ಕಗ್ಗ ದರ್ಶನ – 21 (1)

ಕಗ್ಗ ದರ್ಶನ – 21 (1)

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು
ತೇಲುತ್ತ ಭಯವ ಕಾಣದೆ ಸಾಗುತಿರಲು
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ
ಮೇಲ ಕೀಳಾಗಿಪುದು - ಮಂಕುತಿಮ್ಮ
ಕಾಲವೆಂಬ ನದಿಯಲ್ಲಿ ಸಾಗುವ ಬಾಳೆಂಬ ದೋಣಿ – ಇದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಕೊಡುವ ಸರಳ ರೂಪಕ. ಬಾಳಿನಲ್ಲಿ ಯಾವ ಭಯವೂ ಇಲ್ಲದೆ, ದೋಣಿಯಂತೆ ಹಾಯಾಗಿ ಸಾಗುತ್ತಿರಲು ಅಚಾನಕ್ ಆಘಾತ: ಎಲ್ಲಿಂದಲೋ ಬೀಸಿ ಬರುವ ಬಿರುಗಾಳಿ ದೋಣಿಯನ್ನು ತಲೆಕೆಳಗಾಗಿಸುತ್ತದೆ. ಬದುಕಿನಲ್ಲಿಯೂ ಆಘಾತದಿಂದಾಗಿ ಅಲ್ಲೋಲಕಲ್ಲೋಲ.
ಕಳೆದ ಹತ್ತು ವರುಷಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದಾಗಿ ಸತ್ತವರ ಸಂಖ್ಯೆ ೧೦ ಲಕ್ಷ. ಅಂದರೆ ಪ್ರತಿ ಗಂಟೆಗೆ ೧೫ ಜನರ ಸಾವು. ಪ್ರತಿದಿನವೂ ರಸ್ತೆ ಅಪಘಾತಗಳಿಗೆ ಬಲಿಯಾಗುವ ಮಕ್ಕಳ ಸಂಖ್ಯೆ ೨೦. ರಸ್ತೆಯ ಪಕ್ಕ ನಡೆದುಕೊಂಡು ಹೋಗುವವರೂ ಸುರಕ್ಷಿತರಲ್ಲ. ಯಾಕೆಂದರೆ, ಕಳೆದ ದಶಕದಲ್ಲಿ ರಸ್ತೆ ಅಪಘಾತಗಳಿಂದಾಗಿ ೧.೨ಲಕ್ಷ ಪಾದಚಾರಿಗಳ ಮರಣ.
ಹೀಗೆ ಸತ್ತವರ ಬದುಕು ನದಿಯ ಮೇಲಣ ದೋಣಿಯಂತೆ ಚೆನ್ನಾಗಿ ಸಾಗುತ್ತಿತ್ತು. ಅಪ್ಪಳಿಸಿತು ನೋಡಿ ಅಪಘಾತ – ಯಾರದೋ ತಪ್ಪಿನಿಂದಾಗಿ ಇವರ ಕುಟುಂಬಕ್ಕೆ ಎಂದಿಗೂ ಮುಗಿಯದ ನೋವು.
ಅಪಘಾತದಲ್ಲಿ ಸತ್ತವರ ಕುಟುಂಬದವರಿಗೆ ಪರಿಹಾರ ಸಿಕ್ಕೀತು – ಆದರೆ ಅದಕ್ಕಾಗಿ ಎಷ್ಟೆಲ್ಲ ಯಾತನೆ. ಆಸ್ಪತ್ರೆಯಿಂದ ಸತ್ತವರ ಶವ ಬಿಡಿಸಿಕೊಳ್ಳಲಿಕ್ಕೂ ಲಂಚ ಕೊಡಬೇಕಾದ ಸಂಕಟ. ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಲಿಕ್ಕಾಗಿ ಮತ್ತೆಮತ್ತೆ ಭೇಟಿ. ವಿಮಾ ಕಂಪೆನಿಯವರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಿಕ್ಕಾಗಿ ಓಡಾಟ. ಮೋಟಾರು ವಾಹನಗಳ ಅಪಘಾತ ಪರಿಹಾರ ಕೋರ್ಟಿಗೆ ಅಲೆದಲೆದು ಸುಸ್ತು. ಐದು ವರುಷ ದಾಟಿದರೂ ಕೋರ್ಟಿನಿಂದ ಪರಿಹಾರ ಸಿಗದಿರುವ ಪ್ರಕರಣಗಳು ಸಾವಿರಾರು.
ಈ ವರುಷ ಯುರೋಪಿಗೆ ನೌಕೆಗಳಲ್ಲಿ ಅಥವಾ ದೋಣಿಗಳಲ್ಲಿ ನುಸುಳುವಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಮಡಿದ ೨,೦೦೦ ಜನರು; ಜೂನ್ ೨೦೧೩ರಲ್ಲಿ ಕೇದಾರನಾಥ ಹಾಗೂ ಉತ್ತರಖಂಡದ ರುದ್ರಪ್ರಯಾಗ, ಉತ್ತರಕಾಶಿಗಳಲ್ಲಿ ಜಲಪ್ರಳಯಕ್ಕೆ ಬಲಿಯಾದ ೫,೦೦೦ ಜನರು; ಭಯಂಕರ ಸುನಾಮಿಯಲ್ಲಿ ಸತ್ತ ೨,೭೫,೦೦೦ ಜನರು; ಇತ್ತೀಚೆಗೆ ನೇಪಾಳದ ತೀವ್ರ ಭೂಕಂಪದಲ್ಲಿ ಜೀವ ಕಳೆದುಕೊಂಡ ಸಾವಿರಾರು ಜನರು. ಇವರೆಲ್ಲರ ಕುಟುಂಬಗಳ ಪಾಡು ನದಿಯಲ್ಲಿ ಅಡಿಮೇಲಾದ ದೋಣಿಯಂತೆ. ಇದರ ಪಾಠ: ಯಾವುದೂ ಭೂಮಿಯಲ್ಲಿ ಸ್ಥಿರವಲ್ಲ, ಇಂದಿನಂತೆ ನಾಳೆಯಿಲ್ಲ.

Comments