ಸುರಿಯೇ ಮಳೆಯೇ
ಅದೊಂದು ಬೇಸಿಗೆಯ ಮಳೆ, ಸೆಕೆ ಸೆಕೆ ಎಂದು ಮಾನವ ಕುಲ ಕೋಟಿ ಬೆವರಿ ಬೇಯುವಾಗ ಅದು ಹೇಗೋ ಯಾರೋ ಮಂತ್ರಿಸಿ ಬಿಟ್ಟಂತೆ ಆಕಾಶದಿಂದ ವರ್ಷಧಾರೆ ಶುರುವಾಗಿತ್ತು. ಮಳೆ ಅಂದರೆ ಎರಡು ಹನಿ ಪ್ರೋಕ್ಷಿಸಿ ಹೋದಂತೇನಲ್ಲ.. ಜೋರಾಗಿ ಗುಡುಗು ಮಿಂಚುಗಳಿಂದ ಆರ್ಭಟಿಸಿ ಸುರಿಯುತ್ತಲೇ ಇತ್ತು.
ಮನೆ ಒಳಗೆ ಫ್ಯಾನ್ ಹಾಕಿ ಕೂತ ನಾನು ಸಂಜೆಯ ಬಾನಿನ ರಂಗು ನೋಡಲು ಕಿಟಕಿ ತೆರೆದೆ. ಆಗಲೇ ಹನಿಗಳು ಒಂದೊಂದಾಗಿ ಆಕಾಶದಿಂದ ಧುಮುಕುತ್ತಿದ್ದವು. ಮಳೆ ಎಂದರೆ ನೆನಪುಗಳೇ… ಅದು ಹೇಗೋ ಮೋಡವಾಗಿ ಹೆಪ್ಪುಗಟ್ಟಿರುವ ಹಳೆ ಕನಸೆಲ್ಲಾ ಮಳೆ ಜೊತೆ ಸುರಿಯುತ್ತವೆ. ಅದಕ್ಕೆ ಈ ಮಳೆಯಿಂದ ದೂರವೇ ಇರಬೇಕೆಂದು ನಾನು ಆದಷ್ಟು ಅದನ್ನು ಕಡೆಗಣಿಸಿದ್ದೆ. ಆದರೆ ಅಕಾಲದಲ್ಲಿ ಅನಿರೀಕ್ಷಿತವಾಗಿ ಕಂಡ ಹಳೆ ದೋಸ್ತನಂತೆ ಭಾಸವಾಗಿ ಹೊರಹೋಗಿ ಮಳೆಗೆ ಮುಖವೊಡ್ಡಿ ನಿಂತು ಮಾತನಾಡಲೇ ಬೇಕಾಯಿತು.
ಶೃತಿ, ಸಾಗರಿ, ದೀಪ, ಕವನ ಇತ್ತೀಚಿನ ನೇಹ (ಹೆಸರು ಬದಲಿಸಲಾಗಿದೆ) ಎಲ್ಲಾ ಮತ್ತೆ ನೆನಪಾದರು. ಇವರೆಲ್ಲರ ಕಥೆ ಹೇಳೋಕೆ ಹೋದರೆ ತುಂಬಾ ಸ್ವಾರಸ್ಯವಾಗಿದೆ. ಆದರೆ ಎಲ್ಲದರಲ್ಲೂ ಅಂತ್ಯ ಒಂದೇ… ಈಗ ನಾನು ಮದುವೆಯಾಗಿ ಸುಖ ಸಂಸಾರ ಯಾರ ಜೊತೆಗೂ ನಡೆಸುತ್ತಿಲ್ಲ ಅನ್ನೋದೆ ಎಲ್ಲಾ ಕಥೆಗಳ ಒಟ್ಟು ಮೊತ್ತ.
ಕೆಳಗಡೆ ರಸ್ತೆಯಲ್ಲಿ ಪಕ್ಕದಿಂದ ಮೂರನೇ ಬಿಲ್ಡಿಂಗ್ ಹುಡುಗಿ ನೆನೆಯುತ್ತಾ ನಡೆದು ಬರುತ್ತಿದ್ದಳು. ಹೆಣ್ಣು ಮಕ್ಕಳಿಗೆ ನೆನೆಯೋಕೆ ಇಷ್ಟವಾದರೂ ರೋಡಲ್ಲಿ ಪಾಪ ಅಪಾಪೋಲಿಗಳ ಕಣ್ಣಿಂದ ತಪ್ಪಿಸಿಕೊಳ್ಳಲು ಓಡಿ ಬರುವಂತೆ ಕಾಣುತಿತ್ತು. ಯಾವುದೇ ಹುಡುಗಿ ನೋಡಿದರೂ ಈಗೀಗ ಹೆಂಡತಿಯಾದರೆ ಹೇಗೆ ಎಂಬ ಕಲ್ಪನೆ ಬರತ್ತೆ. ಕೂಡಲೇ ಓಡಿ ಛತ್ರಿ ತೆಗೆದುಕೊಂಡು ಹೋಗುತ್ತಿದ್ದೆ.
ಹೋಗಿಬರುವ ಮಳೆ ಸಂತ್ರಸ್ತರನ್ನೆಲ್ಲಾ ನೋಡುತ್ತಾ ನೋಡುತ್ತಾ ಮಳೆ ನಿಂತದ್ದೇ ಗೊತ್ತಾಗಲಿಲ್ಲ. ನನ್ನ ಯೋಚನೆ ಇನ್ನೂ ಮಳೆ ನೀರಲ್ಲಿ ಬಿಟ್ಟ ದೋಣಿಯಂತೆ ಸಾಗುತ್ತಾ ಇದೆ. ಯಾವ ಕೈ ಬಳೆ ಸುಂದರಿ ಆ ದೋಣಿಯಲ್ಲಿ ಬರ್ತಾಳೋ, ಮಗಚುತ್ತಾಳೋ, ದಡ ಸೇರಿಸಿಸುತ್ತಾಳೋ ಅನ್ನೋದೊಂದೆ ನನ್ನ ತಲೆ ಬಿಸಿ. ಕಥೆಗೆ ಮುಕ್ತಾಯ ಪ್ರೇಮ ವಿವಾಹ ಆಗತ್ತೋ, ಮನೇಲಿ ಹುಡುಕಿದ್ದೇ ಕೊನೆಗೆ ಆಗತ್ತೋ, ಯಾವುದೂ ಆಗದೆ ನಾ ಅವಿವಾಹಿತನಾಗಿಯೇ ಬದುಕನ್ನು ಬದುಕಿ ಬಿಡುತ್ತೀನ….ಯಾವ ಕ್ಲೈಮಾಕ್ಸ್ ಬೇಕಾದರೂ ಆಗಬಹುದು…. ಅವರವರ ಇಷ್ಟಕ್ಕೆ ಬಿಟ್ಟಿದ್ದು.
ಆದರೂ ಯಾಕೋ ಈ ಮಳೆ ಹಳೇ ರಗಳೆಗಳಿಂದ ಶುರುಮಾಡಿದ್ದು ವಿವೇಕಾನಂದ, ಕಲಾಂ ಅವರನ್ನೆಲ್ಲಾ ನೆನಪು ಮಾಡ್ತಲ್ಲಾ