ಸತ್ಸಂಗದ ಸತ್ಯ

ಸತ್ಸಂಗದ ಸತ್ಯ

    "ನೀವು ಸತ್ಸಂಗಕ್ಕೆ ಏಕೆ ಹೋಗುತ್ತೀರಿ?" - ಸತ್ಸಂಗಕ್ಕೆ ಹೋಗುವ ಕೆಲವರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತರಗಳಿವು:

'ಸತ್ಸಂಗಕ್ಕೆ ಹೋಗುವುದರಿಂದ ನೆಮ್ಮದಿ ಸಿಗುತ್ತದೆ.'

'ಮನಸ್ಸು ಹಗುರವಾಗುತ್ತದೆ.'

'ಮನೆ, ಕಛೇರಿಗಳ ಜಂಜಾಟದಿಂದ ರೋಸಿದ ಮನಸ್ಸಿಗೆ ಶಾಂತಿ ಸಿಗುತ್ತದೆ.'

     ಇದೇ ಅರ್ಥದ ಹಲವು ಉತ್ತರಗಳು ಬಂದರೆ, ಒಬ್ಬರು ಮಾತ್ರ, 'ಟೈಮ್ ಪಾಸ್ ಅಗುತ್ತದೆ' ಅಂದಿದ್ದರು. ಸತ್ಸಂಗದ ಅಂತರಂಗಕ್ಕಿಳಿಯಲು ಈ ಉತ್ತರಗಳು ಪ್ರೇರಿಸಿದವು. 'ಸತ್ಸಂಗ' ಎಂಬದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ 'ಸತ್ಯದೊಡನೆ ಇರುವುದು', 'ಸತ್ಯಕ್ಕಾಗಿ ಒಗ್ಗೂಡುವುದು' ಅರ್ಥಾತ್ ಸತ್ಯದ ಸಂಗ ಮಾಡುವುದು ಎಂದಾಗುತ್ತದೆ. ವ್ಯಾವಹಾರಿಕ ಬಳಕೆಯಲ್ಲಿ ಸದ್ವಿಚಾರಗಳನ್ನು ಪ್ರೇರಿಸುವ, ಪ್ರಸರಿಸುವ ಸಜ್ಜನರ ಕೂಟವೇ ಸತ್ಸಂಗ. ಅದು ಒಟ್ಟಿಗೆ ಭಜನೆ ಮಾಡುವುದಿರಬಹುದು, ಉಪನ್ಯಾಸಗಳನ್ನು ಕೇಳುವುದಿರಬಹುದು, ವಿಚಾರ ಕಮ್ಮಟವಿರಬಹುದು, ಧಾರ್ಮಿಕ/ಸಾಂಸ್ಕೃತಿಕ/ಸಾಹಿತ್ಯಿಕ ವಿಷಯಗಳ ಕಾರ್ಯಕ್ರಮಗಳಿರಬಹುದು, ಒಟ್ಟಾರೆಯಾಗಿ ಧನಾತ್ಮಕ ಅಂಶಗಳಿಗೆ ಒತ್ತು ಕೊಡುವ ಯಾವುದೇ ಚಟುವಟಿಕೆಗಳನ್ನು ಸತ್ಸಂಗದ ವ್ಯಾಪ್ತಿಯಲ್ಲಿ ತರಬಹುದು.

     ನಾನು ಭಾಗವಹಿಸಿರುವ ಒಂದು ಮಾದರಿ ಸತ್ಸಂಗದ ಬಗ್ಗೆ ಉದಾಹರಿಸಿ ವಿಷಯ ಮುಂದುವರೆಸುವೆ. ಬೆಂಗಳೂರಿನಲ್ಲಿರುವ 118ವರ್ಷಗಳ ಪಂ. ಸುಧಾಕರ ಚತುರ್‍ವೇದಿಯವರ ಮನೆಯಲ್ಲಿ ಪ್ರತಿ ಶನಿವಾರ ಸಂಜೆ 5.30ಕ್ಕೆ ಸರಿಯಾಗಿ ಸತ್ಸಂಗ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ ಸರಳ ಅಗ್ನಿಹೋತ್ರ ನಡೆಯುತ್ತದೆ. ದಿವ್ಯ ಮತ್ತು ಹಿತಕರ ವಾತಾವರಣ ಉಂಟುಮಾಡುವ ಈ ಅಗ್ನಿಹೋತ್ರ ಸುಮಾರು 15 ನಿಮಿಷಗಳ ಕಾಲ ನಡೆಯುತ್ತದೆ. ನಂತರದಲ್ಲಿ ಎರಡು ವೈದಿಕ ಭಜನೆಗಳನ್ನು ಸಾಮೂಹಿಕವಾಗಿ ಹಾಡಲಾಗುತ್ತದೆ. ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಆಸಕ್ತರು ಭಾಗವಹಿಸುತ್ತಾರೆ. ನಂತರದಲ್ಲಿ ಪಂ. ಸುಧಾಕರ ಚತುರ್‍ವೇದಿಯವರು ಸುಮಾರು 40 ನಿಮಿಷಗಳ ಕಾಲ ಮಾತನಾಡುತ್ತಾರೆ. ಯಾವುದಾದರೂ ಒಂದು ವೇದಮಂತ್ರದ ಅರ್ಥ, ವಿಸ್ತಾರ ತಿಳಿಸುತ್ತಾ, ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತಾ ಮನುಕುಲ ಬಾಳಬೇಕಾದ ರೀತಿಯ ಕುರಿತು ಹೇಳುವ ಅವರ ಮಾತುಗಳು ಹೃದಯಸ್ಪರ್ಷಿಯಾಗಿರುತ್ತವೆ. ಕೊನೆಯಲ್ಲಿ ಬಂದವರ ಪೈಕಿಯೇ ಯಾರಾದರೂ ಒಬ್ಬರು ತಂದಿರುವ ಸಿಹಿ ಅಥವ ಪ್ರಸಾದವನ್ನು ಎಲ್ಲರಿಗೂ ಹಂಚುವುದರೊಂದಿಗೆ ಸತ್ಸಂಗ ಮುಗಿಯುತ್ತದೆ. ನನಗಂತೂ ಅವರ ಮಾತುಗಳು ಅಂತರಂಗವನ್ನು ಬಡಿದೆಬ್ಬಿಸಿವೆ, ಎಚ್ಚರಿಸಿವೆ, ಸರಿದಾರಿಯನ್ನು ತೋರಿಸಿವೆ. ನನ್ನಂತೆಯೇ ಹಲವರ ಅಭಿಪ್ರಾಯವೂ ಇದೇ ಆಗಿವೆ.

     ಸತ್ಸಂಗದ ಪೂರ್ಣ ಲಾಭ ಸಿಗಬೇಕೆಂದರೆ ಬಾಗಿಲ ಬಳಿಯಲ್ಲಿಯೇ ನಮ್ಮ ದಿನನಿತ್ಯದ ಚಿಂತೆಗಳು, ಮನದಲ್ಲಿ ಮೂಡುವ ವಿಚಾರಗಳು, ಹಳೆಯ ಎಲ್ಲಾ ಸಂಗತಿಗಳನ್ನು ಮರೆತು ಒಬ್ಬ ಹೊಸ ವಿದ್ಯಾರ್ಥಿಯಂತೆ, ಏನೂ ಗೊತ್ತಿಲ್ಲದವರಂತೆ, ಹೊಸದಾಗಿ ತಿಳಿಯಲು ಉತ್ಸುಕನಾಗಿ ಒಳಪ್ರವೇಶಿಸುವುದು ಉತ್ತಮ. ಯಾವಾಗಲೂ ಹೊಸಬರಂತೆ ಮತ್ತು ಹೊಸಬರಂತೆಯೇ ಇರಲು ಅಭ್ಯಾಸ ಮಾಡಿಕೊಂಡರೆ ಉತ್ತಮ ಅನುಭವ ನಮ್ಮದಾಗುವುದು. ಸತ್ಸಂಗದಲ್ಲಿ ಸಮಾನ ಮನಸ್ಕರು ಒಂದು ಸಮಾನ ಧನಾತ್ಮಕ ವಿಷಯದ ಸಲುವಾಗಿ ಒಟ್ಟುಗೂಡುತ್ತಾರೆ. ಈ ರೀತಿಯ ಒಟ್ಟುಗೂಡುವಿಕೆಯೇ ಪರಿಣಾಮಕಾರಿಯಾಗಿರುತ್ತದೆ. ಸುಮ್ಮನೆ ಸಮಯ ಕಳೆಯಲು ಬರುವವರಿಂದಲೂ ಉಪಯೋಗವಿದೆ. ಕನಿಷ್ಠ ಸತ್ಸಂಗ ನಡೆಯುವ ಒಂದು, ಒಂದೂವರೆ ಗಂಟೆಯವರೆಗಾದರೂ ಅವರು ಋಣಾತ್ಮಕ ವಿಷಯಗಳಿಂದ ದೂರವಿರುತ್ತಾರಲ್ಲಾ! ಅಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮ, ಭಜನೆ, ಇತ್ಯಾದಿಗಳಿಂದ ಒಂದು ಅಲೌಕಿಕ, ಸಂತಸಕರ, ಹಿತಕರ ತರಂಗಗಳು ಉಂಟಾಗುತ್ತವೆ. ಈ ತರಂಗಗಳು ಅಲ್ಲಿ ಸೇರಿದವರ ಮೇಲೆ ಒಳ್ಳೆಯ ಪ್ರಭಾವ ಬೀರಿ ಆನಂದವನ್ನುಂಟುಮಾಡುತ್ತವೆ. ಒಳ್ಳೆಯ ವಿಚಾರಗಳ ಕುರಿತು ಯೋಚಿಸುವಂತೆ, ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅಲ್ಲಿ ಪ್ರೇರೇಪಣೆ ಸಿಗುತ್ತದೆ. ಸತ್ಸಂಗದ ಯಶಸ್ಸು ಇರುವುದು ಇಲ್ಲಿಯೇ!

     ಆದಿ ಶಂಕರಾಚಾರ್ಯರ ಭಜಗೋವಿಂದಮ್ ಸ್ತೋತ್ರದ ಒಂಬತ್ತನೆಯ ಶ್ಲೋಕ ಹೀಗಿದೆ:

ಸತ್ಸಂಗತ್ವೇ ನಿಸ್ಸಂಗತ್ವಮ್ ನಿಸ್ಸಂಗತ್ವೇ ನಿರ್ಮೋಹತ್ವಮ್

ನಿರ್ಮೋಹತ್ವೇ ನಿಶ್ಚಲತತ್ತ್ವಮ್ ನಿಶ್ಚಲತತ್ವೇ ಜೀವನ್ಮುಕ್ತಿಃ||

     ಉತ್ತಮರಾದ ವಿದ್ವಜ್ಜನರ ಸಹವಾಸದಿಂದ ಒಬ್ಬ ವ್ಯಕ್ತಿ ಎಲ್ಲಾ ರೀತಿಯ ಬಂಧನಗಳಿಂದ ಮುಕ್ತನಾಗುತ್ತಾನೆ, ಈ ರೀತಿಯಾಗಿ ಭ್ರಮೆಗಳಿಂದ ಹೊರಬಂದವನು ತಪ್ಪುದಾರಿಯಲ್ಲಿ ಹೋಗುವದಿಲ್ಲ, ಸರಿದಾರಿಯಲ್ಲೇ ನಡೆಯುತ್ತಾನೆ. ಈ ನಿರ್ಮೋಹತ್ವದಿಂದ ಮನಸ್ಸು ಚಂಚಲವಾಗುವುದಿಲ್ಲ, ಪ್ರಾಪಂಚಿಕ ಆಕರ್ಷಣೆಗಳಿಂದ ವಿಚಲಿತಗೊಳ್ಳುವುದಿಲ್ಲ. ಈ ಗುಣದಿಂದಾಗಿ ಮುಕ್ತಿಯನ್ನು ಸಾಧಿಸುತ್ತಾನೆ ಎಂಬುದು ಈ ಶ್ಲೋಕದ ಅರ್ಥ. ಸತ್ಸಂಗದ ಉದ್ದೇಶ ಅರ್ಥಪೂರ್ಣವಾಗಿ, ಸಮರ್ಥವಾಗಿ ಈ ಶ್ಲೋಕದಲ್ಲಿ ಚುಟುಕಾಗಿ ಬಿಂಬಿತಗೊಂಡಿದೆ.

     ಈ ವೇದಮಂತ್ರದ ಆಶಯವೂ ಇದೇ ಆಗಿದೆ:

ಓಂ ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಛರತ್| ಪಶ್ಶೇಮ ಶರದಃ ಶತಂ ಜೀವೇಮ ಶರದದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮದೀನಾಃ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್|| (ಯಜು.೩೬.೨೪.)

     ಅರ್ಥ: ವಿದ್ವಜ್ಜನರಿಗೆ ಹಿತಕಾರಿಯಾದ, ವಿದ್ವಜ್ಜನರಿಂದ ಪೂಜಿತನಾದ ಪರಮಾತ್ಮ ನಮ್ಮ ಮುಂದೆ ವಿರಾಜಿಸುತ್ತಿದ್ದಾನೆ. ಆ ಪರಮಾತ್ಮನ ಕೃಪೆಯಿಂದ ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ನೋಡುತ್ತಿರೋಣ, ನೂರು ವರ್ಷಗಳ ಕಾಲ (ಒಳ್ಳೆಯ ರೀತಿಯಲ್ಲಿ) ಜೀವಿಸೋಣ, ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ಕೇಳುತ್ತಿರೋಣ, ನೂರು ವರ್ಷಗಳ ಕಾಲ ದಾಸ್ಯತನಕ್ಕೆ ಒಳಪಡದೆ ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬಾಳೋಣ ಮತ್ತು ಈ ರೀತಿಯಾಗಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸೋಣ.

-ಕ.ವೆಂ.ನಾಗರಾಜ್.