ವಾಸ್ತವ್ಯ (ವ)

Submitted by sriprasad82 on Wed, 05/02/2018 - 10:26

ಕೆಲ ವರ್ಷಗಳ ಹಿಂದೆ ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ. ಗ್ರಾಮದ ಮನೆಯೊಂದರಲ್ಲಿ ಶಾಸಕರ ವಾಸ್ತವ್ಯದ ಬಳಿಕ ಆಕೆಯ ಮನೆಯಿಂದ ಲೈಟು ಪ್ಯಾನುಗಳನ್ನು ಒಯ್ದಿದ್ದರಂತೆ. ಅದನ್ನೇ ಆದರಿಸಿ ಬರೆದ ಒಂದು ಕಥೆ.... As usual....ಪಾತ್ರಗಳು ಸನ್ನಿವೇಶಗಳು ಕೇವಲ ನನ್ನ ಹುಚ್ಚು ಮನಸ್ಸಿನ ಕಲ್ಪನೆಗಳಷ್ಟೇ 

 

ವಾಸ್ತವ್ಯ (ವ)

 
ಬೆಳ್ಳಂಬೆಳಗ್ಗೆ ಕೋಳಿಯ ಕೂಗು ದ್ಯಾವಮ್ಮನನ್ನು ಎಬ್ಬಿಸಿತ್ತು. ಜೀವಕ್ಕೆ ಇನ್ನೂ ನಿದ್ದೆ ಬೇಕೆನಿಸಿದ್ರು ಆಕೆ ಮಾಡುವಂತಿರಲಿಲ್ಲ. ಯಾಕಂದ್ರೆ ದಿನವಿಡೀ ಯಂತ್ರದಂತೆ ಕೆಲಸ ಮಾಡಿದ್ರೆ ಮಾತ್ರ ಆಕೆ ಮೂರು ಹೊತ್ತು ಉಣ್ಣಬಹುದಿತ್ತು. . ಒಂದು ಮುರುಕಲು ಗುಡಿಸಲು, 2 ಬಡಕಲು ದನ, ಹತ್ತಾರು ಮಲ್ಲಿಗೆ ಗಿಡ, ನಾಲ್ಕೈದು ಕೋಳಿಗಳು ಇವಿಷ್ಟೇ ಆಕೆಯ ಆಸ್ತಿ. ಆಕೆಯೇನಾದರೂ ಗೊಣಗಾಡುತ್ತಿದ್ದರೆ ಹಟ್ಟಿಯಲ್ಲಿ ಅಂಬಾ ಅನ್ನೋ ದನದ ಕೂಗು ಬಿಟ್ಟರೆ ಆ ಮನೆ ಹಾದಿಯಲ್ಲಿ ಅಪ್ಪಿ ತಪ್ಪಿನೂ ಯಾರು ಸುಳಿಯುತ್ತಿರಲಿಲ್ಲ. ಮುಳ್ಳಿನ ಪೊದೆಗಳು, ಚೂಪಾದ ಕಲ್ಲುಗಳಿಂದ ತುಂಬಿದ ಕಾಲುದಾರಿ ಹಿಡಿದು ಆ ಮನೆಗೆ ಬರೋ ಅಗತ್ಯ ಕೂಡ ಯಾರಿಗೂ ಇರಲಿಲ್ಲ. ಬೆಳಗ್ಗೆ ನಸುಕಿನಲ್ಲೆದ್ದು ಹೂ ಕಿತ್ತು, ಹಾರ ಪೋಣಿಸಿ, ಹಟ್ಟಿಗೆ ಹೋಗಿ ಹಾಲು ಕರೆದು, ಅವಕ್ಕೆ ನೀರಿಟ್ಟು, ಆಮೇಲೆ ದನಗಳನ್ನು ಕಾಡಿನ ಪಕ್ಕದ್ಲಲಿರೋ ಬಯಲಿಗೆ ಬಿಟ್ಟು ಬರೋವಷ್ಟರಲ್ಲಿ ಗಂಟೆ ಎಂಟಾಗಿರುತ್ತಿತ್ತು. ನುಜ್ಜು ಗಜ್ಜಾಗಿರೋ ಅಲುಮೀನಿಯಂ ಕ್ಯಾನಿನಲ್ಲಿ ಹಾಲು ತುಂಬಿ, ಕಟ್ಟಿರೋ ಹಾರಗಳನ್ನು  ಚೀಲದಲ್ಲಿ ತುರುಕಿ ಪೇಟೆಯತ್ತ ಬಾರವಾದ ಹೆಜ್ಜೆಗಳನ್ನಿಟ್ಟು ಪೇಟೆ ಸೇರೋವಷ್ಟರಲ್ಲಿ ಸೂರ್ಯ ನೆತ್ತಿ ಮೇಲಿರುತ್ತಿದ್ದ. ಹಾಲು ಡೈರಿಗೆ ಕೊಟ್ಟು ಪೇಟೆಯ ಸಂತೆಯ ಬದಿಯಲ್ಲಿ ಮರದ ಕೆಳಗೆ ಹೂ ಮಾರಲು ಕೂತು ಬಿಡುತ್ತಿದ್ದಳು. ಕೇರಿಯ ಕೆಲ ಮನೆಗಳನ್ನು ಬಿಟ್ಟರೆ ಹೂ ಕೊಳ್ಳಲು ಅವಳ ಹತ್ರ ಯಾರು ಬರುತ್ತಿರಲಿಲ್ಲ, ಕಾರಣ ಇಷ್ಟೇ ಆಕೆ ಹಿಂದುಳಿದ ಜಾತಿಗೆ ಸೇರಿದವಳಾಗಿದ್ದಳು. ಮೇಲ್ಜಾತಿಯ ಜನ ಆಕೆಯ ಮುಖವನ್ನೇ ನೋಡುತ್ತಿರಲಿಲ್ಲ ಇನ್ನು ಆಕೆಯ ಹಾರಗಳನ್ನು ಅದ್ಹೇಗೆ ಕೊಂಡಾರು? ಪುಣ್ಯಕ್ಕೆ ಡೈರಿಯಲ್ಲಿ ಪರಿಸ್ಥಿತಿ ಹಾಗೇನು ಇರಲಿಲ್ಲ. ಸರಕಾರೀ ಸಂಸ್ಥೆ ಆಗಿದ್ದರಿಂದ ಅಲ್ಲಿ ಜಾತಿ  ಮೇಲಾಟವೇನೋ ಅಷ್ಟಿರಲಿಲ್ಲ. ಆದರೂ ದ್ಯಾವಮ್ಮನಿಗೆ ಅದರ ಒಳ ಹೋಗಲು ಭಯ. ಅಪ್ಪಿ ತಪ್ಪಿ ಮೇಲ್ಜಾತಿಯವರೇನಾದರು ನಾಳೆಯಿಂದ ಇಲ್ಲಿಗೆ ನೀನು ಬರಬೇಡ ಅಂದರೆ? ಅದಕ್ಕೆ ಆಕೆ ತಡವಾಗಿ ಬರುತ್ತಿದ್ದಿದ್ದು. ಯಾಕಂದ್ರೆ ಆ ಸಮಯಕ್ಕೆ ಅಲ್ಲಿ ಡೈರಿಯ ಮ್ಯಾನೇಜರ್ ಮೂರ್ತಿ ಬಿಟ್ಟರೆ ಯಾರು ಇರುತ್ತಿರಲಿಲ್ಲ. ಆದರೆ ಡೈರಿಯ ಹಾಲಿನ ಕಲೆಕ್ಷನ್ ವಾಹನ ಸಮಯಕ್ಕ್ಕೆ ಸರಿಯಾಗಿ ಬರುತ್ತಿದ್ದರಿಂದ ಎಷ್ಟೋ ಸಲ ತಡವಾಗಿ ದ್ಯಾವಮ್ಮ ಹಾಲು ತಗೊಂಡು ವಾಪಸ್  ಹೋಗಿದ್ದೂ ಉಂಟು. ಆಕೆಗೋ ಯಾವಾಗಲೂ ಒಂದು ಪ್ರಶ್ನೆ ಕಾಡುತಿತ್ತು. ನಾನು ತರೋ ಹಾಲನ್ನು ಬೇರೇನೇ ಇಡ್ತಾರೋ ಅಥವಾ ಎಲ್ಲ ಒಟ್ಟು ಸೇರಿಸ್ತಾರೋ ಅಂತ. ನನ್ನ ಹತ್ತಿರಾನೆ ಸುಳಿಯದವರು ನಾನು ತಂದಿರೋ ಹಾಲನ್ನು ಹೇಗೆ ಉಪಯೋಗಿಸ್ತಾರೆ? ಅದಕ್ಕೆ ಗರಿಕೆ ಅಥವಾ ಗಂಜಲ ಏನಾದ್ರು ಪ್ರೋಕ್ಷಣೆ ಮಾಡಿನೋ ಅಥವಾ ಅದನ್ನು ಕುದಿಸಿನೋ ಬಳಸಬಹುದೇನೋ. ಪ್ರಾಯಶ ಆಗ ಹಾಲಿಗಂಟಿಕೊಂಡ ಜಾತಿಯ ಶಾಪ ಬಿಟ್ಟು ಹೋಗಬಹುದು ಅಂದ್ಕೋತಾ ಇದ್ಲು ಮನಸ್ಸಲ್ಲಿ....
 
ಅವತ್ತು ಡೈರಿಯಿಂದ ಹೊರ ಬಂದ ಮೂರ್ತಿಗೆ ಅಲ್ಲೇ ಕುಳಿತಿದ್ದ ದ್ಯಾವಮ್ಮ ಕಾಣಿಸಿದಳು. ಜಾತಿಯಲ್ಲಿ ಬ್ರಾಹ್ಮಣನಾದರೋ ಅವನಿಗೆ ಆ ಮುದುಕಿಯ ಮೇಲೆ ಅದೇನೋ ಕನಿಕರ. ಪೇಟೆಯಲ್ಲಿ ದ್ಯಾವಮ್ಮನನ್ನು ಪ್ರೀತಿಯಿಂದ ಮಾತಾಡಿಸೋ ಬೆರಳೆಣಿಕೆ ಜನರಲ್ಲಿ ಅವನು ಒಬ್ಬ. ಡೈರಿಯಲ್ಲಿ ಹಲವಾರು ಜನರೊಂದಿಗೆ ಅವನು ವ್ಯವಹರಿಸುತ್ತಿದ್ದರಿಂದ ಚುನಾವಣೆ ಸಮಯದಲ್ಲಿ ಒಂದಿನ್ನೂರು ಓಟುಗಳ ಮೇಲೆ ಅವನ ಹಿಡಿತವಿತ್ತು. ಅದಕ್ಕೆ ರಾಜಕೀಯ ಪಕ್ಷಗಳ ಜೊತೆ ಅವನ ಒಡನಾಟವು ಚೆನ್ನಾಗಿತ್ತು.  ಅವಳನ್ನು ಅಲ್ಲಿ ನೋಡಿದ ಕೂಡಲೇ ಅವನಿಗೆ ಅವಳು ಅಲ್ಲಿ ಕೂತಿರೋ ಕಾರಣ ನೆನಪಾಯಿತು. ದ್ಯಾವಮ್ಮನ ಹಾಲಿನ ಸರಕಾರೀ ಪ್ರೋತ್ಸಾಹ ಧನ ಬರಬೇಕಿದ್ದುದು ಬಾಕಿ ಇತ್ತು. ಅದೇನಾದ್ರು ಬಂದ್ರೆ  ಕೊಟ್ಟಿಗೆ ಮಾಡಿಗೆ ಒಂದೆರಡು ಶೀಟ್ ಹಾಕಿಸಬೇಕೆಂದು ಅಂದ್ಕೊಂಡಿದ್ಲು. ಮಳೆಗಾಲದಲ್ಲಿ ಮಾಡು ಸೋರಿ ಹಸುಗಳು ನೀರಿಂದ ತೋಯ್ದು ಹೋಗ್ತಾ ಇದ್ವು. ದ್ಯಾವಮ್ಮನ್ನ  ನೋಡಿದವನೇ ಮೂರ್ತಿಯ ಮನಸ್ಸಿನಲ್ಲೇನೋ ಹೊಳೆಯಿತು. ಆಡಳಿತ ಪಕ್ಷದ ಶಾಸಕರೊಬ್ಬರು ಗ್ರಾಮ ವಾಸ್ತವ್ಯ ಹೂಡೋ ಕಾರ್ಯಕ್ರಮ ಶುರು ಮಾಡಿದ್ದಾರೆ, ಅದಕ್ಕೆ ಯಾರಾದರೂ ಬಡವರ ಮನೆ ತೋರಿಸೆಂದು ಚಿಗುರು ಮೀಸೆಯ ಕಾರ್ಯಕರ್ತನೊಬ್ಬ ಹೇಳಿದ್ದ. ಹಿಂದುಳಿದ ಜಾತಿಗೆ ಸೇರಿದ ಮನೆನೋ, ಗುಡಿಸಲೋ ಇದ್ರೆ ಇನ್ನೂ ಒಳ್ಳೆಯದೆಂದು ಬೇರೆ ಹೇಳಿದ್ದ. ದ್ಯಾವಮ್ಮನನ್ನು ನೋಡಿದ್ದೇ ಮೂರ್ತಿಗೆ ಇವಳ ಮನೆಯೇ ಸೂಕ್ತ ಎಂದೆನಿಸಿತ್ತು. ದ್ಯಾವಮ್ಮನಿಗೆ ವಿಷಯ ತಿಳಿಸುತ್ತಲೇ ನೀನು ಒಪ್ಪಿಕೊಂಡ್ರೆ ಒಳ್ಳೆಯದು, ಸ್ವಲ್ಪ ಕಾಸು ಕೊಟ್ಟರೂ ಕೊಡಬಹುದು, ಅದೂ ಅಲ್ದೆ ನೀನು ಇದರಲ್ಲಿ ಕಳೆದುಕೊಳ್ಳೋದು ಏನೂ ಇಲ್ಲ ಅಂದ. ದ್ಯಾವಮ್ಮನಿಗೋ ಇದು ಸುತಾರಾಂ ಇಷ್ಟ ಇರಲಿಲ್ಲ. ದೊಡ್ಡ ಮನುಷ್ಯರು ತನ್ನ ಗುಡಿಸಲಲ್ಲಿ ಬಂದು ಒಂದು ದಿನ ವಾಸ್ತವ್ಯ ಹೂಡ್ತಾರೆ ಅಂದ್ರೆ ಯಾಕೋ ಆಕೆಗೆ ಭಯ. ಅದೂ ಹೋಗಿ ಹೋಗಿ ಗುಡಿಸಲಲ್ಲಿ ಯಾಕೆ ಇರ್ಬೇಕು? ಗ್ರಾಮದ ಗೌಡರ ಮನೆ ರಾಜ ಬಂಗಲೆಯಂತಿದೆ, ಅಲ್ಲಿ ಯಾಕಿರಬಾರದು? ಈ ವೋಟುಗಳು, ರಾಜಕೀಯ ಲೆಕ್ಕಾಚಾರಗಳು ಆಕೆಗೆ ತಿಳಿದೇ ಇರಲಿಲ್ಲ. ಆಕೆಯ ಲೆಕ್ಕಾಚಾರ ಏನಿದ್ರೂ ಎರಡು ದನ, ನಾಲ್ಕು ಕೋಳಿಗಳಿಗಿಂತ ಮೇಲೆ ಯಾವತ್ತೂ ಹೋಗೇ ಇರಲಿಲ್ಲ.  ತಾನೇನಾದ್ರು ಒಪ್ಪಿಲ್ಲ ಅಂದ್ರೆ ನಾಳೆಯಿಂದ ಹಾಲು ತಗೋಳೋದನ್ನು ನಿಲ್ಲಿಸುತ್ತಾರೇನೋ ಅಂದ್ಕೊಂಡು ಮೂರ್ತಿಗೆ ಒಪ್ಪಿಗೆ ಸೂಚಿಸಿ ಭಾರವಾದ ಮನಸ್ಸಿಂದ ಮನೆ ಕಡೆ ಹೆಜ್ಜೆ ಹಾಕಿದಳು. ಸಂಜೆಯಾಗುತ್ತಿದ್ದಂತೆ ದ್ಯಾವಮ್ಮನ ಮನೆಗೆ ನಾಲ್ಕೈದು ಆಳುಗಳು ಬಂದರು. ಹೂವಿನ ಗಿಡ ಕಿತ್ತು ಹಾಕಲಾರಂಭಿಸಿದರು. ದ್ಯಾವಮ್ಮ ಕೇಳಿದರೆ ಅಂಗಳ ಸಣ್ಣದಾಯಿತು ಸ್ವಲ್ಪ ದೊಡ್ಡದು ಮಾಡೋಕೆ ಹೇಳಿದರೆ ಸಾಹೇಬ್ರು, ಕಾಸು ಕೊಡುತ್ತಾರಂತೆ ಆಮೇಲೆ ಅಂದ್ರು. ಮಟ್ಟವಾದ ಆ ಜಾಗದಲ್ಲಿ ಬಣ್ಣ ಬಣ್ಣದ ಹೂವಿನ ಕುಂಡಗಳು ಬಂದು ನಿಂತವು. ಗೋಡೆಗೆ ಬಣ್ಣ ಬಳೆಯಲು ಹೇಳಿದ್ದಾರೆ ಅಂದ್ಕೊಂಡು ಮೂರು ಜನ ಬಂದರು. ದ್ಯಾವಮ್ಮ ದನಗಳನ್ನು ಹಟ್ಟಿಗೆ ಹೊಡೆದುಕೊಂಡು ಬರೋವಷ್ಟರಲ್ಲಿ ಅಂಗಳದಲ್ಲಿ ಕರೆಂಟ್ ಕಂಬವೊಂದು ಬಂದಿತ್ತು. ಲೈನ್ ಮ್ಯಾನ್ ಶೇಷಪ್ಪ ಇದು ಭಾಗ್ಯಜ್ಯೋತಿ ಯೋಜನೆಯಡಿ ಕೊಡುತ್ತಿರೋ ಕನೆಕ್ಷನ್ ಇದಕ್ಕೆ ಬಿಲ್ ಪಾವತಿಯ ಅವಶ್ಯಕತೆ ಇಲ್ಲ, ನಾಳೆ ನಿಮಗೆ ಹಣ ಸಿಕ್ಕಿದ ನಂತರ ನಮ್ಮನ್ನು ಸ್ವಲ್ಪ ನೋಡಿಕೊಳ್ಳಿ ಅಂತಾ ಹಲ್ಕಿರಿದ.  ರಾತ್ರೆ ಯಾರೋ ಬಂದು ಲೈಟು, ಫ್ಯಾನು ಎಲ್ಲ ಹಾಕಿ ಹೋದರು. ಮೇಲೆ ತೂಗು ಹಾಕಿರೋ ಫ್ಯಾನು ತಲೆ ಮೇಲೆ ಬೀಳಬಹುದು ಅನ್ನೋ ಭಯದಿಂದ ರಾತ್ರೆ ದ್ಯಾವಮ್ಮ ಹೊರಗಡೆ ಮಲಗಿದಳು. ತನ್ನದೇ ಮನೆಯಲ್ಲಿ ತನ್ನ ಹಿಡಿತವೇ ಇಲ್ಲದೆ ನಡೆಯೋ ಕೆಲಸಗಳಿಗೆ ಆಕೆ ಮೂಕ ಪ್ರೇಕ್ಷಕಿಯಾಗಿದ್ದಳು , ತನ್ನದೇ ಮನೆಯಲ್ಲಿ ಆಕೆ ಪರಕೀಯಳಾಗಿದ್ದಳು !!!!
 
ಮಾರನೇ ದಿನ ಬೆಳಗ್ಗೆನೇ ಗೌಡ್ರು ಬಂದರು. ಮನೆ ಒಳಗೆ ನೋಡಿದವರೇ ಆಳು ತಿಮ್ಮನ ಕರೆದು ನೋಡಪ್ಪ ಇಲ್ಲಿ ಪಾತ್ರಗೆಳೇನು ಇಲ್ಲ, ಮನೆಗೆ ಹೋಗಿ ಸ್ವಲ್ಪ ಪಾತ್ರೆ ಪಗಡಿ, ಸಾಹೇಬ್ರಿಗೆ ಮಲಗೋಕೆ ಮಂಚ,  ಹೊದೆಯೋಕೆ ಬೆಡ್ ಶೀಟುಗಳು ಎಲ್ಲ  ತಂದು ಇಲ್ಲಿಡು, ಸಾಹೇಬ್ರು ಬಂದು ಹೋದ ಮೇಲೆ ವಾಪಸ್ ತೆಗೆದುಕೊಂಡು ಹೋದ್ರಾಯ್ತು ಅಂದ್ರು. ಹಾಗೆ ದ್ಯಾವಮ್ಮನ ಕಡೆಗೆ ತಿರುಗಿದವರು ನೋಡು ಸಾಹೆಬ್ರಿಗೆ ಮುದ್ದೆ, ಕೋಳಿ ಸಾರು, ಅನ್ನ ಪಲ್ಯ ಎಲ್ಲ ಮಾಡಿ ಹಾಕು. ಹೇಗಿದ್ರು ಹಣ ಸಿಗುತ್ತೆ ಅಂದ್ರು. ಹಣ ಕೊಡೋರು ಯಾರು, ಯಾಕೆ ಕೊಡ್ತಾರೆ ಅಂತ ಮಾತ್ರ ದ್ಯಾವಮ್ಮಗೆ ಗೊತ್ತಿರಲಿಲ್ಲ ಕೇಳೋ ಧೈರ್ಯವೂ ಇರಲಿಲ್ಲ. ಸ್ವಲ್ಪ ಹೊತ್ತಿಗೆ ತಿಮ್ಮ ಬಂದ. ಪಾತ್ರೆ, ಚಮಚಗಳು, ಮಂಚ, ಹೊದಿಕೆ ಎಲ್ಲ ಬಂತು . ಎಲ್ಲವನ್ನು ಲೆಕ್ಕ ಮಾಡಿ ತಿಮ್ಮನ ಕೈಲಿ ಹೇಳಿ ಕಳಿಸಿದ್ದರು ಗೌಡತಿ. ಸಂಜೆಯಷ್ಟರಲ್ಲಿ ಶಾಸಕರು ಬಂದೆ ಬಿಟ್ಟಿದ್ದರು. ದೊಡ್ಡವರು ಬರ್ತಾರೆ ಅಂತ ದ್ಯಾವಮ್ಮ ತನ್ನ ಪೆಟ್ಟಿಗೆಯಿಂದ ಸೀರೆಯೊಂದನ್ನು ತೆಗೆದು ಉಟ್ಟಿದ್ದಳು. ಅವಳಲ್ಲಿ ತೂತಿಲ್ಲದೆ ಇದ್ದ ಸೀರೆಯೆಂದರೆ ಅದೊಂದೇ. ಶಾಸಕರ ಜೊತೆ  ಪತ್ರಕರ್ತರು ಕಾರ್ಯಕರ್ತರು ಊರಿನ ಮಹಾಜನರ ದಂಡೇ ಬಂದಿತ್ತು. ಹೊಸದಾಗಿ ಗೌಡ್ರ ಮನೆಯಿಂದ ತಂದ ಕುರ್ಚಿಗಳ ಮೇಲೆ ಕುಳಿತು ಚರ್ಚೆ ಸಾಗಿತ್ತು. ಊರಿಗೆ ಹೊಸ ರಸ್ತೆ, ಒಂದು ಆಸ್ಪತ್ರೆ,  ಬಸ್ ವ್ಯವಸ್ಥೆಗಳು ಬೇಕೆಂದು ಗೌಡ್ರು ಕೇಳಿಕೊಂಡ್ರು.  ರಾತ್ರೆ ಆಗಿತ್ತು ಸರಿ ಇನ್ನು ಊಟ ಬಡಿಸು ಅಂದ್ರು ಗೌಡ್ರು. ದ್ಯಾವಮ್ಮ ಇನ್ನೇನ್ನು ಬಡಿಸಬೇಕು ಅನ್ನೋವಷ್ಟರಲ್ಲಿ ಯಾರೋ ಆ ಮುದುಕಿಗೆ ಹಳೇ ಸೀರೆ ಹಾಕೋಳಕ್ಕೆ ಹೇಳಿ, ಆಗ್ಲೇ ಬಡವರ ಮನೆ ವಾಸ್ತವ್ಯ ಅನ್ನಿಸೋದು, ಇಲ್ಲ ಅಂದ್ರೆ ಎಲ್ಲ ನಾಟಕ ಅಂತಾರೆ ವಿರೋಧ ಪಕ್ಷದವರು ಅಂದ್ರು. ಸರಿ ದ್ಯಾವಮ್ಮ ಹರಿದಿರೋ ಸೀರೆ ಉಟ್ಟುಕೊಂಡು ಬಡಿಸಿದಳು. ಸಾಹೇಬರ ಊಟ ಆಯ್ತು. ಆಮೇಲೆ ಫೋಟೋ ಬೇರೆ ತೆಗೆದಾಯ್ತು. ಎಲ್ಲದರಲ್ಲೂ ಹರಕು ಸೀರೆ ದ್ಯಾವಮ್ಮ!!!... ಸರಿ ಎಲ್ಲ ಮುಗಿದು ಸಾಹೇಬರು ಮಲಗಿದರು. ಬೆಳಗಿನ ನಿತ್ಯಕರ್ಮಗಳಿಗೆ  ಆ ಮನೆಯಲ್ಲಿ ಅನುಕೂಲವಿಲ್ಲದ್ದರಿಂದ ಶಾಸಕರು ಗೌಡರ ಮನೆಗೆ ಹೋಗಿ ಎಲ್ಲ ಮುಗಿಸಿ ಉಪ್ಪಿಟ್ಟು ತಿಂದು ಟೀ ಕುಡಿದು ತೇಗಿದರು. ಅಷ್ಟು ಮುಗಿಸಿ ದ್ಯಾವಮ್ಮನ ಮನೆಗೆ ಬರುತ್ತಲೇ ಸಂದರ್ಶನದ ಸರದಿ. ಇಷ್ಟು ರುಚಿಕರ ಊಟ ನಾನು ತಿಂದೆ ಇರಲಿಲ್ಲ, ಎಷ್ಟೋ ದಿನಗಳ ಬಳಿಕ ನೆಮ್ಮದಿಯ ನಿದ್ದೆ ಮಾಡಿದೆ ಅಂದರು. ಈ ಊರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೀಟಿಂಗ್ ಅಲ್ಲಿ  ಚರ್ಚಿಸುವುದಾಗಿ ಹೇಳಿದರು. ಟೀವಿಯಲ್ಲಿ ಅಂತೂ ಗೌರಮ್ಮ ನ ಬಗ್ಗೆನೇ ಮಾತುಕತೆ. ಅವಳ ಮನೆ, ಹಸುಗಳು, ಅವಳ ದಿನಚರಿ, ಮುಖ್ಯಮಂತ್ರಿ ಎಷ್ಟು ಗಂಟೆಗೆ ಹೋದ್ರು, ಏನು ತಿಂದ್ರು, ಸಾರಿಗೆ ಏನು ಹಾಕಿರಬಹುದು ಅಂತೆಲ್ಲ ಚರ್ಚೆ ನಡೆಯುತ್ತಿತ್ತು. ದ್ಯಾವಮ್ಮನನ್ನು ಸಾಕ್ಷಾತ್ ಅನ್ನಪೂರ್ಣೆಯ ಪ್ರತಿರೂಪ ಅನ್ನೋವಂತೆ ತೋರಿಸಿದ್ದರು. ಸಂದರ್ಶನ  ಮುಗಿಯುತ್ತಿದ್ದಂತೆ ಸಾಹೇಬರು ಹೊರಟರು . ದ್ಯಾವಮ್ಮನಿಗೆ ಬಗ್ಗಿ ನಮಸ್ಕರಿಸಿದವರೇ ಚೆಕ್ ಪುಸ್ತಕ ಎತ್ತಿಕೊಂಡು ಅದರಲ್ಲಿ ಹತ್ತು ಸಾವಿರ ಬರೆದರು. ಹೆಸರು ಬರೆಯಬೇಕಿತ್ತು ಎಷ್ಟು ನೆನಪಿಸಿಕೊಂಡರು ಅವರಿಗೆ ಪಕ್ಕದಲ್ಲೇ ಇದ್ದ ದ್ಯಾವಮ್ಮನ ಹೆಸರು ತಲೆಗೆ  ಹೊಳೆಯಲೇ ಇಲ್ಲ. ಅಲ್ಲೇ ಇದ್ದ ಕಾರ್ಯಕರ್ತ ನ ಕರೆದು ಕೇಳಿದರು ಈಕೆ ಹೆಸರೇನು ಚೆಕ್ ಬರೆಯಬೇಕು ಮಾರಾಯ ಅಂದರು. ಸಾರ್ ಅವ್ಳಿಗೆ ಅಕೌಂಟ್ ಎಲ್ಲಿದೆ ನನ್ನ  ಹೆಸರಿಗೆ ಬರೆಯಿರಿ ನಾನೇ ಡ್ರಾ ಮಾಡಿ ಆಕೆಗೆ ತಲುಪಿಸ್ತೀನಿ ಅಂದ ಆ ಕಾರ್ಯಕರ್ತ. ಚೆಕ್ ವಿತರಿಸಿದ ಫೋಟೋನೂ ಬಂತು. ಅದಾದ ಕೂಡ್ಲೇ ಕಾರ್ಯಕರ್ತ ಅವಳ ಕೈಯಿಂದ ಅದನ್ನ ತಗೊಂಡು ನಡೆದ. ಸಾಹೇಬ್ರು ಹೊರಟರು... ಅವರ ಹಿಂದೆ ಜನರ ದಂಡು ಹೊರಟಿತು. ದ್ಯಾವಮ್ಮನ ಮನೆ ಖಾಲಿಯಾಯಿತು....
 
ಅವರು ಹೋಗಿ ಸ್ವಲ್ಪ ಹೊತ್ತಿಗೆ ಗೌಡರ ಮನೆಯಿಂದ ತಿಮ್ಮ ಬಂದವನೇ ಮಂಚ ಬೆಡ್  ಶೀಟುಗಳೆಲ್ಲವನ್ನು ತಂದು ಹೊರಗಿಟ್ಟ. ಪಾತ್ರೆ ಜೋಡಿಸುತ್ತಿದ್ದಂತೆ ಲೆಕ್ಕಕ್ಕಿಂತ  ಒಂದು ಪಾತ್ರೆ  ಕಡಿಮೆ ಇದ್ದಿದ್ದು ಗಮನಕ್ಕೆ ಬಂತು. ಏನು ಮಾಡೋದು ತಿಳಿಯಲಿಲ್ಲ ಅವನಿಗೆ. ಅಲ್ಲೇ ಇದ್ದ ದ್ಯಾವಮ್ಮನ ಪಾತ್ರೆಗಳಲ್ಲಿ ಚೆನ್ನಾಗಿದ್ದ  ಒಂದನ್ನು ಸೇರಿಸಿಕೊಂಡ, ಲೆಕ್ಕ ಸರಿಯಾಯಿಯ್ತು. ಗೌಡತಿಗೆ ಲೆಕ್ಕ ಮಾತ್ರ ಬೇಕು, ಪಾತ್ರೆ ಯಾವುದು ಅನ್ನೋದು ಗೊತ್ತಾಗದು ಅಂದುಕೊಂಡು ಎಲ್ಲವನ್ನು ಹೊತ್ತುಕೊಂಡು ಹೊರಟ. ಆ ಪಾತ್ರಗಳಲ್ಲಿ ಒಂದು ತನ್ನದು ಅಂತ ಗೊತ್ತಿದ್ರು ಹೇಳೋಕೆ ಧೈರ್ಯ ಬರಲಿಲ್ಲ ದ್ಯಾವಮ್ಮನಿಗೆ. ಸ್ವಲ್ಪ ಹೊತ್ತಿಗೆ  ಪೈಂಟರ್ ಗಳು ಬಂದು ಪೇಂಟಿಂಗ್ ಖರ್ಚು ಎರಡುವರೆ  ಸಾವಿರ ಆಗಿದೆ, ನಿಮ್ಮತ್ರ ತಗೋಳೋಕೆ ಹೇಳಿದ್ದಾರೆ ಅಂದ್ರು.ನನ್ನ ಹತ್ರ ದುಡ್ಡಿಲ್ಲ ಯಾರು ನಂಗೆ ದುಡ್ಡು ಕೊಟ್ಟಿಲ್ಲ ಅಂದ್ಲು,  ಆದರೆ ನಂಬೋರ್ಯಾರು? ಚೆಕ್ ತಗೊಂಡ ದ್ಯಾವಮ್ಮನ ಫೋಟೋ ಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಗಿತ್ತು. ಮುದುಕಿ ನಾಟಕ ಅಡ್ತ ಇದಾಳೆ ಕಣೋ, ನಾಳೆ ಇವ್ಳು ಹಣ ಕೊಟ್ಟಿಲ್ಲ ಅಂದ್ರೆ ಕೊಟ್ಟಿಗೆಯಲ್ಲಿರೋ ದನ ತಗೊಂಡು ಹೋಗೋಣ ಅಂತ ಸಿಟ್ಟನಿಂದ ಹೇಳಿ ಹೋದ್ರು. ಮತ್ತೊಬ್ಬ ಬಂದು ಈ ಫ್ಯಾನ್ ನಮ್ ಮನೇದು, ಗೌಡ್ರು ಇಲ್ಲಿ ಹಾಕಕ್ಕೆ ಹೇಳಿದ್ರು, ಈಗ ತಗೊಂಡ್ ಹೋಗ್ತಾ ಇದ್ದೀನಿ ಅಂತ ಹೇಳಿ ಅದರ ಡಬ್ಬ ಸಮೇತ ತಗೊಂಡು ಹೋದ. ಪಾರ್ಟಿ ಆಫೀಸಿಂದ ಬಂದ  ಆ ಫ್ಯಾನ್ ಒಳಗೆ ವಾರಂಟಿ ಕಾರ್ಡ್, ಬಿಲ್ಲು ಹಾಗೆ ಇತ್ತು. ಪೈಂಟರ್ ಗೆ ಹಣ ಹೇಗೆ ಹೊಂದಿಸೋದು ಅಂತ ಯೋಚ್ನೆ ಮಾಡ್ತಾ  ದ್ಯಾವಮ್ಮ ನನ್ನು ದೊಪ್ಪ್ ಅನ್ನೋ ಸದ್ದು ಎಚ್ಚರಿಸಿತ್ತು. ಅಂಗಳಕ್ಕೆ ಬಂದು ನಿಂತಿದ್ದ ದ್ಯಾವಮ್ಮನ ದನವೊಂದು ಮೈ ಮೇಲೆ ಕೂತಿದ್ದ ನೊಣ ಓಡಿಸಲು ತೋರಣ ಕಟ್ಟಿದ್ದ ಬಿದಿರಿಗೆ ಬೆನ್ನು ಉಜ್ಜಿ ಅದನ್ನು ಬೀಳಿಸಿತ್ತು. ಅದು ನೇರವಾಗಿ ಮನೆಗೆ ಕರೆಂಟ್ ಕೊಟ್ಟಿದ್ದ ತಂತಿಯ ಮೇಲೆ ಬಿದ್ದು ತಂತಿಯನ್ನು ತುಂಡರಿಸಿತ್ತು.  ಎರಡು  ದಿನಗಿಳಿಂದ ನಿರಂತರವಾಗಿ ಉರಿಯುತ್ತಿದ್ದ ಭಾಗ್ಯಜ್ಯೋತಿ ಅಲ್ಲಿಗೆ ನಿಂತಿತು!. ಅಷ್ಟರಲ್ಲಿ ಹೊತ್ತು ಕಂತಿತ್ತು. ದೀಪ ಹಚ್ಚಿದ ದ್ಯಾವಮ್ಮನಿಗೆ ಅಡಿಗೆ ಮಾಡಲು ಪಾತ್ರೆನೂ ಇರಲಿಲ್ಲ ಅಕ್ಕಿ ಅಂತೂ ಮೊದಲೇ ಮುಗಿದಿತ್ತು. ಡಬ್ಬದ ತಳದಲ್ಲಿದ್ದ ರಾಗಿ ಹಿಟ್ಟನ್ನು ತೆಗೆದು ಹಿಡಿ ಮುರಿದಿದ್ದ ಬಾಣಲಿ ಅಲ್ಲಿ ಬೇಯಿಸಿ ಕುಡಿದಳು. ಆಕೆಗಿದ್ದ ಒಂದೇ ನೆಮ್ಮದಿ ಅಂದ್ರೆ ಆಕೆ ಮಲಗುತ್ತಿದ್ದ ಜಾಗದ ಮೇಲೆ ಫ್ಯಾನ್ ಇರಲಿಲ್ಲ, ಆದ್ದರಿಂದ ಅದು ಕೆಳಗೆ ಬೀಳೋ ಭಯವು ಇರಲಿಲ್ಲ.
 
ಮರುದಿನ ಬೆಳಗ್ಗೆದ್ದ ದ್ಯಾವಮ್ಮಕೆಲಸದವರು ಕಿತ್ತು ಬಿಸಾಡಿದ್ದ ಹೂ ಗಿಡಗಳಲ್ಲಿ ಹಸಿರಾಗಿದ್ದ ಕೆಲವನ್ನುಆರಿಸಿ ಮತ್ತೆ ಒಪ್ಪವಾಗಿ ನೆಟ್ಟಳು. ಹಾಲು ಕರೆಯುವಾಗ ಡೈರಿಯಲ್ಲಿ ಮೂರ್ತಿ ಹತ್ತಿರ ಸಾಲ ಕೇಳಿ ನೋಡೋಣ ಅಂದುಕೊಂಡಳು.  ದನಗಳನ್ನು ಬಯಲಿಗಟ್ಟಿ ಹಾಲು ಹಿಡಿದು ಹೊರಟಳು. ಮೂರ್ತಿ ಇವಳ ದಾರಿಯನ್ನೇ ಕಾಯುತ್ತಿದ್ದಂತಿತ್ತು. ದ್ಯಾವಮ್ಮನನ್ನು ಕಂಡವನೇ ಕಿಸೆಯಿಂದ ೩ ಸಾವಿರ ತೆಗೆದು ಕೈಗಿತ್ತು ನಿನ್ನ ಪ್ರೋತ್ಸಾಹ ಧನ ಪಾಸ್ ಆಗಿದೆ, ಅದೂ ಲಂಚ ಕೊಡದೆ. ಎಲ್ಲ ಸಾಹೇಬರ ಗ್ರಾಮ ವಾಸ್ತವ್ಯದ ಮಹಿಮೆ ಅನ್ನುತ್ತ ಹಲ್ಕಿರಿದ. ದ್ಯಾವಮ್ಮನು ನಕ್ಕಳು, ಆದರೆ ಆ ನಗೆಯ ಹಿಂದಿನ ಮರ್ಮ ಆಕೆಗೆ ಮಾತ್ರ ತಿಳಿದಿತ್ತು. ಹಣ ಪಡೆದು ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟಳು,ದಾರಿಯಲ್ಲಿ ಸಿಕ್ಕಿದ ಪೈಂಟರ್ ಗೆ ಎರಡು ಸಾವಿರ ಕೊಟ್ಟಳು. ಮುದುಕಿ ಸುಮ್ನೆ ನಾಟಕ ಮಾಡಿದ್ಲು ನೋಡು ಈಗ ಹೇಗೆ ಬಂತು ಹಣ ಅಂತ ಗೊಣಗಿದ ಅವ್ನು.  ಸಂತೆಯಲ್ಲಿ ಐನೂರು ಕೊಟ್ಟು ಒಂದು ಪಾತ್ರೆ, ದನಗಳಿಗೆ ಹಿಂಡಿ, ಅಕ್ಕಿ  ತಗೊಂಡು ಮನೆ ಕಡೆ ಹೆಜ್ಜೆ ಹಾಕಿದ್ಲು ದ್ಯಾವಮ್ಮ. ಪೇಟೆಯಲ್ಲಿನ ಬಾರ್ ಗಿಜಿ ಗಿಜಿ ಅಂತಿತ್ತು... ಸಾವಿರ ಕ್ಯಾಶ್ ಮಾಡಿಸಿದ ಪುಣ್ಯಾತ್ಮನೊಬ್ಬ ಮಿತ್ರರಿಗೆ ಪಾರ್ಟಿ ಕೊಡಿಸುತ್ತಿದ್ದ. ....
 
---------------------------------------ಶ್ರೀ :-)--------------------------------------