ಕಗ್ಗ ದರ್ಶನ – 18 (1)
ಒಲ್ಲೆನೆನದಿರು ಬಾಳನ್; ಒಲವದೇನೆನದಿರು
ಉಲ್ಲಾಸಕ್ಕೆಡೆ ಮಾಡು ನಿನ್ನಿದಾದನಿತು
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ
ಎಲ್ಲಕಂ ಸಿದ್ಧನಿರು - ಮಂಕುತಿಮ್ಮ
ಬಾಳಿನಲ್ಲಿ ಒಂದಾದ ಮೇಲೊಂದು ಕಷ್ಟಕಾರ್ಪಣ್ಯಗಳು ನುಗ್ಗಿ ಬರುತ್ತಲೇ ಇರುತ್ತವೆ. ಕಾಲಸರಿದಂತೆ ಅವು ಹೆಚ್ಚಾಗುತ್ತವೆ ವಿನಃ ಕಡಿಮೆಯಾಗುವುದಿಲ್ಲ. ಇದನ್ನು ಕಂಡಾಗ ಈ ಬದುಕೇ ಬೇಡ ಎನಿಸುತ್ತದೆ. ಒಲವು ಎಂಬುದರ ವಿಷಯದಲ್ಲಿಯೂ ನಮ್ಮ ಅನುಭವ ಹಾಗೆಯೇ. ಯಾರನ್ನೋ ಪ್ರೀತಿಸುತ್ತೇವೆ; ಕೊನೆಗೆ ಅವರು ಮೋಸ ಮಾಡುತ್ತಾರೆ. ಯಾರಲ್ಲೋ ಪ್ರೀತಿವಿಶ್ವಾಸ ಇಟ್ಟುಕೊಳ್ಳುತ್ತೇವೆ; ಕೊನೆಗೊಮ್ಮೆ ಅವರಿಂದ ನಮಗೆ ದ್ರೋಹ! ಹಾಗಾಗಿ ಒಲವಿನ ಬಗ್ಗೆ ವೈರಾಗ್ಯ ಬೆಳೆಯುತ್ತದೆ. ಯಾರಾದರೂ ಪ್ರೀತಿವಿಶ್ವಾಸದ ಬಗ್ಗೆ ಮಾತಾಡಿದಾಗ ಅಸಡ್ಡೆಯಿಂದ “ಅದೇನದು?” ಅಂತೇವೆ.
ಇವು ಎರಡು ಧೋರಣೆಗಳೂ ಸರಿಯಲ್ಲ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಅದರ ಬದಲಾಗಿ, ನಾವು ಬದುಕಿನ ಬಗ್ಗೆ ಸಕಾರತ್ಮಕ ಧೋರಣೆ ಬೆಳೆಸಿಕೊಳ್ಳ ಬೇಕು ಎಂಬುದವರ ಸಂದೇಶ. ಅದಕ್ಕಾಗಿ ಅವರು ತೋರಿಸುವ ಎರಡು ದಾರಿಗಳು: ಇತರರ ಉಲ್ಲಾಸಕ್ಕಾಗಿ ನಮ್ಮಿಂದಾದಷ್ಟು ಸಹಾಯ ಮಾಡುವುದು ಮತ್ತು ಅನ್ಯಾಯಗಳ ವಿರುದ್ಧ ದಿಟ್ಟತನದಿಂದ ಹೋರಾಡುವುದು.
ಯಾವುದೇ ಹಣ ವೆಚ್ಚ ಮಾಡದೆ, ಇತರರಿಗೆ ಸಹಾಯ ಮಾಡಲು ನೂರಾರು ದಾರಿಗಳಿವೆ. ಒಂದು ಮುಗುಳ್ನಗು, ಒಂದು ಒಳ್ಳೆಯ ಮಾತು, ಬೆನ್ನು ತಟ್ಟಿ ಬೆಂಬಲಿಸುವುದು, ಕೈಕುಲುಕಿ ಅಭಿನಂದಿಸುವುದು, ಸಾಧನೆಯ ಬಗ್ಗೆ ಒಂದು ಮೆಚ್ಚುಗೆಯ ನುಡಿ – ಇದಕ್ಕೆಲ್ಲ ಯಾವ ಖರ್ಚೂ ಇಲ್ಲ, ಅಲ್ಲವೇ? ನಮ್ಮ ಸುತ್ತೆಲ್ಲ ಅನ್ಯಾಯ ತುಂಬಿರುವಾಗ, ಅದನ್ನು ಅಳಿಸಿ ಹಾಕಲು ಕೆಚ್ಚೆದೆಯಿಂದ ಕೆಲಸ ಮಾಡುವುದು ಅವರು ನೀಡುವ ಎರಡನೇ ಸೂತ್ರ. ಇದು ಉದಾತ್ತ ಕಾಯಕ. ಪರಿಸರದ ನಾಶ, ನಿಸರ್ಗ ಸಂಪತ್ತಿನ ಲೂಟಿ, ಜೀವವೈವಿಧ್ಯದ ಧ್ವಂಸ, ಇನ್ನೊಬ್ಬರ ಸೊತ್ತಿನ ನಾಶ, ಪರರಿಗೆ ಕಿರುಕುಳ, ಮೋಸ, ಜಾತಿಯ ಹೆಸರಿನಲ್ಲಿ ಹಿಂಸೆ, ಮಹಿಳೆಯರ ಮೇಲಿನ ದೌರ್ಜನ್ಯ – ಇವೆಲ್ಲವೂ ಅನ್ಯಾಯದ ವಿವಿಧ ರೂಪಗಳು. ಇವುಗಳ ವಿರುದ್ಧ ಹೋರಾಟ ಮಾಡಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ದೊಡ್ಡ ಸಾಧನೆ.
ಅಂತೂ ಜೀವನದಲ್ಲಿ ನಾವು ಎಲ್ಲದಕ್ಕೂ ತಯಾರಾಗಿರಬೇಕು ವಿನಃ ಜೀವನವೇ ಬೇಡ ಎನ್ನಬಾರದು. ಮುಂದಿನ ಕ್ಷಣದಲ್ಲಿ ಏನಾದೀತು ಎಂಬುದು ನಮಗಾರಿಗೂ ಗೊತ್ತಿಲ್ಲ. ಅದುವೇ ಬದುಕಿನ ಸ್ವಾರಸ್ಯ. ಬಾಳಿನಲ್ಲಿ ಏನೇ ಬರಲಿ, ಅದನ್ನು ಸ್ವೀಕರಿಸಲು ಸಿದ್ಧರಾಗೋಣ.