ಕಗ್ಗ ದರ್ಶನ – 22 (1)

Submitted by addoor on Sun, 05/06/2018 - 21:52

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು?
ಬೆದರಿಕೆಯನದರಿಂದ ನೀಗಿಪನು ಸಖನು
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ
ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ
ವಿಧಿ ಹೇರುವ ಹೊರೆಗಳಿಂದ ತಪ್ಪಿಸಿಕೊಳ್ಳುವವನು ಎಲ್ಲಿದ್ದಾನೆ? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಎತ್ತಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಅಂಥವರು ಇಲ್ಲವೇ ಇಲ್ಲ. ಈ ಅರಿವು ಮೂಡಿದಾಗ, ವಿಧಿಯ ಹೊಡೆತಗಳ ಬಗೆಗಿನ ಬೆದರಿಕೆಯನ್ನು ನೀಗಿಸಿಕೊಳ್ಳುವವರು ಕೆಲವರಿದ್ದಾರೆ.
ಡಿ.ವಿ.ಜಿ.ಯವರವರ ಧೋರಣೆ ಸರಳ: ವಿಧಿ ಆಘಾತ ನೀಡಿದಾಗ, ಅದನ್ನು ತಡೆದುಕೊಳ್ಳಲಿಕ್ಕಾಗಿ ಎದೆಯನ್ನು ಉಕ್ಕಾಗಿಸಬೇಕು; ಬಡಪೆಟ್ಟಿಗೆ ಬಾಗದಂತೆ, ಮುರಿಯದಂತೆ ಶಕ್ತಿಯುತವಾಗಿಸಬೇಕು. ವಿಧಿಯ ಹೊರೆಗೆ ಬೆನ್ನನ್ನು ಒಡ್ಡಿಕೊಂಡು, ಆ ಹೊರೆ ಹೊತ್ತು ಸಾಗಬೇಕು. ತುಟಿ ಬಿಗಿದು, ಗೊಣಗುಟ್ಟದೆ ಬಂದ ಸಂಕಟವನ್ನೆಲ್ಲ ಎದುರಿಸುತ್ತ ಮುನ್ನಡೆಯಬೇಕು. ಯಾಕೆಂದರೆ, ವಿಧಿಯಗಸ, ನಾವೆಲ್ಲ ಕತ್ತೆಗಳು.
ಇಂಥ ಧೋರಣೆಗೆ ಅತ್ಯುತ್ತಮ ಉದಾಹರಣೆ ಸುಪ್ರಸಿದ್ಧ ಭರತನಾಟ್ಯ ಕಲಾವಿದ ಬುಸೇಗೌಡರು. ಅವರು ಮಂಡ್ಯದ ಹತ್ತಿರದ ಹಳ್ಳಿಯವರು. ಅವರಿಗೆ ಮೂರು ವರುಷ ವಯಸ್ಸಾಗಿದ್ದಾಗ ಅಪಘಾತವೊಂದರಲ್ಲಿ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಕಂಗಾಲಾದ ಹೆತ್ತವರ ಗೋಳು ಹೇಳತೀರದು. ಅನಂತರ, ವೈದ್ಯರೆಲ್ಲ ಕೈಚೆಲ್ಲಿದಾಗ, ಆ ಹೆತ್ತವರು ಕಣ್ಣುಗಳಿಲ್ಲದ ಮಗುವನ್ನು ಬೆಂಗಳೂರಿನ ರಮಣ ಮಹರ್ಷಿ ಅಂಧಮಕ್ಕಳ ಶಾಲೆಗೆ ಸೇರಿಸಿದರು.
ನಾಲ್ಕು ವರುಷಗಳ ನಂತರ ನಡೆಯಿತು, ಬುಸೇಗೌಡರ ಬದುಕು ಬೆಳಗಿಸುವ ಘಟನೆ. ಅಶೋಕ್ ಕುಮಾರ್ ಎಂಬವರಿಂದ ಕೇವಲ ಹನ್ನೆರಡು ದಿನಗಳಲ್ಲಿ ಕೋಲಾಟ ಕಲಿತು ಅದ್ಭುತವಾಗಿ ಪ್ರದರ್ಶಿಸಿದರು ಆ ಶಾಲೆಯ ಅಂಧಮಕ್ಕಳು. ಇದರಿಂದ ಉತ್ಸಾಹಿತರಾದ ಅಶೋಕ್ ಕುಮಾರ್ ಭರತನಾಟ್ಯ ಕಲಿಸಲು ಮುಂದಾದಾಗ ಸೈ ಎಂದರು ಬುಸೇಗೌಡರು. ಅಂದಿನಿಂದ ಭರತನಾಟ್ಯವೇ ಅವರ ಬದುಕಾಯಿತು. ಭರತನಾಟ್ಯದಲ್ಲಿ ಸಾಧನೆ ಮಾಡುತ್ತ ಮಾಡುತ್ತ ದಶಾವತಾರ ನೃತ್ಯರೂಪಕದಲ್ಲಿಯೂ ಅಪ್ರತಿಮ ಎನಿಸಿದರು. ಭರತನಾಟ್ಯದ ವಿಶೇಷತೆಯಾದ ಮುಖಭಾವ ಪ್ರದರ್ಶನದಲ್ಲಿ ತನ್ನ ಗುರುವಿಗೇ ಸರಿಮಿಗಿಲೆನಿಸಿದರು. ಸಾವಿರಕ್ಕೂ ಮಿಕ್ಕಿ ಭರತನಾಟ್ಯ ಪ್ರದರ್ಶನ ನೀಡಿರುವ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳೂ ದಕ್ಕಿವೆ. ವಿಧಿಯ ಹೊರೆಗಳಿಂದ ತಪ್ಪಿಸಿಕೊಳ್ಳಲಾಗದು; ಅಂತಿರುವಾಗ ಅದರ ಬಗೆಗಿನ ಹೆದರಿಕೆಯನ್ನು ತೊಡೆದು ಹಾಕಿ, ಎದೆಯನ್ನು ಉಕ್ಕಾಗಿಸಿ, ಅದನ್ನು ಎದುರಿಸುವ ಪರಿ ಇದು, ಅಲ್ಲವೇ?