999 ರಲ್ಲಿ ರಾಷ್ಟ್ರೀಯ ಆದಾಯದ 4.4% ದಷ್ಟನ್ನು ಕೊಡಮಾಡುತ್ತಿದ್ದ ಸರಕಾರ 2017 ರಲ್ಲಿ ಅದನ್ನು 3.71 % ಕ್ಕೆ ಇಳಿಸಿದೆ. ಕೊಠಾರಿ ಆಯೋಗದ ಸಲಹೆಯ ಪ್ರಕಾರ ಶೇಕಡಾ 6% ದಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿರಿಸಬೇಕಿತ್ತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶಿಕ್ಷಣಕ್ಕೆ 6% ದಷ್ಟು ಸಂಪತ್ತನ್ನು ವಿನಿಯೋಗಿಸಲಾಗುತ್ತಿದೆ. ಪ್ರಗತಿಶೀಲ ದೇಶಗಳಾದ ಭಾರತ ಮತ್ತು ಪಾಕಿಸ್ತಾನಗಳು ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಸೌಕರ್ಯಗಳಿಗಿಂತ ಹೆಚ್ಚಿನ ಆದ್ಯತೆಯನ್ನು ರಕ್ಷಣೆಗೆ ನೀಡುತ್ತಿವೆ.
ಲೆಕ್ಕಕ್ಕೆ ಸಿಗದ ವೆಚ್ಚ:
ಪ್ರತಿ ಯುದ್ಧದಲ್ಲಿಯೂ ಲೆಕ್ಕಕ್ಕೆ ಸಿಗದ ವೆಚ್ಚ ಅಗಾಧ. ಗುರ್ಮೇಹರ್ ಕೌರ್ ಅವಳದು ಗಮನಕ್ಕೆ ಬಂದ ಒಂದು ಉದಾಹರಣೆ. ನಿವೃತ್ತ ಸೇನಾ ಅಧಿಕಾರಿಯೊಬ್ಬರ ಪತ್ನಿ ಇತ್ತೀಚೆಗೆ ಒಂದು ಲೇಖನದಲ್ಲಿ ತಮ್ಮ ವಾಹನ ಚಾಲಕನನ್ನು ಉಲ್ಲೇಖಿಸಿದರು: ‘ ಮೇಡಂ, ಯಾರು ಯುದ್ಧವನ್ನು ಬಯಸುತ್ತಾರೆ? ನಾನು ಕೊಲ್ಲುವ ಸೈನಿಕನಿಗೆ ಅವನ ಕುಟುಂಬವಿರುತ್ತದೆ. ನನಗೂ ಕುಟುಂಬವಿದೆ ಎಂದು ಅವನಿಗೂ ಗೊತ್ತು. ನಮಗೆ ಕಾದಾಡಲು ಇಷ್ಟವಿಲ್ಲ. ನಮ್ಮ ಕರ್ತವ್ಯ ಎಂದು ಹೋರಾಡುತ್ತೇವೆ. ಯುದ್ಧವೆಂದರೆ ನನಗೂ ವೈರಿಗೂ ತುಂಬಲಾರದ ನಷ್ಟವೇ.’ ಅವರ ಮತ್ತೊಂದು ಮಾತು ನಮ್ಮನ್ನು ಕಾಡುತ್ತದೆ: ‘ಸೈನಿಕರು ಸಿಡಿದ ಪೆಲೆಟ್ ಗಳಿಂದ ಎಳೆವಯಸ್ಸಿನ ಮಕ್ಕಳು ದೃಷ್ಟಿ ಕಳಕೊಂಡ ಕರುಣಾಜನಕ ಕತೆಗಳ ಬಗ್ಗೆ ಓದುವಾಗ , 1965 ರ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರನ್ನು ಭೇಟಿ ಮಾಡುವಾಗ, ಗಾಯಗೊಂಡ ಸೈನಿಕರನ್ನು ನೋಡುವಾಗ ರಾಷ್ಟ್ರ ಧ್ವಜವನ್ನು ಹೊದಿಸಿದ ಸತ್ತ ಸೈನಿಕರ ಶವಪೆಟ್ಟಿಗೆಗಳನ್ನು ಊರಿಗೆ ಕಳುಹಿಸುವಾಗ, ಯುದ್ಧದಲ್ಲಿ ಯಾರೇ ಗೆದ್ದರೂ ಅದು ನಿಷ್ಫಲ ಎಂದು ನಂಬುವ ಸ್ಥಿತಿಗೆ ನಾನು ಬಂದಿದ್ದೇನೆ’.
ಧೋರಣೆಯಲ್ಲಿ ಬದಲಾವಣೆ:
ಯುದ್ಧ ಮತ್ತು ಸೈನಿಕ ಕಾರ್ಯಾಚರಣೆಗಳು ಯಾವುದೇ ದೇಶಕ್ಕೆ ನಿರಂತರ ಪ್ರಯೋಜನ ತರುವುದಿಲ್ಲ. ಯಾವುದೇ ಗೆಲವು ತಾತ್ಕಾಲಿಕವಾಗಿರಬಹುದು. ಯಾಕೆಂದರೆ ಸೋತ ದೇಶ ಸೇಡು ತೀರಿಸಲು ತಯಾರು ಮಾಡುತ್ತಲೇ ಇರುತ್ತದೆ.  ಆದರೆ ಸಂಕಷ್ಟಕ್ಕೆ ಬಲಿಯಾಗುವವರು ಅಮಾಯಕರಾದ ನಾಗರಿಕರು-ಹೆಂಗಸರು, ಮಕ್ಕಳು, ವಯಸ್ಸಾದವರು ಮತ್ತು ವಿಕಲಚೇತನರು. ಎಲ್ಲಾ ದೇಶಗಳ ಧುರೀಣರು ಈ ಬಗ್ಗೆ ಚಿಂತಿಸಿ ತಮ್ಮ ನೀತಿಯ ಆದ್ಯತೆಗಳೇನೆಂಬುದನ್ನು ವಸ್ತುನಿಷ್ಠರಾಗಿ ಯೋಚಿಸಬೇಕು.
ಉದಾಹರಣೆಗೆ ಭಾರತ ಮತ್ತು ಪಾಕಿಸ್ತಾನದ ನಾಯಕರು ಸಹಬಾಳ್ವೆಗಾಗಿ ಒಟ್ಟಾಗಿ ದುಡಿದರೆ ಎರಡು ದೇಶಗಳಿಗೂ ದೀರ್ಘಾವಧಿ ಪ್ರಯೋಜನ ಲಭಿಸೀತು. ನಾಗರಿಕರ ಜೀವನ ಮಟ್ಟ ಎಷ್ಟೋ ಸುಧಾರಿಸಬಹುದು. ಅಷ್ಟಕ್ಕೂ ಎರಡೂ ದೇಶಗಳ ಹಿನ್ನೆಲೆ, ಚರಿತ್ರೆ, ಭಾಷೆ, ಜೀವನಕ್ರಮ ಮುಂತಾದವುಗಳಲ್ಲಿ ಬಹಳ ಸಾಮ್ಯ ಇದೆ ಎಂದು ಎಲ್ಲರಿಗೂ ತಿಳಿದ ವಿಚಾರ.
ಇದರ ಮೊದಲ ಹೆಜ್ಜೆ ನಾಗರಿಕರ ಮಟ್ಟದಲ್ಲಿ ಪರಸ್ಪರ ಸಂಪರ್ಕ ಮತ್ತು ವಿಚಾರ ವಿನಿಮಯ ನಡೆಸಲು ಆಸ್ಪದ ನೀಡುವುದು. ವ್ಯಾಪಾರ ಸಂಬಂಧವನ್ನು ಬೆಳೆಸುವುದು, ಇನ್ನೊಂದು ಹೆಜ್ಜೆ. ಸಾಂಸ್ಕೃತಿಕ ತಂಡಗಳ ಪರಸ್ಪರ ಭೇಟಿ ಮತ್ತೊಂದು ಹೆಜ್ಜೆ.
ಕೆಲವು ವರ್ಷಗಳ ಹಿಂದೆ ಲಾಲ ಕೃಷ್ಣ ಆಡ್ವಾಣಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಸುಧೀಂದ್ರ ಕುಲಕರ್ಣಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಸಾಮಾಜಿಕ ಕಾರ್ಯಕರ್ತ, ಮಾಜಿ ಐಎ ಎಸ್ ಅಧಿಕಾರಿ ಹರ್ಷ ಮಂದರ್  ದೆಹಲಿಯಲ್ಲಿರುವ ತಮ್ಮ ವಯಸ್ಸಾದ ಅಪ್ಪ ಅಮ್ಮನನ್ನು ಅವರ ಹುಟ್ಟೂರಾದ ರಾವಲ್ಪಿಂಡಿಗೆ ಕರಕೊಂಡು ಹೋಗಿದ್ದರು. ಇಬ್ಬರೂ ಅಲ್ಲಿನ ಜನರ ಆತ್ಮೀಯತೆಯನ್ನು ಆತಿಥ್ಯವನ್ನು ಮೆಚ್ಚಿ ಬರೆದಿದ್ದರು. (ಪ್ರತಿಯೊಬ್ಬರ ಅನುಭವವೂ ಹಾಗೆಯೇ ಇರಬೇಕೆಂದಿಲ್ಲ!).
ಗುರ್ಮೇಹರ್ ಕೌರ್ ಒಂದು ಪ್ರಶ್ನೆ ಕೇಳಿದ್ದಳು: ಎರಡು ಮಹಾಯುದ್ಧಗಳ ಬಳಿಕವೂ ಫ್ರಾನ್ಸ್ ಮತ್ತು ಜರ್ಮನಿ ಪರಸ್ಪರ ಸಹಕಾರದಿಂದ ಶಾಂತಿಯಿಂದ ಸಹಬಾಳ್ವೆ ನಡೆಸಲು ಸಾಧ್ಯವಾದರೆ ಭಾರತ-ಪಾಕಿಸ್ತಾನಗಳಿಗೆ ಅದು ಯಾಕೆ ಸಾಧ್ಯವಿಲ್ಲ? ಈ ಪ್ರಶ್ನೆಗೆ ಉತ್ತರವನ್ನು ಎರಡು ಸ್ತರದಲ್ಲಿ ಹುಡುಕಬೇಕಾಗುತ್ತದೆ
ಒಂದು, ರಾಷ್ಟ್ರ ಮಟ್ಟದ ರಾಜಕೀಯ ನಾಯಕರಲ್ಲಿ ದೂರದೃಷ್ಟಿಇರಬೇಕು. ಎರಡು, ಜನರು ಈ ಬಗ್ಗೆ ಮುಕ್ತವಾಗಿ ಚರ್ಚಿಸಿ ಸರಕಾರಗಳ ಮೇಲೆ ಒತ್ತಡ ಹೇರಬೇಕು. ಅದು ಯಶಸ್ವಿಯಾದರೆ ಭವಿಷ್ಯದಲ್ಲಿ ಮುಗ್ಧ ಗುರ್ಮೇಹರುಗಳು ತಮ್ಮ ಅಪ್ಪಂದಿರನ್ನು ಕಳಕೊಳ್ಳುವ ಪ್ರಮೇಯ ಬರಲಾರದು.