ಮನದಲಿ ಮೂಡಿದ ಸಂಭ್ರಮದ ಯುಗಾದಿ
ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು ಮಾಸಗಳಿದ್ದು ಚೈತ್ರ ಮತ್ತು ವೈಶಾಖ ಮಾಸಗಳು ವಸಂತ ಋತುವಿನಡಿಯಲ್ಲಿ ಬರುತ್ತವೆ. ಹೀಗೆ ಚೈತ್ರ ಮಾಸ ಶುಕ್ಲ ಪಕ್ಷದಲ್ಲಿ ಬರುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುತ್ತೇವೆ. ಯುಗಾದಿಯು ದಕ್ಷಿಣ ಬಾರತದ ಜನರಿಗೆ ವರ್ಷದ ಮೊದಲ ಹಬ್ಬವಾಗಿ ಉತ್ತರ ಭಾರತದವರಿಗೆ ಇದು ಹೋಳಿಯ ನಂತರ ಬರುವ ಹಬ್ಬವಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶ, ತಂತ್ರಜ್ಞಾನ, ಯಾಂತ್ರೀಕೃತ ಜೀವನ, ಒತ್ತಡದ ಕೆಲಸ, ವಿಭಕ್ತ ಕುಟುಂಬಗಳು ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದರಿಂದ ಹಬ್ಬ ಹರಿದಿನಗಳು ಮೊದಲಿನ ಕಳೆಯನ್ನು ಪಡೆಯುತ್ತಿಲ್ಲ. ಕಾರಣಗಳು ಮೇಲಿನವುಗಳಾದರೂ ಜನರಲ್ಲಿ ತಾಳ್ಮೆ, ನಂಬಿಕೆ ಹಾಗೂ ಶ್ರದ್ಧೆ ಕಡಿಮೆಯಾಗಿರುವುದನ್ನು ಸಹ ಅಲ್ಲಗಳೆಯುವಂತಿಲ್ಲ.
ಜನರ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಇದೇ ಯುಗಾದಿಯನ್ನು ತೆಗೆದುಕೊಳ್ಳೋಣ. ಮಹಾರಾಷ್ಟ್ರದಲ್ಲಿ ಗುಡಿ ಪಡ್ವ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಸಿಂಧು ಪ್ರಾಂತ್ಯದ ಜನರು ಚೇಟಿ ಚಾಂದ್ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಆಚರಿಸುವ ವಿಧಾನದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಇದ್ದರೂ ಎಲ್ಲವುಗಳ ಉದ್ದೇಶ ಒಂದೇ ಆಗಿರುತ್ತದೆ. ಆದರೆ ನಮ್ಮ ಆಚರಣೆಗಳು ಮತ್ತು ಸಂಪ್ರದಾಯಗಳು ಎಂದೂ ಪಶ್ಚಿಮಾತ್ಯರ ಸಂಸ್ಕೃತಿಗೆ ಹೋಲಿಕೆಯಾಗದು. ಪಾಶ್ಚಿಮಾತ್ಯರ ಹೊಸ ವರ್ಷದ ಆಚರಣೆಯನ್ನೇ ಗಮನಿಸಿ. ಅದೇ ನಮ್ಮ ಯುಗಾದಿಯ ಸಂಭ್ರಮವನ್ನು ಗಮನಿಸಿ. ಪ್ರಕೃತಿಯು ಸಹಾ ನಮ್ಮ ಆಚರಣೆಗೆ ಸಾತ್ ಕೊಡಬಲ್ಲುದು. ಹೀಗೆ ಪಾಶ್ಚಿಮಾತ್ಯರ ಹೊಸ ವರ್ಷದ ಆಚರಣೆ ಹಾಗು ನಮ್ಮ ಪ್ರಕೃತಿದತ್ತ ಯುಗಾದಿಯ ಆಚರಣೆಯನ್ನು ಹೋಲಿಸಿದಾಗ ಕಂಡುಬಂದಂತವುಗಳು ಅನೇಕ. ಅದನ್ನು ನನ್ನದೆ ಆದ ಸಾಲುಗಳಲ್ಲಿ ಕೇಳ ಕಂಡ ರೀತಿಯಲ್ಲಿ ವ್ಯಕ್ತ ಪಡಿಸಿದ್ದೇನೆ.
ಹೊಸವರುಷಕ್ಕೆ ಮನೆ, ಸುತ್ತಮುತ್ತ ಶುಚಿಗೊಳಿಸುತ್ತಾರೆ ಎಂದು ನಾ ತಿಳಿದರೆ,
ಹೋಟೆಲ್ ಪಬ್ ಬಾರುಗಳ ಅಲಂಕರಿಸುವುದ ನಾ ಕಂಡೆ.
ಹಬ್ಬದ ಕಳೆ ಹೆಚ್ಚಿಸಲು, ಶೃಂಗರಿಸಲು ಸಾಮಗ್ರಿಗಳನ್ನು ಖರಿದಿಸುತ್ತಾರೆ ಎಂದು ನಾ ತಿಳಿದರೆ,
ಮುಂಗಡವಾಗಿ ಹೋಟೆಲ್ ಬಾರುಗಳನ್ನು ಬುಕಿಂಗ್ ಮಾಡುವುದ ನಾ ಕಂಡೆ.
ಬಂಧು ಬಾಂಧವರ ಆಮಂತ್ರಿಸುವವರು ಎಂದು ನಾ ತಿಳಿದರೆ,
ಸ್ನೇಹಿತರ ಬಳಿ ಆಚರಣೆಯ ಬಗ್ಗೆ ಚರ್ಚಿಸುವರ ನಾ ಕಂಡೆ.
ಹಬ್ಬದ ಹಿಂದಿನ ದಿನವೇ ಒಟ್ಟಾಗಿ ಸೇರಿ ಮನೆಯ ಕಳೆಯನ್ನು ಹೆಚ್ಚಿಸುವರೆಂದು ನಾ ತಿಳಿದರೆ,
ಹಿಂದಿನ ದಿನವೇ ಮನೆ ಬಿಟ್ಟು ಗೆಳೆಯರ ಮನೆ ಸೇರುವುದ ನಾ ಕಂಡೆ.
ಹಗಲು ಹಬ್ಬವ ಆಚರಿಸಿ ರಾತ್ರಿ ಸುಖ ನಿದ್ರೆಗೆ ಜಾರುವರೆಂದು ನಾ ತಿಳಿದರೆ,
ರಾತ್ರಿಯೆಲ್ಲಾ ನಿದ್ದೆ ಬಿಟ್ಟು ವರ್ಷದ ಮೊದಲ ದಿನಪೂರ್ತಿ ನಿದ್ರಿಸುವವರ ನಾ ಕಂಡೆ.
ಸೂರ್ಯೋದಯಕ್ಕೆ ಮುನ್ನ ಎದ್ದು ಮನೆಯ ಮುಂದೆ ರಂಗವಲ್ಲಿ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಿ ಅಭ್ಯಂಜನ ಮಾಡುವರೆಂದು ನಾ ತಿಳಿದರೆ,
ಸೂರ್ಯೋದಯಕ್ಕೆ ಮುನ್ನ ಸುರಪಾನ ಇಳಿಯದೆ ಓಲಾಡುತ್ತಾ ಮನೆಗೆ ಬರುವುದ ನಾ ಕಂಡೆ.
ಬೇವು ಬೆಲ್ಲ ಸವಿದು ಕಷ್ಟ ಸುಖಗಳೆರಡನ್ನು ಸಮಾನವಾಗಿ ಸ್ವೀಕರಿಸುವರೆಂದು ನಾ ತಿಳಿದರೆ,
ಗೆಳೆಯರೆಲ್ಲರೂ ಸೇರಿ ಕಹಿ ಘಟನೆಯನ್ನು ಮರೆಯಲು ಕುಡಿದು ಹೆಚ್ಚಾಗಿ ಅಲ್ಲಲ್ಲಿ ಕಕ್ಕುವರ ನಾ ಕಂಡೆ.
ಹೊಸ ಚಿಗುರಿನ ಪ್ರಕೃತಿಯೊಡನೆ ಸೇರಿ ಹಬ್ಬವ ಆಚರಿಸುವುವರೆಂದು ನಾ ತಿಳಿದರೆ,
ಎಲೆ ಉದುರಿದ ಮರಗಳಿಗೆ ವಿದ್ಯುತ್ ದೀಪಗಳ ಬೆಳಗಿಸಿ ನಡುರಾತ್ರಿ ಸಂಭ್ರಮಿಸುವರ ನಾ ಕಂಡೆ.
ಹಬ್ಬದ ಸಿಹಿ ಉಂಡು ರಸಗವಳ ಹೀರುತ್ತಾ ಸಂಬಂಧಿಗಳೊಡನೆ ಹರಟುವರೆಂದು ನಾ ತಿಳಿದರೆ,
ನಡುರಾತ್ರಿ ಗೆಳೆಯರ ಜೊತೆ ಪಾಶ್ಚಿಮಾತ್ಯ ಶೈಲಿಯ ಭೋಜನ ಮಾಡುವವರ ನಾ ಕಂಡೆ.
ಮುಸ್ಸಂಜೆಯ ಹೊತ್ತಿಗೆ ಬಾಲ ಯುಗಾದಿ ಚಂದ್ರನನ್ನು ನೋಡಿ ಧನ್ಯನಾಗುವರೆಂದು ನಾ ತಿಳಿದರೆ,
ಮದ್ಯರಾತ್ರಿಯ ಹೊತ್ತಿಗೆ ಮದ್ಯದ ಬಾಟಲಿ ಜೊತೆಗೆ ವರ್ಷಾಗಮನವಾ ಆಚರಿಸುವರ ನಾ ಕಂಡೆ.
ಈಗ ಹೇಳಿ ನಾವು ಆಚರಿಸುವ ಯುಗಾದಿಗೆ ಸರಿ ಸಾಟಿಯಾಗಬಲ್ಲದೆ ಪಾಶ್ಚಿಮಾತ್ಯರ ಹೊಸವರ್ಷದ ಆಚರಣೆ?. ಅದಕ್ಕಾಗಿ ಅಲ್ಲವೇ ನಮ್ಮ ಪುರಾತನ ಸಂಸ್ಕೃತಿಯು ವೈಜ್ಞಾನಿಕವಾಗಿಯೂ ಸಹ ಪ್ರತಿ ವಿಷಯದಲ್ಲಿಯೂ ಸರಿ ಹೊಂದುವುದು. ಪಾಶ್ಚಿಮಾತ್ಯರು ಹೇಗೆ ಕ್ಯಾಲೆಂಡರ್ ನ ಮೊದಲ ದಿನವನ್ನು ವಿಶೇಷ ಎಂದು ಪರಿಗಣಿಸುತ್ತಾರೋ ಹಾಗೆ ನಾವು ಯುಗಾದಿಯ ದಿನವನ್ನು ಪಂಚಾಂಗ ಪೂಜೆಯ ಮೂಲಕ ಬರಮಾಡಿಕೊಳ್ಳುತ್ತೇವೆ. ಪ್ರಕೃತಿಯೇ ವರುಷಕ್ಕೊಮ್ಮೆ ಹಚ್ಚ ಹಸಿರಿನಿಂದ ಚಿಗುರೊಡೆದು ತರುಲತೆಗಳು ಸುಗಂಧದ ಕಂಪನ್ನು ಸೂಸಿ ವರ್ಷಾಚರಣೆಗೆ ಸಾತ್ ಕೊಡುವಾಗ ನಾವೇಕೆ ಅದೇ ಸಮಯದಲ್ಲಿ ಪ್ರಕೃತಿಯ ಒಡಗೂಡಿ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸಬಾರದು? ಕ್ಯಾಲೆಂಡರ್ ಬದಲು ಪಂಚಾಗ ಶ್ರವಣವನ್ನು ಯಾಕೆ ಮಾಡಬಾರದು?
ನಮ್ಮ ದೇಶದಲ್ಲೇ ಇರುವ ಸಂಸ್ಕೃತಿ ಮತ್ತು ಆಚರಣೆಗಳು ವೈವಿಧ್ಯದಿಂದ ಕೂಡಿದ್ದರೂ ಅದು ಸಮಾಜದ ಸ್ವಾಸ್ಥ್ಯಕ್ಕೆಂದು ಕುಂದನ್ನುಂಟು ಮಾಡುವುದಿಲ್ಲ. ಆದ್ದರಿಂದ ಸನಾತನ ಭಾರತೀಯ ಸಂಸ್ಕೃತಿಯನ್ನ ಆಚರಿಸೋಣ. ಜೊತೆಯಲ್ಲಿ ಪಾಶ್ಚಿಮಾತ್ಯರ ಆಚರಣೆಗಳನ್ನ ಗೌರವಿಸೋಣ.
ಕೆ. ಎಸ್. ನರಸಿಂಹಸ್ವಾಮಿಯವರ ಯುಗಾದಿಯ ಬಗೆಗಿನ ಕವಿತೆಯ ಕೆಲವು ಸಾಲುಗಳನ್ನು ನಿಮ್ಮ ಮುಂದಿಡುತ್ತಾ ಎಲ್ಲರಿಗೂ ಯುಗಾದಿಯ ಹಾರ್ಧಿಕ ಶುಭಾಶಯಗಳು.
ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.
ಹೊಸತು ವರುಷ, ಹೊಸತು ಹರುಷ;
ಹೊಸತು ಬಯಕೆ ನಮ್ಮವು.
ತಳಿರ ತುಂಬಿದಾಸೆಯೆಲ್ಲ,
ಹರಕೆಯಲ್ಲ ನಮ್ಮವು.
-ಪಿ. ಕೆ. ಜೈನ್ ಚಪ್ಪರಿಕೆ.