ಕ್ರೇಜಿ ಪೀಪಲ್

Submitted by BHARADWAJ B S on Sun, 04/29/2018 - 11:35

  ಒಮ್ಮೆ ಕೆಲಸದ ಮೇರೆಗೆ ಹೊರದೇಶಕ್ಕೆ   ಹೋಗಬೇಕಾಯಿತು. ಆದುದರಿಂದ ಎಲ್ಲಾ ತರಹದ ಸಿದ್ಧತೆಗಳನ್ನು ಮಾಡಿ ಇನ್ನೆರಡು ದಿನ ಹೋಗಬೇಕೆನ್ನುವಷ್ಟರಲ್ಲಿ ನಮ್ಮ  ಮ್ಯಾನೇಜರ್ ಒಂದು ಮಾತು ಹೇಳಿದರು "ನೋಡು ನೀನು ಹೇಗಾದರೂ ಮಾಡಿ ಆಲ್ಬರ್ಟ್  ರವರನ್ನು ಬೇಟಿಯಾಗು  ಅಂತವರು ಬಹಳ ಅಪರೂಪ " ಎಂದು ಹೇಳಿದ್ದರು . ನನಗೆ ಒಂದು ತರ ವಿಚಿತ್ರವೆನಿಸಿತು. 

 

      ಆಲ್ಬರ್ಟ್  ರವರು ನನಗೆ ಅಪರಿಚಿತರೇನಲ್ಲ ನಮ್ಮ ಲ್ಯಾಬ್ ನ ಅತ್ಯಂತ ಕ್ಲಿಷ್ಟ ಉಪಕರಣಗಳನನ್ನೆಲ್ಲಾ ಅವರೇ ಖುದ್ದು  ವಿನ್ಯಾಸ ಮಾಡಿ ತಯಾರಿಸಿದ್ದರು.  ಅಷ್ಟೇ ಅಲ್ಲದೆ ನಮ್ಮ ತಾಂತ್ರಿಕ ವಿನ್ಯಾಸಗಳಗಳ   ಮಾಂತ್ರಿಕ ಎಂಬ ಹೆಗ್ಗಳಿಕೆಯನ್ನೂ  ಗಳಿಸಿದ್ದರು.ಅವರ ಅಧಿಕಾರ ಕೂಡ  ಯಾವ ಪರಿ ಇತ್ತೆಂದರೆ ನಮ್ಮ  ಟೆಕ್ನಿಕಲ್  ವಿಂಗ್ನ  ಅತ್ಯಂತ ಎತ್ತರದ ಅಧಿಕಾರಿ ಕೂಡಾ ತಾಂತ್ರಿಕ ವಿಷಯದಲ್ಲಿ ಅವರ ಸಲಹೆ ಕೇಳುತ್ತಿದ್ದರು. ಅಷ್ಟು ದೊಡ್ಡ ಬುದ್ದಿವಂತರು. ಆದರೆ  ನನಗೆ ಗೊತ್ತಿರುವ ಹಾಗೆ ಅವರು ನಮ್ಮೊಂದಿಗೆಲ್ಲಾ ಮಾತನಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಯಾವಾಗಲೂ ಕಾರ್ಯ ನಿರತರಾಗಿರುತ್ತಿದ್ದರು.  ಅಂತವರನ್ನು ನಾನು ಹೇಗೆ ಭೇಟಿ ಮಾಡಿ ಬರಲು ಸಧ್ಯ ಅದು ಅಲ್ಲದೆ ಅವರ ಹತ್ತಿರ ನನ್ನ ಕೆಲಸವೇನು ಇರಲಿಲ್ಲ, ಹೇಗೆ ಸಾಧ್ಯ ಎಂದುಕೊಂಡು ಹೊರಟೆ. 

 

       ನನ್ನ ಮೊದಲ ವಿದೇಶ ಪ್ರಯಾಣವಾದ್ದರಿಂದ  ತುಂಬಾ ಹುರುಪಿನಲ್ಲಿದ್ದೆ.  ಹೊಸ ಜಾಗ ಹೊಸ ಜನ ಎಲ್ಲಾ  ಹೊಸತು. ಹಾಗೆಯೆ ಆಫೀಸ್ ಕೂಡ. ನನಗೆ ಅಲ್ಲಿನ ಮ್ಯಾನೇಜರ್ ಡೆನ್ನಿಸ್ ಎಂಬುವರು. ಮೊದಲ ದಿನ ಎಲ್ಲರನ್ನೂ ಪರಿಚಯಿಸಿ ಕೆಲಸದ ಬಗ್ಗೆ ಹಾಗೂ ನನ್ನ ಇರುವಿಕೆಯ ಬಗ್ಗೆ ಚರ್ಚೆ ನಡೆಸಿ ಹೋದರು.
  

      ಒಂದು ಗಮನಿಸಿದ ವಿಷಯವೆಂದರೆ ಅಲ್ಲಿ ಕಸ ಗುಡಿಸುವವರು ,ಹೆಲ್ಪರ್ ಗಳು  ಹಾಗು ಕ್ಲೀನರ್ ಗಳನ್ನೂ  ಕೂಡಾ  ಗೌರವ ದಿಂದ ನೋಡುತ್ತಿದ್ದರು. ಅಲ್ಲಿಯ  ಜನಕ್ಕೆ  ಆ ಯಾ ಕೆಲಸಕ್ಕೆ ಅದರದೇ ಆದ ಗೌರವವಿರುತ್ತದೆ ಎಂಬ ಒಳ್ಳೆ ಮನೋಭಾವವಿತ್ತು.  ನಾವು ಕೂಲ್ ಡ್ರಿಂಕ್ಸ್  ಹಾಗು ಜ್ಯೂಸ್  ಬಾಟಲಿ ಗಳನ್ನೂ ಕುಡಿದು ಅಲ್ಲಿಯೇ ಲ್ಯಾಬ್ ಮೇಜಿನ  ಮೇಲೆ ಇಟ್ಟುಬಿಡುತ್ತಿದ್ದೆವು. ಕ್ಲೀನರ್ ಒಬ್ಬರು ದಿನಾ  ಬೆಳಗ್ಗೆ ಅದನ್ನು ಒಂದು ಕ್ರೇಟ್ ಗಳಲ್ಲಿ ಜೋಡಿಸಿಕೊಂಡು ಹೋಗುತ್ತಿದ್ದರು. ಆದರೆ ಅವರು ಸುಮಾರು ಐವತ್ತೈದರಿಂದ ಅರವತ್ತು ವರುಷದವರಾಗಿದ್ದರಿಂದ ನನಗೆ ಸ್ವಲ್ಪ ಮುಜುಗರ, ಆದ್ದರಿಂದ ಎಲ್ಲವನ್ನೂ ಒಂದು ಕಡೆ ಕಲೆ ಹಾಕಿ ಅವರಿಗೆ ಎತ್ತಿ ಕೊಡುತ್ತಿದ್ದೆ. ಏನೇ ಆದರೂ ಅವರು ಬಂದ  ತಕ್ಷಣ ನಗುಮುಖದಿಂದ "ಹಲೋ" ಎಂದು , ಹಾಗು ಹೊರಡಬೇಕಾದರೆ "ಥಾಂಕ್ ಯು" ಎಂದು ಹೇಳುತ್ತಿದ್ದರು. ಅವರ ಮುಖದಲ್ಲಿ ಕೆಲಸದ ತೃಪ್ತಿ ಎದ್ದು ಕಾಣುತ್ತಿದ್ದುದ್ದನ್ನು ಗಮನಿಸಿದೆ . 

 

       ಯಾವುದೊ ಒಂದು ಕೆಲಸದಲ್ಲಿ ನಾನು ಮತ್ತು ಡೆನ್ನಿಸ್ ಏನನ್ನೋ ಚರ್ಚಿಸ ಬೇಕಾದರೆ ಅವರು ಹೇಳಿದರು. "ಒಂದು ಸಲ ನಾನು ಅಮೆರಿಕಾದ ಪ್ರತಿಷ್ಠಿತ ಕಂಪನಿಗೆ ನಮ್ಮ  ಅವಶ್ಯಕತೆಯನ್ನು ವಿವರಿಸಿ, ನಿಮ್ಮ ಹತ್ತಿರ ಏನಾದರು ಆ ಉಪಕರಣ ಇದ್ದರೆ ನಮಗೆ ಬೇಕಿತ್ತು ಎಂದು ಇಮೇಲ್ ಕಳುಹಿಸಿದೆ ಅದಕ್ಕವರು ಆ ಉಪಕರಣವನ್ನು ನಾವು ದುರುಪಯೋಗ ಮಾಡಿ ಕೊಳ್ಳ ಬಹುದು ಎಂದು ನಮಗೆ ಕೊಡಲು ನಿರಾಕರಿಸಿದ್ದರು ಆದರಿಂದ ನಾನು ಅವರಿಗೆ ಹೇಗೆ ಬರೆದಿದ್ದೆ, 

 

     'ನಮ್ಮ ಹತ್ತಿರ ಯಾವುದೇ ಆಯುಧಗಳಿಲ್ಲ ಆದರೆ ಆಲ್ಬರ್ಟ್  ಇದ್ದಾರೆ.ನೀವು ಕೊಡದಿದ್ದರೆ ಚಿಂತೆಇಲ್ಲ  ನಾವೇ ತಯಾರಿಸಿಕೊಳ್ಳುತ್ತೇವೆ' ಎಂದು.
 
      ಸಂಶೋಧನೆಯಿಂದ  ಮಾಡಬೇಕಾದ ಉಪಕರಣವನ್ನು ಇಷ್ಟು ಸುಲಭವಾಗಿ ನಾವೇ ತಯಾರಿಸುತ್ತೇವೆ ಎಂದು ಹೇಳಿದ್ದರಿಂದ ಗಾಬರಿಗೊಂಡು ಮಾರನೆಯ ದಿನ ಅದರ ವಹಿವಾಟುಗಳನ್ನು ಕಳುಹಿಸಿದ್ದರು" ಎಂದು ಹೇಳಿ ಜೋರಾಗಿ ನಕ್ಕರು. ನನಗೆ ಮರೆತೇ ಹೋಗಿತ್ತು ಅಷ್ಟರಲ್ಲಿ ಆ  ಬುದ್ದಿವಂತರನ್ನೊಮ್ಮೆ ನೋಡಬೇಕು ಎಂದು ಕೇಳಿದಾಗ ಡೆನ್ನಿಸ್ ಹೇಳಿದರು ಖಂಡಿತವಾಗಿಯೂ ನೀನು  ಹೋಗುವುದರೊಳಗೆ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು. ನಂತರ ನಮ್ಮ ನೆಟ್ವರ್ಕ್ ನಲ್ಲಿ ಅವರ ಹೆಸರನ್ನು ಟೈಪ್ ಮಾಡಿ ಮಾಹಿತಿ ಯನ್ನು ನೋಡಿದೆ. ಬರೀ ಇಂಜಿನಿಯರ್ ಅಂತ ಇತ್ತು ಅವರ ಫೋಟೋ ಕೂಡ ಇರಲಿಲ್ಲ. ಅಂದುಕೊಂಡೆ ಇದನ್ನು ಅಪ್ಡೇಟ್ ಮಾಡಿ ಯುಗಗಳೇ ಕಳೆದಿದ್ದವು ಎಂದು.
 

       ಮಾರನೆಯ ದಿನ ಬೆಳಗ್ಗೆ ಏನೋ ಯಡವಟ್ಟಾಗಿ ಕೆಲಸ ಕೈಮೀರಿತ್ತು. ನಾನು ಮತ್ತು ಡೆನ್ನಿಸ್ ಇಬ್ಬರು ಗಾಬರಿಗೊಂಡು ಚಡಪಡಿಸುತ್ತಿದ್ದೆವು. ಅದು ನಮ್ಮ ಕೈ ಮೀರಿದ್ದರಿಂದ ಆಲ್ಬರ್ಟ್  ಹತ್ತಿರ ಕೇಳುವುದು ಉತ್ತಮ ಎಂದು ಅವರ ಬಳಿ ಹೋದೆವು ಅವರಿನ್ನೂ ಬಂದಿರಲಿಲ್ಲ. ನಾನು ಅಂದು ಕೊಂಡ ಹಾಗೆ ಅವರಿಗೆ ಮೀಸಲಾದ ಕೊಠಡಿ ಇರಲಿಲ್ಲ ಬದಲಾಗಿ ಬೇರೆ ಒಂದು ಲ್ಯಾಬ್ ನ ಒಂದು ಅರ್ಧದಷ್ಟು ಅವರಿಗೆ ಕೊಟ್ಟಿದ್ದರು. ಒಬ್ಬ ಇಂಜಿನಿಯರ್ ಗೆ ನಮ್ಮ ಪ್ರಕಾರ ಸಂಬಳ ಹಾಗು ಐಷಾರಾಮಿ ಜೀವನ ತುಂಬಾ ಇಷ್ಟವಿರುತ್ತದೆ ಅಂತ ನಮ್ಮಲ್ಲಿ ನಂಬಿಕೆ ಇದೆ ಆದರೆ ಅದರ ಜೊತೆ  ಯಾವೊಬ್ಬ ಇಂಜಿನಿಯರ್ ಗೆ ತನಗಿಷ್ಟದ ಕೆಲಸ ಹಾಗು ಒಂದು ದೊಡ್ಡ ಲ್ಯಾಬ್ ಯಾವತ್ತೂ ಎಲ್ಲದಿಕ್ಕಿಂತ ಹೆಚ್ಚು ಖುಷಿ ಕೊಡುತ್ತದೆ. ಹಾಗೆಯೆ ನನಗೂ  ಅದನ್ನು ನೋಡಿ ಅತ್ಯಂತ ಖುಶಿಯಾಗಿದ್ದಿತು.

 

         ಅಷ್ಟರಲ್ಲಿ ಕಸ ಗುಡಿಸುವವರು ಹಾಗು ಆ ಕ್ಲೀನರ್  ಬಂದರು ನಾನು ಆಲ್ಬರ್ಟ್  ಬರುವ ಅಷ್ಟರಲ್ಲಿ ಹೋಗಿ ಏನಾದರು ತಯಾರಿ ಬೇಕಾ ಅಂದು ನೋಡಿ ಬರುತ್ತೇನೆ ಎಂದು ಡೆನ್ನಿಸ್ ಗೆ ಹೇಳಿದೆ. ಅದಕ್ಕವರು ನನ್ನ ಕಡೆ ತಿರುಗಿ "ಭರತ್ ಆಲ್ಬರ್ಟ್  ನ ಮೀಟ್ ಮಾಡಿ" ಎಂದು ಆ ಕ್ಲೀನರ್ ನ  ಕಡೆ ತೋರಿದರು. ಅವರಿಗೆ ನನನ್ನು ತೋರಿಸಿ ಜರ್ಮನ್ ಭಾಷೆಯಲ್ಲಿ ಪರಿಚಯ ಮಾಡಿಕೊಟ್ಟರು.    

         ಪರಮಾಶ್ಚರ್ಯ, ಉದ್ವೇಗ   ಈ ಎರಡರಿಂದಲೂ ನನ್ನ ಕಣ್ಣುಗಳನ್ನು ಅರಳಿಸಿ  ಅವರನ್ನೇ  ನೋಡುತ್ತಿದ್ದೆ  ಅವರು ನಮ್ರತೆಯಿಂದ ಬಂದು ನನ್ನ ಕೈ ಕುಲುಕಿ "ಹಲೋ" ಎಂದು ನಗುಮುಖದಿಂದ ಹೇಳಿದರು . ಅಷ್ಟರಲ್ಲಿ ಡೆನ್ನಿಸ್ ಬಂದು "ಭರತ್ ಇವರು ರಶಿಯಾ ದವರು ಇವರಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಅದಕ್ಕೆ ಅವರು ಜಾಸ್ತಿ ಯಾರ ಹತ್ತಿರವೂ ಮಾತನಾಡುವುದಿಲ್ಲ.  ಅಷ್ಟೇ ಅಲ್ಲದೆ ಜನ ಸೇವೆಯನ್ನು ಒಂದು ಹವ್ಯಾಸದ ತರಾ ರೂಢಿಸಿಕೊಂಡಿದ್ದಾರೆ ಉದಾಹರಣೆಗೆ  ಎಲ್ಲರ ಮೇಜಿನ ಮೇಲಿರುವ ಬಾಟಲಿಗಳನ್ನು ತೆಗೆಯುತ್ತಾರೆ". ಎಂದು ಹೇಳಿದರು. 

 

     ಒಂದು ಪೇಪರ್ ಕಸವನ್ನು  ಕಸದ ಬುಟ್ಟಿಗೆ ಹಾಕುವಾಗ ಅದರ ಛಾಯಾಚಿತ್ರವನ್ನು ತೆಗೆದು ಫೇಸ್ಬುಕ್ ನಲ್ಲೋ ಅಥವಾ ವಾಟ್ಸಪ್ ನಲ್ಲೋ ಹಾಕಿ ಏನೋ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ  ಮಾಡುತ್ತಿರುವ ತರಾ ತೋರಿಸಿಕೊಳ್ಳುವ ನಾವುಗಳು. ಹಾಗೆಯೇ  ಸಮಾಜ ಸೇವೆ ಹಾಗೂ ಜನಸೇವೆ ಬರೀ  ರಾಜಕಾರಣಿಗಳಿಗೇ ಮೀಸಲು ಎಂದು ನಂಬಿರುವ ನಾವುಗಳು,  ನಿಜವಾಗಿಲೂ ಜನಸೇವೆಯನ್ನೂ ಹಾಗು ಸರಳತೆಯನ್ನೂ ಇನ್ನೂ ಉಳಿಸಿಕೊಂಡಿರುವ ಇಂತವರ ಹತ್ತಿರ ತಿಳಿದುಕೊಳ್ಳಬೇಕು ಎಂದು ನನಗನಿಸಿತು.
 
           ನನ್ನ ಹತ್ತಿರ ಮಾತೇ  ಇರಲಿಲ್ಲ .ಸರ್ ಎಂ ವೀಶ್ವೇಶ್ವರಯ್ಯ ನವರು ಇಂತ ಸರಳತೆಯುಳ್ಳವರಾಗಿದ್ದರೆಂದು ತಿಳಿದುಕೊಂಡಿದ್ದೆ. ಅವರನ್ನು ನೋಡಲು ಆಗಲಿಲ್ಲ ಕಡೆಯ ಪಕ್ಷ ಇವರನ್ನಾದರೂ ನೋಡಿದೇನಲ್ಲಾ ಎಂದು ಸುಮ್ಮನಾದೆ.   ಈ ತರಹದ  ಕೂಡ ಜನ ಇರುತ್ತಾರಾ ಎಂದು ಇವತ್ತಿನ ವರೆಗೂ ಅದನ್ನು ನಾನು ಒಂದು ಒಳ್ಳೆಯ ಘಟನೆಯ ತರಹ ನೆನಪಿಸಿಕೊಳ್ಳುತ್ತೇನೆ.   

 

 

----ಭರತ್