ಬೆಂಬಿಡೆನೆ ಕವಿತಾ...

ಬೆಂಬಿಡೆನೆ ಕವಿತಾ...

ಚಿತ್ರ

ಏನು ಏನಿದು ಸೆಳೆತ
ಎತ್ತಕಡೆಗೀ ಎಳೆತ
ಕಾವ್ಯವೇ ನನ್ನ ಮೊರೆತ ?!
ಸೊಂಪಿನಲೆ ಹರಿವ ಸುಧೆ
ಸೆಳೆವ ಸೆಲೆ ಸಂಪದೆ
ಮೃದುಲವುಲಿತ ಮಿತ
ಸ್ಮಿತೆ ಅಕ್ಷರೆ ಅಯಸ್ಕಾಂತೆ್
ಇದೊ ಇಲ್ಲಿ ಇನಿತೆ ಸನಿಹದಲ್ಲಿ!
ಸಣ್ಣ ತೊರೆಯಂತೆ
ಕಣ್ಬೆಳಕಿನಂತೆ
ಎದೆಗೆ ಹಚ್ಚಿ ಹಣತೆ
ತೋರಿ ತೋರದೆಲೆ
ಮನಸಿನೊಳಬಿದ್ದ ಸೋನೆ
ಹದ ಮಿದುವಲ್ಲಿ
ಚಿಗುರಲಿರುವ ಲಲನೆ
ಬಳುಕಿನ ನುಡಿಗಳಲಿ
ನವಿರ ಬಕುಳ ಸ್ಪರ್ಷ
ಪದ ಪದಗಳ ಲಾಲಿತ್ಯ
ಉದ್ವೇಗರಹಿತ ಬಡಿತ
ಸೂಕ್ಷ್ಮ ಸುಳಿವ ಪರಿಚಿತೆಯ
ಹಿಂಬಾಲಿಸುವ ತವಕ ಸತತ!
ತಿರುಗೆನ್ನ ನೋಡಿ
ಮುಗುಳನ್ನು ತೂರಿ
ಮನಸೆಲ್ಲ ಮೊಗೆದು
ಕರಗಳಲ್ಲಿ ಚಿಗುರಿ
ಅರಳಿ ಪರಿಮಳವಾಗಿ
ನಲಿದು ನೃತ್ಯವಾಗಿ
ರಾಗ ಹರಿಸಲಿಹಳು
ಬೆನ್ನಬಿಡದೆ ತಡೆದೆ
ಅಕ್ಷರಗಳೆ ಒಲಿಯೆ ಎಂದೆ...
ಗುರುಲಘುಪ್ರಾಸಗಳಿಗೆ
ತೆರೆದು ಕಂಗಳ ತೆರೆ
ಧ್ಯಾನದಲಿ ಸೆಳೆದೆ
ಬರಹಕ್ಕೆ ಇಳಿದೆ
ದಾಹ ತೀರುವ ಘಳಿಗೆ
ಚೈತನ್ಯ ಮೊಳಗೆ
ಬೆರಳುಗಳಲ್ಲಿ ಹರಿದು
ಪದ ಪದಗಳ ಹೊಕ್ಕು
ಕನವರಿಸಿದ ಕವನ
ದೇಹ ಧರಿಸಿ ನಕ್ಕಳು!
ಬೆಂಬಿಡದವನಿಗೆ
ಸಿಕ್ಕಿತಿದೊ ಸಾರ್ಥಕತೆ
ದಕ್ಕಿತಿದೊ ಗಮ್ಯತೆ!
ತಬ್ಬಿತಿದೋ.....
ಹಬ್ಬಿತೀಗ ಕವಿತೆ!!
                     - ಅನಂತ ರಮೇಶ್
(picture courtesy:Pixabay)

Rating
No votes yet