ಕಗ್ಗ ದರ್ಶನ – 17(2)

ಕಗ್ಗ ದರ್ಶನ – 17(2)

ಮರಣವೇ ಮುಗಿವಲ್ಲ, ಜನನವೇ ಮೊದಲಲ್ಲ
ತೆರೆಯ ಬೀಳೇಳುಗಳು ಕಾಲನದಿಯಳವು
ಪರಿಪರಿಯ ರೂಪು ತಳೆಯುವುದೊಂದೆ ವಾರಿಕಣ
ಪರಿದಾಟವದರಾಟ – ಮರುಳ ಮುನಿಯ
ಸಾವೆಂಬುದು ನಮ್ಮ ಬದುಕಿನ ದೊಡ್ದ ಸತ್ಯ. ಆದರೆ ಮರಣವೇ ಅಂತ್ಯವಲ್ಲ. ಹಾಗೆಯೇ, ಹುಟ್ಟೆಂಬುದು ಆರಂಭವೂ ಅಲ್ಲ ಎಂದು ಮಾರ್ಮಿಕವಾಗಿ ಸೂಚಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಹುಟ್ಟುಸಾವುಗಳು ಕಾಲನದಿಯ ತೆರೆಯ ಏಳುಬೀಳುಗಳು ಎನ್ನುವ ಮೂಲಕ, ಅವುಗಳ ಬಗ್ಗೆ ನಮ್ಮ ಅರಿವನ್ನು ಉನ್ನತ ಮಜಲಿಗೆ ಏರಿಸುತ್ತಾರೆ.
ಕೋಟಿಕೋಟಿ ಜನರ ಜನನ ಮತ್ತು ಮರಣ, ಈ ಲೋಕದಲ್ಲಿ ನಿರಂತರ. ಅನಂತವಾಗಿ ಹರಿಯುವ ಕಾಲನದಿಯಲ್ಲಿ ಇವೆಲ್ಲ ಕೇವಲ ಅಲೆಗಳು. ಈ ರೀತಿಯಲ್ಲಿ ಅರ್ಥ ಮಾಡಿಕೊಂಡಾಗ, ಸಾವಿನ ಆಘಾತದಿಂದ ಹೊರಬರಲು ಸಾಧ್ಯವಾಗುತ್ತದೆ. ನೇಪಾಳದ ಭೀಕರ ಭೂಕಂಪ ಅಥವಾ ದೇಶದೇಶಗಳನ್ನು ಆಕ್ರಮಿಸಿದ ಸುನಾಮಿಯಿಂದಾಗಿ ಸಾವಿರಾರು ಜನರು ಒಂದೇಟಿಗೆ ಇಲ್ಲವಾದ ಸಂದರ್ಭದಲ್ಲಿಯೂ ಉಳಿದವರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಆ ಅರಿವಿನಿಂದ ಸಹಾಯವಾಗುತ್ತದೆ.
ನೀರಿನ (ವಾರಿ) ಒಂದು ಕಣವನ್ನು ಗಮನಿಸಿರಿ. ಅದು ಬಗೆಬಗೆಯ ರೂಪ ತಾಳುತ್ತದೆ. ಹಾಗೆಯೇ ಮನುಜರಾದ ನಾವು ಪರಿಪರಿಯ ರೂಪ ತಾಳಿ ಈ ಭೂಮಿಗೆ ಬರುತ್ತೇವೆ. ಆ ನೀರಿನ ಕಣದಂತೆ ನಮ್ಮದೂ ಬರಿಯ ಹೆಣಗಾಟ. ಮಳೆಹನಿಯಾಗಿ ಮಣ್ಣಿಗೆ ಬೀಳುವ ನೀರಿನ ಕಣ, ಮಣ್ಣಿನಾಳಕ್ಕೆ ಇಳಿಯಬಹುದು. ಅಥವಾ ಇತರ ಅಸಂಖ್ಯ ನೀರಿನ ಕಣಗಳ ಜೊತೆ ಸೇರಿ, ನೀರ ಧಾರೆಯಾಗಿ, ತೊರೆಯಾಗಿ, ಹೊಳೆಯಾಗಿ, ನದಿಯಾಗಿ ಕೊನೆಗೆ ಸಾಗರ ಸೇರಬಹುದು. ಮಣ್ಣಿನಾಳದಿಂದ ಯಾವತ್ತಾದರೂ ಮೇಲೆತ್ತಿದಾಗ ಅಥವಾ ಸಾಗರದ ಉರಿಬಿಸಿಲಿಗೆ ಆವಿಯಾದಾಗ ಆಕಾಶಕ್ಕೇರಿ ಮೋಡವಾಗಿ ಅದರ ಅಲೆದಾಟ. ಮತ್ತೆ ಯಾವತ್ತಾದರೂ ವಾಯುವಿನ ಒತ್ತಡದ ಏರುಪೇರಿನಿಂದಾಗಿ, ಪುನಃ ಮಳೆಹನಿಯಾಗಿ ಭೂಮಿಗಿಳಿಯುವ ಪಾಡು. ಲಕ್ಷಗಟ್ಟಲೆ ವರುಷಗಳಲ್ಲಿ ನೀರಿನ ಕಣಕಣ ಪಟ್ಟ ಪಾಡು ನಮಗರಿವಾಗದು.
ನಮ್ಮ ಬದುಕೂ ಹಾಗೆಯೇ ಎಂಬ ಅರಿವು ಬೆಳೆಸಿಕೊಳ್ಳುವುದು ನಮ್ಮ ಅಳವಿನಲ್ಲಿದೆ. ಈ ಅರಿವಿನಿಂದಾಗಿ ನಮ್ಮ ಜೀವನ ಸಹನೀಯವಾದೀತು, ಅಲ್ಲವೇ?