ರೈತರಿಂದ ಗ್ರಾಹಕರಿಗೆ ಪಾರದರ್ಶಕ ವ್ಯವಹಾರ: ಟ್ರೂ-ಟ್ರೇಡ್
“ಸಾವಯವ ಉತ್ಪನ್ನ” ಎಂಬ ಆಹಾರ ಪೊಟ್ಟಣಗಳನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ಅವುಗಳ ಬೆಲೆ, ಈ ಲೇಬಲ್ ಇಲ್ಲದ ಅಂತಹದೇ ಉತ್ಪನ್ನದ ಪ್ಯಾಕೆಟಿನ ಒಂದೂವರೆ ಪಟ್ಟು ಅಥವಾ ಎರಡು ಪಟ್ಟು ಜಾಸ್ತಿ.
ಆದರೆ, ಆ ಉತ್ಪನ್ನ (ತರಕಾರಿ, ಹಣ್ಣು, ಧಾನ್ಯ ಇತ್ಯಾದಿ) ಯಾವ ರೈತನ ಹೊಲದಲ್ಲಿ ಬೆಳೆದದ್ದು ಎಂಬ ಮಾಹಿತಿ ಅದರಲ್ಲಿ ಇರುವುದಿಲ್ಲ. ಅದರ ಬೆಲೆ ಯಾಕೆ ಅಷ್ಟು ಜಾಸ್ತಿ ಎಂಬ ವಿವರಣೆಯೂ ಅದರಲ್ಲಿ ಇರುವುದಿಲ್ಲ. ಗ್ರಾಹಕನು ಪಾವತಿಸುವ ಈ ದುಬಾರಿ ಬೆಲೆಯ ಎಷ್ಟು ಭಾಗ ರೈತನ ಕೈಸೇರುತ್ತದೆ ಎಂದು ಪ್ರಶ್ನಿಸಿದರೆ ಉತ್ತರ ನಿರಾಶದಾಯಕ.
ಇಂತಹ ಸನ್ನಿವೇಶದಲ್ಲಿ. ಬೆಂಗಳೂರಿನ “ಟ್ರೂ-ಟ್ರೇಡ್” ಎಂಬ ಲಾಭರಹಿತ ಸಂಸ್ಥೆ ಭಿನ್ನ ಹಾದಿ ತುಳಿದಿದೆ. ಈ ಸಂಸ್ಥೆ ಮಾರಾಟ ಮಾಡುವ ಕೃಷಿ ಹಾಗೂ ಆಹಾರ ಉತ್ಪನ್ನಗಳ ಪೊಟ್ಟಣಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಇವನ್ನು ಮುದ್ರಿಸುತ್ತಾರೆ: ರೈತನಿಂದ ಖರೀದಿ ಬೆಲೆ, ಸಾಗಾಟ ವೆಚ್ಚ, ಸಂಸ್ಕರಣೆ ವೆಚ್ಚ, ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ವೆಚ್ಚ, ಸಂಸ್ಥೆಯ ಆಡಳಿತಾತ್ಮಕ ವೆಚ್ಚ, ಡೀಲರ್ (ಮಾರಾಟಗಾರ)ನ ಕಮಿಷನ್ ಮತ್ತು ಗರಿಷ್ಠ ಮಾರಾಟ ಬೆಲೆ (ಎಂ.ಆರ್.ಪಿ.) ಪೊಟ್ಟಣದಲ್ಲಿ ಮುದ್ರಿಸಿರುವ “ಕ್ಯೂಆರ್” ಕೋಡ್ ಪರಿಶೀಲಿಸಿದರೆ, ಆ ಪೊಟ್ಟಣದ ಉತ್ಪನ್ನವನ್ನು ಬೆಳೆಸಿದ ರೈತನ ಹೆಸರು, ಆ ಜಮೀನಿನ ಭೌಗೋಳಿಕ ವಿವರ, ಫೋನ್ ನಂಬರ್ ಮತ್ತು ೪೫ ಸೆಕೆಂಡಿನ ವಿಡಿಯೋ (ರೈತ ಬಿತ್ತಿದ ಬೀಜದ ತಳಿ, ರೈತ ಬೆಳೆಗೆ ಹಾಕಿದ ಗೊಬ್ಬರ ಇತ್ಯಾದಿ ಒಳಸುರಿಗಳು, ಹಣ್ಣುಗಳಾಗಿದ್ದರೆ ಮರಗಳ ಪ್ರಾಯ ಇತ್ಯಾದಿ ವಿವರಗಳೆಲ್ಲ ಇರುವ ವಿಡಿಯೋ) ಖರೀದಿದಾರನಿಗೆ ಲಭ್ಯ. ಉದಾಹರಣೆಗೆ, ಒಂದು ಪ್ಯಾಕೆಟಿಗೆ ಸಂಬಂಧಿಸಿದ ವಿಡಿಯೋದಲ್ಲಿ, ದೇವನಹಳ್ಳಿ ತಾಲೂಕಿನ ಕೋರಮಂಗಲ ಗ್ರಾಮದ ನಾರಾಯಣ ಸ್ವಾಮಿ ತರಕಾರಿಗಳನ್ನು ಬೆಳೆಸಲು ತಾನು ಬಳಸಿದ ಒಳಸುರಿಗಳನ್ನು ಪಟ್ಟಿ ಮಾಡುವುದನ್ನು ಕಾಣಬಹುದು.
ಇದೆಲ್ಲ ಶುರುವಾದದ್ದು ೧೭ ವರುಷ ಇಂಜಿನಿಯರಾಗಿ ಕೆಲಸ ಮಾಡಿದ ನಂತರ, ಗ್ರಾಮೀಣ ರೈತರಿಗೆ ಅಗತ್ಯವಾದ ನೆರವು ನೀಡಲಿಕ್ಕಾಗಿ ನವೀನ್ ಸೆರಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದಾಗ. ಅವರು ಸಮಾನಮನಸ್ಕರ ಜೊತೆ ಸೇರಿ, ರೈತರ ಒಳಿತಿಗಾಗಿ ಕೆಲಸ ಮಾಡಲಿಕ್ಕಾಗಿ ಮತ್ತು ಗ್ರಾಹಕರಿಗೆ “ಪಾರದರ್ಶಕ ವ್ಯವಹಾರ”ದ ಮೂಲಕ ಕೃಷಿ ಉತ್ಪನ್ನಗಳನ್ನು ಒದಗಿಸಲಿಕ್ಕಾಗಿ ಸ್ಥಾಪಿಸಿದ ಸಂಸ್ಥೆಯೇ “ಟ್ರೂ-ಟ್ರೇಡ್”. ಈಗ ಅವರು ಟ್ರೂ-ಟ್ರೇಡಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
“ನಾವು ಪಾರದರ್ಶಕವಾಗಿ ವ್ಯವಹಾರ ಮಾಡುತ್ತೇವೆ. ಹೀಗೆ ಮಾಡದಿದ್ದರೆ, ನಮ್ಮನ್ನೂ ಮಧ್ಯವರ್ತಿಗಳು ಅಥವಾ ದಳ್ಳಾಲಿಗಳು ಎಂದು ಜನರು ತಪ್ಪು ತಿಳಿಯಬಹುದು. ಖರೀದಿದಾರರು ರೈತರನ್ನು ಸಂಪರ್ಕಿಸಿ, ನಾವು ತಿಳಿಸುವ ವೆಚ್ಚಗಳ ಸಾಚಾತನ ಪರೀಕ್ಷಿಸಬಹುದು” ಎನ್ನುತ್ತಾರೆ ನವೀನ್ ಸೆರಿ.
ಕರ್ನಾಟಕದ ಉಡುಪಿ, ಉತ್ತರಕನ್ನಡ ಮತ್ತು ಗದಗ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳ ಒಟ್ಟು ೨೦,೦೦೦ ರೈತರ ಜೊತೆ ಸೇರಿ ಕೆಲಸ ಮಾಡುತ್ತಿದೆ “ಟ್ರೂ-ಟ್ರೇಡ್”. ಸುಮಾರು ೯೫ ಬಗೆಯ ಕೃಷಿಉತ್ಪನ್ನಗಳನ್ನು ಸಂಸ್ಕರಿಸಿ, ಪ್ಯಾಕ್ ಮಾಡಲಾಗುತ್ತಿದೆ – ಈ ಸಂಸ್ಥೆಯ ಬೆಂಗಳೂರಿನ ನಾಗರಬಾವಿಯ “ಪ್ಯಾಕೇಜಿಂಗ್ ಘಟಕ”ದಲ್ಲಿ. ಅನಂತರ ಈ ಪ್ಯಾಕೆಟುಗಳನ್ನು ಚಿಲ್ಲರೆ ಮಾರಾಟಗಾರರಿಗೆ ಒದಗಿಸಲಾಗುತ್ತದೆ.
ಸುಸ್ಥಿರ ಕೃಷಿ ಬಗ್ಗೆ ರೈತರಿಗೆ ತರಬೇತಿಯನ್ನೂ ನೀಡುತ್ತದೆ ಟ್ರೂ-ಟ್ರೇಡ್. ಗದಗ ಜಿಲ್ಲೆಯಲ್ಲಿ ಟ್ರೂ-ಟ್ರೇಡಿನ ಸಾವಯವ ಕೃಷಿ ತರಬೇತಿಗಳ ಸಂಯೋಜಕರು ಶಿವಣ್ಣ ಲಕ್ಷ್ಮಣ. “ಗದಗ ಜಿಲ್ಲೆಯ ೧,೫೦೦ ರೈತರು ಟ್ರೂ-ಟ್ರೇಡಿನ ಕೆಲಸಕಾರ್ಯಗಳಲ್ಲಿ ಭಾಗಿಗಳು. ತೊಂಬತ್ತು ಗ್ರಾಮಗಳಲ್ಲಿ ನೆಲೆಸಿರುವ ಅವರ ಜಮೀನಿನ ಒಟ್ಟು ವಿಸ್ತೀರ್ಣ ೨,೪೪೩ ಹೆಕ್ಟೇರು. ಇಲ್ಲಿನ ರೈತರು ಬೇಳೆಕಾಳು, ತರಕಾರಿ ಮತ್ತು ಹಣ್ಣು ಬೆಳೆಸುತ್ತಾರೆ. ಅವರಲ್ಲಿ ಬಹುಪಾಲು ರೈತರು ಕಂಪೋಸ್ಟ್ ತಯಾರಿ ಮತ್ತು ಇತರ ಸರ್ಟಿಫೈಡ್ ಸಾವಯವ ಆಹಾರದ ತಯಾರಿ ತರಬೇತಿ ಪಡೆದಿದ್ದಾರೆ” ಎನ್ನುತ್ತಾರೆ ಶಿವಣ್ಣ. ಚಿತ್ರದುರ್ಗ ಜಿಲ್ಲೆಯ ಮೇರಸಾಬಿ ಹಳ್ಳಿಯಲ್ಲಿ ಅವರ ೨೦ ಎಕ್ರೆ ಜಮೀನಿದೆ. ಟ್ರೂ-ಟ್ರೇಡ್ ಸೇರಿಕೊಳ್ಳುವ ಮುಂಚೆ ಶಿವಣ್ಣ ಅಲ್ಲಿ ಸಾವಯವ ಕೃಷಿ ಮಾಡುತ್ತಿದ್ದರು.
ಟ್ರೂ-ಟ್ರೇಡಿನ ಮುಖ್ಯ ವಿಜ್ನಾನಿ ಟಿ. ಅಂಬಿಕಾ ನೀಡುವ ಮಾಹಿತಿ ಹೀಗಿದೆ: “ರೈತರಿಗೆ ನಮ್ಮ ಬೆಂಬಲ, ಅವರ ಜಮೀನಿಗಷ್ಟೇ ಸೀಮಿತವಾಗಿಲ್ಲ. ಸ್ವತಂತ್ರ ಏಜೆನ್ಸಿಗಳ ಮೂಲಕ ರೈತರ ಕೃಷಿ ಉತ್ಪನ್ನಗಳ ಥರ್ಡ್-ಪಾರ್ಟಿ ಸರ್ಟಿಫಿಕೇಷನಿಗೂ ನಾವು ಸಹಾಯ ಮಾಡುತ್ತೇವೆ.”
“ಈ ರೀತಿಯಲ್ಲಿ ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್ ಮಾಡುವುದಕ್ಕೆ ಇರುವ ಅಡ್ಡಿಆತಂಕಗಳು ಹತ್ತು ಹಲವು” ಎನ್ನುತ್ತಾರೆ ನವೀನ್. ಬಹುಪಾಲು ಚಿಲ್ಲರೆ ಮಾರಾಟಗಾರರು ದೊಡ್ಡ ಪರಿಮಾಣ(ರಖಂ)ದಲ್ಲಿ ರೈತರಿಂದ ಆಹಾರವಸ್ತುಗಳನ್ನು ಖರೀದಿಸಿ, ಖರೀದಿ ಬೆಲೆಯ ಶೇ.೩೦ರಿಂದ ಶೇ.೪೦ ಲಾಭಾಂಶ ಸೇರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. “ನಮ್ಮಿಂದಲೂ ಅಷ್ಟೇ ಲಾಭಾಂಶ ಸಿಗಬೇಕೆಂದು ಚಿಲ್ಲರೆ ಮಾರಾಟಗಾರರು ಒತ್ತಾಯಿಸಿದರು. ಅಷ್ಟು ಲಾಭಾಂಶ ಅವರಿಗೆ ಕೊಟ್ಟರೆ, ಮೂಲ ಉತ್ಪಾದಕರಾದ ರೈತರಿಗೆ ಸ್ವಲ್ಪವೇ ಲಾಭಾಂಶ ಸಿಗುತ್ತಿತ್ತು. ಹಾಗಾಗಿ, ನಾವು ನಮ್ಮ ವ್ಯವಹಾರದ ಎಲ್ಲ ಹಂತಗಳನ್ನೂ ಪುನರ್-ಪರಿಶೀಲಿಸಿದೆವು. ಈಗ, ನಾವು ತಳ್ಳುಗಾಡಿ ಮಾರಾಟಗಾರರ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ತಯಾರಿ ನಡೆಸಿದ್ದೇವೆ” ಎಂದು ವಿವರಿಸುತ್ತಾರೆ ನವೀನ್.
ಹೈದರಾಬಾದಿನಲ್ಲಿ ೫೦ ಸಣ್ಣ ಕಿರಾಣಿ ಅಂಗಡಿಗಳ ಮೂಲಕ ಮಾರಾಟ ಜಾಲ ರೂಪಿಸಿದೆ ಟ್ರೂ-ಟೇಡ್. ಬೆಂಗಳೂರಿನಲ್ಲಿ ೫೦ ತಳ್ಳುಗಾಡಿಗಳ ಮಾರಾಟ ಜಾಲದ ಯೋಜನೆ. ಆರಂಭದಲ್ಲಿ ೨೫ ವಿಧದ ತರಕಾರಿ ಮತ್ತು ಹಣ್ಣುಗಳ ಮಾರಾಟ. ರೈತರಿಗೂ ಗ್ರಾಹಕರಿಗೂ ಅನುಕೂಲವಾದ ಈ ವಿನೂತನ ಯೋಜನೆ, ಇತರ ಪಟ್ಟಣಗಳಲ್ಲಿಯೂ ಇಂತಹ ಪಾರದರ್ಶಕ ವ್ಯವಹಾರದ ಆರಂಭಕ್ಕೆ ನಾಂದಿಯಾಗಲಿ.
ಹೆಚ್ಚಿನ ಮಾಹಿತಿಗಾಗಿ: ವೆಬ್-ಸೈಟ್: trutrade.org
ಸಂಪರ್ಕ: 08861722228
Comments
ಉ: ರೈತರಿಂದ ಗ್ರಾಹಕರಿಗೆ ಪಾರದರ್ಶಕ ವ್ಯವಹಾರ: ಟ್ರೂ-ಟ್ರೇಡ್
ಈ ಒಳ್ಳೆಯ ಕಾರ್ಯಕ್ಕೆ ಹೆಚ್ಚು ಪ್ರಚಾರ ಸಿಗಬೇಕು ಮತ್ತು ಈ ಸಂಸ್ಥೆ ಮುನ್ನೆಲೆಗೆ ಬರಬೇಕು.