ಕಗ್ಗ ದರ್ಶನ – 21 (2)

Submitted by addoor on Sun, 04/29/2018 - 22:21

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ
ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ
ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು
ಬಾಳು ತಾಳುಮೆ ಕಲಿತು – ಮರುಳ ಮುನಿಯ
ನಾವು ಹೇಗೆ ಬದುಕಬೇಕು? ಎಂಬದನ್ನು ತೋರಿಸಿ ಕೊಡಲು ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಕೊಡುವ ಉಪಮೆ ನದಿ ಮತ್ತು ಬೆಟ್ಟ. ಕಾಲವೆಂಬ ನದಿ ನಿರಂತರವಾಗಿ ಹರಿಯುತ್ತಿರುವಾಗ ಅದರ ನಡುವೆ ಶೀಲದ ಬೆಟ್ಟ (ಶೈಲ) ಸ್ಥಿರವಾಗಿ ನಿಂತಿರುತ್ತದೆ. ನದಿಯ ನೀರಿನ ರಭಸ, ಹೊಡೆತಗಳನ್ನು ಎದುರಿಸುತ್ತ ಅಲುಗಾಡದೆ ನಿಂತಿರುತ್ತದೆ. ಗಾಳಿ ಎಷ್ಟೇ ಬಿರುಸಿನಿಂದ ಬೀಸಿದರೂ ಆತ್ಮವೆಂಬ ಗಿರಿಯೂ ಅಚಲವಾಗಿ ಇರುತ್ತದೆ.
ಮರದಿಂದ ಬಿದ್ದ ಹಲಸಿನ ಹಣ್ಣು ಹೋಳು ಹೋಳಾಗಿ ಕೊಳೆತು ಹಾಳಾಗುವಂತೆ ಸಾಮಾನ್ಯ ಜನರೂ ತಮ್ಮ ಬದುಕಿನಲ್ಲಿ ಹಾಳಾಗುತ್ತಿದ್ದಾರೆ. ನೀನು ಹಾಗಾಗ ಬೇಡ; ತಾಳುಮೆ ಕಲಿತು ಬಾಳು ಎಂಬುದು ಅವರ ಹಿತನುಡಿ.
ಮೋಹನದಾಸ ಕರಮಚಂದ ಎಂಬ ವ್ಯಕ್ತಿ ಮಹಾತ್ಮನಾಗಿ ಬೆಳೆದ ಬಗೆಯನ್ನು ಗಮನಿಸಿ. ದಕ್ಷಿಣ ಆಫ್ರಿಕಾದಲ್ಲಿ ಅವರದು ಗೌರವಾನ್ವಿತ ವಕೀಲ ವೃತ್ತಿ. ಟಿಕೇಟು ಪಡೆದು ರೈಲಿನಲ್ಲಿ ಕುಳಿತಿದ್ದರೂ ಇವರ ಚರ್ಮದ ಬಣ್ಣ ಬಿಳಿಯಲ್ಲ ಎಂಬ ಕಾರಣಕ್ಕಾಗಿ ಸೊಕ್ಕಿನ ಬಿಳಿವ್ಯಕ್ತಿಯೊಬ್ಬ ಇವರನ್ನು ರೈಲು ಬೋಗಿಯಿಂದ ಹೊರದಬ್ಬಿಸುತ್ತಾನೆ. ಆಗಲೇ ಅವರು ಮಾಡಿದ ಸಂಕಲ್ಪ: ಇಂತಹ ಅವಮಾನ ನನ್ನ ದೇಶಬಾಂಧವರು ಯಾರಿಗೂ ಇನ್ನು ಆಗಬಾರದು. ಮುಂದಿನ ವರುಷಗಳಲ್ಲಿ ಎಲ್ಲ ವಿರೋಧ, ಟೀಕೆಗಳನ್ನು ತಮ್ಮ ಸದಾಚಾರದ ಬಲದಿಂದ ಎದುರಿಸಿ ಮುನ್ನಡೆದರು ಮಹಾತ್ಮಾ ಗಾಂಧಿ. ಮತ್ತೆಮತ್ತೆ ಬ್ರಿಟಿಷ್ ಆಡಳಿತ ಜೈಲಿಗೆ ತಳ್ಳಿದರೂ ಅವರ ಆತ್ಮಬಲ ಕಿಂಚಿತ್ತೂ ಅಲುಗಾಡಲಿಲ್ಲ. ಉಪ್ಪಿನ ಸತ್ಯಾಗ್ರಹದ ಮೂಲಕ ಇಡೀ ದೇಶದಲ್ಲೇ ಸಂಚಲನ ಮೂಡಿಸಿದರು. ಕೊನೆಗೆ ಬ್ರಿಟಿಷರಿಗೆ “ದೇಶ ಬಿಟ್ಟು ತೊಲಗಿ” ಎಂಬ ಆದೇಶ ನೀಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು. ಹೋರಾಟದ ಹಾದಿಯಲ್ಲಿ ಅವರ ಸದಾಚಾರ ಬೆಟ್ಟದಂತೆ ಅಚಲ.
ಈ ವರುಷ ನಮ್ಮನ್ನು ಅಗಲಿದ ಇನ್ನೊಬ್ಬ ಧೀಮಂತ ವ್ಯಕ್ತಿ ಎ.ಪಿ.ಜೆ. ಅಬ್ದುಲ್ ಕಲಾಂ. ಬಡಕುಟುಂಬದಲ್ಲಿ ಹುಟ್ಟಿ, ಬಾಲ್ಯದಲ್ಲಿ ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತ ಕಲಿತು, ವಿಜ್ನಾನಿಯಾದರು. ಕೊನೆಗೆ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನ ಅಲಂಕರಿಸಿ, ಅದಕ್ಕೂ ಘನತೆ ತಂದುಕೊಟ್ಟರು. “ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ೨೦೨೫ರಲ್ಲಿ ಭಾರತವನ್ನು ಮಹಾನ್ ದೇಶ ಮಾಡೋಣ” ಎಂದು ಲಕ್ಷಗಟ್ಟಲೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹುರಿದುಂಬಿಸಿದರು. ೧೨೫ ಕೋಟಿ ಜನರಿರುವ ದೇಶದಲ್ಲಿ ಎಲ್ಲರ ಪ್ರೀತಿ-ಗೌರವಕ್ಕೆ ಪಾತ್ರರಾಗಿ ಬಾಳುವುದು ಹೇಗೆಂದು ತೋರಿಸಿಕೊಟ್ಟರು. ಈ ಇಬ್ಬರ ಬದುಕು ತಾಳುಮೆ ಕಲಿತು ಬಾಳುವುದು ಹೇಗೆಂಬುದಕ್ಕೆ ನಿದರ್ಶನ.